ವಿಷಯಕ್ಕೆ ಹೋಗು

ಉಲೇಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಲೇಮಾ- ಇಸ್ಲಾಮೀ ಪಂಡಿತರು: ಅಪಾರ ಜ್ಞಾನ(ಇಲ್ಮ್) ಹೊಂದಿರುವವರು: ದೈವಜ್ಞರು, ಧರ್ಮಸೂತ್ರಗಳನ್ನೆಲ್ಲ ಚೆನ್ನಾಗಿ ತಿಳಿದವರು, ನ್ಯಾಯವಿದರು; ತತ್ತ್ವಪ್ರಯೋಗಗಳೆರಡರಲ್ಲೂ ಪರಿಣತರು; ಬೋಧಕರು.

ಮುಸ್ಲಿಂ ಜಗತ್ತಿನಲ್ಲಿ ಪಂಡಿತರದೇ ಪರಮಸ್ಥಾನ. ಕುರಾನಿನಲ್ಲಿ ಹೇಳಿರುವ ವಿಧಿಗಳನ್ನೂ ಕಾಲಾನುಗುಣವಾಗಿ ಈ ಗ್ರಂಥದಿಂದ ಹೊಮ್ಮಿ ಬೆಳೆದು ಶಾಸ್ತ್ರಜ್ಞರಿಂದ ಸೃಷ್ಟಿಯಾಗಿ ಪಂಡಿತವರೇಣ್ಯರಿಂದ ಅಂಗೀಕೃತವಾಗಿರುವ ಎಲ್ಲ ಸೂತ್ರಗಳನ್ನೂ ಬಲ್ಲವರಾದ ಇವರದೇ ಈ ವಿಚಾರಗಳಲ್ಲಿ ಕೊನೆಯ ಮಾತು. ಎಲ್ಲ ಜ್ಞಾನಿಗಳನ್ನೂ ಉಲೇಮಾ ಎನ್ನುವರಾದರೂ ನೀತಿ ನಡೆವಳಿಕೆ ನ್ಯಾಯವಿಚಾರಗಳಲ್ಲಿ ನಿರ್ಣಯ ನೀಡುವ ಅಧಿಕಾರ ಹೊಂದಿರುವವರನ್ನೇ ಹೀಗೆ ಸಂಬೋಧಿಸುವುದು ವಾಡಿಕೆ.

ಮುಸ್ಲಿಂ ರಾಜ್ಯಗಳಲ್ಲಿ ಈ ವಿಚಾರಗಳಿಗಾಗಿ ಪಂಡಿತಾಧಿಕಾರಿಗಳ ಮಂಡಲಿಗಳಿರುತ್ತವೆ. ಈ ಮಂಡಲಿಯನ್ನು ಉಲೇಮಾ ಎನ್ನುವರು. ಈಜಿಪ್ಟಿನಲ್ಲಿ ನಾಲ್ಕು ನ್ಯಾಯಪಂಥಗಳ ಮುಖ್ಯರೂ ಮುಖ್ಯ ನ್ಯಾಯಾಧೀಶನೂ ಷರೀಫರ ಮುಖ್ಯಸ್ಥನೂ ಇತರರೂ ಉಲೇಮಾ ಮಂಡಲಿಯ ಸದಸ್ಯರಾಗಿರುತ್ತಿದ್ದರು.

ಉಲೇಮಾ ಬಹುವಚನ ಶಬ್ದ. ಇದರ ಏಕವಚನ ಅಲೀಂ, ಅರೀಫ್ ಎನಿಸಿಕೊಳ್ಳುವವನು ಅಲೀಂಗಿಂತ ಭಿನ್ನ. ಅಲೀಮನ ಜ್ಞಾನಕ್ಕೆ ಸಂಪ್ರದಾಯವೂ ತರ್ಕವೂ ಆಧಾರ; ಅರೀಫ್ ದ್ರಷ್ಟಾರ, ಮುಮುಕ್ಷು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉಲೇಮಾ&oldid=817076" ಇಂದ ಪಡೆಯಲ್ಪಟ್ಟಿದೆ