ವಿಷಯಕ್ಕೆ ಹೋಗು

ಎಸ್ ಆರ್ ನಾಥನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಸ್ ಆರ್ ನಾಥನ್ ಎಂದೇ ಖ್ಯಾತರಾದ ಸೆಲ್ಲಪ್ಪನ್ ರಾಮನಾಥನ್, ೧೨ ವರ್ಷಕಾಲ (೧೯೯೯-೨೦೧೧) ಸಿಂಗಾಪುರದ ರಾಷ್ಟ್ರಪತಿಯಾಗಿದ್ದರು.೨ ಬಾರಿಯೂ ಅವಿರೋಧವಾಗಿ ಆಯ್ಕೆಯಾದ ಹಿರಿಮೆ ನಾಥನ್ ಅವರದು.

೩ ಜುಲ್ಯ್ ೧೯೨೪ರಂದು ಸಿಂಗಾಪುರದಲ್ಲಿ ವಿ ಸೆಲ್ಲಪ್ಪನ್ ಮತ್ತು ಅಭಿರಾಮಿ ದಂಪತಿಗಳ ಮೂರನೆಯ ಮಗನಾಗಿ ಜನಿಸಿದ ನಾಥನ್,ಮಲಯಾದ ಜೊಹೊರ್ ಎಂಬಲ್ಲಿ ಸಮುದ್ರ ದಡದಲ್ಲಿ ಬೆಳೆದರು. ವಕೀಲರ ಬಳಿ ಗುಮಾಸ್ತನಾಗಿದ್ದ ಸೆಲ್ಲಪ್ಪನ್, ೧೯೨೯ರ ಅಮೇರಿಕೆಯ ಆರ್ಥಿಕ ಹಣದಿಳಿಕೆಯ ಸಂದರ್ಭದಲ್ಲಿ ಆಸ್ತಿ ಕಳೆದುಕೊಂಡರು. ಸಾಲ ಹೆಚ್ಚಾಗಿ ನಾಥನ್‍ರಿಗೆ ೮ ವರ್ಷವಾದಾಗ ಸೆಲ್ಲಪ್ಪನ್ ಆತ್ಮಹತ್ಯೆ ಮಾಡಿಕೊಂಡರು. ಸಿಂಗಾಪುರಕ್ಕೆ ಮರಳಿದ ನಾಥನ್, ಶಾಲೆಯಿಂದ ಎರಡು ಬಾರಿ ಉಚ್ಚಾಟಿಸಲ್ಪಟ್ಟರು. ೧೬ನೆಯ ವಯಸ್ಸಿನಲ್ಲಿ ತಾಯಿಯೊಂದಿಗೆ ಜಗಳವಾಗಿ ಮನೆಯಿಂದ ಓಡಿಹೋದರು.[] ಜಪಾನೀಯರು ಸಿಂಗಾಪುರವನ್ನು ಆಕ್ರಮಿಸಿಕೊಂಡಾಗ ಜಪಾನೀ ಭಾಷೆ ಕಲಿತು, ಜಪಾನೀಯರ ಕೈಮುಬು ಶಾಖೆಯಲ್ಲಿ ಅನುವಾದಕರಾಗಿ ಸೇರಿಕೊಂಡರು. ಯುದ್ಧದ ನಂತರ ಆಕ್ಸ್ಫ಼ರ್ಡ್ ನ ವೊಸ್ಲೇ ಹಾಲ್ ಕಾಲೇಜಿನಿಂದ ಅಂಚೆತೆರಪಿನ ದೂರ ಶಿಕ್ಷಣದ ನೆರವಿನಿಂದ ಇಂಟರ್ ಮೀಡಿಯೇಟ್ ಪಾಸಾದರು. ೧೯೫೪ರಲ್ಲಿ ಅಂದಿನ ಮಲಯಾ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಡಿಪ್ಲೋಮಾ ಪಡೆದರು.

ಕುಟುಂಬ

[ಬದಲಾಯಿಸಿ]

ನಾಥನ್ ರ ಪತ್ನಿ ಊರ್ಮಿಳಾ ನಂದಿ. ಪುತ್ರಿ ಜುತಿಕಾ ಮತ್ತು ಒಸಿತ್ ಎಂಬ ಪುತ್ರ ನಾಥನ್ ರ ಕುಟುಂಬ.

ನಾಗರೀಕ ಸೇವೆ

[ಬದಲಾಯಿಸಿ]

೧೯೫೫ರಲ್ಲಿ ಆರೋಗ್ಯ ಇಲಾಖೆಯಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಸಿಂಗಾಪುರದ ನಾಗರೀಕ ಸೇವೆ ಸೇರಿದ ನಾಥನ್, ತಮ್ಮ ಶ್ರದ್ಧೆಯ ದುಡಿಮೆಯಿಂದ ನಾವಿಕರ ಕಲ್ಯಾಣ ಅಧಿಕಾರಿ ಹುದ್ದೆಗೆ ಏರಿದರು. ೧೯೬೨ರಲ್ಲಿ ರಾಷ್ಟ್ರೀಯ ವ್ಯಾಪಾರ ಕಾಂಗ್ರೆಸ್ (NTUC)ಯ ಕಾರ್ಮಿಕ ಸಂಶೋಧನಾ ವಿಭಾಗಕ್ಕೆ ಸಹಾಯಕ ನಿರ್ದೇಶಕರಾದರು. ತಮ್ಮ ನಿಪುಣತೆಯಿಂದ ಆಫ಼್ರೋ-ಏಷ್ಯನ್ ಜನಬಳಗ(Afro-Asian People's Solidarity Organisation)ದಲ್ಲಿ ಸಿಂಗಾಪುರಕ್ಕೆ ಸದಸ್ಯತ್ವ ಗಳಿಸುವಲ್ಲಿ ಯಶಸ್ವಿಯಾದರು.[]

೧೯೬೬ರಲ್ಲಿ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಆಯ್ಕೆಗೊಂಡ ನಾಥನ್ ೧೯೭೧ರ ಹೊತ್ತಿಗೆ ಗೃಹ ಕಾರ್ಯದರ್ಶಿ ಹುದ್ದೆಗೆ ಏರಿದರು. ಅದೇ ವರ್ಷ, ಭದ್ರತೆ ಮತ್ತು ಗುಪ್ತಚರ ಇಲಾಖೆಯ ನಿರ್ದೇಶಕರಾದರು.

ಲಾಜು ಘಟನೆ

[ಬದಲಾಯಿಸಿ]

೧೯೭೪ ಜನವರಿ ೩೧ರಂದು ಜಪಾನೀ ರೆಡ್ ಆರ್ಮಿ ಮತ್ತು ಜನಪ್ರಿಯ ಪ್ಯಾಲೆಸ್ಟೇನ್ ವಿಮೋಚನಾ ತಂಡ ( [[ಶಾಶ್ವತವಾಗಿ ಮಡಿದ ಕೊಂಡಿ] Front for the Liberation of Palestine]) ಸಂಘಟನೆಯ ಉಗ್ರವಾದಿಗಳು ಪುಲಾವು ಬುಕೊಂ ಎಂಬಲ್ಲಿ ಶೆಲ್ ಕಂಪನಿಯ ಪೆಟ್ರೋಲ್ ಟ್ಯಾಂಕುಗಳ ಮೇಲೆ ಬಾಂಬ್ ದಾಳಿ ಮಾಡಿದವು. ನಾಥನ್ ಉಗ್ರವಾದಿಗಳೊಂದಿಗೆ ಸಂಧಾನ ಮಾತುಕತೆ ನಡೆಸಿ ತಾವೇ ಸ್ವತಃ ಒತ್ತೆಯಾಳು ಆಗಲು ಒಪ್ಪಿದರು. ಕೆಲಮಂದಿ ನಾಗರೀಕ ಸೇವಾ ಅಧಿಕಾರಿಗಳೊಡನೆ ನಾಥನ್ ಉಗ್ರವಾದಿಗಳನ್ನು ಕುವೈತ್ ವರೆಗೆ ಬಂಧಿಸದೆಯೇ ಕಳುಹಿಸುವಿದಾಗಿಯೂ, ಇದರ ಬದಲಾಗಿ ಉಗ್ರವಾದಿಗಳು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿಯೂ ಒಪ್ಪಂದವಾಯಿತು. ಇದರಂತೆ ನಾಥನ್ ಜಪಾನ್ ಏರ್ ಲೈನ್ಸ್ ವಿಮಾನದಲ್ಲಿ ಕುವೈತ್ ವರೆಗೆ ಸಾಗಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ತಂಡದ ನೇತೃತ್ವ ವಹಿಸಿದರು. [] ಶೌರ್ಯ ಪ್ರದರ್ಶನ ಮತ್ತು ಸಂಧಾನ ಚತುರತೆಗೆ ಪಿಂಗಾಟ್ ಜಸ ಗೆಮಿಲಾಂಗ್ ಪ್ರಶಸ್ತಿ(ಅತ್ಯುತ್ತಮ ಸೇವಾ ಮೆಡಲ್) ಯನ್ನು ನಾಥನ್ ರಿಗೆ ಆಗಸ್ಟ್ ೧೯೭೪ರಲ್ಲಿ ನೀಡಿ ಸನ್ಮಾನಿಸಲಾಯಿತು.

ವಿದೇಶಾಂಗ ಇಲಾಖೆ ಮತ್ತು ಪತ್ರಿಕಾಂಗ ಸೇವೆ

[ಬದಲಾಯಿಸಿ]

೧೯೭೯ರಲ್ಲಿ ವಿದೇಶಾಂಗ ಇಲಾಖೆಗೆ ಮರಳಿದ ನಾಥನ್ ೧೯೮೨ರವರೆಗೆ ಪ್ರಥಮ ಖಾಯಂ ಕಾರ್ಯದರ್ಶಿಯಾದರು.೧೯೮೨ರಲ್ಲಿ ಸ್ಟ್ರೇಟ್ಸ್ ಟೈಮ್ಸ್ ಪ್ರೆಸ್ ಪತ್ರಿಕೆಯ ಕಾರ್ಯಾಧ್ಯಕ್ಷರಾದರು. ಸರ್ಕಾರಿ ಅಧಿಕಾರಿ ಪತ್ರಿಕೆಯೊಂದರ ಅಧ್ಯಕ್ಷರಾದದ್ದು, ಪತ್ರಿಕಾಂಗದಲ್ಲಿ ಸರ್ಕಾರದ ಹಸ್ತಕ್ಷೇಪ ಎಂಬ ವಿವಾದಕ್ಕೆ ಮತ್ತು ಪತ್ರಕರ್ತರ ಪ್ರತಿಭಟನೆಗೆ ಕಾರಣವಾಯಿತು. ತಮ್ಮ ನೇರ ನಡೆನುಡಿ ಮತ್ತು ದಕ್ಷ ಕಾರ್ಯನಿರ್ವಹಣೆಯಿಂದ ಎಲ್ಲರ ಮನಗೆದ್ದ ನಾಥನ್ ಸಂಶಯಗಳಿಗೆ ಎಡೆಗೊಡದಂತೆ ಕಾರ್ಯ ನಿರ್ವಹಿಸಿದರು. ೧೮೨-೮೮ರ ಮಧ್ಯೆ ಸಿಂಗಾಪುರ ಮಿಂಟ್, ಸ್ಟ್ರೇಟ್ಸ್ ಟೈಮ್ಸ್ ಪ್ರೆಸ್ (ಲಂಡನ್ ಆವೃತ್ತಿ), ಸಿಂಗಾಪುರ ಪ್ರೆಸ್ ಹೋಲ್ಡಿಂಗ್ಸ್ ಈ ಎಲ್ಲ ಪತ್ರಿಕೆಗಳ ನಿರ್ದೇಶಕರೂ ಆಗಿದ್ದರು. ೧೯೭೩-೮೬ರ ಅವಧಿಯಲ್ಲಿ ಮಿತ್ಸುಬಿಷಿ ಭಾರೀ ಉದ್ದಿಮೆ ಸಮೂಹದ ಹಡಗು ಕಂಪನಿಯ ಅಧ್ಯಕ್ಷ ಹುದ್ದೆಯಲ್ಲಿಯೂ ಸೇವೆ ಸಲ್ಲಿಸಿದರು.

೧೯೮೮-೯೦ರ ಅವಧಿಯಲ್ಲಿ ಮಲೇಷಿಯಾಕ್ಕೆ ಸಿಂಗಾಪುರದ ಹೈ-ಕಮೀಷನರ್, ೧೯೯೦-೯೬ರ ಅವಧಿಗೆ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಿಂಗಾಪುರ ರಾಯಭಾರಿ, ೧೯೯೬-೯೯ರ ಮಧ್ಯೆ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಸಿಂಗಾಪುರದ ಅಧ್ಯಕ್ಷತೆ

[ಬದಲಾಯಿಸಿ]

೧೯೯೯ರ ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಗೆ ನಿಂತ ನಾಥನ್, ಇತರ ಇಬ್ಬರು ಅಭ್ಯರ್ಥಿಗಳು ಸಂವಿಧಾನ ಬಾಹಿರತೆಯ ಕಾರಣದಿಂದ ಚುನಾವಣೆಯಿಂದ ನಿವೃತ್ತರಾದ ಮೇಲೆ ಅವಿರೋಧವಾಗಿ ಆಯ್ಕೆಯಾದರು.[] ೧೯೯೯ ಸೆಪ್ಟೆಂಬರ್ ೧ರಂದು ನಾಥನ್ ಸಿಂಗಾಪುರದ ಅಧ್ಯಕ್ಷರಾದರು. ೨೦೦೦ರಲ್ಲಿ ಮೊದಲ ಬಾರಿಗೆ ಅಧ್ಯಕ್ಷೀಯ ಫ಼ಂಡ್ ರೈಸರ್ ಎಂಬ ಸೇವಾ ಕಾರ್ಯ ಆರಂಭಿಸಿದ ನಾಥನ್, ರಾಷ್ಟ್ರಕ್ಕಾಗಿ ಚಂದಾನಿಧಿ ಕಲ್ಪನೆಯನ್ನು ಮೊದಲು ಮಾಡಿದರು. ೨೦೧೬ರ ಹೊತ್ತಿಗೆ ೧೬೦ ಮಿಲಿಯನ್ ಸಿಂಗಾಪುರ ಡಾಲರ್ ಮೊತ್ತ ಈ ನಿಧಿಯಲ್ಲಿ ಜಮೆಯಾಗಿದೆ.

೨೦೦೫ರ ಚುನಾವಣೆಯಲ್ಲಿ ನಾಥನ್ ಏಕಮೇವ ಅಭ್ಯರ್ಥಿಯಾದರು. ಇತರ ಮೂವರು ಅಭ್ಯರ್ಥಿಗಳು ಸಂವಿಧಾನ ಬಾಹಿರತೆಯ ಕಾರಣದಿಂದ ಚುನಾವಣೆಯಿಂದ ನಿವೃತ್ತರಾದರು.[] ೨೦೦೮ರ ಜಾಗತಿಕ ಹಣಕಾಸು ಬಿಕ್ಕಟ್ಟು ಸಿಂಗಾಪುರವನ್ನು ಬಾಧಿಸಿತು. ೨೦೦೯ರಲ್ಲಿ ಮೊದಲ ಬಾರಿ ಅಧ್ಯಕ್ಷೀಯ ಪರಮಾಧಿಕಾರ ಬಳಸಿದ ನಾಥನ್ ಸರ್ಕಾರಿ ಪರಿಹಾರ ನಿಧಿ ಬಳಕೆಗೆ ಅಂಗೀಕಾರ ಇತ್ತರು. ಸಿಂಗಾಪುರ ಸರ್ಕಾರ ಆರ್ಥಿಕ ಸಂಕಷ್ಟಕಾಲದಲ್ಲಿ ಕಾರ್ಮಿಕರಿಗೆ ಸಂಬಳ ನೀಡಿಕೆ, ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಸಾಲನೀಡಿಕೆ ಈ ಎರಡು ಉದ್ದೇಶಕ್ಕಾಗಿ ೪.೯ ಬಿಲಯನ್ ಡಾಲರ್ ಗಳಷ್ಟು ಖರ್ಚು ಮಾಡಲು ಈ ಕ್ರಮ ಸಹಕಾರಿಯಾಯಿತು.

ಮೂರನೆಯ ಅವಧಿಗೆ ಅನಾರೋಗ್ಯ ಕಾರಣ ನೀಡಿ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ನಾಥನ್, ೮೭ ವಯಸ್ಸಿನಲ್ಲಿ ಪದತ್ಯಾಗ ಮಾಡಿದರು. ತಮ್ಮ ಆತ್ಮಕಥೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ,[] []ತಾಂತ್ರಿಕ ಶಿಕ್ಷಣ ಬಯಸುವ ಅರ್ಹ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡಲು ನಿಧಿಯನ್ನು ಸ್ಥಾಪಿಸಿದರು.[]

ಶಿಕ್ಷಣಕ್ಕೆ ನೆರವು

[ಬದಲಾಯಿಸಿ]

ತಾಂತ್ರಿಕ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡುವ ಎಸ್ ಆರ್ ನಾಥನ್ ಶಿಕ್ಷಣ ನಿಧಿ, ೨೦೦೦-೧೧ರವರೆಗೆ ಸಿಂಗಾಪುರ ಪ್ರಬಂಧಕ ಸಂಸ್ಥೆ( Singapore Management University)ಯ ದಾನಿ, ಸಿಂಗಾಪುರ ಪ್ರಬಂಧಕ ಸಂಸ್ಥೆಯ ಸಮಾಜಶಾಸ್ತ್ರ ಶಾಲೆಯ ಫ಼ೆಲೋ ಹೀಗೆ ಹಲವು ಬಗೆಗಳಲ್ಲಿ ಶಿಕ್ಷಣಕ್ಕ್ಕೆ ಒತ್ತು ನೀಡಿದ ಹಿರಿಮೆ ನಾಥನ್ ರದ್ದು.[]

೧೯೭೪ - ಪಿಂಗಾಟ್ ಜಸ ಗೆಮಿಲಾಂಗ್ (ಅತ್ಯುತ್ತಮ ಸೇವಾ ಮೆಡಲ್) - ಲಾಜು ಉಗ್ರಗಾಮಿ ದಾಳಿಯಲ್ಲಿ ಶೌರ್ಯ ಪ್ರದರ್ಶನ ಮತ್ತು ಸಂಧಾನ ಚತುರತೆಗೆ ೨೦೧೧- ಬಹರೈನ್ ಅಲ್-ಖಲೀಫ಼ಾ ಬಿರುದು[೧೦] ೨೦೧೨ - ಗೌರವ ಡಾಕ್ಟರೇಟ್ - ಮಾರಿಶಸ್ ವಿಶ್ವವಿದ್ಯಾಲಯ [೧೧] ೨೦೧೨ - ಗೌರವ ಡಾಕ್ಟರೇಟ್ - ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ ೨೦೧೩ - ದರ್ಜಾಹ್ ಉತಮ ಟೆಮಾಸೆಕ್ (ಟೆಮಾಸೆಕ್ ನ ಉಚ್ಚ ಪದವಿ)[೧೨]

೩೧ ಜುಲೈ ೨೦೧೬ರಂದು ಪಾರ್ಶ್ವವಾಯುವಿಗೆ ತುತ್ತಾಗಿ ಆಸ್ಪತ್ರೆ ಸೇರಿದ ನಾಥನ್, ೨೨ ಆಗಸ್ಟ್ ರಂದು ೯೨ರ ಅಪರವಯಸ್ಸಿನಲ್ಲಿ ನಿಧನರಾದರು. ನಾಥನ್ ರ ಗೌರವಾರ್ಥ ಸಿಂಗಾಪುರದಲ್ಲಿ ೩ ದಿನ ಶೋಕಾಚರಣೆಯನ್ನು ಮಾಡಲಾಯ್ತು.

ಕೊಂಡಿಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2007-07-17. Retrieved 2016-12-01.
  2. "ಆರ್ಕೈವ್ ನಕಲು". Archived from the original on 2016-08-24. Retrieved 2016-12-01.
  3. http://www.straitstimes.com/singapore/the-late-former-president-s-r-nathans-role-in-the-laju-hijacking-7-things-to-know
  4. http://eresources.nlb.gov.sg/history/events/49f37f8f-7a78-4e1f-90cc-d16b5f89ab97
  5. "ಆರ್ಕೈವ್ ನಕಲು" (PDF). Archived from the original (PDF) on 2016-08-22. Retrieved 2016-12-01.
  6. http://www.straitstimes.com/singapore/a-champion-of-the-less-privileged-and-an-advocate-for-inclusivity
  7. https://web.archive.org/web/20160825013828/http://www.straitstimes.com/singapore/a-champion-of-the-less-privileged-and-an-advocate-for-inclusivity
  8. "ಆರ್ಕೈವ್ ನಕಲು". Archived from the original on 2016-08-25. Retrieved 2016-12-01.
  9. http://www.smu.edu.sg/news/2013/04/01/mr-sr-nathan-shares-insights-social-sciences-students
  10. https://www.mfa.gov.sg/content/mfa/overseasmission/cairo/press_statements_speeches/embassy-news-and-press-releases/2010/2010110/press_201011_5.html
  11. http://www.mfa.gov.sg/content/mfa/media_centre/press_room/pr/2011/201106/press_20110603.html
  12. "ಆರ್ಕೈವ್ ನಕಲು". Archived from the original on 2016-08-25. Retrieved 2016-12-01.