ವಿಷಯಕ್ಕೆ ಹೋಗು

ಈಲ್ಯಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅತಿದೊಡ್ಡ (ಆಂಟೆಲೋಪ್) ಚಿಗರಿಜಾತಿ ಪ್ರಾಣಿ, ಆಫ್ರಿಕದಲ್ಲಿ ಕಾಣಬರುತ್ತದೆ. ವೈಜ್ಞಾನಿಕ ನಾಮ ಟಾರೊಟ್ರಾಗಸ್. ಈಲ್ಯಾಂಡ್ ಎಂಬ ಪದ ಎಲ್ಕ್ ಎಂಬ ಡಚ್ ಪದದಿಂದ ಬಂದಿದೆ. ಈ ಹೆಸರಿಟ್ಟದ್ದು ಆಫ್ರಿಕದ ಡಚ್ ನೆಲಸಿಗರು. ಎಲ್ಕ್ ಚಿಗರಿ ಅಥವಾ ಇನ್ನಾವುದೇ ಚಿಗರಿಗಳಿಗಿಂತಲೂ ಈಲ್ಯಾಂಡ್ ಭಿನ್ನವಾಗಿದೆ. ಗಾತ್ರದಲ್ಲಿ ಬಲು ದೊಡ್ಡದಿದ್ದು, ತಲೆಯಮೇಲೆ ತಿರುಚಿಕೊಂಡಿರುವ ಎರಡು ಕೊಂಬುಗಳಿವೆ. ಕತ್ತಿನ ಕೆಳಭಾಗದಲ್ಲಿ ದಪ್ಪನೆಯ ಚರ್ಮ ತೂಗಾಡುತ್ತಿರುತ್ತದೆ. ನೋಟಕ್ಕೆ ಎತ್ತಿನಂತೆ ಕಾಣುವ ಮೈಮಾಟ ಇದರದು. ಸದಾ ಸಂಚಾರದಲ್ಲಿರುವ ಈ ಪ್ರಾಣಿ ಸ್ವಲ್ಪ ಶಬ್ದವಾದರೂ ಬಲು ವೇಗದಿಂದ ಧಾವಿಸಿಬಿಡುತ್ತದೆ. ಓಡುವಾಗ ಕ್ಲಿಕ್, ಕ್ಲಿಕ್ ಎಂಬ ಶಬ್ದ ಉತ್ಪತ್ತಿಯಾಗುವುದು. ಗೊರಸಿನ ಈ ಶಬ್ದ ಬಲುದೂರದವರೆಗೂ ಕೇಳಿಸುತ್ತದೆ. ಕುದುರೆಯೊಂದು ಇದಕ್ಕೆ ಸರಿಸಮನಾಗಿ ಓಡಲು ಪೂರ್ಣ ನಾಗಾಲೋಟದಿಂದ ಜಿಗಿಯಬೇಕಾಗುತ್ತದೆ. ಅಪಘಾತದ ಸೂಚನೆಗಳೇನಾದರೂ ಕಂಡುಬಂದರೆ ಇದು ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಓಡಲಾರಂಭಿಸುತ್ತದೆ. ಅಲ್ಪ ಸ್ವಲ್ಪ ಅಕ್ಕಪಕ್ಕಕ್ಕೆ ತಿರುಗಬಹುದು, ಆದರೆ ಗಾಳಿಯ ದಿಕ್ಕಿನಲ್ಲಿ ಎಂದೂ ಓಡದು. ಕುದುರೆಯ ಮೇಲೆ ಕುಳಿತು ಅಟ್ಟಿಸಿಕೊಂಡು ಬಂದವನನ್ನು ಎದುರಿಸಬಲ್ಲುದಾದರೂ ತಾನೇ ನೇರವಾಗಿ ಮನುಷ್ಯನನ್ನು ಎದುರಿಸುವುದಿಲ್ಲ. ಸಾಮಾನ್ಯವಾಗಿ ಇವು ಮೈದಾನ ಪ್ರದೇಶ ಮತ್ತ ಕಾಡುಪ್ರದೇಶಗಳ ನಡುವೆ ವಾಸಿಸುತ್ತವೆ. ಆಹಾರ ಸೇವನೆಗೆಂದು ಬಯಲು ಪ್ರದೇಶಗಳಿಗೆ ಹೋಗುವುದುಂಟು. ಬಿಸಿಲಿನ ಬೇಗೆಯನ್ನು ಸಹಿಸಲು ಮರದ ನೆರಳಿನ ಆಶ್ರಯ ಪಡೆಯುತ್ತವೆ. ಈಲ್ಯಾಂಡುಗಳ ಗುಂಪು ನೋಡಲು ಬಲು ಚೆಂದ. ಇವು ಆಗಾಗ ವಲಸೆ ಹೋಗುವುದೂ ಉಂಟು. ಈ ಕಾಲದಲ್ಲಿ ಗುಂಪಿನಲ್ಲಿನ ಈಲ್ಯಾಂಡುಗಳ ಸಂಖ್ಯೆ ಅಧಿಕವಾಗುತ್ತದೆ. ಇವು ನೀರಿಲ್ಲದೆ ಜೀವಿಸಬಲ್ಲುವಾದರೂ ನೀರು ದೊರಕಿದಾಗ ಬೇಸಗೆಯಲ್ಲಿ ದಿನಕ್ಕೆರಡು ಬಾರಿ ನೀರನ್ನು ಕುಡಿಯುವುದುಂಟು. ಹಸಿಹುಲ್ಲನ್ನು ಮೇಯುವುದಲ್ಲದೆ ಮರದ ಎಲೆ, ಕಡ್ಡಿಗಳನ್ನು ತಿನ್ನುತ್ತವೆ. ಚಿಗರಿಗಳಲ್ಲೆಲ್ಲ ಇವೇ ದನವನ್ನು ಹೆಚ್ಚು ಹೋಲುವ ಪ್ರಾಣಿಗಳು. ಇದನ್ನು ಪಳಗಿಸುವುದು ಸುಲಭವಾದರೂ ಈವರೆಗೆ ಹಾಗೆ ಮಾಡಿದುವರ ವರದಿ ಇಲ್ಲ. ಈಲ್ಯಾಂಡಿನ ಮಾಂಸ ಉತ್ತಮ ಜಾತಿಯದು.

ಟಾರೊಟ್ರಾಗಸ್ ಓರಿಕ್ಸ್

ಟಾರೊಟ್ರಾಗಸ್ ಓರಿಕ್ಸ್ ಎಂಬ ಈಲ್ಯಾಂಡ್ ದಕ್ಷಿಣ ಆಫ್ರಿಕದಲ್ಲಿ ಕಂಡುಬರುತ್ತದೆ. ಇದರಲ್ಲಿನ ಗಂಡು ೫ ೧/೨ — ೬ ಎತ್ತರವಿದ್ದು ತೂಕ ೧೨ ಪೌಂಡುಗಳಷ್ಟಿರುತ್ತದೆ. ಇದರ ಮೈಚರ್ಮ ನಸುಬಣ್ಣದಲ್ಲಿದ್ದು ಅಲ್ಲಲ್ಲೇ ಬಿಳಿಯ ಗೆರೆಗಳಿರುತ್ತವೆ. ಮುದಿ ಈಲ್ಯಾಂಡುಗಳು ನೀಲಿ - ಕಂದು ಬಣ್ಣದವು. ಹೆಣ್ಣಿನ ಕೊಂಬಿನ ಉದ್ದ ಗಂಡಿನ ಕೊಂಬಿಗಿಂತಲೂ ಹೆಚ್ಚು. ಸಾಮಾನ್ಯವಾಗಿ ಮಾರ್ಚಿ ತಿಂಗಳಿನ ಕೊನೆಯಿಂದ ಹಿಡಿದು ಮೇ ತಿಂಗಳಿನ ಅವಧಿ ಗಂಡುಹೆಣ್ಣುಗಳ ಮಿಳಿತದ ಕಾಲ. ಸುಮಾರು ೨೫೬ ದಿವಸಗಳ ಬಳಿಕ ಮರಿ ಹುಟ್ಟುತ್ತದೆ. ಇತ್ತೀಚೆಗೆ ಈ ಪ್ರಾಣಿಗಳು ದಕ್ಷಿಣ ಆಫ್ರಿಕದಲ್ಲಿ ಕಡಿಮೆಯಾಗುತ್ತಿವೆ. ಕಾರಣ ಅವುಗಳ ಮಾಂಸ ಮತ್ತು ಗಟ್ಟಿ ಚರ್ಮಕ್ಕಾಗಿ ಮನುಷ್ಯ ನಡೆಸುವ ಬೇಟೆ.

ಟಾರೊಟ್ರಾಗಸ್ ಡರ್ಬಿಯಾನಸ್

ಟಾರೊಟ್ರಾಗಸ್ ಡರ್ಬಿಯಾನಸ್ ಎಂಬುದು ಇವುಗಳಲ್ಲೆಲ್ಲ ಅತ್ಯಂತ ದೊಡ್ಡದು. ಇವುಗಳ ಬಣ್ಣ ಸಾಮಾನ್ಯ ಈಲ್ಯಾಂಡುಗಳ ಬಣ್ಣಕ್ಕಿಂತಲೂ ಸ್ವಲ್ಪ ಕೆಂಪು. ದೇಹದ ಇಕ್ಕೆಲಗಳಲ್ಲಿ ಬಿಳಿಯ ಗೆರೆಗಳಿವೆ. ಗಂಡಿನಲ್ಲಿ ಕೊಂಬು ಉದ್ದ ಮತ್ತು ಭಾರ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: