ಉಗ್ರನರಸಿಂಹನ ಮದ್ದೂರು ಕ್ಷೇತ್ರ
ಉಗ್ರನರಸಿಂಹನ ಮದ್ದೂರು ಕ್ಷೇತ್ರ
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಚೆನ್ನಪಟ್ಟಣ ಹಾಗೂ ಮಂಡ್ಯದ ನಡುವೆ ಇರುವ ಊರೇ ಮದ್ದೂರು. ಮದ್ದೂರು ವಡೆಯಿಂದ ಖ್ಯಾತವಾದ ಈ ಊರು, ಪುರಾಣ ಪ್ರಾಚೀನ ಪುಣ್ಯಕ್ಷೇತ್ರವೂ ಹೌದು. ಕದಂಬ ಋಷಿಗಳು ಇಲ್ಲಿ ನರಸಿಂಹ ದೇವರನ್ನು ಪೂಜಿಸಿದ ಕಾರಣ ಈ ಇದು ಕದಂಬಕ್ಷೇತ್ರ ಎಂದು ಖ್ಯಾತವಾಗಿದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನ ಜೊತೆ ತೀರ್ಥಯಾತ್ರೆಗಾಗಿ ಇಲ್ಲಿಗೆ ಬಂದ ಅರ್ಜುನನು ಈ ಸ್ಥಳದಲ್ಲಿ ತನಗೆ ಉಗ್ರನರಸಿಂಹನ ರೂಪ ತೋರಿಸುವಂತೆ ಕೋರುತ್ತಾನೆ. ಮತ್ತೆ ಉಗ್ರರೂಪ ತಳೆಯಲು ಸಾಧ್ಯವಿಲ್ಲ ಎಂದು ಹೇಳಿದ ಶ್ರೀಕೃಷ್ಣ ಶಿಲಾರೂಪದಲ್ಲಿ ಬ್ರಹ್ಮದೇವರಿಂದ ಇಲ್ಲಿ ನರಸಿಂಹ ವಿಗ್ರಹ ಪ್ರತಿಷ್ಠಾಪಿಸಿದರಂತೆ. ಹೀಗಾಗಿ ಈ ಊರು ಅರ್ಜುನಪುರಿ ಎಂದೂ ಹೆಸರಾಗಿತ್ತು. ಬಣ್ಣದ ಬೊಂಬೆಗೆ ಹೆಸರಾದ ಚನ್ನಪಟ್ಟಣಕ್ಕೆ ಇಲ್ಲಿಂದ ಮರತೆಗೆದುಕೊಂಡು ಹೋಗುತ್ತಿದ್ದ ಕಾರಣ ಇದಕ್ಕೆ ನಂತರ ಮರದೂರು ಎಂಬ ಹೆಸರು ಬಂತು. ಇದೇ ಮದ್ದೂರಾಯಿತೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಇಲ್ಲಿ ತನ್ನ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದನಂತೆ. ಮದ್ದು ಸಂಗ್ರಹಿಸಿದ, ಮದ್ದು ತಯಾರಿಸಿದ ಊರು ಮದ್ದೂರಾಯಿತೆನ್ನುತ್ತದೆ ಐತಿಹ್ಯ. ಹೊಯ್ಸಳರ ಕಾಲದಲ್ಲಿ ಮದ್ದೂರು ಕೆರೆ ಹಾಗೂ ವರದರಾಜ ದೇವಸ್ಥಾನ ನಿರ್ಮಾಣವಾಯಿತೆಂದು ತಿಳಿದುಬರುತ್ತದೆ. ಮದ್ದೂರಿನಲ್ಲಿ ನರಸಿಂಹ, ವರದರಾಜ, ದೇಶೇಶ್ವರ ಎಂಬ ಮೂರು ಪ್ರಮುಖ ದೇವಾಲಯಗಳಿವೆ. ಪಕ್ಕದಲ್ಲಿ ಪಟ್ಟಾಭಿರಾಮದೇವರ ದೇವಾಲಯವೂ ಇದೆ. ನರಸಿಂಹ ದೇವಾಲಯ ಹೊಯ್ಸಳ ಶೈಲಿಯಲ್ಲಿದೆ. ಐದು ಅಂತಸ್ತುಗಳ ದ್ರಾವಿಡ ಶೈಲಿಯ ಗೋಪುರವನ್ನು ಈಚೆಗೆ ಕಟ್ಟಲಾಗಿದೆ. ಪ್ರತಿ ಹಂತದಲ್ಲೂ ಜಯ ವಿಜಯರ ಗಾರೆಯ ವಿಗ್ರಹಗಳಿವೆ. ಗರ್ಭಗೃಹದಲ್ಲಿ ಎತ್ತರವಾದ ಕೃಷ್ಣಶಿಲೆಯ ಸುಂದರ ಉಗ್ರನರಸಿಂಹ ಮೂರ್ತಿ ಇದೆ. ಗರ್ಭಗೃಹದ ಮುಂದಿರುವ ಪ್ರಾಕಾರದಲ್ಲಿ ಸುಂದರವಾದ ಕಪ್ಪುಕಲ್ಲಿನ ವೃತ್ತಾಕಾರದ ಕಂಬಗಳಿದ್ದು ಇದರಲ್ಲಿ ಸೂಕ್ಷ್ಮಕೆತ್ತನೆಗಳಿವೆ. ಹೊರ ಪ್ರಾಕಾರದಲ್ಲಿ ಕಲ್ಲಿನ ಕಂಬಗಳಿವೆಯಾದರೂ ಅದರಲ್ಲಿ ಹೇಳಿಕೊಳ್ಳುವಂಥ ಯಾವುದೇ ಕೆತ್ತನೆ ಇಲ್ಲ. ಗರ್ಭಗೃಹದಲ್ಲಿರುವ ಉಗ್ರನರಸಿಂಹಸ್ವಾಮಿಗೆ ಎಂಟು ಕೈಗಳು, ಮೂರು ಕಣ್ಣು ಇರುವುದು ವಿಶೇಷ. ತ್ರಿನೇತ್ರನಾದ ಶಿವ ಮುಕ್ಕಣ್ಣ ಎಂದು ಹೆಸರಾಗಿದ್ದಾರೆ. ಆದರೆ, ಮದ್ದೂರಿನಲ್ಲಿ ಬಹು ಅಪರೂಪದ ಮೂರು ಕಣ್ಣಿನ ನರಸಿಂಹಸ್ವಾಮಿಯ ವಿಗ್ರಹವಿದೆ. ಎಂಟು ಕೈಗಳ ಪೈಕಿ ಎರಡುಗಳಿಂದ ತೊಡೆಯ ಮೇಲೆ ಮಲಗಿಸಿಕೊಂಡ ಹಿರಣ್ಯಕಶಿಪುವಿನ ಕರಳು ಬಗೆದು ಮಾಲೆ ಹಾಕಿಕೊಳ್ಳುತ್ತಿರುವ ನರಸಿಂಹ ದೇವರ, ಇನ್ನೆರೆಡು ಕೈಗಳಲ್ಲಿ ಪಾಶಾಂಕುಶಗಳನ್ನು, ಉಳಿದೆರೆಡು ಕೈಗಳಲ್ಲಿ ಶಂಖ, ಚಕ್ರಗಳಿವೆ, ದೇವತಾವಿಗ್ರಹದ ಎಡಭಾಗದಲ್ಲಿ ವಿಷ್ಣುವಿನ ವಾಹನ ಗರುಡನಿದ್ದನೆ, ಬಲಭಾಗದಲ್ಲಿ ಹಿರಣ್ಯಕಶಿಪುವಿನ ಪುತ್ರ ಹಾಗೂ ನರಸಿಂಹಾವತಾರಕ್ಕೆ ಕಾರಣರಾದ ಪ್ರಹ್ಲಾದರಿದ್ದಾರೆ. ಸ್ವಾಮಿಗಿರುವ ಮೂರನೇ ಕಣ್ಣು ಹಿರಣ್ಯಕಶಿಪುವಿನ ಸಂಹಾರದ ವೇಳೆ ಸೃಷ್ಟಿಯಾಯಿತೆಂದು ಹೇಳಲಾಗುತ್ತದೆ. ಉಗ್ರಸ್ವರೂಪಿಯಾದ ಈ ನರಸಿಂಹನನ್ನು ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ ಎಂದು 48 ಬಾರಿ ಹೇಳಿಕೊಂಡು ಪೂಜಿಸಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ ಎಂದು ಪುರೋಹಿತರಾದ ಶ್ರೀ.ಸಿಂಗಾಯಂಗಾರ್ ಹೇಳುತ್ತಾರೆ. ದೇವಾಲಯದ ಒಳಾಂಗಣದಲ್ಲಿ ಶ್ರೀನಿವಾಸದೇವರ ಹಾಗೂ ಶ್ರೀಕೃಷ್ಣನಿಗೆ ಹಾಲುಣಿಸುತ್ತಿರುವ ಯಶೋಧಾ ವಿಗ್ರಹಗಳು ಅತ್ಯಂತ ಅಪರೂಪದ ವಿಗ್ರಹಗಳೆಂಬುದರಲ್ಲಿ ಸಂದೇಹವೇ ಇಲ್ಲ. ಒಳಪ್ರಕಾರದಲ್ಲಿ ಸೌಮ್ಯನಾಯಕಿ ಹಾಗೂ ನರಸಿಂಹನಾಯಕಿ ವಿಗ್ರಹಗಳೂ ಇವೆ. ದೇವಾಲಯದಲ್ಲಿ ಸೀತಾ, ಲಕ್ಷ್ಮಣ, ಆಂಜನೇಯ ಹಾಗೂ ಶ್ರೀರಾಮ ದೇವರ ವಿಗ್ರಹಗಳಿವೆ. ಊರಿನಲ್ಲಿರುವ ದೇಶೇಶ್ವರ ದೇವಾಲಯ ಗಂಗರ ಕಾಲದ ವಾಸ್ತು ವಿನ್ಯಾಸ ಒಳಗೊಂಡಿದೆ. ಇದರ ಹೊರಗೋಡೆಗಳನ್ನು ಇತ್ತೀಚೆಗೆ ಬಳಪದ ಕಲ್ಲಿನಲ್ಲಿ ನಿರ್ಮಿಸಲಾಗಿದೆ. ದೇವಾಲಯದ ನಂದಿಮಂಟಪ ಸುಂದರವಾಗಿದೆ. ಗ್ರಾಮದೇವತೆ ಮದ್ದೂರಮ್ಮನ ದೇವಾಲಯವೂ ಇಲ್ಲಿದೆ. ಪ್ರತಿವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ಜಾತ್ರೆ ನಡೆಯುತ್ತದೆ.