ಉತ್ಪಾದನ ಸೂಚ್ಯಂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಪಾದನ ಸೂಚ್ಯಂಕ ಎಂದರೆ ಒಂದು ದೇಶದ ಇಲ್ಲವೆ ಉತ್ಪಾದನಾಂಗದ ಉತ್ಪಾದನೆಯ ಮಟ್ಟದ ಬದಲಾವಣೆಯನ್ನು ಕಾಲ ಅಥವಾ ಪ್ರದೇಶಾನುಗುಣವಾಗಿ ಅಳೆಯಲು ಬಳಸುವ ಸಲಕರಣೆ (ಪ್ರೊಡಕ್ಷನ್ ಇಂಡೆಕ್ಸ್).

ಹಿನ್ನೆಲೆ[ಬದಲಾಯಿಸಿ]

ಉತ್ಪಾದನೆಯ ಏರಿಳಿತಗಳನ್ನಳೆಯಲು ಉಪಯೋಗಿಸುವ ಈ ಸಲಕರಣೆಯ ತಯಾರಿಕೆ ಸುಲಭವಲ್ಲದಿದ್ದರೂ ಇದರ ಹಿಂದಿರುವ ತಾತ್ತ್ವಿಕ ಸರಣಿ ಸರಳವಾದದ್ದು. ಒಂದು ಕಾರ್ಖಾನೆಯಲ್ಲಿ ಮೊದಲನೆಯ ವರ್ಷದಲ್ಲಿ ಒಂದು ಪದಾರ್ಥದ ಉತ್ಪತ್ತಿ ೧೫೦ ಘಟಕಗಳಷ್ಟಿದ್ದು ಮರುವರ್ಷ ೨೨೫ ಘಟಕಗಳಿಗೆ ಏರಿದರೆ ಆಗ ಮೊದಲನೆಯ ವರ್ಷದ್ದಕ್ಕಿಂತ ಎರಡನೆಯ ವರ್ಷದ ಉತ್ಪತ್ತಿ ಶೇಕಡಾ ೫೦ರಷ್ಟು ಹೆಚ್ಚಿದ ಹಾಗಾಯಿತು. ಇಲ್ಲಿ ಮೊದಲನೆಯ ವರ್ಷದ ಉತ್ಪತ್ತಿ ೧೦೦ ಎಂದು ಭಾವಿಸಿದರೆ ಎರಡನೆಯದರದು ೧೫೦ (೫೦% ಹೆಚ್ಚು) ಎಂದಾಗುತ್ತದೆ. ಇದೇ ರೀತಿಯಾಗಿ ಎರಡು ಕಾರ್ಖಾನೆಗಳ ಅಥವಾ ಪ್ರದೇಶಗಳ ಉತ್ಪಾದನೆಯನ್ನು ತೌಲನಿಕವಾಗಿ ಪರಿಶೀಲಿಸುವುದು ಸಾಧ್ಯ. ಇಂಥ ಪರಿಶೀಲನೆಗಳಿಗೆ ಒದಗಿ ಬರುವ ಶೇಕಡಾ ವಿಧಾನವೇ ಉತ್ಪಾದನ ಸೂಚ್ಯಂಕದ ವಿಧಾನ. ಪ್ರದೇಶಾನುಗುಣ ಸೂಚ್ಯಂಕಕ್ಕಿಂತ ಕಾಲಾನುಗುಣ ಸೂಚ್ಯಂಕವೇ ಹೆಚ್ಚಾಗಿ ಬಳಕೆಯಲ್ಲಿದೆ.[೧]

ರಚನೆ[ಬದಲಾಯಿಸಿ]

ಉತ್ಪಾದನ ಸೂಚ್ಯಂಕವನ್ನು ರಚಿಸಬೇಕಾದರೆ ಮೊಟ್ಟ ಮೊದಲಿಗೆ ಆಧಾರ ವರ್ಷವೊಂದನ್ನು ನಿರ್ಧರಿಸಬೇಕು. ಆ ವರ್ಷದ ಉತ್ಪಾದನೆಯನ್ನು ಆಧಾರವಾಗಿಟ್ಟುಕೊಂಡು (೧೦೦) ಇತರ ವರ್ಷಗಳ (ಪರಾಮರ್ಶನ ವರ್ಷ) ಉತ್ಪಾದನೆಯನ್ನು ಇದರ ಶೇಕಡಾವಾರಾಗಿ ವ್ಯಕ್ತಪಡಿಸಬೇಕು. ಯಾವುದನ್ನು ಆಧಾರ ವರ್ಷವಾಗಿ ಆರಿಸಿಕೊಳ್ಳಬೇಕೆಂಬುದನ್ನು ನಿರ್ಧರಿಸುವಾಗ ಎರಡು ಅಂಶಗಳ್ನು ಮುಖ್ಯವಾಗಿ ಗಮನಿಸಬೇಕು. ಮೊದಲನೆಯದಾಗಿ, ಪರಾಮರ್ಶನ ವರ್ಷಕ್ಕಿಂತ ಆಧಾರವರ್ಷ ಅತಿ ಹಿಂದಿನದಾಗಿರಬಾರದು. ಅರ್ಥವ್ಯವಸ್ಥೆಯಲ್ಲಿ ದೀರ್ಘಕಾಲದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಿದ್ದರೆ ಹೋಲಿಕೆ ಅವೈಜ್ಞಾನಿಕವಾಗುತ್ತದೆ.[೨]

ಎರಡನೆಯದಾಗಿ, ಆಧಾರವಾಗಿ ಆಯ್ಕೆಗೊಳ್ಳುವ ವರ್ಷ ಯಥಾಸ್ಥಿತಿಯದಾಗಿರಬೇಕು. ಆರ್ಥಿಕ ಚಟುವಟಿಕೆಯನ್ನು ಕುಂಠಿತಗೊಳಿಸುವ ಅಥವಾ ಉದ್ರೇಕಗೊಳಿಸುವ ಯಾವ ಘಟನೆಗಳೂ ಆ ವರ್ಷ ಇದ್ದಿರಬಾರದು. ಇಂಥ ಯಥಾಸ್ಥಿತಿ ವರ್ಷ ದೊರಕದಿದ್ದರೆ ಒಂದಕ್ಕಿಂತ ಹೆಚ್ಚು ವರ್ಷಗಳ ಸರಾಸರಿಯ ವಿಧಾನವನ್ನು ಅನುಸರಿಸಬಹುದು.

ಸೂಚ್ಯಂಕದಲ್ಲಿ ತೌಲನಿಕ ಪರಿಶೀಲನೆಗೆ ಒಳಪಡಿಸಬೇಕಾದ ಉತ್ಪಾದನೆಗಳು ಯಾವುವೆಂಬುದನ್ನು ತೀರ್ಮಾನಿಸುವುದೂ ಒಂದು ಮುಖ್ಯ ಹಂತ. ಯಾವುದೇ ದೇಶದಲ್ಲಿ ತಯಾರಾಗುವ ಪದಾರ್ಥಗಳು ಸಾವಿರಾರು. ಈ ಎಲ್ಲ ಪದಾರ್ಥಗಳ ಉತ್ಪಾದನೆಯಲ್ಲಾಗುವ ಬದಲಾವಣೆಯನ್ನೂ ಸೂಚ್ಯಂಕದಲ್ಲಿ ನಮೂದಿಸುವುದು ಸಾಧ್ಯವಿಲ್ಲವಾದ್ದರಿಂದ ಕೆಲವನ್ನು ಮಾತ್ರ ಆರಿಸಿಕೊಳ್ಳಬೇಕಾಗುತ್ತದೆ. ಈ ಆಯ್ಕೆಯಲ್ಲಿ ಗಮನದಲ್ಲಿಡಬೇಕಾದ ವಿಚಾರಗಳು ಮೂರು: (೧) ಆದಷ್ಟು ಪ್ರಾತಿನಿಧಿಕವಾದ ಪದಾರ್ಥಗಳನ್ನು ಆರಿಸಿಕೊಳ್ಳಬೇಕು. (೨) ಆದಷ್ಟು ಹೆಚ್ಚುಸಂಖ್ಯೆಯಲ್ಲಿ ಪದಾರ್ಥಗಳನ್ನು ಆರಿಸಿಕೊಳ್ಳಬೇಕು ಮತ್ತು (೩) ಈ ಪದಾರ್ಥಗಳು ಆಧಾರ ವರ್ಷದಲ್ಲೂ ಪರಾಮರ್ಶನೆಗೆ ಒಳಗಾದ ವರ್ಷಗಳಲ್ಲೂ ಉತ್ಪಾದಿತವಾಗುತ್ತಿದ್ದಿರಬೇಕು.

ಅಳತೆಗೋಲುಗಳು[ಬದಲಾಯಿಸಿ]

ಉತ್ಪಾದನ ಸೂಚ್ಯಂಕ ಒಂದು ದೇಶದ ಒಟ್ಟು ಉತ್ಪಾದನೆಯಲ್ಲಿ ಒಂದು ಅವಧಿಯಲ್ಲಾಗಿರುವ ಬದಲಾವಣೆಯನ್ನು ತೋರಿಸಬೇಕಾಗಿರುವುದರಿಂದ ಇಲ್ಲಿ ಆರಿಸಲಾದ ಎಲ್ಲ ಪದಾರ್ಥಗಳ ಉತ್ಪಾದನೆಯ ಮೊತ್ತವನ್ನು ಕಂಡುಹಿಡಿಯುವುದು ಅವಶ್ಯ. ಆದರೆ ಈ ಕಾರ್ಯ ಕಷ್ಟಕರ. ಏಕೆಂದರೆ ಪದಾರ್ಥಗಳನ್ನು ಅಳೆಯುವ ವಿಧಾನಗಳು ಬೇರೆ ಬೇರೆ. ಉದಾಹರಣೆಗೆ ಬಟ್ಟೆ, ಧಾನ್ಯ ಹಾಗೂ ನಾನಾ ಸಲಕರಣೆಗಳನ್ನು ಒಂದೇ ರೀತಿಯಲ್ಲಿ ಮಾಪಿಸಲಾಗುವುದಿಲ್ಲ. ಒಂದರದು ಅಳತೆಯಾದರೆ ಇನ್ನೊಂದರದು ತೂಕ; ಮತ್ತೊಂದನ್ನು ಎಣಿಕೆಯಲ್ಲೇ ವ್ಯಕ್ತಪಡಿಸುವುದು ಸಾಧ್ಯ. ಆದ್ದರಿಂದ ಉತ್ಪಾದನೆಯ ಮೊತ್ತವನ್ನು ಕಂಡುಹಿಡಿಯುವಾಗ ಈ ನಾನಾ ಪರಿಮಾಣಗಳ ಮೌಲ್ಯವನ್ನೆಲ್ಲ ಹಣಕ್ಕೆ ಪರಿವರ್ತಿಸಬೇಕಾಗುತ್ತದೆ. ವಸ್ತುಗಳ ಮೌಲ್ಯನಿರ್ಧಾರ ಮಾಡುವಾಗ ಸಾಮಾನ್ಯವಾಗಿ ಸಗಟು ಬೆಲೆಗಳನ್ನು ಗಣನೆಗೆ ತೆಗೆದುಕೊಳ್ಳುವುದು ಸಾಮಾನ್ಯ. ಅದಲ್ಲದೆ ಬೆಲೆಗಳ ಏರಿಳಿತದಿಂದಾಗಿ ಪರಾಮರ್ಶನ ವರ್ಷದಲ್ಲಿ ಮೌಲ್ಯ ವಿರೂಪಗೊಳ್ಳದಿರುವಂತೆ ಎಚ್ಚರಿಕೆ ವಹಿಸಬೇಕು. ಆಧಾರವರ್ಷದ ಬೆಲೆಗಳಲ್ಲೇ ಎಲ್ಲ ಪದಾರ್ಥಗಳ ಮೌಲ್ಯ ನಿರ್ಧಾರ ಮಾಡುವುದು ಅಗತ್ಯ. ಆಧಾರವರ್ಷದ ಸಗಟು ಬೆಲೆಯ ಆಧಾರದ ಮೇಲೆ ಪ್ರತಿ ಪದಾರ್ಥದ ಒಟ್ಟು ಮೌಲ್ಯವನ್ನು ಆಧಾರವರ್ಷಕ್ಕೂ ಪರಾಮರ್ಶನ ವರ್ಷಕ್ಕೂ ಕಂಡುಹಿಡಿಯಬೇಕು.[೩]

ಆಧಾರವರ್ಷದಲ್ಲಿ ತಯಾರಾದ ಪ್ರತಿಪದಾರ್ಥದ ಮೌಲ್ಯವನ್ನೂ ೧೦೦ ಎಂದು ಭಾವಿಸಿ, ಪರಾಮರ್ಶನ ವರ್ಷದಲ್ಲಿ ತಯಾರಾದ ಅದೇ ಪದಾರ್ಥದ ಮೌಲ್ಯವನ್ನು ಆಧಾರವರ್ಷದ ಮೌಲ್ಯದ ಶೇಕಡಾ ರೂಪಕ್ಕೆ ಈ ಕೆಳಗಿನ ಸೂತ್ರದ ಮೂಲಕ ಪರಿವರ್ತಿಸಬೇಕು:

ಪರಾಮರ್ಶನ ವರ್ಷದ ಉತ್ಪನ್ನ ( ಆಧಾರ ವರ್ಷದ ಸಗಟು ಬೆಲೆ ( ೧೦೦ ಆಧಾರ ವರ್ಷದ ಉತ್ಪನ್ನ ( ಆಧಾರ ವರ್ಷದ ಸಗಟು ಬೆಲೆ

ಇದನ್ನೇ ಸಂಕೇತಗಳ ಮೂಲಕ ಹೀಗೆ ತೋರಿಸಬಹುದು:


ಇಲ್ಲಿ q ಎಂಬುದು ಉತ್ಪನ್ನದ ಮೊತ್ತ;; ಠಿ ಎಂಬುದು ಬೆಲೆ. ಉಪಲಿಪಿಗಳಾದ (ಸಬ್ ಸ್ಕ್ರಿಪ್ಟ್ಸ್) ೦ ಮತ್ತು ೧ ಗಳು ಕ್ರಮವಾಗಿ ಆಧಾರ ಹಾಗೂ ಪರಾಮರ್ಶನ ವರ್ಷಗಳನ್ನು ಸೂಚಿಸುತ್ತವೆ. ಪರಾಮರ್ಶನ ವರ್ಷದಲ್ಲಿ ಉತ್ಪಾದಿಸಲಾದ ನಾನಾ ಪದಾರ್ಥಗಳ ಪರಿಮಾಣಗಳ ಮೌಲ್ಯಗಳ (ಆಧಾರವರ್ಷದ ಬೆಲೆಗಳಲ್ಲಿ) ಮೊತ್ತವನ್ನು ಆಧಾರವರ್ಷದ ಉತ್ಪಾದನೆಯಾದ ಪರಿಮಾಣಗಳ ಮೌಲ್ಯಗಳ ಮೊತ್ತದಿಂದ ಭಾಗಿಸಿ ಬಂದ ಸಂಖ್ಯೆಯನ್ನು ೧೦೦ರಿಂದ ಗುಣಿಸಿದರೆ ಸಿಗುವುದೇ ಪರಾಮರ್ಶನ ವರ್ಷದ ಉತ್ಪಾದನ ಸೂಚ್ಯಂಕ.

ಮೌಲ್ಯದ ಪರಿಗಣನೆ[ಬದಲಾಯಿಸಿ]

ಆಧಾರವರ್ಷದಲ್ಲಿ ಪ್ರತಿವಸ್ತುವಿನ ಮೌಲ್ಯವನ್ನೂ ೧೦೦ ಎಂದು ಪರಿಗಣಿಸುವ ಕಾರಣ ಆಧಾರವರ್ಷದ ಪದಾರ್ಥ ಸೂಚ್ಯಂಕ ೧೦೦. ಉತ್ಪಾದನೆಯಲ್ಲಾದ ಬದಲಾವಣೆಗೆ ಅನುಸಾರವಾಗಿ ಪರಾಮರ್ಶನ ವರ್ಷದ ಸೂಚ್ಯಂಕ ೧೦೦ಕ್ಕಿಂತ ಹೆಚ್ಚು ಅಥವಾ ಕಡಿಮೆ ಇರಬಹುದು. ಆಧಾರವರ್ಷದ ಪದಾರ್ಥಸೂಚ್ಯಂಕಗಳು ಪರಾಮರ್ಶನ ವರ್ಷದ ಪದಾರ್ಥಸೂಚ್ಯಂಕಗಳ ಸರಾಸರಿಗಳನ್ನು (ಪದಾರ್ಥ ಸೂಚ್ಯಂಕಗಳ ಮೊತ್ತವನ್ನು ಪದಾರ್ಥಗಳ ಸಂಖ್ಯೆಯಿಂದ ಭಾಗಿಸಿ) ಕಂಡುಹಿಡಿಯಬೇಕು. ಈ ಎರಡು ಸರಾಸರಿಗಳ ವ್ಯತ್ಯಾಸವೇ ಆಧಾರ ಮತ್ತು ಪರಾಮರ್ಶನ ವರ್ಷಗಳ ನಡುವೆ ಉತ್ಪನ್ನದಲ್ಲಾಗಿರುವ ಬದಲಾವಣೆಯನ್ನು ಶೇಕಡಾ ರೂಪದಲ್ಲಿ ಸೂಚಿಸುತ್ತದೆ. ಒಂದು ದೇಶದಲ್ಲಿ ಗೋದಿ, ಬಟ್ಟೆ ಮತ್ತು ಕಾಫಿ ಮಾತ್ರ ಉತ್ಪಾದನೆಯಾಗುತ್ತಿವೆಯೆಂದು ಭಾವಿಸಿ, ಈ ಪದಾರ್ಥಗಳ ಉತ್ಪತ್ತಿಗಳ ಮೊತ್ತಗಳನ್ನೂ ಆಧಾರವರ್ಷದ ಬೆಲೆಗಳನ್ನೂ ಮುಂದೆ ಕೋಷ್ಟಕದಲ್ಲಿ ಕೊಟ್ಟಿದೆ.

ಆ ಕೋಷ್ಟಕದಲ್ಲಿನ ಆಧಾರ ಮತ್ತು ಪರಾಮರ್ಶನವರ್ಷಗಳ ಸೂಚ್ಯಂಕಗಳ ಮೊತ್ತಗಳನ್ನು ಪದಾರ್ಥಗಳ ಸಂಖ್ಯೆಯಾದ ಮೂರರಿಂದ ಭಾಗಿಸಿದಾಗ ಆಧಾರವರ್ಷದ ಉತ್ಪಾದನ ಸೂಚ್ಯಂಕವೂ (೧೦೦) ಪರಾಮರ್ಶನವರ್ಷದ ಉತ್ಪಾದನ ಸೂಚ್ಯಂಕವೂ (೨೧೬.೬) ದೊರಕುತ್ತವೆ. ಎಂದರೆ ೨೦೦೧ರಲ್ಲಿ ಉತ್ಪಾದನೆಯ ಮೌಲ್ಯ ಶೇಕಡಾ ೧೧೬.೬ರಷ್ಟು ಹೆಚ್ಚಿದೆ ಎಂಬುದು ವ್ಯಕ್ತವಾದಂತಾಯಿತು. ಇದೇ ಮಾದರಿಯಲ್ಲಿ ಇತರ ವರ್ಷಗಳಿಗೂ ಉತ್ಪಾದನ ಸೂಚ್ಯಂಕ ತಯಾರಿಸುವುದು ಸಾಧ್ಯ.

ಉತ್ಪಾದನ ಸೂಚ್ಯಂಕ (ಆಧಾರ ವರ್ಷ ೧೯೯೧=೧೦೦) ೧೯೯೧: ಆಧಾರ ವರ್ಷ ೨೦೦೧: ಪರಾಮರ್ಶನ ವರ್ಷ

ಪದಾರ್ಥ ಘಟಕ ಉತ್ಪತ್ತಿ ('೦೦೦) ಬೆಲೆ ರೂ. ಮೌಲ್ಯ ರೂ.(೦೦೦) ಪದಾರ್ಥ ಸೂಚ್ಯಂಕ ಉತ್ಪತ್ತಿ ('೦೦೦) ಆಧಾರವರ್ಷದ ಬೆಲೆ ರೂ. ಮೌಲ್ಯ ರೂ. ('೦೦೦) ಪದಾರ್ಥ ಸೂಚ್ಯಂಕ


೧ ಗೋದಿ ಪಲ್ಲ ೧೦೦ ೩೦ ೩,೦೦೦ ೧೦೦ ೩೦೦ ೩೦ ೯,೦೦೦ ೩೦೦

೨ ಬಟ್ಟೆ ಗಜ ೧,೦೦೦ ೨ ೨,೦೦೦ ೧೦೦ ೧,೫೦೦ ೨ ೩,೦೦೦ ೧೫೦

೩ ಕಾಫಿ ಸೇರು ೧೦೦ ೩ ೫೦೦ ೧೦೦ ೨೦೦ ೫ ೧,೦೦೦ ೨೦೦

೩೦೦


೬೫೦

ಸೂಚ್ಯಂಕ


ಮೇಲೆ ಸರಳ ಸರಾಸರಿ ಪರಿಮಾಣಾನುಪಾತಗಳನ್ನು (ಸಿಂಪಲ್ ಆವರೇಜ್ ಕ್ವಾಂಟಿಟಿ ರಿಲೆಟಿವ್ಸ್) ಕೊಡಲಾಗಿದೆ. ಆದರೆ ವಾಸ್ತವವಾಗಿ ಈ ನಾನಾ ಪದಾರ್ಥಗಳ ಪರಸ್ಪರ ಪ್ರಾಮುಖ್ಯವನ್ನು (ತೂಕ) ಪರಿಗಣಿಸಿ ಉತ್ಪಾದನ ಸೂಚ್ಯಂಕ ತಯಾರಿಸುವುದು ಹೆಚ್ಚು ಸೂಕ್ತ. ಉದಾಹರಣೆಗೆ, ೨೦೦೨ರಲ್ಲಿ ಬಟ್ಟೆ ಉತ್ಪಾದನೆ ೫೦% ರಷ್ಟು ಕಡಿಮೆಯಾಗಿ, ಕಾಫಿಯ ಉತ್ಪಾದನೆ ೫೦%ರಷ್ಟು ಅಧಿಕಗೊಂಡಿದ್ದು ಆಧಾರವರ್ಷದಲ್ಲಿ ಬಟ್ಟೆ ಮತ್ತು ಕಾಫಿಗಳ ಉತ್ಪತ್ತಿ ಮೌಲ್ಯ ರೂ. ೨೫,೦೦,೦೦೦ರಷ್ಟಿದ್ದು ೨೦೦೧ರಲ್ಲಿ ರೂ. ೧೭,೫೦,೦೦೦ ಆಗಿದ್ದರೆ ವಾಸ್ತವವಾಗಿ ಉತ್ಪತ್ತಿ ಮೌಲ್ಯ ೩೦%ರಷ್ಟು ಕಡಿಮೆಗೊಳ್ಳುತ್ತದೆ. ಬಟ್ಟೆಯ ಉತ್ಪತ್ತಿಯ ಮೊತ್ತ ಹೆಚ್ಚಾಗಿದ್ದು ಕಾಫಿಯದು ತೀರ ಕಡಿಮೆಯಾಗಿರುವುದು ಇದಕ್ಕೆ ಕಾರಣ. ಆದರೆ ಸೂಚ್ಯಂಕ ಈ ವ್ಯತ್ಯಾಸವನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಈ ವಸ್ತುಗಳ ಉತ್ಪನ್ನ ಪ್ರಮಾಣಗಳ ಪರಸ್ಪರ ವ್ಯತ್ಯಾಸಗಳನ್ನು ಸೂಚ್ಯಂಕದಲ್ಲಿ ಪ್ರತಿಬಿಂಬಿಸುವ ದೃಷ್ಟಿಯಿಂದ ಈ ಪದಾರ್ಥಗಳ ತೂಕಗಳನ್ನು ಆಧಾರವರ್ಷದಲ್ಲಿನ ಪರಸ್ಪರ ಮೌಲ್ಯ ಪ್ರಮಾಣಗಳ ಆಧಾರದ ಮೇಲೆ ನಿರ್ಧರಿಸಲಾಗುವುದು. ಮೇಲಿನ ಉದಾಹರಣೆಯ ಪ್ರಕಾರ ಆಧಾರವರ್ಷದಲ್ಲಿ ಬಟ್ಟೆಯ ಮೌಲ್ಯ ಪ್ರಮಾಣ ರೂ. ೨೦,೦೦,೦೦೦; ಕಾಫಿಯದು ರೂ ೫,೦೦,೦೦೦. ಎಂದರೆ ಬಟ್ಟೆ ಕಾಫಿಗಿಂತ ನಾಲ್ಕರಷ್ಟು ಮುಖ್ಯ. ಈ ಆಧಾರದ ಮೇಲೆ ಕಾಫಿಯ ತೂಕ ೧ ಆದರೆ ಬಟ್ಟೆಯದು ೪. ಈ ತೂಕಗಳನ್ನು ಗಮನದಲ್ಲಿಟ್ಟುಕೊಂಡು ಸೂಚ್ಯಂಕವನ್ನು ತಯಾರಿಸಿದರೆ ಉತ್ಪತ್ತಿ ಮೌಲ್ಯಗಳಲ್ಲಾಗುವ ವ್ಯತ್ಯಾಸಗಳನ್ನು ಸರಿಯಾಗಿ ಪ್ರತಿಬಿಂಬಿಸಬಹುದು. ಪ್ರತಿ ಪದಾರ್ಥದ ಸೂಚ್ಯಂಕವನ್ನೂ ಅದರ ತೂಕದಿಂದ ಗುಣಿಸಿ ಅನಂತರ ಬರುವ ವಸ್ತುಸೂಚ್ಯಂಕಗಳ ಬಟ್ಟು ಮೊತ್ತವನ್ನು ಒಟ್ಟು ತೂಕಗಳಿಂದ ಭಾಗಿಸಿದರೆ ಸಿಗುವುದೇ ಭಾರಿತ ಉತ್ಪಾದನ ಸೂಚ್ಯಂಕ. ಮುಂದೆ ಕೊಟ್ಟಿರುವ ಕೋಷ್ಟಕದಲ್ಲಿ ಬಟ್ಟೆ ಕಾಫಿಗಳೆರಡನ್ನು ಮಾತ್ರ ತೆಗೆದುಕೊಂಡು ಮೇಲೆ ಹೇಳಿದ ಉದಾಹರಣೆಗಳಿಂದ ಭಾರಿತ ಉತ್ಪಾದನ ಸೂಚ್ಯಂಕವನ್ನು ಗುಣಿಸಿದೆ.

ಆ ಕೋಷ್ಟಕದಲ್ಲಿ ಬಟ್ಟೆಯ ಒಟ್ಟು ಉತ್ಪನ್ನಮೌಲ್ಯ ೫೦%ರಷ್ಟು ಕಡಿಮೆಯಾಗಿದೆಯೆಂದೂ ಕಾಫಿಯ ಒಟ್ಟು ಉತ್ಪನ್ನ ಮೌಲ್ಯ ೫೦%ರಷ್ಟು ಅಧಿಕಗೊಂಡಿದೆಯೆಂದೂ ಭಾವಿಸಿಕೊಂಡು, ಭಾರಿತ ಉತ್ಪಾದನ ಸೂಚ್ಯಂಕ ತಯಾರಿಸಲಾಗಿದೆ. ಆಧಾರವರ್ಷದ ಭಾರಿತ ಪದಾರ್ಥಸೂಚ್ಯಂಕದ ಮೊತ್ತವನ್ನೂ (() ಪರಾಮರ್ಶನ ವರ್ಷದ ಭಾರಿತ ಪದಾರ್ಥಸೂಚ್ಯಂಕದ ಮೊತ್ತವನ್ನೂ (() ತೂಕಗಳ ಮೊತ್ತದಿಂದ (W) ಭಾಗಿಸಿದಾಗ ಲಬ್ಧವಾಗುವ ಆಧಾರವರ್ಷದ ಸರಾಸರಿ ಭಾರಿತ ಪದಾರ್ಥ ಸೂಚ್ಯಂಕ ೧೦೦; ಪರಾಮರ್ಶನ ವರ್ಷದ ಸರಾಸರಿ ಭಾರಿತ ಪದಾರ್ಥ ಸೂಚ್ಯಂಕ ೭೦. ಎಂದರೆ ೨೦೦೧ರಲ್ಲಿ ಬಟ್ಟೆ ಮತ್ತು ಕಾಫಿಯ ಉತ್ಪನ್ನ ಮೌಲ್ಯಗಳು ಮೇಲೆ ಹೇಳಿದಂತೆ ಬದಲಾವಣೆಹೊಂದಿದ ಕಾರಣ ಒಟ್ಟು ಉತ್ಪಾದನ ಮೌಲ್ಯ ೩೦ರಷ್ಟು ಕಡಿಮೆ.[೪]

ಭಾರತದಲ್ಲಿ ಬಳಕೆಯಲ್ಲಿರುವ ಉತ್ಪಾದನ ಸೂಚ್ಯಂಕ[ಬದಲಾಯಿಸಿ]

ಭಾರತದಲ್ಲಿ ಬಳಕೆಯಲ್ಲಿರುವ ಉತ್ಪಾದನ ಸೂಚ್ಯಂಕಗಳನ್ನು ಎರಡು ಶಿರೋನಾಮಗಳಲ್ಲಿ ಕೊಡಬಹುದು. (೧) ವ್ಯಾವಸಾಯಿಕ ಉತ್ಪಾದನ ಸೂಚ್ಯಂಕ ಮತ್ತು (೨) ಕೈಗಾರಿಕಾ ಉತ್ಪಾದನ ಸೂಚ್ಯಂಕ.

ವ್ಯಾವಸಾಯಿಕ ಉತ್ಪಾದನ ಸೂಚ್ಯಂಕವನ್ನು ಭಾರತದ ರಿಸರ್ವ್ ಬ್ಯಾಂಕ್ ಅಲ್ಲದೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯೂ ದೆಹಲಿಯ ಈಸ್ಟರ್ನ್ ಎಕಾನೊಮಿಸ್ಟ್ ವಾರಪತ್ರಿಕೆಯೂ ತಯಾರಿಸುತ್ತವೆ. ಭಾರತದ ಆಹಾರ ಮತ್ತು ಕೃಷಿ ಸಚಿವಾಲಯದವರು ಈ ಸೂಚ್ಯಂಕವನ್ನು ೧೯೪೯ರಲ್ಲಿ ತಯಾರಿಸುತ್ತಿದ್ದರು. ಅಲ್ಲಿಂದೀಚೆಗೆ ಇದು ನಿಂತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಭಾರತವನ್ನೊಳಗೊಂಡು ಪ್ರಪಂಚದ ಅನೇಕ ದೇಶಗಳ ವ್ಯಾವಸಾಯಿಕ ಉತ್ಪಾದನ ಸೂಚ್ಯಂಕಗಳನ್ನು ಪ್ರಕಟಿಸುತ್ತಿದೆ. ಈಸ್ಟರ್ನ್ ಎಕಾನೊಮಿಸ್ಟ್ ೧೪ ಪದಾರ್ಥಗಳನ್ನೊಳಗೊಂಡ ಸೂಚ್ಯಂಕವನ್ನು ೧೯೩೯-೪೦ನೇಯ ವರ್ಷದಿಂದ ಕೊಡುತ್ತಿದೆ. ಭಾರತದ ರಿಸರ್ವ್ ಬ್ಯಾಂಕಿನ ಸೂಚ್ಯಂಕ ೧೭ ಪದಾರ್ಥಗಳನ್ನೊಳಗೊಂಡದ್ದು. ಇದು ೧೯೩೯-೪೦ರಿಂದ ಈಚಿನ ವರ್ಷಗಳಿಗೆ ಸಿಗುತ್ತದೆ.೧೯೪೮-೪೯ರ ವರೆಗೆ ೧೯೩೯-೩೭ ಮತ್ತು ೧೯೩೮-೩೯ರ ಸರಾಸರಿಯೇ ಆಧಾರ ವರ್ಷವಾಗಿದ್ದು, ೧೯೪೯-೫೦ರಿಂದ ಇದು ೧೯೪೮-೪೯ ಆಗಿದೆ. ಇದು ಭಾರಿತ ಉತ್ಪಾದನ ಸೂಚ್ಯಂಕ. ಇಲ್ಲಿ ಉತ್ಪತ್ತಿ ಮೌಲ್ಯಗಳನ್ನು ತೂಕಗಳನ್ನಾಗಿ ಪರಿಗಣಿಸಲಾಗಿದೆ. ಸೂಚ್ಯಂಕದಲ್ಲಿ ಉಪಯೋಗಿಸಿರುವ ಪದಾರ್ಥಗಳೂ ಅವುಗಳ ತೂಕಗಳೂ ಈ ರೀತಿ ಇವೆ (ತೂಕಗಳನ್ನು ಆವರಣಗಳಲ್ಲಿ ಕೊಡಲಾಗಿದೆ): ಅಕ್ಕಿ (೩೮), ಜೋಳ ಮತ್ತು ನವಣೆ (೧೨), ಮೆಕ್ಕೆಜೋಳ (೨), ರಾಗಿ (೨), ಗೋದಿ (೧೪), ಬಾರ್ಲಿ (೪), ಕಾಳು (೭), ಎಳ್ಳು (೧), ನೆಲಗಡಲೆ (೭), ಸಾಸಿವೆ (೨), ಅಗಸೆ ಬೀಜ (೧), ಹರಳಿನ ಬೀಜ (೦.೩), ಹತ್ತಿ (೩) ಸಣಬು (೨), ಚಹಾ (೪), ಕಾಫಿ (೦.೪), ರಬ್ಬರು (೦.೧).

ಕೈಗಾರಿಕಾ ಸೂಚ್ಯಂಕ[ಬದಲಾಯಿಸಿ]

ಕೈಗಾರಿಕಾ ಉತ್ಪಾದನ ಸೂಚ್ಯಂಕವನ್ನು ಈಸ್ಟರ್ನ್ ಎಕಾನೊಮಿಸ್ಟ್ ಆಗಸ್ಟ್ ೧೯೩೯ನ್ನು ಆಧಾರ ವರ್ಷವಾಗಿಟ್ಟುಕೊಂಡು ೧೧ ಪದಾರ್ಥಗಳಿಗೆ ೧೯೪೮ರಿಂದ ಮಾಸಿಕವಾಗಿ ಪ್ರಕಟಿಸುತ್ತಿದೆ. [೫]ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಕೈಗಾರಿಕಾ ಉತ್ಪಾದನ ಸೂಚ್ಯಂಕವನ್ನು ತಯಾರಿಸಿ ಪ್ರಚಾರ ಮಾಡುತ್ತಿದೆ. ಇಲ್ಲಿ ತೂಕಗಳನ್ನು ೧೯೪೬ರ ಕೈಗಾರಿಕಾ ಗಣತಿಯ ಪದಾರ್ಥ ಮೌಲ್ಯಗಳ ಆಧಾರದ ಮೇಲೆ ರೂಪಿಸಲಾಗಿದೆ. ಸೂಚ್ಯಂಕಕ್ಕೆ ಆರಿಸಲಾದ ಪದಾರ್ಥಗಳೂ ಅವುಗಳ ತೂಕಗಳೂ ಈ ರೀತಿಯಿವೆ: ಕಲ್ಲಿದ್ದಲು (೧೧.೯೫), ಸಕ್ಕರೆ (೩.೫೪), ಬಣ್ಣ ಮತ್ತು ಮೆರುಗೆಣ್ಣೆ (೦.೬೧), ಸಿಮೆಂಟು (೦.೬೭), ಗಾಜು (೦.೫೫), ರಿಫ್ರಾಕ್ಟರಿಗಳು (೦.೪೮), ಪದರಂಟು ತೂಗಿದ ಉತ್ಪಾದನ ಸೂಚ್ಯಂಕ (ಆಧಾರವರ್ಷ ೧೯೫೧=೧೦೦) ೧೯೯೧: ಆಧಾರ ವರ್ಷ ೨೦೦೧: ಪರಾಮರ್ಶನ ವರ್ಷ

ವಸ್ತು ಮೌಲ್ಯ ರೂ.(೦೦೦) ಪದಾರ್ಥ ಸೂಚ್ಯಂಕ ತೂಕ ಪದಾರ್ಥದ ತೂಗಿದ ಸೂಚ್ಯಂಕ ಮೌಲ್ಯ ರೂ.(೦೦೦) ಪದಾರ್ಥ ಸೂಚ್ಯಂಕ ತೂಕ ತೂಗಿದ ಪದಾರ್ಥ ಸೂಚ್ಯಂಕ


ಬಟ್ಟೆ ೨,೦೦೦ ೧೦೦ ೪ ೪೦೦ ೧,೦೦೦ ೫೦ ೪ ೨೦೦


ಕಾಫಿ ೫೦೦ ೧೦೦ ೧ ೧೦೦ ೭೫೦ ೧೫೦ ೧ ೧೫೦


W (ತೂಕ) =೫ (=೫೦೦ W =೫ (=೫೦೦


ಸೂಚ್ಯಂಕ


ಹಲಗೆ ಅಥವಾ ಪ್ಲೈವುಡ್ (೦.೧೫), ಕಾಗದ (೧.೧೪), ಬೆಂಕಿಕಡ್ಡಿ (೧.೨೧), ಹತ್ತಿ (೪೩.೪೯), ಉಣ್ಣೆ (೧.೩೮), ಸೆಣಬು (೧೬.೫೩), ರಾಸಾಯನಿಕ ಪದಾರ್ಥಗಳು (೩.೧೦); ನಾನ್-ಫೆರಸ್ ಲೋಹಗಳು (೧೨.೧೪), ಉಕ್ಕು (೭.೧೬), ಸೈಕಲ್ಲು (೦.೧೨), ಹೊಲಿಗೆ ಯಂತ್ರ (೦.೦೨), ವಿದ್ಯುತ್ ದೀಪ (೦.೦೪), ವಿದ್ಯುತ್ ಬೀಸಣಿಗೆ (೦.೩೫), ಎಂಜಿನಿಯರಿಂಗ್ ಮತ್ತು ವಿದ್ಯುತ್ ಉಪಕರಣಗಳು (೫.೦೬). (ಎ.ಬಿ.ಎ.)


ಉಲ್ಲೇಖಗಳು[ಬದಲಾಯಿಸಿ]

  1. https://ec.europa.eu/eurostat/statistics-explained/index.php/Glossary:Production_index
  2. https://www.investopedia.com/terms/i/ipi.asp
  3. https://economictimes.indiatimes.com/definition/index-for-industrial-production
  4. https://unstats.un.org/unsd/dnss/docViewer.aspx?docID=2802
  5. https://www.ceicdata.com/en/indicator/india/industrial-production-index-growth