ವಿಷಯಕ್ಕೆ ಹೋಗು

ಉದರದ ಶಸ್ತ್ರವೈದ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದರದ ಶಸ್ತ್ರವೈದ್ಯ ಎಂದರೆ ಹೊಟ್ಟೆದಲ್ಲಿರುವ ಅಂಗಗಳ ಇಲ್ಲವೇ ಅದಕ್ಕೆ ಸಂಬಂಧಿಸಿದ ಅಂಗಗಳ ರೋಗಗಳಿಗಾಗಿ ಶಸ್ತ್ರಕ್ರಿಯೆಯಿಂದ (ಆಪರೇಷನ್) ಮಾಡುವ ಚಿಕಿತ್ಸೆ (ಸರ್ಜರಿ ಆಫ್ ಅಬ್ಡೊಮೆನ್). ಈ ಭಾಗದ ಅಂಗಗಳ ರೋಗಗಳ ವಿಚಾರಗಳನ್ನು ಆಯಾ ಅಂಗಗಳ ಮೇಲಿನ (ಪಿತ್ತಕೋಶ, ಪಿತ್ತದ ನಾಳಿ, ಈಲಿಯ ರೋಗಗಳು ಇತ್ಯಾದಿ) ಲೇಖನಗಳಿಂದ ತಿಳಿಯಬೇಕು. ಜಠರಗರುಳಿನ ರೋಗಗಳು ಎಂಬ ಲೇಖನದಲ್ಲಿ ಹೆಚ್ಚಿನ ಪಾಲು ಬಂದಿದೆ.

ಪ್ರಾಚೀನ ಕಾಲ

[ಬದಲಾಯಿಸಿ]

ಹಿಂದಿನ ಕಾಲದಲ್ಲಿ ಹೊಟ್ಟೆ ಕೊಯ್ಸಿಕೊಂಡವರಲ್ಲಿ ಬಹಳ ಮಂದಿ ನೋವಿಗೆ ಬಲಿಯಾಗುತ್ತಿದ್ದರು. ಉಳಿದವರು ಆಮೇಲಿನ ಸೊಂಕುಗಳಿಂದ ಪ್ರಾಣಬಿಡುತ್ತಿದ್ದರು. ನೋವನ್ನು ಕಳೆಯಲು ಅರಿವಳಿಕೆಗಳಾದ (ಅನೀಸ್ತೆಟಿಕ್ಸ್) ಈಥರೂ (1846) ಆಮೇಲೆ ಕ್ಲೋರೋಫಾರ್ಮೂ (1847) ಬಂದ ಮೇಲೆ ಒಂದು ಮುಖ್ಯ ತೊಡಕು ಕಳೆಯಿತು. ಅದರೂ ಲಿಸ್ಟರನ ಕಾರ್ಬಾಲಿಕಾಮ್ಲದ ತೆರನ ನಂಜುರೋಧಕ (ಆಂಟಿಸೆಪ್ಪಿಕ್) ಮದ್ದುಗಳು ಜಾರಿಗೆಬರುವ ತನಕ (1867) ಶಸ್ತ್ರಕ್ರಿಯಾನಂತರದ ಸೊಂಕುಗಳನ್ನು ತಡೆಯಲೂ ಕಳೆಯಲೂ ಸಾಧ್ಯವೇ ಇರಲಿಲ್ಲ.[]

ನೂತನ ಪದ್ಧತಿ

[ಬದಲಾಯಿಸಿ]

ಮುಂದಿನ ದಶಕಗಳಲ್ಲಿ ನಂಜಿಗೆ ದಾರಿಕೊಡದ, ನಂಜಿರದ (ಎಸೆಪ್ಟಿಕ್) ಶಸ್ತ್ರವೈದ್ಯವೇ ಜಾರಿಗೆ ಬಂದುದರಿಂದ ಪರಿಸ್ಥಿತಿ ಸುಧಾರಿಸಿತು. ನೋವು ಕಳೆವ ಹಾಗೂ ಅರಿವಳಿಸುವ ಮದ್ದುಗಳು, ರೋಗಿಗೆ ಅವನ್ನು ಕೊಡುವ ವಿಧಾನಗಳು ಚೆನ್ನಾದಂತೆಲ್ಲ ಶಸ್ತ್ರಕ್ರಿಯೆಯನ್ನು ರೋಗಿಗೆ ಅಪಾಯವಾಗದಂತೆ ಅವಸರವಿಲ್ಲದೆ ನಿಧಾನವಾಗಿ ಚೆನ್ನಾಗಿ ಮಾಡಲು ಅನುವಾಯಿತು. ಶಸ್ತ್ರಕ್ರಿಯೆಯನ್ನು ತಡೆದುಕೊಳ್ಳುವಂತೆ ರೋಗಿಯನ್ನು ಅದಕ್ಕೊಡ್ಡುವ ಮುಂಚೆಯೂ ಆಮೇಲೂ ಸರಿಯಾಗಿ ಪಾಲಿಸುವಂತಾದ್ದರಿಂದ, ಹೆಚ್ಚಿನ ಶಸ್ತ್ರವೈದ್ಯಕ್ಕೆ ದಾರಿಯಾಯಿತು. (ನೋಡಿ- ಅರಿವಳಿಕೆ,-ಅರಿವಳಿಕಗಳು). ರೋಗ ಚಿಕಿತ್ಸೆಗಳಲ್ಲಿ ಸಲ್ಫಮದ್ದುಗಳ, ಜೀವಿರೋಧಕಗಳ (ಅಂಟಿಬಯೋಟಿಕ್ಸ್) ಅಗಾಧ ಗುಣಗಳು ಗೊತ್ತಾದಾಗಿನಿಂದ ಶಸ್ತ್ರಕ್ರಿಯಾನಂತರದ ಸೊಂಕುಗಳು ಇಲ್ಲವಾದುವು. ಹಾಗೇ ಉದರದ ಶಸ್ತ್ರವೈದ್ಯದ ಅಪಾಯವೂ ತೀರ ತಗ್ಗಿತು.[]

ವೈಶಿಷ್ಠ್ಯ

[ಬದಲಾಯಿಸಿ]

ಉದರದಲ್ಲಿ ಕೈಗೊಳ್ಳುವ ಶಸ್ತ್ರಕ್ರಿಯೆಗಳು ಆರಿಸಿದವೋ ತುರ್ತಿನವೋ ಆಗಿರಬಹುದು. ಮೊದಲೇ ನಿಧಾನವಾಗಿ ಯೋಚಿಸಿ ಬೇಕೆಂದೇ ಗೊತ್ತುಪಡಿಸಿದ ವೇಳೆಯಲ್ಲಿ ಮಾಡುವುದು ಆರಿಸಿದ್ದು. ಆದರೆ ಯಾವ ಮುನ್ಸೂಚನೆ, ಮುನ್ನೆಚ್ಚರಿಕೆಗಳೂ ಸಿಗದೆ ತತ್‍ಕ್ಷಣ ಅಥವಾ ಮುಂದಿನ ಗಳಿಗೆಯಲ್ಲೇ ಕೈಗೊಳ್ಳಬೇಕಾದ್ದು ತುರ್ತಿನದು. ಎಷ್ಟೋವೇಳೆ ರೋಗದ ಗುರುತು ಸರಿಯಾಗಿ ಪತ್ತೆಯಾಗಿದ್ದರೆ ಯಾವ ಶಸ್ತ್ರಕ್ರಿಯೆ ಆಗಬೇಕೆಂದು ಹೊಟ್ಟೆ ಕೊಯ್ಯುವ ಮೊದಲೇ ನಿರ್ಧರವಾಗಿರುತ್ತದೆ. ಕೆಲವೇಳೆ ಉದರಕೊಯ್ಸೀಳಿಗೆಯಲ್ಲಿ (ಲ್ಯಾಪರಾಟೊಮಿ) ಉದರವನ್ನು ಕೊಯ್ದು ಒಳಗೆ ಇಣಿಕಿಹಾಕುವ ತನಕ ಯಾವ ಅಂಗಕ್ಕೆ ಏನು ಮಾಡಬೇಕೆಂದು ಗೊತ್ತಿರದು; ಕೇವಲ ಊಹೆ ಚಿಂತೆಗಳು ಇರುತ್ತವೆ. ಉದರವಂತೂ ಎಷ್ಟೋವೇಳೆ ಶಸ್ತ್ರವೈದ್ಯನಿಗೂ ಸೋಜಿಗದ ಕಣವೇ.

ಜಠರ, ಕರುಳುಗಳು

ಚಿಕ್ಕ ಕರುಳು, ಹೆಗ್ಗರುಳು (ಕೋಲನ್) ಜಠರಗಳ (ಸ್ಟಮಕ್) ಮೇಲೆ ಶಸ್ತ್ರವೈದ್ಯ ನಮ್ಮಲ್ಲಿ ಸಾಮಾನ್ಯ.

ಸಾಮಾನ್ಯವಾಗಿ ಜಠರದ ಹುಣ್ಣು (ಗ್ಯಾಸ್ಟ್ರಿಕ್ ಅಲ್ಸರ್) ಅಥವಾ ಏಡಿಗಂತಿಗಾಗಿ (ಕ್ಯಾನ್ಸರ್) ಜಠರಶಸ್ತ್ರವೈದ್ಯ ನಡೆವುದು. ತಿಂದ ಉಣಿಸು ಜಠರದಿಂದ ಮುಂದಕ್ಕೆ ಸಾಗದಿರುವುದೇ ಇದರ ಶಸ್ತ್ರಕ್ರಿಯೆಗೆ ಮುಖ್ಯ ಸೂಚನೆ. ಇಡೀ (ಟೋಟಲ್) ಜಠರವನ್ನೋ ಅರೆಬರೆಯಾಗಿ (ಪಾರ್ಷಿಯಲ್) ಒಂದು ಭಾಗವನ್ನೋ ಕೊಯ್ದು ತೆಗೆದುಹಾಕುವುದೇ ಜಠರಕೊಯ್ತೆಗೆತ (ಗ್ಯಾಸ್ಟ್ರೆಕ್ಟೊಮಿ). ಸಣ್ಣ ಕರುಳಿನ ಮೊದಲ ಭಾಗವಾದ ದುರಾರ್ಗರುಳಲ್ಲಿ (ಡುಯೊಡಿನಂ) ಎದ್ದಿರುವ ಹುಣ್ಣಿಗೆ ತಿಂದ ಆಹಾರ ತಾಕದಂತಿರಿಸಲೋ ಜಠರದ ಕೆಳಮೂತಿಯ ಆಗಸೆಯಂತಿರುವ ಅನ್ನಾಗಸೆಯ (ಪೈಲೋರಸ್) ತೂತಡಕಿಗಾಗೋ (ಸ್ಟ್ರಿಕ್ಚರ್) ಕೊಯ್ದು ತೂತಿಟ್ಟು ನೇರ ದಾರಿ ಆಗುವಂತೆ ಕಂಡಿ ಇರುವುದಕ್ಕೆ ಜಠರಬರಿಗರುಳಕಂಡಿ ಇರಿತ (ಗ್ಯಾಸ್ಟ್ರೊಜೆಜುನಾಸ್ಟೊಮಿ) ಎಂದು ಹೆಸರಿದೆ. ಅನ್ನನಾಳದ ತೂತಡಕು (ಈಸೊಪೇಜಿಯಲ್ ಸ್ಟ್ರಿಕ್ಚರ್) ಆಗಿ, ಜಠರಕ್ಕೆ ಆಹಾರ ಇನಿತೂ ಇಳಿಯದಂತೆ ಆಗಿರುವಾಗ ಜಠರಕಂಡಿಇರಿತ (ಗ್ಯಾಸ್ಟ್ರಾಸ್ಟೊಮಿ) ಮಾಡಬೇಕಾಗುವುದು. ಆಗ ಹೊಟ್ಟೆಮುಗುಳಿನಲ್ಲಿ ಹೊರಕ್ಕೆ ಕಂಡಿ ಇರುವ ಹಾಗೆ ಜಠರದಲ್ಲಿ ಮಾಡಿದ ತೂತಿನ ಮೂಲಕ ಆಹಾರವನ್ನು ಹೊತ್ತೊತ್ತಿಗೆ ಹೊರಗಿಂದ ನೇರವಾಗಿ ಜಠರದೊಳಕ್ಕೆ ಹಾಕಲು ಅನುಕೂಲಿಸುತ್ತದೆ. []

ಕರುಳು

[ಬದಲಾಯಿಸಿ]

ಸಣ್ಣ ಕರುಳಿನ ಭಾಗಗಳಾದ ದುರಾರ್ಗರುಳು, ಬರಿಗರುಳು (ಜೆಜುನಂ), ಮುರಿಗರುಳುಗಳಲ್ಲಿ (ಐಲಿಯಂ) ಆತಂಕ (ಅಬ್‍ಸ್ಟ್ರಕ್ಷನ್), ಕರುಳ್ನಡುಪೊರೆಯ ಕೂಡುಕರಣಿಕೆ (ಮಸೆಂಟರಿಕ್ ತ್ರಾಂಬೋಸಿಸ್), ಇಲ್ಲವೇ ವಿಷಮ (ಮೆಲಿಗ್ನೆಂಟ್) ಗಂತಿಗಳು ಅವುಗಳೊಳಕ್ಕೂ ನುಗ್ಗಿಬಿಟ್ಟು, ಎಲ್ಲಾದರೂ ಕರುಳು ಕೊಳೆತು ಅಳಿಕೊಳಪು (ಗ್ಯಾಂಗ್ರೀನ್) ಆಗಿದ್ದಲ್ಲಿ ಕೂಡಲೇ ಶಸ್ತ್ರಕ್ರಿಯೆ ಮಾಡಬೇಕಾಗುವುದು. ಕೆಟ್ಟಿರುವ ಕರುಳಿನ ತುಂಡನ್ನು ಕೊಯ್ದು ತೆಗೆದುಹಾಕುವುದೇ ಕಡಿತೆಗೆತ (ರಿಸೆಕ್ಷನ್). ಹೆಗ್ಗರುಳಿನ ರೋಗಗಳಲ್ಲಿ ಸಾಮಾನ್ಯವಾಗಿ ಕರುಳವಾಳುರಿತ (ಆಪೆಂಡಿಸೈಟಿಸ್), ಏಡಿಗಂತಿಗಳಿಗಾಗಿ ಶಸ್ತ್ರಕ್ರಿಯೆ ಆಗುತ್ತದೆ. ಹೆಗ್ಗರುಳಿನ ಯಾವ ಭಾಗದಲ್ಲಾದರೂ ಏಡಿಗಂತಿ ಏಳಬಹುದು. ಆಗ ಅದರೊಂದಿಗೇ ಹೆಗ್ಗರುಳಿನ ಬಹುಪಾಲನ್ನು ಕೊಯ್ತೆಗೆದ ಸಾಧ್ಯವೆನಿಸಿದರೆ ಉಳಿದ ಕೊನೆಗಳನ್ನು ಹತ್ತಿರಕ್ಕೆ ತಂದು ಜೋಡಿಸಬಹುದು. ಇದು ಸಾಧ್ಯವಾಗದಿದ್ದರೆ ಹೊಟ್ಟೆಯ ಮುಂಗೋಡೆಯ ಮೂಲಕ ಮಲ ಹೊರಬೀಳಲು ಕೃತಕ ಕಂಡಿಯನ್ನು ಮಾಡಬೇಕು. ನೆಟ್ಟಗರುಳಲ್ಲೂ (ರೆಕ್ಟಂ), ಇಬ್ಬಂಕದಲ್ಲೂ (ಸಿಗ್ಮಾಯ್ಡ) ಏಡಿಗಂತಿ ಏಳುವುದು ಬಲು ಸಾಮಾನ್ಯ. ಹೆಗ್ಗರುಳೇ ಅಲ್ಲದೆ ಸುತ್ತಮುತ್ತಣ ಅಂಗಗಳಿಗೂ ಏಡಿಗಂತಿ ಹರಡಿಕೊಳ್ಳುವ ಮೊದಲೇ ಅದು ಇರುವುದು ಎಳೆಯದರಲ್ಲೇ ಗೊತ್ತಾದರೆ ವಾಸಿಮಾಡಲು ಕೊನೆಯಪಕ್ಷ ಐದು ವರ್ಷಗಳಾದರೂ ಬದುಕಿಸಿರಲು ಕಟ್ಟಿರುವ ಹೆಗ್ಗರುಳಿನ ಭಾಗವನ್ನು ತೆಗೆದು ಬಿಡಬಹುದು. []

ಹೊಟ್ಟೆಯ ಮೆತ್ತಗಿರುವ ಸ್ನಾಯು ಗೋಡೆಯಲ್ಲಿ ಎಲ್ಲಾದರೂ ತೆಳುವಾಗಿ ಬಲಗುಂದಿ ಕಂಡಿ ಇಟ್ಟಂತಾದರೆ, ಅದರ ಮೂಲಕ ಒಳಗಿರುವ ಕರುಳಿನ ಸುರುಳಿಗಳು ಹೊರಕ್ಕೆ ಉಬ್ಬಿಕೊಂಡು ಹೊರಗಣ ಬೂರು (ಎಕ್ಸ್‍ಟರ್ನಲ್ ಹರ್ನಿಯ) ಆಗಬಹುದು. ಹೊಟ್ಟೆಯ ಪೊಳ್ಳಿನೊಳಗೇ ಹೊರಬಿಗಿಪೊರೆಯ (ಪೆರಿಟೋನಿಯಲ್) ಪಟ್ಟೆಗಳ ತಡೆಯಿಂದ ಒಳಗಣ ಬೂರು (ಇಂಟರ್ನಲ್ ಹರ್ನಿಯ) ಆಗಲೂಬಹುದು. ಇದಕ್ಕಾಗಿ ಆಗುತ್ತಿರುವ ತೊಡಕಿಗೆ ತಕ್ಕಂತೆ ಬೇಗನೆ ಶಸ್ತ್ರಕ್ರಿಯೆಯಲ್ಲಿ ಕೇವಲ ಪಟ್ಟೆಗಳನ್ನೊ ಹೊಟ್ಟೆಗೋಡೆ ಕಂಡಿಯನ್ನೊ ಕತ್ತರಿಸಿ ಬಿಡಿಸಬೇಕು, ಇಲ್ಲವೇ ಕರಳುಕೊಳೆತಿದ್ದರೆ ಅಷ್ಟನ್ನೂ ಕತ್ತರಿಸಿ ಹಾಕಬೇಕಾಗುತ್ತದೆ. (ನೋಡಿ- ಬೂರು)

=ಈಲಿ, ಪಿತ್ತಕೋಶ, ಮಾಂಸಲಿಗಳು

[ಬದಲಾಯಿಸಿ]

ಗಾಯ, ಪೆಟ್ಟುಗಳಿಂದ ಬಿರಿದು ಸೀಳಿದ್ದಕ್ಕೂ ಎಕ್ಕಲಕಾಯ್ಜೀವಿ ಜಿಟ್ಟಿ (ಏಕಿನೊಕಾಕಸ್ ಸಿಸ್ಟ್) ಇಲ್ಲವೇ ಏಡಿಗಂತಿ ಬೆಳೆದಿರುವುದನ್ನು ತೆಗೆದುಹಾಕಲೂ 19ನೆಯ ಶತಮಾನದ ಕೊನೆಯ ದಶಕಗಳಲ್ಲಿ, ಕೆಟ್ಟಿರುವ ಈಲಿಯ ಭಾಗಗಳನ್ನು ಆಗಾಗ್ಗೆ ಕತ್ತರಿಸಿ ತೆಗೆದುಹಾಕುತ್ತಿದ್ದರು. ಮಾಂಸದ ಹಾಗೆ ತುಂಬಿ ಮೆತುವಾಗಿ ರಕ್ತನಾಳಗಳಿಂದ ತುಂಬಿರುವ ಅಂಗವಾದ್ದರಿಂದ ಎಲ್ಲಾದರೂ ಈಲಿ ಹರಿದರೆ ರಕ್ತಸುರಿತ ನಿಲ್ಲಿಸುವುದು ಬಲು ತಾಪತ್ರಯ ಆಗುತ್ತಿತ್ತು. ವಿದ್ಯುತ್ತು ಸುಡಿಗೆಯಿಂದಲೂ (ಎಲೆಕ್ಟ್ರೊಟರಿ) ಪರಿಣಾಮಕರವಾಗಿ ಹೊಲಿಗೆಗಳನ್ನು ಹಾಕುವುದರಿಂದಲೂ ರಕ್ತಸುರಿತವನ್ನು ತಡೆಗಟ್ಟುವಂತಾದ್ದರಿಂದ ಈಲಿಯ ಮೇಲಿನ ಶಸ್ತ್ರಕ್ರಿಯೆಗಳು ಈಗ ಸಾಮಾನ್ಯ ಆಗುತ್ತಿವೆ. ಪಿತ್ತವನ್ನು ಈಲಿಯಿಂದ ಹೊರ ಸಾಗಿಸುವ ಸಾಗುನಾಳಗಳಿಗೆ (ಡಕ್ಟ್‍ಸ್) ಎಲ್ಲಾದರೂ ಅಡ್ಡಿಯಾಗಿದ್ದರೆ ಅಡ್ಡಿಯ ಹಿಂದಿನ ಭಾಗದಿಂದ ಕರುಳಿನ ಸುರುಳಿಗೆ ಕೃತಕ ದಾರಿ ಆಗುವಂತೆ ಹೊಲೆಯಲು ಈಲಿಯಲ್ಲಿ ಒಂದಿಷ್ಟು ಭಾಗವನ್ನು ಬಿಡಿಸಿತೆಗೆವುದು ಈ ವಿಧಾನಗಳಿಂದ ಈಗ ಕೈಗೂಡುತ್ತಿವೆ.

ಪಿತ್ತಕೋಶ, ಅದರ ಸಾಗುನಾಳಗಳ ಮೇಲೂ ಶಸ್ತ್ರವೈದ್ಯ ನಡೆಯುತ್ತಿದೆ. ಸೊಂಕಿನಿಂದ ತೀರ ಕೆಟ್ಟಿರುವ ಪಿತ್ತಕೋಶವನ್ನು ತೆಗೆದುಹಾಕಿದರೂ ಜೀವಕ್ಕೆ ತೊಂದರೆಯಿಲ್ಲ. ಪಿತ್ತ ಹೊರಸಾಗುವ ಸಾಗುನಾಳಗಳಿಗೆ, ಹೇಗಾದರೂ ಸರಿಯೆ ಆತಂಕವಾದರೆ ಜಠರ, ಕರುಳುಗಳೊಂದಿಗೆ ಪಿತ್ತಕೋಶದ ಕಂಡಿ ಇರುವಂತೆ ಮಾಡಬೇಕಾಗುತ್ತದೆ. ಪಿತ್ತಗಲ್ಲುಗಳನ್ನು (ಗಾಲ್‍ಸ್ಟೋನ್ಸ್) ತೆಗೆದುಹಾಕಿದ ಮೇಲೆ ಕೆಲವೇಳೆ ಕೆಲವು ದಿನಗಳವರೆಗೂ ಪಿತ್ತರಸ ಮೈ ಹೊರಕ್ಕೆ ಸುರಿವಂತೆ ಮಾಡಲು ಪಿತ್ತಕೋಶಕ್ಕೂ ಹೊಟ್ಟೆಯ ಹೊರಭಾಗಕ್ಕೂ ಕೃತಕವಾಗಿ ಕಂಡಿ ಇರಿಸಬೇಕಾಗುವುದು. ಈ ಕ್ರಿಯೆಯ ಹೆಸರು ಪಿತ್ತಕೋಶಕಂಡಿಇರಿತ (ಕೋಲಿಸಿಸ್ಟಾಸ್ಟೊಮಿ). ಇದರಲ್ಲಿ ರಬ್ಬರ್ ಚೂರನ್ನು ತೂರಿಸಿದ್ದರೆ ಕಂಡಿ ಮುಚ್ಚಿಕೊಳ್ಳದು. ಪಿತ್ತಕೋಶವನ್ನು ಕೊಯ್ದು ತೆಗೆದುಹಾಕುವುದೇ ಪಿತ್ತಕೋಶಕೊಯ್ತೆಗೆತ (ಕೋಲಿಸಿಸ್ಟಕ್ಟೊಮಿ). ಪಿತ್ತಗಲ್ಲುಗಳನ್ನು ತೆಗೆದು ಹಾಕಿದ ಮೇಲೆ ಸೊಂಕು ಬೇರೂರಿದ್ದರೆ ಮತ್ತೆ ಕಲ್ಲು ಸೇರದಿರಲೆಂದು ಹೀಗೆ ಕೊಯ್ತೆಗೆಯಬೇಕಾಗುತ್ತದೆ. ಪಿತ್ತಕೋಶ, ಜಠರಗಳ ನಡುವೆ ಕೃತಕವಾಗಿ ದಾರಿ ಮಾಡುವುದು ಪಿತ್ತಕೋಶ ಜಠರಕಂಡಿಇರಿತ (ಕೋಲಿಸಿಸ್ಟೊ ಎಂಟರಾಸ್ಟೊಮಿ); ಇದೇ ತೆರನಾಗಿ ಪಿತ್ತಕೋಶ, ಕರುಳುಗಳ ನಡುವೆ ಮಾಡುವುದೇ ಪಿತ್ತಕೋಶ ಕರುಳುದಂಡಿಇರಿತ (ಕೋಲಿಸಿಸ್ಟೊ ಎಂಟರಾಸ್ಟೊಮಿ). ವಿಷಮಗಂತಿ ವಿಪರೀತ ಬೆಳೆದುಬಿಟ್ಟು ಹೊರಗಿಂದ ಒತ್ತುತ್ತಿರುವಾಗ ಸಾಮಾನ್ಯ ಪಿತ್ತ ಸಾಗುನಾಳಕ್ಕೆ (ಕಾಮನ್ ಬೈಲ್ ಡಕ್ಟ್) ತೆಗೆಯಲಾಗದ ಅಡಚಣೆ ಆಗಿರುವ ವೇಳೆಗಳಲ್ಲಿ ಈ ಶಸ್ತ್ರಕ್ರಿಯೆಗಳು ಆಗುತ್ತವೆ. ಮಾಂಸಲಿ ದುರಾರ್ಗರುಳ ಕೊಯ್ತೆಗೆತದಲ್ಲಿ (ಪ್ಯಾಂಕ್ರಿಯಾಟೊಡುಯೇಡಿನೆಕ್ಟೊಮಿ) ಮಾಂಸಲಿಯನ್ನು (ಪ್ಯಾಂಕ್ರಿಯಾಸ್) ದುರಾರ್ಗರುಳಿನ ಒಂದು ಭಾಗದೊಂದಿಗೆ ತೆಗೆದುಹಾಕುವಾಗ ಪಿತ್ತಸಾಗುನಾಳವನ್ನೇ ಬರಿಗರುಳಿನ ಒಂದು ಸುರುಳಿಯೊಂದಿಗೆ ಹೊಲಿದು ಕಂಡಿ ಇರಿಸುವುದುಂಟು. []

ಹಿಂದಿನ ಕಾಲದಲ್ಲಿ ಮಾಂಸಲಿಯ ಮೇಲೆ ಕೆಲವು ತೀರ ಸರಳ ಶಸ್ತ್ರಕ್ರಿಯೆಗಳನ್ನು ನಡೆಸಿದ್ದರು. ಆದರೆ ಅದರಲ್ಲಿನ ಕಲ್ಲುಗಳನ್ನು ತೆಗೆಯಲು ಒಂದು ಪಾಲನ್ನೋ ಇಡೀ ಗ್ರಂಥಿಯನ್ನೋ ತೆಗೆಯಲು ಕೈಹಾಕಿರುವುದು ಕೇವಲ ಇತ್ತೀಚೆಗೆ.

ಈಲಿಯ ಅರಿಶಿನಾರಿಗೆಯಲ್ಲಿ (ಹೆಪ್ಯಾಟಿಕ್ ಸಿರ್ರೊಸಿಸ್), ಈಲಿ ನಾರಿನಂತೆ ಗಡುಸೂ ಬಿರುಸೂ ಆದಾಗ, ಅದರ ಮೂಲಕ ರಕ್ತಹರಿವಿಗೆ ಆತಂಕವಾಗಿ ಹೊಟ್ಟೆ ತುಂಬ ನೀರು ಸೇರಿಕೊಂಡು ಉಬ್ಬರಿಸಿಕೊಂಡಿದ್ದಾಗ, ಅನ್ನನಾಳದ ಕೆಳಭಾಗದ ಸಿರಗಳು (ವೆಯ್ನ್‍ಸ್) ಸಿರಕ್ಕೂ ಕೆಳಸಿರ ಕೊಳ್ಳಕ್ಕೂ (ಇನ್‍ಫೀರಿಯರ್ ವೀನಾಕೇವ) ನಡುವೆ ಮಾಡುವ ಕೃತಕ ದಾರಿಕಂಡಿಗೆ ಎಕ್‍ನಬೊರಿಗೆ (ಎಕ್ಸ್ ಫಿಶ್ಚುಲ) ಎಂದು ಹೆಸರು.

ಉಳಿದ ಕಾರಣಗಳು

[ಬದಲಾಯಿಸಿ]

ಅಕಸ್ಮಾತ್ತಾಗಿ ದನ ಹಾಯುವುದರಿಂದ ಕೊಂಬಿನಿಂದ ಹೊಟ್ಟೆ ಬಗಿದು ಸೀಳಿದಂತಾಗಿ ಒಳಾಂಗಗಳಿಗೂ ಪೆಟ್ಟಾದಾಗ, ಉದರದ ಶಸ್ತ್ರ ವೈದ್ಯ ನಡೆಯಬೇಕಾಗುತ್ತದೆ. ಹೊಟ್ಟೆಯ ಕಿಳ್ಗುಳಿಯಲ್ಲಿ (ಪೆಲ್ವಿಸ್) ಇರುವ ಹೆಣ್ಣಿನ ಜನನಾಂಗಗಳ ಮೇಲಿನ ಶಸ್ತ್ರಕ್ರಿಯೆಗಾಗಿಯೂ ಎಂದಿನಂತೆ ಹೆರಿಗೆಯಾಗಲು ಅಸಾಧ್ಯವಾಗಿರುವಾಗ ಕೂಸನ್ನು ಗರ್ಭದಿಂದ ನೇರವಾಗಿಹೊರತೆಗೆಯಲೂ ಹೊಟ್ಟೆಯ ಶಸ್ತ್ರಕ್ರಿಯೆ ಆಗುವುದು. ಮಕ್ಕಳಾಗದಂತೆ ಮಾಡಲು, ಗರ್ಭನಾಳಗಳನ್ನು ಕತ್ತರಿಸಿ ತುದಿಗಳಿಗೆ ಗಂಟು ಬಿಗಿಸುವ ಗರ್ಭನಾಶಕೊಯ್ತೆಗೆತ (ಟ್ಯೂಬೆಕ್ಟೊಮಿ) ಇನ್ನೊಂದು ಸಣ್ಣ ಉದಾಹರಣೆ. ರೋಗಿಗೆ ಇದ್ದಕ್ಕಿದ್ದಹಾಗೆ ಹೊಟ್ಟೆಶೂಲೆ, ವಾಂತಿಗಳೊಂದಿಗೆ ವಿಪರೀತ ಸುಸ್ತಾಗಿರುವಾಗ, ರೋಗಕಾರಣವನ್ನು ಖಚಿತಪಡಿಸಿಕೊಳ್ಳಲು ಸಮಯ ಇಲ್ಲದಾಗಲೂ ಒಳಗೆ ಏನಾಗಿದೆಯೆಂದು ನೋಡಿ ತಿಳಿದೇ ಚಿಕಿತ್ಸೆ ಮಾಡಲೂ ತುರ್ತಾಗಿ ಹೊಟ್ಟೆ ಕೊಯ್ದು ನೋಡುವುದುಂಟು. ಸಾಕಷ್ಟು ರಕ್ತಹರಿದರೆ ಕಾಲು ಕೊಳೆತು ಒಣಗಿದಂತಾದಾಗ ಧಮನಿಗಳ ಸುತ್ತ ಹೆಣೆದುಕೊಂಡು ಅವು ಸೆಡೆತುಕೊಳ್ಳುವಂತೆ ಚೋದಿಸುತ್ತಿರುವ ಅನುವೇದನಾ ನರಗಂಟುಗಳನ್ನು (ಸಿಂಪತೆಟಿಕ್ ಗ್ಯಾಂಗ್ಲಿಯ) ಕಿತ್ತೊಗೆಯಲು ಅನುವೇದನಾಕೊಯ್ತೆಗೆತ (ಸಿಂಪೆಕ್ಟೊಮಿ) ಆಗುವುದು. ಜಠರದಲ್ಲಿ ಹುಣ್ಣು ಎದ್ದಿರುವಾಗ, ಆಮ್ಲ ಸುರಿತಕ್ಕೆ ಕಾರಣವಾಗಿರುವ ಅಲೆಕ ನರದ (ವೇಗಸ್‍ನರ್ವ್) ಟಿಸಿಲುಗಳನ್ನು ತೆಗೆದರೆ (ಅಲೆಕನರ ಕೊಯ್ಸೀಳಿಗೆ_ ವೇಗಾಟೊಮಿ), ಆಮ್ಲರಸದ ಸುರಿತ ತಗ್ಗಿ ರೋಗಿಯ ನರಳಿಕೆ ಶಮನವಾಗುವುದು. ಅದರಲ್ಲೆ ಜಿಟ್ಟಿಗಾಗೂ (ಸಿಸ್ಟ್) ಹಲವಾರು ರಕ್ತಕಣಗಳ ರೋಗಗಳಲ್ಲೂ ತೊರಳೆಯನ್ನು (ಸ್ಪ್ಲೀನ್, ಪ್ಲೀಹ,) ತೆಗೆವುದೇ ತೊರಳೆ ಕೊಯ್ತೆಗೆತ (ಸ್ಪ್ಲೆನೆಕ್ಟೊಮಿ). ಮಹಾಧಮನಿಯಲ್ಲಿ (ಅಯೋರ್ಟ), ಅಗಲುಬ್ಬೊ (ಅನ್ಯೂರಿಸಂ), ಧಮನಿಪೆಡಸಣೆಯ (ಆರ್ಟಿರಿಯೊಸ್ಕ್ಲೀರೋಟಿಕ್) ಅಡಚಣೆಯೋ ಆಗಿದ್ದರೆ ಆ ಭಾಗವನ್ನೇ ತೆಗೆದು ಹಾಕಿ ಒಂಗುವ ನಾಟಿಗಳನ್ನು (ಪ್ಲಾಸ್ಟಿಕ್ ಗ್ರಾಫ್ಟ್‍ಸ್) ಹಾಕುವುದಕ್ಕೂ ಉದರದ ಶಸ್ತ್ರಕ್ರಿಯೆ ಕೈಗೊಳ್ಳುವುದುಂಟು ಮೂತ್ರಪಿಂಡಗಳು, ಅಡ್ರಿನಲ್ ಗ್ರಂಥಿಗಳು, ಹೊಟ್ಟೆಯ ಶಸ್ತ್ರಕ್ರಿಯೆಗಾಗಿ ಕೆಲವೇಳೆ ಹೊಟ್ಟೆಯನ್ನು ಕೊಯ್ದು ಒಳಹೊಗಬೇಕಾಗುತ್ತದೆ. ಕಂಕೋಶದಲ್ಲಿ (ಪ್ರಾಸ್ಟೇಟ್) ದೊಡ್ಡದಾಗಿ ಬೆಳೆದಾಗ ತೆಗೆಯಲೂ ಹೊಟ್ಟೆಯ ಕೆಳಭಾಗವನ್ನು ಕೊಯ್ದು ಶಸ್ತ್ರಕ್ರಿಯೆ ಮಾಡುವುದಾದರೂ ಹೊಟ್ಟೆಯ ಪೊಳ್ಳಿನೊಳಕ್ಕೆ ಹೋಗದ್ದರಿಂದ ಇದು ನಿಜವಾಗಿ ಉದರದ ಶಸ್ತ್ರಕ್ರಿಯೆ ಅಲ್ಲ. []


ಉಲ್ಲೇಖಗಳು

[ಬದಲಾಯಿಸಿ]
  1. https://www.vidanthealth.com/Services-Treatments/Treatments/Abdominal-Surgery
  2. https://www.vidanthealth.com/Services-Treatments/Treatments/Abdominal-Surgery
  3. https://www.docdoc.com/info/procedure/abdominal-surgery/
  4. https://medlineplus.gov/ency/article/002978.htm
  5. https://www.medstarwashington.org/our-services/surgery/treatments/colon-and-rectal-surgery/abdominal-surgery/
  6. "ಆರ್ಕೈವ್ ನಕಲು". Archived from the original on 2020-01-12. Retrieved 2020-01-12.