ವಿಷಯಕ್ಕೆ ಹೋಗು

ಈಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಲಿ ಬೆನ್ನೆಲುಬಿ ಪ್ರಾಣಿಗಳ ಹೊಟ್ಟೆಯಲ್ಲಿ ಮಾತ್ರ ಇರುವ ಬಲು ದೊಡ್ಡ ಗ್ರಂಥಿ (ಕಲಿಜ, ಯಕೃತ್, ಲಿವರ್). ಮೈಯ ಅಂಗಗಳಲ್ಲಿ ಇಷ್ಟು ಗಾತ್ರದ್ದು ಇನ್ನಾವುದೂ ಇಲ್ಲ. ಸುಮಾರಾಗಿ ಉಳಿದ ಅಂಗಗಳು ಇದನ್ನು ಒತ್ತುತ್ತಿರುವುವು. ಇದರಿಂದ ಈಲಿಯಲ್ಲಿ ಆಗುವ ನೆಗ್ಗುಗಳನ್ನು ಹೆಣದಲ್ಲಿ ಮಾತ್ರ ಕಾಣಬಹುದಷ್ಟೆ. ಬದುಕಿದಾಗ ಶಸ್ತ್ರಕ್ರಿಯೆಗಾಗಿ ಈಲಿಯನ್ನು ಅದರ ಎಂದಿನ ಜಾಗದಿಂದ ಸರಿಸಿದರೆ ನೆಗ್ಗುಗಳು ತುಂಬಿಕೊಂಡು ಕಾಣದಾಗುತ್ತದೆ. ಪೆಟ್ಟು ತಾಕಿದರೆ, ಗಾಯವಾದರೆ ಸುಲಭವಾಗಿ ಬಿರಿದು ಹರಿಯುತ್ತದೆ. ಗಾಯವಾದರಂತೂ ವಿಪರೀತ ರಕ್ತ ಸುರಿದುಹೋಗುತ್ತದೆ. ಉದರದಲ್ಲಿರುವ ಇತರ ಅಂಗಗಳು ಒತ್ತುತ್ತಿರುವುದರಿಂದಲೇ ಈಲಿ ಅದರ ಜಾಗದಲ್ಲಿ ಇರಲು ಸಾಧ್ಯವಾಗುವುದು. ಇದು ಮೈತೂಕದ ಸುಮಾರು 30-50ರಲ್ಲಿ ಒಂದು ಪಾಲು ತೂಗುತ್ತದೆ. ಅಂದರೆ ಗಂಡಸರಲ್ಲಿ 1.4—1.6 ಕಿ,.ಗ್ರಾಂ. ಹೆಂಗಸರಲ್ಲಿ 1.2—1.4 ಕಿ.ಗ್ರಾಂ. ಎಳೆಗೂಸುಗಳಲ್ಲಿ ಮೈತೂಕದ 18-24ರಲ್ಲೊಂದು ಪಾಲು ಇರುವುದರಿಂದ ಹೊಟ್ಟೆಯಲ್ಲಿ ಬಹು ಭಾಗವನ್ನು ತುಂಬಿರುವುದು. ಇದರಿಂದಲೇ ಕೂಸುಗಳಲ್ಲಿ ಈಲಿ ದೊಡ್ಡದಾಗಿರುವಂತೆ ತೋರುವುದು ಹೆಚ್ಚಲ್ಲ.

ವಿಷಕರವಾದ ವಸ್ತುಗಳು ರಕ್ತದಲ್ಲಿ ಸೇರಿದರೆ ಈಲಿ ಅವನ್ನು ಸೋಸಿ ರಕ್ತವನ್ನು ಚೊಕ್ಕಗೊಳಿಸುತ್ತದೆ. ಸಕ್ಕರೆ, ಜೀವಾತುಗಳ ತೆರನ ಆಹಾರ ವಸ್ತುಗಳಿಗೆ ಇದೊಂದು ಉಗ್ರಾಣ. ಹಲವಾರು ಬಗೆಗಳ ಪ್ರೋಟೀನುಗಳನ್ನೂ ಮುಖ್ಯವಾಗಿ ರೋಗ ಅಂಟುವುದನ್ನು ತಡೆದು ರೋಧವಸ್ತುಗಳನ್ನೂ (ಆಂಟಿ ಬಾಡೀಸ್) ತಯಾರಿಸುವ ಕಾರ್ಖಾನೆಯಿದು. ತಿಂದ ಆಹಾರವನ್ನು ಅರಗಿಸಲು ನೆರವಾಗುತ್ತದೆ. ಕೆಲಸಕ್ಕೆ ಬಾರದ ಕಸರಿನ ವಸ್ತುಗಳನ್ನು ತೆಗೆದು ಹೊರಹಾಕುತ್ತದೆ. ಮಾಂಸಾಹಾರಿಗಳಿಗೆ ಈಲಿಯಿಂದ ಮುಖ್ಯವಾಗಿ ಪ್ರೋಟೀನೂ, ಕೊಬ್ಬೂ ಎ.ಡಿ.ಇ.ಬಿ. ಸಮ್ಮಿಶ್ರ ಜೀವಾತುಗಳೂ ದೊರೆಯುತ್ತವೆ. ಇದರಲ್ಲಿ ಕಬ್ಬಿಣ, ತಾಮ್ರ, ಬಿ 12 ಜೀವಾತು ಇರುವುದರಿಂದ ಕೆಲವು ಬಗೆಯ ರಕ್ತಕೊರೆಯಲ್ಲಿ (ಅನೀಮಿಯ) ಈಲಿಯ ಸಾರವನ್ನು ಆಹಾರವಾಗಿ ಕೊಡಬಹುದು.

ಅಂಗರಚನೆ[ಬದಲಾಯಿಸಿ]

ಬೇರೆ ಬೇರೆ ಎಷ್ಟೊ ಕೆಲಸಗಳಿಗೂ ಇದೊಂದನ್ನೇ ಹೇಳಿ ಮಾಡಿಸಿದಂತಿರುವ ಅಂಗವಿದು. ಇದರ ರಚನೆ ತೀರ ಸರಳವಾದರೂ 1949ರ ಮುನ್ನ ಇದರ ಮೈಕ್ರೋಸ್ಕೋಪಿಕ್ ರಚನೆಗಟ್ಟು (ಸ್ಟ್ರಕ್ಚರ್) ಏನೇನೂ ಗೊತ್ತಿರಲಿಲ್ಲ ಎನ್ನಬಹುದು. ಇದರ ಒಟ್ಟಾರೆ ಅಂಗರಚನೆ ಕೂಡ ಗೊತ್ತಾದದ್ದು ಇತ್ತೀಚೆಗೆ (1952).

ಒಟ್ಟಿನಲ್ಲಿ ಈಲಿ ಜೀವಕಣಗಳ ದೊಡ್ಡ ರಾಶಿಯಂತೆ ಕಾಣುವುದು. ಇದರಲ್ಲಿ ಒಂದಕ್ಕೊಂದು ಸಂಬಂಧಿಸಿರುವ ತೆರಪುಗಳ ಸಿಕ್ಕು (ಮೇಜ್) ಎಲ್ಲೆಲ್ಲೂ ತೂರಿ ಜೊಳ್ಳು ಜೊಳ್ಳಾಗಿಸಿದೆ. ಈ ಜೊಳ್ಳು ತೆರಪುಗಳಲ್ಲಿ ರಕ್ತ ವಿಶೇಷ ರೀತಿಯ ಲೋಮನಾಳಗಳ ಜಾಲರಚನೆಗಳು (ನೆಟ್‍ವರ್ಕ) ತೂಗುಬಿದ್ದಿವೆ. ಸೊಟ್ಟಾಪಟ್ಟ ಕೋಣೆ ದಾರಿ. ಸಂದು ಗೊಂದು, ನೀಳವಾದ ಇಕ್ಕಟ್ಟಿನ ಸೊಟ್ಟ ಕೋಣೆಗಳು ಇರುವ ಬಲು ದೊಡ್ಡ ಬಂಗಲೆಗೆ ಈಲಿಯನ್ನು ಹೋಲಿಸಿದರೆ ಅದರ ರಚನೆ ಚೆನ್ನಾಗಿ ಗೊತ್ತಾಗುವುದು. ಈಲಿಯು ಬಿಡುತಿಗಳೆಂಬ (ಲ್ಯಾಕ್ಯುನೆ ಹೆಪ್ಯಾಟಿಸ್) ಅಕ್ಕಪಕ್ಕದ ಕೋಣೆಗಳ ನಡುವೆ ಗೋಡೆಗಳೇ ಇಲ್ಲವಾದ್ದರಿಂದ, ಮೂರೂ ದಿಕ್ಕುಗಳಲ್ಲೂ ಹರಡಿರುವ ತೊಳಬಳಸು (ಲ್ಯಾಬ್ರಿಂತ್) ಆಗಿದೆ. ಇವುಗಳ ನಡುವೆ ಈಲಿಯು ಜೀವಕಣಗಳಿಂದಾದ ಗೋಡೆ ಇದೆ. ಸಸ್ತನಿವರ್ಗದಲ್ಲಿ ಕೆಳಹಂತದಲ್ಲಿರುವ ಪ್ರಾಣಿಗಳಲ್ಲಿ ಈಲಿಯು ಪದರವೆಂಬ (ಲೆಮೈನ ಹೆಪ್ಯಾಟಿಸ್) ಈ ಗೋಡೆಯಲ್ಲಿ ಜೀವಕಣಗಳ ಎರಡು ಪದರಗಳಿರುವುವು. ಅದೇ ಮಾನವ, ಉಲಿವಕ್ಕಿಗಳು, ಸಸ್ತನಿಗಳಲ್ಲಿ ಮಾತ್ರ ಒಂದೇ ಒಂದು ಪದರವಿರುತ್ತದೆ. ಒಂದರೊಡನೊಂದು ಕ್ರಮವಾಗಿ ಜೋಡಿಸಿರುವ ಈ ಗೋಡೆಗಳ ರಚನೆಗೆ ಗೋಡೆಕಟ್ಟು (ಮ್ಯುರೇಲಿಯಂ) ಎಂದು ಹೆಸರಿದೆ.[೧]

ಕೆಳ ಹಂತದ ಸಸ್ತನಿಗಳಲ್ಲಿರುವ ಈ ಗೋಡೆ ಜೀವಕಣಗಳ ಎರಡು ಪದರವಾಗಿದ್ದರಿಂದ, ಜೋಡಿ ಗೋಡೆಕಟ್ಟು ಹೊಂದಿದೆ. ಒಂದೇ ಪದರ ಇರುವುದು ಸರಳ ಗೋಡೆ ಕಟ್ಟು. ಅಮುಕಿದರೆ ಸಿಕ್ಕಿಕೊಳ್ಳುವ ಮತ್ತು ಗುಂಡಿಗಳ ಹಾಗೆ. ಅಕ್ಕಪಕ್ಕದ ಜೀವಕಣಗಳಲ್ಲಿನ ಕುಳಿಗಳಿಗೆ ಸರಿಯಾಗಿ ಸಿಕ್ಕಿಸುವ ಸಣ್ಣಗೂಟಗಳು ಈಲಿಗೋಡೆಯ ಜೀವಕಣಗಳಿಗೆ ಇರುವುದನ್ನು ಎಲೆಕ್ಟ್ರಾನ್ ಮೈಕ್ರೋಸ್ಕೋಪಿನಲ್ಲಿ ಕಾಣಬಹುದು.

ಈಲಿಯ ಜೀವಕಗಳ ನಡುವೆ ಇರುವ ಬಲು ಕಿರಿಯ ಪಿತ್ತದ ಕಿರುನಾಳಗಳು (ಕೆನಾಲಿಕುಲೈ) ಸಾಮಾನ್ಯ ಮೈಕ್ರೋಸ್ಕೋಪಿನಲ್ಲಿ ಕಾಣಿಸುವುದು ಕಷ್ಟ. ಎಲೆಕ್ಟ್ರಾನ್ ಮೈಕ್ರೋಸ್ಕೋಪಿನಿಂದ ನೋಡಿದಾಗ ಜೀವರಸದ ಎಳೆಗೊಂಡೆಗಳು (ಮೈಕ್ರೋವಿಲ್ಲೈ) ಪಿತ್ತದ ಕಿರುನಾಳಗಳೊಳಕ್ಕೆ ಚಾಚಿರುವುದು ಗೊತ್ತಾಗುತ್ತದೆ. ಈಲಿಯ ಒಂದೊಂದು ಜೀವಕಣದ ಸುತ್ತಲೂ ಪಿತ್ತದ ಕಿರುನಾಳಗಳು ಹಲಪಕ್ಕಗಳ ಜಾಲದಂತೆ ಇರುವುವು. ಒಂದೊಂದು ಈಲಿಯ ಜೀವಕಣದಲ್ಲೂ ಒಂದರಿಂದ ಮೂರರ ತನಕ ದುಂಡನೆಯ ನಡುಬೀಜಗಳೂ (ನ್ಯೂಕ್ಲಿಯೈ) ಒಂದೊಂದು ಕಿರುನಡುಬೀಜವೂ (ನ್ಯೂಕ್ಲಿಯೋಲಸ್) ಇರುತ್ತವೆ.

ಆಯಾ ಜೀವಕಣದ ಗಾತ್ರಕ್ಕೆ ತಕ್ಕಂತೆ ಅದರ ನಡುಬೀಜದ ಗಾತ್ರ. ಅಂಕಿ ಇರುತ್ತದೆ. ಇರುವ ಜಾಗಕ್ಕೆ ತಕ್ಕ ಹಾಗೆ ಜೀವಕಣದ ಗಾತ್ರ ಇರುವುದು. ಈಲಿಯ ಜೀವಕಣದಲ್ಲಿ ಅನೇಕ ಕಣಕಡ್ಡಿಗಳೂ (ಮೈಟೊಕಾಂಡ್ರಿಯ) ಮುಖ್ಯವಾಗಿ ರೈಬೊನ್ಯೂಕ್ಲೀಯಿಕ್ ಆಮ್ಲದಿಂದಾಗಿ ಜೋಡಿ ಪೊರೆಗಳ ಪೇರಿಕೆಗಳೂ ಇರುತ್ತದೆ. ತೆರಪುಗಳಿರುವ ಪಕ್ಕದಲ್ಲಿ, ಈಲಿಯ ಜೀವಕಣಗಳ ತುಂಬ ಬೆರಳ ತೆರನ, ಎಲೆ ತೆರನ ಚಾಚುಗಳಿರುವುದು ಎಲೆಕ್ಟ್ರಾನ್ ಮೈಕ್ರೋಸ್ಕೋಪಿನಿಂದ ನೋಡಿದಾಗ ಮಾತ್ರ ಕಾಣುತ್ತದೆ.

ನಾಳಗುಳಿಗ=[ಬದಲಾಯಿಸಿ]

ಈ ಚಾಚುಗಳು ನಾಳಗುಳಿಗಳೆಂಬ (ಸೈನುಸಾಯ್ಡ್‍ಸ್) ವಿಶೇಷೀಕೃತ ಲೋಮನಾಳಗಳ ಬಿಡುತ್ತಿಗಳಲ್ಲಿ ತೂಗು ಬಿದ್ದಿರುವುವು. ಕುಪ್‍ಫರನ ಜೀವಕಣಗಳೆಂಬ ಚಪ್ಪಟೆಯಾಗಿ ತೆಳುವಾದ ಜೀವಕಣಗಳು ಗೋಡೆಗಳಲ್ಲಿದ್ದು ನಳಗುಳಿಗಳಾಗಿವೆ. ಕೊಳೆ, ಕಸ, ಸವೆದುಹೋದ ಕೆಂಪು ರಕ್ತಕಣಗಳು, ಏಕಾಣುಜೀವಿಗಳ ತೆರನ ವಸ್ತುಗಳನ್ನು, ಕುಪ್‍ಫರನ ಜೀವಕಣಗಳು ಸುತ್ತುಗಟ್ಟಿ ಅರಗಿಸಿ ನುಂಗಿಹಾಕುತ್ತವೆ. ಕುಪ್‍ಫರನ ಜೀವಕಣಗಳ ನಡುವೆ ಜಾಗಬಿಟ್ಟಿರುವುದೂ ಅವಲ್ಲೇ ಕಿಂಡಿಗಳಿರುವುದೂ ಎಲೆಕ್ಟ್ರಾನ್ ಮೈಕ್ರೋಸ್ಕೋಪಿನಿಂದ ಗೊತ್ತಾಗಿದೆ. ಕುಪ್‍ಫರನ ಜೀವಕಣಗಳು ಈಲಿಯ ಜೀವಕಣಗಳ ಗಟ್ಟಿ ಭಾಗಗಳ ನಡುವೆ ಎಲ್ಲಲ್ಲೂ ಹರಡಿಕೊಂಡಿರುವ ಇಕ್ಕಟ್ಟಾದ ಇರುಕಡೆಯಲ್ಲಿನ (ಡಿಸ್ಸಿ) ಮೈಕ್ರೋಸ್ಕೋಪಿನಲ್ಲಿ ಕೋಟ್ಯಾನುಕೋಟಿ ಸಣ್ಣ ಚಾಚುಗಳನ್ನು ತಾಕುವಂತೆ ದ್ರವ ರಕ್ತದ ಹರಿವಿನಿಂದ ನೇರವಾಗಿ ಈ ಕಿಂಡಿಗಳ ಮೂಲಕ ನುಸುಳಬಹುದು.

ಈಲಿಯ ಬಹುಪಾಲು ಕೆಲಸಗಳಿಗೆ ಕುಪ್‍ಫರನ ಜೀವಕಣಗಳೂ ಈಲಿಯ ಜೀವಕಣಗಳೂ ಕಾರಣ. ಇವುಗಳ ರಚನೆಯ ವಿಚಾರ ಬೇಕಾದಷ್ಟು ಗೊತ್ತಿದೆ. ಆದರೆ ಈ ತೆರನ ವಿವರಗಳು ತಿಳಿದ್ದುಬಂದಷ್ಟ್ಟೂ ತೆರತೆರನಾಗಿರುವ, ಸೋಜಿಗವೇನಿಸುವ ಅವುಗಳ ನಿಜಗೆಲಸಗಳು ಇನ್ನೂ ಏನೇನೂ ಗೊತ್ತಿಲ್ಲ ಎನಿಸುವುದು.

ಬೇರೆ ಬೇರೆ ಪ್ರಾಣಿಗಳಲ್ಲಿ ಪಿಂಡದ ಬೆಳೆವಣಿಗೆ[ಬದಲಾಯಿಸಿ]

ಕೆಳಮಟ್ಟದ ಬೆನ್ನೆಲುಬಿಗಳಲ್ಲಿ ಬಂಡಾರ ಚೀಲದ (ಯೋಕ್ ಸ್ಯಾಕ್) ಬದಲಾಗಿ ಬೆಳೆದ ಅಂಗ ಈಲಿ. ದ್ವಿಚರಿಗಳಲ್ಲಿ (ಆಂಫಿಬಿಯನ್ಸ್) ಇದರ ವಿಕಾಸ ಚೆನ್ನಾಗಿ ತೋರುವುದು. ಹೆಣ್ಣುಕಪ್ಪೆಯ ಅಂಡಾಶಯದಿಂದ ಮೊಟ್ಟೆಗಳು ಹೊರಬೀಳುತ್ತವೆ. ಮೊಟ್ಟೆಗಳೊಳಗೆ, ಬಂಡಾರದಲ್ಲಿ ಕೊಬ್ಬು, ಪ್ರೋಟೀನು, ಸಕ್ಕರೆ ತೆರನ ಪೋಷಕವಸ್ತುಗಳು ಕೂಡಿರುತ್ತವೆ. ನೀರೊಳಕ್ಕೆ ಮೊಟ್ಟೆ ಬೀಳುವುದು. ಆಗ ಎಳೆಯ ಮರಿಕಪ್ಪೆ (ಲಾರ್ವ) ಆಗಿರುವ ಪಿಂಡ, ಆಮೇಲೆ ಗೊದಮೊಟ್ಟೆ (ಟ್ಯಾಡ್‍ಪೋಲ್) ಆಗುತ್ತದೆ. ಪಟುಗೊಂಡ ಮೇಲೆ ಬೆಳೆವ ಜೀವಿಗೆ ಬಂಡಾರ ದೊರೆವುದು. ಬಂಡಾರವಿರುವ ಜೀವಕಣಗಳಲ್ಲಿ ಬಹುಪಾಲು ಪಿಂಡದ ಒಡಲಲ್ಲಿ ಹೊಸದಾಗಿ ಬೆಳೆದ ಗುಂಡಿಗೆಯ ಹಿಂದುಗಡೆ ಇರುವುವು. ಈ ಬಂಡಾರ ಜೀವಕಣಗಳ ರಾಶಿಯಲ್ಲಿ ಖಾಲಿ ಜಾಗ ಬಿಡಿವು. ಖಾಲಿ ಜಾಗಗಳು ದೊಡ್ಡವಾಗಿ, ಗುಂಡಿಯೊಂದಿಗೆ ಒಂದಕ್ಕೊಂದು ಸಂಬಂಧ ಏರ್ಪಟ್ಟು ಅವುಗಳಲ್ಲಿ ರಕ್ತಕಣಗಳು ಹುಟ್ಟಿಕೊಳ್ಳುತ್ತವೆ. ಕೂಡಿಟ್ಟ ಬಂಡಾರದಿಂದ ಹೊರಬಿದ್ದ ಪೋಷಕ ವಸ್ತುಗಳು ಬಂಡಾರ ಚೀಲದಲ್ಲಿನ ಈ ಆದಿಕಾಲದ ರಕ್ತನಾಳಗಳ ಮೂಲಕ ರಕ್ತಕ್ಕೆ ಸೇರಿ, ಗುಂಡಿಗೆಯ ಮೂಲಕ ಮರಿಕಪ್ಪೆಯ ಎಲ್ಲ ಭಾಗಗಳಿಗೂ ಸೇರುತ್ತವೆ. ಇಷ್ಟರೊಳಗೆ ಕರುಳೂ ಬೆಳೆಯುತ್ತಿರುವುದು. ಮೂಲ ಧಮನಿಯಿಂದ ರಕ್ತನಾಳಗಳು ಕರುಳಿನ ಕಡೆಗೂ ಅದರ ಸುತ್ತಲೂ ಅಲ್ಲಿಂದಾಚೆ ಬಂಡಾರ ಚೀಲದ ಕಡೆಗೂ ಬೆಳೆಯುತ್ತವೆ. ಬಂಡಾರ ಚೀಲದಲ್ಲಿ ರಕ್ತನಾಳಗಳ ಜಾಲರಚನೆಯೊಂದಿಗೆ ಈ ರಕ್ತನಾಳಗಳು ತಗುಲಿಕೊಳ್ಳುತ್ತವೆ.

ಜೀವಕಣಗಳಲ್ಲಿನ ಬಂಡಾರ ಬರಬರುತ್ತ ಇಳಿದುಹೋಗುತ್ತದೆ. ಬಂಡಾರ ಮುಗಿವ ಹೊತ್ತಿಗೆ ಎಳೆಯ ಗೊದಮೊಟ್ಟೆ ಬಾಯಿಬಿಟ್ಟು ತಿನ್ನಲು ಮೊದಲಿಡುತ್ತದೆ. ತಿಂದ ಉಣಿಸು ಜೀರ್ಣನಾಳದಲ್ಲಿ ಅರಗಿ, ಅದನ್ನು ತೂರಿ ದಾಟಿ ಹಿಂದಿನ ಬಂಡಾರ ಚೀಲದ ರಕ್ತನಾಳಗಳ ಒಂದಿಗಿರುವ ರಕ್ತನಾಳಗಳೊಳಕ್ಕೆ ಹೋಗುವುದು. ಹಿಂದೆ ಭಂಡಾರವನ್ನೊಳಗೊಂಡಿದ್ದ ಜೀವಕಣಗಳೇ ಈ ರಕ್ತನಾಳಗಳ ಸುತ್ತಲೂ ಇರುವುವು. ಈ ಜೀವಕಣಗಳು ಈಗ ಬರಿದಾಗಿದ್ದು ಮತ್ತೆ ಆಹಾರ ಕೂಡಿಡಲು ತಯಾರಾಗಿದ್ದರೂ ಅವು ಇನ್ನು ಬಂಡಾರ ಜೀವಕಣಗಳಲ್ಲ. ಅವು ಈಗ ಈಲಿಯ ಜೀವಕಣಗಳಾಗಿಬಿಟ್ಟು ಈಲಿಯ ಜೀವಕಣಗಳು ಕೈಗೊಳ್ಳುವ ಎಲ್ಲ ನಿಜಗೆಲಸಗಳನ್ನೂ ಮಾಡುತ್ತವೆ.

ಹೀಗೆ ಬಂಡಾರ ರಕ್ತನಾಳಗಳು ಎನಿಸಿಕೊಂಡಿದ್ದವೇ ಈಗ ಈಲಿಯ ನಾಳಗುಳಿಗಳು. ಬಂಡಾರ ಚೀಲವೇ ಈಲಿ. ಈಲಿಯಲ್ಲಿ ಪಿತ್ತ ತಯಾರಾಗಿ ಕರುಳಿಗೆ ಹೋಗಬೇಕಿರುವುದರಿಂದ ಪಿತ್ತ ಸಾಗುನಾಳಗಳೆಂಬ (ಬೈಲ್ ಡಕ್ಟ್‍ಸ್) ನಳಗಳ ಮಂಡಲದ ಗೋಡೆಯಾಗುವಂತೆ ಕೆಲವು ಈಲಿಯ ಜೀವಕಣಗಳು ಸಾಲುಗಟ್ಟುತ್ತವೆ. ಇವೆಲ್ಲ ಬಂದು ಸೇರುವ ಮುಖ್ಯ ಪಿತ್ತ ಸಾಗುನಾಳವೇ ಸಾಮಾನ್ಯ ಪಿತ್ತ ಸಾಗುನಾಳ (ಕಾಮನ್ ಬೈಲ್ ಡಕ್ಟ್). ಈ ಸಾಗುನಾಳ ಬೆಳೆದು ಕರುಳಿಗೆ ಹೋಗಿ ಅದರೊಳಕ್ಕೆ ತೆರೆದುಕೊಳ್ಳುವುದು.

ಗರ್ಭಕೋಶದಲ್ಲಿ ಪಿಂಡ[ಬದಲಾಯಿಸಿ]

ಮಾನವನಲ್ಲಿನ ಪಿಂಡದ ಬೆಳೆವಣಿಗೆಯ ಬಗೆಯೇ ಬೇರೆ. ಗರ್ಭಕೋಶದಲ್ಲಿ ಪಿಂಡ ಬೆಳೆಯುತ್ತ ತಾಯಿಂದ ಪೋಷಣೆ ಪಡೆಯುತ್ತದೆ. ಇದರಿಂದಲೇ ಇದಕ್ಕೆ ಬಂಡಾರ ಬೇಕಿಲ್ಲ. ಆದರೂ ಕೆಳಹಂತದ ಬೆನ್ನಲುಬಿಗಳಿಂದ ವಿಕಾಸವಾದ್ದರಿಂದ ಎಳೆಯ ಮಾನವ ಪಿಂಡದಲ್ಲಿ ಬಂಡಾರ ಚೀಲ ಇರುತ್ತದೆ. ಇದು ಬರಿದಾದರೂ ವಿಕಾಸದ ಹಂತಗಳನ್ನು ನೆನಪಿಸುವಂತೆ ಇದರ ಗೋಡೆಯಲ್ಲಿ ರಕ್ತನಾಳಗಳ ದಟ್ಟ ಜಾಲವಾಗಿ ಜನೆಯ ರಕ್ತನಾಳಗಳು (ವೈಟಿಲ್ಲೀನ್ ವೆಸಲ್ಸ್) ಬೆಳೆವುವು. ಆಮೇಲೆ ಗರ್ಭಕೋಶದಿಂದ ಪೋಷಣೆಯನ್ನು ತರುವ ರಕ್ತನಾಳಗಳ (ಹೊಕ್ಕಳಿನವು) ಇನ್ನೊಂದು ಮಂಡಲ ಬೆಳೆಯುತ್ತದೆ. ಜನೆಯ ಸಿರಗಳೂ ಗುಂಡಿಗೆಯ ಸದ್ಯ ಹಿಂದೆ ಒಂದುಗೂಡಿ ಒಟ್ಟಾಗಿ ಗುಂಡಿಗೆಯ ಒಳಹೋಗುತ್ತವೆ. ಇವು ಕೂಡುವ ಕವಲಿಂದ ಲೋಮನಾಳಗಳ ಜಾಲರಚನೆಯೊಂದು ಪಿಂಡದ ಕೂಡಿಸುವ ಅಂಗಾಂಶದ (ಕನೆಕ್ಟಿವ್ ಟಿಷ್ಯು) ರಾಶಿಯೊಳಕ್ಕೆ ಬೆಳೆವುದು. ಈ ಲೋಮನಾಳಗಳ ಜಾಲರಚನೆ ಗುಂಡಿಗೆಯೊಳಕ್ಕೆ ತೆರೆದುಕೊಳ್ಳುತ್ತದೆ.

ಆದಿಕಾಲದ ಜೀರ್ಣನಾಳದ ಮುಂದುಗಡೆ ಬಂಡಾರ ಚೀಲದೊಂದಿಗೆ ಸೇರುವೆಡೆ ಒಡಲಿನ ಕಡೆಯ ಹೊರಚೀಲವಾಗಿ ಉಬ್ಬಿದೆಡೆಯಿಂದ ಅನೇಕ ಜೀವಕಣಗಳು ಬೇರೆಯಾಗುತ್ತವೆ. ಅದೇ ಹೊತ್ತಿನಲ್ಲಿ ಇನ್ನು ಕೆಲವು ಮೈ ಪೊಳ್ಳಿನ ಒಳವರಿಯಾದ ನಡುಪೊರೆಯಿಂದ (ಮೀಸೊತೀಲಿಯಂ) ಬೇರೆಯಾಗುತ್ತವೆ. [೨]ಒಳನನೆಚರ್ಮದ (ಎಂಟೊಡರ್ಮಲ್), ನಡುನನೆಚರ್ಮದ (ಮೀಸೊಡರ್ಮಲ್) ಇವೆರಡು ಗುಂಪಿನವೂ ಜನೆಯ ಅಲ್ಲದೆ ಹೊಕ್ಕುಳಿನ ಲೋಮನಾಳಗಳ ನಡುವಣ ಜಾಗವನ್ನು ಸೇರಿಕೊಂಡು ಲೋಮನಾಳಗಳನ್ನು ಸುತ್ತುಗಟ್ಟುತ್ತವೆ. ಇವೇ ಈಲಿಯ ಜೀವಕಣಗಳಾಗುವುವು. ಇವು ಕೂಡಲೇ ಹೊಕ್ಕುಳಿನ ಸಿರಗಳ ಮೂಲಕ ಗರ್ಭಕೋಶದಿಂದ ಬಂದ ಆಹಾರವನ್ನು ಕೂಡಿಟ್ಟುಕೊಳ್ಳುವ ಈಲಿಯ ಜೀವಕಣಗಳ ನಿಜಗೆಲಸಕ್ಕೆ ಇಳಿಯುತ್ತವೆ. ಈಲಿಯ ಜೀವಕಣಗಳಿಂದ ಪಿತ್ತ ಸಾಗುನಾಳಗಳು ಬೆಳೆದು, ಕರುಳನ್ನು ಸೇರುವ ಸಾಮಾನ್ಯ ಪಿತ್ತ ಸಾಗುನಾಳವನ್ನು ಸೇರಿಕೊಳ್ಳುವುವು. ಕೋಳಿಮರಿಯಲ್ಲಿ ಮಾತ್ರ (ಮಾನವನಲ್ಲಲ್ಲ) ಕರುಳಿನ ಗೋಡೆಯ ಕೊಳವೆ ರೂಪದ ಚಾಚುಗಳಿಂದ ಈಲಿ ಆಗುವುದು ದೊಡ್ಡ ವಿಶೇಷ. ಪಿಂಡದಲ್ಲಿ ರಕ್ತಕಣಗಳನ್ನು ಈಲಿಯೇ ತಯಾರಿಸುತ್ತಿರುತ್ತದೆ. ಬೆಳೆದವರಲ್ಲಿ ಈ ತಯಾರಿಕೆ ಮೂಳೆಗಳ ಮಜ್ಜೆಯಲ್ಲಾಗುವುದು. ಬೆನ್ನೆಲುಬಿ ಪ್ರಾಣಿಗಳಲ್ಲಿ ಈಲಿಯ ವಿಕಾಸದಲ್ಲಿ 20 ಬೇರೆ ಬೇರೆ ಬಗೆಗಳಿವೆ. ಯಾವ ರೀತಿಯಲ್ಲೇ ಬೆಳೆಯಲಿ ಕೊನೆಯ ಪರಿಣಾಮ ಒಂದೇ. ಮನೆಯನ್ನು ಕಟ್ಟಲು ಮರಮುಟ್ಟು ಸಾಮಾನುಗಳು ಬೇರೆ ಬೇರೆ ಆಗಿರಬಹುದು. ಆದರೆ ಒಟ್ಟಿನಲ್ಲಿ ಮನೆಯ ಆಕಾರ ರಚನೆ ಎಲ್ಲ ಒಂದೇ ಇದ್ದ ಹಾಗೆ ಇದು. ಬೇರೆ ಬೇರೆ ಪ್ರಾಣಿವರ್ಗಗಳ ಪಿಂಡಗಳ ಈಲಿಗಳು ಬೇರೆ ಬೇರೆ ತೆರನಾಗಿದ್ದರೂ ಬೆಳೆದ ಪ್ರಾಣಿಯಲ್ಲಿನ ಈಲಿಗಳು ಮಾತ್ರ ಬಹುವಾಗಿ ಒಂದೇ ತೆರ. (ಡಿ.ಎಸ್.ಎಸ್.)

ಒಟ್ಟಾರೆ ಅಂಗರಚನೆ : ಕರುಳಿನ ಲೋಮನಾಳಗಳು ಒಂದೆಡೆ ಕೂಡಿ ಆದ ಕರುಳುನಡುಪೊರೆಯ (ಮೆಸೆಂಟರಿಕ್) ಸಿರಗಳೇ ಮುಖ್ಯವಾಗಿ ಈಲಿಗೆ ರಕ್ತವನ್ನು ಒದಗಿಸುತ್ತದೆ. ತೊರಳೆಯಿಂದ ಬರುವ ಒಂದು ಸಿರ, ಜಠರದಿಂದ ಬರುವ ಕೆಲವು ಸಣ್ಣ ಸಿರಗಳೊಂದಿಗೆ ಇವು ಸೇರಿ ಮೋಟಾದರೂ ದಪ್ಪನೆಯ ತೂರುಗೊಂದಿಯ ಸಿರ (ಪೋರ್ಟಲ್ ವೆಯ್ನ್ಸ್) ಎಂಬ ರಕ್ತನಾಳವಾಗುತ್ತದೆ.

ರಕ್ತ ಸಂಚಾತ[ಬದಲಾಯಿಸಿ]

ತೂರುಗೊಂದಿಯ ಸಿರದ ರಕ್ತದ ಮೇಲೆ ಕೆಲಸ ಮಾಡಲು ಈಲಿಗೆ ಶಕ್ತಿ ಬೇಕು. ಆಹಾರದಲ್ಲಿನ ಇಂಗಾಲದೊಂದಿಗೆ ಆಕ್ಸಿಜನ್ನನು ಕೂಡಿಸುವುದರಿಂದ ಇದನ್ನು ಪಡೆಯುತ್ತದೆ. ಆಕ್ಸಿಜನ್ನನು ಒದಗಿಸಲು ಅಷ್ಟೇನೂ ದೊಡ್ಡದಲ್ಲದ ಈಲಿಯ ಧಮನಿ ಒಂದೇ ಇದೆ. ತೂರು ಗೊಂದಿಯ ಸಿರ, ಈಲಿಯ ಧಮನಿ ಇವೆರಡರ ಕವಲುಗಳೂ ಕೊನೆಗೆ ನಾಳಗುಳಿಯೊಳಕ್ಕೆ ರಕ್ತ ಸುರಿಸುತ್ತವೆ. ನಾಳಗುಳಿಗಳ ಮೂಲಕ ರಕ್ತ ಈಲಿಯ ಸಿರಗಳ ಶಾಖೆಗಳಿಗೆ ಹರಿಯುತ್ತದೆ. ಅಲ್ಲಿಂದ ಒಟ್ಟುಗೂಡಿ ಕೆಳ ಸಿರಕೊಳ್ಳದೊಳಕ್ಕೆ (ಇನ್‍ಫೀರಿಯರ್ ವೀನಾಕೇವ) ಸುರಿದುದು ಗುಂಡಿಗೆಯ ಬಲಗುಂಡಿಗರೆಯನ್ನು (ಏಟ್ರಿಯಂ) ಸೇರಿಕೊಳ್ಳುತ್ತದೆ.[೩]

ತೂರುಗೊಂದಿಯ ಮತ್ತು ಧಮನಿಯ ರಕ್ತ ಒಳಹೋಗುವ ದಾರಿಯೇ ಅಲ್ಲದೆ, ಪಿತ್ತ ಹೊರಸಾಗುವ ಕಂಡಿಯೂ ಈಲಿಯ ತೂರುಗೊಂದಿಯೇ, ಬಲು ಕಿರಿದಾದ ಪಿತ್ತ ಕಿರಿಸಾಗಾಲುವೆಗಳು (ಕೆನಾಲಿಕುಲೈ) ಈಲಿಯೊಳಗೆ ಒಂದುಗೂಡಿ ಕಿರ್ನಾಳಗಳು (ಡಕ್ಟೂಲ್ಸ್), ಸಣ್ಣ ಸಾಗುನಾಳಗಳು, ದೊಡ್ಡ ಸಾಗುನಾಳಗಳು, ಹಾಗೇ ಕೊನೆಗೆ ಬರಿಯ ಕಣ್ಣಿಗೆ ಕಾಣುವಷ್ಟು ದೊಡ್ಡವಾಗುತ್ತವೆ. ಇವೆಲ್ಲ ಸಾಗುನಾಳಗಳು ತೂರುಗೊಂದಿಯ ಸಿರಗಳ ಕವಲುಗಳೊಂದಿಗೆ ಸಾಗಿದರೂ ಅವಲ್ಲಿನ ಪಿತ್ತ ಮಾತ್ರ ರಕ್ತದ ಹರಿವಿನ ಎದುರುದಿಕ್ಕಿನಲ್ಲಿ ಹರಿಯುತ್ತದೆ. ಬರುಬರುತ್ತ ದೊಡ್ಡದಾಗುವ, ಗಾತ್ರವಿರುವ ಪಿತ್ತ ಸಾಗುನಾಳಗಳು ಕೊನೆಗೆ ಈಲಿಯ ತೂರುಗೊಂದಿಯಲ್ಲಿ ಈಲಿಯ ಸಾಗುನಾಳದಲ್ಲಿ ಕೊನೆಗೊಳ್ಳುತ್ತವೆ.

ಈಲಿಯ ಹೊರಗೆ ಈಲಿಯ ಸಾಗುನಾಳ ಎರಡು ದೊಡ್ಡ ಕವಲುಗಳಾಗುವುದು. ಕವಲುಗಳಲ್ಲಿ ಒಂದಾದ ಪಿತ್ತಕೋಶದ ಒಳಗಿನ ಅಡೆವಳಿ (ಲೈನಿಂಗ್) ಅನೇಕ ಮಡಿಕೆಗಳಲ್ಲಿರುವುದರಿಂದ ಅದರ ಮೇಲು ತಳ ಅಗಲವಾಗುವುದು. ಇದರ ಜೀವಕಣಗಳಿಗೆ ಮಿಣಿಎಳೆಗೊಂಡೆಗಳೆಂಬ (ಮೈಕ್ರೊವಿಲ್ಲೈ) ಪುಟಾಣಿ ಚಾಚುಗಳಿರುತ್ತವೆ. ಪಿತ್ತಕೋಶ ತುಸುಕಾಲ ಪಿತ್ತವನ್ನು ಕೂಡಿಟ್ಟುಕೊಳ್ಳುವುದು. ಅದೇ ಹೊತ್ತಿನಲ್ಲಿ ಮಿಣಿಎಳೆಗೊಂಡೆಗಳ ಮೂಲಕ ಪಿತ್ತದಲ್ಲಿನ ನೀರನ್ನು ಹೀರಿಹಾಕಿ ನೀರಾಗಿರುವ ಪಿತ್ತವನ್ನು ಇನ್ನೂ ಗಟ್ಟಿಗೊಳಿಸುವುದು. ಹೀಗೇನಾದರೂ ನೀರು ತೆಗೆತ ಮಿತಿಗೆಟ್ಟರೆ, ಮುಖ್ಯವಾಗಿ ಕೊಲೆಸ್ಟಿರಾಲ್ ಇರುವ ಪಿತ್ತಗಲ್ಲುಗಳಾಗುತ್ತದೆ (ಗಾಲ್ ಸ್ಟೋನ್ಸ್). ಈಲಿಯ ಸಾಗುನಾಳದ ಇನ್ನೊಂದು ಕವಲು ಸಾಮಾನ್ಯ ಪಿತ್ತ ಸಾಗುನಾಳ. ಸಣ್ಣ ಕರುಳಿನ ಮೊದಲ ಭಾಗವಾದ ದುರಾರ್ಗರುಳಿನೊಳಕ್ಕೆ (ಡುಯೊಡಿನಮ್) ಈ ಸಾಗುನಾಳ ಹೋಗುವುದು. ಸಾಮಾನ್ಯ ಪಿತ್ತ ಸಾಗುನಾಳದ ಹೊರ ತುದಿಯಲ್ಲಿ ಅಡಿಯಗೆಂಡೆ (ಸ್ಛಿಂಗ್ಟರ್) ಎಂಬ ಒಂದು ಉಂಗುರ ಸ್ನಾಯು ಕಾವಲಿದೆ. ಕುದುರೆ ತೆರನ ಕೆಲವು ಪ್ರಣಿಗಳಲ್ಲಿ ಪಿತ್ತಕೋಶ ಇಲ್ಲದ್ದರಿಂದ ಬದುಕಿರಲು ಅದು ಇರಲೇಬೇಕಿಲ್ಲ. (ಎನ್.ಟಿ.ಎನ್.)

ನಿಜಗೆಲಸಗಳು[ಬದಲಾಯಿಸಿ]

ಕರುಳಿನಿಂದ ಗುಂಡಿಗೆಗೆ ಹಿಂತಿರುಗುವ ಸಿರದ ರಕ್ತ ಅದರ ಮೂಲಕ ಹರಿದು ಸಾಗುವ ಜೀವಕಣಗಳ ರಾಶಿಯೇ ಈಲಿ ಎನ್ನಬಹುದು. ಕರುಳಿನ ಗೋಡೆಯ ಮೂಲಕ ರಕ್ತ ಹರಿವಾಗ ಆಹಾರ ವಸ್ತುಗಳೂ ಆಗಾಗ್ಗೆ ವಿಷಕರ ವಸ್ತುಗಳೂ ಸೇರಿಸಿಕೊಳ್ಳುತ್ತವೆ. ಇವನ್ನೆಲ್ಲ ಹೇರಿಕೊಂಡು ಕೂಡಲೇ ರಕ್ತ ಈಲಿಯ ಮೂಲಕ ಸಾಗುತ್ತದೆ. ಕೆಡಕು ಮಾಡುವ ವಸ್ತುಗಳನ್ನು ತೆಗೆದುಹಾಕುವ ಸೋಸಿಕವಾಗಿ (ಫಿಲ್ಟರ್) ರಾಸಾಯನಿಕ ವಿಧಾನಗಳಿಂದ ವಿಷಗಳನ್ನು ಕೆಡಿಸಿ ಜಡಗೊಳಿಸಿ ಏಕಾಣುಜೀವಿಗಳನ್ನು ಈಲಿ ತೆಗೆದುಹಾಕುವುದು. ಗ್ಲೈಕುರೋನಿಕಾಮ್ಲ, ಗ್ಲೈಸೀನ್‍ಗಳೊಂದಿಗೋ ಅಸಿಟೈಲ್, ಸಲ್ಫೇಟು ಅಣ್ವಂಶಗಳೊಂದಿಗೋ ಒಂದುಗೂಡಿಸಿ, ಇಲ್ಲವೇ ಆಮ್ಲಜನಕಗೂಡಿಕೆ ಇಳಿಕೆಗಳಿಂದಲೋ ವಿಷಕರ ವಸ್ತುಗಳನ್ನು ನಿರಪಾಯಕರವಾಗಿ ಮಾಡುವುದು.

ರಕ್ತದಿಂದ ಪೋಷಕ ಪದಾರ್ಥಗಳನ್ನು ಎತ್ತಿಕೊಂಡು ಮುಂದಿನ ಬಳಕೆಗಾಗಿ ಕೂಡಿಟ್ಟುಕೊಳ್ಳ್ಳುವ ಈಲಿ ಉಗ್ರಾಣವಾಗಿಯೂ ಇದೆ. ಪ್ರೋಟೀನು, ಕೊಬ್ಬು, ಹಿಟ್ಟು ಸಕ್ಕರೆಗಳ ಜೀವವಸ್ತುಕರಣ (ಮೆಟಬಾಲಿಸಂ) ಆಗುವ ಕೇಂದ್ರ ಅಂಗವಿದು. ಮಾಂಸಲಿಯಲ್ಲಿ (ಮೇದೋಜೀರಕಾಂಗ) ತಯಾರಾಗುವ ಇನ್ಸುಲಿನ್ (ನೋಡಿ- ಇನ್ಸುಲಿನ್) ಚೋದನಿಕದ (ಹಾರ್ಮೋನ್) ಪ್ರಭಾವದಿಂದ, ರಕ್ತದಿಂದ ಎತ್ತಿಕೊಂಡ ಸಕ್ಕರೆಯೂ ಕೂಡಿಟ್ಟ ವಸ್ತುಗಳಲ್ಲಿ ಒಂದು. ಕೂಡಿಡಬಹುದಾದ ಮಿಗದಿಟ್ಟಿನ (ಗ್ಲೈಕೊಜನ್) ರೂಪದಲ್ಲಿ ಸಕ್ಕರೆ ದಾಸ್ತಾನಾಗಿರುವುದು. ಶಕ್ತಿ ಬೇಕೆನಿಸುವ ತನಕ ಈಲಿಯ ಜೀವಕಣಗಳಲ್ಲಿ ಹಾಗೇ ಉಳಿದಿರುತ್ತದೆ. ಇದನ್ನು ಮತ್ತೆ ದ್ರಾಕ್ಷಿ ಸಕ್ಕರೆಯಾಗಿ (ಗ್ಲೂಕೋಸ್) ಬದಲಿಸುವುದು ಮಾಂಸಲಿಯಲ್ಲಿರುವ ಇನ್ನೊಂದು ಚೋದನಿಕವಾದ ಸಕ್ಕರೆಕರೆಗ (ಗ್ಲೂಕಗಾನ್).

ಈಲಿಯ ಜೀವಕಣಗಳಲ್ಲಿ ಕೊಬ್ಬುಗಳು, ಜೀವಾತುಗಳು ಮತ್ತಿತರ ಆಹಾರವಸ್ತುಗಳೂ ಕೂಡಿರುತ್ತವೆ. ಜೊಕ್ಕಗೊಳಿಕೆ, ಕೂಡಿಡಿಕೆ ಇವೆರಡೇ ಕೆಲಸಗಳಲ್ಲ ಈಲಿಯದು. ಅದರ ಮೂಲಕ ಹರಿವ ರಕ್ತದೊಳಕ್ಕೆ ರಕ್ತರಸದ (ಪ್ಲಾಸ್ಮ) ಪ್ರೋಟೀನುಗಳಲ್ಲಿ ಮುಖ್ಯವಾದ ಕೋಳೆ (ಅಲ್ಬುಮಿನ್), ತಂತುಕಜನಕ (ಫೈಬ್ರಿನೊಜನ್), ಗ್ಲಾಬ್ಯುಲಿನ್ನುಗಳು. ಕೂಡಗರಣೆಜನಕ (ಪ್ರೋತ್ರಾಂಬಿನ್), ಹೆಪಾರಿನ್ನುಗಳನ್ನೂ ಅದು ತಯಾರಿಸಿ ಸೇರಿಸುವುದು. ಏಕಾಣುಜೀವಿಗಳು ತಯಾರಿಸಿ ಬಿಡುವ, ರೋಗ ಬರಿಸುವ ವಿಷಗಳಾದ ಜೀವವಿಷಗಳನ್ನು (ಟಾಕ್ಸಿನ್ಸ್) ಎದುರಿಸುವ ರೋಧವಸ್ತುಗಳನ್ನೂ ರಕ್ತದೊಳಕ್ಕೆ ಈಲಿ ಹಾಕುತ್ತದೆ. ರೋಗಗಳು ಬಾರದಂತೆ ಮೈ ತಡೆವ ಏರ್ಪಾಡುಗಳಲ್ಲಿ ಇದೂ ಒಂದು.

ರಕ್ತ ಹರಿವಿನ ಮೂಲಕ ಕರುಳಿಂದ ಈಲಿ ಹಲಬಗೆಯ ವಸ್ತುಗಳನ್ನು ಪಡೆವುದೇ ಅಲ್ಲದೆ ಈಲಿಯಿಂದ ಕರುಳಿಗೆ ಪಿತ್ತ ಹರಿಸುವ ಕೊಳವೆಗಳ ಮೂಲಕ ಕರುಳಿಗೂ ಈಲಿಗೂ ನೇರ ಸಂಬಂಧವಿದೆ. ಕರುಳೊಳಕ್ಕೆ ಈಲಿ ಸುರಿಸುವ ಪಿತ್ತರಸ ಹಸಿರು ಬಣ್ಣದ ದ್ರವ. ಕೊಬ್ಬನ್ನು ಅರಗಿಸುವುದರಲ್ಲಿ ನೆರವಾಗುವ ಪಿತ್ತದ ಆಮ್ಲಗಳೂ ಕೊಬ್ಬುಗಳು, ಎ.ಡಿ.ಕೆ.ಇ ಜೀವಾತುಗಳು ತೆರನ, ಕೊಬ್ಬಿನಲ್ಲಿ ಕರಗುವ ವಸ್ತುಗಳೂ ಮತ್ತಿತರ ಹಲತೆರನವೂ ಪಿತ್ತದಲ್ಲಿವೆ. ಮೂಳೆಯ ಮಜ್ಜೆ, ತೊರಳೆ, ಈಲಿಗಳಲ್ಲಿ ಕೆಟ್ಟಿರುವ ಅನೇಕ ಕೆಂಪು ರಕ್ತಕಣಗಳು ದಿನವೂ ಹಾಳಾಗುತ್ತಲೇ ಇರುವುವು. ಈಲಿಯ ರಕ್ತನಾಳಗಳ ಹಿಗ್ಗುಕಗ್ಗುಗಳಿಂದ ಈಲಿಯಲ್ಲಿ ಹೆಚ್ಚು ರಕ್ತ ಕೂಡಿದ್ದು ತುರ್ತಿನ ಹೊತ್ತಿನಲ್ಲಿ ರಕ್ತದ ಹರಿವಿನೊಳಕ್ಕೆ ನುಗ್ಗಿಸಬಹುದು. ರಕ್ತದ ಕೆಂಪುಬಣ್ಣಕ್ಕೆ ಕಾರಣವಾದ ರಕ್ತಬಣ್ಣಕ (ಹೀಮೊಗ್ಲಾಬಿನ್) ಹೀಗೆ ರಕ್ತದೊಳಕ್ಕೆ ಚೆಲ್ಲಿಬೀಳುತ್ತದೆ. ಈಲಿ ಇದನ್ನು ಎತ್ತಕೊಂಡು ಕೆಂಪಿತ್ತ (ಬಿಲಿರೂಬಿನ್), ಹಸಿರು ಪಿತ್ತಗಳನ್ನಾಗಿ (ಬಿಲಿವರ್ಡಿನ್) ಮಾರ್ಪಡಿಸಿ ಪಿತ್ತದ ಮೂಲಕ ಕರುಳಿಗೆ ಸಾಗಿಸುತ್ತದೆ. ಮಲದ ಕಂದುಬಣ್ಣಕ್ಕೆ ಇವೇ ಕಾರಣ. ಮೈಯಲ್ಲಿ ಹುಟ್ಟುವ ಕಸರೆ ವಸ್ತುಗಳಾದ ಮೂತ್ರಲವಣ (ಯೂರಿಯ), ಮೂತ್ರಾಮ್ಲಗಳನ್ನೂ (ಯೂರಿಕ್ ಆಸಿಡ್) ಪಿತ್ತದ ಮೂಲಕ ಈಲಿ ಹೊರದೂಡುತ್ತದೆ. ಪಿತ್ತದ ಮೂಲಕ ಈಲಿ ಕೊಲೆಸ್ಟಿರಾಲನ್ನು ಸಹ ಹೊರದೂಡಿದರೂ ಅದರ ಬಹು ಪಾಲನ್ನು ಕರುಳು ಮತ್ತೆ ಹೀರಿಕೊಂಡು ಬಿಡುವುದರಿಂದ ಹಾಳಾಗದು.[೪]

ಹುಟ್ಟು ವಿಕಾರಗಳು ಗಂತಿಗಳ (ಟ್ಯೂಮರ್ಸ್) ಬೆಳೆತ, ಪರಪಿಂಡಿ ಮುಸುರಿಕೆಗಳ (ಪ್ಯಾರಸೈಟ್ ಇನ್‍ಫೆಸ್ಟೇಷನ್) ಹೊರತಾಗಿ ಈಲಿಯ ಸಾಮಾನ್ಯ ರೋಗಗಳಲ್ಲಿ ಬಹು ಪಾಲು ಅದರ ರಚನೆಗಟ್ಟು ಕೆಟ್ಟಿರುವುದು. ಹಾಗೆ ಕೆಡುವುದರಿಂದ ಪ್ರಾಣಕ್ಕೆ ಹಾನಿಯಾಗಿ ಮಾರಕ ಆಗದಿರಲು ಎರಡು ಮುಖ್ಯ ಕಾರಣಗಳಿವೆ. ಎಂದಿನ ಮೂಲ ಬೇಡಿಕೆಗಳಿಗೆ ಯಾವಾಗಲೂ ಬೇಕಿರುವುದಕ್ಕಿಂತಲೂ ಮಿಗಿಲಾಗಿ ಈಲಿಯು ಊತಕವಿರುವುದು. ಅಂದರೆ, ಈಲಿಯಲ್ಲಿ ಬಹುಪಾಲನ್ನು ಏಡಿಗಂತಿ (ಕ್ಯಾನ್ಸರ್) ತುಂಬಿಕೊಂಡಿಟ್ಟಿದ್ದರೂ ಕೆಲಕಾಲವಾದರೂ ಈಲಿಯ ನಿಜಗೆಲಸಗಳಿಗೆ ಆತಂಕವಾಗದು. ಎಷ್ಟೇ ಪೆಟ್ಟಾಗಿ ಹಾಳಾದರೂ ಮತ್ತೆ ಚೇತರಿಸಿಕೊಂಡು ಹೆಚ್ಚಾಗಿ ಬೆಳೆದು ವಾಸಿಮಾಡಿಕೊಳ್ಳುವ ಮಹಾಶಕ್ತಿ ಈಲಿಗಿದೆ. ಕೆಡದೆ ಉಳಿದಿರುವ ಜೀವಕಣಗಳು ಬಲುಬೇಗನೆ ಬೆಳೆದು ಗುಣಿತವಾಗಿ ದೊಡ್ಡ ಕಿಗ್ಗಂಟಿನ ಹೇರೂಪ (ನಾಡ್ಯುಲಾರ್ ಹೈಪರ್ ಪ್ಲೇಸಿಯ) ಆಗುವುದರೊಂದಿಗೆ ಪಿತ್ತಸಾಗುನಾಳಗಳ ಜೊತೆಯಲ್ಲಿ ಹೊಸ ಹುಟ್ಟಿನ ಜೀವಕಣಗಳು ಚೆನ್ನಾಗಿ ಹೊಂದಿಕೊಳ್ಳುವುವು.

ಈಲಿಯ ನಿಜಕೆಲಸಗಳ ಪರೀಕ್ಷೆಗಳು[ಬದಲಾಯಿಸಿ]

ಈಲಿಯ ನಿಜಕೆಲಸಗಳು ಎಷ್ಟೊಂದು ಬಗೆಯವು ಇರುವುದೆಂದರೆ, ಯಾವ ಒಂದು ಪರೀಕ್ಷೆಯಿಂದಲೂ ಉಳಿದೆಲ್ಲ ಕೆಲಸಗಳು ಕೆಟ್ಟಿರುವ ವಿಚಾರ ಇನಿತೂ ಗೊತ್ತಾಗದು. ಬೇಕಿರುವುದಕ್ಕಿಂತಲೂ ಹೆಚ್ಚಿಗಿರುವ ಊತಕವೂ ವಾಸಿಪಡಿಸಿಕೊಳ್ಳುವ ಹೆಗ್ಗುಣವೂ ಈ ಪರೀಕ್ಷೆಗಳಿಗೆ ಅಡ್ಡಿಯಾಗುತ್ತವೆ. ಒಟ್ಟಿನಲ್ಲಿ ಕೂರಾದ (ಅಕ್ಯೂಟ್) ಹಾನಿ ರೋಗಗಳು ಇರುವುದನ್ನು ಈಗಿನ ಪರೀಕ್ಷೆಗಳು ಕೂಡಲೇ ತೋರುವುದಾದರೂ ವೈದ್ಯನಿಗೆ ಮುಖ್ಯವಾಗಿ ಬೇಕಿರುವ ವಿಚಾರಗಳನ್ನು ತಿಳಿಸಿಕೊಡವು. ಈಲಿ ಕೆಲಸಗೆಡುವಷ್ಟು ಹಾಳಾಗಿರುವುದೋ ಇಲ್ಲವೋ ಎಂಬುದನ್ನು ಅದರಲ್ಲೂ ಈಲಿಯ ಬೇರೂರಿದ ರೋಗಗಳಲ್ಲಿ ಅನುಮಾನವಿಲ್ಲದಂತೆ ತೋರವು. ಸಾಮಾನ್ಯವಾಗಿ, ನಿಜಗೆಲಸಗಳ ಜೀವವೈಜ್ಞಾನಿಕ ಪರೀಕ್ಷೆಗಳಿಗೂ ಜೀವುಂಡಿಗೆಯಿಂದ (ಬಯಾಪ್ಸಿ) ತೆಗೆದು ಮಾಡಿದ ಊತಕ ಪರೀಕ್ಷೆಗಳಿಗೂ ಹೊಂದಾಣಿಕೆ ಅಷ್ಟಾಗಿಲ್ಲ. ಮೈಕ್ರೋಸ್ಕೋಪಿನಡಿಯಲ್ಲಿ ಈಲಿ ವಿಪರೀತ ಕೆಟ್ಟಿರುವಂತೆ ಕಂಡುಬಂದರೂ ನಿಜಗೆಲಸ ಪರೀಕ್ಷೆಗಳಿಂದ ಯಾವ ಹಾನಿಯೂ ಕಾಣದಿರಬಹುದು. ಯಾವಾಗಲೂ ಯಾವುದೇ ಒಂದು ಜೀವಾರಾಸಾಯನಿಕ ಪರೀಕ್ಷೆಯನ್ನು ಮಾತ್ರ ನೆಚ್ಚಿಕೊಳ್ಳಬಾರದು. ಸಾಧ್ಯವಾದರೆ ಕೆಲ ಕಾಲ ಬಿಟ್ಟು ಬಿಟ್ಟು ಮಾಡುವ ಪರೀಕ್ಷೆಗಳ ಸರಣಿಗಳಿಂದಲೇ ಹೆಚ್ಚಿನ ವಿಚಾರಗಳು ಗೊತ್ತಾಗುವುವು.[೫]

ಕಳೆದ ಶತಮಾನದಲ್ಲೇ ಈಲಿಯ ಜೀವುಂಡಿಗೆಯನ್ನು ವಿವರಿಸಿದ್ದರಾದರೂ ಅದನ್ನು ಈಲಿ ಪರೀಕ್ಷೆಯಲ್ಲಿ ಒಂದಾಗಿ ಬಳಸುತ್ತಿರುವುದು ಈಚೆಗೆ. ತೂತಿರುವ ಸೂಜಿಯೊಂದನ್ನು ರೋಗಿಗೆ ನೋವಾಗದಂತೆ ಈಲಿಯೊಳಕ್ಕೆ ಬಲ ಪಕ್ಕದಿಂದ ಚುಚ್ಚಿ ಈಲಿಯ ಬಲು ಸಣ್ಣಚೂರನ್ನು ಹೊರತೆಗೆದು ಅದನ್ನು ಮೈಕ್ರೋಸ್ಕೋಪಿನಲ್ಲಿ ಪರೀಕ್ಷಿಸಲಾಗುತ್ತದೆ. ಆಮೇಲೆ ರೋಗಿ ದಿನವೆಲ್ಲ ಆಸ್ಪತ್ರೆಯಲ್ಲಿ ಇರಬೇಕು. ಹೀಗೆ ಮಾಡಿದಾಗ ಲಕ್ಷ ಮಂದಿಗೊಬ್ಬರು ಸತ್ತಿದ್ದಾರೆ. ಬೇರೂರಿದ ಈಲಿಯುರಿತ (ಹೆಪಟೈಟಿಸ್), ಕಾರಣ ಗೊತ್ತಿಲ್ಲದ ಈಲಿ ಹೆಬ್ಬೆಳೆತ. ಈಲಿಯ ಅರಿಶಿನಾರಿಗೆ (ಸಿರ್ರೋಸಿಸ್) ರೋಗಿಗಳಿಗೆ ಮುಂದೇನಾಗುವುದೆಂಬ ತಿಳಿವು—ಇವನ್ನೆಲ್ಲ ಗುರುತಿಸಲು ಇದರಿಂದ ನೆರವಾಗುತ್ತದೆ. ಇದ್ದಾಗಲೂ ರಕ್ತಸುರಿತ ಹೆಚ್ಚಿರುವವರಲ್ಲೂ ಇದನ್ನು ಮಾಡುವಂತಿಲ್ಲ.

ಹಲವಾರು ಜೀವರಾಸಾಯನಿಕ ಪರೀಕ್ಷೆಗಳಲ್ಲಿ ತೀರ ಮುಖ್ಯವಾದವಿವು; ರಸಿಕೆಯಲ್ಲಿನ (ಸೀರಂ) ಕೋಳೆ, ಕೆಂಪಿತ್ತ, ಟ್ರಾನ್ಸಮಿನೇಸುಗಳು. ಗ್ಲಾಬ್ಯೂಲಿನುಗಳ ಅಳೆತ: ರಸಿಕೆಯ ವಿದ್ಯುಚ್ಚಲಚಿತ್ರಣ (ಎಲೆಕ್ಟ್ರೊಫಾರೆಸಿಸ್), ಕ್ಷಾರಕ ಫಾಸ್ಫೇಟು ದೊಳೆ, ತೈಮಾಲಿನ ಬಗ್ಗಡತೆ (ಟರ್ಬಿಡಿಟಿ), ಬ್ರೋಮ್ ಸಲ್ಫ್‍ತ್ಯಾಲಿಯೀನ್ ಪರೀಕ್ಷೆಗಳು. ಅಂತೂ ಯಾವ ಒಂದೇ ಒಂದು ಪರೀಕ್ಷೆಯೂ ನಿರ್ಧಾರಕವಲ್ಲ. ಒಂದು ದಿನ ಇದ್ದಂತೆ ಮತ್ತೊಂದು ದಿನ ಇರದಿದ್ದರಿಂದ ಆಗಾಗಿ ಹಲವಾರು ಪರೀಕ್ಷೆಗಳನ್ನು ಮಾಡಿದರೆ ಅನುಕೂಲ, ರೋಗಿಯ ಹೇಳಿಕೆ, ಮೈ ಪರೀಕ್ಷೆಗಳೊಂದಿಗೆ ಇವು ವೈದ್ಯನಿಗೆ, ಅದರಲ್ಲೂ ಕಾಮಾಲೆ ಬೇರೂರಿರುವಾಗ ರೋಗ ನಿದಾನಕ್ಕೆ (ಡಯಗ್ನೋಸಿಸ್) ನೆರವಾಗುತ್ತದೆ.


ಉಲ್ಲೇಖಗಳು[ಬದಲಾಯಿಸಿ]

  1. https://www.ncbi.nlm.nih.gov/books/NBK53069/
  2. https://www.sciencedirect.com/topics/neuroscience/mesothelium
  3. https://www.hindawi.com/journals/cripa/2013/836398/
  4. https://www.tandfonline.com/doi/pdf/10.1080/00365590410002492
  5. https://www.mesotheliomaguide.com/mesothelioma/diagnosis/biopsy-types/
"https://kn.wikipedia.org/w/index.php?title=ಈಲಿ&oldid=966909" ಇಂದ ಪಡೆಯಲ್ಪಟ್ಟಿದೆ