ಎಂ.ಪಿ ಪ್ರಕಾಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಎಂ.ಪಿ ಪ್ರಕಾಶ್ (1941-2011) ಪ್ರಕಾಶ್ ಒಬ್ಬ ಸರಳ ಸಜ್ಜನ ರಾಜಕಾರಣಿಯಾಗಿದ್ದರು.ಅವರು ಮೂಲತಃ ವಕೀಲರಾಗಿ 1964ರಲ್ಲಿ ನಾರಾಯಣ ದೇವರ ಕೆರೆಯಿಂದ ಹಡಗಲಿಗೆ ಆಗಮಿಸಿದರು. ರಾಜಕೀಯ ಜೀವನ : 1973ರಲ್ಲಿ ಪದವೀಧರ ಕ್ಷೇತ್ರದಿಂದ ಎಂಎಲ್‌ಸಿ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಯಗೊಳ್ಳುವ ಮೂಲಕವಾಗಿ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. ನಂತರದಲ್ಲಿ 1979ರಲ್ಲಿ ಹಡಗಲಿ ವಿಧಾನಸಭಾ ಕ್ಷೇತ್ರದಿಂದ ಕೊಗಳಿ ಕರಿಬಸವನಗೌಡ್‌ರವರ ವಿರುದ್ದವಾಗಿ ಸ್ಪರ್ಧಿಸಿ ಪುನಃ ಪರಾಭವಗೊಂಡರು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮುಂದೆ 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಜಯದ ರುಚಿ ಕಂಡರು. ಅಂದಿನಿಂದ ರಾಜಕೀಯ ಕ್ಷೇತ್ರದಲ್ಲಿ ಒಮ್ಮೆ ಗೆಲವು ಸಾಧಿಸುತ್ತಾ ಮತ್ತೊಮ್ಮೆ ಸೋಲನ್ನು ಅನುಭವಿಸುತ್ತಾ ಸೋಲು ಗೆಲುವನ್ನು ಸಮನಾಗಿ ಹಂಚಿಕೊಂಡಿದ್ದಾರೆ. ಸೋತಾಗ ಎದೆಗುಂದದೆ, ಗೆದ್ದಾಗ ಬೀಗದೆ ಜನರ ಸೇವೆಯನ್ನು ಮಾಡುತ್ತಾ ಉನ್ನತ ಸ್ಥಾನ ಮಾನಕ್ಕೇರಿದವರು. 1985ರಲ್ಲಿ ಸಿ.ಅಂದಾನಪ್ಪನವರ ವಿರುದ್ದ ಜಯಶೀಲರಾಗಿ ಕೃಷಿ, ಕನ್ನಡ ಮತ್ತು ಸಂಸ್ಕೃತಿ, ಬಿಡಿಎ, ಹೀಗೆ ಹತ್ತು ಹಲವಾರು ಖಾತೆಯನ್ನು ನಿಭಾಯಿಸುವ ಮೂಲಕವಾಗಿ ಸಂಸತ್ತಿನಲ್ಲಿ ಒಬ್ಬ ಉತ್ತಮ ಸಂಸದೀಯ ಪಟು ಎನ್ನುವ ಕೀರ್ತಿಗೆ ಪಾತ್ರರಾದರು. ನಂತರ 1994ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ವಿಜಯಮಾಲೆ ಧರಿಸಿ ಗ್ರಾಮೀಣಾಭಿವೃದ್ದಿ ಹಾಗೂ ಪಂಜಾಯತ್ ರಾಜ್ ಸಚಿವರಾಗಿ ನಾಡಿನ ಪ್ರಗತಿಗಾಗಿ ಶ್ರಮಿಸಿ ನಂತರ 2006ರಲ್ಲಿ ಉಪಮುಖ್ಯಮಂತ್ರಿ ಸ್ಥಾನ ಪಡೆದು ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ಅವರ ಕನಸಿನ ಕೂಸಾದ ಸಿಂಗಟಾಲೂರು ಏತ ನೀರಾವರಿ ಯೋಜನೆ, ಹಡಗಲಿಯಲ್ಲಿ ಬಸ್ ನಿಲ್ದಾಣ, ಸಾರಿಗೆ ಘಟಕ, ಸಬ್‌ಜೈಲ್ ಲೋಕೋಪಯೋಗಿ ಇಲಾಖೆಯ ವಿಭಾಗ ಕಛೇರಿ, ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಕಛೇರಿ, ಮಿನಿ ವಿಧಾನಸೌಧ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಗದಗ-ಹಾಗೂ ಹಡಗಲಿ ಜಿಲ್ಲೆಯ ಜನತೆಗೆ ಸಂಪರ್ಕ ಕಲ್ಪಿಸಲು ತುಂಗಭದ್ರಾ ನದಿಗೆ ಮೊದಲಗಟ್ಟೆ ಮುಂದೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯೊಳಗೊಂಡಂತೆ ಇನ್ನೂ ಅನೇಕ ಅಭಿವೃದ್ದಿ ಕೆಲಸಗಳನ್ನು ಹಡಗಲಿಯಲ್ಲಿ ಕೈಗೊಂಡಿದ್ದರು. ಕ್ಯಾನ್ಸರ್ ಪೀಡಿತರಾಗಿದ್ದ ಇವರು ೦೮.೦೨.೨೦೧೧ರ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಲೇಖಕ, ರಂಗಕರ್ಮಿ, ನಟ ಸಹ ಆಗಿದ್ದ ಮೃತರು ಪತ್ನಿ, ಒಬ್ಬ ಮಗ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.