ಏಕಾಣುಜೀವಿಕ ಜೀವಿವಿಷಗಳಿಂದೇಳುವ ಆಹಾರ ವಿಷವೇರಿಕೆ
ಗುತ್ತಿಕಾಯ್ಜೀವಿಗಳು: ಉಸಿರಾಡುವ ಗಾಳಿ, ನೆಲ, ಮೈ ಚರ್ಮ, ಮೂಗು, ಗಂಟಲು ಹೀಗೆ ಎಲ್ಲೆಲ್ಲೂ ಗುತ್ತಿಕಾಯ್ಜೀವಿಗಳು ಹೇರಳವಾಗಿವೆ.[೧] ದ್ರಾಕ್ಷಿ ಗೊಂಚಲಂತೆ ಗುತ್ತಿ ಗುತ್ತಿಯಾಗಿ ಬೆಳೆವ ದುಂಡನೆಯ ಏಕಾಣುಜೀವಿಗಳಲ್ಲಿ ಕೆಲವು ಹೊರಬಿಟ್ಟ ಜೀವವಿಷದಿಂದ ಆಹಾರ ವಿಷವೇರುತ್ತದೆ. ಬೇರೆ ಏಕಾಣುಜೀವಿಗಳು ಸಾಯುತ್ತಿರುವ ಆವರಣದಲ್ಲಿ ಇವು ಮಾತ್ರ ಹುಲುಸಾಗಿ ಬೆಳೆಯುತ್ತವೆ. ಒಂದಿಷ್ಟು ಉಪ್ಪು, ಸಕ್ಕರೆ ಹಾಕಿದಾಗ ವಿಷಮಶೀತಜ್ವರದ ರೋಗಾಣುಗಳು ಹಳಸಲಿನ ಜೀವಾಣುಗಳು ಇನ್ನು ಬೆಳೆಯದೆ ಸತ್ತರೂ ಗುತ್ತಿಕಾಯ್ಜೀವಿಗಳು ಮಾತ್ರ ಚೆನ್ನಾಗಿಯೇ ಬೆಳೆಯುತ್ತವೆ. ಆದ್ದರಿಂದಲೇ ಊರಿಟ್ಟ ಆಹಾರದಲ್ಲಿ ಹಳಸಿಸುವ ಜೀವಾಣುಗಳು ಬೆಳೆಯದಿದ್ದರೂ ಆಹಾರ ವಿಷಗೊಳಿಸುವ ಗುತ್ತಿಕಾಯ್ಜೀವಿಗಳು ಹುಲುಸಾಗಿ ಬೆಳೆಯಬಹುದು. ವಿಷ ಬಿಡಲಿ ಬಿಡದಿರಲಿ, ಆಹಾರದಲ್ಲಿ ಗುತ್ತಿಕಾಯ್ಜೀವಿಗಳು ಬೆಳೆಯುತ್ತಿರುವುದನ್ನು ಮಾತ್ರ ರುಚಿಯಿಂದಾಗಲಿ, ವಾಸನೆಯಿಂದಾಗಲಿ ಕಂಡುಕೊಳ್ಳುವಂತಿಲ್ಲ. ಗುತ್ತಿಕಾಯ್ಜೀವಿಗಳಿಂದ ಆಹಾರ ವಿಷವೇರುವುದು ತೀರ ಸಾಮಾನ್ಯ. ಈ ರೋಗಾಣುಗಳು ಮಾನವನನ್ನೂ ಮಂಗನನ್ನೂ ಕಾಡುತ್ತವೆ ; ಇತರ ಪ್ರಾಣಿಗಳನ್ನು ಕಾಡವು. ಪ್ರಪಂಚದಲ್ಲಿ ಇದರಿಂದ ವಾಂತಿ, ಓಕರಿಕೆ ಅನುಭವಿಸದೆ ಬೆಳೆದವರೇ ಇಲ್ಲವೆನ್ನಬಹುದು. ಆದರೆ, ಎಷ್ಟೋ ವೇಳೆ ಇದನ್ನು ಗುರುತಿಸದಿರಲೂಬಹುದು. ಇಲ್ಲವೇ ಇನ್ನೇತರಿಂದಲೋ ಆಗಿರಬಹುದು ಎಂದುಕೊಳ್ಳಬಹುದು.
ವಿಷಕಾರಕ ತಿಂಡಿ ತಿನಿಸು, ಆಹಾರ ವಸ್ತುಗಳು ಹೆಚ್ಚುತ್ತಿವೆ. ಹಾಲು, ಮೊಸರು, ಮಜ್ಜಿಗೆ, ಹಾಲಿನಿಂದಾದ ಪದಾರ್ಥಗಳು, ರೊಟ್ಟಿಯಂಗಡಿ ತಯಾರಿಕೆಗಳು, ಮಾಂಸ, ಊರಿಟ್ಟ ಮಾಂಸಗಳಿಂದ ಹೀಗಾಗುವುದು ತಿಳಿದೇ ಇದೆ. ಅಡಿಗೆ ಮಾಡಿಟ್ಟಿರುವ ರೊಟ್ಟಿ, ಇಡ್ಲಿ, ದೋಸೆ, ಸಿಹಿ ತಿಂಡಿಗಳಿಂದಲೂ ಹೀಗಾಗುತ್ತದೆ. ಇವನ್ನು ತಿಂದ ಕೆಲವು ತಾಸುಗಳಲ್ಲೇ ವಿಷವೇರಿದ್ದರ ಲಕ್ಷಣಗಳು ಕಾಣಬರುತ್ತವೆ. ಓಕರಿಕೆ, ವಾಂತಿ, ಹೊಟ್ಟೆಶೊಲೆ, ನುಲಿತ, ಉಚ್ಚಾಟ ಮೊದಲೋ ಕೊನೆಗೋ ಕಾಣಿಸಿಕೊಳ್ಳುವುದು ವಿಶೇಷ. ಇವು ವಿಪರೀತವಾದರೆ, ರೋಗಿ ನಿತ್ರಾಣದಿಂದ ಸುಸ್ತಾಗಿ ಕುಸಿಯುವನು. ವಾಂತಿಯಲ್ಲೋ ಭೇದಿಯಲ್ಲೋ ರಕ್ತಬೀಳಬಹುದು. ಕೊನೆಗೆ, ನಾಡಿಗುಂದಿ ಸೊಕ್ಕೆಯಿಂದ (ಷಾಕ್) ಸುಸ್ತಾಗಬಹುದು. ವಿಷವೇರಿಕೆ ಹೆಚ್ಚಾದರೆ ರೋಗಿ ಸಾಯುವುದು ಹೆಚ್ಚಲ್ಲ ; ಉಳಿದವರು ಕೆಲವು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಸಾಲ್ಮೊನೆಲ್ಲ ಜೀವಿಗಳಿಂದಾದ ಆಹಾರ ವಿಷವೇರಿಕೆಯಲ್ಲಿನಂತೆ, ಸೋಂಕಿನಿಂದೇಳುವ ಜ್ವರ ಮತ್ತಿತರ ಲಕ್ಷಣಗಳೇ ಇರವು. ಈ ಆಹಾರ ವಿಷವೇರಿಕೆ ಕೆಲವರಿಗೆ ತಟ್ಟದು. ಆದ್ದರಿಂದ ವಿಷಕರ ಆಹಾರ ಸೇವಿಸಿದವರೆಲ್ಲರೂ ಬೇನೆ ಬೀಳದಿರಬಹುದು. ಗುತ್ತಿಕಾಯ್ಜೀವಿಯಿಂದಾದ ಆಹಾರ ವಿಷವೇರಿಕೆಗೆ ಕಾರಣವಾದ ಜೀವಿವಿಷ (ಕರುಳಜೀವಿವಿಷ) ಸೇವಿಸುವ ಮೊದಲೇ ಆಹಾರದಲ್ಲಿ ತಯಾರಾಗಿರುತ್ತದೆ. ಅರೆತಾಸು ಕುಸಿದಾಗಲೂ ಸಾಯದೆ ಉಳಿಯುವುದು, ಪ್ರಯೋಗಗಳಲ್ಲಿ ಕಂಡಿದೆ.
ಆದ್ದರಿಂದ. ಆಹಾರ ವಿಷಕರವಾಗಬೇಕಾದರೆ ಅದರಲ್ಲಿ ವಿಷಜನಿಕ ಗುತ್ತಿಕಾಯ್ಜೀವಿಗಳಿರಬೇಕು. ಆ ರೋಗಾಣುಗಳು ಬೆಳೆಯಲು ಅನುಕೂಲಿಸುವಂತೆ ಪುಷ್ಟಿಕಾರಕವಾಗಿ ಸಾಕಷ್ಟು ತೇವವೂ ಬೇಕಿರುವ ಆಮ್ಲತೆಯೋ ಕ್ಷಾರತೆಯೋ ಇರಬೇಕು; ಕಾವೂ ತಕ್ಕಂತಿರಬೇಕು; ಅವು ಬೆಳೆದು ಕರುಳಜೀವಿವಿಷ ತಯಾರಿಸಿ ಬಿಡುವಷ್ಟು ಹೊತ್ತು ಹಾಗೇ ಇರಿಸಿರಬೇಕು. ಗುತ್ತಿಕಾಯ್ಜೀವಿಯಿಂದಾದ ಆಹಾರ ವಿಷವೇರಿಕೆಗೆ ಯಾವ ಗೊತ್ತಾದ ರೋಗರೋಧಕ ಚಿಕಿತ್ಸೆಯೂ ಇಲ್ಲ. ವಾಂತಿ, ಉಚ್ಚಾಟ ಆಗುತ್ತಲೇ ಇರುವುದರಿಂದ ವಿಷವನ್ನು ಮತ್ತೆ ಹೊರತೆಗೆವ ಯಾವ ಉಪಾಯವೂ ಬೇಕಿಲ್ಲ. ಇನ್ನೂ ಹೆಚ್ಚಿನದಾಗಿ, ಇದರಿಂದ ಮೈಯಲ್ಲಿನ ಬಹು ಪಾಲು ನೀರೂ ಉಪ್ಪು ಕಳೆವುದರಿಂದ, ಅವನ್ನು ರಕ್ತನಾಳಾಂತರವೋ ಚರ್ಮದಡಿಯೋ ಬೇಗನೆ ಚುಚ್ಚಿ ಸಾಕಷ್ಟು ತುಂಬಿಕೊಟ್ಟು, ಸುಸ್ತುಬಿದ್ದಿರುವ ರೋಗಿ ಚೇತರಿಸಿಕೊಳ್ಳಲು ನೆರವಾಗಬೇಕು. ಗುತ್ತಿಕಾಯ್ಜೀವಿಯಿಂದ ಆಹಾರ ವಿಷಕರವಾಗುವುದನ್ನು ತಪ್ಪಿಸಲು ಮುಖ್ಯವಾಗಿ, ಇರಿಸಿದರೆ ಕೆಟ್ಟುಹೋಗುವಂಥ ಆಹಾರ ಪದಾರ್ಥಗಳನ್ನು ಶೀತಕದಲ್ಲಿ (ರೆಫ್ರಿಜರೇಟರ್) ಇರಿಸಬೇಕು. ಏಕೆಂದರೆ ಈ ಜೀವಾಣುಗಳು ಆಹಾರದಲ್ಲಿ ಬೆರೆಯುವುದನ್ನು ತಪ್ಪಿಸುವುದಂತೂ ಸುಲಭಸಾಧ್ಯವಲ್ಲ. ತೀರ ತಣ್ಣಗೆ ಕೊರೆವ ತಂಪಿನಲ್ಲಿ ಈ ಜೀವಾಣುಗಳು ನಿಧಾನವಾಗಿ ಬೆಳೆದರೂ ಕೋಣೆಯ ಎಂದಿನ ಕಾವಿನಲ್ಲಿ ಬೇಗನೆ ಬೆಳೆಯುತ್ತವೆ. ಮೈಕಾವಿನಲ್ಲಂತೂ ಬಲುಬೇಗನೆ ಬೆಳೆದುಬಿಡುತ್ತವೆ.
ಉಲ್ಲೇಖನಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]