ವಿಷಯಕ್ಕೆ ಹೋಗು

ಈಸೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿ ಕಸಬೆಯಿಂದ ೧೦ಕಿಮೀ ದಕ್ಷಿಣಕ್ಕೆ ಕುಮುದ್ವತಿ ನದಿಯ ಬಲದಂಡೆಯ ಮೇಲಿರುವ ಗ್ರಾಮ.ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಿವಮೊಗ್ಗ ಜಿಲ್ಲೆಗೆ ಹೆಸರು ತಂದ ಊರು ಈಸೂರು.

ಇತಿಹಾಸ

[ಬದಲಾಯಿಸಿ]

ಮಹಾತ್ಮ ಗಾಂಧೀಯವರ ಭಾರತ ಬಿಟ್ಟು ತೊಲಗಿ ಘೂೀಷಣೆಯೊಂದಿಗೆ ಅಂದಿನ ಬ್ರಿಟಿಷ್ ಸರ್ಕಾರ ೧೯೪೨ ಆಗಸ್ಟ್ 9ರಂದು ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕರನ್ನೆಲ್ಲ ಬಂಧಿಸಿತ್ತು. ಈಸೂರಿನ ಜನತೆಯೂ ನಾಯಕನ ಕರೆಗೆ ಓಗೊಟ್ಟು ತಾಳ್ಮೆಯಿಂದಲೇ ಸ್ವಾತಂತ್ರ್ಯ ಚಳವಳಿಯನ್ನು ನಡೆಸುತ್ತಿತ್ತು. 150ರಿಂದ 200 ಮಂದಿ ಗ್ರಮದಲ್ಲಿ ಮೆರವಣಿಗೆ ನಡೆಸಿ ಸರ್ಕಾರಕ್ಕೆ ತೆರಿಗೆಯನ್ನು ಕೊಡದಂತೆ, ಪ್ರತಿಭಟಿಸುವ ಅಧಿಕಾರಿಗಳನ್ನು ಗಮನಿಸದಂತೆ, ಸರ್ಕಾರಿ ಅಧಿಕಾರಿಗಳಿಗೆ, ಶಾಲೆಗೆ, ಕಚೇರಿಗಳಿಗೆ ಧಿಕ್ಕಾರ ಘೋಷಿಸಿದರು. ೧೯೪೨ ಸೆಪ್ಟೆಂಬರ್ 25ರಂದು ಸರ್ಕಾರದ ಅಧಿಕಾರವನ್ನು ಧಿಕ್ಕರಿಸಿ ಈಸೂರನ್ನು ಸ್ವತಂತ್ರ ಹಳ್ಳಿ ಎಂಬುದಾಗಿ ಸಾರಿದರು. ತಮ್ಮದೇ ಆದ ಸರ್ಕಾರ ರಚಿಸಿಕೊಂಡು ಗ್ರಾಮದ ಆಡಳಿತ ನಡೆಸತೊಡಗಿದರು. ೧೯೪೨ ಸೆಪ್ಟೆಂಬರ್ 28ರಂದು ಆ ತಾಲ್ಲೂಕಿನ ಅಮಲ್ದಾರರು, ಪೆÇಲೀಸ್ ಅಧಿಕಾರಿ ಮತ್ತು ಕೆಲವು ಪೆÇಲೀಸರೊಂದಿಗೆ ಗ್ರಾಮಕ್ಕೆ ಹೋದರು. ಅಲ್ಲಿ ನಡೆದ ಜನರ ಅಲ್ಪ ಪ್ರತಿಭಟನೆಗೆ ಅಧಿಕಾರಿಗಳು ಕೋಪಗೊಂಡು ನಿರಾಯುಧ ಜನತೆಯ ಮೇಲೆ ಮೊದಲು ಲಾಠಿಯಿಂದ ಹೊಡೆದು ಅನಂತರ ಗುಂಡು ಹಾರಿಸಿದರು. ಜನರೂ ಉದ್ರಿಕ್ತರಾದರು. ಗಲಭೆಯಲ್ಲಿ ಅಮಲ್ದಾರ ಚನ್ನಕೃಷ್ಣಪ್ಪ ಮತ್ತು ಪೆÇಲೀಸ್ ಅಧಿಕಾರಿ ಕೆಂಚೇಗೌಡ ಸತ್ತರು. ಸರ್ಕಾರಕ್ಕೆ ಸುದ್ದಿ ತಿಳಿದು ಸೈನ್ಯ ಮತ್ತು ಪೆÇಲೀಸ್ ದಳವನ್ನು ಕಳಿಸಿ ಹಳ್ಳಿಯನ್ನು ಲೂಟಿ ಮಾಡಿಸಿತು. ಇದ್ದವರನ್ನೆಲ್ಲ ಹೆಂಗಸರು ಮಕ್ಕಳೆನ್ನದೆ ಚಿತ್ರಹಿಂಸೆಗೆ ಗುರಿ ಮಾಡಿತು. ಸರ್ಕಾರದ ವಿರುದ್ಧ ಬಂಡಾಯವೆದ್ದವರೆಂದು 50 ಮಂದಿಯ ಮೇಲೆ ಆರೋಪ ಹೊರಿಸಿ ೪೧ ಮಂದಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ಮೈಸೂರು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ೧೯೪೩ ಜನವರಿ 9ರಂದು ತೀರ್ಪಿತ್ತು, ಗುರಪ್ಪ, ಮಲ್ಲಪ್ಪ, ಸೂರ್ಯನಾರಾಯಣಾಚಾರಿ, ಬಿ. ಹಾಲಪ್ಪ ಮತ್ತು ಜಿ. ಶಂಕರಪ್ಪ ಇವರಿಗೆ ಮರಣದಂಡನೆಯನ್ನೂ ಹಾಲಮ್ಮ ಮತ್ತು ಪಾರ್ವತಮ್ಮ ಇವರಿಗೆ ಜೀವಾವಧಿ ಗಡೀಪಾರು ಶಿಕ್ಷೆಯನ್ನು ವಿಧಿಸಿದರು. ಉಳಿದವರಿಗೆ ನಾನಾರೀತಿಯ ವಿವಿಧ ಕಾಲದ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಅದರಂತೆ ೧೯೪೩ ಮಾರ್ಚ್ 8ರಂದು ಗುರಪ್ಪ ಮತ್ತು ಮಲ್ಲಪ್ಪ ಇಬ್ಬರನ್ನೂ ಗಲ್ಲಿಗೇರಿಸಲಾಯಿತು. ಮಾರನೆಯ ದಿನ ಸೂರ್ಯನಾರಾಯಣಾಚಾರಿ ಮತ್ತು ಹಾಲಪ್ಪನನ್ನೂ ೧೦ನೆಯ ತಾರೀಖು ಜಿ. ಶಂಕರಪ್ಪನನ್ನೂ ಅಂದಿನ ಸರ್ಕಾರ ಗಲ್ಲಿಗೇರಿಸಿ ತನ್ನ ಸೇಡನ್ನು ತೀರಿಸಿಕೊಂಡಿತು. ಪಾರ್ವತಮ್ಮ, ಹಾಲಮ್ಮ ಮತ್ತು ಸಿದ್ಧಮ್ಮ ಇವರನ್ನು ೧೯೪೬ ಅಕ್ಟೋಬರ್ ೨೧ ರಂದು ಬಿಡುಗಡೆ ಮಾಡಲಾಯಿತು. ಇಡೀ ಕರ್ನಾಟಕದಲ್ಲಿ 'ಸ್ವತಂತ್ರ ಹಳ್ಳಿ ಎಂದು ಘೂೀಷಿಸಿಕೊಂಡು ಸ್ವಾತಂತ್ರ್ಯಕ್ಕೆ ತಮ್ಮ ಪ್ರಾಣವನ್ನರ್ಪಿಸಿದ ಕಲಿಗಳಿಂದ ಈ ಊರು ಪ್ರತಿಷ್ಠಿತವಾಗಿದೆ.

ಉಲ್ಲೇಖ

[ಬದಲಾಯಿಸಿ]

[]

  1. http://vijaykarnataka.indiatimes.com/district/shivamogga/-/articleshow/21734633.cms
"https://kn.wikipedia.org/w/index.php?title=ಈಸೂರು&oldid=1149509" ಇಂದ ಪಡೆಯಲ್ಪಟ್ಟಿದೆ