ವಿಷಯಕ್ಕೆ ಹೋಗು

ಆವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉಗಿ ಇಂದ ಪುನರ್ನಿರ್ದೇಶಿತ)

ಆವಿ (ಉಗಿ) ಎಂದರೆ ಅನಿಲ ಹಂತದಲ್ಲಿರುವ ನೀರು. ನೀರು ಕುದ್ದಾಗ ಇದರ ರಚನೆಯಾಗುತ್ತದೆ. ಆವಿಯು ಅಗೋಚರವಾಗಿದೆ; ಆದರೆ "ಆವಿ" ಶಬ್ದ ಹಲವುವೇಳೆ ತೇವ ಆವಿಯನ್ನು ಸೂಚಿಸುತ್ತದೆ, ಅಂದರೆ ಬಾಷ್ಪವು ಸಾಂದ್ರೀಕರಿಸಿದಾಗ ಕಣ್ಣಿಗೆ ಕಾಣುವ ನೀರಿನ ಹನಿಗಳ ಮಂಜು ಅಥವಾ ವಾಯುದ್ರವ. ಕಡಿಮೆ ಒತ್ತಡದಲ್ಲಿ, ಉದಾಹರಣೆಗೆ ಮೇಲಿನ ವಾತಾವರಣದಲ್ಲಿ ಅಥವಾ ಎತ್ತರದ ಪರ್ವತಗಳ ಶಿಖರದಲ್ಲಿ, ಪ್ರಮಾಣಿತ ಒತ್ತಡದಲ್ಲಿ ನೀರು ಮಾಮೂಲಿನ 100 °C ಗಿಂತ ಕಡಿಮೆ ಉಷ್ಣಾಂಶದಲ್ಲಿ ಕುದಿಯುತ್ತದೆ. ಅದನ್ನು ಮತ್ತಷ್ಟು ಬಿಸಿಮಾಡಿದರೆ ಅದು ಅತಿಕಾಯಿಸಿದ ಆವಿಯಾಗುತ್ತದೆ.

ಉತ್ಪಾದಕದ (ಜನರೇಟರ್) ಒಳಗೆ ಉತ್ಪನ್ನವಾಗುವ ಉಗಿಯ ಉಷ್ಣತೆಯೂ ಅಲ್ಲಿನ ನೀರಿನ ಉಷ್ಣತೆಯೂ ಸಮತೋಲದಲ್ಲಿರುತ್ತವೆ. ಇಂಥ ಪರಿಸ್ಥಿತಿಯಲ್ಲಿ (ಉಗಿಯ ಉಷ್ಣತೆ = ನೀರಿನ ಉಷ್ಣತೆ) ಉಗಿ ಪರ್ಯಾಪ್ತವಾಗಿದೆ (ಸ್ಯಾಚುರೀಟೆಡ್) ಎನ್ನುತ್ತೇವೆ. ಉಗಿ ಸಂಪೂರ್ಣವಾಗಿ ಬಾಷ್ಪವೇ ಆಗಿರಬಹುದು—ಇದು ಒಣ ಉಗಿ (ಡ್ರೈ ಸ್ಟೀಮ್) ಅಥವಾ ತೇವಪುರಿತವಾಗಿರಬಹುದು—ಇದು ಆದರ್ರ್‌ ಉಗಿ(ವೆಟ್ ಸ್ಟೀಮ್): ಉಗಿಯೊಂದಿಗೆ ಇತರ ಅನಿಲಗಳು ಮಿಶ್ರಗೊಂಡಿರುವು ದುಂಟು—ಆಗ ಇದೊಂದು ಮಿಶ್ರಣ. ಸಂಮರ್ದವನ್ನು ವ್ಯತ್ಯಸ್ತಗೊಳಿಸದೆ ಉಗಿಯನ್ನು ನೀರಿನ ಸಂಪರ್ಕದಿಂದ ಬೇರ್ಪಡಿಸಿದ ತರುವಾಯ ಅದನ್ನು ಮತ್ತಷ್ಟು ಕಾಯಿಸಬಹುದು. ಇದು ಅತಿ ತಪ್ತಉಗಿ (ಸೂಪರ್ ಹೀಟೆಡ್ ಸ್ಟೀಂ). ಉಗಿಯಲ್ಲಿರುವ ಶಕ್ತಿಯನ್ನು (ಎನರ್ಜಿ) ಮೂರು ಭಾಗಗಳಾಗಿ ವಿಂಗಡಿಸಿದೆ: 1.ನೀರನ್ನು ಅದರ ಪ್ರಾರಂಭದ ತಾಪಮಾನದಿಂದ (ಸಾಮಾನ್ಯವಾಗಿ 00 ಸೆ. ಎಂದು ಆಂಗೀಕರಿಸುತ್ತೇವೆ) ಕುದಿಯುವ ತಾಪಮಾನಕ್ಕೆ ಏರಿಸಲು ಬೇಕಾಗುವ ದ್ರವದ ಎಂಥಾಲ್ಪಿ. 2. ನೀರನ್ನು ಕುದಿಯುವ ತಾಪಮಾನದಲ್ಲಿ ಉಗಿಯಾಗಿ ಪರಿವರ್ತಿಸಲು ಬೇಕಾಗುವ ಬಾಷ್ಪೀಕರಣದ ಎಂಥಾಲ್ಪಿ. 3. ಉಗಿಯನ್ನು ಅದರ ಅಂತಿಮ ತಾಪಮಾನಕ್ಕೆ ಏರಿಸುವ ಅಧಿಕೋಷ್ಣದ (ಸೂಪರ್ ಹೀಟ್) ಎಂಥಾಲ್ಪಿ. ಉಷ್ಣ ಶಕ್ತಿಯನ್ನು ಕಳಕೊಂಡಂತೆ ಅತಿತಪ್ತ ಉಗಿ ಆದರ್ರ್‌ವಾಗಿ ಕ್ರಮೇಣ ಬಿಸಿನೀರಾಗಿ ದ್ರವೀಕರಿಸುತ್ತದೆ. ಉಗಿಯ ತಯಾರಿ ಬಲು ಸುಲಭ; ಜನಾರೋಗ್ಯಕ್ಕೆ ಇದರಿಂದ ಹಾನಿ ಇಲ್ಲ: ಮತ್ತು ಬಳಸುವ ಪಾತ್ರೆ ಪದಾರ್ಥಗಳನ್ನು ನಾಶಗೊಳಿಸುವುದಿಲ್ಲ. ಈ ಕಾರಣಗಳಿಂದ ಶಕ್ತಿಯ ಸುಲಭ ಆಕರವಾಗಿ ಇದು ವಿಪುಲವಾಗಿ ಬಳಕೆಯಲ್ಲಿದೆ.

ಬಾಷ್ಪೀಕರಣದ ಶಾಖಪ್ರಮಾಣ ಎಂದರೆ ನೀರನ್ನು ಅನಿಲ ರೂಪಕ್ಕೆ ಪರಿವರ್ತಿಸಲು ಅಗತ್ಯವಿರುವ ಶಕ್ತಿ. ಆಗ, ಪ್ರಮಾಣಿತ ಉಷ್ಣಾಂಶ ಮತ್ತು ಒತ್ತಡದಲ್ಲಿ, ಅದರ ಪರಿಮಾಣ ೧,೭೦೦ ಪಟ್ಟು ಹೆಚ್ಚಾಗುತ್ತದೆ; ಪರಿಮಾಣದ ಈ ಬದಲಾವಣೆಯನ್ನು ಹಿಂದೆ-ಮುಂದೆ ಸರಳರೇಖೆಯಲ್ಲಿ ಚಲಿಸುವ ಆಡುಬೆಣೆ ಪ್ರಕಾರದ ಬಿಣಿಗೆಗೆಳು ಮತ್ತು ಆವಿ ತಿರುಗಾಲಿಗಳಂತಹ ಆವಿಯಂತ್ರಗಳು ಯಾಂತ್ರಿಕ ಕಾರ್ಯವಾಗಿ ಪರಿವರ್ತಿಸಬಲ್ಲವು. ಇವು ಆವಿ ಬಿಣಿಗೆಗಳ ಉಪಗುಂಪಾಗಿವೆ. ಆಡುಬೆಣೆ ಪ್ರಕಾರದ ಆವಿ ಬಿಣಿಗೆಗೆಳು ಕೈಗಾರಿಕಾ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿದವು ಮತ್ತು ಆಧುನಿಕ ಆವಿ ತಿರುಗಾಲಿಗಳನ್ನು ವಿಶ್ವದ ಶೇಕಡ ೮೦ ಕ್ಕಿಂತ ಹೆಚ್ಚು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಬಳಸಲಾಗುತ್ತದೆ. ದ್ರವ ರೂಪದ ನೀರು ಬಹಳ ಬಿಸಿಯಾದ ಮೇಲ್ಮೈಯೊಂದಿಗೆ ಸಂಪರ್ಕಕ್ಕೆ ಬಂದಾಗ ಅಥವಾ ಅದರ ಬಾಷ್ಪ ಒತ್ತಡದ ಕೆಳಗೆ ಕ್ಷಿಪ್ರವಾಗಿ ತಗ್ಗಿದರೆ, ಅದು ಆವಿ ಸ್ಫೋಟವನ್ನು ಸೃಷ್ಟಿಸಬಹುದು.

ಸಾಂಪ್ರದಾಯಿಕವಾಗಿ, ಉರಿಯುತ್ತಿರುವ ಕಲ್ಲಿದ್ದಲು ಮತ್ತು ಇತರ ಇಂಧನಗಳನ್ನು ಬಳಸಿ ಬಾಯ್ಲರ್‌ ಅನ್ನು ಬಿಸಿಮಾಡಿ ಆವಿಯನ್ನು ಸೃಷ್ಟಿಸಲಾಗುತ್ತದೆ.[] ಆದರೆ ಸೌರ ಶಕ್ತಿಯಿಂದಲೂ ಆವಿಯನ್ನು ಸೃಷ್ಟಿಸುವುದು ಸಾಧ್ಯವಿದೆ. ನೀರಿನ ಹನಿಗಳನ್ನು ಹೊಂದಿರುವ ಜಲಬಾಷ್ಪವನ್ನು ತೇವ ಆವಿ ಎಂದು ವರ್ಣಿಸಲಾಗುತ್ತದೆ. ತೇವ ಆವಿಯನ್ನು ಮತ್ತಷ್ಟು ಕಾಯಿಸಿದಾಗ, ಹನಿಗಳು ಹಬೆಯಾಗುತ್ತವೆ, ಮತ್ತು (ಒತ್ತಡವನ್ನು ಅವಲಂಬಿಸಿರುವ) ಸಾಕಷ್ಟು ಹೆಚ್ಚಿನ ಉಷ್ಣಾಂಶದಲ್ಲಿ ಎಲ್ಲ ನೀರು ಹಬೆಯಾಗಿ ವ್ಯವಸ್ಥೆಯು ಬಾಷ್ಪ-ದ್ರವ ಸಮಸ್ಥಿತಿಯಲ್ಲಿರುತ್ತದೆ.

ಶಾಖವನ್ನು ವರ್ಗಾಯಿಸುವ ಆವಿಯ ಸಾಮರ್ಥ್ಯವನ್ನು ಮನೆಯಲ್ಲಿಯೂ ಬಳಸಲಾಗುತ್ತದೆ: ತರಕಾರಿಗಳನ್ನು ಬೇಯಿಸಲು, ಬಟ್ಟೆ, ಕಾರ್ಪೆಟ್‍ಗಳು ಮತ್ತು ನೆಲವನ್ನು ಆವಿಯಿಂದ ಸ್ವಚ್ಛಗೊಳಿಸಲು, ಮತ್ತು ಕಟ್ಟಡಗಳನ್ನು ಬೆಚ್ಚಗಿಡಲು. ಪ್ರತಿ ಸಂದರ್ಭದಲ್ಲಿ, ನೀರನ್ನು ಬಾಯ್ಲರ್‌ನಲ್ಲಿ ಕುದಿಸಲಾಗುತ್ತದೆ ಮತ್ತು ಅವಿಯು ಉದ್ದಿಷ್ಟ ವಸ್ತುವಿಗೆ ಶಕ್ತಿಯನ್ನು ಸಾಗಿಸುತ್ತದೆ. ಶಾಖದೊಂದಿಗೆ ಸಾಕಷ್ಟು ಆರ್ದ್ರತೆಯನ್ನು ಸೇರಿಸುವ ಸಲುವಾಗಿ ಬಟ್ಟೆಗಳನ್ನು ಇಸ್ತ್ರಿಮಾಡಲು ಕೂಡ ಆವಿಯನ್ನು ಬಳಸಲಾಗುತ್ತದೆ. ಇದರಿಂದ ನಿರಿಗೆಗಳು ಹೋಗುತ್ತವೆ ಮತ್ತು ಬಟ್ಟೆಗಳ ಮೇಲೆ ಉದ್ದೇಶಪೂರ್ವಕ ಮಡಿಕೆಗಳನ್ನು ಹಾಕಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Taylor, Robert A.; Phelan, Patrick E.; Adrian, Ronald J.; Gunawan, Andrey; Otanicar, Todd P. (2012). "Characterization of light-induced, volumetric steam generation in nanofluids". International Journal of Thermal Sciences. 56: 1–11. doi:10.1016/j.ijthermalsci.2012.01.012.


"https://kn.wikipedia.org/w/index.php?title=ಆವಿ&oldid=836088" ಇಂದ ಪಡೆಯಲ್ಪಟ್ಟಿದೆ