ಏಕೀಕರಣ, ಕೈಗಾರಿಕೆಯಲ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಧುನಿಕ ಕೈಗಾರಿಕೆಯ ಒಂದು ಮುಖ್ಯ ಲಕ್ಷಣವೆಂದರೆ ಕಾರ್ಖಾನೆಗಳ ಗಾತ್ರದಲ್ಲಿ ಕಂಡುಬರುವ ಅತಿ ಬೆಳವಣಿಗೆಯ ಪ್ರವೃತ್ತಿ. ಕಾರ್ಖಾನೆಗಳ ಗಾತ್ರ ಎರಡು ವಿಧಗಳಲ್ಲಿ ಬೆಳೆಯುತ್ತದೆ. ಕಾರ್ಖಾನೆಗಳು ಸ್ವಾಭಾವಿಕವಾಗಿಯೇ ಬೆಳೆದು ದೊಡ್ಡ ಉದ್ಯಮಗಳಾಗಿ ಪರಿಣಮಿಸಬಹುದು. ಉದಾಹರಣೆಗೆ 1,000 ಘಟಕಗಳನ್ನು ಉತ್ಪಾದಿಸುತ್ತಿರುವ ಒಂದು ಕಾರ್ಖಾನೆ ಕೆಲವು ವರ್ಷಗಳ ಅನಂತರ 10,000 ಘಟಕಗಳನ್ನು ತಯಾರಿಸುವ ದೊಡ್ಡ ಉದ್ಯಮವಾಗಿ ಬೆಳೆಯಬಹುದು. ಸ್ವಾಭಾವಿಕ ಬೆಳವಣಿಗೆಯಿಂದ ಕಾರ್ಖಾನೆಗಳು ಬೃಹತ್ ಗಾತ್ರ ಪಡೆಯಬೇಕಾದರೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಸಣ್ಣ ಉದ್ಯಮ ಸಂಸ್ಥೆಗಳು ಅತ್ಯಲ್ಪಕಾಲದಲ್ಲಿ ಬೃಹತ್ ಉದ್ಯಮಗಳಾಗಿ ಬೆಳೆಯುವ ಮತ್ತೊಂದು ಮಾರ್ಗವೆಂದರೆ ಏಕೀಕರಣ. ಸ್ಪರ್ಧೆಯ ಅನಿಷ್ಟಗಳನ್ನು ನಿವಾರಿಸಿಕೊಳ್ಳಲೋ ಬೃಹದ್ ಗಾತ್ರದ ಅನುಕೂಲಗಳನ್ನು ಪಡೆಯಲೋ ಹಲವು ಉದ್ಯಮಗಳು ಒಂದಾಗುವ ಎಲ್ಲ ಕ್ರಮಗಳೂ ಸ್ಥೂಲವಾಗಿ ಏಕೀಕರಣವೇ, ಇದನ್ನು ಉದ್ಯಮಕೂಟ ಎಂಬ ಲೇಖನದಲ್ಲಿ ವಿವರಿಸಲಾಗಿದೆ. ಏಕೀಕರಣದ ಫಲವಾಗಿ ಒಂದು ಕೈಗಾರಿಕಾ ಸಂಸ್ಥೆಯ ಬೆಳವಣಿಗೆಯಾಗುವುದಕ್ಕೂ ಉದ್ಯಮಗಳ ಸಂಘಟನೆಯಿಂದ ಆಗುವ ಬೆಳವಣಿಗೆಗೂ ಬಹಳ ವ್ಯತ್ಯಾಸವುಂಟು. ಕಚ್ಚಾಸಾಮಗ್ರಿಯನ್ನು ಪಡೆಯುವುದರಿಂದ ಹಿಡಿದು ಪದಾರ್ಥಗಳು ಅನುಭೋಗಿಯ ಕೈಸೇರುವವರೆಗೆ ತಯಾರಿಕೆ ಹಂಚಿಕೆಗಳ ಎಲ್ಲ ಘಟ್ಟಗಳ ಮೇಲೂ ಹತೋಟಿ ಹೊಂದುವುದೇ ಕೈಗಾರಿಕೆಯ ಏಕೀಕರಣ.[೧]

ಕೈಗಾರಿಕೆಯ ಏಕೀಕರಣ[ಬದಲಾಯಿಸಿ]

ತಯಾರಿಕೆಯ ಒಂದು ಕಾರ್ಯಗತಿಯಿಂದ ಇನ್ನೊಂದು ಕಾರ್ಯಗತಿಗೆ ಸುಲಲಿತವಾಗಿ ಮುಂದುವರಿಯುವಂಥ ಸುವ್ಯವಸ್ಥೆಯೇ ಕೈಗಾರಿಕೆಯ ನಿಜವಾದ ಏಕೀಕರಣವೆನ್ನಬಹುದು; ಸಂಘಟಿತ ಉದ್ಯಮ ಗುಂಪುಗಳದು ಇನ್ನೊಂದು ಬಗೆಯ ಏಕೀಕರಣ. ಇಲ್ಲಿ ಈ ಉದ್ಯಮಗಳು ಸಂಘಟಿತವಾಗದಿದ್ದರೆ ಮಾರುಕಟ್ಟೆಯಲ್ಲಿ ಇವುಗಳ ನಡುವೆ ಸ್ಪರ್ಧೆ ಇರುತ್ತದೆ. ಕೈಗಾರಿಕೆಯ ನಾನಾ ಕಾರ್ಯಗತಿಗಳ ಸಂಯೋಜನೆಯಿಂದ ಸಂಭವಿಸುವ ಏಕೀಕರಣದ ವಿವಿಧ ಘಟಕಗಳ ನಡುವೆ ವಾಸ್ತವವಾಗಿ ಪರಸ್ಪರ ಸ್ಪರ್ಧೆಯ ಪ್ರಶ್ನೆಯೇ ಇದ್ದಿರುವುದಿಲ್ಲ. ಕಚ್ಚಾಸಾಮಗ್ರಿಯ ಸರಬರಾಜು ಮತ್ತು ಮಾರುಕಟ್ಟೆಗಳ ಹತೋಟಿ ಹೊಂದಬಯಸುವ ತಯಾರಿಕೆದಾರನ ವತಿಯಿಂದಲೋ ತಾನು ಮಾರಾಟಮಾಡುವ ಸರಕುಗಳ ಮೇಲೆ ಸಮರ್ಪಕ ನಿಯಂತ್ರಣ ಹೊಂದಲಿಚ್ಚಿಸುವ ವ್ಯಾಪಾರಿಯ ಪ್ರಯತ್ನದಿಂದಲೋ ತನ್ನ ಉತ್ಪಾದನೆಗೆ ಗ್ರಾಹಕರ ಭರವಸೆ ಪಡೆಯಬಯಸುವ ಕಚ್ಚಾಸಾಮಗ್ರಿ ತಯಾರಕನಿಂದಲೋ ಅಥವಾ ಇವರೆಲ್ಲರ ಪರಸ್ಪರಾವಲಂಬನದ ಅರಿವಿನ ಫಲವಾಗಿಯೋ ಈ ಬಗೆಯ ಏಕೀಕರಣ ಸಾಧ್ಯವಾಗಬಹುದು. ಆದ್ದರಿಂದ ಒಂದು ದೃಷ್ಟಿಯಿಂದ ಉದ್ಯಮ ಕೂಟಗಳು ಏಕೀಕರಣ ಪ್ರಯತ್ನಗಳೇ ಆದರೂ ಸ್ಪರ್ಧೆಯ ನಿವಾರಣೆಗಿಂತ ಹೆಚ್ಚಾಗಿ ಕೈಗಾರಿಕೆಯ ಬೆಳವಣಿಗೆಯ ದೃಷ್ಟಿಯಿಂದ ಏಕೀಕರಣವನ್ನು ಇಲ್ಲಿ ಪರಿಶೀಲಿಸಲಾಗಿದೆ.[೨]

ಉದಗ್ರ ಏಕೀಕರಣ[ಬದಲಾಯಿಸಿ]

ಸ್ಥೂಲವಾಗಿ ಹೇಳುವುದಾದರೆ ಎಲ್ಲ ಉದ್ಯಮಗಳಲ್ಲೂ ಇಷ್ಟಿಷ್ಟು ಏಕೀಕರಣ ಇದ್ದೇ ಇರುವುದುಂಟು. ಇದು ಸಾಪೇಕ್ಷವಾದ್ದು. ಬಲು ಸಣ್ಣ ಪದಾರ್ಥವಾದ ಗುಂಡುಸೂಜಿಯ ತಯಾರಿಕೆಯಿಂದ ಹಿಡಿದು, ಅತಿ ದೊಡ್ಡ ಯಂತ್ರಸ್ಥಾವರದ ನಿರ್ಮಾಣದವರೆಗೆ ಪ್ರತಿಯೊಂದು ಉದ್ಯಮವೂ ನಾನಾ ಕಾರ್ಯಗತಿಗಳ ಸಮ್ಮಿಲನದ ಫಲ. ಒಂದು ಕಾರ್ಯಗತಿಯ ಪೂರೈಕೆಯಲ್ಲೇ ಇನ್ನೊಂದು ಕಾರ್ಯಗತಿಯ ಆರಂಭ. ಅದು ಮತ್ತೊಂದಕ್ಕೆ ಪೂರಕ. ಉತ್ಪಾದನೆಯ ಗಾತ್ರ ಹೆಚ್ಚಿದಂತೆಲ್ಲ ಇಡೀ ಉತ್ಪಾದನೆಯನ್ನೇ ಅಧಿಕಾಧಿಕ ಕಾರ್ಯಗತಿಗಳಾಗಿ ವಿಂಗಡಿಸಿ ಅವಕ್ಕೆ ವಿಶಿಷ್ಟವಾದ ಯಂತ್ರೋಪಕರಣಗಳನ್ನು ಅಳವಡಿಸುವ ಪ್ರಯತ್ನ ನಡೆಯುವಂತೆ, ಈ ಇಡೀ ಕೈಗಾರಿಕೆಯೇ ಒಂದು ಕಾರ್ಯಗತಿಯಾಗಿ ಪರಿಣಮಿಸಿ ಇದಕ್ಕೆ ಹಿಂದಣ ಮುಂದಣ ಕೊಂಡಿಗಳನ್ನೆಲ್ಲ ಕೂಡಿಸುವ ಪ್ರಯತ್ನವೂ ಸಾಗಬಹುದು. ಅಚ್ಚುಕೂಟದಲ್ಲಿ ಅಕ್ಷರಸಂಯೋಜನೆ, ಪಡಿಯಚ್ಚು ತಯಾರಿಕೆ, ಮುದ್ರಣ, ಮಡಿಸುವಿಕೆ, ಅಂಚು ಕತ್ತರಿ, ಹೊಲಿಗೆ, ಕಟ್ಟು ಮುಂತಾದ ನಾನಾ ಕಾರ್ಯಗತಿಗಳಿರಬಹುದು. ಆದರೆ ಇಡೀ ಅಚ್ಚುಕೂಟದ ಉದ್ಯಮವೇ ಒಂದು ಕಾರ್ಯಗತಿಯೆಂದು ಪರಿಗಣಿಸಿ ಇದಕ್ಕೆ ಹಿಂದಿನ ಕಾಗದತಯಾರಿಕೆ, ಇದಕ್ಕೆ ಹೊಂದಿಕೊಳ್ಳಬಹುದು. ಹೀಗೆ ತುದಿಯಿಂದ ಕೆಳಮೊಗನಾಗಿಯೋ ಬುಡದಿಂದ ಮೇಲುಮೊಗನಾಗಿಯೋ ನಡುವಿನಿಂದ ಊಧ್ರ್ವ ಮತ್ತು ಅಧೋಮುಖಗಳಲ್ಲೂ ಇದು ಬೆಳೆಯಬಹುದು. ಈ ನಾನಾ ಉದ್ಯಮಗಳನ್ನೆಲ್ಲ ಕೂಡಿಸಿ ಒಂದೇ ಆಡಳಿತದೊಳಗೆ ಬರುವಂತೆ ವ್ಯವಸ್ಥೆಯಾಗಬಹುದು. ವಾಸ್ತವವಾಗಿ ಇದು ಉದಗ್ರ ಏಕೀಕರಣ ಅಥವಾ ಕೂಟವೇ ಎನ್ನಬಹುದು. ಇಲ್ಲಿ ಒಂದು ಉದ್ಯಮದ ಪದಾರ್ಥವೇ ಇನ್ನೊಂದರ ಕಚ್ಚಾಸಾಮಗ್ರಿ. ನಾನಾ ಉದ್ಯಮಗಳ ಏಕೀಕರಣದಿಂದ ಇಡೀ ಉತ್ಪಾದನಸರಣಿಯೇ ಬಹುತೇಕ ಸ್ವಯಂಪೂರ್ಣವಾಗಿ ಪರಿಣಮಿಸುವುದಲ್ಲದೆ ನಾನಾ ಬಿಡಿ ಕೈಗಾರಿಕೆಗಳ ಉಪೋತ್ಪನ್ನಗಳ ಸದುಪಯೋಗವಾಗುತ್ತದೆ. ಈ ಉದಗ್ರ ಏಕೀಕರಣದಿಂದ ಲಭಿಸುವ ಅನುಕೂಲಗಳಿವು: ಒಂದನೆಯದಾಗಿ, ಕಚ್ಚಾಪದಾರ್ಥಗಳಿಗಾಗಿ ಇತರ ಉದ್ಯಮ ಸಂಸ್ಥೆಗಳ ಮೇಲೆ ಅವಲಂಬಿಸುವ ಅಗತ್ಯವಿರುವುದಿಲ್ಲ. ಉತ್ಪಾದಿಸಿದ ಪದಾರ್ಥದ ಉತ್ಕಂಷ್ಟತೆ ಏಕರೀತಿಯಾಗಿರುವುದು ಸಾಧ್ಯ. ಕಚ್ಚಾಪದಾರ್ಥದ ವ್ಯವಸ್ಥಿತ ಸರಬರಾಜಿನ ಫಲವಾಗಿ ಉತ್ಪಾದನೆ ಕ್ರಮಬದ್ಧವಾಗಿರುತ್ತದೆ. ಎರಡನೆಯದಾಗಿ, ಒಂದೇ ವಸ್ತುವನ್ನು ಬೇರೆ ಬೇರೆ ಉದ್ಯಮ ಸಂಸ್ಥೆಗಳು ಉತ್ಪಾದಿಸುವಾಗ ಪ್ರತಿಯೊಂದು ಸಂಸ್ಥೆಯೂ ತನ್ನ ಪದಾರ್ಥದ ಮಾರಾಟಕ್ಕಾಗಿ ಮತ್ತೊಂದನ್ನವಲಂಬಿಸಬೇಕಾಗುತ್ತದೆ. ತಮ್ಮ ಪೂರೈಸಿದ ವಸ್ತುಗಳ ಕ್ರಮಬದ್ಧ ಮಾರಾಟ ಸೌಕರ್ಯ ಪಡೆಯುವ ದೃಷ್ಟಿಯಿಂದ ಇಂಥ ಸಂಸ್ಥೆಗಳು ತಮ್ಮ ಪದಾರ್ಥಗಳನ್ನು ಕೊಳ್ಳುವ ಸಂಸ್ಥೆಗಳೊಡನೆ ಏಕೀಕರಣ ಹೊಂದಬಹುದು. ಬೃಹದ್ ಗಾತ್ರ ಉತ್ಪಾದನೆಯ ಫಲವಾಗಿ ಇದಕ್ಕೆ ಅಗತ್ಯವಾದ ಕಚ್ಚಾಸಾಮಗ್ರಿಯ ಪರಿಮಾಣವೂ ಮಾರಾಟಕ್ಕಾಗಿ ಉತ್ಪಾದಿಸುವ ಸರಕುಗಳ ಮೊತ್ತವೂ ಅಧಿಕವಾಗಿರುವುದರಿಂದ ಈ ಬಗೆಯ ಉದಗ್ರ ಏಕೀಕರಣದಿಂದ ಹೆಚ್ಚು ಸೌಕರ್ಯವೂ ಉಳಿತಾಯವೂ ಸಂಭವಿಸುತ್ತವೆ.

ಸಮತಲ ಏಕೀಕರಣ[ಬದಲಾಯಿಸಿ]

ಒಂದೇ ಬಗೆಯ ಪದಾರ್ಥಗಳನ್ನು ಉತ್ಪಾದಿಸಿ ಮಾರಾಟಮಾಡುವ ಸಂಸ್ಥೆಗಳ ಏಕೀಕರಣವೂ ದಕ್ಷತೆಯಲ್ಲೂ ಮಿತವ್ಯಯದಲ್ಲೂ ಪರಿಣಮಿಸುತ್ತದೆ. ಒಂದೇ ಪದಾರ್ಥವನ್ನು ಅಥವಾ ಸಾಮ್ಯವಿರುವ ಅನೇಕ ಪದಾರ್ಥಗಳನ್ನು ಉತ್ಪಾದಿಸುವ ಬೇರೆ ಬೇರೆ ವ್ಯವಸ್ಥಾಪಕರ ಹತೋಟಿಯಲ್ಲಿರುವ ಅನೇಕ ಉದ್ಯಮಸಂಸ್ಥೆಗಳನ್ನು ಸಂಯೋಜಿಸಿದರೆ ಸಂಭವಿಸುವ ಸಮತಲ ಏಕೀಕರಣದಿಂದ ಈ ಪದಾರ್ಥಗಳ ಉತ್ಪಾದನೆಯ ಗಾತ್ರ ದೊಡ್ಡದಾಗಿ, ಬೃಹದ್ ಗಾತ್ರದ ಉತ್ಪಾದನೆಯ ಎಲ್ಲ ಅನುಕೂಲಗಳೂ ದೊರಕುತ್ತವೆ.

ಪಾಶ್ರ್ವಸ್ಥ ಏಕೀಕರಣ[ಬದಲಾಯಿಸಿ]

ವಿವಿಧವಾದರೂ ಸಂಬಂಧಿವಸ್ತುಗಳನ್ನು ಉತ್ಪಾದಿಸುವ ಸಂಸ್ಥೆಗಳು ಸಂಯೋಜಿಸಿದರೆ ಅದು ಪಾಶ್ರ್ವಸ್ಥ ಏಕೀಕರಣವೆನಿಸುತ್ತದೆ. ಚಕ್ಕಳದಿಂದ ಜೀನು, ಎಕ್ಕಡ, ಕೈಚೀಲ ಮುಂತಾದವನ್ನು ಉತ್ಪಾದಿಸಬಹುದು. ಈ ಪದಾರ್ಥಗಳ ಉತ್ಪಾದನೆಯನ್ನು ಪ್ರತ್ಯೇಕವಾಗಿ ಬೇರೆ ಬೇರೆ ಉದ್ಯಮ ಸಂಸ್ಥೆಗಳು ಕೈಗೊಳ್ಳುವುದಕ್ಕೆ ಬದಲಾಗಿ ಒಂದೇ ಉದ್ಯಮ ಸಂಸ್ಥೆ ಇವೆಲ್ಲವನ್ನೂ ಉತ್ಪಾದಿಸಿದರೆ ಹಲವು ಸೌಕರ್ಯಗಳನ್ನು ಪಡೆಯಬಹುದು. ಹೀಗಾಗಿ, ಚಕ್ಕಳವನ್ನು ಕಚ್ಚಾಸಾಮಗ್ರಿಯಾಗಿ ಉಪಯೋಗಿಸುವ ಅನೇಕ ಸಂಸ್ಥೆಗಳು ಪಾಶ್ರ್ವಸ್ಥ ಏಕೀಕರಣ ಹೊಂದಬಹುದು.ಪಾಶ್ರ್ವಸ್ಥ ಏಕೀಕರಣ ಎರಡು ಬಗೆಯದಾಗಿರಬಹುದು. ಮೇಲಿನ ಉದಾಹರಣೆಯಲ್ಲಿ ತೋರಿಸಿರುವಂತೆ ಒಂದೇ ಕಚ್ಚಾಪದಾರ್ಥದಿಂದ ಉತ್ಪಾದಿಸಲಾಗುವ ಅನೇಕ ಪೂರೈಸಿದ ವಸ್ತುಗಳನ್ನು ತಯಾರುಮಾಡುವ ಉದ್ಯಮಗಳು ಏಕೀಕರಣ ಹೊಂದಿದರೆ ಅದು ವಿಭಿನ್ನ ಪಾಶ್ರ್ವಸ್ಥ ಏಕೀಕರಣ. ಏಕೆಂದರೆ ಇಲ್ಲಿ ಒಂದೇ ಕಚ್ಚಾವಸ್ತುವಾದ ಚಕ್ಕಳ ವಿಭಿನ್ನ ಪದಾರ್ಥಗಳಿಗೆ ಕಚ್ಚಾಸಾಮಗ್ರಿಯಾದ ಚಕ್ಕಳವನ್ನು ಅಧಿಕ ಪ್ರಮಾಣದಲ್ಲಿ ಕೊಳ್ಳುವ ಕಾರಣ ಬೃಹದ್ ಗಾತ್ರದ ಕೊಳ್ಳುವಿಕೆಯ ಸೌಕರ್ಯಗಳನ್ನು ಪಡೆಯಲು ಸಾಧ್ಯ. ಇದಕ್ಕೆ ವಿರುದ್ಧವಾಗಿ ಒಂದೇ ಸಿದ್ಧ ವಸ್ತುವನ್ನು ಉತ್ಪಾದಿಸುವ ಸಂಸ್ಥೆಗಳಿಗೆ ಬೇಕಾಗುವ ಬೇರೆ ಬೇರೆ ಕಚ್ಚಾಸಾಮಗ್ರಿಗಳನ್ನು ಪ್ರತ್ಯೇಕವಾಗಿ ಸರಬರಾಜು ಮಾಡುವ ಅನೇಕ ಉದ್ಯಮಗಳು ಏಕೀಕರಣ ಹೊಂದಬಹುದು. ಉದಾಹರಣೆಗೆ, ಉಕ್ಕು ತಯಾರಿಸುವ ಸಂಸ್ಥೆಗೆ ಕಬ್ಬಿಣದ ಅದುರು, ಕಲ್ಲಿದ್ದಲು, ಕಲ್ಲಿದ್ದಲಿನ ಕಿಟ್ಟ ಮೊದಲಾದವು ಅವಶ್ಯಕ. ಇವನ್ನು ತಯಾರಿಸುವ ಉದ್ಯಮಗಳೆಲ್ಲ ಒಂದಾದರೆ ಅದರಿಂದ ಮಾರುಕಟ್ಟೆಯ ವೆಚ್ಚಗಳೆಷ್ಟೋ ಕಡಿಮೆಯಾಗುವುದಲ್ಲದೆ ಸಿದ್ಧಗೊಂಡ ಪದಾರ್ಥದ ಗುಣಮಟ್ಟ ಏಕರೀತಿಯಾಗಿರುತ್ತದೆ.

ಬಹುಭುಜ ಏಕೀಕರಣ[ಬದಲಾಯಿಸಿ]

ಯಾವುದೇ ಉದ್ಯಮಸಂಸ್ಥೆ ತನ್ನ ಉತ್ಪಾದನ ಪರಂಪರೆಗೆ ಬೇಕಾಗುವ ಸಹಾಯಕ ವಸ್ತುಗಳನ್ನಾಗಲಿ ಸೇವೆಗಳನ್ನಾಗಲಿ ತನ್ನಲ್ಲಿಯೆ, ಆಂತರಿಕವಾಗಿ, ಒದಗಿಸುವ ವ್ಯವಸ್ಥೆ ಮಾಡಿಕೊಂಡ ಪಕ್ಷದಲ್ಲಿ ಅದು ಬಹುಭುಜ ಏಕೀಕರಣ. ಉದಾಹರಣೆಗೆ, ಪಾದರಕ್ಷೆ ತಯಾರಕ ತನಗೆ ಬೇಕಾಗುವ ದಾರ, ಮೊಳೆ, ರಟ್ಟುಪೆಟ್ಟಿಗೆ, ಡಬ್ಬಗಳು ಮೊದಲಾದವುಗಳನ್ನು ತನ್ನಲ್ಲಿಯೇ ತಯಾರಿಸಬಹುದು. ಹಾಗೆಯೇ ತನ್ನವೇ ಉಪಕರಣಗಳಿಂದ ತನ್ನ ಕಾರ್ಮಿಕರ ಸೇವೆಗಳನ್ನು ಉಪಯೋಗಿಸಿ ದುರಸ್ತು ಕಾರ್ಯವನ್ನೂ ಕೈಗೊಳ್ಳಬಹುದು. ಇದು ಬಹುಭುಜ ಏಕೀಕರಣ. ವೆಚ್ಚವನ್ನು ಕಡಿಮೆಗೊಳಿಸುವುದೇ ಇದಕ್ಕೆ ಮೂಲ ಪ್ರೇರಣೆ.ಯಾವುದೇ ಬಗೆಯ ಏಕೀಕರಣವಾಗಲಿ, ಉದ್ಯಮಸಂಸ್ಥೆಯ ಗಾತ್ರವನ್ನು ಅಧಿಕಗೊಳಿಸಿ ಅಧಿಕ ಉತ್ಪಾದನೆಯ ಅನುಕೂಲವನ್ನೊದಗಿಸುತ್ತದೆ. ಈ ವ್ಯವಸ್ಥೆಯಿಂದ ಉದ್ಯಮಸಂಸ್ಥೆಗಳು ತಮಗೆ ಬೇಕಾದ ಕಚ್ಚಾಸಾಮಗ್ರಿಗಳ ಮೇಲೆ ಹತೋಟಿ ಸ್ಥಾಪಿಸಿಕೊಳ್ಳುವವು. ತಮ್ಮ ಪದಾರ್ಥಗಳ ಮಾರಾಟವನ್ನು ನಿಶ್ಚಿತಗೊಳಿಸುವವು. ಅಲ್ಲದೆ ಮಾರುಕಟ್ಟೆ ವೆಚ್ಚ ಮೊದಲಾದವುಗಳನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವ ಅನುಕೂಲಗಳೂ ಇವಕ್ಕೆ ಲಭಿಸುತ್ತವೆ.ಆದರೆ ಈ ಪ್ರವೃತ್ತಿ ಮಿತಿಮೀರಿ ಬೆಳೆದರೆ ಕೈಗಾರಿಕೆಯ ಏಕಸ್ವಾಮ್ಯ ಬೆಳೆದು ಸಮಾಜಕ್ಕೆ ಅಪಾಯಕಾರಿಯಾಗಿಯೂ ಪರಿಣಮಿಸಬಹುದು. ಇಂಥ ಸಂಭವವನ್ನು ನಿವಾರಿಸಲು ಎಲ್ಲ ಮುಂದುವರಿದ ದೇಶಗಳಲ್ಲೂ ಸೂಕ್ತ ಕಾನೂನುಗಳು ಜಾರಿಯಲ್ಲಿವೆ.

ಉಲ್ಲೇಖಗಳು[ಬದಲಾಯಿಸಿ]