ಉಚ್ಚಾರಣಾತ್ಮಕ ಧ್ವನಿವಿಜ್ಞಾನ
ಉಚ್ಚಾರಣಾತ್ಮಕ ಧ್ವನಿವಿಜ್ಞಾನ: ಭಾಷೆಯ ರಚನಾ ವ್ಯವಸ್ಥೆಯನ್ನು ಕುರಿತ ಐದು ಭಾಗಗಳಲ್ಲೊಂದಾದ ಧ್ವನಿವಿಜ್ಞಾನದ ಒಂದು ಅಂಗ. ಭಾಷೆಯ ರಚನಾ ವ್ಯವಸ್ಥೆಯ ಉಳಿದ ಭಾಗಗಳೆಂದರೆ - ಧ್ವನಿಮಾವಿಜ್ಞಾನ ಮತ್ತು ಆಕೃತಿಮಾವಿಜ್ಞಾನ, ವಾಕ್ಯರಚನಾವಿಜ್ಞಾನ, ಪದಾರ್ಥ ವಿಜ್ಞಾನ. ಧ್ವನಿಯನ್ನು ಕುರಿತು ಅಭ್ಯಸಿಸುವ ಧ್ವನಿವಿಜ್ಞಾನದಲ್ಲಿ ಮೂರು ಮುಖ್ಯ ಅಂಶಗಳಿವೆ: 1. ಮಾತನಾಡುವಾಗ ಹುಟ್ಟುವ ಧ್ವನಿತರಂಗಗಳು ಹಾಗೂ ಗಾಳಿಯ ಮೂಲಕ ಅವುಗಳ ಪ್ರಸಾರ-ಇವನ್ನು ಕುರಿತ ಅಭ್ಯಾಸ ತರಂಗಾತ್ಮಕವಿಜ್ಞಾನ (ಅಕೂಸ್ಟಿಕ್ ಫೊನೆಟಿಕ್ಸ್). 2. ಕರಣ ಹಾಗೂ ಇತರ ಶ್ರವಣೇಂದ್ರಿಯಗಳ ರಚನೆ, ಮಾತಿನ ಗ್ರಹಣ ಶಕ್ತಿಯಲ್ಲಿ ಅಡಕವಾದ ಮಾನಸಿಕ ಕ್ರಿಯೆ-ಇವನ್ನೊಳಗೊಂಡು ಕೇಳುವವನ ಶ್ರವಣೇಂದ್ರಿಯ ದ್ವಾರಾ ಈ ಧ್ವನಿತರಂಗಗಳ ಗ್ರಹಣಕ್ಕೆ ಸಂಬಂಧಿಸಿದ್ದು ಶ್ರವಣಾತ್ಮಕ ಧ್ವನಿವಿಜ್ಞಾನ (ಆಡಿಟರಿ ಫೊನೆಟಿಕ್ಸ್). 3. ಭಾಷಾ ಚಟುವಟಿಕೆಯನ್ನು ಧ್ವನ್ಯಂಗಗಳು ಹಾಗೂ ಅದರಲ್ಲಡಕವಾದ ಪ್ರಕ್ರಿಯೆಗಳ ಮೂಲಕ ಅಭ್ಯಸಿಸುವ ವಿಭಾಗವೇ ಉಚ್ಚಾರಣಾತ್ಮಕ ಧ್ವನಿವಿಜ್ಞಾನ (ಆರ್ಟಿಕ್ಯುಲೇಟರಿ ಫೊನೆಟಿಕ್ಸ್). ಇವುಗಳಲ್ಲಿ ತರಂಗ ಧ್ವನಿವಿಜ್ಞಾನ. ಭೌತವಿಜ್ಞಾನಕ್ಕೆ ಸಂಬಂಧಿಸಿದ ವಿಷಯ. ಅದು ಮಾನವ ಧ್ವನಿಗಳನ್ನಷ್ಟೇ ಅಲ್ಲದೆ, ಒಟ್ಟು ಧ್ವನಿಗಳು, ಅವುಗಳ ಕಂಪನ, ಉತ್ಕಟತೆ ಇತ್ಯಾದಿ ಸೂಕ್ಷ್ಮ ವಿವರಗಳನ್ನು ಅಭ್ಯಸಿಸುತ್ತದೆ. ಎರಡನೆಯದಾದ ಶ್ರವಣಾತ್ಮಕ ಧ್ವನಿವಿಜ್ಞಾನ ಶ್ರವಣೇಂದ್ರಿಯದ ವಿವಿಧ ಅಂಗಗಳ ಸಂಕೀರ್ಣತೆಯ ಮೂಲಕ ಹೆಚ್ಚಿನ ಅಭ್ಯಾಸಕ್ಕೆ ನಿಲುಕಿಲ್ಲ. ಆದ್ದರಿಂದ ಮೂರನೆಯದು ಖಚಿತವಾದ ಅಭ್ಯಾಸಕ್ಕೆ ತಕ್ಕದ್ದಾಗಿದೆ. ಧ್ವನ್ಯುತ್ಪಾದನೆ ಹಾಗೂ ಧ್ವನಿ ವೈವಿಧ್ಯಕ್ಕೆ ಕಾರಣವಾದ ಅಂಗಗಳು, ಮುಖಭಾಗಗಳು ನಮ್ಮ ದೃಷ್ಟಿಗೆ ಕೆಲ ಸಾಧನಗಳ ಮೂಲಕ ಸ್ಪಷ್ಟವಾಗಿ ಗೋಚರವಾಗುತ್ತದೆ. ಓಷ್ಠ್ಯ, ದಂತ್ಯ, ಜಿಹ್ವೆ ಮುಂತಾದವು ಸಕಲರಿಗೂ ಪರಿಚಿತ ಅಂಗಗಳು. ಧ್ವನಿ ಉತ್ಪಾದನೆ ಯಲ್ಲಿ ಅವುಗಳ ಪಾತ್ರವನ್ನು ಸಾಮಾ ನ್ಯರು ತಿಳಿಯುವಂತೆ ವಿವರಿಸಬಹುದು. ಉಚ್ಚಾರಣಾತ್ಮಕ ಧ್ವನಿವಿಜ್ಞಾನ ಪ್ರಧಾನವಾಗಿ ಧ್ವನ್ಯುತ್ಪಾದನೆಗೆ ಕಾರಣ ವಾದ ಮಾನವ ಶರೀರದಲ್ಲಿಯ ಧ್ವನ್ಯಂ ಗಗಳ ವಿವರಣೆ ಮತ್ತು ವರ್ಗೀಕರಣವ ನ್ನೊಳಗೊಂಡಿದೆ. ಧ್ವನಿಗಳನ್ನು ಹೊರಡಿಸುವ ಧ್ವನ್ಯಂಗಗಳನ್ನು ಕುರಿತು ಅಭ್ಯಸಿಸುವುದು ಧ್ವನಿವಿಜ್ಞಾನದ ಮೊದಲ ಕೆಲಸ. ಪುಪ್ಪುಸಗಳಿಂದ ಹೊರಟ ಗಾಳಿ ಶ್ವಾಸಮಾರ್ಗದ ಕಡೆಗೆ ಬರುತ್ತಿರುವಾಗ ವಿವಿಧ ಸ್ಥಾನಗಳಲ್ಲಿ ವಿವಿಧ ರೀತಿಯ ತಡೆ. ಸಂಪರ್ಕಗಳಿಂದಾಗಿ ಧ್ವನಿ ಉತ್ಪನ್ನವಾಗುವುದು. ಇಂಥ ಧ್ವನಿ ಉತ್ಪಾದನೆಯ ಸ್ಥಾನ, ಕರಣ ಮತ್ತು ಪ್ರಯತ್ನ - ಇವು ಪ್ರಮುಖ ಪಾತ್ರ ವಹಿಸುವುವು. ಸ್ಥಾನಗಳೆಂದರೆ, ಮುಖವಿವರದ ಮೇಲ್ಭಾಗದಲ್ಲಿರುವ ಧ್ವನಿಉತ್ಪಾದನೆಗೆ ಸಹಾಯ ಮಾಡುವ ಅವಿಚಲಿತ ಸ್ಥಾನಗಳು. ಕರಣಗಳೆಂದರೆ ಸ್ಥಾನಗಳನ್ನು ಸಂಪರ್ಕಿಸಿ, ಇಲ್ಲವೆ ಸಮೀಪಿಸಿ, ಧ್ವನಿಉತ್ಪಾದನೆಗೆ ಕಾರಣವಾಗುವ ಮುಖವಿವರದ ಕೆಳಭಾಗದ ಚಲಿಸುವ ಅಂಗಗಳು. ಉಭಯೋಷ್ಠ, ದಂತ್ಯ, ವರ್ತ್ಸ್ಯ , ತಾಲು, ಕಂಠ ಮುಂತಾದವು ಸ್ಥಾನಗಳು; ಕೆಳದುಟಿ ಮತ್ತು ಜಿಹ್ವೆ ಕರಣಗಳು. ಪ್ರಯತ್ನ ಎಂದರೆ ಧ್ವನಿತಂತುಗಳು ಹಾಗೂ ಇತರೆಡೆಗಳಲ್ಲಿ ನಡೆಯುವ ವಿಶೇಷ ಕ್ರಿಯೆ. ಘೋಷ, ಮಹಾಪ್ರಾಣ, ಅನುನಾಸಿಕ ಮುಂತಾದ ಅಂಶಗಳು ಈ ಪ್ರಯತ್ನದ ಫಲ. ಇಂಥ ಸ್ಥಾನ, ಕರಣ ಹಾಗೂ ಪ್ರಯತ್ನಗಳಿಂದ ಉತ್ಪನ್ನವಾಗುವ ಧ್ವನಿಗಳಲ್ಲಿ ಎರಡು ರೀತಿ: ಸ್ವರ ಮತ್ತು ವ್ಯಂಜನ. ಪುಪ್ಪಸಗಳಿಂದ ಹೊರಟ ಗಾಳಿ, ಶ್ವಾಸನಾಳದ ಮೂಲಕ, ಮುಖವಿವರದಲ್ಲಿ ಹಾಯ್ದು ಬರುವಾಗ ಅದಕ್ಕೆ ಯಾವುದೇ ತಡೆ ಉಂಟಾಗದೆ ಹುಟ್ಟುವ ಧ್ವನಿಗಳು ಸ್ವರಗಳು; ಆ ಶ್ವಾಸಪ್ರವಾಹಕ್ಕೆ ಸಂಪೂರ್ಣ ತಡೆ ಅಥವಾ ಸಂಪರ್ಕ ಉಂಟಾದರೆ ಹೊರಡುವ ಧ್ವನಿಗಳು ವ್ಯಂಜನಗಳು. ಶ್ವಾಸಪ್ರವಾಹದ ಸಂಪೂರ್ಣ ತಡೆಯಿಂದ ಉತ್ಪನ್ನವಾದ ವ್ಯಂಜನಗಳು ಸ್ಪರ್ಶವ್ಯಂಜನಗಳು. ಪ್, ತ್, ಟ್, ಚ್, ಕ್ ವರ್ಗದ ಎಲ್ಲ ಧ್ವನಿಗಳು ಸ್ಪರ್ಶಗಳು. ಇಲ್ಲಿ ಶ್ವಾಸಪ್ರವಾಹಕ್ಕೆ ಒಮ್ಮೆಲೆ ತಡೆಯುಂಟಾಗಿ ಮುಖವಿವರದ ಮುಖ ಮಾತ್ರ ಒಮ್ಮೆಲೆ ತೆರೆದುಬಿಡುತ್ತದೆ. ಅದೇ ಮುಖವಿವರದೊಡನೆ ನಾಸಿಕ ವಿವರವೂ ತೆರೆದರೆ ಅಲ್ಲಿ ಹುಟ್ಟುವ ವ್ಯಂಜನಗಳು ಅನುನಾಸಿಕ ವ್ಯಂಜನಗಳು. ಇನ್ನು ಕೆಲ ವ್ಯಂಜನಗಳಲ್ಲಿ ಈ ರೀತಿಯ ತಡೆಯಿರದೆ ಶ್ವಾಸಮಾರ್ಗದ ಸಂಕುಚಿತದಿಂದ ಒಂದು ಬಗೆಯ ಘರ್ಷಣೆ ಉಂಟಾಗುತ್ತದೆ. ಕನ್ನಡದ ಹ್, ಇಂಗ್ಲಿಷಿನ think, they ಪದಗಳಲ್ಲಿರುವ ಮೊದಲನೆಯ ಧ್ವನಿ ಇಂಥ ಘರ್ಷಣೆಯಿಂದ ಉತ್ಪನ್ನವಾದ ವ್ಯಂಜನಗಳು. ಇದಕ್ಕೆ ಘರ್ಷ ಎನ್ನುತ್ತಾರೆ. ಇದೇ ರೀತಿ, ವಿವಿಧ ವ್ಯತ್ಯಾಸದ ಮೂಲಕ ಪಾರ್ಶ್ವಿಕ , ಕಂಪಿತ ಮುಂತಾದ ವ್ಯಂಜನ ವರ್ಗಗಳು ಸಾಧ್ಯವಾಗುತ್ತವೆ. ಸ್ವರಗಳಲ್ಲಿ ಯಾವುದೇ ನಿರೋಧವಿರದೆ ಕರಣದ ಸ್ಥಾನ ಅಥವಾ ಸ್ಥಿತಿಯಲ್ಲಿಯ ಸ್ವಲ್ಪ ವ್ಯತ್ಯಾಸದಿಂದ ಮಾತ್ರ ಅವುಗಳಲ್ಲಿ ವೈವಿಧ್ಯವುಂಟಾಗುತ್ತದೆ. ಇಂಥ ವೈವಿಧ್ಯಕ್ಕೆ ಕಾರಣವಾಗುವ ಅಂಶಗಳು ಮೂರು : 1 ಜಿಹ್ವಾ ಸ್ಥಿತಿ - ಉಚ್ಚ, ಮಧ್ಯ, ನಿಮ್ನ ಇತ್ಯಾದಿ 2 ಜಿಹ್ವಾಪ್ರಗತಿ-ಪುರೋಗತ, ಮಧ್ಯ ಮತ್ತು ಅಪಗತ. 3 ಓಷ್ಠ್ಯಸ್ಥಿತಿ - ವರ್ತುಳ ಮತ್ತು ಅವರ್ತುಳ. ಒಂದನೆಯ ಕಾರಣದಿಂದ ಏಳು ಸ್ವರಗಳು, ಎರಡನೆಯದರಿಂದ ಮೂರು ಸ್ವರಗಳು, ಕೊನೆಯದರಿಂದ ಎರಡು ಸ್ವರಗಳು ಉತ್ಪತ್ತಿಯಾಗುತ್ತವೆ. ಈ ರೀತಿ ಮಾನವನ ಧ್ವನ್ಯಂಗಗಳು ಅವು ಹೊರಡಿಸುವ ಧ್ವನಿಗಳು, ಅವುಗಳ ವರ್ಗೀಕರಣ-ಮುಂತಾದವುಗಳ ಅಭ್ಯಾಸ, ಈ ವಿಜ್ಞಾನದ ಪರಿಮಿತಿಗೆ ಬರುತ್ತದೆ. (ಆರ್.ಸಿ.ಎಚ್.)