ಎಂ. ಕೆ. ಕೈಲಾಸಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಪಾನಿನ ಫುಕುಮೋಕಾ ಮಾದರಿ ಕೃಷಿಯಲ್ಲಿ ಕೃಷಿಮಾಡಿ ವಿಶ್ವಮಾನ್ಯತೆ ಪಡೆದ ಕೊಳ್ಳೆಗಾಲ ತಾ. ದೊಡ್ಡಿಂದುವಾಡಿ ಗ್ರಾಮದ ಎಂ.ಕೆ.ಕೈಲಾಸಮೂರ್ತಿಯವರ 'ಸಹಜ ಕೃಷಿ' ಯ ಕಥೆ, ಅತ್ಯಂತ ರೋಚಕವಾಗಿದ್ದು ದೊಡ್ಡ ಸುದ್ದಿಮಾಡಿದೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಮೂರ್ತಿ ೮೦ರ ದಶಕದಲ್ಲಿ ಎಲ್ಲಾ ರೈತರಂತೆ, ಆಧುನಿಕ ಕೃಷಿ ಪದ್ದತಿಯನ್ನು ಅನುಸರಿಸಿ ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಆಧುನಿಕ ಕೃಷಿ ಪದ್ದತಿ[ಬದಲಾಯಿಸಿ]

  • ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆ, ಕಳೆಕೀಳುವಿಕೆ ಇತ್ಯಾದಿಗಳು ಆಧುನಿಕ ಕೃಷಿಯ ಪ್ರಮುಖ ಅಂಗಗಳಲ್ಲವೆ ? ಆದರೆ, ಬರ್ತಾ, ಬರ್ತಾ ಕೃಷಿ ಕೈಕೊಡುತ್ತಾ ಬಂತು. ಕ್ರಿಮಿಕೀಟಗಳು ರಸಾಯನಿಕಗಳನ್ನು ಮೆಟ್ಟಿ ನಿಂತು ಜೀವಿಸಿ ಕಿರುಕುಳ ಕೊಡಲಾರಂಭಿಸಿದವು. ಮಣ್ಣಿನ ಫಲವತ್ತತೆ ಯು ಕ್ಷೀಣಿಸುತ್ತಾ ಬಂತು. ತರಕಾರಿ, ಹಣ್ಣು ಹಂಪಲುಗಳಲ್ಲಿ ನಂಜಿನ ಪ್ರಮಾಣ ಹೆಚ್ಚಿತು. ಆದರೆ ಕೃಷಿ ವೆಚ್ಚವೇನೂ ಕಡಿಮೆಯಾಗಲಿಲ್ಲ.
  • ಆಗ ನೆರವಾದುದು, ಜಪಾನಿನ ಮಸನೋಬು ಫುಕುವೋಕಾ ಅವರು ಸಹಜ ಕೃಷಿ'ಯ ಬಗ್ಯೆ ಬರೆದ 'ವನ್ ಸ್ಟ್ರಾ ರೆವೆಲ್ಯೂಷನ್' ಎಂಬ ಪುಸ್ತಕ ! ಓದಿ ಮಾರುಹೋದ ಮೂರ್ತಿಯವರು ಜಪಾನ್ ಮಾದರಿಯನ್ನು ಅನುಸರಿಸಿ ಬೀಜಗಳನ್ನು ಹಾಗೆಯೇ ಚೆಲ್ಲಿದರು. ಕಳೆ ತೆಗೆಯಲಿಲ್ಲ. ಕಳೆಯೇ ಮುಂದೆ ಗೊಬ್ಬರವಾಯಿತು. ಎರೆಹುಳುಗಳ ಸಂಖೆ ವೃಧ್ಧಿಯಾಯಿತು. ಭೂಮಿಯ ಮಣ್ಣಿನ ಪದರಗಳು ತೇವಾಂಶವನ್ನು ಹಿಡಿದಿಡಲು ಸಮರ್ಥವಾದವು.
  • 'ಗುಟುಕು ನೀರಾವರಿ' ಪಧ್ಧತಿಯಿಂದ ನೀರಿನ ಅಗತ್ಯವನ್ನು ೩೦% ರಷ್ಟು ಕಡಿಮೆ ಮಾಡಿದರು. ಅವರ ೬.೫ ಎಕರೆ ಜಮೀನಿನಲ್ಲಿ ಸಹಜಕೃಷಿಯಿಂದ ಕೇವಲ ೧೫ ವರ್ಷಗಳಲ್ಲೇ ಅಡಿಕೆ, ತೆಂಗು, ನುಗ್ಗೆ, ಮಾವು, ಹಿಪ್ಪುನೇರಳೆ, ಬಾಳೆ, ಪಪ್ಪಾಯಿ, ಬತ್ತ, ತರಕಾರಿಗಳನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ಈಗ ಅವರ ತೋಟದಲ್ಲಿ ವಿವಿಧ ಜಾತಿಗೆ ಸೇರಿದ ೨೫೦ ಜಾತಿಯ ಸಸ್ಯಗಳಿವೆ.
  • ೬೦ ಬಗೆಯ ಸೊಪ್ಪುಗಳು, ಹಾಗೂ ಕಾಡಿನ ಗೆಡ್ಡೇ ಗೆಣಸುಗಳು, ಗಿಡ ಮೂಲಿಕೆಗಳು ಇವೆ. ಕೆಲಸಗಾರರೇ ಇಲ್ಲದ ಅವರ ತೋಟವನ್ನು ಗೆದ್ದಲು, ಇರುವೆ, ಎರೆಹುಳು, ಹಾವು, ಪಕ್ಷಿಗಳು ನೋಡಿಕೊಳ್ಳುತ್ತಿವೆ. ಪ್ರಕೃತಿಯ ನಿಯಮದಂತೆ ಒಂದು ಕೀಟ ಇನ್ನೊಂದು ಕೀಟವನ್ನು ನಿಯಂತ್ರಿಸು ತ್ತದೆ. ಆಧುನಿಕ ಕೃಷಿಯಲ್ಲಿ, ಜಮೀನನ್ನು ಉತ್ತು ಹೈಬ್ರಿಡ್ ಬೀಜಗಳನ್ನು ಬಿತ್ತಿ, ಕೃತಕ ಗೊಬ್ಬರ, ಕೀಟನಾಶಕಗಳನ್ನು ಸಿಂಪಡಿಸಿ ಬಲವಂತವಾಗಿ ಬೆಳೆಯುವ ಪದ್ಧತಿಯೇನು ಒಳ್ಳೆಯದಲ್ಲ.
  • ರಾಸಾಯನಿಕ ಕೃಷಿಯಲ್ಲಿ ೨೦ ಕ್ವಿ. ಇಳುವರಿಯಾದರೆ, ಸಹಜಕೃಷಿಯಲ್ಲಿ ೩೦ ರಿಂದ ೩೩ ಕ್ವಿ. ಫಸಲು ಸಮೃಧ್ಧಿಯಾಗಿ ಬೆಳೆಯುವುದನ್ನು ನೋಡಬಹುದು. ನೀರಿನ ಬಳಕೆ ಕಡಿಮೆ. ಹೆಚ್ಚು ವೆಚ್ಚವೂ ಇಲ್ಲ. ಅವರ ತೋಟದಲ್ಲಿ ಬೆಳೆಸಿದ ಮಾವಿನಮರಗಳು ವಾರ್ಷಿಕವಾಗಿ ೧೦ ಟನ್ ಮಾವಿನ ಹಣ್ಣನ್ನು ಕೊಡುತ್ತಿವೆ. ಕೈಲಾಸ ಮೂರ್ತಿಯವರ ಪ್ರಕಾರ ಉಳುಮೆಯೇ ಮಾಡದಿರುವುದರಿಂದ ಭೂಮಿಯ ಮಣ್ಣಿನ ಸವೆತ ತಪ್ಪುತ್ತದೆ.
  1. ನೀರಿನ ಬಳಕೆ ಕಡಿಮೆ.
  2. ಪರಿಶುಧ್ಧ ರಾಸಾಯನಿಕ ಮುಕ್ತ ಆಹಾರ ಧಾನ್ಯಗಳು ಲಭ್ಯವಾಗುತ್ತವೆ.
  3. ಬಂಡವಾಳವಿಲ್ಲ.
  4. ಪರಿಸರ ನಾಶವಿಲ್ಲ.

ಮಾವಿನ ಹಣ್ಣಿನ ಸ್ಪರ್ಧೆ[ಬದಲಾಯಿಸಿ]

  • ಕಳೆದ 10 ವರ್ಷಗಳಿಂದ ಶಾಲಾ ಮಕ್ಕಳಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ಅರಿವು ಮೂಡಿಸಲೋಸುಗ ಮಾವಿನ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸುತ್ತಾ ಬಂದಿರುವ ಕೈಲಾಸಮೂರ್ತಿ ಅವರು, ಮಾವಿನ ಹಣ್ಣು ತಿನ್ನುವ ಮಕ್ಕಳಿಗೆ ಸ್ಪರ್ಧೆಗೂ ಮುಂಚೆ ನೈಸರ್ಗಿಕ ಕೃಷಿ ಮತ್ತು ಆಹಾರದ ಮಹತ್ವದ ಬಗ್ಗೆ ತೋಟದ ಅಂಗಳದಲ್ಲೇ ಪಾಠ ಹೇಳುತ್ತಾರೆ.
  • ಮಾವಿನಹಣ್ಣು ಎನ್ನುತ್ತಲೇ ಹಿರಿ ಹಿರಿ ಹಿಗ್ಗಿದ ಶಾಲಾ ಮಕ್ಕಳು ತಮಗಿಷ್ಟ ಬಂದಂತೆ ಹಣ್ಣುಗಳನ್ನು ಸವಿಯುವರು. ಕೆಲವು ಮಕ್ಕಳು 10ರಿಂದ 15 ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳುವರು. 10 ವರ್ಷದಿಂದಲೂ ಕೈಲಾಸಮೂರ್ತಿ ಅವರು ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ಮಾರಾಟ ಮಾಡದೆ ಶಾಲಾ ಮಕ್ಕಳಿಗೆ ನೀಡುತ್ತಿದ್ದಾರೆ.
  • ಮಾತ್ರವಲ್ಲ, ಹೆಚ್ಚು ಹಣ್ಣು ತಿಂದ ಮಕ್ಕಳಿಗೆ ಬಹುಮಾನವನ್ನೂ ನೀಡುತ್ತಿದ್ದಾರೆ. ಭಾಗವಹಿಸಿದ್ದ ಚಾಮರಾಜನಗರದ ದೀನಬಂಧು ಶಾಲೆ, ಇಕ್ಕಡಹಳ್ಳಿ, ಮತ್ತಿಪುರ ಹಾಗೂ ದೊಡ್ಡಿಂದುವಾಡಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಪನ್ಯಾಸಕ ಕಾಂತರಾಜು ಹಾಗೂ ಕೈಲಾಸಮೂರ್ತಿ ಅವರು ನೈಸರ್ಗಿಕ ಕೃಷಿ ಬಗ್ಗೆ ಅರಿವು ಮೂಡಿಸಿದರು.

ಎಂ.ಕೆ.ಕೈಲಾಸಮೂರ್ತಿಯವರ 'ಸಹಜ ಕೃಷಿ'ವಿಧಾನ[ಬದಲಾಯಿಸಿ]

ಎಂ.ಕೆ.ಕೈಲಾಸಮೂರ್ತಿಯವರ 'ಸಹಜ ಕೃಷಿ'ವಿಧಾನವನ್ನು ಅವರ ಮಾತುಗಳಲ್ಲೇ ಕೇಳಬಹುದು...

  • ಭೂಮಿಯ ಆರ್ದ್ರತೆ ಆರದಿರಲು ಮತ್ತು ಮಣ್ಣಿನಲ್ಲಿ ಹ್ಯೂಮಸ್ ಸೃಷ್ಟಿಯಾಗಲು ಈ ಬಗೆಯ ಹೊದಿಕೆ ಅತ್ಯಗತ್ಯ. ಮಣ್ಣಿನಲ್ಲಿ ಅನೇಕಾನೇಕ ಸೂಕ್ಷ್ಮಜೀವಾಣುಗಳು, ಎರೆಹುಳುಗಳು ಸೃಷ್ಟಿಯಾಗುತ್ತವೆ ಮತ್ತು ತಮ್ಮ ಜೀವಿತಾವಧಿ ತೀರಿದ ಬಳಿಕ ಮರಳಿ ಮಣ್ಣು ಸೇರುತ್ತವೆ. ನಾವು ಫಸಲು ಪಡೆದ ಬಳಿಕ ಉಳಿದ ಕೃಷಿ ತ್ಯಾಜ್ಯಗಳನ್ನು ಮರಳಿ ಮಣ್ಣಿಗೆ ಹೊದಿಕೆಯಾಗಿ ರೂಪಾಂತರಿಸಬೇಕು.
  • ಕಬ್ಬಿನ ಸೋಗಾಗಿರಲಿ, ಭತ್ತದ ಹೊಟ್ಟಾಗಲಿ ಸುಡಬಾರದು. ಬಿದ್ದ ತೆಂಗು, ಬಾಳೆ, ಅಡಿಕೆ ಗರಿಗಳನ್ನು ಒಂದೆಡೆ ಒಟ್ಟಾಗಿ ರಾಶಿ ಹಾಕುವ ಬದಲು ಅಲ್ಲಲ್ಲೇ ಹೊದಿಕೆ ಮಾಡಿ. ಬೇರುಸಹಿತ ಕಿತ್ತ ಕಳೆಗಿಡಗಳನ್ನು ಅಲ್ಲಲ್ಲೆ ಕೊಳೆಯಲು ಬಿಡಿ. ಶರದೃತುವಿನಲ್ಲಿ ಗಿಡಮರಗಳ ಎಲೆ ಉದುರುವುದು ಮಣ್ಣಿನ ತಾಪಮಾನ ಕಾಪಾಡಲು ಮತ್ತು ಜೀವಾಣುಗಳನ್ನು ಸಂರಕ್ಷಿಸಲು.
  • ಬಿದ್ದ ಎಲೆ, ಕಸ, ಕಡ್ಡಿಗಳೆಲ್ಲ ಭೂತಾಯಿಗೆ ವಸ್ತ್ರವಿದ್ದಂತೆ. ಆ ವಸ್ತ್ರದ ಸೆರಗಲ್ಲಿ ಅಸಂಖ್ಯಾತ ಜೀವಿಗಳಿಗೆ ಆಸರೆ ನೀಡಿದ್ದಾಳೆ. ನಾವು ಅವುಗಳನ್ನೆಲ್ಲ ಉರಿಸಿ ಬೂದಿ ಮಾಡಿದರೆ ಭೂ ತಾಯಿಯನ್ನು ಬೆತ್ತಲುಗೊಳಿಸಿದಂತೆ.ಈ ಹೊದಿಕೆಯಿಂದಾಗಿ ಭೂಮಿಯಲ್ಲಿ ಆರ್ದ್ರತೆ ಉಳಿಯುತ್ತದೆ. ಹ್ಯೂಮಸ್ ಅಭಿವೃದ್ಧಿಯಾಗುತ್ತದೆ. ಈ ಹ್ಯೂಮಸ್ ವಾತಾವರಣದಲ್ಲಿರುವ ತೇವಾಂಶವನ್ನು ಹೀರಿ ಅಗತ್ಯಬಿದ್ದಾಗ ಗಿಡಗಳಿಗೆ ಪೂರೈಸುತ್ತದೆ.
  • ಸಾಲದ್ದಕ್ಕೆ ಕೇಶಾಕರ್ಷಣ ಬಲದಿಂದ ಊರ್ಧ್ವಗಾಮಿಯಾಗಿ ಬರುವ ಖನಿಜ-ಲವಣಾಂಶಗಳನ್ನು ಹಿಡಿದಿಡುತ್ತದೆ. ಇಷ್ಟೇ ಅಲ್ಲದೆ ಮಣ್ಣಿನ ಮೇಲ್ಭಾಗದ ಒಣ ಹೊದಿಕೆ ಮುಂಜಾವಿನ ಇಬ್ಬನಿ, ವಾತಾವರಣದ ಆರ್ದ್ರತೆಗಳೆಲ್ಲವನ್ನೂ ಹೀರಿಕೊಳ್ಳುತ್ತದೆ. ಈ ಪರಿಸ್ಥಿತಿಗೆ ವಿರುದ್ಧವಾಗಿ ಮಣ್ಣಿನಲ್ಲಿ ಅಧಿಕ ತೇವಾಂಶ ಇದ್ದರೆ ಅದನ್ನು ಹೀರಿ ವಾತಾವರಣಕ್ಕೆ ಬಿಡುಗಡೆ ಮಾಡಿ ದ್ವಿಮುಖಿ ಸಂಚಾರಿ ಭಾವವನ್ನು ಪ್ರಕಟಪಡಿಸುತ್ತದೆ.
  • ಜೊತೆಗೆ ಈ ಹೊದಿಕೆಯಲ್ಲಿ ಫಾಸ್ಪೇಟ್, ಪೊಟ್ಯಾಷ್, ಜಿಂಕ್, ಸತು, ಮಾಲಿಬ್ಡಿನಂ ಇತ್ಯಾದಿ ಪೋಷಕಾಂಶಗಳಿರುತ್ತವೆ. ಮತ್ತೆ ಅವು ಬೆಳೆಯುವ ಬೆಳೆಗೆ ಲಭ್ಯವಾಗುತ್ತವೆ. ಈ ಒಣ ಹೊದಿಕೆಯ ಜೊತೆಗೆ ಜೈವಿಕ ಹೊದಿಕೆಯೂ ಇದ್ದರೆ ಅದರ ಸೊಗಸು ಹೇಳತೀರದು. ಒಣ ಹೊದಿಕೆಯಂತೆಯೇ ಜೈವಿಕ ಹೊದಿಕೆಯೂ ಕಳೆಗಳನ್ನು ನಿಯಂತ್ರಿಸುತ್ತದೆ.
  • ನಾವು ಜೈವಿಕ ಹೊದಿಕೆಯಾಗಿ ಉದ್ದು, ಅಲಸಂದೆ, ಹೆಸರು ಇತ್ಯಾದಿ ದ್ವಿದಳ ಧಾನ್ಯದ ಗಿಡಗಳನ್ನೂ; ಹಾಗಲ, ಕುಂಬಳ, ಹೀರೆ, ಪಡುವಲ, ಸೌತೆ, ಕಲ್ಲಂಗಡಿ, ಕರಬೂಜ ಇತ್ಯಾದಿ ಹಬ್ಬುವ ಬೆಳೆಗಳನ್ನೂ ಆಯೋಜಿಸಬೇಕು. ಇದರಿಂದ ಕಳೆಗಳು ನಿಯಂತ್ರಣಕ್ಕೆ ಬರುತ್ತವೆ, ಜೈವಿಕ ವೈವಿಧ್ಯ ಹೆಚ್ಚಾಗಿ ಕೀಟಗಳ ತೊಂದರೆಯೂ ನಿವಾರಣೆಯಾಗುತ್ತದೆ. ಜೊತೆಗೆ ಹೆಚ್ಚುವರಿ ಫಸಲಿನಿಂದ ಆದಾಯವೂ ಬರುತ್ತದೆ. ಮತ್ತು ಭೂಮಿಯ ಮೇಲಿನ ಹೊದಿಕೆಯೂ ಹೆಚ್ಚಾಗುತ್ತದೆ.
  • ಇದರಿಂದಾಗಿ ತ್ವರಿತಗತಿಯಲ್ಲಿ ಮೇಲ್ಮಣ್ಣೂ ವೃದ್ಧಿಯಾಗುತ್ತದೆ. ಹ್ಯೂಮಸ್ ಸೃಷ್ಟಿಯಾಗಲು ಸಾವಯವ ಕಾರ್ಬನ್ ಜೊತೆಗೆ ಸಾರಜನಕವೂ ಇರಬೇಕು. ಭೂಮಿಯಲ್ಲಿ ಶೇಕಡ ೫೬ರಷ್ಟು ಸಾವಯವ ಇಂಗಾಲ, ಶೇಕಡ ೬ರಷ್ಟು ಸಾರಜನಕ ಇದ್ದಾಗಲೆ ಪರಿಪೂರ್ಣ ಮತ್ತು ಸಂತೃಪ್ತ ಮಟ್ಟದ ಹ್ಯೂಮಸ್ ಸೃಷ್ಟಿ ಸಾಧ್ಯ. ಭೂಮಿಯ ಮೇಲ್ಪದರದಲ್ಲಿ ಹೊದಿಕೆ, ಕೆಳಗಿನ ೪.೫ ಇಂಚಿನಲ್ಲೆ ಹ್ಯೂಮಸ್ ಇರುವಂಥದ್ದೇ ನಿಸರ್ಗ ಕೃಷಿ. ಇಂಥ ಆವರಣದಲ್ಲಿ ವರ್ಷದ ೩೬೫ ದಿನವೂ ಮೈಕ್ರೋ ಕ್ಲೈಮೇಟ್ ತಾಂಡವವಾಡುತ್ತದೆ.

ಪಾರ್ಥೇನಿಯಂ ಬಗ್ಗೆ[ಬದಲಾಯಿಸಿ]

  • ಪಾರ್ಥೇನಿಯಂ ಕುರಿತು ನೀವ್ಯಾರೂ ಅಷ್ಟೊಂದು ಚಿಂತಿಸುವ ಅಗತ್ಯವಿಲ್ಲ. ಪಾರ್ಥೇನಿಯಂ ಅತ್ಯುತ್ತಮ ಮಲ್ಚಿಂಗ್ ಪರಿಕರ, ಮುಖ್ಯ ಬೆಳೆಗೆ ಪೈಪೋಟಿ ನೀಡುವ ಹಂತದಲ್ಲಿ ಮತ್ತು ಹೂ ಬಿಡುವ ಮುಂಚೆ ಅದನ್ನು ಬೇರುಸಹಿತ ಕಿತ್ತು ಹೊದಿಕೆಯನ್ನಾಗಿಸಿ, ಲಂಟಾನ ಮತ್ತು ಗಂಜಳದೊಂದಿಗೆ ಕುದಿಸಿ- ಪಾರ್ಥೇನಿಯಂ ಅನ್ನು ಕೀಟನಾಶಕವಾಗಿಯೂ ಬಳಸಬಹುದು.
  • ಈ ಪಾರ್ಥೇನಿಯಂ ಕೆಲವರ ಪಾಲಿಗೆ ಅಲರ್ಜಿಕಾರಕ, ಮಾರಣಾಂತಿಕ ವಿಪತ್ತುಗಳಿಗೆ ಕಾರಣವಾಗಿದೆ. ನಮ್ಮ ಸರಕಾರದವರು ಪಾರ್ಥೇನಿಯಂ ನಾಶಕ್ಕಾಗಿ ಜೈಕೋಗ್ರಾಮ ಕೀಟಗಳನ್ನು ಅಲ್ಲಲ್ಲಿ ಬಿಟ್ಟಿದ್ದಾರೆ. ಇವು ಪಾರ್ಥೇನಿಯಂ ಕಳೆಗಳನ್ನು ಹಾಗೆಯೆ ಬಿಟ್ಟು ಸೂರ್ಯಕಾಂತಿ, ಎಳ್ಳು, ಹುಚ್ಚೆಳ್ಳು ಜಾತಿಯ ಗಿಡಗಳಿಗೆ ಅಮರಿಕೊಂಡಿವೆ. ನಮ್ಮ ಮುಳ್ಳುಕೀರೆ, ಚೆನ್ನಂಗಿ ಅಥವಾ ಚಗಚೆ CASIA GRANDIFLORA, CASIA UTILATA ಸಸ್ಯಗಳು ಪಾರ್ಥೇನಿಯಂ ಸಸ್ಯಗಳನ್ನು ಸಮರ್ಥ ರೀತಿಯಲ್ಲಿ ಹತ್ತಿಕ್ಕುತ್ತವೆ ಮತ್ತು ನಿರ್ಮೂಲನೆಯನ್ನೂ ಮಾಡುತ್ತವೆ.
  • ಸಹಜ ಕೃಷಿಯ ಕೆ.ಎಂ.ಕೈಲಾಸಮೂರ್ತಿ ಪಾರ್ಥೇನಿಯಂ ನಿರ್ಮೂಲನಕ್ಕೆ ಅಮರಿಂತಾಸ್ ಮತ್ತು ಪುವೇರಿಯಾ ಗಿಡಗಳನ್ನು ಬೆಳೆಸಿದ್ದಾರೆ. ಈ ಅಮೆರಿಂತಾಸ್ ಮತ್ತು ಪುವೇರಿಯಾ ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸುತ್ತವೆ. ಹಾಗೆಯೇ ಚಗಚೆ ಗಿಡ. ಮಲ್ಚಿಂಗ್‌ಗಾಗಿ ಎಕ್ಕ ಮತ್ತು ಎಕ್ಕದ ಜಾತಿಯ ಗಿಡಗಳನ್ನು ಬೆಳೆಸಬಾರದು. ಅವುಗಳಲ್ಲಿ ಕೀಟನಾಶಕ ಗುಣಗಳಿರುವುದರಿಂದಾಗಿ ಜೀವಾಣುಗಳು ಸಾಯುತ್ತವೆ.
  • ಈ ಬಾರಿ ನಿಸರ್ಗ ಕೃಷಿ ಶುರುಮಾಡಿದ್ದೀರಿ, ಮಳೆ ಆಶ್ರಯ ಬೇರೆ; ಮಲ್ಚಿಂಗ್‌ಗಾಗಿ ಯಾವ ವ್ಯವಸ್ಥೆಯೂ ಇಲ್ಲ; ಅಂಥವರು ಮನೆಯಲ್ಲಿರುವ ರದ್ದಿ ಪೇಪರ್‌ಗಳನ್ನಾದರೂ ಬೆಳೆಯ ನಡುವೆ ಹೊದಿಕೆಯಾಗಿಸಿ. ಹಳೇ ಗೋಣಿಚೀಲ, ಹರಿದ ಹತ್ತಿ ಬಟ್ಟೆಗಳಿದ್ದರೆ ಬಳಸಿ (ಪಾಲಿಥಿನ್, ಪ್ಲಾಸ್ಟಿಕ್ ಹಾಳೆಗಳನು ಬಳಸಬೇಡಿ). ಪ್ಲಾಸ್ಟಿಕ್‌ನಿಂದಾಗಿ ತಾಪಮಾನ ಅಧಿಕವಾಗುತ್ತದೆ. ಜೀವಾಣುಗಳು ಸಂಕಟಕಾರಿ ಪರಿಸ್ಥಿತಿಯಲ್ಲಿ ಬಳಲುತ್ತವೆ.
  • ಯಥೇಚ್ಛ ಮಟ್ಟದಲ್ಲಿ ಹೊದಿಕೆಯ ಪರಿಕರಗಳಿದ್ದರೂ ನಮ್ಮ ಬಹಳಷ್ಟು ತೋಟದ ಬೆಳೆಗಾರರು ಹೊದಿಕೆಯ ಮಹತ್ವ ಅರ್ಥಮಾಡಿಕೊಂಡಿರುವುದಿಲ್ಲ. ತೋಟಗಳಲ್ಲಿ ಸಾಕಷ್ಟು ನೆರಳಿದ್ದರೂ ತಂಪಿನ ವಾತಾವರಣವಿರುವುದಿಲ್ಲ. ಮತ್ತು ಹ್ಯೂಮಸ್ ನಿರ್ಮಾಣವಾಗುವುದಿಲ್ಲ. ಆಯಾಯ ಬೆಳೆಗಳಿಗೆ ಅಗತ್ಯವಾದ ಸೂರ್ಯ ರಶ್ಮಿಗಳ ಹೊಂದಾಣಿಕೆಯೂ ಅಲ್ಲಿ ಇರುವುದಿಲ್ಲ.
  • ಅಂಥ ತೋಟವಿರುವ ರೈತರು ತೆಂಗು, ಅಡಿಕೆ, ಬಾಳೆ ಸಾಲುಗಳ ನಡುವೆ ಮೂರು ಅಡಿ ಅಗಲ, ಅರ್ಧ ಅಡಿ ಆಳದ ಕಾಲುವೆಗಳನ್ನು ತೋಡಿರಿ. ಕಾಲುವೆಯ ಮಣ್ಣನ್ನು ಎರಡೂಬದಿಯ ದಿಬ್ಬದ ಮೇಲೆ ಹರಡಿ. ದಿಬ್ಬದ ಎರಡೂ ಕಡೆಯೂ ಪ್ರತಿ ಒಂದು ಅಡಿಗೆ ಒಂದರಂತೆ ಅಲಸಂದೆ, ಸಜ್ಜೆ, ಜೋಳ, ರಾಗಿ, ನವಣೆ, ಹಾಗಲ, ಕುಂಬಳ, ಹೀರೆ, ಸೌತೆ, ಕಲ್ಲಂಗಡಿ, ಕರಬೂಜ ಬೀಜಗಳನ್ನು ನೆಡಬೇಕು. ಮಳೆ ಶುರುವಾಗುವ ಮುಂಚೆ ಬೀಜೋಪಚಾರ ಮಾಡಿದ ಬೀಜಗಳನ್ನು ನೆಡಬೇಕು.
  • ಮಳೆ ಬಿದ್ದ ಮೇಲೆ ಇವೆಲ್ಲ ಚಿಗುರುತ್ತವೆ, ಬೆಳೆಯುತ್ತವೆ. ಬಳ್ಳಿ ಗಿಡಗಳು ಎಲ್ಲೆಲ್ಲಿ ಬಿಸಿಲು ಬೀಳುತ್ತೋ ಅಲ್ಲೆಲ್ಲ ಹಬ್ಬಿ ಇಡೀ ತೋಟವನ್ನೂ ಆವರಿಸಿಕೊಳ್ಳುತ್ತವೆ. ಫಸಲು ಬಂದಾಗ ತೆನೆಗಳನ್ನು ಕಟಾವು ಮಾಡಿ ಗಿಡಗಳನ್ನು ಹಾಗೆಯೇ ಬಿಡಿ. ಬಿತ್ತನೆಗಾಗಿಯೂ ಕೆಲ ಫಸಲುಗಳನ್ನು ಹಾಗೆಯೇ ಬಿಡಿ. ಬೀಜಗಳನ್ನು ಸಂಗ್ರಹಿಸಿಡುವ ತಾಪತ್ರಯ ಬೇಡ.
  • ಹಕ್ಕಿಗಳು, ಇಲಿಗಳು, ಕೀಟಗಳು ತಿಂದು ಅಳಿದುಳಿದ ಬೀಜಗಳು ಮತ್ತೆ ಮೊಳೆತು ಇಡೀ ತೋಟವನ್ನು ಆವರಿಸಿಕೊಳ್ಳುವುದನ್ನು ಗಮನಿಸಿ. ನೀವು ನಿಮ್ಮ ಜವಾಬ್ದಾರಿಗಳನ್ನು ನಿಸರ್ಗಕ್ಕೆ ಹಸ್ತಾಂತರಿಸಿದರೆ ಮುಂದಿನ ಬೀಜಗಳನ್ನು ಅವು ಸಂರಕ್ಷಿಸುತ್ತವೆ. ಈ ತೋಟಗಳನ್ನು ಉಳುವ ಸಾಹಸಕ್ಕೆ ಕೈಹಾಕಬೇಡಿ. ಈ ಹಿಂದೆ ತೋಡಿದ ಆ ಕಾಲುವೆಯನ್ನು ತೆಂಗು ಮತ್ತು ಅಡಿಕೆಯ ಗರಿಗಳಿಂದ ಮುಚ್ಚಿ.

ಪ್ರಸ್ತುತವಾಗಿ[ಬದಲಾಯಿಸಿ]

ಕೈಲಾಸಮೂರ್ತಿಯವರ 'ಕೃಷಿ ವಿಚಾರ ಸಂಕಿರಣ'ಗಳು ವಿಜ್ಞಾನಿಗಳನ್ನೂ ಕೃಷಿಕರನ್ನೂ ಆಕರ್ಷಿಸಿವೆ. ಅವರ ತೋಟ ಸಹಜ ಕೃಷಿಯ ಅಧ್ಯಯನದ ಒಂದು ಪ್ರಯೋಗಶಾಲೆಯಾಗಿದೆ. ಆಧುನಿಕ ಕೃಷಿಯ ಅಪಾಯಗಳನ್ನು ಮನಗಂಡ ಹಲವರು 'ಸಹಜ ಕೃಷಿಗೆ' ಮಗ್ಗಲು ಬದಲಾಯಿಸುತ್ತಿರುವುದು ಕಾಣಬರುತ್ತಿದೆ! ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭ್ಯವಾಗಿವೆ.

ಪ್ರಶಸ್ತಿ, ಪುರಸ್ಕಾರಗಳು[ಬದಲಾಯಿಸಿ]

  • ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2011-12ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿ ಪ್ರಕಟಿಸಲಾಗಿದೆ[೧].

ಸಂಪರ್ಕಿಸ ಬೇಕಾದ ವಿಳಾಸ[ಬದಲಾಯಿಸಿ]

ಆಧುನಿಕ ಕೃಷಿ ಪದ್ದತಿಯ ಬಗ್ಗೆ ಮತ್ತಷ್ಟು ವಿಷಯಗಳನ್ನು ತಿಳಿಯ ಬಯಸುವವರು ನೇರವಾಗಿ ಎಂ.ಕೆ.ಕೈಲಾಸಮೂರ್ತಿ, ಅವರನ್ನೇ ಸಂಪರ್ಕಿಸಬಹುದು. ಅವರ ವಿಳಾಸ-

  • ಆಧುನಿಕ ಕೃಷಿ ಋಷಿ- ಶ್ರೀ.ಎಂ.ಕೆ. ಕೈಲಾಸಮೂರ್ತಿ
  • ದೊಡ್ಡಿಂದುವಾಡಿ,
  • ಕೊಳ್ಳೆಗಾಲ ತಾ. ಚಾಮರಾಜನಗರ ಜಿಲ್ಲೆ,
  • ಫೋ: ೯೮೮೦೧೮೫೭೫೭.

ಉಲ್ಲೇಖಗಳು[ಬದಲಾಯಿಸಿ]

[೨] [೩] [೪] [೫] [೬] [೭]

ಬಾಹ್ಯಕೊಂಡಿಗಳು[ಬದಲಾಯಿಸಿ]

  1. http://vijaykarnataka.indiatimes.com/state/karnataka/-/articleshow/13825407.cms
  2. http://www.kannadaprabha.com/districts/chamarajanagar/%E0%B2%A8%E0%B2%BE%E0%B2%B3%E0%B3%86%E0%B2%AF%E0%B2%BF%E0%B2%82%E0%B2%A6-%E0%B2%AC%E0%B2%A3%E0%B3%8D%E0%B2%A3%E0%B2%BE%E0%B2%B0%E0%B2%BF-%E0%B2%85%E0%B2%AE%E0%B3%8D%E0%B2%AE%E0%B2%A8-%E0%B2%9C%E0%B2%BE%E0%B2%A4%E0%B3%8D%E0%B2%B0%E0%B3%86/32330.html[ಶಾಶ್ವತವಾಗಿ ಮಡಿದ ಕೊಂಡಿ]
  3. http://vijaykarnataka.indiatimes.com/district/chamarajnagara/District-kannada-meet-concludes/articleshow/46890217.cms
  4. "ಆರ್ಕೈವ್ ನಕಲು". Archived from the original on 2016-03-05. Retrieved 2015-06-09.
  5. "ಆರ್ಕೈವ್ ನಕಲು". Archived from the original on 2016-03-05. Retrieved 2015-06-09.
  6. http://timesofindia.indiatimes.com/city/bengaluru/Green-is-their-colour/articleshow/13858504.cms
  7. http://akkaonline.org/documents/VeerashivaSabha.pdf