ಉಚ್ಛಾರಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾವು ಮಾತನಾಡುವಾಗ ನಮ್ಮ ಧ್ವನಿಯು ಹುಟ್ಟುವುದು ಹೇಗೆ ಎಂಬುದನ್ನು ನಾವು ತಿಳಿದಿರಬೇಕು. ಇದನ್ನು ಕುರಿತು ನಮ್ಮ ವೈಯಾಕರಣರು ಏನು ಹೇಳಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಕನ್ನಡದ ವ್ಯಾಕರಣಕಾರರಲ್ಲಿ ಪ್ರಮುಖನಾದ ಕೇಶಿರಾಜನು (ಕ್ರಿ. ಶ. ೧೩ನೆಯ ಶತಮಾನ) ಈ ಬಗ್ಗೆ ಒಂದು ಸೂತ್ರವನ್ನು ರಚಿಸಿದ್ದಾನೆ. ಅನುಕೂಲ ಪವನನಿಂ ಜೀ ವನಿಷ್ಟದಿಂ ನಾಭಿಮೂಲದೊಳ್ ಕಹಳೆಯ ಪಾಂ ಗಿನವೋಲ್ ಶಬ್ದದ್ರವ್ಯಂ ಜನಿಯಿಸುಗುಂ ಶ್ವೇತಮದಱಕಾರ್ಯಂ ಶಬ್ದಂ ಮಾತನಾಡಬೇಕೆಂಬ ವ್ಯಕ್ತಿಯ ಅಪೇಕ್ಷೆಯಂತೆ ಅನುಕೂಲವಾದ ಗಾಳಿಯ ಸಹಾಯದಿಂದ ನಾಭಿಮೂಲದಲ್ಲಿ ಕಹಳೆಯ ಅಕಾರದಲ್ಲಿ ಶಬ್ದವೆಂಬ ದ್ರವ್ಯವು ಹುಟ್ಟುತ್ತದೆ. ಅದರ ಬಣ್ಣ ಬಿಳಿ. ಆ ದ್ರವ್ಯದ ಕಾರ್‍ಯವೇ ಶಬ್ದ (ಜೈನರು ಶಬ್ದಕ್ಕೆ ದ್ರವ್ಯತ್ವವನ್ನೂ ಧವಳವರ್ಣವನ್ನೂ ಆರೋಪಿಸುತ್ತಾರೆ). ಇದರ ಜೊತೆಗೆ ಕೇಶಿರಾಜನು ಮತ್ತೂ ಒಂದು ಸೂತ್ರವನ್ನು ಸೇರಿಸಿದ್ದಾನೆ. ತನು ವಾದ್ಯಂ ನಾಲಗೆ ವಾ ದನದಂಡಂ ಕರ್ತೃವಾತ್ಮನವನ ಮನೋವೃ ತ್ತಿನಿಮಿತ್ತಮಾಗಿ ಶಬ್ದಂ ಜನಿಯಿಸುಗುಂ ಧವಳವರ್ಣಮಕ್ಷರರೂಪಂ ದೇಹವೇ ವಾದ್ಯ. ನಾಲಗೆ ಬಾಜನೆ ಮಾಡುವ ಅಂದರೆ ವಾದ್ಯವನ್ನು ನುಡಿಸುವ ಕುಡುಹು (ದಂಡ). ಬಾಜಿಸುವವನು ಆತ್ಮ. ಅವನ ಮನಸ್ಸಿನ ಅಪೇಕ್ಷೆಯಂತೆ ಶಬ್ದವು ಬಿಳಿಯ ಬಣ್ಣದಿಂದ ಅಕ್ಷರದ ರೂಪದಲ್ಲಿ ಉತ್ಪತ್ತಿಯಾಗುತ್ತದೆ. ಇದು ಆರುನೂರು ವರ್ಷಗಳ ಹಿಂದಿನ ಮಾತು. ಈ ನಾಲ್ಕಾರು ಶತಮಾನಗಳಲ್ಲಿ ಶರೀರಶಾಸ್ತ್ರದ ವಿಜ್ಞಾನಿಗಳು ಬಹುವಾಗಿ ಸಂಶೋಧನೆಗಳನ್ನು ನಡೆಸಿ ಈ ಬಗ್ಗೆ ಖಚಿತವಾದ ವಿವರಗಳನ್ನು ನಿರೂಪಿಸಿದ್ದಾರೆ. ಸಂಗೀತ, ನಾಟಕಾಭಿನಯ, ಭಾಷಣ ಮುಂತಾದ ಎಲ್ಲ ಕ್ರಿಯೆಗಳಿಗೂ ಬೇರೆ ಬೇರೆ ಸಿದ್ಧತೆಗಳು ಬೇಕಾದರೂ ಮೂಲಭೂತವಾಗಿ ಧ್ವನಿನಿರ್ಮಾಣ ಎಂಬುದರ ಕ್ರಿಯೆ ಒಂದೇ. ಧ್ವನಿ ನಿರ್ಮಾಣದಲ್ಲಿ ಕೆಲವು ಅಂಗಗಳು ಸಂಬಂಧ ಹೊಂದಿರುವುದನ್ನು ಅರಿತರೆ ಆಯಾ ಕ್ಷೇತ್ರದ ಸಾಧನೆಯಲ್ಲಿ ತುಂಬ ಸಹಾಯ ಒದಗುತ್ತದೆ. ಶ್ವಾಸಕೋಶವೂ ವಪೆಯೂ ಶ್ವಾಸ ನಿಯಂತ್ರಣದಲ್ಲಿ ಸಹಾಯ ಮಾಡುವ ಅಂಗಗಳು. ಉಸಿರಿನಿಂದ ಧ್ವನಿಯು ಉತ್ಪತ್ತಿಯಾಗುತ್ತದೆ. ತುಂಬು ಉಸಿರಿನ‌ಉಚ್ಛ್ವಾಸ ನಿಶ್ವಾಸಗಳಿಂದ ಉತ್ತಮವಾದ ಧ್ವನಿ ನಿರ್ಮಾಣವು ಸಾಧ್ಯ. ಇದನ್ನು ನಾವು ನಮ್ಮ ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ಇಲ್ಲಿರುವ ಎರಡು ಚಿತ್ರಗಳ ಸಹಾಯದಿಂದ ಧ್ವನಿ ನಿರ್ಮಾಣದ ಮತ್ತು ಅಕ್ಷರಗಳು ಉತ್ಪತ್ತಿಯಾಗುವ ಸ್ಥಾನಗಳ ಪರಿಚಯವನ್ನು ನಾವು ಮಾಡಿಕೊಳ್ಳಬಹುದು. ಮೊದಲು ಆಯಾ ಅಂಗಗಳನ್ನು ಸಂಖ್ಯೆಯ ಸಹಾಯದಿಂದ ಗುರುತಿಸಿಕೊಳ್ಳಿ. ವಪೆಯ ತಳಹದಿಯ ಮೇಲೆ ಗಾಳಿಯ ಸ್ತಂಭವು (Column) ಸ್ಥಾಪಿತವಾಗಿರುತ್ತದೆ. ಆ ಗಾಳಿಯು ನಮ್ಮ ಧ್ವನ್ಯಂಗಗಳ ಬಳಿಗೆ ಬರಬೇಕಾದರೆ ಈ ವಪೆಯು ಮೇಲಕ್ಕೆ ಚಲಿಸಬೇಕು. ನಾವು ಉಸಿರನ್ನು ಒಳಕ್ಕೆ ಎಳೆದುಕೊಂಡಾಗ ನಮ್ಮ ಹೊಟ್ಟೆಯ ಪಕ್ಕೆಗಳು ದೊಡ್ಡವಾಗುತ್ತವೆ. ಗುಮ್ಮಟಾಕಾರದ ವಪೆಯು (Diaphram) ಸಮತಳವಾಗುತ್ತದೆ. ಅಂದರೆ ಸಪಾಟಾಗುತ್ತದೆ. ನಾವು ಉಸಿರು ಬಿಟ್ಟಾಗ ವಪೆಯು ಹಿಂದಿನ ಆಕಾರಕ್ಕೆ ಬರುತ್ತದೆ. ಅಂದರೆ ಸಡಿಲಗೊಂಡ ವಪೆಯು ಮೇಲೆದ್ದು ಕೋಶದ ಉಸಿರನ್ನು ಹೊರಕ್ಕೆ ನೂಕುತ್ತದೆ. ಹೀಗೆ ಹೊರಕ್ಕೆ ತಳ್ಳಿದ ಗಾಳಿಯೇ ಧ್ವನಿಯ ನಿರ್ಮಾಣಕ್ಕೆ ಕಾರಣ. ಗಾಳಿಯು ಮೇಲಕ್ಕೆ ಹೊರಟು ಧ್ವನಿ ತಂತುಗಳನ್ನು ವಿರಳಗೊಳಿಸಿ ಅವುಗಳ ನಡುವೆ ಮೇಲಕ್ಕೆ ನುಗ್ಗುತ್ತದೆ. ಗಾಳಿಯ ಚಲನೆ ಮತ್ತು ಘೋಷ ತಂತುಗಳ ಸ್ಥಿತಿಸ್ಥಾಪಕತ್ವ (Elasticity) ಇವುಗಳಿಂದ ಧ್ವನಿ ತಂತುಗಳು ಕಂಪಿಸುತ್ತವೆ. ಈ ಕಂಪನವೇ ಶಬ್ದ ನಿರ್ಮಾಣ. ಗಾಳಿಯಿಂದ ತುಂಬಿದ ಬಲೂನಿನ ಬಾಯಿಯನ್ನು ತೆರೆದಾಗ ಧ್ವನಿ ಹೇಗೆ ಉಂಟಾಗುತ್ತದೆ ಎಂಬುದನ್ನು ಗಮನಿಸಿ. ಹಾಗೆಯೇ ಮಾತಿನ ಧ್ವನಿಯೂ ಉಂಟಾಗುತ್ತದೆ. ಈಗ ಆ ಗಾಳಿಯೂ ಉಂಟಾಗುತ್ತದೆ. ಈಗ ಆ ಗಾಳಿಯು ಮುಂದುವರಿದು ಗಂಟಲು, ಬಾಯಿ, ಮೂಗುಗಳ ಮೂಲಕ ಹೊರಹೊಮ್ಮಿ ಮಾತನಾಡುವವನ ಸುತ್ತ ಗಾಳಿಯ ಒತ್ತಡದ ವ್ಯತ್ಯಾಸವನ್ನುಂಟುಮಾಡುತ್ತದೆ. ಈ ಒತ್ತಡದ ವ್ಯತ್ಯಾಸವನ್ನೇ ಧ್ವನಿತರಂಗಗಳು ಎನ್ನುತ್ತಾರೆ. ಅವು ಕೇಳುವವರ ಕಿವಿಗೆ ತಗುಲಿ ಧ್ವನಿಯು ಅನುಭವಕ್ಕೆ ಬರುತ್ತದೆ. ಧ್ವನ್ಯಂಗಗಳು ಎಂದರೆ ಧ್ವನಿಯನ್ನು ನಿರ್ಮಾಣ ಮಾಡುವ ಅಂಗಗಳು ಎಂದು ಅರ್ಥ. ಮೊದಲು ಈ ಚಿತ್ರದಲ್ಲಿರುವ ಸ್ಥಾನಗಳನ್ನು ಗುರುತಿಸಿ. ಬಾಯಿ ಒಂದು ಕುಹರ. ಅದರ ಒಳಭಾಗದಲ್ಲಿರುವ ಚಲಿಸುವ ಅಂಗಗಳು ಆಕ್ರಮಿಸುವ ಸ್ಥಳಗಳನ್ನು ಅನುಸರಿಸಿ ಬಾಯಿಯ ಆಕಾರವು ಬದಲಾಗುತ್ತದೆ. ಈ ವ್ಯತ್ಯಾಸವು ಉಚ್ಚಾರವಾಗುವ ಶಬ್ದದ ಕಾಕು (Tone)ವನ್ನು ಬದಲು ಮಾಡಬಹುದು. ಅವೇ ನಿರ್ದಿಷ್ಟವಾದ ಧ್ವನಿಯನ್ನೂ ಉಂಟು ಮಾಡಬಹುದು (Produce or Articulate). ಈ ಅಂಗಗಳು ಹೀಗಿವೆ. ನಂಗಿಲು (Uvula), ಮೃದುತಾಲು (Soft Palate), ಕಠಿನತಾಲು (Hard Palate), ಹಲ್ಲುಗಳು (Teeth), ನಾಲಿಗೆ (Tongue), ತುಟಿಗಳು (Lips), ಮೂಗು (Nose), ಅಲ್ಲದೆ ನಾಸಾಕುಹರ (Nasal Passage) ಮತ್ತು ಬಟವೆಗಳು (Sinuses) ಶ್ವಾಸನಿಗ್ರಹಕ್ಕೂ, ಧ್ವನಿಯ ಅನುರಣನಕ್ಕೂ ಸಹಾಯಕವಾಗುತ್ತವೆ. ಧ್ವನಿಯನ್ನು ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು ಬಹು ಸಂಕೀರ್ಣವಾದ ಕಾರ್ಯ. ಕೊರಳಿನ ಮಾಂಸಖಂಡಗಳ ಬಿಗಿಯು ಗಂಟಲಿನ ಮೇಲೆ ಪ್ರಭಾವವನ್ನು ಬೀರಬಹುದು. ಕೆಳಗಿನ ದವಡೆಯ ಚಲನೆ, ಮುಖದ ಕೆಲವು ಮಾಂಸಖಂಡಗಳು ಕೂಡ ಬಾಯಿಯ ಆಕಾರವನ್ನು ಬದಲಿಸಬಹುದು. ಇದರಿಂದ ಹೊರಡುವ ಧ್ವನಿಯು ಬದಲಾಗುತ್ತದೆ. ದೇಹದ ಮೇಲ್ಭಾಗವು ಕಂಪಿಸುತ್ತದೆ. ತಲೆಯ ಮತ್ತು ಎದೆಯ ಮೂಳೆಗಳು ಧ್ವನಿವರ್ಧಕಗಳಾಗಬಹುದು. ಧ್ವನಿಯನ್ನು ಪ್ರಭಾವಯುತವಾಗಿ ಉಪಯೋಗಿಸುವ ಎಲ್ಲರೂ ಆ ಅಂಗಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥರಾಗಿರುತ್ತಾರೆ. ಅವರಿಂದ ಭಾಷೆಯ ನಿರ್ದಿಷ್ಟವಾದ ಮತ್ತು ಸ್ಪಷ್ಟವಾದ ಪ್ರಯೋಗ ಸಾಧ್ಯ. ಭಾವಾವೇಗ, ವಿಶೇಷಾರ್ಥಗಳುಳ್ಳ ಶಬ್ದಗಳ ಪ್ರಯೋಗ ಇವುಗಳನ್ನು ಗಮನಿಸಿದರೆ ಈ ಸಾಮರ್ಥ್ಯ ಎಷ್ಟು ಪ್ರೌಢವಾದುದು ಎಂದು ತಿಳಿದುಬರುತ್ತದೆ. ಕನ್ನಡದ ಅಕ್ಷರಗಳನ್ನು ಉಚ್ಚಾರಣೆ ಮಾಡುವಾಗ ನಡೆಯುವ ಕ್ರಿಯೆಯನ್ನು ಸ್ವಲ್ಪ ವಿವರವಾಗಿ ತಿಳಿಯೋಣ. ಈ ಚಿತ್ರಗಳ ವಿವರವನ್ನು ಸಂಖ್ಯೆಗಳ ಸಹಾಯದಿಂದ ಗುರುತಿಸಿಕೊಳ್ಳಿ. ಕನ್ನಡ ಅಕ್ಷರಗಳು ಇರುವ ಪಟ್ಟಿಯನ್ನು ಪರಿಶೀಲಿಸಿ. ಕನ್ನಡದ ಅಕ್ಷರಗಳನ್ನು ಅವು ಹುಟ್ಟುವ ಸ್ಥಾನಗಳನ್ನು ಗಮನಿಸಿ ಐದು ವಿಧವಾಗಿ ವಿಂಗಡಿಸಿದ್ದಾರೆ. ೧. ಕಂಠ್ಯ, ೨. ತಾಲವ್ಯ ೩. ಮೂರ್ಧನ್ಯ, ೪. ದಂತ್ಯ, ೫. ಓಷ್ಠ್ಯ. ಮೃದು, ಕರ್ಕಶ ಎಂದರೇನು? ಅಕ್ಷರಗಳು ಬಾಯಿಯಲ್ಲಿ ಉಚ್ಚಾರವಾಗುತ್ತವೆ. ಬಾಯಿಯ ಮೇಲ್ಭಾಗವನ್ನು ಅಂಗಳು ಅಥವಾ ಅಟ್ಟ ಎಂದು ಕರೆಯುತ್ತಾರೆ. ಆಂಗಳು ಇರುವ ಆಟ್ಟದ ಮುಂಭಾಗ ಮಾತ್ರ ನಾಲಿಗೆಯು ತಗಲುವಂತೆ ಉಚ್ಚಾರವಾಗುವ ಅಕ್ಷರಗಳು ಮೃದು. ಉದಾ. ದ, ಧ, ಣ ಇತ್ಯಾದಿಗಳು. ಅಂಗಳ ಮೇಲ್ಭಾಗಕ್ಕೆ ನಾಲಿಗೆಯು ತಗುಲದೆ ಉಚ್ಚಾರವಾಗುವ ಅಕ್ಷರಗಳು ಕರ್ಕಶ ವರ್ಣಗಳು. ಉದಾ: ಕ, ಬ, ಟ, ಡ ಇತ್ಯಾದಿಗಳು. ಕಂಠ ಎಂದರೆ ಗಂಟಲು. ಅದರಲ್ಲಿ ಉಚ್ಚಾರಗೊಳ್ಳುವ ಅಕ್ಷರಗಳು ಕಂಠ್ಯಗಳು. ತಾಲು ಎಂದರೆ ಅಂಗಳು. ಅಲ್ಲಿ ಉಚ್ಚಾರವಾಗುವ ಅಕ್ಷರಗಳು ತಾಲವ್ಯಗಳು. ಮೂರ್ಧ ಎಂದರೆ ನೆತ್ತಿ. ಅಂಗಳಿನ ಮಧ್ಯಭಾಗ. ಅಲ್ಲಿ ಹುಟ್ಟುವ ಅಕ್ಷರಗಳು ಮೂರ್ಧನ್ಯಗಳು. ದಂತ ಎಂದರೆ ಹಲ್ಲು. ಹಲ್ಲಿನ ಬಳಿ ಉಚ್ಚಾರವಾಗುವ ಅಕ್ಷರಗಳು ದಂತ್ಯಗಳು. ಓಷ್ಠ ಎಂದರೆ ತುಟಿ. ತುಟಿಗಳಲ್ಲಿ ಉಚ್ಚಾರವಾಗುವ ಅಕ್ಷರಗಳು ಓಷ್ಠ್ಯಗಳು. ಈಗ ಅಕ್ಷರಗಳ ಪಟ್ಟಿಯನ್ನು ನೋಡಿ. ಕನ್ನಡದ ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದನ್ನು ಬೇರೆ ಬೇರೆಯಾಗಿ ಅಲ್ಲಿ ತೋರಿಸಿದೆ. ಇದು ನಿಧಾನವಾಗಿ ಪ್ರತಿಯೊಂದು ಅಕ್ಷರವನ್ನೂ ಉಚ್ಚರಿಸಿ ಅದು ಹುಟ್ಟುವ ಸ್ಥಳವನ್ನು ಗುರುತಿಸುವ ಒಂದು ಪ್ರಯೋಗ. ಬೇಗ ಆಗುವ ಕೆಲಸವಲ್ಲ. ಕೆಲವು ಅಕ್ಷರಗಳು ಎರಡು ಭಾಗಗಳಲ್ಲಿ ಕಂಡುಬರುತ್ತವೆ. ಅವುಗಳ ಉಚ್ಚಾರಣೆಗೆ ಎರಡು ಅಂಗಗಳ ಸಹಾಯವೂ ಬೇಕು ಎಂದು ಅರ್ಥ. ನಮ್ಮ ಭಾಷೆಯಲ್ಲಿಲ್ಲದ ಎಷ್ಟೋ ಧ್ವನಿಗಳು ಪ್ರಪಂಚದ ಇತರ ಭಾಷೆಗಳಲ್ಲಿ ಇವೆ. ಇವೆಲ್ಲವನ್ನೂ ಗುರುತಿಸುವುದಕ್ಕೆ ಭಾಷಾ ಶಾಸ್ತ್ರಜ್ಞರು The International Phonetic Alphabet ಎಂಬ ವರ್ಣಮಾಲೆಯನ್ನು ಸಿದ್ಧಪಡಿಸಿದ್ದಾರೆ. ಅದನ್ನು ಕ್ರಮೇಣ ತಿಳಿದುಕೊಳ್ಳಬಹುದು. ಕೆಲವು ಪಾರಿಭಾಷಿಕ ಶಬ್ದಗಳ ವಿವರಣೆ: ಅ. ಊಷ್ಮವರ್ಣ : ಊಷ್ಮ ಎಂದರೆ ಉಷ್ಣ, ಕಾವು ಎಂದರ್ಥ. ಶ. ಷ. ಸ.—ಈ‌ ಅಕ್ಷರಗಳ ಉಚ್ಚಾರದಲ್ಲಿ ಸ್ವಲ್ಪ ಉಷ್ಣ ನಿರ್ಮಾಣವಿದೆ ಎಂಬರ್ಥದ ಶಬ್ದ ಇದು. ಇಂಗ್ಲಿಷಿನಲ್ಲಿ ಇಂಥ ವ್ಯಂಜನಗಳನ್ನು Sibilants ಎಂದು ಕರೆಯುತ್ತಾರೆ. ಇವುಗಳಿಗೆ Whistling consonants ಎಂದೂ ಹೆಸರಿದೆ. ಅಂಗಳು ಮತ್ತು ನಾಲಗೆಗಳ ನಡುವೆ ನುಗ್ಗುವ ಗಾಳಿ ಶಿಲ್ಪಿಯ ಹಾಗೆ ಶಬ್ದವನ್ನುಂಟುಮಾಡಬಹುದು—ತುಂಬ ಗಟ್ಟಿಯಾಗಿ ಉಚ್ಚರಿಸಿದರೆ. ಆ. ಅಂತಸ್ಥವರ್ಣಗಳು : ಯ, ರ, ಲ, ವ ಅಕ್ಷರಗಳಿಗೆ ಈ ಹ³†ಸರಿವೆ. ಇಂಗ್ಲಿಷಿನಲ್ಲಿ ಇವನ್ನು Semi vovels ಎಂದು ಕರೆಯುತ್ತಾರೆ. ಇದು ವ್ಯಂಜನವೂ ಸ್ವರವೂ ಆಗಬಹುದಾದ ಗುಣಗಳನ್ನು ಹೊಂದಿವೆ ಎಂದರ್ಥ. ಇ. ಧ್ವನಿಪೆಟ್ಟಿಗೆ, Voice Box : ಶ್ವಾಸನಾಳದ ಮೇಲು ತುದಿ ಇದು. Adams Apple ಎನ್ನುವ ಸಾಮಾನ್ಯ ಹೆಸರು ಇದಕ್ಕೆ ಇದೆ. ಕನ್ನಡದ ಮೆಟ್ರೆ. ಇದರಲ್ಲಿ ಧ್ವನಿತಂತುಗಳು ಅಥವಾ ಘೋಷ ತಂತುಗಳು ಇವೆ. Larynx ಎನ್ನುವುದು ಪಾರಿಭಾಷಿಕ ಹೆಸರು. ಇದು ಧ್ವನಿ ತಂತುಗಳನ್ನು ರಕ್ಷಿಸುತ್ತದೆ. ಹೀಗೆ ಇತರ ವಿವರಗಳನ್ನು ತಿಳಿದು ಬರಹದಲ್ಲಿ ಇಟ್ಟುಕೊಂಡಿರಬೇಕು. ಮಹಾಪ್ರಾಣಗಳ ಉಚ್ಚಾರಣೆಯನ್ನು ಮಾಧ್ಯಮಿಕ ಶಾಲೆಯಿಂದಲೇ ಕಲಿಸಬೇಕು. ಮಹಾಪ್ರಾಣಗಳು ಎಂದರೆ ಖ ಘ ಛ ಝ ಠ ಢ ಥ ಧ ಫ ಭ ಮತ್ತು ಹ. ಈ ಹನ್ನೊಂದು ಅಕ್ಷರಗಳ ಜೊತೆಗೆ ಶ ಷ ಸ ಎಂಬ ಅಕ್ಷರಗಳನ್ನು ಉಚ್ಚಾರ ಮಾಡುವುದನ್ನು ವಿಶೇಷ ಗಮನವಿಟ್ಟು ಹೇಳಿಕೊಡಬೇಕು. ಅಕ್ಷರಗಳ ಉತ್ಪತ್ತಿ ಸ್ಥಾನಗಳನ್ನು ಚಿತ್ರಗಳ ಮೂಲಕ ವಿವರಿಸಿದ ಮೇಲೆ ಅಧ್ಯಾಪಕರು ಈ ಅಕ್ಷರಗಳನ್ನು ತಾವೇ ಅನೇಕ ಸಲ ಉಚ್ಚರಿಸಬೇಕು. ಬಳಿಕ ಮಹಾಪ್ರಾಣಗಳು ಬರುವ, ಅಲ್ಪಪ್ರಾಣಗಳು ಬರುವ ಎರಡು ಅಥವಾ ಮೂರು ಅಕ್ಷರಗಳ ಶಬ್ದಗಳನ್ನು ಆರಿಸಿ ಒಂದೊಂದು ಜೊತೆಯನ್ನೂ ಒಂದಾದ ಮೇಲೆ ಮತ್ತೊಂದರಂತೆ ಒಟ್ಟು ತರಗತಿಯೇ ಉಚ್ಚರಿಸುವಂತೆ DRILL ಮಾಡಿಸಬೇಕು. ಇದು DRILL ಪಾಠ. DRILL ಎಂದರೆ ಒಂದೇ ಕಾರ್‍ಯವನ್ನು ಅನೇಕ ಸಲ ಮಾಡಿಸಿ ತರಬೇತು ಕೊಡುವುದು ಎಂದು ಅರ್ಥ. ಭರತ-ಬಡವ, ಅಖಾಡ-ವಿಕಾರ, ಧನ-ದನ, ಗಾಢ-ಬಾಡ ಇತ್ಯಾದಿ ಆರಿಸಬೇಕು. ಭರತ ಎಂಬುದನ್ನು ತರಗತಿಯ ಅರ್ಧಭಾಗ ಬಲಗಡೆಯವರು ಉಚ್ಚರಿಸಿದಮೇಲೆ ಬಡವ ಶಬ್ದವನ್ನು ಎಡಗಡೆಯ ಅರ್ಧಭಾಗ ಉಚ್ಚರಿಸಬೇಕು. ಅಧ್ಯಾಪಕ ಅವರೊಡನೆ ಉಚ್ಚರಿಸಬೇಕು. ಹೀಗೆ ಮಾಡಿದರೆ, ಪ್ರತಿ ದಿನ ೧೫ ನಿಮಿಷ ಈ DRILL ಮಾಡಿಸಿ ನೋಡಿ; ೧೫ ದಿನಗಳ ಬಳಿಕ ವಿದ್ಯಾರ್ಥಿಗಳು ಹೇಗೆ ಈ ವಿಚಾರದಲ್ಲಿ ಪರಿಣತರಾಗುತ್ತಾರೆ, ಎಂಬುದನ್ನು.