ಐರೋಪ್ಯ ಪರಮಾಣು ಶಕ್ತಿ ಸಮುದಾಯ
European Atomic Energy Community
| |
---|---|
Administrative body | European Commission |
Official languages | 24 languages |
Type | International organisation |
Members | EU member states Associated states: Switzerland United Kingdom |
Establishment | 1958 |
1 January 1958 | |
1 July 1967 |
ಐರೋಪ್ಯ ಪರಮಾಣು ಶಕ್ತಿ ಸಮುದಾಯ: ಐರೋಪ್ಯ ಆರ್ಥಿಕ ಸಂಘಟನೆ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಗಳಲ್ಲಿ ಒಂದು. ಎರಡನೆಯ ಮಹಾಯುದ್ಧದ ಅನಂತರದ ಕಾಲದಲ್ಲಿ ಆರ್ಥಿಕ ಸಹಕಾರ ಮತ್ತು ಸಂಘಟನೆಯ ಮೂಲಕ ಉತ್ಪಾದನೆಯನ್ನೂ, ಅಂತಾರಾಷ್ಟ್ರೀಯ ವ್ಯಾಪಾರವನ್ನೂ ಹೆಚ್ಚಿಸಿ ತನ್ಮೂಲಕ ಜನರ ಜೀವನಮಟ್ಟವನ್ನು ಉತ್ತಮಗೊಳಿಸುವುದು ಸಾಧ್ಯವೆಂಬ ಅಭಿಪ್ರಾಯಕ್ಕೆ ವಿಶೇಷ ಮನ್ನಣೆ ದೊರಕಿತು. ಬೆಲ್ಜಿಯಂ, ನೆದರ್ರ್ಲೆಂಡ್ಸ್ ಮತ್ತು ಲಕ್ಸೆಂಬರ್ಗ್ ಸೇರಿ ಸ್ಥಾಪಿಸಿದ ಬೆನೆಲಕ್ಸ್ (1949), ಮತ್ತು ಫ್ರಾನ್ಸ್, ಪಶ್ಚಿಮ ಜರ್ಮನಿ, ಇಟಲಿ, ಬೆಲ್ಜಿಯಂ, ಲಕ್ಸೆಂಬರ್ಗ್ ಮತ್ತು ನೆದರ್ಲೆಂಡ್ಸ್ ಕೂಡಿ ರಚಿಸಿದ ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕು ಸಮುದಾಯ (1952) ಇವು ಐರೋಪ್ಯ ಆರ್ಥಿಕ ಸಂಘಟನೆಯ ಪ್ರಾರಂಭದ ಯತ್ನಗಳಲ್ಲಿ ಮುಖ್ಯವಾದುವು. ಇವುಗಳ ಕಾರ್ಯ ಚಟುವಟಿಕೆಗಳಿಂದ ಲಭ್ಯವಾದ ಅನುಭವವನ್ನಾಧರಿಸಿ ಉನ್ನತಮಟ್ಟದ ಆರ್ಥಿಕ ಸಂಘಟನೆಗಾಗಿ ಪ್ರಯತ್ನ ಪ್ರಾರಂಭವಾಯಿತು.
ಐರೋಪ್ಯ ರಾಷ್ಟ್ರಗಳ ವಿದೇಶೀ ವ್ಯವಹಾರ
[ಬದಲಾಯಿಸಿ]1955ರಲ್ಲಿ ಸೇರಿದ್ದ ಆರು ಐರೋಪ್ಯ ರಾಷ್ಟ್ರಗಳ ವಿದೇಶೀ ವ್ಯವಹಾರಗಳ ಮಂತ್ರಿಗಳ ಸಭೆಯಲ್ಲಿ, ಐರೋಪ್ಯ ಆರ್ಥಿಕ ಸಂಘಟನೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳುವ ಘಟ್ಟವನ್ನು ತಲಪಿರುವುದಾಗಿ ಭಾವಿಸಿ, ಒಂದು ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸ್ಥಾಪಿಸುವ ಮತ್ತು ತಾವೆಲ್ಲರೂ ಸೇರಿ ಪರಮಾಣುಶಕ್ತಿಯ ಅಭಿವೃದ್ಧಿಗೆ ಪ್ರಯತ್ನ ಮಾಡುವ ಆಶಯವನ್ನು ವ್ಯಕ್ತಪಡಿಸಲಾಯಿತು. ಈ ಎರಡು ಉದ್ದೇಶಗಳ ಪೈಕಿ ಪರಮಾಣುಶಕ್ತಿ ಅಭಿವೃದ್ಧಿಗೆ ಆರು ರಾಷ್ಟ್ರಗಳೂ ಒಟ್ಟುಗೂಡಿ ಪ್ರಯತ್ನಿಸಬಹುದೆಂಬುದು ಹೆಚ್ಚು ಆಕರ್ಷಕವಾಗಿ ತೋರಿತು. ಆದರೂ ಈ ಎರಡೂ ಉದ್ದೇಶಗಳನ್ನೂ ನೆರವೇರಿಸುವುದಕ್ಕೆ ಒಪ್ಪಂದ ಮಾಡಿಕೊಳ್ಳಬೇಕೆಂದು ಉದ್ದೇಶಿಸಿ, ಈ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಲು ಬೆಲ್ಜಿಯಂನ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿದ್ದ ಪಾಲ್ ಹೆನ್ರಿ ಸ್ಟಾಕ್ ನೇತೃತ್ವದಲ್ಲಿ ತಜ್ಞರ ತಂಡವೊಂದನ್ನು ನೇಮಿಸಲಾಯಿತು. ಈ ತಂಡ ಸಿದ್ಧಪಡಿಸಿದ ವರದಿ ಆರು ಐರೋಪ್ಯ ರಾಷ್ಟ್ರಗಳ ಆರ್ಥಿಕ ಸಂಘಟನೆಯ ಒಪ್ಪಂದಕ್ಕೆ ಆಧಾರವಾಯಿತು. 1957ರ ಮಾರ್ಚ್ 25ರಂದು ರೋಮ್ ನಗರದಲ್ಲಿ ಫ್ರಾನ್ಸ್, ಪಶ್ಚಿಮ ಜರ್ಮನಿ, ಇಟಲಿ, ಬೆಲ್ಜಿಯಂ, ಲಕ್ಸೆಂಬರ್ಗ್ ಮತ್ತು ನೆದರ್ಲೆಂಡ್ ಇವು ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸ್ಥಾಪಿಸುವ ಒಂದು ಒಪ್ಪಂದಕ್ಕೆ ಮತ್ತು ಐರೋಪ್ಯ ಪರಮಾಣುಶಕ್ತಿ ಸಮುದಾಯವನ್ನು ಸ್ಥಾಪಿಸುವ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿದವು. 1958ರ ಜನವರಿ ಒಂದರಿಂದ ಈ ಒಪ್ಪಂದಗಳು ಜಾರಿಗೆ ಬಂದವು.[೧]
ಐರೋಪ್ಯ ಪರಮಾಣು ಸಮುದಾಯದ ಒಪ್ಪಂದ
[ಬದಲಾಯಿಸಿ]ಐರೋಪ್ಯ ಪರಮಾಣು ಸಮುದಾಯದ ಒಪ್ಪಂದದ ಮೊದಲನೆಯ ವಿಧಿಯಲ್ಲಿ ಹೇಳಿರುವಂತೆ, ತ್ವರಿತವಾಗಿ ಪರಮಾಣು ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಅಗತ್ಯವಾದ ಪರಿಸ್ಥಿತಿಯನ್ನುಂಟು ಮಾಡುವುದೇ ಈ ಸಮುದಾಯದ ಮುಖ್ಯ ಗುರಿ. ಜನರ ಜೀವನ ಮಟ್ಟವನ್ನು ಉತ್ತಮಗೊಳಿಸುವುದು, ಈ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದರ ಅಂತಿಮ ಉದ್ದೇಶ. ಶಾಂತಿಯುತ ಬಳಕೆಗಾಗಿ ಪರಮಾಣು ಶಕ್ತಿಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು ಮಾತ್ರ ಸಮುದಾಯದ ವ್ಯಾಪ್ತಿಗೆ ಒಳಪಡುತ್ತವೆ. ರಕ್ಷಣಾವ್ಯವಸ್ಥೆಗಾಗಿ ಉಪಯೋಗ ವಾಗುವ ಪರಮಾಣುಶಕ್ತಿಯ ವಿಷಯದಲ್ಲಿ ಸದಸ್ಯರಾಷ್ಟ್ರಗಳು ಸ್ವತಂತ್ರವಾಗಿ ನಡೆದುಕೊಳ್ಳಬಹುದು. ಆದರೆ ಸಮುದಾಯದ ನಿಯಂತ್ರಣಕ್ಕೆ ಒಳಪಡುವ ಪರಮಾಣು ವಸ್ತುಗಳನ್ನು ಸದಸ್ಯರಾಷ್ಟ್ರಗಳು ರಕ್ಷಣಾವ್ಯವಸ್ಥೆಗೆ ಬಳಸದಂತೆ ಪ್ರತಿಬಂಧಿಸುವ ವ್ಯವಸ್ಥೆ ಮಾಡಲಾಗಿದೆ.
ಸಮುದಾಯದ ಉದ್ದೇಶಗಳ ಸಾಧನೆಗಾಗಿ ಅಷ್ಟಾಂಶಗಳ ಕಾರ್ಯಕ್ರಮವೊಂದನ್ನು ಒಪ್ಪಂದದಲ್ಲಿ ಕೊಡಲಾಗಿದೆ. ಒಪ್ಪಂದದ ಎರಡನೆಯ ವಿಧಿಯಲ್ಲಿ ನಮೂದಿತವಾಗಿರುವ ಅಂಶಗಳು ಈ ರೀತಿ ಇವೆ
[ಬದಲಾಯಿಸಿ]- 1. ಸಂಶೋಧನೆಯನ್ನು ಅಭಿವೃದ್ಧಿಪಡಿಸಿ ಪರಮಾಣು ಸಂಶೋಧನ ಕೇಂದ್ರದಲ್ಲಿ ಸಂಶೋಧನ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಸದಸ್ಯರಾಷ್ಟ್ರಗಳು ಪ್ರತ್ಯೇಕವಾಗಿ ಕೈಗೊಳ್ಳುವ ಸಂಶೋಧನ ಕಾರ್ಯಗಳಿಗೆ ಹಣ ಮತ್ತು ಉಪಕರಣಗಳ ರೂಪದಲ್ಲಿ ನೆರವು ನೀಡುವುದು ಮತ್ತು ಸದಸ್ಯರಾಷ್ಟ್ರಗಳಲ್ಲಿ ನಡೆಯುವ ಸಂಶೋಧನೆಯಲ್ಲಿ ಸಂಘಟನೆ ಉಂಟುಮಾಡುವುದು ಸಮುದಾಯದ ಕರ್ತವ್ಯ.
- 2. ಸಮುದಾಯ ಪರಮಾಣು ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಮತ್ತು ನಾಗರಿಕರಿಗೆ ಪರಮಾಣು ವಿಕಿರಣಗಳಿಂದ ಆರೋಗ್ಯ ಕೆಡದಂತೆ ರಕ್ಷಿಸಲು ಕೈಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿ ಪ್ರತಿ ಸದಸ್ಯರಾಷ್ಟ್ರವೂ ಅವುಗಳನ್ನು ಅನುಸರಿಸುವಂತೆ ಮಾಡಬೇಕು.
- 3. ಸಮುದಾಯದಲ್ಲಿ ಪರಮಾಣುಶಕ್ತಿಯ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವಂತೆ ಖಾಸಗಿ ವಲಯಕ್ಕೆ ಪ್ರೋತ್ಸಾಹ ನೀಡಿ ಈ ಉದ್ದೇಶಕ್ಕಾಗಿ ಹೆಚ್ಚು ಬಂಡವಾಳ ಹೂಡುವಂತೆ ಮಾಡಬೇಕು.
- 4. ಎಲ್ಲ ಸದಸ್ಯರಾಷ್ಟ್ರಗಳಿಗೂ ಪರಮಾಣು ಇಂಧನ ಯಾವಾಗಲೂ ದೊರಕುವಂತೆ ಏರ್ಪಡಿಸಬೇಕು.
- 5. ಸೂಕ್ತನಿಯಂತ್ರಣದ ಮೂಲಕ ಪರಮಾಣು ವಸ್ತುಗಳು ಉದ್ದೇಶಿತ ಬಳಕೆಗಲ್ಲದೆ ಬೇರೆ ರೀತಿಯಲ್ಲಿ ಬಳಕೆಯಾಗದಂತೆ ತಡೆಯಬೇಕು.
- 6. ವಿಶೇಷ ವಿದಳನವಸ್ತುಗಳನ್ನು ಸಮುದಾಯದ ಆಸ್ತಿ ಎಂದು ಪರಿಗಣಿಸಿ, ಇವುಗಳ ಬಳಕೆಯ ವಿಷಯದಲ್ಲಿ ಸಮುದಾಯದ ಆಸ್ತಿಯ ಹಕ್ಕು ಚಲಾಯಿಸಬೇಕು. ಇದರಿಂದ ಪರಮಾಣುವಸ್ತುಗಳ ಬಳಕೆಯ ಮೇಲೆ ಕ್ರಮವಾದ ಹತೋಟಿ ಇಡಲು ಸಾಧ್ಯವಾಗುತ್ತದೆ.
- 7. ಸಮುದಾಯ ಪರಮಾಣುವಸ್ತುಗಳಿಗೆ ವಿಶಾಲವಾದ ಮಾರುಕಟ್ಟೆ ಒದಗಿಸಬೇಕು ಮತ್ತು ಎಲ್ಲ ಸದಸ್ಯ ರಾಷ್ಟ್ರಗಳೂ ಅತ್ಯುತ್ತಮ ತಾಂತ್ರಿಕ ತಿಳಿವಳಿಕೆ ಪಡೆಯಲು ಅವಕಾಶ ಒದಗಿಸಬೇಕು. ಪರಮಾಣು ವಸ್ತುಗಳಿಗೆ ಮತ್ತು ವಿಶೇಷ ಉಪಕರಣಗಳಿಗೆ ಸಾಮಾನ್ಯ ಮಾರುಕಟ್ಟೆಯನ್ನು ಸ್ಥಾಪಿಸುವುದು, ಪರಮಾಣು ಕೈಗಾರಿಕೆಗಳಲ್ಲಿ ಹೂಡುವ ಬಂಡವಾಳದ ಚಲನೆಗೆ ಅಡ್ಡಿ ಇಲ್ಲದಂತೆ ಮಾಡುವುದು, ತಾಂತ್ರಿಕಜ್ಞಾನ ಪಡೆದಿರುವವರು ಉದ್ಯೋಗಕ್ಕಾಗಿ ಸಮುದಾಯದ ಯಾವುದೇ ರಾಷ್ಟ್ರಕ್ಕಾಗಲಿ ನಿರ್ಬಂಧವಿಲ್ಲದೆ ಹೋಗುವುದಕ್ಕೆ ಅವಕಾಶಮಾಡುವುದು ಮುಂತಾದ ಕ್ರಮಗಳ ಮೂಲಕ ಈ ಉದ್ದೇಶಗಳನ್ನು ಸಫಲಗೊಳಿಸಬಹುದು.
- 8. ಪರಮಾಣುಶಕ್ತಿಯ ಶಾಂತಿಯುತ ಬಳಕೆಯನ್ನು ಹೆಚ್ಚಿಸುವುದಕ್ಕೆ ಸಹಾಯಕವಾಗುವಂತೆ ಇತರ ರಾಷ್ಟ್ರಗಳೊಡನೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಡನೆ ಸಮುದಾಯ ಸಂಪರ್ಕ ಹೊಂದಿರಬೇಕು.
ಪರಮಾಣುಶಕ್ತಿ ಸಂಶೋಧನೆ
[ಬದಲಾಯಿಸಿ]ಪರಮಾಣುಶಕ್ತಿ ಸಂಶೋಧನೆಗಾಗಿ ಮತ್ತು ಮಾನವಕಲ್ಯಾಣಕ್ಕೆ ಪರಮಾಣು ಶಕ್ತಿಯನ್ನು ಹೆಚ್ಚಾಗಿ ಬಳಕೆಗೆ ತರುವುದಕ್ಕಾಗಿ ಕೈಗೊಳ್ಳುವ ಕಾರ್ಯಗಳಿಗೆ ತಗಲುವ ವೆಚ್ಚ ಅಪಾರವಾದದ್ದು. ಅಷ್ಟೇ ಅಲ್ಲದೆ ಈ ಕಾರ್ಯಕ್ರಮಗಳಿಗೆ ಅನೇಕ ತಜ್ಞರ ಸಹಕಾರವೂ ಅಗತ್ಯ. ಇಂಥ ಒಂದು ಕ್ಷೇತ್ರ, ಸಾಮೂಹಿಕವಾಗಿ ಸಂಶೋಧನೆ ನಡೆಸುವುದಕ್ಕೆ ಅತ್ಯಂತ ಯೋಗ್ಯವಾದು ದಾಗಿದೆ. ಕೆಲವು ರಾಷ್ಟ್ರಗಳು ಒಟ್ಟುಗೂಡಿ ಸಂಶೋಧನ ಕಾರ್ಯಗಳನ್ನು ಕೈಗೊಂಡಾಗ ಅವುಗಳಿಗೆ ತಗಲುವ ವೆಚ್ಚವನ್ನು ನಿರ್ವಹಿಸುವುದು ಸುಲಭವಾಗುತ್ತದೆ ಮತ್ತು ತಾಂತ್ರಿಕ ಜ್ಞಾನವನ್ನು ಪರಸ್ಪರ ವಿನಿಮಯಮಾಡಿಕೊಳ್ಳುವುದರ ಮೂಲಕ ಸಂಶೋಧನೆಯಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿ ಮಾನವಕಲ್ಯಾಣವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಐರೋಪ್ಯ ಪರಮಾಣು ಸಮುದಾಯದ ಸ್ಥಾಪನೆಯಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ http://m.prajavani.net/article/2012_02_17/66217[ಶಾಶ್ವತವಾಗಿ ಮಡಿದ ಕೊಂಡಿ]
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಸೆಪ್ಟೆಂಬರ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Orphaned articles from ಮಾರ್ಚ್ ೨೦೧೯
- All orphaned articles
- Articles containing Bulgarian-language text
- Articles containing Croatian-language text
- Articles containing Czech-language text
- Articles containing Danish-language text
- Articles containing Dutch-language text
- Articles containing Estonian-language text
- Articles containing Finnish-language text
- Articles containing French-language text
- Articles containing German-language text
- Articles containing Greek-language text
- Articles containing Hungarian-language text
- Articles containing Irish-language text
- Articles containing Italian-language text
- Articles containing Latvian-language text
- Articles containing Lithuanian-language text
- Articles containing Maltese-language text
- Articles containing Polish-language text
- Articles containing Portuguese-language text
- Articles containing Romanian-language text
- Articles containing Slovak-language text
- Articles containing Slovene-language text
- Articles containing Spanish-language text
- Articles containing Swedish-language text
- ಅಂತರರಾಷ್ಟ್ರೀಯ ಸಂಘಟನೆಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ