ಎರಿಡೆನಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎರಿಡೆನಸ್ ಒರೈಯನ್ ಪುಂಜದ ರೀಗಲ್ ನಕ್ಷತ್ರದಿಂದ (ವಿಷುವದಂಶ ಚಿ=5 ಗಂ 12.1 ಮಿ, ಫಂಟಾವೃತ್ತಾಂಶ, ಜ= -80 15') ದಕ್ಷಿಣದ ಪ್ರಥಮ ಕಾಂತಿವರ್ಗದ ಉಜ್ಜ್ವಲ ನಕ್ಷತ್ರ ಏಕೆರ್ನಾರ್ (ಚಿ=1 ಗಂ. 35.9ಮಿ, ಜ= -570 29') ವರೆಗೆ ವ್ಯಾಪಿಸಿರುವ ದಕ್ಷಿಣಾಕಾಶದ ವಿಶಾಲ ನಕ್ಷತ್ರಪುಂಜ. 4ನೆಯ ಕಾಂತಿವರ್ಗದ ನಕ್ಷತ್ರಗಳೇ (ಎಂದರೆ ಕ್ಷೀಣ ಕಾಂತಿಯ ಅಸ್ಪಷ್ಟ ನಕ್ಷತ್ರಗಳು) ಮೂವತ್ತಕ್ಕೂ ಮೀರಿ ಇರುವ ಈ ಪುಂಜದಲ್ಲಿ ಪ್ರಾಚೀನ ಬಗೆಗಣ್ಣು ಒಂದು ದೀರ್ಘ ನದೀಪಾತ್ರವನ್ನೇ ನೋಡಿತು. ಆದ್ದರಿಂದಲೇ ಇದರ ಕೊನೆಯಲ್ಲಿ (ದಕ್ಷಿಣದ ತಗ್ಗಿನಲ್ಲಿ; ಆದ್ದರಿಂದ ನದಿಯ ಮುಖದಲ್ಲಿ) ಇರುವ ಏಕೆರ್ನಾರ್ (ಚಿ-ಎರಿಡೆನಿ) ನಕ್ಷತ್ರಕ್ಕೆ ಆ ಹೆಸರು ಬಂದಿದೆ; ಏಕೆರ್ನಾರ್ ಪದದ ಅರ್ಥ ನದೀಮುಖದ ನಕ್ಷತ್ರವೆಂದು. ಎರಿಡೆನಸನ್ನು ವೈತರಣಿಯೆಂದೂ ಏಕೆರ್ನಾರನ್ನು ವೈತರಣೀಮುಖವೆಂದೂ ಕರೆಯುವುದಿದೆ. ಎರಿಡೆನಸ್ ಪುಂಜದ ಗಡಿಪುಂಜಗಳು ಒರೈಯನ್, (ಮಹಾವ್ಯಾಧ), ಲೀಪಸ್, ಕೊಲಂಬ, ಡೊರಾಡೊ, ರೆಟಿಕ್ಯುಲಂ, ‘ಹೈಡ್ರಸ್, ಫಿನಿಕ್ಸ್‌, ಸ್ಕಲ್ಪ್ಟರ್, ಸಿಟಿಸ್, ವೃಷಭ. ಬರಿಗಣ್ಣಿಗೆ ಕಾಣುವ ಅತ್ಯಂತ ಉಜ್ಜ್ವಲ ನಕ್ಷತ್ರಗಳಲ್ಲಿ ಸೂರ್ಯನ ಸ್ಥಾನ ಒಂದನೆಯದಾದರೆ ಏಕೆರ್ನಾರಿನದು ಹತ್ತು. ಇದರ ದೂರ ಭೂಮಿಯಿಂದ 70 ಜ್ಯೋತಿರ್ವರ್ಷ. ಎರಿಡೆನಸ್, ಪುಂಜದ 02-ಎರಿಡೆನಿ ಮೂರು ನಕ್ಷತ್ರಗಳಿಂದ ಕೂಡಿದೆ. ಬರಿಗಣ್ಣಿಗೆ ಹಳದಿ ಬಣ್ಣದ ಕುಬ್ಜ ನಕ್ಷತ್ರ ಒಂದು ಮತ್ತು ದೂರದರ್ಶಕಕ್ಕೆ ಕಾಣಿಸುವಂತ ನಕ್ಷತ್ರಗಳು ಎರಡು. ಗ್ರೀಕ್ ಪುರಾಣದ ಪ್ರಕಾರ ಎರಿಡೆನಸ್ ಒಂದು ನದೀದೇವತೆ. ಸೂರ್ಯನ ರಥದ ಸಾರಥ್ಯವನ್ನು ವಹಿಸಿದ್ಧ ಅಪೊಲೊ ಸ್ವೇಚ್ಛಾನುಸಾರ ಅದನ್ನು ಆಕಾಶದಲ್ಲಿ ಓಡಿಸಿದುದರಿಂದ ಜಗತ್ತಿಗೆ ಘೋರಾಪಾಯ ಸನ್ನಿಹಿತವಾಯಿತು. ಆಗ ಜ್ಯೂಸ್ ತನ್ನ ಆಯುಧದಿಂದ ಅಪೊಲೊವಿಗೆ ಹೊಡೆದು ರಥದಿಂದ ಉರುಳಿಸಿದ. ಅಪೊಲೊ ಎರಿಡೆನಸ್ (ಎಂದರೆ ಮೃತ್ಯು ನದಿಗೆ) ಬಿದ್ದ. ಟೈಕೊಬ್ರಾಹೆ ರಚಿಸಿದ ಕೋಷ್ಟಕದಲ್ಲಿ ಎರಿಡೆನಸ್ ಪುಂಜಕ್ಕೆ ಎರಿಡೆನಸ್ ಪ್ಲುವಿಯಸ್ ಎಂಬ ಹೆಸರು ಇದೆ. ಉಲುಗ್ ಬೆಗ್ ಮತ್ತು ಟಾಲೆಮಿ ರಚಿಸಿದ ಕೋಷ್ಟಕಗಳಲ್ಲಿ ಇದನ್ನು ನದಿಗಳೆಂದು ಕರೆದಿದೆ.