ಏಕಕಾಲೀನ ಶಿಲೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಕಕಾಲೀನ ಶಿಲೆಗಳು: ಭೂ ಇತಿಹಾಸದ ಒಂದೇ ಕಾಲಕ್ಕೆ ಸೇರಿದ ಶಿಲೆಗಳು (ಕಂಟೆಂಪೊರೇನಿಯಸ್ ರಾಕ್ಸ್‌). ಜೀವ್ಯವಶೇಷಗಳ ಅಭ್ಯಾಸದಿಂದ ಜಲಜಶಿಲಾ ಸಮುದಾಯದ ಕಾಲವನ್ನು ನಿರ್ಣಯಿಸುವ ಕ್ರಮ ರೂಢಿಗೆ ಬಂದಿದೆ. ಒಂದೊಂದು ಕಾಲದ ಜೀವಿಗಳಿಗೂ ಇತರ ಕಾಲದ ಜೀವಿಗಳಿಗೂ ಭಿನ್ನವಾದ ವೈಶಿಷ್ಟ್ಯವಿರುವುದರಿಂದ ಅವುಗಳ ಅವಶೇಷಗಳಲ್ಲಿಯೂ ಈ ವೈಶಿಷ್ಟ್ಯ ಉಳಿದಿರುವುದು. ಇದರ ಪರಿಣಾಮವಾಗಿ ಜಲಜ ಶಿಲಾಸಮುದಾಯದ ಕಾಲನಿರ್ಣಯ ಶಾಸ್ತ್ರೀಯವಾಗಿ ಸಾಧ್ಯವಾಗುತ್ತದೆ. ಜೀವಕೋಟಿ ಭೂ ಇತಿಹಾಸದ ಉದ್ದಕ್ಕೂ ಕಾಲಕಾಲಕ್ಕೆ ಬದಲಾವಣೆಗೊಂಡು ಮುನ್ನಡೆದ ಸಂಗತಿ ಯುರೋಪ್ ಖಂಡದ ಜಲಜಶಿಲಾ ಪರಂಪರೆಯ ಸಂಶೋಧನೆಯಿಂದ ಮೊದಲಬಾರಿಗೆ ವ್ಯಕ್ತವಾಯಿತು. ಆಗ ಭೂವಿಜ್ಞಾನಿಗಳು ಭೂ ಇತಿಹಾಸದ ಪ್ರತಿ ಕಾಲದಲ್ಲಿಯೂ ಪ್ರಪಂಚದ ನಾನಾ ಭಾಗಗಳಲ್ಲಿನ ಜೀವರಾಶಿಯಲ್ಲಿ ಏಕರೂಪತೆ ಇದ್ದಿರಬೇಕೆಂದೂ ಅವುಗಳ ಮುನ್ನಡೆಯೂ ಒಂದೇ ರೀತಿಯಲ್ಲಿ ಸಾಗಿರಬೇಕೆಂದೂ ಅಭಿಪ್ರಾಯಪಟ್ಟರು. ಎರಡು ಪ್ರದೇಶಗಳ (ಅವು ಎಷ್ಟೇ ದೂರದಲ್ಲಿದ್ದರೂ) ಶಿಲಾವರ್ಗಗಳಲ್ಲಿ ಒಂದೇ ರೀತಿಯ ಅಥವಾ ಸರಿಸುಮಾರು ಒಂದೇ ರೀತಿಯ ಜೀವ್ಯವಶೇಷಗಳು ಇದ್ದರೆ ಆ ಶಿಲೆಗಳು ಒಂದೇ ಕಾಲದಲ್ಲಿ ನಿಕ್ಷೇಪಗೊಂಡಿರುತ್ತವೆಂಬ ಅಭಿಪ್ರಾಯಕ್ಕೆ ಬಂದರು. ಇವೇ ಏಕಕಾಲೀನ ಶಿಲಾವರ್ಗಗಳು. ಈ ದಾರಿಯಲ್ಲಿ ನಡೆದ ಸಂಶೋಧನೆ ಜಿಜ್ಞಾಸೆಗಳ ಫಲಿತಾಂಶವಾಗಿ ಶಿಲಾವರ್ಗಗಳು ಈ ಕೆಳಗಿನ ನಿಯಮಗಳಿಗೆ ಒಳಪಟ್ಟರೆ ಅವನ್ನು ಏಕಕಾಲೀನ ಶಿಲೆಗಳು ಎನ್ನುತ್ತಾರೆ.

  1. ಆ ಶಿಲಾವರ್ಗಗಳಲ್ಲಿ ಒಂದೇ ರೀತಿಯ ಅಥವಾ ಸುಮಾರು ಒಂದೇ ರೀತಿಯ ಜೀವ್ಯವಶೇಷಗಳಿರಬೇಕು.
  2. ಅವು ನಿಕ್ಷೇಪಗೊಂಡ ಪ್ರದೇಶಗಳು ಒಂದೇ ಭೌಗೋಳಿಕ ಪ್ರಾಂತ್ಯಕ್ಕೆ ಸೇರಿದ್ದು, ಪರಸ್ಪರ ಅತಿದೂರದಲ್ಲಿರಕೂಡದು.
  3. ಆ ಪ್ರದೇಶಗಳಲ್ಲಿ ಏಕರೀತಿಯ ವಾತಾವರಣ ಇದ್ದಿರಬೇಕು.