ವಿಷಯಕ್ಕೆ ಹೋಗು

ಈಜಿಪ್ಟಿನ ಆರ್ಥಿಕ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಜಿಪ್ಟಿನ ಆರ್ಥಿಕ ವ್ಯವಸ್ಥೆ ಬಹು ಸಂಕೀರ್ಣವಾದುದು. ಈಜಿಪ್ಟ್ನ ಆಯಕಟ್ಟಿನ ಭೌಗೋಳಿಕ ಸ್ಥಾನದಿಂದಾಗಿ ಪ್ರಪಂಚದ ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಈ ದೇಶಕ್ಕೆ ವಿಶೇಷ ಪ್ರಾಮುಖ್ಯವುಂಟು. ಜನಸಂಖ್ಯೆಯಲ್ಲೂ ಭೂ ವಿಸ್ತೀರ್ಣದಲ್ಲೂ ಈಜಿಪ್ಟು ಸಣ್ಣ ರಾಷ್ಟ್ರವಾದರೂ ಇತ್ತೀಚೆಗೆ-ಮುಖ್ಯವಾಗಿ 1952ರ ತರುವಾಯ-ಇದು ಆಧುನಿಕ ರೀತಿನೀತಿಗಳಿಗೆ ಅನುಸಾರವಾಗಿ ರೂಪುಗೊಳ್ಳುತ್ತಿದೆ.[]

ಭೂ ಸುಧಾರಣೆ

[ಬದಲಾಯಿಸಿ]

ಭೂ ಸುಧಾರಣೆಯೂ ನೀರಾವರಿ ಪ್ರಗತಿಯೂ ಆಧುನಿಕ ಈಜಿಪ್ಟಿನ ಕೃಷಿ ಜೀವನವನ್ನು ರೂಪಿಸುತ್ತಿರುವ ಎರಡು ಮುಖ್ಯ ಅಂಶಗಳು. ಹಿಂದಿನಿಂದ ನಡೆದು ಬಂದ ಭೂ ಒಡೆತನ ಪದ್ಧತಿಯನ್ನಳಿಸಿ ಹೊಸ ನಮೂನೆಯ ಹಿಡುವಳಿ ಜಾರಿಗೆ ತಂದಿರುವುದು ಒಂದು ಮುಖ್ಯ ಕ್ರಮ.[]

ಭೂಮಿಯೊಂದು ಅಮೂಲ್ಯ ಆಸ್ತಿಯೆಂಬುದು ಈಜಿಪ್ಟ್ ಜನರ ಹಳೆಯ ಭಾವನೆ. ಭೂ ಒಡೆತನ ಕೆಲವರಲ್ಲೇ ಕೇಂದ್ರೀಕೃತವಾಗುವ ಪ್ರವೃತ್ತಿ ಬೆಳೆದುಬಂದದ್ದರ ಫಲವಾಗಿ 1952ರಲ್ಲಿ ಕೇವಲ ಎರಡು ಸಾವಿರ ಮಂದಿ ಭೂ ಒಡೆಯರಿದ್ದರು. ಜಮೀನಿನ ಬಹುಭಾಗದ ಬೆಳೆಯಾಗಿದ್ದ ಹತ್ತಿಗೆ ಪ್ರಪಂಚದ ಮಾರುಕಟ್ಟೆಯಲ್ಲಿ ಇದ್ದ ಅಧಿಕ ಬೆಲೆಯೂ ಭೂ ಒಡೆಯರು ತೆರಬೇಕಾಗಿದ್ದ ತೆರಿಗೆ ಕಡಿಮೆ ಮಟ್ಟದಲ್ಲಿದ್ದದ್ದೂ ಅವರು ಹೆಚ್ಚು ಐಶ್ವರ್ಯವಂತರಾಗಲು ಸಹಾಯಕವಾದುವು. ಇದರಿಂದ ಭೂಮಿಯ ಬೆಲೆ ಏರಿತು; ಕೇವಲ ಸಿರಿವಂತರು ಮಾತ್ರ ಸ್ಥಿತಿವಂತರಾಗಬಹುದಿತ್ತು. 1952ರ ಸೈನಿಕ ಕ್ರಾಂತಿಗೆ ಮುಂಚೆ ಭಾರಿ ಜಮೀನುದಾರರು ಒಟ್ಟು ಜನಸಂಖ್ಯೆಯ ಕೇವಲ 0.1%ರಷ್ಟು ಇದ್ದು, ಅವರಲ್ಲಿ ಒಬ್ಬೊಬ್ಬರಿಗೂ ಸರಾಸರಿಯಲ್ಲಿ 550.9 ಫೆಡನ್ನು ಭೂಮಿಯಿತ್ತು (1 ಫೆಡನ್ನು=1.038 ಎಕರೆ). ಆದರೆ ಜನಸಂಖ್ಯೆಯ 72%ರಷ್ಟು ಮಂದಿಗೆ ತಲಾ ಕೇವಲ ¼ ಫೆಡನ್ನು 25%ರಷ್ಟು ಮಂದಿಗೆ ತಲಾ ಒಂದರಿಂದ ಹತ್ತು ಫೆಡನ್ನೂ ಇದ್ದುವು. ಆದ್ದರಿಂದ ಅಲ್ಪ ಸಂಖ್ಯಾತರಾದ ಭಾರಿ ಜಮೀನ್ದಾರರಿಗೂ, ಬಹು ಸಂಖ್ಯೆಯ ಸಾಮಾನ್ಯ ರೈತರಿಗೂ ಅತಿಯಾದ ಅಂತರವೇರ್ಪಟ್ಟಿತ್ತು. ಕೃಷಿಯಲ್ಲದೆ ಅನ್ಯ ಜೀವನೋಪಾಯವೇ ಕಾಣದ ಅಸಂಖ್ಯಾತ ರೈತರು ಅತಿಯಾದ ಬಡತನ, ಶೋಷಣೆ, ಅe್ಞÁನಗಳಿಗೆ ಒಳಗಾಗಿದ್ದರು.

ಸಾಮಾನ್ಯ ಜನರ ಈ ಶೋಚನೀಯ ಸ್ಥಿತಿಯ ನಿವಾರಣೆಗಾಗಿ ಕ್ರಾಂತಿಕಾರಿ ಸೇನಾಸಮಿತಿ ಭೂಮಿಯ ಪುನರ್‍ವಿತರಣೆಗೆ ಆದ್ಯತೆ ನೀಡಿತು. 1952ರ ಸೆಪ್ಟೆಂಬರಿನ ಕೃಷಿ ಸುಧಾರಣಾ ತುರ್ತು ವಿಧಿಯ ಪ್ರಕಾರ ಪ್ರತಿ ಭೂ ಮಾಲೀಕನೂ ತನ್ನಲ್ಲಿದ್ದ ಎರಡು ನೂರು ಫೆಡನ್ನುಗಳಿಗೂ ಮೀರಿದ ಹಿಡುವಳಿ ಭಾಗವನ್ನು ತಾನೇ ಮಾರಬೇಕು ಅಥವಾ ಬಿಟ್ಟುಕೊಟ್ಟು ಪ್ರತಿಯಾಗಿ 3%ರ 20 ವರ್ಷಗಳ ಬಾಂಡುಗಳ ರೂಪದಲ್ಲಿ ಪರಿಹಾರ ಪಡೆಯಬೇಕು. ಇಬ್ಬರು ಮಕ್ಕಳಿಗೆ ತಲಾ 50 ಫೆಡನ್ನುಗಳಂತೆ ಇನ್ನೂ ಒಂದು ನೂರು ಫೆಡನ್ನು ಭೂಮಿ ಹೊಂದಲು ಕುಟುಂಬಕ್ಕೆ ಅವಕಾಶವಿತ್ತು. ಸರ್ಕಾರದ ವಶಕ್ಕೆ ಬಂದ ಭೂಮಿಯನ್ನು 2 ರಿಂದ 5 ಎಕರೆಗಳ ತಾಕುಗಳಾಗಿ ಮಾಡಿ ರೈತರಿಗೆ ಮಾರಲಾಯಿತು; ನೂತನ ಹಿಡುವಳಿದಾರರಿಗೆ ಬೀಜ, ಉಪಕರಣ, ಗೊಬ್ಬರ ಮತ್ತು ಸಾಲ ಸೌಲಭ್ಯ ಕಲ್ಪಿಸಲು ಕಡ್ಡಾಯ ಕೃಷಿ ಸಹಕಾರಿ ಸಂಸ್ಥೆಗಳ ಸ್ಥಾಪನೆಯಾಯಿತು. ಕನಿಷ್ಠ ಕೂಲಿಯ ನಿಗದಿಯಾಯಿತು. 1961ರ ಅಂತ್ಯದವರೆಗೆ ಹಿಡುವಳಿ ಪಡೆದ ಸಂಸಾರಿಗಳ ಸಂಖ್ಯೆ 1,80,000ಕ್ಕೂ ಹೆಚ್ಚಾಗಿತ್ತು. ಈ ಭೂ ಸುಧಾರಣಾ ಕಾಯಿದೆಯ ಪ್ರಕಾರ ಶ್ರೀಮಂತ ಮಾಲೀಕರಿಂದ ಪಡೆದುಕೊಂಡ ಒಟ್ಟು ನೆಲ 9,35,000 ಫೆಡನ್ನು; ಅಂದರೆ ಇದು ಈಜಿಪ್ಟಿನ ಸಾಗುವಳಿ ಯೋಗ್ಯ ಭೂಮಿಯ 15% ರಷ್ಟು.


ಭೂಮಿಯ ಪುನರ್‍ಹಂಚಿಕೆ ಕಾರ್ಯ ಅಲ್ಲಿಗೇ ನಿಲ್ಲಲಿಲ್ಲ. 1961ರ ಜುಲೈನಲ್ಲಿ ಹೊರಡಿಸಲಾದ ಇನ್ನೊಂದು ತುರ್ತು ಶಾಸನದ ಪ್ರಕಾರ, ವ್ಯಕ್ತಿಯ ಹಿಡುವಳಿಯ ಮಿತಿಯನ್ನು 100 ಫೆಡನ್ನುಗಳಿಗೆ ಇಳಿಸಲಾಯಿತು. ಸರ್ಕಾರ 1892 ಭೂ ಒಡೆಯರಿಂದ ಸುಮಾರು 1,70,000 ಫೆಡನ್ನು ನೆಲ ಪಡೆದು ಅದನ್ನು ಸುಮಾರು 60,000 ಸಂಸಾರಗಳಲ್ಲಿ ಹಂಚಿತು. ಆದೇ ಸಂದರ್ಭದಲ್ಲಿ ಇಸ್ಲಾಮೀ ಮತೀಯ ಜಹಗೀರುಗಳನ್ನು ವಹಿಸಿಕೊಂಡು ಆ ನೆಲವನ್ನು ವಿತರಣೆ ಮಾಡಲಾಯಿತು. ಇಷ್ಟೆಲ್ಲ ಆದರೂ ಅಲ್ಲಿ ಇನ್ನೂ ಸುಮಾರು 1,60 ಕೋಟಿ ರೈತರಿಗೆ ನೆಲ ದೊರಕಲಿಲ್ಲ. ಆದರೂ ಈ ಸುಧಾರಣಾ ಕ್ರಮಗಳಿಂದ ಈಜಿಪ್ಟಿನ ಭೂ ಒಡೆತನದ ನಮೂನೆಯಲ್ಲಿ ಮಹತ್ತ್ವದ ಬದಲಾವಣೆಯಾದದ್ದಂತೂ ನಿಜ.

ಭೂ ಹಂಚಿಕೆ ಕಾರ್ಯಕ್ರಮದೊಡನೆಯೇ ವ್ಯವಸಾಯಾಭಿವೃದ್ಧಿಗೆ ಸಹಾಯಕವಾದ ಇತರ ಕೆಲವು ಕ್ರಮಗಳು ಜಾರಿಗೆ ಬಂದುವು. ಗೇಣಿದಾರರ ಸ್ಥಿತಿಗತಿ ಸುಧಾರಣೆಗೆ ಗೇಣದಾರಿಯನ್ನು ಕ್ರಮಗೊಳಿಸಲಾಯಿತು: ಅದು ಸುಮಾರು ಆರ್ಧಕ್ಕೆ ಇಳಿಯಿತು. ರೈತರ ಬೇಸಾಯ ಕ್ರಮದಲ್ಲಿ ಸುಧಾರಣೆ ಮಾಡುವ ಸಲುವಾಗಿ ವ್ಯಾಪಕ ಸಹಕಾರ ವ್ಯವಸ್ಥೆಯ ರಚನೆಯಾದದ್ದು ಇನ್ನೊಂದು ಮುಖ್ಯ ಕ್ರಮ. ಸಾಲದ ಹೊರೆ ಇಳಿತ, ಕೃಷಿ ಕಾರ್ಯಾಚರಣೆಗೆ ಉಪಕರಣ ನೀಡಿಕೆ, ಗ್ರಾಮಕೈಗಾರಿಕೆಗಳ ಜೀರ್ಣೋದ್ದಾರ. ಶಿಕ್ಷಣ- ಈ ಎಲ್ಲ ನಿಟ್ಟಿನಲ್ಲೂ ಸಹಕಾರ ಯಶಸ್ವಿಯಾಗಿದೆ.[]

ಕೃಷಿಯೋಗ್ಯ ಭೂ ವಿಸ್ತರಣೆ

[ಬದಲಾಯಿಸಿ]

ಈಜಿಪ್ಟಿನ ಬಹುಭಾಗ ಪ್ರದೇಶವನ್ನು ಮರಳುಕಾಡು ಆವರಿಸಿಕೊಂಡಿದೆ. ಕೃಷಿಯೋಗ್ಯ ಭೂಭಾಗ ಒಟ್ಟು ನೆಲದ ಕೇವಲ 3.5% ಮಾತ್ರ. ಈ ಕೊರತೆಯನ್ನು ನಿವಾರಿಸುವುದು ಈಜಿಪ್ಟ್ ಸರ್ಕಾರದ ಇತ್ತೀಚಿನ ನೀತಿ. ಮರಳುಗಾಡಿನ ಮತ್ತು ಇತರ ಭಾಗಗಳ ಪ್ರದೇಶವನ್ನು ಹೊಸದಾಗಿ ಕೃಷಿ ಯೋಗ್ಯಗೊಳಿಸುವ ಯೋಜನೆಗಳನ್ನು ಅದು ಕೈಗೊಂಡಿದೆ. 1959-62ರ ಅವಧಿಯಲ್ಲಿಯೇ ಈ ಕಾರ್ಯಕ್ರಮದ ಪ್ರಕಾರ 2,29,000 ಎಕರೆ ಭೂ ಪ್ರದೇಶವನ್ನು ಹೊಸದಾಗಿ ಕೃಷಿಯೋಗ್ಯಗೊಳಿಸಲಾಯಿತು. ಸೋವಿಯತ್ ಒಕ್ಕೂಟದ ನೆರವಿನಿಂದ 1960ರಲ್ಲಿ ನಿರ್ಮಾಣ ಆರಂಭವಾದ ಆಸ್ವಾನ್ ಎತ್ತರ ಕಟ್ಟೆಯಿಂದ ಇತರ ಪ್ರಯೋಜನಗಳ ಜೊತೆಗೆ ಬೇಸಾಯದ ನೆಲದ ವಿಸ್ತರಣೆಗೂ ಹೆಚ್ಚು ಸಹಾಯವಾಗಿದೆ. ಹೊಸ ಪ್ರದೇಶಗಳಿಗೆ ಜನ ಕುಟುಂಬ ಸಮೇತರಾಗಿ ಹೋಗಿ ನೆಲೆಸಲು ಉತ್ತೇಜನ ನೀಡಲಾಗಿದೆ. ಇದೊಂದು ಹೊಸ ಸಾಮಾಜಿಕ ಪ್ರಯೋಗ. ಇಂಥ ಯೋಜನೆಗಳಿಗೆ ವಿದೇಶೀ ತಾಂತ್ರಿಕ ಶೈಕ್ಷಣಿಕ ನೆರವು ದೊರಕಿದೆ. ಪ್ರಾಕೃತಿಕವಾಗಿ ಅಷ್ಟೇನೂ ಹಿತಕರವಲ್ಲದ ವಾತಾವರಣಗಳಿಗೆ ಜನರನ್ನು ಸ್ಥಳಾಂತರಗೊಳಿಸುವ ಇಂಥ ಕಾರ್ಯಕ್ರಮಗಳ ವೆಚ್ಚ ಹೆಚ್ಚು. ಅಲ್ಲದೆ ಇಂಥ ಕ್ರಮಗಳಿಂದ ಹೆಚ್ಚು ನೆಲವನ್ನು ಕೃಷಿ ಹಾಗೂ ವಸತಿ ಯೋಗ್ಯಗೊಳಿಸಲು ತೀವ್ರವಾದ ಮಿತಿಗಳುಂಟು. []

ನೀರಾವರಿ

[ಬದಲಾಯಿಸಿ]

ಪುನವ್ರ್ಯವಸ್ಥಿತ ಭೂ ಒಡೆತನ ಈಜಿಪ್ಟಿನ ಆಧುನಿಕ ವ್ಯವಸಾಯಕ್ಕೆ ಹೊಸ ತಳಹದಿ ಹಾಕಿರುವ ಒಂದು ಮುಖ್ಯಕ್ರಮವಾದರೆ, ಹೊಸ ನೀರಾವರಿ ವ್ಯವಸ್ಥೆ ಇನ್ನೊಂದು ಮುಖ್ಯಕ್ರಮ. ಸಾವಿರಾರು ವರ್ಷಗಳಿಂದಲೂ ಈಜಿಪ್ಟಿನಲ್ಲಿ ನಡೆದು ಬಂದಿರುವುದು ಕುಂಟೆ ನೀರಾವರಿ ವಿಧಾನ (ಬೇಸಿನ್ ಇರಿಗೇಷನ್). 4'-8' ಎತ್ತರದ ಬಾಂದುಗಳ ಮೂಲಕ ಭೂಮಿಯನ್ನು ಸಣ್ಣ ಸಣ್ಣ ಪಾತ್ರಗಳಾಗಿ ವಿಭಾಗಿಸಿ ನದಿಯ ಪ್ರವಾಹ ಉಕ್ಕಿ ಬಂದಾಗ ಅವುಗಳಲ್ಲಿ ನೀರು ತುಂಬುವಂತೆ ಮಾಡಿ ತರುವಾಯ ವ್ಯವಸಾಯಕ್ಕೆ ಆ ನೀರನ್ನು ಉಪಯೋಗಿಸಿಕೊಳ್ಳುವುದೇ ಈ ವಿಧಾನ. ಇದರಿಂದ ಪ್ರವಾಹದ ಋತುಮಾನಕ್ಕೆ ಅನುಗುಣವಾಗಿ ಕೆಲವು ಬೆಳೆಗಳನ್ನು ಮಾತ್ರ ಬೆಳೆಯಬಹುದಲ್ಲದೆ ವರ್ಷಕ್ಕೆ ಕೇವಲ ಒಂದು ಬೆಳೆ ಮಾತ್ರ ತೆಗೆಯಲು ಸಾಧ್ಯ. ಈಚೆಗೆ ಹೊಸದಾದ ಸಾರ್ವಕಾಲಿಕ ನೀರಾವರಿ ವಿಧಾನ ಅಭಿವೃದ್ಧಿಯಾಗಿರುವುದರಿಂದ ಕುಂಟೆ ನೀರಾವರಿ ಕ್ರಮದ ಪ್ರಾಮುಖ್ಯ ಕಡಿಮೆಯಾಗಿದೆ. ನೈಲ್ ನದಿಗೆ ಅಲ್ಲಲ್ಲಿ ಕಟ್ಟೆ ಕಟ್ಟಿ ಸರೋವರಗಳನ್ನು ನಿರ್ಮಿಸಿ, ಜಮೀನುಗಳಿಗೆ ನಾಲೆಗಳ ಮೂಲಕ ನೀರು ಒಯ್ಯುವ ಯೋಜನೆ ಹಂತ ಹಂತವಾಗಿ ಮುಂದುವರಿದಿದೆ. ಈಜಿಪ್ಟ್ ಜನರ ದೃಷ್ಟಿಯಲ್ಲಿ ಈ ಕಟ್ಟೆಗಳು ನೀರಾವರಿ ವಿದ್ಯುಚ್ಛಕ್ತಿ ಯೋಜನೆಗಳು ಮಾತ್ರವಲ್ಲ. ಇವು ಈಜಿಪ್ಟಿನ ಹೊಸ ಸಹಕಾರಿ ಸಮಾಜವಾದೀ ಪ್ರಜಾಪ್ರಭುತ್ವದ ಅಸ್ತಿಭಾರ. ಪುರಾತನ ಫೇರೋಗಳು ಅಂದು ನಿರ್ಮಿಸಿದ ಪಿರಮಿಡ್ಡುಗಳ ನಿರ್ಮಾಣವನ್ನೂ ಮೀರಿದ ಸಾಹಸ ಕಾರ್ಯವೆಂದೂ ಅವರ ಭಾವನೆ. ಈ ಭಾರಿ ನೀರಾವರಿ ಯೋಜನೆಯ ಜೊತೆಗೆ ಸಿಪ್ಟ, ಅಸಿಯತ್, ನಾಗ್ ಹಮ್ಮಡಿ, ಎಡ್‍ಫಿನ, ಫರಸ್ಕೋರ್ ಇತ್ಯಾದಿ ಕಡೆಗಳಲ್ಲಿ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ನೈಲ್ ಬಯಲುಪ್ರದೇಶದಲ್ಲಿ ಅಬಿಲ್, ಮನೆಗ, ಬಲಾಮ, ಫುವ ಮತ್ತು ಆಟ್ಟ್ ಎಂಬ ಸ್ಥಳಗಳಲ್ಲಿ ನೀರೆತ್ತುವ ಯಂತ್ರ ಸ್ಥಾಪನೆ ಮಾಡಿ ನದಿಯಿಂದ ನೀರು ಹಾಯಿಸಲಾಗುತ್ತಿದೆ. ಈ ಎಲ್ಲ ಕ್ರಮಗಳಿಂದ ಬೇಸಾಯದ ನೆಲದ ಸುಮಾರು 83% ರಷ್ಟು ಭಾಗಕ್ಕೆ ಸಾರ್ವಕಾಲಿಕ ನೀರಾವರಿ ಸೌಕರ್ಯ ಲಭಿಸಿದೆ.[]

ಬೆಳೆಗಳು

[ಬದಲಾಯಿಸಿ]

ಹೊಸ ನೀರಾವರಿ ವ್ಯವಸ್ಥೆಯಿಂದ ವರ್ಷಕ್ಕೆ 2-3 ಬೆಳೆಗಳನ್ನು ತೆಗೆಯುವದು ಈಜಿಪ್ಟಿನ ಕೃಷಿಕರ ಅಭ್ಯಾಸ. ಅಲ್ಲದೆ ಬೆಳೆಗಳನ್ನು ಸರದಿಯ ಪ್ರಕಾರ ಬೆಳೆಯುವ ಅಭ್ಯಾಸ ಜಾನುವಾರು ಪೋಷಣೆಗೆ ಉತ್ತೇಜನ ನೀಡಿದೆ. ಹತ್ತಿ ಮತ್ತು ಧಾನ್ಯಗಳ ಜೊತೆಗೆ ಬರ್‍ಸೀಡ್ ಬೆಳೆಯನ್ನು ಸರದಿ ಪ್ರಕಾರ ಹಾಕುತ್ತಿರುವುದು ಭೂಸಾರ ವೃದ್ಧಿಯಾಗಲು ಸಹಾಯಕ. ಬರ್‍ಸೀಡ್ ಬೆಳೆ ಜಾನುವಾರುಗಳಿಗೆ ಆಹಾರ. ಕಳೆದ ಎರಡು ದಶಕಗಳಲ್ಲಿ ಈಜಿಪ್ಟಿನಲ್ಲಿ ಬೆಳೆಗಳಲ್ಲಿ ಸಾಧಿಸಿರುವ ವೈವಿಧ್ಯ ಹೆಚ್ಚು. ಹತ್ತಿ. ಜೋಳ, ಗೋದಿ, ಬತ್ತ, ಮಿಲೆಟ್ಸ್, ಬಾರ್ಲಿ, ಕಬ್ಬು, ಬೀನ್ಸ್ ಮುಖ್ಯ ಬೆಳೆ. ವಿದೇಶೀ ವಿನಿಮಯ ದೃಷ್ಟಿಯಿಂದ ಹತ್ತಿ ಮುಖ್ಯ. ಉಳಿದವು ದೇಶದ ಆಹಾರ ನೀಡಿಕೆಯ ದೃಷ್ಟಿಯಿಂದ ಮುಖ್ಯ. ಈಜಿಪ್ಟಿನ ಒಟ್ಟು ವಾರ್ಷಿಕ ನಿರ್ಯಾತದಲ್ಲಿ ಹತ್ತಿಯ ಭಾಗ ಸುಮಾರು 70-85%. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಹತ್ತಿ ಬೆಳೆಯುವ ಪ್ರದೇಶದ ಸುಮಾರು ಏಳರಲ್ಲೊಂದು ಭಾಗದಷ್ಟು ನೆಲದಲ್ಲಿ ಮಾತ್ರ ಈಜಿಪ್ಟು ಹತ್ತಿ ಬೆಳೆಯುತ್ತಿರುವುದಾದರೂ ಉತ್ಕøಷ್ಟತೆಯ ದೃಷ್ಟಿಯಿಂದ ಈಜಿಪ್ಟಿನ ಹತ್ತಿಗೆ ವಿಶ್ವ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನವಿದೆ. ಪ್ರಪಂಚದ ಉದ್ದ ತಂತುವಿನ (ಲಾಂಗ್ ಸ್ಟೇಪ್ಸ್) ಹತ್ತಿಯ ವ್ಯಾಪಾರದಲ್ಲಿ 60-70%ರಷ್ಟು ಭಾಗ ಈಜಿಪ್ಟಿನದು. ತುಂಡುತಂತುವಿನ ಹತ್ತಿಯ ವ್ಯಾಪಾರದಲ್ಲಿ 30% ಈಜಿಪ್ಟಿನ ಪಾಲು.[]

ಖರ್ಜೂರ, ಕಿತ್ತಳೆ, ದ್ರಾಕ್ಷಿ, ಈರುಳ್ಳಿ, ಸಣಬು, ಹರಳು, ನೆಲಗಡಲೆ ಇವು ಈಜಿಪ್ಟಿನ ಇತರ ಬೆಳೆಗಳು. ಈಜಿಪ್ಟಿನ ಬೇಸಾಯ ಉನ್ನತ ಮಟ್ಟದ್ದೆನ್ನಲು ಅದರ ಎಕರೆ ಉತ್ಪನ್ನವೇ ಸಾಕ್ಷಿ. ಇಲ್ಲಿ ತೆಗೆಯುವ ಎಕರೆಗೊಂದು ಟನ್ನು ಜೋಳದ ಫಸಲು ಇಡೀ ಪ್ರಪಂಚಕ್ಕೇ ಅತ್ಯುನ್ನತ ಗೋಧಿಯ ಬೆಳೆ ಎಕರೆಗೆ 17 ಹಂಡ್ರೆಡ್‍ವೆಯ್ಟ್. ಐರೋಪ್ಯರಾಷ್ಟ್ರ ಮಟ್ಟಕ್ಕೆ ಇದು ಸಮ. ಒಂದು ಎಕರೆಯ ಹತ್ತಿ ಉತ್ಪನ್ನ 600 ಪೌಂ. ಇದೂ ಅತ್ಯುನ್ನತ ಮಟ್ಟ. ಇಷ್ಟೆಲ್ಲ ಪ್ರಥಮಗಳನ್ನು ಪಡೆದೂ ಈಜಿಪ್ಟ್ ಆಹಾರ ವಿಚಾರದಲ್ಲಿ ಇನ್ನೂ ಸ್ವಾವಲಂಬಿಯಾಗಿಲ್ಲ.

ಜಾನುವಾರು ಪೋಷಣೆ

[ಬದಲಾಯಿಸಿ]

ಜನಸಂಖ್ಯೆಯ ಒತ್ತಡದ ಪರಿಣಾಮವಾಗಿ ಈಜಿಪ್ಟಿನಲ್ಲಿ ಕೃಷಿಯೋಗ್ಯ ಭೂಮಿಯನ್ನು ಜಾನುವಾರು ಪೋಷಣೆಗಿಂತ ಹೆಚ್ಚಾಗಿ ದವಸ ಧಾನ್ಯ ಬೆಳೆಗಳಿಗೆ ಉಪಯೋಗಿಸಲಾಗಿದೆ. ಹಾಲು, ಹೈನು ಮಾಂಸ ಇವುಗಳ ಉತ್ಪನ್ನ ದೇಶದ ಅವಶ್ಯಕತೆಗಳನ್ನು ಪೂರೈಸುವಷ್ಟು ಇಲ್ಲದ್ದರಿಂದ ಈಜಿಪ್ಟ್ ಇವುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಉತ್ತಮ ತಳಿಯ ಜಾನುವಾರುಗಳನ್ನು ಅಭಿವೃದ್ಧಿಪಡಿಸಲು ಅವಕಾವಿರುವುದೆಂದೂ ಇದು ಆವಶ್ಯಕವೆಂದೂ ಅಲ್ಲಿನ ಜನತೆಗೆ ಮನವರಿಕೆಯಾಗಿರುವುದು. ಈಚೆಗೆ ಅಲ್ಲದೆ ಬೇಸಿಗೆ ಧಾನ್ಯ ಬೆಳೆ ತೆಗೆಯುವ ಕೃಷಿ ಪದ್ಧತಿ ಹೆಚ್ಚಾಗಿ ಜಾರಿಗೆ ಬರುತ್ತಿರುವುದು ಜಾನುವಾರು ಪೋಷಣೆಗೂ ಸಹಾಯಕ. ಏಕೆಂದರೆ, ಜಾನುವಾರುಗಳಿಗೆ ಆಹಾರ ಕೊರತೆ ಹೆಚ್ಚಾಗಿದ್ದದ್ದು ಬೇಸಿಗೆಯಲ್ಲಿ. ಬೇಸಿಗೆ ಬೆಳೆಯಿಂದ ಈ ತೊಂದರೆ ಸ್ವಲ್ಪಮಟ್ಟಿಗೆ ನಿವಾರಣೆಯಾಗುತ್ತಿದೆ. ಮಿಶ್ರ ಬೇಸಾಯ ಹಾಗೂ ಇತರ ಯೋಜನೆಗಳ ಮೂಲಕ ಈಜಿಪ್ಟಿನಲ್ಲಿ ಪ್ರಾಣಿ ಸಂಗೋಪನ ಕಾರ್ಯಕ್ರಮಗಳನ್ನು ಗಮನಾರ್ಹವಾಗಿ ವಿಸ್ತರಿಸುವ ಅವಕಾಶವಿರುವುದೆಂಬುದು ತಜ್ಞರ ಅಭಿಪ್ರಾಯ. ಮರಳುಗಾಡಿನ ಅಲೆಮಾರಿ ಅರಬ್ಬರ ಒಂಟೆ ಸಾಕಣೆ ಈಜಿಪ್ಟಿನ ಜಾನುವಾರು ಆರ್ಥಿಕ ವ್ಯವಸ್ಥೆಯ ಒಂದು ವೈಶಿಷ್ಟ್ಯ. ಈಜಿಪ್ಟಿನ ಆರ್ಥಿಕೋದ್ಯಮಗಳಲ್ಲಿ ಸಮುದ್ರ ಹಾಗೂ ಅಂತರಿಕ ಮೀನುಗಾರಿಕೆ ಸೇರಿರುವುದಾದರೂ ಇದಕ್ಕೆ ಹೆಚ್ಚಿನ ಪ್ರಾಮುಖ್ಯವಿಲ್ಲ. ಕೆಂಪು ಸಮುದ್ರದಲ್ಲಿ ಗಮನಾರ್ಹ ಮೀನುಗಾರಿಕೆ ಚಟುವಟಿಕೆಯೇ ಇಲ್ಲ. ಅನೇಕ ನದಿಗಳು ಬಂದು ಬೀಳುವುದರಿಂದಲೂ ಭಾರಿ ಅಲೆಗಳ ಹೊಡೆತದಿಂದ ನೀರಿನ ತಳ ಮೇಲಾಗುತ್ತಿರುವುದರಿಂದಲೂ ಸಾಗರಗಳಲ್ಲಿ ಸಾಮಾನ್ಯವಾಗಿ ಹುಟ್ಟುವ ಪುಷ್ಟಿಕರ ಲವಣಾಂಶಗಳು ಮೆಡಿಟರೇನಿಯನ್ನಿನಲ್ಲಿ ಇಲ್ಲದಿರುವುದರಿಂದಲೂ ಇಲ್ಲಿ ಮೀನುಗಳು ಹೆಚ್ಚಾಗಿ ಹುಟ್ಟಿ ಬೆಳೆಯಲಾಗುವುದಿಲ್ಲ. ಆದ್ದರಿಂದ ಈ ಸಮುದ್ರ ಮೀನುಗಾರಿಕೆಗೆ ಫಲವತ್ತಾದ ಪ್ರದೇಶವೆಂದು ಪರಿಗಣಿತವಾಗಿಲ್ಲ. ಆದರೆ, ಈಜಿಪ್ಟ್ ತೀರದ ಮೆಡಿಟರೇನಿಯನ್ನಿನ ಒಂದು ಭಾಗದಲ್ಲಿ ಮೀನುಗಾರಿಕೆಗೆ ಸ್ವಲ್ಪ ಅವಕಾಶವಿದೆ. ನೈಲ್ ನದಿ ಸಮುದ್ರ ಸೇರುವ ಜಾಗವೇ ಈ ಪ್ರಶಸ್ತ ಸ್ಥಳ. ಬೇಸಿಗೆಯ ಕೊನೆ ಹಾಗೂ ಶರದೃತುವಿನಲ್ಲಿ ನೈಲ್ ಪ್ರವಾಹ ಉಕ್ಕಿ ಬರುತ್ತಿರುವಾಗ, ನೈಲ್ ಮುಖಜಭೂಮಿಯ ಕಡೆಗೆ ಭಾರಿ ಸಾರ್ಡೀನ್ ಮೀನುಗಳು ಆಹಾರಾಪೇಕ್ಷೆಯಿಂದ ಹೋಗುತ್ತವೆ. ಹೀಗೆ ನೈಲ್ ಪ್ರವಾಹದ ಈ ಅಲ್ಪ ಕಾಲಾವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭಾರಿ ಮೀನುಗಳನ್ನು ಹಿಡಿಯಲಾಗುವುದು. ಸಮುದ್ರಮೀನುಗಾರಿಕೆ ಮಿತ ಪ್ರಮಾಣದ್ದು. ಒಳನಾಡಿನಲ್ಲಿ ಮೀನುಗಾರಿಕೆಗೆ ಹೆಚ್ಚಿನ ಅವಕಾಶವುಂಟು. ನೈಲ್ ನದಿಯ ಸುತ್ತ ಮುತ್ತಲಿನ ಪ್ರದೇಶ ಹೆಚ್ಚು ಜನಸಾಂದ್ರವಾಗಿರುವುದರಿಂದ ಮೀನುಗಾರಿಕೆಗೆ ಬೇಕಾದ ಶ್ರಮ ಒದಗುವುದೂ ಅಲ್ಲದೆ ಮೀನುಗಳಿಗೆ ಬೇಡಿಕೆಯೂ ಹೆಚ್ಚು. ಐದು ಪ್ರಮುಖ ಸರೋವರಗಳಾದ ಮೆನ್‍ಜûಲೇ, ಬ್ರುಲ್ಲೋಸ್, ಇಡ್ಕು, ಮ್ಯಾರಿಯಟ್ ಮತ್ತು ಕ್ವಾರುನ್ ಇವು ಪ್ರಶಸ್ತ ಮೀನುಗಾರಿಕೆ ಕೇಂದ್ರಗಳು.[]

ಖನಿಜಗಳು

[ಬದಲಾಯಿಸಿ]

ಪೆಟ್ರೋಲಿಯಂ. ಫಾಸ್‍ಫೇಟ್, ಸೋಡಿಯಂ ಲವಣಗಳು, ಮ್ಯಾಂಗನೀಸ್, ಕಬ್ಬಿಣದ ಅದುರು ಇವು ಈಜಿಪ್ಟಿನ ಮುಖ್ಯ ಖನಿಜಗಳು. ಇವುಗಳಲ್ಲಿ ಪೆಟ್ರೋಲಿಯಂಗೆ ಪ್ರಥಮ ಸ್ಥಾನ. ಈಜಿಪ್ಟಿನಲ್ಲಿ ಪೆಟ್ರೋಲಿಯಂ ಮೂಲಗಳು ಇರಾನ್, ಇರಾಕ್ ಮತ್ತು ಸೌದಿ ಅರೇಬಿಯದಲ್ಲಿರುವಷ್ಟು ಗಣನೀಯವಾಗಿಲ್ಲವಾದರೂ ದೇಶ ಸ್ವಸಂಪೂರ್ಣವಾಗುವಷ್ಟು ತೈಲ ಉತ್ಪಾದನೆಗೆ ಅವಕಾಶವಿದೆ. ಪ್ರಥಮತಃ ಈ ಶತಮಾನದ ಮೊದಲಲ್ಲೇ ತೈಲನಿಕ್ಷೇಪದ ಸೂಚನೆ ತೋರಿದ್ದರಿಂದ, ಈ ಸಂಪತ್ತನ್ನು ರೂಢಿಸಿಕೊಳ್ಳುವ ಪ್ರಯತ್ನ ಅಂದೇ ಆರಂಭವಾಯಿತು.

1913ರಲ್ಲಿ ಹುಗ್ರ್ಹಾಡ ಎಂಬಲ್ಲಿ ಒಂದು ಎಣ್ಣೆ ಕ್ಷೇತ್ರವನ್ನು ಶೋಧಿಸಿ ಅಲ್ಲಿ ಅನೇಕ ತೈಲಬಾವಿಗಳನ್ನು ಸ್ಥಾಪಿಸಲಾಯಿತು. ಅಲ್ಲಿ ಹುದುಗಿರುವ ತೈಲ ಪ್ರಮಾಣ ಕಡಿಮೆ ಎಂಬುದು ಈಚಿನ ಶೋಧನೆಗಳಿಂದ ತಿಳಿದುಬಂದಿದೆ. ಅಲ್ಲಿನ ತೈಲಬಾವಿಗಳ ಉತ್ಪನ್ನ ಇಳಿಮುಖ. ಅಲ್ಲದೆ ಆ ಕ್ಷೇತ್ರದ ಕಚ್ಚಾ ಎಣ್ಣೆ ಅತಿಭಾರ, ಹೆಚ್ಚು ಗಂಧಕಮಯ. 1938ರಿಂದ ರಾಸ್ ಘಾರಿಬ್ ಎಂಬ ಪ್ರದೇಶದ ಉತ್ಕøಷ್ಟ ಭೂಗರ್ಭತೈಲಕ್ಷೇತ್ರವನ್ನು ಶೀಘ್ರವಾಗಿ ಅಭಿವೃದ್ಧಿಗೊಳಿಸಲಾಯಿತು.

ಭೂಗರ್ಭ ತೈಲಕ್ಷೇತ್ರಗಳಾಗಿ ಶೋಧನೆಯ ಪ್ರಯತ್ನಗಳನ್ನು 1945ರ ಅನಂತರ ತೀವ್ರಗೊಳಿಸಲಾಯಿತು. ತತ್ಫಲವಾಗಿ ಸೂಯೆeóïಕೊಲ್ಲಿಯ ಎರಡೂ ಕಡೆಗಳಲ್ಲಿ ಅನೇಕ ತೈಲಕೇಂದ್ರಗಳು ಸ್ಥಾಪನೆಯಾದವು. 1945-60ರ ಅವಧಿಯಲ್ಲಿ ಬೆಲಾಯಿಂ, ಸುಡ್‍ರ್, ರಾಸ್‍ಮಟಾರ್ಮ, ಫೀರಾನ್, ಅಸ್‍ಲ್ ಅಬುರೂಡಿಸ್, ಕ್ರಿಮ್, ರ್ಯಾಸ್ ಬಾಕರ್-ಈ ಸ್ಥಳಗಳಲ್ಲಿ ತೈಲೋತ್ಪಾದನೆಯಾಗುತ್ತಿದೆ.[]

ಫಾಸ್ಫೇಟ್ ಶಿಲೆ ಕೆಂಪು ಸಮುದ್ರದ ತೀರಪ್ರದೇಶದಲ್ಲಿರುವ ಟೋರ್ ಮತ್ತು ಕೋಸಿರ್‍ಗಳಲ್ಲಿ ದೊರಕುತ್ತದೆ. ಈಜಿಪ್ಟಿಗೆ ಫಾಸ್ಪೇಟಿನ ಗೊಬ್ಬರಕ್ಕಿಂತ ನೈಟ್ರೇಟ್ ಗೊಬ್ಬರದ ಆವಶ್ಯಕತೆ ಹೆಚ್ಚಾಗಿ ಇರುವುದರಿಂದ ಫಾಸ್ಫೇಟ್ ಉತ್ಪನ್ನ ವಿಶೇಷವಾಗಿ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಗಳಿಗೆ ರಫ್ತಾಗುತ್ತಿದೆ.

ಪಶ್ಚಿಮ ಮರುಭೂಮಿಯ ಊಟೆಯ ಪ್ರದೇಶದಲ್ಲಿ ಸೋಡಿಯಂ ಲವಣಗಳ ಉತ್ಪನ್ನವಾಗುತ್ತಿದೆ. ವಾಡಿನಾಟ್ರುನ್ ಪ್ರದೇಶ ಸೋಡಿಯಂ ಲವಣ ಉತ್ಪಾದನೆಯ ಪ್ರಮುಖ ಕೇಂದ್ರ. ಇಲ್ಲಿ ಅನೇಕ ಶತಮಾನಗಳಿಂದಲೂ ವಿವಿಧ ಲವಣಗಳು ದೊರಕುತ್ತಿದ್ದು ಈಗ ವಿಶೇಷವಾಗಿ ಉತ್ಪಾದನೆಯಾಗುತ್ತಿರುವುದು ಸೋಡಿಯಂ ಕಾರ್ಬೊನೇಟ್ ಮತ್ತು ಸಲ್ಫೇಟುಗಳು ಮಾತ್ರ.

ಈಜಿಪ್ಟಿನ ಅಬು eóÉನಿಮಾ ಪ್ರದೇಶದಲ್ಲಿ ಮ್ಯಾಂಗನೀಸ್ ದೊರಕುತ್ತದೆ. ಎರಡನೆಯ ಮಹಾಯುದ್ಧದ ಅನಂತರ ಸ್ವಲ್ಪಕಾಲ ಇದರ ಉತ್ಪಾದನೆ ಸ್ಥಗಿತಗೊಂಡಿದ್ದು ಈಚೆಗೆ ಮತ್ತೆ ಆರಂಭವಾಗಿದೆ. ಅಸ್ವಾನಿನ ಪೂರ್ವಕ್ಕೆ 30 ಮೈಲಿ ದೂರದ ಪ್ರದೇಶದಲ್ಲಿ ಭೂಮಟ್ಟಕ್ಕೆ ಸಮೀಪದ ಆಳದಲ್ಲಿಯೇ ಉತ್ತಮ ದರ್ಜೆಯ ಕಬ್ಬಿಣದ ಅದುರಿನ ನಿಧಿ ಇರುವುದನ್ನು 1937ರಲ್ಲಿ ಕಂಡುಹಿಡಿದದ್ದು ಈಜಿಪ್ಟಿನ ಖನಿಜ ಇತಿಹಾಸದ ಮುಖ್ಯ ಘಟನೆ. ಆ ಪ್ರದೇಶದಲ್ಲಿ ಹುದುಗಿರುವ ಅದುರಿನ ಪ್ರಮಾಣ ಸುಮಾರು 100 ಕೋಟಿ ಟನ್ನುಗಳೆಂದು ಅಂದಾಜು. ಕೆಂಪು ಸಮುದ್ರ ತೀರದಲ್ಲಿ ಕಾಸೀರ್ ಬಳಿಯಲ್ಲೂ ಬೆಹಾರಿಯ ಎಂಬಲ್ಲೂ ಇನ್ನೆರಡು ಗಣಿಗಳಿವೆ.

ಅಭ್ರಕ, ಕಾವಿ ಮಣ್ಣು (ಓಕರ್), ಕಾಚಶಿಲೆ (ಪಮಿಸ್ ಸ್ಟೋನ್), ಕಲ್ನಾರು, ಶೈವಲಮೃತ್ತಿಕೆ (ಡಯಟೋಮೇಷಸ್ ಅರ್ತ್) ಉಪ್ಪು-ಇವು ಈಜಿಪ್ಟಿನಲ್ಲಿ ಅಲ್ಪ ಪ್ರಮಾಣದಲ್ಲಿ ದೊರಕುವ ಇತರ ಖನಿಜ ವಸ್ತುಗಳು. ಇವೇ ಅಲ್ಲದೆ ಸುಣ್ಣಕಲ್ಲು, ಬೆಣಚುಕಲ್ಲು, ಮರಳುಕಲ್ಲು, ಪಿಂಗಾಣಿ ಇತ್ಯಾದಿ ಕಲ್ಲುಗಣಿ ಉದ್ಯಮಗಳೂ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿವೆ.

ಕೈಗಾರಿಕೆ

[ಬದಲಾಯಿಸಿ]

ಈಜಿಪ್ಟಿನ ಕೈಗಾರಿಕಾ ಬೆಳೆವಣಿಗೆಯ ಇತಿಹಾಸದಲ್ಲಿ ಕೆಲವು ಮುಖ್ಯ ಘಟ್ಟಗಳನ್ನು ಕಾಣಬಹುದು. ಮೊದಲ ಮಹಾಯುದ್ಧ ಪ್ರಥಮತಃ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಉತ್ತೇಜಕವಾಗಿತ್ತು. ದಿನಬಳಕೆಯ ಹಾಗೂ ರಕ್ಷಣೆಗೆ ಸಂಬಂಧಿಸಿದ ಕೈಗಾರಿಕಾ ಸರಕುಗಳ ಅಭಾವ ಉಂಟಾದ್ದರಿಂದ ಬಟ್ಟೆ, ಆಹಾರ ಸಾಮಗ್ರಿ ಮತ್ತು ರಾಸಾಯನಿಕ ವಸ್ತುಗಳಿಗೆ ಸಂಬಂಧಪಟ್ಟ ಕೆಲವು ಕೈಗಾರಿಕೋದ್ಯಮಗಳು ಸ್ಥಾಪನೆಯಾದುವು. ಆದರೆ ಯುದ್ಧಾನಂತರ ಇವುಗಳಲ್ಲಿ ಕೆಲವು ಕ್ಷೀಣಿಸಿದುವು. ಇನ್ನೂ ಕೆಲವು ಹಾಗೆಯೇ ಮುಂದುವರಿದುವು.

1930ರಲ್ಲಿ ಈಜಿಪ್ಟ್ ದೇಶ ವಿದೇಶೀ ಪೈಪೋಟಿಯಿಂದ ರಕ್ಷಣೆ ಪಡೆಯಲು ತನ್ನದೇ ಆದ ಸುಂಕ ನೀತಿ ಅನುಸರಿಸಲು ಸಾಧ್ಯವಾದದ್ದು ಅಲ್ಲಿನ ಕೈಗಾರಿಕಾಭಿವೃದ್ಧಿಗೆ ಅನುಕೂಲವಾದಂತಾಯಿತು. ಸುಂಕರಕ್ಷಣೆಯ ಸಹಾಯದಿಂದ ಖಾಸಗಿ ಬಂಡವಾಳಸ್ಥರು ಧೈರ್ಯದಿಂದ ಕೆಲವು ಹೊಸ ಉದ್ಯಮಗಳನ್ನೂ, ಆರಂಭಿಸಿದರು. ಅನಂತರ ಎರಡನೆಯ ಮಹಾಯುದ್ಧ ಕಾಲದಲ್ಲಿ ಒದಗಿದ ಅನುಕೂಲ ಸಂದರ್ಭಗಳಿಂದಾಗಿ ಕೈಗಾರಿಕಾಭಿವೃದ್ಧಿ ಗಮನಾರ್ಹವಾಗಿ ಮುನ್ನಡೆಯಿತು. ದೇಶದಲ್ಲೇ ದೊರಕುವ ಕಚ್ಚಾ ಸರಕುಗಳ ಆಧಾರದಿಂದ ನಡೆಸಬಹುದಾಗಿದ್ದ ಹತ್ತಿ ಜವಳಿ, ಸಕ್ಕರೆ ಮತ್ತು ಕೆಲವು ರಾಸಾಯನಿಕ ವಸ್ತುಗಳ ಕೈಗಾರಿಕೆಗಳು ಭದ್ರವಾಗಿ ನೆಲೆಸಿದುವು.[]

ಕೈಗಾರಿಕಾಭಿವೃದ್ಧಿ ಅತ್ಯಂತ ವೇಗವಾಗಿ ಆದದ್ದು 1952ರಿಂದ ಈಚೆಗೆ. ಅಂದು ಅಧಿಕಾರಕ್ಕೆ ಬಂದ ಕ್ರಾಂತಿಕಾರಿ ಆಳ್ವಿಕೆಯ ವಿಶೇಷ ಪ್ರಯತ್ನವೇ ಇದಕ್ಕೆ ಮುಖ್ಯ ಕಾರಣ. ಕೇವಲ ವ್ಯವಸಾಯದ ಮೇಲೆ ದೇಶದ ಆರ್ಥಿಕ ವ್ಯವಸ್ಥೆಯನ್ನು ನಿಲ್ಲಿಸುವುದು ಶಾಶ್ವತ ಪರಿಹಾರವಾಗಲಾರದೆಂಬುದನ್ನೂ ಹೆಚ್ಚುತ್ತಿರುವ ಜನಸಂಖ್ಯೆಗೆ ಉದ್ಯೋಗ ದೊರಕಿಸಲು ಕೈಗಾರಿಕೆಗಳು ಅವಶ್ಯಕ ಎಂಬುದನ್ನೂ ದೇಶಕ್ಕೆ ಅಗತ್ಯವಾದ ಆಮದುಗಳಿಗೆ ಸಾಕಷ್ಟು ವಿದೇಶಿ ವಿನಿಮಯ ಗಳಿಸಲು ರಫ್ತು ಸರಕುಗಳ ವೈವಿಧ್ಯ ಹೆಚ್ಚಿಸಬೇಕೆಂಬುದನ್ನೂ ಅರಿತು ಈ ಹೊಸ ಸರ್ಕಾರ ಕೈಗಾರಿಕಾಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ.

ಈಜಿಪ್ಟಿನಲ್ಲಿ ಕೈಗಾರಿಕಾ ವಿಸ್ತರಣೆಗೆ ಕೆಲವು ಮುಖ್ಯ ಅಡಚಣೆಗಳಿವೆ. ಇಂಧನಗಳ ಅಭಾವ ಒಂದು ಸಮಸ್ಯೆ. ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಸ್ಥಳೀಯವಾಗಿ ಉತ್ಪನ್ನವಾಗುತ್ತಿರುವ ಪೆಟ್ರೋಲಿಯಂ ಹಾಗೂ ವಿದ್ಯುಚ್ಛಕ್ತಿ ಅಗತ್ಯಕ್ಕೆ ತಕ್ಕಷ್ಟಿಲ್ಲ. ಕೈಗಾರಿಕೆಗಳು ಬಹುಮಟ್ಟಿಗೆ ಕೈರೋ, ಅಲೆಗ್ಸಾಂಡ್ರಿಯ ಮತ್ತು ಪೋರ್ಟ್ ಸೈದ್‍ಗಳಲ್ಲಿ ಕೇಂದ್ರೀಕೃತವಾಗಿವೆ.

ಹಿಂದೆಯೇ ಸ್ಥಾಪನೆಯಾಗಿದ್ದ ಕೆಲವು ಕೈಗಾರಿಕೆಗಳು ಹೆಚ್ಚು ಬೆಳೆದಿವೆ. ಹತ್ತಿ ಜವಳಿ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿರುವುದೇ ಅಲ್ಲದೆ ರಫ್ತಿಗೋಸ್ಕರ ಉತ್ತಮ ದರ್ಜೆಯ ಬಟ್ಟೆಯನ್ನು ಈಚೆಗೆ ತಯಾರಿಸಲಾಗುತ್ತಿದೆ. ರೇಷ್ಮೆ ಕೈಗಾರಿಕೆಗೆ ಉತ್ತಮ ಭವಿಷ್ಯವಿಲ್ಲ. ಉಣ್ಣೆ, ರೇಯಾನ್ ಮತ್ತು ಲಿನನ್ ತಯಾರಿಕೆಯ ಬೆಳೆವಣಿಗೆಗೆ ಅವಕಾಶವುಂಟು. ಕೆಲವು ದಶಕಗಳ ಹಿಂದೆಯೇ ಸ್ಥಾಪಿತವಾದ ಈಜಿಪ್ಟಿನ ಸಿಮೆಂಟ್ ಕೈಗಾರಿಕೆ ತೀವ್ರ ಪ್ರಗತಿ ಸಾಧಿಸಿದೆ; ದೇಶಕ್ಕೆ ಆವಶ್ಯಕವಾಗುವಷ್ಟು ಸಿಮೆಂಟು ಒದಗಿಸುತ್ತಿರುವುದೇ ಅಲ್ಲದೆ ಅಕ್ಕಪಕ್ಕದ ರಾಷ್ಟ್ರಗಳಿಗೆ ಸ್ವಲ್ಪ ಪ್ರಮಾಣದ ರಫ್ತನ್ನೂ ಮಾಡುತ್ತಿದೆ. ಸಕ್ಕರೆ, ಮದ್ಯಗಳು, ಸಿಗರೇಟ್, ಹತ್ತಿಯ ಬೀಜದ ಎಣ್ಣೆ, ಕಾಗದ, ಗಾಜಿನ ಸಾಮಾನು, ಚರ್ಮದ ಸರಕುಗಳು, ಇತ್ಯಾದಿ ಕೈಗಾರಿಕೆಗಳು ಅಲ್ಪ ಪ್ರಮಾಣದ ಉದ್ಯೋಗಗಳಾಗಿ ವಿಸ್ತಾರವಾಗಿ ಹರಡಿರುವುದರಿಂದ ಅನೇಕ ಜನರಿಗೆ ಉದ್ಯೋಗ ಹಾಗೂ ವರಮಾನದ ಅವಕಾಶವುಂಟು. ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ದೃಷ್ಟಿಯಿಂದ ರೇಡಿಯೊ, ಶೀತಕ ಯಂತ್ರಗಳು ಮತ್ತು ಇತರ ಲಘು ಎಂಜಿನಿಯರಿಂಗ್ ಸರಕುಗಳು ತಯಾರಿಕೆಯ ಪ್ರಯತ್ನ ನಡೆದಿದೆ. ಅರಬ್ಬೀ ಭಾಷೆಯ ಚಲನ ಚಿತ್ರಗಳ ತಯಾರಿಕೆ. ಆಸ್ವಾನ್ ಹತ್ತಿರದ ಗೊಬ್ಬರದ ಕಾರ್ಖಾನೆ ಮತ್ತು ಕೈರೋ ಸಮೀಪದ ಪೆಲ್ವಾನ್ ಬಳಿ ಸ್ಥಾಪನೆಯಾಗಿರುವ ಉಕ್ಕಿನ ಕಾರ್ಖಾನೆ ಇವು ಇತ್ತೀಚೆಗೆ ಬೆಳೆಯುತ್ತಿರುವ ಭಾರಿ ಕೈಗಾರಿಕೆಗಳು. 1952-61ರ ಅವಧಿಯಲ್ಲಿ ಈಜಿಪ್ಟಿನ ಕೈಗಾರಿಕೋತ್ಪನ್ನ ದ್ವಿಗುಣವಾಯಿತು. ಆದರೂ ಒಟ್ಟಿನಲ್ಲಿ ಈಜಿಪ್ಟಿನ ಆರ್ಥಿಕ ವ್ಯವಸ್ಥೆಯಲ್ಲಿ ಕೈಗಾರಿಕೆಗಿಂತಲೂ ವ್ಯವಸಾಯವೇ ಇನ್ನೂ ಹೆಚ್ಚು ಪ್ರಧಾನ.

ಸಾರಿಗೆ

[ಬದಲಾಯಿಸಿ]

ಮರಳುಕಾಡಿನಲ್ಲಿ ಒಂಟೆ ಒಂದು ಮುಖ್ಯ ಸಾರಿಗೆ ಸಾಧನ. ಇತರ ಭಾಗಗಳಲ್ಲಿ ಉತ್ತಮವಾದ ಆಧುನಿಕ ಸಾರಿಗೆ ಸಂಪರ್ಕ ವ್ಯವಸ್ಥೆ ರೂಪುಗೊಂಡಿದೆ. ಪ್ರತಿ ಚದರ ಕಿಲೋಮೀಟರಿಗೆ ಸುಮಾರು 14 ಕಿಲೋ ಮೀಟರುಗಳ ರೈಲುಮಾರ್ಗವಿದೆ. ಈಜಿಪ್ಟಿನ ರೈಲು ಮಾರ್ಗಗಳು ಪೂರ್ಣಾಭಿವೃದ್ಧಿ ಹೊಂದಿವೆ ಎಂದು ಹೇಳಬಹುದು. 19ನೆಯ ಶತಮಾನದಲ್ಲಿಯೇ ಆರಂಭವಾದ ರೈಲುಮಾರ್ಗ ನಿರ್ಮಾಣ ಕಾರ್ಯ 1914-18ರಲ್ಲೂ 1930ರ ದಶಕದಲ್ಲೂ ಭರದಿಂದ ಸಾಗಿತು. ಸ್ಟಾಂಡರ್ಡ್ ಗೇಜಿನ ಮುಖ್ಯ ರೈಲ್ವೆಗಳನ್ನು ಸರ್ಕಾರವೂ ಲಘು ರೈಲ್ವೆ ಮಾರ್ಗಗಳನ್ನು ಖಾಸಗಿ ಕಂಪನಿಗಳೂ ನಿರ್ಮಿಸಿದುವು. ಇದರಿಂದಾಗಿ, ರೈಲ್ವೆ ಮಾರ್ಗಗಳು ನೈಲ್ ಕಣಿವೆಯ ಎಲ್ಲ ಮುಖ್ಯ ಭಾಗಗಳಿಗೂ ಸುಲಭ ಸಂಪರ್ಕ ಕಲ್ಪಿಸಿವೆ. [೧೦]

ಅತಿಮುಖ್ಯ ಕೈಗಾರಿಕಾ ಹಾಗೂ ವ್ಯಾಪಾರ ಕೇಂದ್ರವಾದ ಕೈರೋ ಸಾರಿಗೆ ಕೇಂದ್ರ ಅಂತರರಾಷ್ಟ್ರೀಯ ವಿಮಾನ ಮಾರ್ಗಗಳಿಗೂ ಒಂದು ಮುಖ್ಯ ನಿಲ್ದಾಣ.

ಈಜಿಪ್ಟಿನ ಭೌಗೋಳಿಕ ಹಾಗೂ ನದೀ ರಚನೆಯಿಂದ ಆಂತರಿಕ ಜಲಮಾರ್ಗ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗಿದೆ. ಈ ನದಿಯನ್ನು ಪ್ರಧಾನವಾಗಿ ನೀರಾವರಿಗೆ ರೂಢಿಸಿಕೊಂಡಿರುವುದರಿಂದ ಜಲಮಾರ್ಗ ಸಾಗಣೆ ಸಾಧ್ಯತೆಗಳನ್ನು ಪೂರ್ತಿಯಾಗಿ ಬೆಳೆಸಿಕೊಂಡಂತಾಗಿಲ್ಲ. ಅದರೂ ನದಿಗಳ ಮೂಲಕ ನಡೆಯುತ್ತಿರುವ ಗಣನೀಯ ಸರಕು ಸಾಗಣೆ ಪ್ರಮಾಣ ಮೇಲ್ಭಾಗದ ಈಜಿಪ್ಟಿನಿಂದ ಅಲೆಗ್ಸಾಂಡ್ರಿಯಕ್ಕೆ ಸಾಗಿಸುವ ಬಹುಭಾಗ ಹತ್ತಿಯೂ ಕೆಳ ಭಾಗದ ಈಜಿಪ್ಟಿನ ಈರುಳ್ಳಿಯೂ ಸಾಗುವುದು ಹೆಚ್ಚಾಗಿ ದೋಣಿಗಳ ಮೂಲಕವೇ.

ಅಂತರರಾಷ್ಟ್ರೀಯ ನೌಕಾ ಸಂಚಾರ ವ್ಯವಸ್ಥೆಯಲ್ಲಿ ಸೂಯೆeóï ಕಾಲುವೆಗೆ ಇರುವ ಪ್ರಾಮುಖ್ಯದಿಂದ ಈಜಿಪ್ಟಿಗೆ ವಿಶೇಷ ಸ್ಥಾನ. ಫರ್ಡಿನಾ ಡ ಲೆಸೆಪ್ಸ್ ಎಂಬ ಫ್ರೆಂಚ್ ಎಂಜಿನಿಯರನ ಸಹಾಯದಿಂದ 1869ರಲ್ಲಿ ಸೂಯೆeóï ಕಾಲುವೆ ನಿರ್ಮಾಣವಾದದ್ದು ಪ್ರಪಂಚ ನೌಕಾಯಾನ ಅಭಿವೃದ್ಧಿಯಲ್ಲಿ ಮುಖ್ಯ ಘಟನೆ. ಇದರಿಂದ ಯೂರೋಪ್ ಮತ್ತು ಭಾರತಗಳ ನಡುವೆ ನೇರ ಸಂಪರ್ಕ ಮಾರ್ಗ ಸಾಧ್ಯವಾಯಿತು. 1956ರಲ್ಲಿ ಸೂಯೆeóï ಕಾಲುವೆ ರಾಷ್ಟ್ರೀಕರಣ ರಾಜಕೀಯವಾಗಿಯೂ ಆರ್ಥಿಕವಾಗಿಯೂ ಒಂದು ಮಹತ್ತ್ವದ ಘಟನೆ. ಕಂಪನಿಯ ಮಾಲೀಕರಿಗೆ ಸೂಕ್ತ ಪರಿಹಾರ ನೀಡಿದ ಈ ಕಡಲ್ಗಾಲುವೆಯನ್ನು ನೋಡಿಕೊಳ್ಳುವ ಭಾರವನ್ನು ಈಜಿಪ್ಟ್ ಸರ್ಕಾರವೇ ವಹಿಸಿಕೊಂಡಿತು. ಪೋರ್ಟ್ ಸೈದ್ ಮತ್ತು ಪೋರ್ಟ್ ಸೂಯೆeóïಗಳ ನಡುವೆ ಕಡಲ್ಗಾಲುವೆಯಲ್ಲಿ ಹೋಗುವ ಅನೇಕ ರಾಷ್ಟ್ರಗಳ ನೌಕೆಗಳಿಗೆ ಅವಶ್ಯಕ ಸೇವೆಗಳನ್ನು ಈಜಿಪ್ಟ್ ಸರ್ಕಾರ ದಕ್ಷತೆಯಿಂದ ಒದಗಿಸುತ್ತಿದೆ. ಇದರಿಂದ ಅದಕ್ಕೆ ಲಭಿಸುತ್ತಿರುವ ನಿವ್ವಳ ವರಮಾನ ವರ್ಷಕ್ಕೆ ಸುಮಾರು 10 ಕೋಟಿ ಡಾಲರ್.

ಸೂಯೆಜ್ ಮತ್ತು ನೈಲ್ ಇವೆರಡೂ ಈಜಿಪ್ಟಿನ ಆರ್ಥಿಕ ವ್ಯವಸ್ಥೆಯ ಮೂಲಾಧಾರ.

ಉಲ್ಲೇಖಗಳು

[ಬದಲಾಯಿಸಿ]
  1. https://www.worldbank.org/en/country/egypt/overview
  2. "ಆರ್ಕೈವ್ ನಕಲು". Archived from the original on 2019-12-12. Retrieved 2020-01-12.
  3. https://www.euronews.com/2019/11/06/changing-egypt-s-economic-perspective
  4. https://www.britannica.com/place/Egypt/Agriculture-and-fishing
  5. https://egypt.mrdonn.org/irrigation.html
  6. https://www.nationsencyclopedia.com/economies/Africa/Egypt-AGRICULTURE.html
  7. https://a-z-animals.com/animals/location/africa/egypt/
  8. https://www.projectsiq.co.za/mining-in-egypt.htm
  9. https://www.nationsencyclopedia.com/Africa/Egypt-INDUSTRY.html
  10. https://theculturetrip.com/africa/egypt/articles/a-guide-to-public-and-private-transport-in-cairo-egypt/