ವಿಷಯಕ್ಕೆ ಹೋಗು

ಪಾರ್ಥೇನಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾರ್ಥೆನಿಯಮ್

ಪಾರ್ಥೇನಿಯಮ್ - ಆಸ್ಟರೇಸಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಮೂಲಿಕೆ. ಪಾರ್ಥೇನಿಯಮ್ ಹಿಸ್ಟಿರೋಫೋರಸ್ ಇದರ ಶಾಸ್ತ್ರೀಯ ನಾಮ. ಇದಕ್ಕೆ ಮೂಲಂಗಿ ಕಳೆ, ಸಫೇದ್‍ಟೋಪಿ, ಕಾಂಗ್ರೆಸ್ ಗಿಡ ಎಂಬ ವಿವಿಧ ಹೆಸರುಗಳುಂಟು. ಸುಮಾರು 1-1.5 ಮೀಟರ್ ಎತ್ತರ ಬೆಳೆಯುತ್ತದೆ. ಗಿಡದ ತುಂಬ ಎಲೆಗಳು ಸೊಂಪಾಗಿ ಬೆಳೆದು ಗಿಡ ಹಚ್ಚಹಸುರಾಗಿರುತ್ತದೆ. ಇದರ ಎಲೆಗಳು ಮೂಲಂಗಿಯ ಎಲೆಗಳನ್ನು ಹೋಲುತ್ತವೆ. ಇದು ರೈಲು ಹಳಿಗಳ ಬದಿಯಲ್ಲಿ ಕೊಳಚೆ ಪ್ರದೇಶಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಳೆಗಿಡವಾಗಿ ಬೆಳೆಯುತ್ತದೆ. ಅಲ್ಲದೆ ಇತ್ತೀಚೆಗೆ ಇದು ಆಲೂಗೆಡ್ಡೆ, ನೆಲಗಡಲೆ ಮೊದಲಾದ ಬೆಳೆಗಳ ಮಧ್ಯೆಯೂ ಬೆಳೆಯತೊಡಗಿದೆ. ಬೆಳೆಗಳಿಗೆ ಹಾಕುವ ಗೊಬ್ಬರಗಳ ಜೊತೆ ಈ ಸಸ್ಯದ ಬೀಜಗಳು ಸೇರಿ ಬೆಳೆಯ ಮಧ್ಯೆ ಇವೇ ಸೊಂಪಾಗಿ ಬೆಳೆದು ನಿಂತು ಬೆಳೆಗೆ ಅಪಾಯವುಂಟುಮಾಡುತ್ತವೆ. ಇತ್ತೀಚೆಗೆ ಭಾರಿ ಪ್ರಮಾಣದ ಕಳೆ ಸಸ್ಯವಾಗಿದೆ.

ಬಯಲಿನಲ್ಲಿ

ಉತ್ತರ ಮತ್ತು ಮಧ್ಯ ಅಮೆರಿಕ, ವೆಸ್ಟ್‍ಇಂಡೀಸುಗಳು ಇದರ ತವರು. ಭಾರತಕ್ಕೆ ಆಮದಾಗುವ ಆಹಾರ ಪದಾರ್ಥಗಳ ಜೊತೆ ಇದರ ಬೀಜಗಳು ಸೇರಿ ಇದು ಭಾರತದಲ್ಲಿ ಹರಡಲು ಕಾರಣವಾಗಿದೆ ಎನ್ನಲಾಗಿದೆ. ಪ್ರತಿ ಸಸ್ಯವೂ ತನ್ನ ಜೀವಿತಾವಧಿಯಲ್ಲಿ ಸರಾಸರಿ ಸುಮಾರು 5,000 ಬೀಜಗಳನ್ನು ಉತ್ಪಾದಿಸುತ್ತದೆ. ಬೀಜಗಳು ತುಂಬ ಹಗುರವಾಗಿರುವುದರಿಂದ ಗಾಳಿಯಲ್ಲಿ ತೂರಿಕೊಂಡೊ ರಸ್ತೆಯಲ್ಲಿ ಓಡಾಡುವ ವಾಹನಗಳ ಚಕ್ರಗಳಿಗೆ ಅಂಟಿಕೊಂಡೊ ಬೇರೆ ಬೇರೆ ಸ್ಥಳಗಳಿಗೆ ಹರಡುತ್ತವೆ. ಸ್ವಲ್ಪವೇ ಮಣ್ಣಿದ್ದರೂ ಗಿಡ ಬಹಳ ಸೊಂಪಾಗಿ ಬೆಳೆಯುತ್ತದೆ.

ಅಪಾಯಗಳು[ಬದಲಾಯಿಸಿ]

ಪಾರ್ಥೇನಿಯಮನ್ನು ಮುಟ್ಟಿದರೆ ಮೈಮೇಲೆ ತುರಿಕೆ ಉಂಟಾಗುತ್ತದಲ್ಲದೆ ಮೈ, ಕೈ, ಕಾಲು, ಬೆನ್ನು ಮತ್ತು ಮುಖದ ಮೇಲೆಲ್ಲ ಗುಳ್ಳೆಗಳೇಳುವುವು. ಮಕ್ಕಳಿಗೆ ಬಹಳಷ್ಟು ಅಲರ್ಜಿಯಾಗುವುದಿದೆ. ಈ ಸಸ್ಯ ಹೂ ಬಿಡುವಾಗ, ಬೀಜ ಪಸರಿಸುವಾಗ ಅಸ್ತಮಾ ಹಾಗೂ ಇತರ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವುದಿದೆ. ಇದರಿಂದ ಜ್ವರ, ಆಸ್ತಮ, ಚರ್ಮವ್ಯಾಧಿ, ವಾತಶೂಲೆ ಇತ್ಯಾದಿ ಕಾಯಿಲೆಗಳು ಉಂಟಾಗುತ್ತವೆ.

ಉಪಯೋಗಗಳು[ಬದಲಾಯಿಸಿ]

ಆದರೆ, ಇದರಿಂದ ಕೆಲವು ಉಪಯೋಗಗಳು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ತ್ರೈಮಾಸಿಕದಲ್ಲಿ (1956-57) ತಿಳಿಸಲಾಗಿದೆ. ಜ್ವರ ಮೊದಲಾದ ಕಾಯಿಲೆಗಳಿಗೆ ಇದನ್ನು ಪರಿಷ್ಕರಿಸಿ ಟಾನಿಕ್‍ನಂತೆ ಉಪಯೋಗಿಸಬಹುದೆಂದೂ, ಇದರ ಬೇರಿನ ಕಷಾಯವನ್ನು ಭೇದಿಗೆ ಔಷಧಿಯಾಗಿ ಕೊಡುವರೆಂದೂ ಇದರಲ್ಲಿರುವ ಇನ್ನೂ ಪತ್ತೆಯಾಗದ ಕೆಲವು ಆಮ್ಲಗಳೇ ಇದಕ್ಕೆ ಕಾರಣವೆಂದೂ ತಿಳಿಯಲಾಗಿದೆ. ಕ್ಯಾನ್ಸರ್ ರೋಗಕ್ಕೂ ಇದು ಉಪಯುಕ್ತವಾಗಬಹುದೆಂಬ ಅಭಿಪ್ರಾಯವು ಇದೆ. ಸದ್ಯಕ್ಕೆ ಇದರ ಉಪಯುಕ್ತತೆಗಿಂತ ಅಪಾಯವೇ ಹೆಚ್ಚಾಗಿರುವುದರಿಂದ ಇದನ್ನು ನಾಶಪಡಿಸುವ ಯತ್ನಗಳೇ ರೂಢಿಯಲ್ಲಿವೆ. ಪಾರ್ಥೇನಿಯಮನ್ನು ಕಿತ್ತು ಸುಟ್ಟುಹಾಕುವುದು ಇದರ ನಿರ್ಮೂಲನದ ಒಂದು ಮಾರ್ಗವಾದರೆ, ರಾಸಾಯನಿಕಗಳನ್ನು ಉಪಯೋಗಿಸಿ ಇದನ್ನು ನಾಶ ಮಾಡುವುದು ಇನ್ನೊಂದು. ಎಳೆಯ ಸಸಿಗಳಿಗೆ 2 ಕೆಜಿ 2,-4 ಆ,ಸೋಡಿಯಂ ಉಪ್ಪು ಆಥವಾ 2 ಲೀಟರ್ ಅನ್ಸಾರ್ 529 ನ್ನು 400 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸುವುದು, ಬಲಿತ ಗಿಡಗಳಿಗೆ 4 ಲೀಟರ್ ಅನ್ಸಾರ್‍ನ್ನು 400 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸುವುದು, ಅಥವಾ 3 ಲೀಟರ್ ವಿಡಾರ್‍ನ್ನು 96 (2.4 ಅಮೈನ್) 1 ಲೀಟರ್ ಟೀಪಾಲ್ ಮತ್ತು 2 ಕೆಜಿ ಯೂರಿಯಾವನ್ನು 300 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: