ವಿಷಯಕ್ಕೆ ಹೋಗು

ಎಸ್ಕಿಮೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರ್ವದಲ್ಲಿ ಗ್ರೀನ್‍ಲ್ಯಾಂಡ್ ಮತ್ತು ಲ್ಯಾಬ್ರಡಾರ್ಗಳಿಂದ ಹಿಡಿದು ಪಶ್ಚಿಮದಲ್ಲಿ ಬೇರಿಂಗ್ ಸಮುದ್ರದವರೆಗೂ ಬೇರಿಂಗ್ ಜಲಸಂಧಿಯ ಸಮೀಪದ ಸೈಬೀರಿಯನ್ ಪ್ರದೇಶದಲ್ಲೂ ಇರುವ 9660 ಕಿಮೀ ಉತ್ತರ ಕರಾವಳಿಯುದ್ದಕ್ಕೂ ವಾಸಿಸುವ ಜನ.[೧][೨] ಹಡ್ಸನ್ ಕೊಲ್ಲಿ ಮತ್ತು ದಕ್ಷಿಣ ಅಲಾಸ್ಕದ ಮೂಲನಿವಾಸಿಗಳಾದ ಇವರು ಕಾಲಕ್ರಮದಲ್ಲಿ ಪುರ್ವ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಹಬ್ಬಿದರು. ಪ್ರಪಂಚ ಜನಾಂಗಗಳ ಇತಿಹಾಸದಲ್ಲಿ ವಿಶಿಷ್ಟಸ್ಥಾನ ಪಡೆದಿರುವ ಈ ಜನರ ಸಂಸ್ಕೃತಿ, ಭಾಷೆ ಮತ್ತು ಭೌತಲಕ್ಷಣಗಳು ಇತ್ತೀಚಿನವರೆಗೂ ಈ ವಿಸ್ತಾರ ಪ್ರದೇಶದ ಉದ್ದಕ್ಕೂ ಒಂದೇ ರೀತಿಯಾಗಿದ್ದುವು. ಇಷ್ಟೊಂದು ವಿಸ್ತಾರವಾದ ಭೂಪ್ರದೇಶವನ್ನು ಇವರು ಆವರಿಸಿಕೊಂಡಿದ್ದರೂ ಇವರ ಸಂಖ್ಯೆ ಅರುವತ್ತು ಸಾವಿರವನ್ನೂ ಮೀರಿಲ್ಲದಿರುವುದು ಆಶ್ಚರ್ಯಕರ. ಯಾವ ಕಾಲದಲ್ಲೂ ಇವರ ಸಂಖ್ಯೆ ಇದಕ್ಕಿಂತ ಹೆಚ್ಚಿರಲಿಲ್ಲವೆಂದು ಹೇಳಲಾಗಿದೆ. ಐರೋಪ್ಯರಿಂದ ಬಳುವಳಿಯಾಗಿ ಬಂದ ಸಿಡುಬು, ದಡಾರ, ಇನ್ ಪ್ಲುಯೆಂಜಗಳಿಂದ ಜನ ಒಟ್ಟೊಟ್ಟಿಗೆ ಸತ್ತರೂ ಹೀಗೆ ತೆರವಾದ ಜನಸಂಖ್ಯೆ ಮತ್ತೆ ಮತ್ತೆ ಕೂಡಿಕೊಂಡಿದೆ. ಈಚೆಗೆ ಇದು ಶೀಘ್ರವಾಗಿ ಬೆಳೆಯುತ್ತಿದೆ.

ಜನಾಂಗ ವಿಧಗಳು[ಬದಲಾಯಿಸಿ]

ಎಸ್ಕಿಮೋ ಭಾಷೆಯಲ್ಲಿ ಅಮೆರಿಕನ್ ಎಸ್ಕಿಮೋಗಳಿಗೆ ಇನ್ಯುಯಿಟ್ಗಳೆಂದೂ ಏಷ್ಯನ್ ಎಸ್ಕಿಮೋಗಳಿಗೆ ಯುಯಿಟ್ಗಳೆಂದೂ ಹೆಸರು. ಅಲಾಸ್ಕದ ನೈಋತ್ಯಕ್ಕಿರುವ ಅಲ್ಯೂಷನ್ ದ್ವೀಪಗಳಲ್ಲಿ ವಾಸಿಸುವ ಜನ ಆಲ್ಯೂಷನರು. ಇವರನ್ನು ಬೇರೆ ಜನಾಂಗದವರೆಂದು ಪರಿಗಣಿಸಲಾಗಿದೆ. ಇನ್ಯುಯಿಟ್ ಅಥವಾ ಯುಯಿಟ್ ಎಂದರೆ ಮನುಷ್ಯ ಎಂದು ಅರ್ಥ. ಎಸ್ಕಿಮೋ ಎಂಬುದು ಅವಹೇಳನ ಶಬ್ದ. ಹಸಿಮಾಂಸ ಭಕ್ಷಕ ಎಂಬರ್ಥ ಬರುವ ಈ ಹೆಸರಿನಿಂದ ಇವರನ್ನು ಕೆನಡದ ಆಲ್ಗೋಂಕ್ವಿನ್ ಇಂಡಿಯನ್ನರು ಕರೆಯುತ್ತಿದ್ದರಂತೆ. ಈ ಹೆಸರನ್ನು ಬಳಕೆಗೆ ತಂದವನು ಕ್ರೈಸ್ತಪಾದ್ರಿ ಬೇರ್ಡ್-17ನೆಯ ಶತಮಾನದಲ್ಲಿ. ಎಸ್ಕಿಮೋ ಜನರ ಶರೀರ ಲಕ್ಷಣಗಳಲ್ಲಿ ಏಕರೂಪತೆ ಕಂಡುಬರುವುದಿಲ್ಲ. ಲ್ಯಾಬ್ರಡಾರ್ ಮತ್ತು ಗ್ರೀನ್ ಲೆಂಡಿನ ಎಸ್ಕಿಮೋಗಳಿಗಿಂತ ಅಮೆರಿಕನ್ ಉತ್ತರ ಕರಾವಳಿಯ ಮತ್ತು ಗ್ರೀನ್ ಲೆಂಡಿನ ಪುರ್ವತೀರದ ಎಸ್ಕಿಮೋಗಳೂ ಇವರಿಗಿಂತ ಅಲಾಸ್ಕದವರೂ ಹೆಚ್ಚು ಎತ್ತರವಾಗಿದ್ದಾರೆ. ಅಂತೂ ಇವರ ಸರಾಸರಿ ಎತ್ತರ 155-165 ಸೆಂಮೀ ಕಪಾಲ ಸೂಚ್ಯಂಕ (ಸಿಫಾಲಿಕ್ ಇಂಡೆಕ್ಸ್‌) 74-82. ಇವರು ಇಂಡಿಯನ್ ಜನಾಂಗದವರಿಗಿಂತ ಭಿನ್ನ. ಇವರಲ್ಲಿ ಮಂಗೋಲಾಯಿಡ್ ಲಕ್ಷಣಗಳೇ ಹೆಚ್ಚಾಗಿವೆ. ಅವರಂತೆ ಇವರ ಕೈ ಪಾದಗಳೂ ಬಹಳ ಸಣ್ಣ. ಇವರ ಮುಂಭಾಗದ ಹಲ್ಲುಗಳೂ ಎಲೆಗುದ್ದಲಿಯ ಆಕಾರದಲ್ಲಿರುತ್ತವೆ. ಹಳದಿ ಬಣ್ಣದ ಚರ್ಮ, ಅಗಲವಾದ ಮುಖ, ಕಿರಿದಾದರೂ ಎತ್ತರವಾದ ಮೂಗು, ದಪ್ಪನೆಯ ತುಟಿ, ನೇರವಾದ ಕಪ್ಪು ಕೂದಲು, ಕುರುಚಲು ಗಡ್ಡ-ಇವು ಎಸ್ಕಿಮೋಗಳ ಇತರ ಶಾರೀರಿಕ ಲಕ್ಷಣಗಳು. ಇವರ ಆಯುಃ ಪರಿಮಾಣ ಕಡಿಮೆ. ಅರುವತ್ತು ವರ್ಷದ ಅನಂತರ ಎಸ್ಕಿಮೋಗಳು ಜೀವಿಸುವುದು ಬಲು ವಿರಳ.

ಆಚಾರ ವ್ಯವಹಾರ[ಬದಲಾಯಿಸಿ]

ಆಚಾರ ವ್ಯವಹಾರ ಮತ್ತು ಭಾಷೆಗಳ ಆಧಾರದ ಮೇಲೆ ಇವರನ್ನು ಅಲಾಸ್ಕ, ಸೈಬೀರಿಯ, ವಿಕ್ಟೋರಿಯ ಮತ್ತು ಕಾರೊನೇಷನ್ ಖಾರಿಯ ಪ್ರದೇಶ, ಬೂತಿಯ ಫೀಲಿಕ್ಸ್‌ ಪರ್ಯಾಯದ್ವೀಪ, ಮೆಕೆಂಜಿû ನದಿ ಹಾಗೂ ಹರ್ಷಲ್ ದ್ವೀಪದ ಪ್ರದೇಶ, ಗ್ರೀನ್ಲೆಂಡ್, ಲ್ಯಾಬ್ರಡಾರ್, ಮೆಲ್ವಿಲ್ ಪರ್ಯಾಯದ್ವೀಪ ಮತ್ತು ಸೌಥಾಂಪ್ಟನ್ ಎಸ್ಕಿಮೋಗಳೆಂದು ಒಂಬತ್ತು ಬಗೆಯಾಗಿ ವಿಂಗಡಿಸಬಹುದು. ಈ ಒಂದೊಂದು ವಿಭಾಗದಲ್ಲಿಯೂ ಬೇರೆ ಬೇರೆ ಕುಲಸಂಬಂಧವಾದ ಅನೇಕ ಪಂಗಡಗಳಿವೆ.

ಜೀವನ ವಿಧಾನ[ಬದಲಾಯಿಸಿ]

ಭೌಗೋಳಿಕ ಅಂಶಗಳು ಮಾನವನ ಜನಜೀವನವನ್ನು ಹೇಗೆ ರೂಪಿಸುತ್ತವೆ ಎಂಬುದಕ್ಕೆ ಎಸ್ಕಿಮೋಗಳು ಉತ್ತಮ ನಿದರ್ಶನ. ಇವರು ವರ್ಷಕ್ಕೆ ಆರರಿಂದ ಒಂಬತ್ತು ತಿಂಗಳ ಕಾಲ ಹಿಮಗಡ್ಡೆಗಳ ಅಡಿಯಲ್ಲಿ ಹುದುಗಿ ಮಲಗುವ, ಅಂಥ ನೆಲದ ಮೇಲೆ ವಾಸಿಸುವ ಛಲಗಾರರಾಗಿರಬೇಕು, ಕುಶಲಮತಿಗಳೂ ಆಗಿರಬೇಕು. ಇಲ್ಲಿನ ಪರಿಸರಕ್ಕೆ ತಕ್ಕಂತೆ ಇವರು ವಸತಿಸೌಕರ್ಯ, ಆಹಾರ ಸಂಪಾದನೆಯ ವಿಧಾನ ಮುಂತಾದವನ್ನು ಕಲ್ಪಿಸಿಕೊಳ್ಳುವುದು ಅನಿವಾರ್ಯ. ಉತ್ತರ ಪ್ರದೇಶದಲ್ಲಿ ಜೀವಿಸುವ ಸೀಲ್, ಮೀನು ಮುಂತಾದವು ಇವರ ಮುಖ್ಯ ಆಹಾರ. ಈ ಪ್ರಾಣಿಗಳ ಬೇಟೆ ಮುಖ್ಯ ಕಸುಬು. ಎರಡು ಹಲಗೆಗಳನ್ನು ಸೇರಿಸಿ ರಚಿಸಿದ ಕೈಯಾಕ್ ಎಂಬ ದೋಣಿಯಲ್ಲಿ ಕುಳಿತು ಇವರು ಜಲಚರಗಳನ್ನು ಹಿಡಿಯುತ್ತಾರೆ. ಸೀಲ್ ಹಿಮವಾಸಿಪ್ರಾಣಿ. ಅದು ಉಸಿರಾಡಲು ತಲೆಯೆತ್ತುವುದನ್ನೆ ಎಸ್ಕಿಮೋಗಳು ಕಾಯುತ್ತಿದ್ದು ಅದರ ಮೇಲೆ ಮೊನಚಾದ ಆಯುಧ ಎಸೆದು ಅದನ್ನು ಕೊಲ್ಲುತ್ತಾರೆ. ಈ ಮೊನಚಾದ ಆಯುಧಗಳು ಹಿಮದಲ್ಲಿ ಹೂತುಹೋಗದಿರುವಂತೆ ಅವುಗಳಿಗೆ ಗಾಳಿತುಂಬಿದ ಸಣ್ಣ ಸಣ್ಣ ಚರ್ಮ ಚೀಲಗಳನ್ನು ಕಟ್ಟಿರುತ್ತಾರೆ. ಚಳಿಗಾಲದಲ್ಲಿ ಹತ್ತಾರು ಸಂಸಾರಗಳ ಜನ ಒಂದೆಡೆ ಸೇರಿ ಬೇಟೆಯಾಡುವುದೂ ವಸಂತ ಋತುವಿನಲ್ಲಿ ಪ್ರಾಣಿಗಳನ್ನು ಹುಡುಕಿಕೊಂಡು ಹೋಗುವುದೂ ಇವರ ಅಭ್ಯಾಸ. ಉಡುಗೆ ತೊಡುಗೆಗಳಿಗೆ ಉಪಯೋಗವಾಗುವ ಕ್ಯಾರಿಬೂ ಎಂಬ ಹಿಮಸಾರಂಗದ ಚರ್ಮಕ್ಕಾಗಿ ಬೇಸಗೆಯಲ್ಲಿ ಅದನ್ನು ಹುಡುಕಿಕೊಂಡು ದೂರ ಪ್ರದೇಶಗಳ ವರೆಗೂ ಸಂಚಾರ ಕೈಗೊಳ್ಳುವುದುಂಟು. ಚದುರಿದ್ದ ಸಂಸಾರಗಳೆಲ್ಲ ಚಳಿಗಾಲ ಬರುವುದರೊಳಗಾಗಿ ಒಂದುಗೂಡುತ್ತವೆ. ಪ್ರತಿವರ್ಷವೂ ಇವರದು ಇದೇ ಪರಿಪಾಟ. ಭೂಪ್ರದೇಶದ ಪ್ರಾಣಿಗಳನ್ನು ಬೇಟೆಯಾಡಲು ಇವರು ಉಪಯೋಗಿಸುವ ಉಪಕರಣಗಳೆಂದರೆ ಬಿಲ್ಲು, ಬಾಣ ಮತ್ತು ಚರ್ಮದ ಬಲೆ. ಬೇಟೆಯ ಕಾಲದಲ್ಲಿ ಜೊತೆಯಲ್ಲಿ ಬರುವ ನಾಯಿಗಳು ನೆಲದಲ್ಲಿ ಹೂತುಕೊಂಡ ಪ್ರಾಣಿಗಳನ್ನು ಹುಡುಕಲು ಬಹಳ ಸಹಾಯಮಾಡುತ್ತವೆ.

ನಿವಾಸ[ಬದಲಾಯಿಸಿ]

ಎಸ್ಕಿಮೋಗಳು ವಾಸಮಾಡುವ ಮನೆಗಳೂ ವೈಶಿಷ್ಟ್ಯಪುರ್ಣ, ಬೇಸಿಗೆಯಲ್ಲಿ ಸೀಲ್ ಅಥವಾ ಜಿಂಕೆಯ ಚರ್ಮದ ಗುಡಾರಗಳಲ್ಲಿ ಇವರ ವಾಸ. ಆದರೆ ಇವರ ಚಳಿಗಾಲದ ಮನೆಗಳು ಬಗೆಬಗೆಯಾಗಿರುತ್ತವೆ. ಪಶ್ಚಿಮ ಆರ್ಕ್ಟಿಕ್ ಪ್ರದೇಶದಲ್ಲಿರುವ ನದಿಗಳು ತಮ್ಮ ಪ್ರವಾಹದಲ್ಲಿ ಮರದ ದಿಮ್ಮಿಗಳನ್ನು ಹೊತ್ತು ತರುವುದರಿಂದ, ಅಲ್ಲಿನ ಎಸ್ಕಿಮೋಗಳು ಅವನ್ನು ಉಪಯೋಗಿಸಿಕೊಂಡು ಮರದ ಹಲಗೆಗಳಿಂದ ಮನೆಗಳನ್ನು ಕಟ್ಟಿಕೊಂಡು ಅವುಗಳ ಚಾವಣಿಗಳ ಮೇಲೆ ಹುಲ್ಲುಬೆಳೆಸುತ್ತಾರೆ. ಮರದ ದಿಮ್ಮಿಗಳು ದೊರಕದೆ ಇರುವ ಪ್ರದೇಶದಲ್ಲಿ ಕಲ್ಲಿನಿಂದ ಮನೆಕಟ್ಟಿ ತಿಮಿಂಗಿಲದ ಮೂಳೆಗಳಿಂದ ಮೇಲ್ಚಾವಣಿ ನಿರ್ಮಿಸುತ್ತಾರೆ, ಕೆನಡದ ಎಸ್ಕಿಮೋಗಳು ಗಟ್ಟಿಯಾದ ಮಂಜಿನ ಗಡ್ಡೆಯ ತುಂಡುಗಳನ್ನು ಇಟ್ಟಿಗೆಗಳಂತೆ ಒಂದರಮೇಲೊಂದು ಇಟ್ಟು ವೃತ್ತಾಕಾರದ ಮನೆ ನಿರ್ಮಿಸುತ್ತಾರೆ. ಇದಕ್ಕೆ ಇಗ್ಲೂ ಎಂದು ಹೆಸರು. ನೆಲಕ್ಕೆ ಹಿಮಸಾರಂಗದ ಚರ್ಮ ಹಾಸುವುದರಿಂದ ಬೆಚ್ಚಗಿರುತ್ತದೆ. ಬೇಸಗೆಯಲ್ಲಿ ಮಂಜು ಕರಗಿ ಹರಿದ ಪ್ರವಾಹ ಮನೆಯೊಳಗೆ ನುಗ್ಗುವ ಮುನ್ನವೇ ಇದನ್ನು ಬಿಟ್ಟು ಚರ್ಮದ ಗುಡಾರಕ್ಕೆ ಹೊರಟು ಹೋಗುತ್ತಾರೆ. ಪ್ರಾಣಿಯ ಕೊಬ್ಬನ್ನೋ ಯಾವುದಾದರೂ ಇಂಧನದ ಕಲ್ಲನ್ನೋ ಉರಿಸಿ ದೀಪಮಾಡಿಕೊಳ್ಳಲಾಗುತ್ತದೆ. ಆಹಾರ ಬೇಯಿಸಲೂ ಇದು ಉಪಯುಕ್ತ. ಇದು ಒದಗದಾಗ ಇವರು ಒಣಗಿದ ಅಥವಾ ಹಿಮದಲ್ಲಿ ಹೆಪ್ಪುಗಟ್ಟಿಸಿದ ಆಹಾರ ತಿನ್ನುತ್ತಾರೆ. ಬಲು ಅನಿವಾರ್ಯವಾದಾಗ ಮಾತ್ರ ಹಸಿಯ ಮಾಂಸ ಭಕ್ಷಿಸಬೇಕಾಗುತ್ತದೆ. ಇದು ಇವರಿಗೆ ಅಷ್ಟೇನೂ ಇಷ್ಟವಿಲ್ಲ. ಆದ್ದರಿಂದ ಹಸಿಮಾಂಸಭಕ್ಷಕರೆಂಬ ಅರ್ಥಬರುವ ಎಸ್ಕಿಮೋ ಶಬ್ದದ ಬಳಕೆಗೆ ಇವರ ಅಭ್ಯಂತರವುಂಟು.

ಉಡುಗೆ ತೊಡುಗೆ[ಬದಲಾಯಿಸಿ]

ಸಾಮಾನ್ಯವಾಗಿ ಕ್ಯಾರಿಬೂ ಪ್ರಾಣಿಯ ತುಪ್ಪಟದಿಂದ ಹೊಲಿದು ಸಿದ್ದಪಡಿಸಿದ ಚಲ್ಲಣ, ಮೇಲಂಗಿ, ಟೋಪಿ ಮತ್ತು ಪಾದರಕ್ಷೆ - ಇವು ಎಸ್ಕಿಮೋ ಉಡುಗೆ ತೊಡುಗೆ. ಇವು ಇವರನ್ನು ಬೆಚ್ಚಗಿಡುತ್ತವೆ. ಸ್ತ್ರೀ ಪುರುಷರಿಗೆ ಉಡುಗೆ ತೊಡುಗೆಯಲ್ಲಿ ಹೆಚ್ಚು ವ್ಯತ್ಯಾಸವೇನೂ ಕಾಣಬರುವುದಿಲ್ಲ. ಸ್ತ್ರೀಯರ ಉಡುಪನ್ನು ಪುರುಷರ ಉಡುಪಿಗಿಂತ ಸ್ವಲ್ಪ ಭಿನ್ನವಾದ ರೀತಿಯಲ್ಲಿ ಹೊಲಿಯಲಾಗಿರುತ್ತದೆ. ಉಡುಪಿಗೆ ಒಂದರ ಮೇಲೊಂದರಂತೆ ತುಪ್ಪಟಗಳ ಎರಡು ಪದರಗಳಿರುತ್ತವೆ. ಮೊದಲನೆಯ ಪದರದಲ್ಲಿ ತುಪ್ಪಟದ ಭಾಗ ಮೈಗೆ ಅಂಟಿಕೊಂಡಂತೆಯೂ ಎರಡನೆಯ ಪದರದಲ್ಲಿ ತುಪ್ಪಟದ ಭಾಗ ಹೊರಭಾಗಕ್ಕೆ ಬರುವಂತೆಯೂ ಹೊಲಿದಿರುತ್ತಾರೆ. ಶರೀರದ ಶಾಖವನ್ನು ಕಾಪಾಡಲು ಇದೊಂದು ಒಳ್ಳೆಯ ಮಾರ್ಗ. ಆಭರಣ ಧರಿಸುವುದೂ ಅದಕ್ಕಿಂತ ಹೆಚ್ಚಾಗಿ ತಮ್ಮ ಮುಖಕ್ಕೆ ಹಚ್ಚೆ ಹುಯ್ಯಿಸಿಕೊಳ್ಳುವುದೂ ಹೆಂಗಸರಿಗೆ ಹಿಂದಿನಿಂದಲೂ ಪ್ರಿಯ.

ಸಾಮಾಜಿಕ ಪದ್ಧತಿ[ಬದಲಾಯಿಸಿ]

ಎಸ್ಕಿಮೋಗಳಲ್ಲಿ ಸುವ್ಯವಸ್ಥಿತ ಸಾಮಾಜಿಕ ಪದ್ದತಿಗಳೇನೂ ಇದ್ದಂತೆ ಕಾಣಬರುವುದಿಲ್ಲ. ಬಲಿಷ್ಠ ವ್ಯಕ್ತಿಯನ್ನು ಹಳ್ಳಿಯ ಮುಖಂಡನೆಂದು ಪರಿಗಣಿಸುತ್ತಿದ್ದರೂ ಅವನ ಮಾತಿಗೆ ಅಷ್ಟೇನೂ ಬೆಲೆಯಿರುತ್ತಿರಲಿಲ್ಲ. ಹಳ್ಳಿಯ ಭೂಮಿ ಎಲ್ಲರಿಗೂ ಸೇರಿತ್ತು. ಏಕಸ್ವಾಮ್ಯವಿರಲಿಲ್ಲ.

ಯಾವನಾದರೂ ಒಬ್ಬನಿಗೆ ಒಂದು ದಿನ ಬೇಟೆ ಸಿಗದಿದ್ದರೆ ಅವನಿಗೂ ಅವನ ಸಂಸಾರಕ್ಕೂ ಆಹಾರ ಒದಗಿಸುವುದು ಇತರರ ಕರ್ತವ್ಯವಾಗಿತ್ತು. ಬೇಟೆ, ಮತ್ತು ಮೀನುಗಾರಿಕೆ ಪುರುಷರ ಮುಖ್ಯ ಕೆಲಸ; ಅಡಿಗೆ ಮಾಡುವುದೂ ಬಟ್ಟೆ ಹೊಲಿಯುವುದೂ ಸ್ತ್ರೀಯರ ಕರ್ತವ್ಯ. ಈ ಶ್ರಮ ವಿಭಾಗದಿಂದ ಒಬ್ಬರ ಸಹಾಯವಿಲ್ಲದೆ ಇನ್ನೊಬ್ಬರು ಬದುಕುವುದು ಕಷ್ಟವಾಗಿತ್ತು. ಆದ್ದರಿಂದ ವಿಧುರರೂ ವಿಧವೆಯರೂ ಬದುಕಲು ಮದುವೆಯಾಗಲೇಬೇಕಾಗಿತ್ತು. ಏಕಪತ್ನಿತ್ವ ಮತ್ತು ಏಕಪತ್ನೀತ್ವವೇ ಸಾಮಾನ್ಯವಾಗಿತ್ತು. ವೃದ್ಧರನ್ನೂ ಅನಾಥರನ್ನೂ ಅವರ ಬಂಧುಗಳು ನೋಡಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಎಸ್ಕಿಮೋಗಳು ಶಾಂತಿಪ್ರಿಯರು, ವಿಧೇಯರು, ಸತ್ಯಸಂಧರು, ಕಷ್ಟಸಹಿಷ್ಣುಗಳು. ವಿರಾಮ ಕಾಲದಲ್ಲಿ ಇವರು ಸಂಗೀತ, ನೃತ್ಯ ಹಾಗೂ ಮನೋರಂಜನೆಯ ಆಟಗಳಲ್ಲಿ ನಿರತರಾಗುತ್ತಿದ್ದರು.

ಧಾರ್ಮಿಕ[ಬದಲಾಯಿಸಿ]

ಇವರೆಲ್ಲ ಈಗ ಹೆಚ್ಚು ಕಡಿಮೆ ಕ್ರೈಸ್ತರಾಗಿದ್ದಾರಾದರೂ ಇವರು ತಮ್ಮ ಹಳೆಯ ಮತೀಯ ನಂಬಿಕೆಗಳನ್ನು ಉಳಿಸಿಕೊಂಡಿದ್ದಾರೆ. ಇವು ಅಮೆರಿಕನ್ ಇಂಡಿಯನ್ ಜನರ ನಂಬಿಕೆಗಳನ್ನೆ ಹೋಲುತ್ತವೆ. ಅಲ್ಲಲ್ಲಿ ಕೆಲವು ಸ್ಥಳೀಯ ಬದಲಾವಣೆಗಳನ್ನು ಕಾಣಬಹುದು. ಜೀವ ನಿರ್ಜಿವ ವಸ್ತುಗಳಲ್ಲೆಲ್ಲ ಆತ್ಮನಿರುತ್ತಾನೆಂಬುದು ಇವರ ಮುಖ್ಯ ನಂಬಿಕೆ. ತೋನರ್ನ್‌ಸ್ಸುಕ್ ಶ್ರೇಷ್ಠ ದೇವತೆ. ಇವನ ಆಶ್ರಯದಲ್ಲಿ ತೋನರ್ನ್‌ತ್ ಎಂಬ ಇತರ ಅಧಿದೇವತೆಗಳಿರುತ್ತಾರೆ. ಆಹಾರಗಳನ್ನು ಕೊಡುವ ಸ್ತ್ರೀ ದೇವತೆಯಾದ ಸೆಡ್ನಾ ಸಮುದ್ರದಲ್ಲಿ ವಾಸಿಸುತ್ತಾಳೆಂದು ಕೆಲವರೂ ಆಕೆಯ ಹೆಸರು ಅರ್ನಕ್ನಗ್ಸಕ್ ಎಂದು ಮತ್ತೆ ಕೆಲವರೂ ಭಾವಿಸುತ್ತಾರೆ. ಈ ದೇವತೆ ಸಮುದ್ರದಲ್ಲಿ ಅಲೆಗಳನ್ನು ಸೃಷ್ಟಿಸುತ್ತಾಳೆ. ಕುಲದ ಕಟ್ಟಳೆಗಳನ್ನು ಮುರಿದವರಿಗೆ ಬೇಟೆಯಲ್ಲಿ ಸಮುದ್ರ ಪ್ರಾಣಿಗಳು ಸಿಕ್ಕದಂತೆ ಮಾಡುವವಳು ಈಕೆ. ಸಮುದ್ರ ಪ್ರಾಣಿಗಳೆಲ್ಲ ಈಕೆಯ ಕೈಬೆರಳುಗಳು. ಆದ್ದರಿಂದ ಈ ಸಮುದ್ರದೇವತೆಯ ಕೋಪಕ್ಕೆ ಯಾರೂ ಗುರಿಯಾಗದಂತೆ ನೋಡಿಕೊಳ್ಳುವುದು ಪುರೋಹಿತನ (ಅಂಗಕಾಕ್) ಕರ್ತವ್ಯ. ಎಸ್ಕಿಮೋಗಳ ಕೆಲವು ಕುಲಗಳ ಜನ ಮನುಷ್ಯನ ದೇಹದಲ್ಲಿ ಎರಡು ಆತ್ಮಗಳಿವೆಯೆಂದು ಭಾವಿಸುತ್ತಾರೆ. ದೇಹಿಯ ಮರಣಾನಂತರ ಈ ಆತ್ಮಗಳಲ್ಲೊಂದು ಆಕಾಶಕ್ಕೋ ಪಾತಾಳಕ್ಕೋ ಹೋಗಿ ಅಲ್ಲಿ ವಾಸಿಸುವ ಇತರ ಆತ್ಮಗಳನ್ನು ಸೇರುತ್ತದೆ. ಮತ್ತೊಂದು ಆತ್ಮ ದೇಹದಲ್ಲಿಯೇ ಉಳಿದಿರುತ್ತದೆ; ಅಥವಾ ತಾತ್ಕಾಲಿಕವಾಗಿ ಇನ್ನೊಂದು ಎಳೆ ಮಗುವಿನ ಶರೀರಕ್ಕೆ ಹೋಗುತ್ತದೆ. ಕಣ್ಣಿಗೆ ಕಾಣುವ ಪ್ರತಿಯೊಂದು ವಸ್ತುವಿಗೂ ಒಬ್ಬ ದೇವತೆಯುಂಟು. ಅದರ ಸಹಾಯವಿಲ್ಲದೆ ಆ ವಸ್ತು ತಮಗೆ ದೊರೆಯಲಾರದೆಂಬುದು ಎಸ್ಕಿಮೋಗಳ ನಂಬಿಕೆ. ಆದ್ದರಿಂದ ಪ್ರತಿಯೊಂದು ದೇವತೆಯನ್ನೂ ಒಂದಲ್ಲ ಒಂದು ಬಗೆಯಿಂದ ಸಂತುಷ್ಟಿಗೊಳಿಸುವುದೇ ಎಸ್ಕಿಮೋಗಳ ಆದ್ಯ ಕರ್ತವ್ಯ. ಇದಕ್ಕಾಗಿ ಅವರು ಪುರೋಹಿತನ ನೆರವು ಪಡೆಯುತ್ತಿದ್ದರು. ಈತನಿಗೆ ದೇವತೆಗಳೊಡನೆ ಮಾತನಾಡುವ ಶಕ್ತಿಯಿದೆಯೆಂದು ನಂಬಲಾಗಿತ್ತು. ಈತ ಸಾಮಾನ್ಯ ಜನಕ್ಕೆ ಅರ್ಥವಾಗದ ಎಸ್ಕಿಮೋ ಭಾಷೆಯ ಮಂತ್ರಗಳನ್ನು ಪಠಿಸಿ ದೇವತೆಗಳೊಡನೆ ಸಖ್ಯ ಏರ್ಪಡಿಸಬಲ್ಲವ. ಆದ್ದರಿಂದ ಪುರೋಹಿತನಿಗೆ ಸಮಾಜದಲ್ಲಿ ಮುಖ್ಯ ಸ್ಥಾನವಿತ್ತು. ಪಶ್ಚಿಮ ಮತ್ತು ಪುರ್ವ ಗ್ರೀನ್ಲೆಂಡ್ಗಳಲ್ಲಿ ಡೆನ್ಮಾರ್ಕಿನ ಪಾದ್ರಿಗಳೂ ಲ್ಯಾಬ್ರಡಾರಿನಲ್ಲಿ ಮೊರೇವಿಯದ ಪಾದ್ರಿಗಳೂ ಅಲಾಸ್ಕದಲ್ಲಿ ರಷ್ಯನ್ ಪಾದ್ರಿಗಳೂ ಎಸ್ಕಿಮೋ ಜನರನ್ನು ಕ್ರೈಸ್ತಧರ್ಮಕ್ಕೆ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರ ಪ್ರಭಾವಕ್ಕೆ ಹೆಚ್ಚಾಗಿ ಒಳಗಾಗದ ಕಡೆಗಳಲ್ಲಿ ಎಸ್ಕಿಮೋಗಳು ತಮ್ಮ ಮತ ಧರ್ಮಗಳನ್ನು ಈಗಲೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. (ಎ.ವಿ.ಎನ್.)

ಪ್ರಾಗಿತಿಹಾಸ[ಬದಲಾಯಿಸಿ]

ಇತ್ತೀಚೆಗೆ ದೊರಕಿರುವ ಅನೇಕ ಆಧಾರಗಳ ಪ್ರಕಾರ ಎಸ್ಕಿಮೋ ಸಂಸ್ಕೃತಿ ಏಷ್ಯನ್ ಮೂಲಕ್ಕೇ ಸೇರಿದ್ದು ಬೇರಿಂಗ್ ಜಲಸಂಧಿಯ ಮಾರ್ಗವಾಗಿ ಕ್ರಮೇಣ ಉತ್ತರ ಅಮೆರಿಕವನ್ನು ಪ್ರವೇಶಿಸಿತೆಂದು ಖಚಿತವಾಗಿದೆ. ಈ ವಲಸಿಯ ಕಾರ್ಯ ಪ್ರ.ಶ. ಪು. 6-5ನೆಯ ಸಹಸ್ರಮಾನಗಳಲ್ಲಿ ಪ್ರಾರಂಭವಾಯಿತು. ಈ ಸಂಸ್ಕೃತಿ ಸೈಬೀರಿಯ-ಅಲಾಸ್ಕಗಳಲ್ಲಿ ಕಂಡುಬರುವ ಡೆನ್ಬಿಗ್ ಸಂಸ್ಕೃತಿಗೆ ಸಂಬಂಧಿಸಿದ್ದರೂ ಉತ್ತರ ಅಮೆರಿಕದ ಅಲಾಸ್ಕ, ಗ್ರೀನ್ಲೆಂಡ್ ಮತ್ತಿತರ ಪ್ರದೇಶಗಳಲ್ಲಿ ದೊರಕಿರುವ ಅತ್ಯಂತ ಪುರಾತನ ಎಸ್ಕಿಮೋ ಅವಶೇಷಗಳು ಇಂಗಾಲ ಕಾಲನಿರ್ಣಯ ರೀತ್ಯಾ ಪ್ರಸಕ್ತಶಕ ಪುರ್ವದ ಕೆಲವು ಶತಮಾನಗಳಿಗೆ ಮಾತ್ರ ನಿರ್ದೇಶಿತವಾಗಿದೆ.

ಅತ್ಯಂತ ಹಳೆಯ ಎಸ್ಕಿಮೋ ಸಂಸ್ಕೃತಿ ಉಮ್ನಾಕ್ ದ್ವೀಪದ ನೆಲೆಯೊಂದರಲ್ಲಿ ಬೆಳಕಿಗೆ ಬಂದು ಅದರ ಹೆಚ್ಚಿನ ವಿವರಗಳು ದಕ್ಷಿಣ ಅಲಾಸ್ಕದ ಕುಕ್ ಕೊಲ್ಲಿ ಮತ್ತು ಪ್ರಿನ್ಸ್‌ ವಿಲಿಯಮ್ಗಳಲ್ಲಿನ ಮಾಹಿತಿಗಳಿಂದ ತಿಳಿದುಬಂದಿವೆ ಪುರ್ವೈತಿಹಾಸಿಕ ದಕ್ಷಿಣ ಅಲಾಸ್ಕ ಮತ್ತು ಅಲ್ಯೂಷನ್ ದ್ವೀಪಗಳ ಸಂಸ್ಕೃತಿಗಳು ಎಸ್ಕಿಮೋ ಸಂಸ್ಕೃತಿಗಳ ಗುಂಪಿಗೆ ಸೇರಿದ್ದರೂ ಅಲಾಸ್ಕದ ಇತರ ಪ್ರದೇಶಗಳ ಸಂಸ್ಕೃತಿಗಳಿಂದ ಭಿನ್ನವಾಗಿದ್ದುವು. ಜನಭರಿತ ಪ್ರದೇಶದ ಸಂಸ್ಕೃತಿ ಸ್ಥಿರವಾಗಿತ್ತು. ಆದರೆ ಬೇರಿಂಗ್ ಜಲಸಂಧಿಯ ಪ್ರದೇಶದಲ್ಲಿ ಅಡಿಗಡಿಗೆ ಅದರ ರೂಪ ರೇಷೆಗಳು ಬದಲಾಗುತ್ತಿದ್ದುವು. ಇಲ್ಲಿ ಇಪಿಯುಟಾಕ್ ಪ್ರದೇಶದ ಜನರ ಸಂಸ್ಸೃತಿಯ ತಳಹದಿಯ ಮೇಲೆ ದಕ್ಷಿಣ ಅಲಾಸ್ಕದ ಸಂಸ್ಕೃತಿಯ ಪ್ರಭಾವ ಬೆಳೆಯಿತು. ಇದರೊಂದಿಗೆ ಪುನಕ್ ಸಂಸ್ಕೃತಿಯ ಅಂಶಗಳೂ ಮಿಳಿತವಾಗಿದ್ದುವು.

ಪಶ್ಚಿಮ ಹಾಗೂ ಉತ್ತರ ಅಲಾಸ್ಕದಲ್ಲಿನ ಇತಿಹಾಸಪುರ್ವ ಎಸ್ಕಿಮೋ ಸಂಸ್ಕೃತಿಯ ಬೆಳೆವಣಿಗೆಯಲ್ಲಿ ಮೂರು ಹಂತಗಳನ್ನು ಕಾಣಬಹುದು. ಮೊಟ್ಟಮೊದಲಿಗೆ ಇಲ್ಲಿ ಹಳೆಯ ಬೇರಿಂಗ್ ಸಮುದ್ರದ ಲಕ್ಷಣಗಳೂ ಅನಂತರ ಕ್ರಮವಾಗಿ ಇಪಿಯುಟಾಕ್, ಬಿರ್ನಿಕ್ ಮತ್ತು ಪುನಕ್ ಅಂಶಗಳೂ ಕಂಡುಬಂದವು. ಹಳೆಯ ಬೇರಿಂಗ್ ಸಮುದ್ರ ಸಂಸ್ಕೃತಿಯ ಮಾಹಿತಿಗಳೂ ಇಲ್ಲಿನ ಲಿಟ್ಸ್‌ ಡೈಯೊಮೀಡ್ ದ್ವೀಪದಲ್ಲಿ ದೊರಕಿವೆ. ಸೆಂಟ್ ಲಾರೆನ್ಸ್‌ ದ್ವೀಪದಲ್ಲಿ ನಡೆದ ಸಂಶೋಧನೆಗಳಿಂದ ಇದು ಖಚಿತವಾಗಿದೆ. ಇದಾದ ಅನಂತರ ಕೆನಡದ ಥ್ಯೂಲೀ ಸಂಸ್ಕೃತಿಗೆ ಸಮಾನವಾದ ಸಂಸ್ಕೃತಿ ಇಲ್ಲಿ ಬೆಳೆಯಿತು. ಹಳೆಯ ಬೇರಿಂಗ್ ಸಂಸ್ಕೃತಿಯ ಮೊದಲ ಹಂತವಾದ ಓಕ್ವಿಕ್ ಸಂಸ್ಕೃತಿ ಪ್ರ.ಶ.ಪು. 500-400 ವರ್ಷಗಳಷ್ಟು ಹಿಂದಿನದು. ಪುನಕ್ ಸಂಸ್ಕೃತಿ ಪ್ರ.ಶ. 550-1250ರದೆಂದು ನಿರ್ಧರಿಸಲಾಗಿದೆ. ಈ ಸಂಸ್ಕೃತಿಯ ಕಾಲದಲ್ಲಿ ಜನ ಕಡಲತೀರದ ಜೀವನರೀತಿಗೆ ಹೊಂದಿಕೊಂಡಿದ್ದು ಸೀಲ್, ತಿಮಿಂಗಲ ಮುಂತಾದ ಜಲಚರಗಳ ಮತ್ತು ಪಕ್ಷಿಗಳ ಬೇಟೆಯನ್ನೇ ಅವಲಂಬಿಸಿದ್ದರು. ಈ ಜನರ ವಾಸದ ಮನೆಗಳು ಆಯಾತಾಕಾರ. ಅವಕ್ಕೆ ಇಕ್ಕಟ್ಟಾದ ಬಾಗಿಲು. ಇವು ಭೂ ಮಟ್ಟದಿಂದ ಅರ್ಧಭಾಗ ಕೆಳಗಿರುತ್ತಿದ್ದುವು. ಇವರ ಮುಖ್ಯ ಆಯುಧೋಪಕರಣಗಳು ಕಲ್ಲಿನವು. ಇವರು ಮಡಿಕೆ ಕುಡಿಕೆಗಳನ್ನೂ ಹಣತೆಯನ್ನೂ ಉಪಯೋಗಿಸುತ್ತಿದ್ದರು. ಇದು ಎಸ್ಕಿಮೋ ಸಂಸ್ಕೃತಿಗಳಲ್ಲಿ ಅತ್ಯಂತ ಹಳೆಯದಾದರೂ ಇಪಿಯುಟಾಕ್ ಸಂಸ್ಕೃತಿಯ ಕಲೆಯ ವಿನಾ ಉಳಿದೆಲ್ಲಕ್ಕಿಂತಲೂ ಇದೇ ಹೆಚ್ಚು ಮುಂದುವರಿದಿತ್ತು.

ಅನಂತರದ ಪುನಕ್ ಸಂಸ್ಕೃತಿ ಹಳೆಯ ಬೇರಿಂಗ್ ಸಮುದ್ರದ ಮತ್ತು ಸೈಬೀರಿಯದ ಸಂಸ್ಕೃತಿಗಳ ಪ್ರಭಾವಗಳಿಂದ ಕೂಡಿತ್ತು. ಅಲಾಸ್ಕದ ಪಾಯಿಂಟ್ ಹೋಪ್, ಕೊಟ್ಸೆಬ್ಯೂ ಮತ್ತು ಸ್ಯೂಯರ್ಡ್ ಪರ್ಯಾಯ ದ್ವೀಪಗಳಲ್ಲಿ ಈ ಸಂಸ್ಕೃತಿ ಇಪಿಯುಟಾಕ್ ಸಂಸ್ಕೃತಿಯೊಂದಿಗೆ ಮಿಳಿತವಾಗಿದೆ. ಹಳೆಯ ಬೇರಿಂಗ್ ಸಮುದ್ರದ ಸಂಸ್ಕೃತಿಯ ದ್ವಿತೀಯ ಮತ್ತು ತೃತೀಯ ಸಾಂಸ್ಕೃತಿಕ ಹಂತಗಳ ಅವಶೇಷಗಳು ಸೈಬೀರಿಯ ತೀರಪ್ರದೇಶ, ಸೆಂಟ್ ಲಾರೆನ್ಸ್‌ ಮತ್ತು ಡೈಯೊಮೀಡ್ ದ್ವೀಪ ಪ್ರದೇಶಗಳಲ್ಲಿ ದೊರಕಿವೆ. ಅಲಾಸ್ಕದಲ್ಲಿ ಇಪಿಯುಟಾಕ್ ಸಂಸ್ಕೃತಿಯ ಅವಶೇಷಗಳು ಪಾಯಿಂಟ್ ಹೋಪ್ನಲ್ಲಿ ಮಾತ್ರ ದೊರಕಿವೆ. ಪುನಕ್ ಸಂಸ್ಕೃತಿಯ ಅವಶೇಷಗಳು ಸೆಂಟ್ ಲಾರೆನ್ಸ್‌, ಡೈಯೊಮೀಡ್, ಈಶಾನ್ಯ ಸೈಬೀರಿಯ, ಅಲಾಸ್ಕದ ಆರ್ಕ್ಟಿಕ್ ತೀರದ ಪ್ರಿನ್ಸ್‌ ಆಫ್ ವೇಲ್ಸ್‌ ಭೂಶಿರ ಮುಂತಾದ ಪ್ರದೇಶಗಳಲ್ಲಿ ಕಂಡುಬಂದಿವೆ.

ಪಾಯಿಂಟ್ ಹೋಪ್ ಭೂಶಿರದಲ್ಲಿ ಕಂಡುಬಂದ ಇಪಿಯುಟಾಕ್ ಸಂಸ್ಕೃತಿಯ ಕಾಲ 9-10ನೆಯ ಶತಮಾನಗಳೆಂದು ನಿರ್ಧರಿಸಿರುವುದರಿಂದ ಹಲವು ಸಮಸ್ಯೆಗಳು ಕಂಡುಬಂದಿವೆ. ಹಳೆಯ ಬೇರಿಂಗ್ ಸಮುದ್ರದ ಮತ್ತು ಇಲ್ಲಿನ ಸಂಸ್ಕೃತಿಗಳಿಗಿರುವ ಹೋಲಿಕೆಗಳಿಂದ ಇದನ್ನು 2-3ನೆಯ ಶತಮಾನಗಳದೆಂದು ಊಹಿಸುವುದು ಸಮಂಜಸವಾಗಿ ಕಾಣುತ್ತದೆ. ಈ ಸಂಸ್ಕೃತಿಗೆ ಸೇರಿದ ದಂತ, ಕೊಂಬು ಮತ್ತು ಎಲುಬಿನ ಆಯುಧಗಳು ಇತರ ಎಸ್ಕಿಮೋ ಸಂಸ್ಕೃತಿಗಳ ಆಯುಧಗಳಿಗಿಂತಲೂ ಪ್ರಮುಖವಾಗಿವೆ. ಎಲುಬಿನ ಆಯುಧಗಳ ಮೇಲಿರುವ ಕಲೆ, ಇವರ ಶವಸಂಸ್ಕಾರ ಪದ್ಧತಿ, ಮತೀಯಾಚರಣೆ ಮುಂತಾದವುಗಳಲ್ಲಿ ಇವರು ಕಬ್ಬಿಣ ಯುಗದ ಸೈಬೀರಿಯನ್ ಸಂಸ್ಕೃತಿಯ ಜನರನ್ನು ಹೋಲುತ್ತಾರೆ. ಈ ಸಂಸ್ಕೃತಿಗೆ ಸೇರಿದ ಕಲ್ಲಿನಾಯುಧಗಳು ಇನ್ನೂ ಪುರಾತನವಾದ ಸೈಬೀರಿಯದ ನವಶಿಲಾಯುಗದ ಆಯುಧಗಳನ್ನು ಹೋಲುತ್ತವೆ. ಇಪಿಯುಟಾಕ್ ಸಂಸ್ಕೃತಿಯಲ್ಲಿ ಎಸ್ಕಿಮೋ ಸಂಸ್ಕೃತಿಗಳ ಮುಖ್ಯ ಚಿಹ್ನೆಗಳಾದ ಸ್ಲೆಜ್ ಗಾಡಿಗಳು, ಈಟಿಗಾಳ, ಬಿಲ್ಲಿನಾಕಾರದ ಬೈರಿಗೆ, ಮಣ್ಣಿನ ಪಾತ್ರೆ, ಹಣತೆ ಮತ್ತು ನಯಗೊಳಿಸಿದ ಬಳಪದ ಕಲ್ಲಿನಾಯುಧಗಳು ಸಿಕ್ಕಿಲ್ಲ. ಈ ಸಂಸ್ಕೃತಿಯನ್ನೇ ಹೋಲುವ ಇಪಿಯುಟಾಕ್ ಸಮೀಪ ಸಂಸ್ಕೃತಿಯಲ್ಲಿ ಕೊನೆಯ ಮೂರು ರೀತಿಯ ಅವಶೇಷಗಳೇನೋ ದೊರಕಿವೆ, ಬ್ರಿಸ್ಟಲ್ ಕೊಲ್ಲಿ ಕುಸ್ಕೊಕ್ವಿಮ್ ಮತ್ತು ನಾರ್ಟನ್ಸೌಂಡ್ ಪ್ರದೇಶಗಳಲ್ಲಿ ದೊರಕಿರುವ ಈ ಸಂಸ್ಕೃತಿಯ ಅವಶೇಷಗಳು ಇಂಗಾಲ ಕಾಲ ನಿರ್ಣಯ ವಿಧಾನದ ಪ್ರಕಾರ ಪ್ರ.ಶ.ಪು.300-ಪ್ರ.ಶ.300ರ ನಡುವಣ ಕಾಲದವೆಂದು ಹೇಳಲಾಗಿದೆ.

ಥ್ಯೂಲೀ ಸಂಸ್ಕೃತಿ ಕೆನಡ-ಗ್ರೀನ್ಲೆಂಡ್ ಪ್ರದೇಶಗಳಲ್ಲಿ ಕಂಡುಬರುವ ಮುನ್ನ ಆ ಪ್ರದೇಶಗಳಲ್ಲಿ ಡಾರ್ಸೆಟ್ ಸಂಸ್ಕೃತಿ ನೆಲೆಸಿತ್ತು. ಈ ಸಂಸ್ಕೃತಿ ಆರ್ಕ್ಟಿಕ್ ತೀರ ಪ್ರದೇಶದಲ್ಲಿ ನ್ಯೂ ಫೌಂಡ್ಲೆಂಡಿನಿಂದ ಪುರ್ವ ಗ್ರೀನ್ಲೆಂಡಿನ ವರೆಗೂ ಹಬ್ಬಿತ್ತು. ಈ ಸಂಸ್ಸೃತಿಗೆ ಸೇರಿದ ಈಟಿಗಾಳ, ಚಾಕು, ಹಣತೆ ಕಲ್ಲಿನಾಯಧಗಳು ಮತ್ತು ದಂತದ ಕೆತ್ತನೆ ವಸ್ತುಗಳು ಥ್ಯೂಲೀ ಸಂಸ್ಕೃತಿಯ ವಸ್ತುಗಳಿಗಿಂತ ನಯವಾಗಿದ್ದುವು. ಈ ಸಂಸ್ಕೃತಿಯ ಜನಕ್ಕೆ ಥ್ಯೂಲೀ ಸಂಸ್ಕೃತಿಯವರು ಬಳಸುತ್ತಿದ್ದ ನಾಯಿ ಹೂಡಿದ ಸ್ಲೆಜ್ಗಾಡಿ, ಬಿಲ್ಲಿನಾಕಾರದ ಬೈರಿಗೆ, ಎಲುಬಿನಿಂದ ಮಾಡಿದ ಬಾಣದ ಮೊನೆ ಮುಂತಾದವುಗಳ ಉಪಯೋಗ ಗೊತ್ತಿರಲಿಲ್ಲ, ಡಾರ್ಸೆಟ್ ಸಂಸ್ಕೃತಿಯ ಹಲವಾರು ಆಯುಧೋಪಕರಣಗಳ ಪ್ರಭಾವ ಅನಂತರಕಾಲದ ಎಸ್ಕಿಮೋಗಳ ಆಯುಧಗಳ ಮೇಲೆ ಕಂಡುಬರುತ್ತದೆ. ಕೆಲ ಕಾಲ ಡಾರ್ಸೆಟ್ ಮತ್ತು ಥ್ಯೂಲೀ ಸಂಸ್ಕೃತಿಗಳು ಒಟ್ಟಿಗೆ ನೆಲೆಸಿದ್ದು ಅನಂತರ ಡಾರ್ಸೆಟ್ ಸಂಸ್ಕೃತಿ ಕಣ್ಮರೆಯಾಗಿ ಥ್ಯೂಲೀ ಸಂಸ್ಕೃತಿ ಪ್ರಬಲವಾಯಿತು. ಇದು ಸು.ಪ್ರ.ಶ.ಪು. 750ರಲ್ಲಿ ಇದ್ದುದಾಗಿ ತಿಳಿದುಬಂದಿದೆ. ಡಾರ್ಸೆಟ್ ಸಂಸ್ಕೃತಿಯನ್ನೇ ಹೋಲುವ ಸಾರ್ಕ್ವಾಕ್ ಎಂಬ ಸಂಸ್ಕೃತಿಯ ಅವಶೇಷಗಳು (ಪ್ರ.ಶ.ಪು. 600) ಕೆನಡದ ಆರ್ಕ್ಟಿಕ್ನಲ್ಲಿ ಕಂಡುಬಂದಿದ್ದರೂ ಇದರ ಬಗ್ಗೆ ಹೆಚ್ಚಿನ ವಿವರಗಳು ಗೊತ್ತಾಗಿಲ್ಲ.

ಈ ಪ್ರದೇಶದ ಮತ್ತೊಂದು ಪುರಾತನ ಸಂಸ್ಸೃತಿಯಾದ ಡೆನ್ಬಿಗ್ ಸಂಸ್ಕೃತಿ ಡಾರ್ಸೆಟ್ ಸಂಸ್ಕೃತಿಯೊಂದಿಗೂ ಎಸ್ಕಿಮೋ ಪುರ್ವದ ಸಂಸ್ಕೃತಿಗಳೊಂದಿಗೂ ಹೋಲಿಕೆ ಪಡೆದಿದೆ. ಅದೂ ಈ ಸಂಸ್ಕೃತಿಗಳ ಮೇಲೆ ತಕ್ಕಮಟ್ಟಿನ ಪ್ರಭಾವ ಬೀರಿದಂತೆ ಕಾಣುತ್ತದೆ. ಪ್ರ.ಶ.ಪು. 3100-1600ದಷ್ಟು ಹಳೆಯದಾದ ಈ ಸಂಸ್ಕೃತಿಯ ಅಂಶಗಳು ಇಪಿಯುಟಾಕ್ ಸಂಸ್ಕೃತಿಯಲ್ಲೂ ಕಂಡುಬರುತ್ತವೆ.

ಕಲೆ[ಬದಲಾಯಿಸಿ]

ಪ್ರಾಗಿತಿಹಾಸಕಾಲದಿಂದ ಇಂದಿನವರೆಗೂ ಎಸ್ಕಿಮೋಗಳು ಕಲಾ ಪರಂಪರೆ ಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಆಚಾರ ವ್ಯವಹಾರಗಳಲ್ಲಿ ಭಿನ್ನತೆಯಿರುವಂತೆ ಎಸ್ಕಿಮೋಗಳು ಹೆಚ್ಚು ಸಮಯವನ್ನು ಕಲಾ ಸೃಷ್ಟಿಗಾಗಿ ಬಳಸಲು ಅವಕಾಶವಿದ್ದದ್ದರಿಂದ ಪ್ರಾಚೀನ ಬೇರಿಂಗ್ ಸಮುದ್ರದ ಎಸ್ಕಿಮೋಗಳು ಪ್ರಾಗಿತಿಹಾಸ ಕಾಲದಿಂದ ಉತ್ತಮ ಕಲಾಕೃತಿಗಳನ್ನು ಸೃಷ್ಟಿಸಿದ್ದಾರೆ. ಓಕ್ವಿಕ್, ಪುನಕ್, ಸೆಂಟ್ಲಾರೆನ್ಸ್‌ ಮುಂತಾದ ಕಡೆಗಳಲ್ಲಿ ನಡೆದ ಉತ್ಖನನಗಳು ಪ್ರ.ಶ.ಪು. 3ನೆಯ ಸಹಸ್ರಮಾನಕ್ಕೆ ಸೇರಬಹುದಾದ ಕಲಾವಿಶೇಷಗಳನ್ನು ಬೆಳಕಿಗೆ ತಂದಿವೆ. ಈಟಿಗಾಳಗಳು, ಒರೆಯುವ ಆಯುಧಗಳು, ಚಾಕುಗಳ ಹಿಡಿಗಳು ಮತ್ತು ಮೀನು ಹಿಡಿಯಲು ಉಪಯೋಗಿಸುವ ಬೆಂಡುಗಳು ಇವುಗಳ ಮೇಲೆ ವಿವಿಧ ಆಕಾರಗಳ ಕೆತ್ತನೆಯ ಕೆಲಸಗಳನ್ನು ಮಾಡಲಾಗಿದೆ. ಇವುಗಳಲ್ಲಿ ಕೆಲವು ವಿವಿಧ ಪ್ರಾಣಿಗಳ ಚಿತ್ರಗಳೆಂಬುದು ಸುಲಭವಾಗಿ ಗೊತ್ತಾಗುತ್ತದೆ. ದಂತದ ಈಟಿಗಾಳಗಳ ಮೇಲೆ ಕೆತ್ತಲಾಗಿರುವ ಪ್ರಾಣಿಗಳ ಚಿತ್ರಗಳು ಬಹು ನಾಜೂಕಾಗಿವೆ. ಅವುಗಳ ಕಣ್ಣು, ಕಿವಿ, ಮೂಗು, ಹಲ್ಲು ಮೊದಲಾದ ಅಂಗಗಳನ್ನು ಚಿತ್ರಿಸುವಲ್ಲಿ ಚಿತ್ರಕಾರನ ಕುಶಲತೆ ಎದ್ದು ಕಾಣುತ್ತದೆ. ಈ ಕಾಲದ ಚಿತ್ರಗಳಲ್ಲಿ ಪದೇ ಪದೇ ಕಾಣಬರುವ ಚಿತ್ರವೆಂದರೆ ರೆಕ್ಕೆಯಿರುವ ಪ್ರಾಣಿಯದು. ಇದರಲ್ಲಿ ರೆಕ್ಕೆಯ ಎರಡು ಭಾಗಗಳಲ್ಲೂ ಕಾಣಬರುವ ಪ್ರಮಾಣೌಚಿತ್ಯ ಗಮನಾರ್ಹವಾದದ್ದು. ಅಲಾಸ್ಕದ ಪುನಕ್ ದ್ವೀಪದಲ್ಲಿ ದೊರಕಿರುವ ದಂತದ ಶಿಲ್ಪಗಳು ಆ ಕಾಲದ ಶಿಲ್ಪ ಶೈಲಿಗೆ ಉತ್ತಮ ಸಾಕ್ಷಿಗಳಾಗಿವೆ.

ಪ್ರಮಾಣ ಮೀರಿದ ಸ್ತನಗಳು, ನಿತಂಬ ಮುಂತಾದವುಗಳಿಂದ ಇವು ಕಾಮದೇವತೆಯ ಶಿಲ್ಪಗಳೆಂದು ಸುಲಭವಾಗಿ ಊಹಿಸಬಹುದು. ದಕ್ಷಿಣ ಅಲಾಸ್ಕದ ಬ್ರಿಸ್ಟಲ್ ಖಾರಿ, ಅಲ್ಯೂಷನ್ ಮತ್ತು ಕೋಡಿಯೂಕ್ ದ್ವೀಪಗಳು, ಕುಕ್ ಖಾರಿ, ವಿಲಿಯಂ ಸೌಂಡ್ ಮುಂತಾದ ಕಡೆಗಳಲ್ಲಿ ದೊರಕಿರುವ ಪ್ರಾಗೈತಿಹಾಸಿಕ ಅವಶೇಷಗಳಿಂದ ಈ ಎಸ್ಕಿಮೋಗಳು ವಿಶೇಷವಾಗಿ ಸಮುದ್ರದ ಪ್ರಾಣಿಗಳ ಮತ್ತು ಪಕ್ಷಿಗಳ ರೇಖಾಚಿತ್ರಗಳನ್ನೂ ವರ್ಣಚಿತ್ರಗಳನ್ನೂ ಮೂಳೆಯ ಆಯುಧಗಳ ಮೇಲೆ ಬರೆಯುತ್ತಿದ್ದರೆಂದು ಗೊತ್ತಾಗುತ್ತದೆ. ಈಟಿ, ಚಾಕು ಮುಂತಾದವುಗಳ ಮೇಲೆ ಪ್ರಾಣಿಗಳ ಚಿತ್ರಗಳನ್ನು ಬರೆದರೆ ಆ ಪ್ರಾಣಿಗಳು ಬೇಗ ಈ ಆಯುಧಗಳ ಏಟಿಗೆ ಸಿಕ್ಕಿ ಸಾಯುತ್ತವೆ ಎಂಬ ನಂಬಿಕೆ ಇದ್ದಿರಬೇಕು.

ಕೆನಡ ಮತ್ತು ಗ್ರೀನ್ಲೆಂಡಿನ ಎಸ್ಕಿಮೋಗಳ ಪ್ರಾಗೈತಿಹಾಸಿಕ ಕಲೆಗಳಲ್ಲಿ ಮುಖ್ಯವಾದದ್ದು ಶಿಲ್ಪ. ಪ್ರಾಣಿಗಳ ಮತ್ತು ಮಾನವನ ಶಿಲ್ಪಗಳನ್ನು ಇವರು ದಂತ, ಮೂಳೆ ಮತ್ತು ಮರಗಳಲ್ಲಿ ರೂಪಿಸಿದ್ದಾರೆ. ಇವುಗಳಲ್ಲಿ ವಿಶೇಷವಾಗಿ ಜೀವಂತ ಲಕ್ಷಣಗಳು ಕಾಣಬರುತ್ತವೆ. ಡಾರ್ಸೆಟ್ ಸಂಸ್ಕೃತಿಯ (ಪ್ರ.ಶ. 7ನೆಯ ಶತಮಾನ) ಶಿಲ್ಪಗಳಲ್ಲಿ ಅಗಲವಾದ ಮತ್ತು ದುಂಡಾದ ಮುಖ, ಚಪ್ಪಟೆ ಮೂಗು ಮತ್ತು ಅಗಲಬಾಯಿ-ಇವು ಮುಖ್ಯ ಲಕ್ಷಣಗಳು. ಒಂದಕ್ಕಿಂತಲೂ ಹೆಚ್ಚು ತಲೆ ಮುಖಗಳನ್ನುಳ್ಳ ಮರದ ಶಿಲ್ಪಗಳು ಕೆನಡ ಮತ್ತು ಗ್ರೀನ್ಲೆಂಡಿನ ಅಗೆತಗಳಲ್ಲಿ ದೊರಕಿವೆ. ಸಮಕಾಲೀನ ಎಸ್ಕಿಮೋ ಕಲೆಯಲ್ಲಿ ವಿಕಾಸಹೊಂದಿದ ಪ್ರಾಗೈತಿಕಹಾಸಿಕ ಪರಂಪರೆಯನ್ನೇ ಕಾಣಬಹುದು. ಆಯುಧಗಳ ಮೇಲೆ, ಪೆಟ್ಟಿಗೆಗಳ ಮೇಲೆ ದಂತದ ಕೆತ್ತನೆಯ ಕೆಲಸ ವಿಶೇಷವಾಗಿ ಕಾಣಬರುತ್ತದೆ. ಶಿಲ್ಪಗಳಲ್ಲಿ ಬಹು ಮುಖ್ಯವಾದವು ದಂತದಿಂದ ಮತ್ತು ಮರದಿಂದ ಮಾಡಲಾದವು. ಆದರೆ ಅಲಾಸ್ಕ ಎಸ್ಕಿಮೋಗಳ ಉನ್ನತ ಮಟ್ಟದ ಕಲೆಯನ್ನು ನೃತ್ಯದಲ್ಲಿ ಬಳಸಲಾಗುವ ವಿವಿಧ ವರ್ಣಗಳ ಮುಖವಾಡಗಳಲ್ಲಿ ಕಾಣಬಹುದು. ಕ್ಯಾರಿಬೂ ಪ್ರಾಣಿಯ ಚರ್ಮವನ್ನು ಆಕಾರಕ್ಕೆ ತಕ್ಕಂತೆ ಕತ್ತರಿಸಿ, ಕೆಂಪು, ಕಪ್ಪು, ನೀಲಿ ಮತ್ತು ಬಿಳಿಯ ಬಣ್ಣಗಳಿಂದ ಕಣ್ಣು, ಮೂಗು, ಬಾಯಿ ಮುಂತಾದವನ್ನು ಚಿತ್ರಿಸಿ ಅದರ ಸುತ್ತಲೂ ಪಕ್ಷಿಯ ಗರಿಗಳನ್ನು ಕಟ್ಟಿ ಮುಖವಾಡಗಳನ್ನು ತಯಾರಿಸುತ್ತಿದ್ದರು. ಮರದಿಂದ ಮಾಡಿದ ಮುಖವಾಡಗಳೂ ಬಳಕೆಯಲ್ಲಿದ್ದುವು. ಗ್ರೀನ್ಲೆಂಡ್ ಕೆನಡಗಳ ಎಸ್ಕಿಮೋಗಳ ಸಮಕಾಲೀನ ಕಲೆಯಲ್ಲಿ ವಿಶೇಷವೇನೂ ಕಾಣಬರುವುದಿಲ್ಲ. ಇಲ್ಲಿಯೂ ಆಯುಧಗಳ ಮೇಲಿನ ರೇಖಾಚಿತ್ರ, ದಂತದ ಶಿಲ್ಪಗಳು ಮತ್ತು ಮರದ ಶಿಲ್ಪಗಳನ್ನು ಕಾಣಬಹುದು. ಶಿಲ್ಪಗಳಲ್ಲಿ ಮುಖಲಕ್ಷಣಗಳೂ ಉಡುಗೆತೊಡುಗೆಗಳೂ ಎಸ್ಕಿಮೋಗಳ ನಿಜ ಜೀವನವನ್ನು ಪ್ರತಿಬಿಂಬಿಸುತ್ತವೆಯೆಂಬುದು ಗಮನಾರ್ಹ. ಆದಿಮಾನವ ಕಲೆಯಲ್ಲಿ ಎಸ್ಕಿಮೋ ಕಲೆಯ ಸ್ಥಾನ ವಿಶಿಷ್ಟವಾದದ್ದು.

ಉಲ್ಲೇಖ[ಬದಲಾಯಿಸಿ]

  1. Kaplan, Lawrence. ಅಲಾಸ್ಕ ಮೂಲಭಾಷಾ ಕೇಂದ್ರ Archived 2016-08-18 ವೇಬ್ಯಾಕ್ ಮೆಷಿನ್ ನಲ್ಲಿ.
  2. "ಆಕ್ಸ್‍ಫರ್ಡ್ ನಿಘಂಟು". Archived from the original on 2016-09-06. Retrieved 2016-11-19.
"https://kn.wikipedia.org/w/index.php?title=ಎಸ್ಕಿಮೊ&oldid=1158692" ಇಂದ ಪಡೆಯಲ್ಪಟ್ಟಿದೆ