ವಿಷಯಕ್ಕೆ ಹೋಗು

ಎಪಿಕರ್ಮಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಪಿಕರ್ಮಸ್ [೧][೨]ಕ್ರಿ.ಪೂ. ಸು. 540-450. ಪ್ರಖ್ಯಾತಿ ಪಡೆದ ಪ್ರಾಚೀನ ಗ್ರೀಕರಲ್ಲಿ ಒಬ್ಬ. ವಿನೋದನಾಟಕಕಾರ. ಹಳೆಯ ವಿನೋದ ನಾಟಕ ಪ್ರಕಾರಕ್ಕೆ ಅವನೇ ಪಿತನೆಂಬ ಹೊಗಳಿಕೆ ಉಂಟು. ಹಾಗೂ ಪೈತಾಗರಸ್ ಪಂಥಕ್ಕೆ ಸೇರಿದ ದಾರ್ಶನಿಕನೂ ಹೌದು. ಅಷ್ಟೊಂದು ಪ್ರಸಿದ್ಧನಾಗಿದ್ದರೂ ಅವನ ಕೃತಿಗಳಲ್ಲಿ ಒಂದೂ ಉಪಲಬ್ಧವಿಲ್ಲ. ಸಿಕ್ಕಿರುವ ಚೂರುಪಾರುಗಳ ಮೊತ್ತವೂ ಅತಿ ಕಡಿಮೆ. ಅವನ ಜೀವಿತ ಕಾಲವಾಗಲಿ ಜೀವನದ ವಿವರಗಳಾಗಲಿ ಖಚಿತವಾಗಿ ತಿಳಿದುಬಂದಿಲ್ಲ. ಕ್ರಿ.ಪೂ.486 ಅವನ ಉಚ್ಛ್ರಾಯ ಸಮಯವೆಂದು ವಿದ್ವಾಂಸರು ಊಹಿಸಿದ್ದಾರೆ. ಕಸ್ ಎಂಬ ದ್ವೀಪದಲ್ಲಿ ಜನಿಸಿ, ಮೊದಲು ಮೆಗಾರಾಕ್ಕೆ ತೆರಳಿ ಕೆಲಕಾಲವಿದ್ದು, ಅನಂತರ ಸೈರಕ್ಯೂಸಿಗೆ ಹೋಗಿ ನೆಲಸಿದನೆಂದೂ ಅಲ್ಲೇ 90ನೆಯ ವಯಸ್ಸಿನಲ್ಲಿ ಅವನಿಗೆ ಮರಣ ಒದಗಿತೆಂದೂ ಜನಶ್ರುತಿ ಹೇಳುತ್ತದೆ.

ಎಪಿಕರ್ಮಸನ ವಿನೋದನಾಟಕಗಳನ್ನು ಮೂರು ಗುಂಪಾಗಿ ವಿಭಾಗಿಸಿದ್ದಾರೆ. ಪ್ರಾಮಿತಿಯಸ್, ಸೈಕ್ಲೋಪ್ಸ್ ಮುಂತಾದ ವೀರೇತಿಹಾಸದ ಘಟನಾವಳಿಗಳನ್ನು ವಿಕಟಾನುಕರಣ ಮಾಡುವವು ಒಂದು ರಾಶಿ. ಸಾಮಾನ್ಯ ಬಾಳಿನ ಸಂಗತಿಗಳನ್ನು ಪರಿಹಾಸಗೈಯುವ ಮೂಕ ನಾಟಕಗಳು (ಮೈಮ್) ಎರಡನೆಯ ರಾಶಿ. ಮೂರನೆಯ ವಿಧದ ವಿರಚನೆಗಳನ್ನು ಸಂವಾದ ರೂಪದ ಪ್ರಬಂಧ-ಎನ್ನಬೇಕು. ಒಂದರಲ್ಲಿ ಗಂಡು ಬುದ್ಧಿ, ಹೆಣ್ಣು ಬುದ್ಧಿಗಳ ನಡುವೆ ವಾಗ್ವಾದ ನಡೆಯುತ್ತದೆ. ಅವನ ನಾಟಕಗಳು ತ್ವರೆ, ಓಡಾಟ, ಸಡಗರಗಳಿಂದ ತುಂಬಿರುತ್ತಿದ್ದವು. ಎರಡು ಮೂರು ಸುಧಾರಣೆಗಳನ್ನು ಎಸಗಿ ಈತ ವಿನೋದ ನಾಟಕವನ್ನು ಸ್ವಲ್ಪ ಮೇಲಕ್ಕೆ ಎತ್ತಿದ ನಿಜಾಂಶವನ್ನು ಮರೆಯಲಾಗದು. ಅಶ್ಲೀಲತೆಯನ್ನೂ ಗ್ರಾಮ್ಯ ಗೇಲಿಯನ್ನೂ ಆದಷ್ಟು ಈತ ತೊಡೆದು ಹಾಕಿದ : ಮೋದಗಾರರ ಕೂಟಕ್ಕೆ ಕೇಂದ್ರ ಸ್ಥಾನವನ್ನು ಕೊಟ್ಟು, ಸಂಭಾಷಣೆಯ ಹೊಣೆಗಾರಿಕೆಯನ್ನು ಅದಕ್ಕೆ ವಹಿಸಿ, ಒಂದು ರೀತಿಯ ಸಂವಿಧಾನ ವಿನೋದ ನಾಟಕದಲ್ಲೂ ಕಾಣಬರುವಂತೆ ಮಾಡಿದ. ಮೇಲಾಗಿ, ಈ ವ್ಯಕ್ತಿಯನ್ನು ಕುರಿತು ವೈಯಕ್ತಿಕ ವಿಡಂಬನವನ್ನು ಬದಿಗೊತ್ತಿ, ಪರಾವಲಂಬಿ, ಹಳ್ಳಿಗ, ದೃಶ್ಯ ಕುತೂಹಲಿ, ಮುಂತಾದ ಮನುಷ್ಯ ನಮೂನೆಗಳನ್ನು ಕೆತ್ತಿ ನಿಲ್ಲಿಸುವುದೇ ಅವನ ಉದ್ದೇಶವಾಗಿದ್ದಂತೆ ತೋರುತ್ತದೆ. ನಾಟಕಗಳಲ್ಲಿ ಘನವಾದ ಅಭಿಪ್ರಾಯಗಳು ಮತ್ತೆ ಮತ್ತೆ ಬರುತ್ತವೆ.

ವಿನೋದ ನಾಟಕದ ಶುದ್ಧಿ ತನ್ನ ಕೈಯಿಂದಲೇ ಆಯ್ತೆಂದು ಅರಿಸ್ಟೋಫೆನೀಸ್ (ನೋಡಿ- ಅರಿಸ್ಟೋಫೆನೀಸ್) ಹೇಳಿಕೊಂಡಿರುವುದು ಪೂರ್ಣ ಸತ್ಯವಲ್ಲ. ಅವನಿಗಿಂತ ಮುಂಚೆಯೇ ಎಪಿಕರ್ಮಸ್ ಆ ಉದ್ಯಮಕ್ಕೆ ಕೈ ಹಾಕಿದ್ದ; ಕೊಂಚಮಟ್ಟಿಗೆ ಸಾಧಿಸಿಯೂ ಇದ್ದ. ಆದರೂ ಕಲೆಗಾರಿಕೆಯ ದೃಷ್ಟಿಯಿಂದ ನೋಡಿದರೆ, ಎಪಿಕರ್ಮಸನ ವಿನೋದ ನಾಟಕದ ಛಂದಸ್ಸು ಸಡಿಲ, ಶಬ್ದಕೋಶ ಒರಟೊರಟು.

  1. http://www.theatrehistory.com/ancient/ridgeway004.html
  2. http://www.sacred-texts.com/cla/app/app20.htm