ಉದ್ಯಮಘಟಕ ಮೀಮಾಂಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದ್ಯಮಘಟಕ ಮೀಮಾಂಸೆ ಎಂದರೆ ಒಂದು ಉದ್ಯಮಘಟಕಕ್ಕೆ ಸಂಬಂಧಿಸಿದ ಬೆಲೆ, ಉತ್ಪತ್ತಿ, ಬೆಳವಣಿಗೆ ಮುಂತಾದ ಆರ್ಥಿಕ ಚರಗಳ ನಿರ್ಧಾರವನ್ನು ಕುರಿತ ಅರ್ಥ ಮೀಮಾಂಸೆ.

ಹಿನ್ನೆಲೆ[ಬದಲಾಯಿಸಿ]

ಈ ಮೀಮಾಂಸೆಯ ಎಲ್ಲೆಕಟ್ಟುಗಳನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ. ಆದರೆ ಇಷ್ಟು ಮಾತ್ರ ಹೇಳಬಹುದು : ಉತ್ಪಾದನೆಗೆ ಬಳಸಲಾಗುವ ಗ್ರಾಸ (ಇನ್ಪುಟ್), ಉತ್ಪಾದನೆಯ ತಂತ್ರ ಮುಂತಾದವನ್ನು ಕುರಿತು ವಿಚಾರಮಾಡುವ ಉತ್ಪಾದನ ಮೀಮಾಂಸೆಯಿಂದ ಇದು ಭಿನ್ನವಾದದ್ದು. ಇದು ಪರಮಾವಧಿ ಉತ್ಪಾದನೆಯ ವಿಧಾನಗಳ ಅನ್ವೇಷಣೆಯಲ್ಲ. ಉತ್ಪಾದನ ಸಂಸ್ಥೆಯ ಸಂಘಟನೆಯನ್ನು ಕುರಿತ ವಿಚಾರಣೆಯೂ ಅಲ್ಲ. ಇಡೀ ಕೈಗಾರಿಕೆಯ ದೃಷ್ಟಿಯಿಂದ ವಿಚಾರ ಹರಿಯಿಸಿ, ಇದರಲ್ಲೊಂದು ಕ್ರಮವನ್ನು ಕಲ್ಪಿಸುವುದೇ ಇದರ ಉದ್ದೇಶ. ಒಂದೇ ಬಗೆಯ ಪದಾರ್ಥ ತಯಾರಿಕೆಯಲ್ಲಿ ತೊಡಗಿರುವ ನಾನಾ ಘಟಕಗಳ ನ್ನೊಳಗೊಂಡ ಕೈಗಾರಿಕೆಗೂ ಇದರಲ್ಲಿನ ಒಂದೊಂದು ಘಟಕಕ್ಕೂ ಇರುವ ಸಂಬಂಧದ ದೃಷ್ಟಿಯಿಂದ ನಡೆಸಿದ ಕಾರ್ಯ-ಕಾರಣ ವಿಚಾರಸರಣಿಯೇ ಉದ್ಯಮ ಘಟಕ ಮೀಮಾಂಸೆ.[೧]

ಚರಿತ್ರೆ[ಬದಲಾಯಿಸಿ]

ಉದ್ಯಮಘಟಕ ಮೀಮಾಂಸೆಯ ಚರಿತ್ರೆ ಇಂದು ನಿನ್ನೆಯದಲ್ಲ. ೧೮೩೮ರಷ್ಟು ಹಿಂದೆಯೇ ಕೂರ್ನೋ ಈ ಬಗ್ಗೆ ವಿಚಾರ ನಡೆಸಿದ್ದ. ಅದಕ್ಕೂ ಹಿಂದೆ ಸೂಚ್ಯವಾಗಿ ಇದನ್ನು ಕುರಿತ ಚರ್ಚೆ ನಡೆದಿತ್ತು. ಅನುಭೋಗ ಹಾಗೂ ವೈಯಕ್ತಿಕ ಇಷ್ಟಾನಿಷ್ಟಗಳ ಆಧಾರದ ಮೇಲೆ ರಚಿತವಾದ ಸಿದ್ಧಾಂತಗಳ ಬೆಳೆವಣಿಗೆಯ ಪರಿಣಾಮವಾಗಿ ಉದ್ಯಮಘಟಕವನ್ನು ಕುರಿತ ವಿಶಿಷ್ಟ ಮೀಮಾಂಸೆಯ ಆವಶ್ಯಕತೆ ಹೆಚ್ಚಾಗಿ ಕಂಡುಬಂದಿತು. ಈ ಶತಮಾನದ ಆದಿಯಿಂದ ಈ ವಿಚಾರಕ್ಕೆ ಹೆಚ್ಚು ಗಮನ ಸಂದಿದೆ.[೨]

ಸ್ಥಿತಿ ಹಾಗೂ ಗತಿ ಸಿದ್ಧಾಂತಗಳು[ಬದಲಾಯಿಸಿ]

ಉದ್ಯಮಘಟಕ ಮೀಮಾಂಸೆಯನ್ನು ನಾನಾ ದೃಷ್ಟಿಗಳಿಂದ ವಿವೇಚಿಸುವುದು ಸಾಧ್ಯ. ಉದ್ಯಮಘಟಕದ ಸಮತೋಲ ಸ್ಥಿತಿಯ ಲಕ್ಷಣಗಳನ್ನು ಕುರಿತ ವಿವೇಚನೆಯೇ ಸ್ಥಿತಿ ಮೀಮಾಂಸೆ. ಪರಮಾವಧಿ ಲಾಭ ಪಡೆಯುವ ಏಕಸ್ವಾಮ್ಯದ ಸಮತೋಲನವನ್ನು ಕುರಿತ ವಿವೇಚನೆ ಸಾಂಗವಾಗಿ ನಡೆದಿದೆ. ಒಂದು ಪದಾರ್ಥ ಸರಬರಾಜು ಮಾಡುವ ಘಟಕ ಒಂದೇ ಆಗಿದ್ದಾಗ ಏಕಸ್ವಾಮ್ಯವಿರುತ್ತದೆ. ಇಂಥ ಸ್ಥಿತಿಯಲ್ಲಿ ಘಟಕದ ಉತ್ಪತ್ತಿಯ ವ್ಯತ್ಯಯಕ್ಕೆ ಅನುಸಾರವಾಗಿ ಒಟ್ಟು ಹುಟ್ಟುವಳಿಯೂ (ರೆವೆನ್ಯೂ) ವ್ಯತ್ಯಾಸಗೊಳ್ಳುತ್ತದೆ. ಉತ್ಪತ್ತಿ ಹಾಗೂ ಮಾರಾಟವಾದ ಪದಾರ್ಥ ಇವುಗಳ ಮೊತ್ತವೇ x ಆಗಿದ್ದು, ಖ ಇದರ ಹುಟ್ಟುವಳಿಯಾಗಿದ್ದರೆ, ಖ = ಜಿ (x). ಉತ್ಪತ್ತಿಯ ಏರಿಳಿತಗಳಿಗೆ ಅನುಗುಣವಾಗಿ ಒಟ್ಟು ವೆಚ್ಚಗಳೂ (ಅ) ವ್ಯತ್ಯಾಸವಾಗಿ, ಅದರೊಂದಿಗೆ ಏಕಸ್ವಾಮ್ಯದ ಸಹಜ ಲಾಭವೂ ಹೆಚ್ಚು-ಕಡಿಮೆಯಾಗುವುದೆಂಬುದು ನಿರ್ವಿವಾದ. ಖ-ಅ ಎಲ್ಲಿ ಪರಮಾವಧಿ ಯಾಗಿರುತ್ತದೋ ಅಲ್ಲಿ ಲಾಭವೂ ಪರಮಾವಧಿಯಾಗಿರುತ್ತದೆ. ಅಂಚಿನ ಹುಟ್ಟುವಳಿಗಿಂತ ಹೆಚ್ಚು ವೇಗವಾಗಿ ಅಂಚಿನ ವೆಚ್ಚ ಏರುತ್ತಿದ್ದರೆ ಅಥವಾ ಕಡಿಮೆಯ ವೇಗದಲ್ಲಿ ಇಳಿಯುತ್ತಿದ್ದರೆ ಉತ್ಪತ್ತಿ ಆಗ ಪರಮಾವಧಿ ಲಾಭದ ಘಟ್ಟದಲ್ಲಿದೆಯೆನ್ನಬಹುದು. ಮೇಲಣ ವಿವೇಚನೆಯಲ್ಲಿ ಬಳಸಲಾಗಿರುವ ಸಹಜಲಾಭವೆಂದರೇನೆಂಬುದನ್ನೂ ತಿಳಿಯುವುದು ಅವಶ್ಯ. ಉದ್ಯಮಿಯೂ ಆತನ ಉತ್ಪಾದನ ಘಟಕವೂ ಉತ್ಪಾದನ ಕ್ಷೇತ್ರದಲ್ಲಿ ಉಳಿಯಲು ಅವಶ್ಯವಾದಷ್ಟು ಲಾಭವೇ ಸಹಜಲಾಭ.

ಸ್ಪರ್ಧೆ[ಬದಲಾಯಿಸಿ]

ಮುಂದೆ ಈ ಬಗ್ಗೆ ಪಿಗೂ ಹೆಚ್ಚಾಗಿ ವಿವೇಚನೆ ನಡೆಸಿದ್ದಾನೆ. ಪರಿಪೂರ್ಣ ಸ್ಪರ್ಧೆ ಹಾಗೂ ಏಕಸ್ವಾಮ್ಯಗಳೆರಡಕ್ಕೂ ಅನ್ವಯವಾಗುವ ಸ್ಥಿತ ಸಿದ್ಧಾಂತವೊಂದನ್ನು ಆತ ರಚಿಸಿದ. ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಸಮತೋಲ ಉತ್ಪತ್ತಿ ಬಿಂದುವಿನಲ್ಲಿ ಬೆಲೆ ಸ್ಥಿರವಾಗಿರುತ್ತದೆ. ಇಲ್ಲಿ ಅಂಚಿನ ಹುಟ್ಟುವಳಿಯ ಅಂಚಿನ ವೆಚ್ಚವೂ ಬೆಲೆಯೂ ಒಂದೇ ಸಮನಾಗಿರುತ್ತವೆ; ಅಂಚಿನ ವೆಚ್ಚ ಏರುವ ಪ್ರವೃತ್ತಿ ತೋರುತ್ತದೆ. ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಉದ್ಯಮ ಘಟಕಗಳ ಆಗಮನ-ನಿರ್ಗಮನಗಳ ಮೇಲೆ ನಿರ್ಬಂಧ ಇರುವುದಿಲ್ಲ; ನಿಗದಿಯಾದ ಬೆಲೆಗಳಲ್ಲಿ ಉತ್ಪಾದನಾಂಗಗಳು ಸಿಗುತ್ತವೆ. ಸಮತೋಲ ಸ್ಥಿತಿಯಲ್ಲಿ ಉತ್ಪಾದನೆಯ ಸರಾಸರಿ ವೆಚ್ಚವೂ ಬೆಲೆಗೆ ಸಮನಾಗಿಯೇ ಇರುತ್ತದೆ; ಅಲ್ಲದೆ ಇದು ಅತ್ಯಂತ ಕನಿಷ್ಠವಾದದ್ದಾಗಿರುತ್ತದೆ.

ಉತ್ಪಾದನ ಕ್ಷೇತ್ರದಲ್ಲಿ ಪರಿಪೂರ್ಣ ಸ್ಪರ್ಧೆಯ ಸ್ಥಿತಿಯಾಗಲಿ ಸಂಪೂರ್ಣ ಏಕಸ್ವಾಮ್ಯವಾಗಲಿ ಇರುವುದಿಲ್ಲ. ಪರಿಪೂರ್ಣ ಸ್ಪರ್ಧೆಯ ಎರಡು ಲಕ್ಷಣಗಳಾದ ಉದ್ಯಮ ಘಟಕಗಳ ಆಗಮನ-ನಿರ್ಗಮನ ಹಾಗೂ ಸರಾಸರಿ ವೆಚ್ಚ ಮತ್ತು ಬೆಲೆಗಳ ಸಮಾನತೆಗಳೊಂದಿಗೆ ಏಕಸ್ವಾಮ್ಯ ಪರಿಸ್ಥಿತಿಯೂ ಇರುವುದು ಸಾಧ್ಯವೆಂದು ಚೇಂಬರ್ಲಿನ್ ಹೇಳಿದ್ದಾನೆ. ಇಂಥ ಪರಿಸ್ಥಿತಿಯಲ್ಲಿ ಉತ್ಪಾದನೆಯಲ್ಲಿ ನಿರತವಾದ ಎಲ್ಲ ಉದ್ಯಮಘಟಕಗಳ ವೆಚ್ಚರೇಖೆಗಳೂ ಒಂದೇ ಆಗಿರುತ್ತವೆ. ನಕ್ಷೆ ೧ರಲ್ಲಿ ಅಅ’ ಎಂಬುದು ಯಾವುದಾದರೂ ಉದ್ಯಮಘಟಕದ ಸರಾಸರಿ ವೆಚ್ಚ ರೇಖೆ. ಉದ್ಯಮ ಘಟಕಗಳ ಆಗಮನ-ನಿರ್ಗಮನಗಳಿಗೆ ಪುರ್ಣಾವಕಾಶವಿದ್ದು, ಎಲ್ಲ ಘಟಕಗಳೂ ಸಮಾನ ಬೆಲೆಗಳನ್ನು ವಿಧಿಸುತ್ತಿದ್ದ ಪಕ್ಷದಲ್ಲಿ ಆಆ’ ಎಂಬುದು ಇಂಥ ಘಟಕವೊಂದರ ಬೇಡಿಕೆ ರೇಖೆ. ಈ ಘಟಕ ತನ್ನ ಪದಾರ್ಥದ ಬೆಲೆ ವ್ಯತ್ಯಾಸ ಮಾಡಿದ್ದೇ ಆದರೆ, ಈ ವ್ಯತ್ಯಾಸಕ್ಕೆ ಸ್ಪರ್ಧಿಘಟಕಗಳಲ್ಲಿ ಯಾವುವೂ ಯಾವ ಬಗೆಯ ಪ್ರಕ್ರಿಯೆಯನ್ನಾಗಲಿ ಪ್ರತಿಕ್ರಿಯೆಯನ್ನಾಗಲಿ ತೋರದಿದ್ದ ಪಕ್ಷದಲ್ಲಿ, ಈ ಘಟಕಕ್ಕೆ ಅನ್ವಯಿಸುವ ಬೇಡಿಕೆ ರೇಖೆಯೇ ಜಜ’. ಸಮತೋಲ ಸ್ಥಿತಿಯಲ್ಲಿ ಎಲ್ಲ ಘಟಕಗಳೂ ಸಹಜಲಾಭ ಗಳಿಸುವಂತಾಗುವವರೆಗೂ ಅವು ಸೂಕ್ತ ಹೊಂದಾಣಿಕೆ ಮಾಡಿಕೊಳ್ಳಬೇಕು. ತಾನು ಪರಮಾವಧಿ ಲಾಭ ಗಳಿಸುತ್ತಿರುವು ದಾಗಿಯೇ ಪ್ರತಿ ಘಟಕವೂ ಭಾವಿಸುತ್ತದೆ. ಸ್ಪರ್ಧೆಯ ಕ್ಷೇತ್ರದಲ್ಲಿರುವ ಇತರ ಯಾವ ಘಟಕವೂ ತನ್ನ ಬೆಲೆ ನೀತಿಗೆ ಯಾವ ಬಗೆಯ ಪ್ರತಿಕ್ರಿಯೆಯನ್ನೂ ತೋರಿಸುವುದಿಲ್ಲವೆಂಬು ದಾಗಿಯೂ ಅದರ ನಂಬಿಕೆ. ನಕ್ಷೆ ೧ರ ಖಿ ಎಂಬ ಬಿಂದು ಈ ಸ್ಥಿತಿಯನ್ನು ಸೂಚಿಸುತ್ತದೆ.

ಆದರೆ ಚೇಂಬರ್ಲಿನ್ ಊಹಿಸಿರುವ ಸರಳವ್ಯವಸ್ಥೆ ಎಲ್ಲೂ ಇಲ್ಲ. ಅರ್ಥವ್ಯವಸ್ಥೆ ಬಲು ಸಂಕೀರ್ಣವಾದದ್ದು. ಸ್ವತಂತ್ರ ಸಮಾಜಗಳಲ್ಲಿ ಪರಿಪೂರ್ಣ ಸ್ಪರ್ಧೆಯಾಗಲಿ, ಪರಿಪೂರ್ಣ ಏಕಸ್ವಾಮ್ಯವಾಗಲಿ, ಸ್ಪರ್ಧೆ-ಏಕಸ್ವಾಮ್ಯಗಳ ಸರಳ ಮೇಳವಾಗಲಿ ಎಲ್ಲೂ ಕಾಣಸಿಗುವುದಿಲ್ಲ. ಸಾಮಾನ್ಯವಾಗಿ ಕಂಡುಬರುವುದು ಅಪರಿಪೂರ್ಣ ಸ್ಪರ್ಧೆ-ಅಲ್ಪಸಂಖ್ಯಾಸ್ವಾಮ್ಯ (ಅಲಿಗೊಪೊಲಿ). ಅನೇಕ ಅರ್ಥಶಾಸ್ತ್ರಜ್ಞರು ಇದರ ವಿವರಣೆ ಕೊಟ್ಟು, ಈ ಬಗ್ಗೆ ವಿಚಾರಧಾರೆ ಹರಿಸಿದ್ದಾರೆ. ಆದರೆ ಇದು ಯಾವುದೂ ಇನ್ನೂ ಸಂಪೂರ್ಣ ಸ್ವೀಕಾರಯೋಗ್ಯವಾಗಿಲ್ಲ.

ಗತಿಸಿದ್ಧಾಂತ[ಬದಲಾಯಿಸಿ]

ಮೇಲೆ ಹೇಳಿದ್ದೆಲ್ಲ ಸ್ಥಿತಿ ದೃಷ್ಟಿಯಾಯಿತು. ಅರ್ಥವ್ಯವಸ್ಥೆ ಸದಾ ಪ್ರವಹನಶೀಲ. ಈ ಚಲನ ಸ್ವಭಾವವನ್ನೇ ಪ್ರಧಾನವಾಗಿ ಗುರುತಿಸಿದವರು ಕೆಲವೇ ಮಂದಿ. ಒಂದು ವ್ಯವಸ್ಥೆಯಲ್ಲಿ ಎಷ್ಟು ಅಜ್ಞೇಯ ಅಂಶಗಳಿವೆಯೋ ಅಷ್ಟೊಂದು ಸಮೀಕರಣಗಳಿರುತ್ತವಾದ್ದರಿಂದ ನಿರ್ದಿಷ್ಟ ಸಿದ್ದಾಂತ ಮಾಡುವುದು ಕಷ್ಟಕರ. ಒಂದು ಉತ್ಪಾದನೆಯಲ್ಲಿ ನಿರತವಾದ ನಾನಾ ಹಿತಾರ್ಥಗಳನ್ನು ಕುರಿತ ಚರ್ಚೆ ನಡೆಸಿ ಗತಿಸಿದ್ಧಾಂತ ರಚನೆಯ ಯತ್ನ ಮಾಡಿರುವವನು ಜೆ.ಆರ್.ಹಿಕ್ಸ್‌. ಉದ್ಯಮಘಟಕದ ಉತ್ಪಾದನಾನುಭವಕ್ಕೆ ಅನುಗುಣವಾಗಿ ಅದರ ವೆಚ್ಚಗಳು ಹೇಗೆ ವ್ಯತ್ಯಾಸಗೊಳ್ಳುವುವೆಂಬುದನ್ನೂ ಹೊಸ ಸಮತೋಲ ಸ್ಥಿತಿಗೆ ನಾನಾ ಬಲಗಳು (ಫೋರ್ಸಸ್) ಹೊಂದಿಕೊಳ್ಳಲು ಅನುಸರಿಸುವ ಹಾದಿಯನ್ನೂ ಕುರಿತ ವಿವೇಚನೆ ಈಚೆಗೆ ವಿಸ್ತಾರವಾಗಿ ಬೆಳೆಯುತ್ತಿದೆ.

ಪರಮಾವಧಿ ಲಾಭ ಗಳಿಕೆಯ ಉದ್ದೇಶ: ಉದ್ಯಮಿಗಳು ಪರಮಾವಧಿ ಲಾಭಗಳಿಸುವ ಉದ್ದೇಶದಿಂದ ಕಾರ್ಯಪ್ರವೃತ್ತರಾಗುತ್ತಾರೆಂಬುದಾಗಿ ಊಹಿಸಿಕೊಂಡು ಈ ದೃಷ್ಟಿಯಿಂದ ಸಿದ್ಧಾಂತ ಪ್ರತಿಪಾದನೆ ಮಾಡಿರುವವರೂ ಉಂಟು. ಇಂಥ ಊಹೆ ವಾಸ್ತವಿಕವಾದದ್ದೆಂಬು ದೇನೋ ನಿಜ. ಈ ಊಹೆ ತುಂಬ ಸರಳ ಹಾಗೂ ಸಹಜವಾದ್ದರಿಂದ ಇದರ ಆಧಾರದ ಮೇಲೆ ನಡೆಸಿದ ವಿವೇಚನೆ ಹೆಚ್ಚು ಸಿಂಧುವೆನಿಸುವುದೂ ಸಹಜವೇ. ಆದರೂ ಈ ಊಹೆಯ ಬಗ್ಗೆ ನಾನಾ ಬಗೆಯ ವಾದ-ಪ್ರತಿವಾದಗಳು ಉದ್ಭವಿಸಿವೆ. ಅನೇಕ ಉದ್ಯಮಿಗಳು ಕೊನೆಯ ಪೈಸದವರೆಗೂ ಲಾಭ ಹಿಂಡಲು ಉಜ್ಜುಗಿಸದಿರಬಹುದು. ಅವರು ಬಹಿರಂಗವಾಗಿ ಆಡುವ ಮಾತುಗಳಂತೂ ಇಂಥ ಅಭಿಪ್ರಾಯ ಮೂಡಿಸುವುದಿಲ್ಲ. ನ್ಯಾಯವಾದ ಲಾಭ ಬಂದರೆ ಸಾಕೆಂದು ಅವರು ಮಾತಾಡುತ್ತಾರೆ. ಆದ್ದರಿಂದ ಕೆಲವರು ಈ ಪರಮಾವಧಿ ಲಾಭ ಗಳಿಕೆ ಉದ್ದೇಶದ ಬದಲು ಇತರ ಊಹೆಗಳನ್ನು ಮುಂದೊಡ್ಡುತ್ತಾರೆ. ಉದ್ಯಮಿಗಳು ಉಪಯುಕ್ತತೆ ಯನ್ನು ಪರಮಾವಧಿಗೊಳಿಸುವ ಉದ್ದೇಶ ಹೊಂದಿರು ತ್ತಾರೆಂಬುದು ಒಂದು ಊಹೆ. ಇದನ್ನು ಹೆಚ್ಚಿಸಬೇಕಾದರೆ ಪ್ರಯತ್ನ ಹೆಚ್ಚಿಸಬೇಕು. ಇದು ಅಧಿಕಗೊಂಡಷ್ಟೂ ಉತ್ಪತ್ತಿ ಹೆಚ್ಚುವುದು ಸಹಜ. ಈ ಬಗೆಯ ವಿಚಾರಸರಣಿಯ ಬೆನ್ನ ಹಿಂದೆ ಸಾಗಿದರೆ ಆಗ ಪರಂಪರೆಯಾಗಿ ಬೆಳೆದುಬಂದಿರುವ ವಿಚಾರಸರಣಿ ಮಾಯವಾಗುತ್ತದೆ; ಸ್ಪರ್ಧೆ, ಸಮತೋಲ ಸ್ಥಿತಿಯಲ್ಲಿನ ಕನಿಷ್ಠ ಸರಾಸರಿ ವೆಚ್ಚ ಮುಂತಾದ ಮಾತೆಲ್ಲ ಅನ್ವಯಿಸುವುದಿಲ್ಲ. ಅಂತೂ ಉತ್ಪಾದನೆಯ ಹಿಂದೆ ಗರಿಷ್ಠ ಲಾಭೋದ್ದೇಶವೇ ಅಲ್ಲದೆ ಉಪಯುಕ್ತತೆಯ ಉದ್ದೇಶವೂ ಇರಬಹುದೆಂಬುದನ್ನೇ ಆಧರಿಸಿ ಅನೇಕ ಅರ್ಥಶಾಸ್ತ್ರಜ್ಞರು ನಾನಾ ಬಗೆಯ ವಾದಸರಣಿಗಳನ್ನು ರಚಿಸಿದ್ದಾರೆ. ಉದ್ಯಮಘಟಕಗಳ ವರ್ತನೆಯನ್ನ ವಲೋಕಿಸಿ ಅನೇಕ ಬಗೆಯ ವಾದಗಳು ಬಂದಿವೆ. ಆದರೆ ಇವುಗಳಲ್ಲಿ ಅನೇಕ ವಾದಗಳು ವಿವರಣಾತ್ಮಕವೇ ಹೊರತು ವಿವೇಚನಾತ್ಮ ಕವೆನ್ನಿಸಲಾರವು. ಏಕೆ ಎಂಬುದನ್ನು ಹೇಳುವುದಕ್ಕಿಂತ ಹೇಗೆ ಎಂಬುದನ್ನೇ ಇವು ಒಕ್ಕಣಿಸುತ್ತವೆನ್ನಬಹುದು.[೩]

ಲಾಭ ದೃಷ್ಟಿ[ಬದಲಾಯಿಸಿ]

ಪರಮಾವಧಿ ಲಾಭಗಳಿಕೆಯ ವರ್ತನೆಯ ಇನ್ನೊಂದು ಬಗೆಯ ವಿವರಣೆಯೆಂದರೆ ಪರಿಸರದ ಅಂಚಿನ ವರ್ತನೆ. ಉದ್ಯಮಿಯಾಗಲಿ ಅನುಭೋಗಿಯಾಗಲಿ ಪರಮಾವಧಿ ಲಾಭದೃಷ್ಟಿಯಿಂದಲೇ ವರ್ತಿಸುವುದು ಸಹಜ. ಇದಕ್ಕಾಗಿ ಇಬ್ಬರೂ ಅಧಿಕಾಧಿಕವಾಗಿ ಈ ಉದ್ದೇಶಸಾಧನೆಗಾಗಿ ಶ್ರಮಿಸುತ್ತಾರೆ. ಆದ್ದರಿಂದ ಅಂಚಿನ ವರ್ತನೆಯೇ ಪರಮಾವಧಿ ಲಾಭ ಪಡೆಯುವಂಥ ವರ್ತನೆಯೆನ್ನಬಹುದು. ಅಂಚಿನ ಘಟ್ಟದಲ್ಲಿ ಮಾಡಿದ ವೆಚ್ಚಕ್ಕೆ ಸಮನಾದ ಲಾಭ ಬರುವಂತೆ ಅನುಭೋಗಿಯೂ ಉತ್ಪಾದಕನೂ ಯತ್ನಿಸುತ್ತಾರೆ. ಈ ಸ್ಥಿತಿ ಮುಟ್ಟುವವರೆಗೂ ಇವರ ಯತ್ನ ಮುಂದುವರಿಯುತ್ತದೆ. ಅರಿತೋ ಅರಿಯದೆಯೋ ಪ್ರತಿಯೊಬ್ಬರೂ ಈ ರೀತಿಯಾಗಿ ವರ್ತಿಸುವರೆಂಬ ದೃಷ್ಟಿ ಸತ್ಯಕ್ಕಿಂತ ದೂರವಿರಲಾರದು. ಈ ಅಂಚಿನ ವರ್ತನೆಯನ್ನು ನಕ್ಷೆ ೨ರಲ್ಲಿ ವಿವರಿಸಲಾಗಿದೆ.

ಈ ನಕ್ಷೆಯ ಮೇಲರ್ಧದಲ್ಲಿನ ವಕ್ರರೇಖೆಯೇ ಲಾಭದ ರೇಖೆ (ಊಹೆ). ಈ ರೇಖೆಯ ಎತ್ತರವೇ ಲಾಭದ ಮೊತ್ತವನ್ನು ಸೂಚಿಸುತ್ತದೆ. ಈ ರೇಖೆಯ ಎಡತುದಿ ಔಘಿ ಅಕ್ಷವನ್ನು ತಾಕುವ ಬಿಂದುವಿನವರೆಗೂ ಉತ್ಪತ್ತಿಯಿಂದ ಲಾಭವೇ ಇರುವುದಿಲ್ಲ. ಅಲ್ಲಿಂದಾಚೆಗೆ ಅದು ಕ್ರಮವಾಗಿ ಏರುತ್ತ ನಡೆಯುತ್ತದೆ. ಉತ್ಪತ್ತಿ ಔಂ ಆಗಿರುವಾಗ ಒಟ್ಟು ಲಾಭ ಂಂ’. ಇದು ಪರಮಾವಧಿ ಲಾಭ. ಉತ್ಪತ್ತಿಯನ್ನು ಇನ್ನೂ ಹೆಚ್ಚಿಸಿದರೆ ಆಗ ಒಟ್ಟು ಲಾಭ ಇಳಿಯುತ್ತದೆ. ಈ ವೃತ್ತದ ಬಲತುದಿ ಔಘಿ ಅಕ್ಷವನ್ನು ಸೋಕುವಲ್ಲಿ ಲಾಭ ಸೊನ್ನೆ. ಈ ನಕ್ಷೆಯ ಕೆಳ ಅರ್ಧದಲ್ಲಿ ಔಙ ಎಂಬುದು ಅಂಚಿನ ಹುಟ್ಟುವಳಿ ಹಾಗೂ ಅಂಚಿನ ವೆಚ್ಚವನ್ನು ಸೂಚಿಸುತ್ತದೆ. ಅಂಚಿನ ಹುಟ್ಟುವಳಿ ರೇಖೆಯದು (ಒಖ) ಬಲದಿಕ್ಕಿನಲ್ಲಿ ಇಳಿಗತಿ. ಅಂಚಿನ ವೆಚ್ಚರೇಖೆಯದು (ಒಅ) ಬಲಗಡೆಗೆ ಏರುಗತಿ.

ಉತ್ಪತ್ತಿಯ ಮೊತ್ತ ಔಂ ಆಗಿರುವಾಗ ಅಂಚಿನ ಹುಟ್ಟುವಳಿಯೂ ಅಂಚಿನ ವೆಚ್ಚವೂ ಸಂಧಿಸುತ್ತವೆ. ಅದೇ ಪರಮಾವಧಿ ಲಾಭದ ಘಟ್ಟ (ಂಂ’). ಈ ಸಮತೋಲಸ್ಥಿತಿಯಲ್ಲಿ ಉದ್ಯಮಘಟಕ ತನ್ನ ಉತ್ಪಾದನ ಪ್ರಮಾಣವನ್ನಾಗಲಿ ವ್ಯವಸ್ಥೆಯನ್ನಾಗಲಿ ಬದಲಿಸಲಿಚ್ಛಿಸುವುದಿಲ್ಲ.

ಸಂಭವನೀಯತಾ ಸಿದ್ಧಾಂತಗಳು[ಬದಲಾಯಿಸಿ]

ಮೇಲೆ ಹೇಳಿದ ನವ್ಯ ಅಭಿಜಾತ ಸಿದ್ಧಾಂತಗಳಿಗಿಂತ ಭಿನ್ನವಾದ ಕೆಲವು ಸಿದ್ದಾಂತಗಳಿವೆ. ಒಂದು ಉದ್ಯಮಘಟಕದ ಸ್ಥಿತ ಸಮತೋಲನ ದೃಷ್ಟಿಯನ್ನು ಇಲ್ಲಿ ಬಿಡಲಾಗಿದೆ. ಒಂದು ಘಟಕದ ವರ್ತನೆಯ ಪರಿಣಾಮಗಳನ್ನು ಚರ್ಚಿಸುವ ಬದಲು ಹಲವು ಘಟಕಗಳ ದೊಡ್ಡ ಗುಂಪುಗಳ ವರ್ತನೆಯನ್ನು ಇಲ್ಲಿ ವಿವೇಚಿಸಲಾಗಿದೆ. ಲಾಭವನ್ನು ಪರಮಾವಧಿಗೊಳಿಸುವ ಉದ್ದೇಶವನ್ನು ಮರೆಯುವ ಅಗತ್ಯವಿಲ್ಲವಾದರೂ ಈ ಉದ್ದೇಶದ ಪರಿಣಾಮವನ್ನು ಮೊಟಕುಗೊಳಿಸುವ ಅಸಂಖ್ಯಾತ ಪ್ರವೃತ್ತಿಗಳು ಒಂದು ವ್ಯವಸ್ಥೆಯಲ್ಲಿ ಕೆಲಸಮಾಡುತ್ತಿರುತ್ತವೆ. ಆದ್ದರಿಂದ ಉತ್ಪಾದನೆಗೆ ಸಂಬಂಧಿಸಿದ ಯಾವ ಒಂದು ಅಂಶವನ್ನು ಬದಲಿಸಿದರೂ ಅದರ ಪರಿಣಾಮವಾಗಿ ಒಂದು ಉದ್ಯಮಘಟಕ ಹೇಗೆ ವರ್ತಿಸಬಹುದೆಂಬು ದನ್ನು ಸ್ಥೂಲವಾಗಿ ಮಾತ್ರ ಹೇಳುವುದು ಸಾಧ್ಯ. ಉದ್ಯಮಘಟಕ ಮೀಮಾಂಸೆಯಲ್ಲಿ ಈ ದೃಷ್ಟಿಯನ್ನು ಪ್ರಥಮತಃ ಪ್ರತಿಪಾದಿಸಿದವನು ಆಲ್ಫ್ರೆಡ್ ಮಾರ್ಷಲ್. ದೀರ್ಘಕಾಲದ ಸರಬರಾಜು ಬೆಲೆಯ ನಿರ್ಣಯವನ್ನು ಕುರಿತು ವಿವೇಚಿಸುವಾಗ ಆತ ಪ್ರಾತಿನಿಧಿಕ ಉದ್ಯಮಘಟಕದ ಕಲ್ಪನೆಯನ್ನು ಮುಂದಿಟ್ಟ. ಈ ಘಟಕ ವಾಸ್ತವ ಜಗತ್ತಿನಲ್ಲಿ ಇರುವಂತದಲ್ಲ. ಬೆಲೆ ನಿರ್ಣಯದ ಸ್ಥಿತ ಸಿದ್ಧಾಂಥವನ್ನೂ ಗತಿಶೀಲ ಸಂಭವನೀಯತಾ ಸಿದ್ಧಾಂತವನ್ನೂ ಜಂಟಿ ಹಾಕಲೂ ಆತ ಅನುಸರಿಸಿದ ವಿಧಾನ ಇದು.[೪]


ಈ ಸ್ಥಿತಿ-ಗತಿ ದೃಷ್ಟಿಗಳ ಸಂಯೋಜನೆಯನ್ನು ಮಾರ್ಷಲನ ಅನಂತರದ ಅರ್ಥಶಾಸ್ತ್ರಜ್ಞರು ತಳ್ಳಿಹಾಕಿದರು. ಇದು ಮುಂದೆ ಸುಮಾರು ಕಾಲು ಶತಮಾನಕಾಲ ಉದಾಸೀನಕ್ಕೆ ಗುರಿಯಾ ಯಿತು. ಆದರೆ ಈಚೆಗೆ (೧೯೬೧) ವುಲ್ಫನಿಂದ ಇದಕ್ಕೆ ಕಾಯಕಲ್ಪವಾಯಿತು. ಉದ್ಯಮಘಟಕಗಳ ಏರಿಳಿತಗಳಿಗೆ ಉತ್ಪನ್ನದ ಬೆಲೆಗಳು ಕಾರಣವೆಂದ ಮೇಲೆ ಪ್ರತಿಯೊಂದು ಬೆಲೆಗೂ ಒಂದು ಬಗೆಯ ಗಾತ್ರದ ಘಟಕಗಳ ಸಂಯೋಜನೆಯಾಗಿರಬಹುದು. ಈ ಬಗೆಯ ವಿವೇಚನಾ ವಿಧಾನದ ಸಹಾಯದಿಂದ ಬೆಲೆ, ಉತ್ಪತ್ತಿ ಹಾಗೂ ಉದ್ಯಮಗಾತ್ರ ವಿತರಣೆಗಳನ್ನು ಏಕಕಾಲದಲ್ಲಿ ನಿರ್ಣಯಿಸುವುದು ಸಾಧ್ಯವಾಗುತ್ತದೆ. ಇದು ವಸ್ತುಸ್ಥಿತಿಗೆ ತೀರ ಹತ್ತಿರದ ವಿವರಣೆಯೆನ್ನಬಹುದು.

ಉದ್ಯಮಘಟಕ ಹಾಗೂ ಕೈಗಾರಿಕೆ[ಬದಲಾಯಿಸಿ]

ಈ ಎಲ್ಲ ವಿವೇಚನೆಗಳಿಂದ ಉದ್ಯಮ ಘಟಕ ಹಾಗೂ ಕೈಗಾರಿಕೆಗಳನ್ನು ಕುರಿತ ವ್ಯಾಖ್ಯೆಯ ನಿಖರತೆಯನ್ನೇ ಪ್ರಶ್ನಿಸುವಂತಾಗಿದೆ. ಒಂದೇ ಬಗೆಯ ಉತ್ಪನ್ನವನ್ನು ತಯಾರಿಸುವ ಎಲ್ಲ ಉದ್ಯಮ ಘಟಕಗಳ ಮೊತ್ತವೇ ಕೈಗಾರಿಕೆ-ಎನ್ನುವುದೇ ಸಂದೇಹಾಸ್ಪದ. ಪರಿಪೂರ್ಣ ಸ್ಪರ್ಧೆಯ ಸ್ಥಿತಿಯಲ್ಲಿ ಎಲ್ಲ ಘಟಕಗಳು ಒಂದೇ ಬಗೆಯ ಪದಾರ್ಥ ತಯಾರಿಸಲು ತೊಡಗುವುದೆಂದು ಊಹಿಸಿಕೊಳ್ಳಬಹುದು. ಸ್ಪರ್ಧೆ ಅಪರಿಪೂರ್ಣವಾದ್ದರಿಂದ ನಾನಾಬಗೆಯ ತೊಡಕುಗಳು ಉದ್ಭವಿಸುತ್ತವೆ. ಒಂದು ಕೈಗಾರಿಕೆಯ ಎಲ್ಲ ಘಟಕಗಳೂ ಒಂದೇ ಬಗೆಯ ಪದಾರ್ಥ ತಯಾರಿಸುವುವೆನ್ನುವುದೂ ಸತ್ಯದೂರ. ಹಾಗಾದರೆ ಅವೆಲ್ಲ ಸೇರಿ ಒಂದು ಕೈಗಾರಿಕೆ ಆಗುವುದು ಹೇಗೆ? ಆದರೆ ಈ ಬಗೆಯ ಕೂದಲು ಸೀಳುವ ವಾದವನ್ನು ದೂರ ಇಟ್ಟು, ಸ್ಥೂಲವಾಗಿ ಮಾರ್ಷಲನ ಕೈಗಾರಿಕೆಯ ವ್ಯಾಖ್ಯೆ ಇಟ್ಟುಕೊಂಡು ವಿವೇಚನೆ ನಡೆಸುವುದು ಫಲದಾಯಕವೆಂಬುದನ್ನು ಸ್ಥೂಲವಾಗಿ ಒಪ್ಪಿಕೊಳ್ಳಲಾಗಿದೆ. ಒಟ್ಟು ಕೈಗಾರಿಕೆಯ ಉತ್ಪತ್ತಿಯ ವ್ಯತ್ಯಾಸದಿಂದ ಪ್ರತಿಯೊಂದು ಉದ್ಯಮ ಘಟಕದ ಉತ್ಪಾದನೆಯ ವೆಚ್ಚಗಳ ಮೇಲೆ ಆಗುವ ಪರಿಣಾಮವೂ ಬಹಳವಾಗಿ ವಿಚಾರಣೆಗೆ ಒಳಗಾಗಿದೆ. ಈ ಬಗೆಯ ಪ್ರಭಾವ ಬೀರುವ ಬಲಗಳು ಬಾಹ್ಯವಾದಂಥವು. [೫]


ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು" (PDF). Archived from the original (PDF) on 2018-03-07. Retrieved 2020-01-12.
  2. https://learn.saylor.org/course/view.php?id=33&sectionid=330
  3. https://www.swinburne.edu.au/study/courses/units/Products-in-Context-Theories-of-Industrial-Design--DID30003/local
  4. "ಆರ್ಕೈವ್ ನಕಲು". Archived from the original on 2019-12-19. Retrieved 2020-01-12.
  5. https://books.google.co.in/books?id=W7xaDwAAQBAJ&pg=SA2-PA7&lpg=SA2-PA7&dq=industrial+units+theory&source=bl&ots=UjBdQMLwTg&sig=ACfU3U25QS32yQxezR2ySEis9ZVxgu3lrw&hl=en&sa=X&ved=2ahUKEwjS64Pmp_3mAhV3xTgGHa9bAAwQ6AEwEXoECAoQAQ