ಉಪರೂಪಕಗಳು
ಉಪರೂಪಕಗಳು: ರೂಪಕದ ಅವಾಂತರ ಭೇದಗಳು. ನಾಟಿಕೆ, ತ್ರೋಟಕ, ಗೋಷ್ಠೀ, ಸಟ್ಟಕ, ನಾಟ್ಯರಾಸಕ, ಪ್ರಸ್ಥಾನಕ, ಉಲ್ಲಾಸ್ಯ, ಕಾವ್ಯ, ಪ್ರೇಂಖಣ, ರಾಸಕ, ಸಂಲಾಪಕ ಶ್ರೀಗದಿತ, ಶಿಲ್ಪಿಕ, ವಿಲಾಸಿಕಾ, ದುರ್ಮಲ್ಲಿಕಾ, ಪ್ರಕರಣಿಕಾ, ಹಲ್ಲೀಶ, ಭಾಣಿಕ-ಹೀಗೆ ಸಂಖ್ಯೆಯಲ್ಲಿ ಇವು ಹದಿನೆಂಟು.
ಸಾಹಿತ್ಯ ದರ್ಪಣದಲ್ಲಿ ಎಲ್ಲ ಉಪರೂಪಕಗಳ ಲಕ್ಷಣವನ್ನೂ ತಿಳಿಸಲಾಗಿದೆ. ಇಲ್ಲಿ ಬಹು ಪ್ರಸಿದ್ಧವಾದ ನಾಟಿಕೆ ಮತ್ತು ತ್ರೋಟಕಗಳ ವಿವರಗಳನ್ನು ಮಾತ್ರ ಕೊಟ್ಟಿದೆ.
ನಾಟಿಕೆ
[ಬದಲಾಯಿಸಿ]ಭರತನೇ ನಾಟಕದ ಅವಾಂತರ ಭೇದ ನಾಟಿಕೆ ಎಂದು ತಿಳಿಸಿದ್ದಾನೆ. ವಸ್ತು ಕಲ್ಪಿತ, ನಾಯಿಕೆಯ ಪಾತ್ರಕ್ಕೇ ಹೆಚ್ಚು ಪ್ರಾಶಸ್ತ್ಯ. ಶುದ್ಧ ಲಕ್ಷಣದಿಂದ ಕೂಡಿದಾಗ ನಾಟಿಕೆ ಎನಿಸಿದರೆ ಶುದ್ಧಾಶುದ್ಧವಾಗಿ ಮಿಶ್ರಿತ ಲಕ್ಷಣದಿಂದ ಕೂಡಿದ್ದಲ್ಲಿ ಪ್ರಕರಣಿಕೆ ಎನಿಸುತ್ತದೆ. ನಾಟಿಕೆಯಲ್ಲಿ ನಾಯಕ ಪ್ರಖ್ಯಾತ, ಧೀರಲಲಿತ, ಹೆಂಡತಿ ಜೇಷ್ಠೆ, ಪ್ರಗಲ್ಭೆ, ಮಾನವತಿ, ನಾಯಿಕೆ ರಾಜವಂಶೀಯಳು, ಮುಗ್ಧೆ, ಅಂತಃಪುರವಾಸಿ, ಸಂಗೀತಾಭ್ಯಾಸಿ, ನಾಯಕಾನುರಕ್ತೆ. ಹಿರಿಯಳ ಭಯದಿಂದ ಅಂಜುತ್ತ ನಾಯಕ ಕೊನೆಗೆ ಆಕೆಯ ಅನುಗ್ರಹದಿಂದ ನಾಯಿಕೆಯನ್ನು ಪಡೆಯುವನು. ಉದಾ: ರತ್ನಾವಳೀ.
ತ್ರೋಟಕ
[ಬದಲಾಯಿಸಿ]ವಸ್ತು ಪ್ರಸಿದ್ಧ, ಅಂಕಗಳು ವಿಷಮ (ಐದು, ಏಳು, ಒಂಬತ್ತು). ರಸ ಶೃಂಗಾರ. ನಾಯಕ ನಾಯಿಕೆಯರಲ್ಲಿ ದೈವಾಂಶ ಮಾನವಾಂಶ ಎರಡೂ ಇರಬೇಕು. ಎಲ್ಲ ಅಂಕಗಳಲ್ಲೂ ವಿದೂಷಕನಿರಬೇಕು. ಅವನ ಪಾತ್ರವೂ ಗಣ್ಯವಾಗಿರಬೇಕು. ಉಳಿದೆಲ್ಲ ಭಾಗಗಳಲ್ಲೂ ನಾಟಕದಂತೆ ಸಂಧಿ, ಸಂಧ್ಯಾಂಗ ರಚನೆ. ಅಂದರೆ ಇಲ್ಲಿ ದೇವ ಮರ್ತ್ಯಗಳ ಮಧುರ ಮಿಲನವೆಂದಂತಾಗುವುದು. ಉದಾ:ವಿಕ್ರಮೋರ್ವಶೀಯ. ಉಳಿದ ಉಪರೂಪಕಗಳಲ್ಲಿ ಅಲ್ಪಸ್ವಲ್ಪ ಭೇದವಿರುವುದರಿಂದ ಅವನ್ನು ಕೇವಲ ನಾಮನಿರ್ದೇಶನ ಮಾಡಿ ಉದಾಹರಿಸಲಾಗಿದೆ. ಹೆಸರಿನಿಂದ ಗುಣಲಕ್ಷಣಗಳನ್ನು ಊಹಿಸಬಹುದು.
ಉಳಿದ ಹದಿನಾರು
[ಬದಲಾಯಿಸಿ]1. ಗೋಷ್ಠೀ : ರೈವತ ಮದನಿಕಾ, 2. ಸಟ್ಟಕ ಮಂಜರೀ, 3. ನಾಟ್ಯ ರಾಸಕ: ನರ್ಮವತೀ, ವಿಲಾಸವತೀ, 4. ಪ್ರಸ್ಥಾನಕ: ಶೃಂಗಾರ ತಿಲಕ, 5. ಉಲ್ಲಾಸ್ಯ: ದೇವೀ ಮಹಾದೇವ, 6. ಕಾವ್ಯ: ಗೌಡವಿಜಯ, ಯಾದವೋದಯ, 7. ಪ್ರೇಂಖಣ: ತ್ರಿಪುರ ಮರ್ದನ, 8. ರಾಸಕ: ಮೇನಕಾಹಿತ, 9. ಸಂಲಾಪಕ : ಮಾಯಾಕಾಪಾಲಿಕ, 10.ಶ್ರೀಗದಿತ: ರಾಮಾನಂದ, 11. ಶಿಲ್ಪಿಕ : ಕನಕವತೀಮಾಧವ, 12. ವಿಲಾಸಿಕಾ:, 13. ದುರ್ಮಲ್ಲಿಕಾ: ಬಿಂದುಮತೀ, 14. ಪ್ರಕರಣಿಕಾ, 15. ಹಲ್ಲೀಶ: ಕೇಲಿರೈವತಕ, 16. ಭಾಣಿಕಾ : ವೀಣಾವತೀ,
ಇನ್ನೂ ನಾಲ್ಕು
[ಬದಲಾಯಿಸಿ]ಶಾರದಾತನಯನ ಅಭಿಪ್ರಾಯದಂತೆ ಇನ್ನೂ ನಾಲ್ಕಿವೆ : 1. ಪಾರಿಜಾತಲತಾ : ಗಂಗಾತರಂಗಿಕಾ, 2. ಕಲ್ಪವಲ್ಲೀ : ಮಾಣಿಕ್ಯವಲ್ಲಿಕಾ 3. ಡೊಂಬಿಕಾ: ಗುಣ ಮಾಲಾ, ಚೂಡಾಮಣಿ, 4. ಭಾಣ: ನಂದೀಮತೀ, ಶೃಂಗಾರ ಮಂಜರೀ.
ಇನ್ನಷ್ಟು ಮಾಹಿತಿ
[ಬದಲಾಯಿಸಿ]ಈ ಉದಾಹರಣೆಗಳು ಅಭಿನವ ಭಾರತ, ಸರಸ್ವತೀಕಂಠಾಭರಣ, ಶೃಂಗಾರ ಪ್ರಕಾಶ, ದಶರೂಪಕ, ನಾಟ್ಯ ದರ್ಪಣ, ಸಾಹಿತ್ಯದರ್ಪಣ ಇತ್ಯಾದಿ ಗ್ರಂಥಗಳಲ್ಲಿದ್ದರೂ ಕೇವಲ ಹೆಸರಿಗೆ ಮಾತ್ರ ಇವೆ. ಉಪರೂಪಕಗಳಲ್ಲಿ ನಾಟಿಕೆ, ತ್ರೋಟಕ, ಸಟ್ಟಕ ಇಷ್ಟು ಮಾತ್ರ ಪ್ರಚಲಿತ. ಉಪರೂಪಕಗಳು ಎಷ್ಟು, ಅವುಗಳಲ್ಲಿ ಯಾವುವು ಉಪಲಬ್ಧ ಎಂಬ ವಿಷಯವನ್ನು ಎಂ. ಕೃಷ್ಣಮಾಚಾರ್ಯರು ತಮ್ಮ ಸಂಸ್ಕೃತ ಸಾಹಿತ್ಯ ಚರಿತ್ರೆಯಲ್ಲಿ ಸೂಚಿಸಿರುವರು. ಉಪರೂಪಕಗಳಲ್ಲಿ ನಾಟ್ಯಾಂಶ ಹೆಚ್ಚು; ಜಾನಪದ ನೃತ್ಯಗಳಿಗೂ ಪ್ರವೇಶವುಂಟು. ಗೀತಕ್ಕೂ ಪ್ರಾಶಸ್ತ್ಯ; ಆದರೆ ಇವಕ್ಕೆ ನಾಟಕದ ಗಾಂಭೀರ್ಯವಿಲ್ಲ. ಪ್ರಾಚೀನ ಭಾರತದ ರಂಗಭೂಮಿಯ ಪರಿಜ್ಞಾನಕ್ಕೆ ಜನಪದ ನಾಟಕ ಜಾತಿಗಳ ವಿಕಾಸದ ಕಲ್ಪನೆಗೆ ಇವುಗಳ ಅಧ್ಯಯನ ಉಪಯುಕ್ತವಾಗುತ್ತದೆ.