ವಿಷಯಕ್ಕೆ ಹೋಗು

ಇಳಕಲ್ಲ ಸೀರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಇಲಕಲ್ಲ ಸೀರೆ ಇಂದ ಪುನರ್ನಿರ್ದೇಶಿತ)

ಕರ್ನಾಟಕಬಾಗಲಕೋಟೆಯ ಬಳಿ ಇರುವ ಇಳಕಲ್ಲ ಊರಿನಲ್ಲಿ ಪ್ರಾಚೀನಕಾಲದಿಂದಲೂ ತಯಾರಗುತ್ತಿರುವ ಸೀರೆಗಳ ಒಂದು ವಿಧ.

ಇತಿಹಾಸ

[ಬದಲಾಯಿಸಿ]

ಬಹುಶಃ ೮ ನೆಯ ಶತಮಾನದಿಂದಲೂ ಇಲ್ಲಿ ಸೀರೆ ತಯಾರಿಕೆ ಆರಂಭವಾಗಿರುವ ಕುರುಹುಗಳು ಸಿಗುತ್ತವೆ. ಬಳ್ಳಾರಿ ಮತ್ತು ಸುತ್ತಮುತ್ತಲ ಆಡಳಿತಗಾರರ ಪ್ರೋತ್ಸಾಹ ಹಾಗೂ ಒಲವಿನಿಂದ ಇಲ್ಲಿ ಸೀರೆ ಉದ್ಯಮ ತನ್ನ ನೆಲೆಯನ್ನು ಕಂಡಿತು. ಕಚ್ಚಾ ವಸ್ತುಗಳು ಸ್ಥಳೀಯವಾಗಿಗೆ ಲಭ್ಯವಿವೆ.ಹಬ್ಬ-ಹರಿದಿನಗಳಲ್ಲಿ ಈ ಸೀರೆಗೆ ವಿಶೇಷ ಗೌರವ ಸಲ್ಲುತ್ತಿತ್ತು.

ತಯಾರಿಕೆ

[ಬದಲಾಯಿಸಿ]
ಇಳಕಲ್ಲ ಸೀರೆ ನೇಯುತ್ತಿರುವುದು

ಇಳಕಲ್ ಸೀರೆಗಳ ಅಂಚುಗಳು ೩ ಬಗೆಯದಾಗಿರುತ್ತವೆ. ೧. ಗೋಮಿ ('ಇಳಕಲ್ ದಡಿ' ಎಂಬುದು ಇದರ ಜನಪ್ರಿಯ ಹೆಸರು) ೨. ಪರಸ್ ಪೇಟ್ (ಚಿಕ್ಕ ಪರಸ್ ಮತ್ತು ದೊಡ್ಡಪರಸ್ ಎಂಬ ಎರಡು ಬಗೆಗಳಿವೆ). ೩. ಗಾಡಿ ಈ ಸೀರೆಗಳ ಮೈ ಅಥವಾ ಒಡಲುಗಳಲ್ಲಿ ೩ ವಿನ್ಯಾಸಗಳನ್ನು ನಾವು ಕಾಣಬಹುದು. 'ಬಣ್ಣದ ಪಟ್ಟೆಗಳು', 'ಆಯತಾಕೃತಿ', ಹಾಗೂ 'ಚೌಕಳಿ ಆಕಾರದ ವಿನ್ಯಾಸ'ದವು. ಇದೇ ಈ ಉದ್ಯಮದ ಧನಾತ್ಮಕ ಅಂಶವೂ ಹೌದು. ಇಳಕಲ್ ನಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ನೇಕಾರರು ಸೀರೆ ನೇಯ್ಗೆ, ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅದರ ವಿನ್ಯಾಸ ಹಾಗೂ ನೇಯ್ಗೆಯ ವಿಶೇಷತೆಯೆಂದರೆ, ಸೀರೆಯ ಮೈಗೆ ಹತ್ತಿಎಳೆಗಳನ್ನು ಬಳಸಿದ ಬಾಗು,ಅಥವಾ ವಕ್ರ ಡೊಂಕು ನೇಯ್ಗೆ ವ್ಯವಸ್ಥೆ. ಸೀರೆಯ ಅಂಚಿಗೆ ಹಾಗೂ ಸೆರಗಿಗೆ ಕಚ್ಚಾ ರೇಷ್ಮೆಯ ನೂಲನ್ನು ಬಳಸುತ್ತಾರೆ. ಕೆಲವೊಮ್ಮೆ ಕಚ್ಚಾ ರೇಷ್ಮೆಯ ಬದಲಿಗೆ ಶುದ್ಧ ರೇಷ್ಮೆಯನ್ನು ಸಹಿತ ಬಳಸುತ್ತಾರೆ. ಇಳಕಲ್ ಸೀರೆಗಳ ವಿಶಿಷ್ಟ್ಯ ೧. ಟೋಪಿ ತೆನೆ ಯೆಂಬ ತಂತ್ರದಿಂದ ಇಳಕಲ್ ಸೀರೆಗಳು, ತಯಾರಾಗುತ್ತವೆ. ಅಂದರೆ ನೇಯ್ಗೆಯನ್ನೇ ಮೂಲವಾಗಿ ಬಳಸಿಕೊಂಡು, ಹಲವಾರುಕೊಂಡಿ ಕುಣಿಕೆಗಳು ಗೊಣಸುಗಳನ್ನು ನಿರ್ಮಿಸಿಕೊಂಡು, ಸೀರೆಯ ಒಡಲಿನ ಭಾಗದ ನೇಯ್ಗೆಯನ್ನು ಸೆರಗಿನ ನೇಯ್ಗೆಯ ಜೊತೆ ಜೋಡಿಸುವ ವಿಶಿಶ್ಟ ಕಲೆ, ಹೆಣ್ಣುಮಕ್ಕಳಿಗೆ ಮುದಕೊಡುವಂತಹದು. ಈ ತಂತ್ರವನ್ನು ಬಳಸಿ ಒಬ್ಬ ನೇಕಾರ ೬, ೮, ೯ ಗಜದಷ್ಟು ಬಟ್ಟೆಯನ್ನು ಮಾತ್ರ ನೆಯುತ್ತಾನೆ. ನಂತರ ಈ ಮೂರು ಬೇರೆಬೇರೆ ಭಾಗಗಳನ್ನು ಒಟ್ಟಾಗಿ ಜೋಡಿಸಲು ಕೊಂಡಿ/ಗೊಣಸುತಂತ್ರದ ಬಳಕೆಯಗುತ್ತದೆ. ಗೌರವದ ಲಾಂಛನವನ್ನಾಗಿ ಪರಿಗಣಿಸಲಾಗಿದೆ. ಸೆರಗಿನ ವಿನ್ಯಾಸ ಒಂದು ಹೊಸಮಾದರಿಯದು. ತೋಪಿತೆನೆ ಸೀರೆಯ ಸೆರಗಿನಲ್ಲಿ ೩ ಪ್ರಮುಖ ಭಾಗಗಳನ್ನು ಕೆಂಪು ಬಣ್ಣದಲ್ಲಿ ಕಾಣಬಹುದು. ಎರಡು ಭಾಗಗಳ ಮಧ್ಯಭಾಗ ಬಿಳಿಬಣ್ಣದ್ದಾಗಿರುತ್ತದೆ.

ಇಳಕಲ್ ಸೀರಯುಟ್ಟು ಹಣ್ಣು ಮಾರತ್ತಿರುವ ಮಹಿಳೆ

ವೈಶಿಷ್ಟ್ಯ

[ಬದಲಾಯಿಸಿ]

ಹಬ್ಬ-ಹರಿದಿನಗಳಲ್ಲಿ ಈ ಸೀರೆಗೆ ವಿಶೇಷ ಗೌರವ ಸಲ್ಲುತ್ತಿತ್ತು. ಸೆರಗಿನ ತುದಿಯಲ್ಲಿ ಹೆಣಿಗೆ, ಕೋಟಿಕಂಬ್ಳಿ(ಕೋಟೆ ರಕ್ಷಕ), ಟೋಪಿ ತೆನೆ, ಜೋಳದ ತೆನೆ, ರಂಪ, (ಗಿರಿಶ್ರೇಣಿ) ಇತ್ಯಾದಿಗಳ ಹೆಣಿಗೆ ವಿನ್ಯಾಸಗಳಿತ್ತವೆ. ಸೀರೆಯ ಅಂಚು ವಿಶಾಲವಾಗಿ ೪ ರಿಂದ ೬ ಇಂಚಿನಷ್ಟು ಅಗಲವಿರುತ್ತದೆ. ಸಾಂಪ್ರದಾಯಿಕ ಸೀರೆಗಳಬಣ್ಣ ಸಾಮಾನ್ಯವಾಗಿ ಕೆಂಪು ಇಲ್ಲವೇ ಮರೂನ್ ಬಣ್ಣದ್ದಾಗಿರುತ್ತದೆ. ಗ್ರಾಹಕರು ದಾಳಿಂಬೆ ಕೆಂಪು, ಉಜ್ವಲ ನವಿಲು ಹಸಿರು ಬಣ್ಣ ಇಲ್ಲವೇ ಗಿಳಿ ಹಸುರಿನ ಸೀರೆಗಳನ್ನು ಸೂಚಿಸಿ ಪಡೆಯಬಹುದು. ಹತ್ತಿಯ ಸೀರೆಗಳೂ ಲಭ್ಯ. ಹತ್ತಿ-ರೇಷ್ಮೆ ಮಿಶ್ರದ ಸೀರೆಗಳೂ ದೊರೆಯುತ್ತವೆ. ಶುದ್ಧ ರೇಷ್ಮೆಯ ಸೀರೆಗಳನ್ನು ಗ್ರಾಹಕರು ಕೇಳಿ ಪಡೆಯಬಹುದು. ಮದುವೆ ಹೆಣ್ಣು ಧರಿಸಬಹುದಾದ ಇಳಕಲ್ ಧಾರೆ ಸೀರೆ ಕುಂಕುಮ ಬಣ್ಣದ್ದಾಗಿರುತ್ತದೆ. ಅರ್ಚಕರ ಮನೆಯವರು, ಹಾಗೂ ಪುರೋಹಿತರ ಮನೆಯ ಗೃಹಿಣಿಯರು ಇದೇ ಬಣ್ಣದ ಸೀರೆಯನ್ನು ಇಷ್ಟಪಡುತ್ತಾರೆ. ಆಧುನಿಕವಾಗಿ ತಯಾರಾಗುತ್ತಿರುವ ಒಂದು ನಮೂನೆ ಗಾಯತ್ರಿ ಯೆಂಬ ಸೀರೆಗೆ, ಹೊಸ ವಿನ್ಯಾಸದ, ೨.೫ ಇಂಚಿನಿಂದ ೪ ಇಂಚುಗಳವರೆಗಿನ ಕೆಂಪು ಅಥವ 'ಮರೂನ್' ಬಣ್ಣದ ಅಂಚನ್ನು ಕಾಣುತ್ತೇವೆ. ಇಳಕಲ್ ಸೀರೆಗಳ ಮತ್ತೊಂದು ಹೊಸವಿನ್ಯಾಸವೆಂದರೆ, ಒಡಲಿನ ಮೇಲೆ 'ಕಮಲದ ಹೂ', 'ಆನೆ', 'ಪಲ್ಲಕ್ಕಿ' ಇತ್ಯಾದಿ ಕಸೂತಿ ಚಿತ್ರಗಳ ಹೆಣಿಗೆ ೯ ಗಗಳ ಸೀರೆ,ಸೆರಗಿಗೆ ದೇವಸ್ಥಾನದಗೋಪುರಗಳ ವಿನ್ಯಾಸವಿರುತ್ತದೆ. ಸೆರಗುಗಳು ಸಾಮಾನ್ಯವಾಗಿ ಕೆಂಪುಬಣ್ಣದ ರೇಷ್ಮೆ ದಾರಗಳಿಂದ ನೇಯ್ಗೆಯಾದರೆ, ಅದಕ್ಕೊಪ್ಪುವಂತೆ, ಬಿಳಿಯ ಚಿತ್ರಾಲಂಕಾರವನ್ನೂ ನಾವು ಕಾಣುತ್ತೇವೆ.[]

ಈ ಶತಮಾನದ ಕೊನೆಯಲ್ಲಿ ಇಳಕಲ್ಲ ಪರಂಪರೆಯ ಚಿತ್ರಣವನ್ನು ಕೇವಲ ನೇಕಾರಿಕೆ ದೃಷ್ಟಿಕೋನದಿಂದಲ್ಲದೆ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ದಾಖಲಿಸುವುದು ಕಾಲದ ಅಗತ್ಯವಾಗಿದೆ. ಏಕೆಂದರೆ ಇಲ್ಲಿಯ ಸೀರೆಯ ಉದ್ಯಮದ ಮೇಲೆ ಈ ಎಲ್ಲ ಬಹುಮುಖಿ ಅಂಶಗಳು ಪ್ರಭಾವ ಬೀರಿವೆ.

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ಲ ಪಟ್ಟಣ ಒಂದು ಕಾಲಕ್ಕೆ ಪಡಮೂಲೆ ಸ್ಥಳವಾಗಿತ್ತು. ಮುಂಬೈ ಕರ್ನಾಟಕ ಹಾಗೂ ಹೈದರಾಬಾದ ಕರ್ನಾಟಕದ ಮಿಶ್ರ ಭಾಷೆ ಹಾಗೂ ಸಂಸ್ಕೃತಿಯನ್ನು ಪಳೆಯುಳಿಕೆ ರೂಪದಲ್ಲಿ ಇಂದಿಗೂ ಇಲ್ಲಿ ಕಾಣಬಹುದು. ೧೯೯೯ ರಲ್ಲಿ ಜಿಲ್ಲೆಗಳ ಪುನರ್ ವಿಂಗಡಣೆ ಆದ ನಂತರ ವಿಜಾಪುರದಿಂದ ಹೊಸ ಜಿಲ್ಲೆ ಬಾಗಲಕೋಟೆಗೆ ಆಡಳಿತಾತ್ಮಕವಾಗಿ ಇದು ವರ್ಗಾಯಿಸಲ್ಪಟ್ಟಿದೆ. ಗದಗ, ಕೊಪ್ಪಳ, ರಾಯಚೂರ ಜಿಲ್ಲೆಗಳ ಗಡಿಗಳಿಂದ ಇದು ಆವೃತ್ತವಾಗಿದೆ. ಸರಾಸರಿ ೧೫’ ವಾರ್ಷಿಕ ಮಳೆ ಪಡೆಯುವ ಬಯಲು ಪ್ರದೇಶದ ಈ ಪಟ್ಟಣ ಉಷ್ಣ ಹವಾಮಾನ ಹೊಂದಿದೆ. ಪ್ರಾಚಿನ ನಾಗರಿಕತೆಗಳು ಹಳ್ಳ, ತೊರೆ, ನದಿ ದಂಡೆಯ ಮೇಲೆ ವಿಕಾಸವಾದಂತೆ ಇಳಕಲ್ಲ ಪಟ್ಟಣದ ಬಹುಭಾಗ ಹಿರೇಹಳ್ಳ ಹಾಗೂ ಸುಡಗಾಡಿಹಳ್ಳಗಳಿಂದ ಸುತ್ತು ವರಿದಿದೆ. ಈ ಹಳ್ಳದ ನೀರು ಒಂದು ಕಾಲಕ್ಕೆ ನೇಕಾರಿಕೆ ಉದ್ಯಮದ ಜೀವ ಸೆಲೆಯಾಗಿತ್ತು. ೧೯೬೮ ರಲ್ಲಿಯೇ ಶತಮಾನೋತ್ಸವ ಆಚರಿಸಿಕೊಂಡ ನಗರಸಭೆ ಈ ಪಟ್ಟಣಕ್ಕಿದೆ.

ಇಳಕಲ್ಲ ಹಾಗೂ ಇಲಕಲ್ಲ ಎಂಬ ಎರಡೂ ಹೆಸರುಗಳು ಈ ಪಟ್ಟಣಕ್ಕೆ ಪ್ರಚಲಿತವಾಗಿ ಬಳಕೆಯಲ್ಲಿವೆ. ಹೆಸರಿನ ನಿಷ್ಪತ್ತಿಯ ಬಗ್ಗೆ ಯಾವುದೆ ಐತಿಹಾಸಿಕ ಖಚಿತ ದಾಖಲೆಗಳು ಇಲ್ಲ. ಭೌಗೋಳಿಕ ಸಂದರ್ಭದ ಹಿನ್ನೆಲೆಯಲ್ಲಿ ಮಾತ್ರ ಇಳಕಲ್ಲ ಹೆಸರನ್ನು ಅರ್ಥೈಸಬಹುದು. ಈ ಪಟ್ಟಣದ ಸುತ್ತಲು ಎತ್ತರದ ದಿಣ್ಣೆಯ ಪ್ರದೇಶ ಇದೆ. ಈ ದಿಣ್ಣೆಯ ಇಳಿಜಾರಿನಲ್ಲಿ ಈ ಪಟ್ಟಣ ಇರುವುದರಿಂದ ಇಳಕಲ ಶಬ್ದವೆ ‘ಇಳಕಲ್ಲ’ ‘ಇಲಕಲ್ಲ’ ಆಗಿ ಪ್ರಚಲಿತ ಇರಬಹುದು.

ಇತಿಹಾಸದ ಜಾಡು ಹಿಡಿದು ಈ ಪ್ರದೇಶ ವರ್ಣಿಸಲು ಯಾವುದೇ ಪ್ರಾಚೀನ, ಶಾಸನ, ಸ್ಮಾರಕಗಳು ಇಲ್ಲಿ ಲಭ್ಯವಾಗಿಲ್ಲ. ಇತಿಹಾಸ ಎಂದರೆ ಕೇವಲ ದೊರೆಗಳ ಅಥವಾ ರಾಜರಾಣಿಯರ ವರ್ಣನೆ ಆಗಿರುವುದರಿಂದ ಜನಮುಖಿಯಾದ ಇತಿಹಾಸ ಈಗ ಬರೆಯಬೇಕಾಗಿದೆ. ಈ ಊರಿನಲ್ಲಿ ಕಿಲ್ಲಾ ಎಂಬ ಭಾಗವಿದೆ. ಅದನ್ನೇ ಹಳೆ ಇಳಕಲ್ಲ ಎಂದು ಕರೆಯುತ್ತಾರೆ. ಅಲ್ಲಿ ವಾಸಿಸುವವರು ಕೇವಲ ಲಿಂಗಾಯತರು. ಅವರೆಲ್ಲ ಕೃಷಿಕರು. ಅಲ್ಲಿ ಈಶ್ವರ, ಮಲ್ಲಿಕಾರ್ಜುನ ಹಾಗೂ ಮಾರುತಿ ದೇವಾಲಯಗಳಿವೆ. ಈ ಕಿಲ್ಲಾ ಭಾಗದ ಹೊರಗೆ ನೇಕಾರಿಕೆ ಅವಲಂಬಿಸಿದ ಸಮುದಾಯಗಳು ವಾಸಿಸುತ್ತವೆ. ಆದ್ದರಿಂದ ನೇಕಾರಿಕೆ ಇಲ್ಲಿ ವಲಸಿಗರಿಂದ ಪ್ರಾರಂಭವಾಗಿರಬಹುದು ಎಂದು ಊಹಿಸಬಹುದು.

ಇಳಕಲ್ಲಿನಿಂದ ಐದಾರು ಕಿಲೋಮೀಟರ ದಕ್ಷಿಣಕ್ಕೆ ಬಲಕುಂದಿ ಗ್ರಾಮ ಇದೆ. ಅಲ್ಲಿ ಕೋಟೆಗೋಡೆ, ಹುಡೆಗಳಿವೆ. ಅದೊಂದು ಜಹಗೀರ ಗ್ರಾಮ ಎಂದು ಹೇಳುತ್ತಾರೆ. ವಿಜಯನಗರ ಸಾಮ್ರಾಜ್ಯ ಹಾಗೂ ಬಹಮನಿ ಸಾಮ್ರಾಜ್ಯಗಳ ನಡುವೆ ಕೃಷ್ಣೆಯ ತಟಾಕದಲ್ಲಿ ಜರುಗಿದ ರಕ್ಕಸಗಿ, ತಂಗಡಗಿ ಕಾಳಗ ಈ ಪ್ರದೇಶದಿಂದ ಸುಮರು ೨೫ ಕಿ.ಮೀ. ಅಂತರದಲ್ಲಿದೆ. ಆದ್ದರಿಂದ ಸುತ್ತಲಿನ ಸಾಮ್ರಾಜ್ಯಗಳ ಏರಿಳಿತ ಹಾಗೂ ಬದಲಾವಣೆಗಳ ಭಾಗವಾಗಿ ಈ ಪ್ರದೇಶ ಉಳಿದಿತ್ತು ಎಂದು ಮಾತ್ರ ಹೇಳಬಹುದು. ಚಾಲುಕ್ಯ, ರಟ್ಟ, ಬಹಮನಿ, ವಿಜಯನಗರ, ಮೊಘಲ, ಮರಾಠ, ಪೇಶ್ವೆ ಹಾಗೂ ಬ್ರಿಟಿಷ್‌ ಆಡಳಿತದ ನೆರಳಾಗಿ ಈ ಪ್ರದೇಶ ಉಳಿದಿರಬಹುದು. ಧಾರವಾಡ, ಬೆಳಗಾಂವಿ, ಕಲಾದಗಿ, ವಿಜಾಪುರ ಹಾಗೂ ಬಾಗಲಕೋಟ ಜಿಲ್ಲೆಗಳ ಆಡಳಿತಕ್ಕೆ ಒಳಪಟ್ಟ ಈ ಪಟ್ಟಣ ಯಾವಾಗಲೂ ಹುನಗುಂದ ತಾಲೂಕಿನಲ್ಲಿಯೇ ಇದೆ. ಇಲ್ಲಿ ಹೇಳಿಕೊಳ್ಳಬಹುದಾದ ಹಳೆಯ ಸ್ಮಾರಕಗಳೆಂದರೆ ಬಸವತತ್ವ ಪರಂಪರೆಯ ವಿಜಯ ಮಹಾಂತೇಶ್ವರ ಮಠ ಹಾಗೂ ಔಲಿಯ ಪರಂಪರೆಯ ಮರ್ತುಜ ಖಾದ್ರಿ ದರ್ಗಾ. ದರ್ಗಾ ಕೂಡ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿದೆ.

ಪಡಮೂಲೆ ಸ್ಥಳವಾಗಿದ್ದ ಇಳಕಲ್ಲ ಸುಮಾರು ೪೦ ವರ್ಷಗಳ ಹಿಂದೆ ಅತಿವೃಷ್ಟಿಯಾದಾಗ ದ್ವೀಪವಾಗಿ ನರಳಿದ ಪ್ರಸಂಗ ಮರೆಯುವಮತಿಲ್ಲ. ಕಮತಗಿ ಬಳಿ ಮಲಪ್ರಭೆ, ಧನ್ನೂರ ಬಳಿ ಕೃಷ್ಣೆ ಹಾಗೂ ಇಳಕಲ್ಲ ಸುತ್ತಲು ಇರುವ ಹಳ್ಳಗಳಿಗೆ ಸೇತುವೆಗಳು ನಿರ್ಮಾಣವಾಗುವ ಪೂರ್ವದಲ್ಲಿ ಈ ಪಟ್ಟಣ ಹೊರಜಗತ್ತಿನ ಸಂಪರ್ಕವನ್ನೇ ಒಮ್ಮೊಮ್ಮೆ ಕಳೆದುಕೊಳ್ಳುತ್ತಿತ್ತು. ಈ ಊರಿಗೆ ಮೊದಲು ಸಾರ್ವಜನಿಕ ಸಂಪರ್ಕ ಒದಗಿಸಿದ ಕೀರ್ತಿ ಹರವಿ ಹಾಗೂ ರಂಗರೇಜ್‌ ಬಂಧುಗಳಿಗೆ ಸಲ್ಲುತ್ತದೆ. ಹರವಿಯವರ ಗಾಡಿಯ ಕುಬೇರಪ್ಪ, ರಂಗರೇಜ್‌ ಗಾಡಿಯ ಈರಪ್ಪ ಎಂಬ ಚಾಲಕರ ಹೆಸರಿನಿಂದಲೆ ಈ ಮೋಟರಗಳು ಗುರುತಿಸಲ್ಪಡುತ್ತಿದ್ದವು. ಆದರೆ ಮಾಲಿಕರ ಹೆಸರಿನಿಂದಲ್ಲ. ಈ ಪಟ್ಟಣವನ್ನು ಆಧುನೀಕರಣಗೊಳಿಸಿದ ಕೀರ್ತಿ ಕಂಠಿ, ನಾಡಗೌಡ ಹಾಗೂ ಕಡಪಟ್ಟಿ ಯವರಿಗೆ ಸಲ್ಲುತ್ತದೆ.

ಇಳಕಲ್ಲ ಪಟ್ಟಣದ ಪರಂಪರೆಯೇ ವಿಶಿಷ್ಟವಾದದ್ದು. ಐದು ದಶಕಗಳ ಹಿಂದೆ ನಾರು, ಕ್ಷಯ, ಕುಷ್ಠರೋಗ ಇಲ್ಲಿ ಸಾಮಾನ್ಯವಾಗಿದ್ದವು. ಬೆಲ್ಲದ ಸಾದಾ ಚಹಾ, ಚೂರಮರಿ ಸೂಸಲ, ಮಿರ್ಚಿ, ಶಿಕಾರಿ ಚುಟ್ಟ ಇಲ್ಲಿಯ ಬಡ ನೇಕಾರನ ಜೀವನ ಶೈಲಿಯ ಸಂಕೇತಗಳಾಗಿದ್ದವು. ಎಲ್ಲರ ಮಾನ ಕಾಯಲು ಬಟ್ಟೆ ಉತ್ಪಾದಿಸುವ ನೇಕಾರನು ಒಂಟಿ ಧೋತರದಲ್ಲಿ ಹಿರೇ ಹಳ್ಳದಲ್ಲಿ ಸ್ನಾನ ಮಾಡಿ, ಅದನ್ನೇ ಒಗೆದು, ಒಣಗಿಸಿ ಮತ್ತೆ ಉಟ್ಟು ಹಳ್ಳದ ದಂಡೆಗಿರುವ ಮಹಾಂತ ಗದ್ದುಗೆಗೆ ಕೈ ಮುಗಿದು, ಬೆನ್ನು ಸೇರಿದ ಹೊಟ್ಟೆಗೆ ಅರೆ ಬರೆ ಉಂಡು, ತನ್ನ ನೇಕಾರಿಕೆ ವೃತ್ತಿಯಲ್ಲಿ ತೊಡಗುವ ಕಾಯಕ ಜೀವಿಯಾಗಿದ್ದ. ನೇಕಾರನ ಹೆಂಡತಿ ಬತ್ತಲೆ ಎಂಬಂತೆ, ‘ಧನಿ’ ಸಂಸ್ಕೃತಿಗೆ ನಲುಗಿ ನರಪೇತಲನಾಗಿದ್ದ. ಈ ಏಕತಾನ ಕಷ್ಟದ ಜೀವನದಲ್ಲಿಯೇ ಕಲೆ, ಸಂಗೀತ, ನಾಟಕಗಳತ್ತ ವಾಲಿದ ಪರಂಪರೆ ಇಲ್ಲಿದೆ.

ವೃತ್ತಿ ರಂಗಭೂಮಿ ಇಲ್ಲಿ ಜೀವಂತಿಕೆ ಪಡೆದಿತ್ತು. ಕಂಪನಿ ನಾಟಕಗಳಿಗೆ ಇಲ್ಲಿ ನಿರಂತರ ಆಶ್ರಯ ಇತ್ತು. ವೃತ್ತಿ ರಂಗಭೂಮಿಗೆ ಬೇಕಾಗುವ ಪರದೆ ಹಾಗೂ ಇತರ ಸಾಧನಗಳನ್ನು ರಚಿಸುವ ಕಲಾಕಾರರ ತಂಡವೇ ಇಲ್ಲಿತ್ತು. ನಾಡಿಗೆ ಖ್ಯಾತ ಕಲಾವಿದರನ್ನು ನೀಡಿದ ಕೀರ್ತಿ ಈ ಊರಿಗೆ ಸಲ್ಲುತ್ತದೆ. ಎಲ್ಲಿಯೋ ದಿವಾಳಿ ತೆಗೆದ ವೃತ್ತಿ ನಾಟಕ ಕಂಪನಿಗಳು ಇಲ್ಲಿ ಮರುಜನ್ಮ ಪಡೆದ ಇತಿಹಾಸ ಇದೆ. ಹವ್ಯಾಸಿ ಹಾಗೂ ವೃತ್ತಿ ರಂಗ ಭೂಮಿಯಲ್ಲಿ ಸ್ತ್ರೀ ಪತ್ರ ನಿರ್ವಹಿಸುವ ಪಾತರದವರ ಓಣಿಯು ಈ ಊರಲ್ಲಿದೆ.

ಧಾರ್ಮಿಕ ಚಟುವಟಿಕೆಗಳಿಗಾಗಿ ಓಣಿಗೆ ನಾಲ್ಕಾರು ಗುಡಿಗಳು ಈ ಊರಿನಲ್ಲಿವೆ. ನೇಕಾರರ ಆರಾಧ್ಯ ದೈವವಾದ ಬನಶಂಕರಿ ಗುಡಿಗಳಿಗಂತೂ ಇಲ್ಲಿ ಲೆಕ್ಕವೇ ಇಲ್ಲ. ವರ್ಷದುದ್ದಕ್ಕೂ ಈ ಊರಿನಲ್ಲಿ ಪುರಾಣ, ಪ್ರವಚನ, ಜಾತ್ರೆ, ಉತ್ಸವಗಳು ಜರುಗುತ್ತಲೇ ಇರುತ್ತವೆ. ಶ್ರಾವಣ ಮಾಸದ ಕೊನೆಯ ವಾರದಲ್ಲಿ ಜರುಗುವ ವಿಜಯ ಮಹಾಂತೇಶನ ತೇರು ಹಾಗೂ ಅಡ್ಡಪಲ್ಲಕ್ಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸ್ವರೂಪ ಪಡೆದುಕೊಂಡಿವೆ. ಫೆಬ್ರುವರಿಯಲ್ಲಿ ಜರುಗುವ ಮರ್ತುಜಾ ಖಾದ್ರಿ ಉರಸು ಪ್ರಾದೇಶಿಕ ಭಕ್ತರನ್ನು ಆಕರ್ಷಿಸುತ್ತದೆ. ಕೋಮು ಗಲಭೆಗಳಿಗೆ ಇದು ಹೊರತಾದ ಊರು. ಜಾತಿ, ಧರ್ಮ, ಅಂತರವಿಲ್ಲದೆ ಸಮಾಜದ ಎಲ್ಲ ಸ್ತರಗಳ ಜನ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇಕ್ಕಟ್ಟಾದ ಸಂದಿಗಳಿಗೆ ಈ ಊರು ಖ್ಯಾತ. ಹೊಸಬರಿಗೆ ಈ ಸಂದಿಗಳು ಚಕ್ರವ್ಯೂಹ ರಚಿಸಿಬಿಡುತ್ತವೆ. ಆದರೆ ಅಂತಹ ಸಂದಿಗಳಲ್ಲಿಯೇ ನೇಕಾರಿಕೆಗೆ ಹಾಗೂ ವ್ಯಾಪಾರಕ್ಕೆ ಅನುಕೂಲವಾಗುವ ವಿಶಾಲ ಭವ್ಯ ಮನೆಗಳಿವೆ.

೧೯೬೩ ರಿಂದ ಇಳಕಲ್ಲ ಉನ್ನತ ಶಿಕ್ಷಣದತ್ತ ದಾಪುಗಾಲು ಹಾಕಿದೆ. ಮೊದಲು ಇಲ್ಲಿ ನಗರಸಭೆಯ ಮಾಧ್ಯಮಿಕ ಶಾಲೆ ಮಾತ್ರ ಇತ್ತು. ಇಳಕ್ಲಲಿನವರೇ ಆದ ಶ್ರೀ ಎಸ್‌.ಆರ್. ಕಂಠಿಯವರು ಇಲ್ಲಿ ಕಾಲೇಜು ಪ್ರಾರಂಭಿಸಲು ಅಂಕುರ ಹಾಕಿದರು. ಗುರು ಮಹಾಂತಸ್ವಾಮಿಗಳು ಬೃಹತ್‌ ದೇಣಿಗೆ ನೀಡಿದರು. ನಗರಸಭೆ ಕಾಲೇಜಿಗೆ ಸ್ಥಳದಾನ ಮಾಡಿತು. ಇಲ್ಲಿಯ ಬಡ ನೇಕಾರ ತನ್ನ ಶಕ್ತ್ಯಾನುಸಾರ ದೇಣಿಗೆ ಕೊಟ್ಟನು. ಕರಡಿ ರಾಮಣ್ಣ ಎಂಬವರು ತಮ್ಮ ಒಡೆತನದಲ್ಲಿದ್ದ ಬಲಕುಂದಿ ಗುಡ್ಡವನ್ನೇ ಸಂಸ್ಥೆಗೆ ದಾನ ನೀಡಿದರು. ಬಿರಾಡ ಕೊಡಲಾರದ ರಾಮಣ್ಣ ಗುಡ್ಡವನ್ನು ನಮ್ಮ ಕೊರಳಿಗೆ ಕಟ್ಟಿದೆ ಎಂದು ಕಾಲೇಜ ಆಡಳಿತ ಮಂಡಳಿ ಆಗ ಗೊಣಗಿದ್ದು ಉಂಟು. ಸ್ಥಳೀಯ ಸಂಪನ್ಮೂಲಗಳ ಕೊರತೆ ಸರ್ಕಾರದ ಅತಂತ್ರ ನೀತಿ ಮೊದಲಾದ ಕಾರಣಗಳಿಂದ ಕಾಲೇಜ ಸಿಬ್ಬಮದಿಗೆ ಸಂಬಳ ಕೊಡಲಾರದ ಸ್ಥಿತಿ ಇಲ್ಲಿ ಉಂಟಾಗಿತ್ತು. ಇಳಕಲ್ಲ, ಹುನಗುಂದ, ಜಮಖಂಡಿ ಹಾಗೂ ಗುಳೇದಗುಡ್ಡದಂತಹ ಪಟ್ಟಣಗಳಲ್ಲಿ ಆರ್ಥಿಕ, ಸಂಕಷ್ಟದಲ್ಲಿದ್ದ ಕಾಲೇಜ ಸಿಬ್ಬಂದಿ ಸಂಘಟನೆ ಹೊಂದಿ ‘ಕವಿಕಾಶಿ’ ಕಟ್ಟಿದ್ದು ಈಗ ಇತಿಹಾಸ. ಇದೇ ಸಂದರ್ಭದಲ್ಲಿ ಇಳಕಲ್ಲ ಕಾಲೇಜಿನ ಆಗಿನ ಪ್ರಾಚಾರ್ಯರು ಬಲಕುಂದಿ ಗುಡ್ಡದ ಕಲ್ಲನ್ನು ಹಲವು ಪರೀಕ್ಷೆಗೊಳಪಡಿಸಿ ಅದು ಕೆಂಪು ‘ಗ್ಯ್ರಾನೈಟ್‌’ ಎಂಬುದನ್ನು ಖಾತರಿಪಡಿಸಿಕೊಂಡರು. ತಮಿಳುನಾಡು, ಗುಜರಾತ, ಗೋವಾಗಳಿಂದ ಉದ್ದಿಮೆದಾರರನ್ನು ಕೆಂಪು ಕಂಬಳಿ ಹಾಸಿ ಕರೆತಂದರು. ಇಳಕಲ್ಲಿನ ಈ ಕೆಂಪು ಕಲ್ಲು ವಿಶ್ವದ ಮಾರುಕಟ್ಟೆಯಲ್ಲಿ ಬಹುಬೇಗನೆ ಜನಪ್ರಿಯವಾಯಿತು. ಇಳಕಲ್ಲ ಚಾಕಲೆಟ್‌ ಎಂದೇ ಖ್ಯಾತವಾಯಿತು. ಕಲ್ಲಿನ ದಂಧೆ ಅನಾಯಾಸ ಲಾಭಗಳಿಸುವ ಆಕರ್ಷಕ ಉದ್ದಿಮೆಯಾಗಿ ಕಂಡಿತು. ಇದು ಇಳಕಲ್ಲಿನ ಆರ್ಥಿಕ ಸ್ಥಿತಿಯನ್ನೇ ಸಂಪೂರ್ಣ ಬದಲಿಸಿತು. ಸಂಪತ್ತು ಇಲ್ಲಿ ಸ್ಫೋಟಗೊಂಡಾಯಿತು. ಲಕ್ಷ್ಮೀ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಬರಲಿಲ್ಲ ಓಡುತ್ತಾ ಬಂದು ಇಲ್ಲಿ ಬಿದ್ದಂತಾಯಿತು. ಕೈ ಮಗ್ಗದ ಸೀರೆ ಉತ್ಪಾದಿಸುವ ಜವಳಿ ಉದ್ಯಮಕ್ಕೆ ಕೆಲಕಾಲ ಸ್ಥಾನಿಕ ಆತಂಕ ಇದು ಒಡ್ಡಿತು. ಹೊಸ ಶ್ರೀಮಂತ ವರ್ಗವನ್ನು ಕಲ್ಲಿನ ದಂಧೆ ಸೃಷ್ಟಿಸಿತು. ಬಡ ನೇಕಾರ ಈ ಮಿಂಚಿನ ಬದಲಾವಣೆಯಿಂದ ಗೊಂದಲಗೊಂಡ. ಭಾರತದ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲ್ಪಡುವ ಕಾರುಗಳು ಮೊದಲು ಇಳಕಲ್ಲಿಗೆ ಬರುತ್ತಿದ್ದವು ಎಂದರೆ, ಈ ಬದಲಾವಣೆಯ ತೀವ್ರತೆಯನ್ನು ಊಹಿಸಿಕೊಳ್ಳಬಹುದು. ಗುಡಿಸಲಿನ ವಾಸಿಗಳು ಕಲ್ಲಿನ ದಂಧೆಯಲ್ಲಿ ಅನಾಯಾಸ ಹಣಗಳಿಸಿ ಕೋಟಿಗಟ್ಟಲೆ ಖರ್ಚು ಮಾಡಿ ಮನೆ ಕಟ್ಟಿಸಿದರು. ‘ಮತ್ತೆ ‘ವಾಸ್ತು’ ಪ್ರಕಾರ ಅದನ್ನು ಬದಲಿಸಿದರು. ಅಂದರೆ ಕುರುಡು ಕಾಂಚಾಣದ ಕುಣಿತವನ್ನು ಊಹಿಸಬಹುದು. ಇದೇ ಸಂದರ್ಭದಲ್ಲಿ ಡಬ್ಲಿಂಗ್‌ ದೊರೆ ಇಲ್ಲಿ ಹುಟ್ಟಿಕೊಂಡ. ದಿಢೀರನೆ ಶ್ರೀಮಂತರಾಗುವ ದಾಹ ಹೆಚ್ಚಿತು. ಮೇಲ ಮಧ್ಯಮ ವರ್ಗ ವಿಶೇಷ ಆಕರ್ಷಿತರಾಗಿ ಡಬ್ಲಿಂಗ್‌ ದಂಧೆಯಲ್ಲಿ ಕೈ ಸುಟ್ಟುಕೊಂಡ ಉದಾಹರಣೆಗಳು ಹೇರಳ.

ಶತ-ಶತಮಾನಗಳಿಂದ ಸೀರೆ ಉದ್ದಿಮೆ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಜೀವಂತಿಕೆ ಪಡೆದ ಇಳಕಲ್ಲ ಈ ಶತಮಾನದ ಕೊನೆಯಲ್ಲಿ ಆರ್ಥಿಕ ವ್ಯವಹಾರಗಳ ಏರು ಪೇರು ಕಂಡು ಗೊಂದಲಗೊಂಡಿದೆ. ಈಗ ಇಳಕಲ್ಲ ತನ್ನ ಮೂಲ ಉದ್ಯೋಗ ಕೈಮಗ್ಗದ ಸೀರೆಯ ಉತ್ಪಾದನೆಯತ್ತ ಅನಿವಾರ್ಯವಾಗಿ ವಾಲುವ ಸ್ಥಿತಿ ತಲುಪಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಇಳಕಲ್ಲ ಸೀರೆ ಉದ್ಯಮದ ಏಳುಬೀಳುಗಳನ್ನು ಅವಲೋಕಿಸಬೇಕಾಗಿದೆ.

ಸೀರೆಯ ಅರ್ಥಶಾಸ್ತ್ರ

[ಬದಲಾಯಿಸಿ]

“ಇಳಕಲ್ಲ ಸೀರೆ ಉಟ್ಗೊಂಡು ಮೊಣಕಾಲತನ ಎತ್ಗೊಂಡು

ಏರಿ ಮೇಲೆ ಏರಿ ಬಂದ ನಾರಿ”……………. ಎಂಬ ಕೌರವ ಸಿನಿಮಾದ ಹಾಡನ್ನು ಕೇಳಿದರೆ ಮುದುಕರಿಗೂ ಮೈ ಬಿಸಿಯಾಗುತ್ತದೆ. ಇಳಕಲ್ಲ ಸೀರೆಯ ಆಕರ್ಷಣೆಯೇ ಹಾಗಿದೆ. ಇಂದು ಈ ಪಟ್ಟಣ ತನ್ನ ಹಳೆಯ ಪೊರೆ ಕಳಚಿ ಆಧುನಿಕತೆಯತ್ತ ದಾಪುಗಾಲು ಹಾಕುತ್ತಿದೆ. ರಾಷ್ಟ್ರೀಯ ಹೆದ್ದಾರಿ ೧೩ ಹಾಗೂ ರಾಜ್ಯ ಹೆದ್ದಾರಿ (ಹೈದ್ರಾಬಾದ…..ವೆಂಗುರ್ಲಾ) ೨೦ ರೊಂದಿಗೆ ನೇರ ಸಂಪರ್ಕ ಪಡೆದಿದೆ.

ನೇಕಾರಿಕೆ ಕೃಷಿಯಂತೆ ಹೆಚ್ಚು ದೈಹಿಕಶ್ರಮ ಅಪೇಕ್ಷಿಸುವ ವೃತ್ತಿಯಲ್ಲ. ಕೃಷಿಕ ಮಳೆ ಗಾಳಿ ಬಿಸಿಲುಗಳಿಗೆ ತನ್ನನ್ನೊಡ್ಡಿಕೊಳ್ಳುತ್ತಾನೆ. ಆದರೆ ನೇಕಾರ ಇವುಗಳಿಮದ ರಕ್ಷಿತ. ನೇಕಾರನ ಹೆಚ್ಚಿನ ಶ್ರಮ ನಿರ್ವಹಣೆ ಮನೆಯ ಆವರಣದಲ್ಲಿಯೆ ಜರಗುತ್ತದೆ. ಕೃಷಿಕನ ಉತ್ಪಾದನೆ ಹಾಗೂ ಅದರಿಂದ ಬರುವ ಆದಾಯ ಅನಿಶ್ಚಿತ. ಆದರೆ ನೇಕಾರನ ಶ್ರಮಕ್ಕೆ ಹಾಗೂ ಅವನ ಉತ್ಪಾದನೆಗೆ ಕನಿಷ್ಠ ಬೆಲೆಯನ್ನು ನಿಗದಿಮಾಡುವ ಅವಕಾಶವಿದೆ. ಕೃಷಿಗೆ ಹೋಲಿಸಿದರೆ ಜವಳಿ ಉದ್ದಿಮೆ ಹೆಚ್ಚು ಸಂಘಟಿತ ಎಂದೇ ಹೇಳಬಹುದು.

ನೇಕಾರಿಕೆ ವೃತ್ತಿಯ ವಿಶೇಷತೆ ಎಂದರೆ ಎಲ್ಲ ವಯೋಮಾನದವರಿಗೆ ಇದು ಕೆಲಸ ಕೊಡುತ್ತದೆ. ಆರು ವರ್ಷದವರಿಂದ ಅರವತ್ತು ವರ್ಷದವರು ಇಲ್ಲಿ ಶ್ರಮ ನಿರ್ವಹಿಸುವ ಅವಕಾಶವಿದೆ. ನೂಲು ತೋಡುವ, ಹಾಸು ಹೊಯ್ಯುವ, ಕಂಡಕಿ ಸುತ್ತುವ, ಕೆಚ್ಚುವ, ಟಾಣು ಹಾಕುವ, ಹಣಿಗೆ ಕೆಚ್ಚುವ, ಮಗ್ಗಕ್ಕೇರಿಸುವ, ನೇಯುವ, ಸೆರಗುಗಳಿಗೆ ಗೊಂಡೆ ಕಟ್ಟುವ, ಗಿರಾಕಿ ಇಚ್ಛಿಸಿದರೆ ಕಸೂತಿ ಹಾಕುವ, ಸಿದ್ಧವಾದ ಸೀರೆಗಳನ್ನು ದೇವರಿಗೆ ನೈವೇದ್ಯ ಒಯ್ಯುವಂತೆ ಗೌರವ ನಯ-ನಾಜೂಕುಗಳಿಂದ ಗಳಿಗೆಗಳನ್ನು ವ್ಯಾಪಾರಸ್ಥರಿಗೆ ಮುಟ್ಟಿಸುವ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ಮನೆಮಂದಿಯೆಲ್ಲ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಇದು ಕೌಟುಂಬಿಕ ವೃತ್ತಿಯಾಗಿದೆ. ವಯಸ್ಸು ಹಾಗೂ ಲಿಂಖಗ ಆಧಾರಿತ ಶ್ರಮ ವಿಭಜನೆ ಇಲ್ಲಿ ಕಡಿಮೆ. ಒಂದು ರೀತಿಯಿಂದ ಗೃಹ ಕೈಗಾರಿಕೆಯಾಗಿದೆ.

ನೇಕಾರಿಕೆ ಕ್ರಮೇಣ ಸುಧಾರಣೆ ಹೊಂದಿ ಜವಳಿ ಉದ್ದಿಮೆಯಾಗಿ ರೂಪಾಂತರ ಹೊಂದಿದೆ. ಜವಳಿ ಉದ್ದಿಮೆಯಲ್ಲಿ ಪ್ರಮುಖವಾಗಿ ಮೂರು ವಿಭಾಗಗಳನ್ನು ಕಾಣಬಹುದು. ಕೈಮಗ್ಗ, ವಿದ್ಯುತ್‌ ಚಾಲಿತ ಮಗ್ಗ ಹಾಗೂ ಗಿರಣಿಗಳು. ಭಾರತದಲ್ಲಿ ತಮಿಳುನಾಡು ಹಾಗೂ ಅಸ್ಸಾಂಗಳಲ್ಲಿ ಕೈಮಗ್ಗಗಳ ಸಂಖ್ಯೆ ಹೆಚ್ಚು. ಈ ಸಾಲಿನಲ್ಲಿ ಕರ್ನಾಟಕ ಎಂಟನೆಯ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು ಐದು ದಶಲಕ್ಷ ಮೀಟರ ಬಟ್ಟೆ ಕೈಮಗ್ಗದ ಕ್ಷೇತ್ರದಿಂದಲೇ ಉತ್ಪಾದನೆಯಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು ಎಂಬತ್ತೆರಡು ಸಾವಿರ ಕೈ ಮಗ್ಗಗಳಿವೆಯೆಂದು ಅಂದಾಜು ಮಾಡಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇವು ಸಮಾನವಾಗಿ ಹಂಚಲ್ಪಟ್ಟಿಲ್ಲ. ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ಹೆಚ್ಚು ಕೈಮಗ್ಗಗಳಿವೆ. ಅವಿಭಜಿತ ಬಿಜಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಕೈ ಮಗ್ಗಗಳಿವೆ. ಸುಮಾರು ಒಂಬತ್ತು ಲಕ್ಷ ಜನರಿಗೆ ಇದು ಉದ್ಯೋಗ ನೀಡಿದೆ. ಪ್ರಾದೇಶಿಕವಾಗಿ ಇವುಗಳ ಖ್ಯಾತಿ ಹೇಗಿದೆಯೆಂದರೆ ನಾಮಬಲದಿಂದಲೆ ಇವು ಮಾರುಕಟ್ಟೆ ಪಡೆದುಕೊಂಡಿವೆ. ಉದಾಹರಣೆಯಾಗಿ ಇಳಕಲ್ಲ ಸೀರೆ, ಗುಳೇದಗುಡ್ಡದ ಖಣ, ಕಮತಗಿಯ ಪಟಗ, ಸೂಳೇಭಾವಿಯ ದೋತ್ರ ಮುಂತಾಗಿ. ಇಳಕಲ್ಲಿನಲ್ಲಿ ಸುಮಾರು ಹತ್ತು ಸಾವಿರ ಕೈಮಗ್ಗಳಿವೆ. ಇದು ನಲವತ್ತು ಸಾವಿರ ಜನರಿಗೆ ಉದ್ಯೋಗ ಒದಗಿಸಿದೆಯೆಂದು ಹೇಳಲಾಗುತ್ತಿದೆ.

ಬೀಜ ಕಳೆದುಕೊಂಡ ಹತ್ತಿ ಅರಳಿಯಾಗುತ್ತದೆ, ಅರಳಿ ಹಿಂಜಲ್ಪಟ್ಟು ಹಂಜಿಯಾಗುತ್ತದೆ; ಹಂಜಿ ನೂಲಾಗಿ ಲಡಿಗೆ ತೋಡಲ್ಪಡುತ್ತದೆ. ವಿವಿಧ ಬಣ್ಣ ಪಡೆದುಕೊಂಡ ನೂಲನ್ನು ಸೀರೆಯ ರೂಪಕ್ಕನುಗುಣವಾಗಿ ಹಾಸುಹೊಯ್ಯಲಾಗುತ್ತದೆ. ಹಾಸು ಹಣಿಗಿಗೆ ಕಚ್ಚಿ ಮಗ್ಗಕ್ಕೆ ಏರಿಸುತ್ತಾರೆ. ಮಗ್ಗದ ತೆಗ್ಗಿನ ಕುಣಿಯಲ್ಲಿ ಅರ್ಧ ದೇಹ ಇಳಿಬಿಟ್ಟ ನೇಕಾರ ಹಾಸಿನ ಅಣಿ ಎತ್ತಿ ಹೊಟ್ಟೆಯಲ್ಲಿ ವಿವಿಧ ಬಣ್ಣದ ಲಾಳಿ ಓಡಿಸಿ ನೇಯುತ್ತಾನೆ. ನೇಯುವದು ಅತ್ಯಂತ ನಾಜೂಕಿನ ಕೆಲಸ. ಆದ್ದರಿಂದಲೇ “ಒಂದು ಅಣಿ ತಪ್ಪಿದರೆ ಸಾವಿರ ಅಣಿ ತಪ್ಪುತ್ತವೆ” ಎಂಬ ಗಾದೆ ಹುಟ್ಟಿರಬಹುದು. ಸಿದ್ಧವಾದ ಸೀರೆಯನ್ನು ನೇಕಾರ ವ್ಯಾಪಾರಸ್ಥನಿಗೆ ಕೊಡುತ್ತಾನೆ. ವ್ಯಾಪಾರಿ ಆಕರ್ಷಕ ರೀತಿಯಲ್ಲಿ ಸೀರೆಯನ್ನು ಗಳಿಗೆ ಹಾಕಿ ಉಪಭೋಗದಾರನಿಗೆ ಮಾರುಕಟ್ಟೆಯ ಮೂಲಕ ತಲುಪಿಸುತ್ತಾನೆ.

ಹತ್ತಿ ಬೆಳೆಯುವ ಕೃಷಿಕ, ನೂಲಿನ ಬಣ್ಣ ಹಾಕುವ ಬಣಗಾರನಿಂದ ಹಿಡಿದು ನೇಕಾರಿಕೆಯಲ್ಲಿ ವಿವಿಧ ಕಾರ್ಯ ಪೂರೈಸುವ ವೃತ್ತಿ ಸಮೂಹಗಳು ಪಳಿಯುಳಿಕೆ ರೂಪದಲ್ಲಿ ಇಂದಿಗೂ ಇವೆ. ಆದರೆ ನೂಲುವುದನ್ನೇ ಕಸಬಾಗಿ ಮಾಡಿಕೊಂಡ ವೃತ್ತಿ (ಜಾತಿ) ಸಮೂಹ ಈಗ ಮಾಯವಾಗಿದೆ. ಬಹುಶಃ ಗಿರಣಿ ನೂಲು ಈ ಗುಂಪನ್ನು ನುಂಗಿ ಹಾಕಿದೆ. ನೂಲಿ ಚಂದಯ್ಯ ಶರಣರ ಹೆಸರು ೧೨ ನೆಯ ಶತಮಾನದಲ್ಲಿ ದಾಖಲಾಗಿದೆ. ಆದರೆ ಆತನ ವೃತ್ತಿ ಹುಲ್ಲಿನಿಂದ ಹಗ್ಗ ಹೊಸೆಯುವುದಾಗಿತ್ತೆಂಬುದನ್ನು ಗಮನಿಸಬಹುದು.

ಇಳಕಲ್ಲ ಸೀರೆಯ ವಿಶೇಷತೆಯಿರುವುದೇ ಅದರ ಬಣ್ಣದ ಗುಣ ಹಾಗೂ ವಿನ್ಯಾಸದಲ್ಲಿ. ಸೀರೆ ಹರಿದರೂ ಬಣ್ಣ ಮಾಸುವುದಿಲ್ಲ ಎಂಬ ನಂಬಿಕೆಯಿದೆ. ನೂಲಿಗೆ ಬಣ್ಣ ಹಾಕುವ ವೃತ್ತಿಯಲ್ಲಿ ಬಣಗಾರ ಹಾಗೂ ನೀಲಗಾರ ಎಂಬ ಗುಂಪುಗಳಿವೆ. ಬಣಗಾರರು ನೂಲಿಗೆ ಎಲ್ಲ ತರದ ಬಣ್ಣ ಹಾಕುತ್ತಾರೆ. ಆದರೆ ನೀಲಗಾರರು ಕೇವಲ ಕರಿ ಬಣ್ಣ ಮಾತ್ರ ಹಾಕುತ್ತಾರೆ. ಕಪ್ಪು, ಕರಿ ಎಂಬ ಶಬ್ದ ಜಾತಿಯ ಶ್ರೇಣೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಉದಾಹರಣೆಯಾಗಿ ಕರಿಜಾಡ, ಕರಿ ಗಾಣಿಗ, ಉಣ್ಣಿ ಕಂಕಣ, ಮುಂತಾಗಿ. ಒಂದು ಕಾಲದಲ್ಲಿ ಮಹಿಳೆಯರು ತೊಡುವ ಬಟ್ಟೆಗಳನ್ನು ಕಪ್ಪು ಬಟ್ಟೆಯೆಂದೇ ಕರೆಯಲಾಗುತ್ತಿತ್ತು. ಹೆಣ್ಣು ಹಾಗೂ ಕಪ್ಪು ಕೀಳೆಂದು ಪುರುಷಮೌಲ್ಯಗಳು ಸಮೀಕರಿಸಿದ ಸಂದರ್ಭ ಕಾಣಬಹುದು. ಇದು ವೈದಿಕದ ಪ್ರಭಾವವಾಗಿರಬಹುದು. ನೂಲಿಗೆ ಕರಿಬಣ್ಣ ಹಾಕುವ ನೀಲಗಾರ ಬಣಗಾರನಿಗಿಂತ ಶ್ರೇಣಿಯಲ್ಲಿ ಕೀಳೆಂದು ಪರಿಗಣಿಸಲಾಗಿದೆ. ಇವರಲ್ಲಿ ಊಟೋಪಚಾರ ನಡೆಯುತ್ತಿದೆ; ವಿವಾಹ ಸಂಬಂಧ ಏರ್ಪಡುವುದಿಲ್ಲ.

ಇಳಕಲ್ಲ ಸೀರೆಯ ಬಣ್ಣ ಗ್ಯಾರಂಟಿ ಎಂಬುದಕ್ಕೆ ಇಲ್ಲಿಯ ಹಳ್ಳದ ನೀರಿನಲ್ಲಿರುವ ಲವಣಾಂಶಗಳೆ ಕಾರಣವೆಂದು ಅನುಭವಿ ಬಣಗಾರರ ಅನಿಸಿಕೆಯಾಗಿದೆ. ಬಣ್ಣ ಹಾಕುವ ಕಾರ್ಯ ಒಂದುಕಾಲಕ್ಕೆ ವೃತ್ತಿ ಗೌಪ್ಯತೆ ಕಾಪಾಡಿಕೊಂಡಿತ್ತು. ಮಂತ್ರ, ಮಾಟ ಪೂಜೆಗಳಲ್ಲದೆ ಕೆಟ್ಟ ಕಣ್ಣುಗಳಿಂದ ರಕ್ಷಣೆ ಪಡೆಯುವ ತಂತ್ರ ಇಲ್ಲಿ ಬಳಕೆಯಲ್ಲಿತ್ತು. ಕ್ರಮೇಣ ಅಂತಹ ಮೂಢನಂಬಿಕೆಗಳನ್ನು ಈ ವೃತ್ತಿ ಕಳಚಿಕೊಂಡಿದೆ. ನೈಸರ್ಗಿಕ ವನಸ್ಪತಿಗಳ ಬೇರು, ಬೀಜ, ಕಾಂಡ, ತೊಗಟೆ, ತಪ್ಪಲುಗಳಿಂದ ವಿವಿಧ ಬಣ್ಣ ತಯಾರಿಸುವ ಬಣಗಾರರು (ಹಳೆಯ ಆಯುರ್ವೇದ ಪಂಡಿತರಂತೆ) ತಾವು ಬಳಸುವ ವನಸ್ಪತಿಗಳ ಹೆಸರು ಹೇಳಲೂ ಹಿಂಜರಿಯುತ್ತಿದ್ದರು. ವಿವಿಧ ಬಣ್ಣ ತಯಾರಿಕೆಯಲ್ಲಿ ಅಳ್ಳಿಕಾಯಿ ಬೀಜ, ಕಗ್ಗಲ ಬೀಜ, ಕಪೀಲಿ ಬೀಜ, ಮಡ್ಡಿಬೇರು, ವಿವಿಧ ಸಸ್ಯಗಳ ತಪ್ಪಲು, ತೊಗಟೆ ಹಾಗೂ ಸುಣ್ಣ ಅರಿಷಣ, ಕಿರಮಂಜ ಬಳಸುತ್ತಿದ್ದರಂತೆ. ಇಳಕಲ್ಲನ್ನು ಸುತ್ತುವರೆದ ಹಿರೇಹಳ್ಳಕ್ಕೆ ರ್ಮೂನಾಲ್ಕು ಕಿರಿ ಎರೆ ಹಳ್ಳಗಳು ಸಂಗಮಿಸುತ್ತವೆ. ಎರಿ (ಕಪ್ಪು) ಹಾಗೂ ಮಸಾರಿಭೂಮಿಯಿಂದ ಹರಿದು ಬರುವ ನೀರು ವಿಶೇಷ ಲವಣಾಂಶ ಪಡೆದುಕೊಂಡಿರಬಹುದು. ವೈಜ್ಞಾನಿಕ ವಿಶ್ಲೇಷಣೆಗೆ ಈ ಹಳ್ಳದ ನೀರನ್ನು ಒಳಪಡಿಸಿದ ತಜ್ಞರು ಪ್ಲೋರಾಯಿಡ್‌ ಪ್ರಮಾಣ ಈ ನೀರಿನಲ್ಲಿ ಹೆಚ್ಚು ಇದೆ ವಸಡು ಹಾಗೂ ಎಲುವಿನ ಕೀಲುಗಳಿಗೆ ಈ ನೀರು ಅಪಾಯಕಾರಿಯೆಂದು ಹೇಳುತ್ತಾರೆ. ಆದರೆ ನೂಲಿಗೆ ಬಣ್ಣ ಹಾಕಲು ಈ ನೀರು ಏಕೆ ಹೀಗೆ ಉಪಯುಕ್ತ ಎಂಬುದು ಇನ್ನೂ ವಿಶ್ಲೇಷಣೆಗೆ ಒಳಪಡಬೇಕಾಗಿದೆ. ಕನ್ನಡದ ಅಂಕಿಗಳನ್ನು ಸ್ವಾಭಿಮಾನದಿಂದ ಬಳಸುವ ಇಳಕಲ್ಲ ವ್ಯಾಪಾರಸ್ಥ ಗುರುನಾಥಪ್ಪ ನಾಗಲೋಟಿ ಹೇಳುವಂತೆ ಹಳ್ಳದ ನೀರು ಹಾಗೂ ವನಸ್ಪತಿ ಬಣ್ಣ ಬಳಸುವಾಗ ನೂಲಿನ ತಾಳಿಕೆ ಹೆಚ್ಚು ಇರುತ್ತಿತ್ತು. ರಾಸಾಯನಿಕ ಬಣ್ಣಗಳ ಪರಿಣಾಮದಿಂದ ನೂಲಿನ ಆಯುಷ್ಯ ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಆದರೆ ರಾಸಾಯನಿಕ ಬಣ್ಣ ಹೆಚ್ಚು ಆಕರ್ಷಕ ಹಾಗೂ ಮಿಶ್ರಣ ಮಾಡಲು ಸರಳ ಎಂದು ಹೇಳಲು ಮರೆಯುವುದಿಲ್ಲ. ಇಂದು ಸಂಪೂರ್ಣವಾಗಿ ರಾಸಾಯನಿಕ ಬಣ್ಣಗಳೆ ಈ ಉದ್ದಿಮೆಯಲ್ಲಿ ಬಳಕೆಯಾಗುತ್ತಿವೆ. ನೂಲಿಗೆ ಬಣ್ಣ ಹಾಕಿ ಒಣಗಿಸಿ ಕೊಡುವ ಬಣಗಾರನ ವೃತ್ತಿ ಆತಂಕಕಾರಿ. ಬಣ್ಣದ ವಾಸನೆ, ಅದರ ಕಾಕ, ವಿಷಪೂರಿತ ರಾಸಾಯನಿಕ ಬಣ್ಣಗಳ ಒಡನಾಟ ಅವನ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡುತ್ತವೆ. ಆತನ ಚರ್ಮ ವಿಕಾರವಾಗುವುದು ಸಾಮಾನ್ಯ.

ಇಲಕಲ್ಲ ಸಿರೆಯ ವಿಶಿಷ್ಟತೆ ಇರುವುದು ಇದರ ವಿನ್ಯಾಸದಲ್ಲಿ. ಸೀರೆಯ ಮುಖ್ಯ ಭಾಗಗಳೆಂದರೆ ಸೆರಗು, ದಡಿ, ವಡ್ಲ. ಕಾಲದಿಂದ ಕಾಲಕ್ಕೆ ಇವುಗಳಲ್ಲಿ ತೀವ್ರ ಬದಲಾವಣೇಗಳಾಗಿಲ್ಲ ಎಂದರೂ ಕ್ರಮೇಣ ಬದಲಾವಣೆಗಳು ಉಂಟಾಗಿವೆ. ಇಲಕಲ್ಲ ಸೀರೆಯ ವಿನ್ಯಾಸದಲ್ಲಿ ಬದಲಾವಣೆ ತಂದವರು-Textile Designing ಕ್ಷೇತ್ರದ ಪದವೀಧರರಲ್ಲ ಅಥವಾ ತಾವು ಶೋಧಿಸಿದ ವಿನ್ಯಾಸದ ಮೇಲೆ ಪೇಟೆಂಟ ಹಕ್ಕನ್ನು ಸ್ಥಾಪಿಸಿಕೊಂಡವರಲ್ಲ. ಹೊಟ್ಟೆಪಾಡಿಗಾಗಿ ಈ ವೃತ್ತಿಯಲ್ಲಿ ತೊಡಗಿಕೊಂಡವರು. ಪ್ರಯೋಗಶೀಲ ಮನಸ್ಸಿನ ನೇಕಾರರು ನೂಲಿನ ಗಾತ್ರ, ಪ್ರಮಾಣ ಹಾಗೂ ಬಣ್ಣಗಳ ಹೊಂದಾಣಿಕೆಯಲ್ಲಿ ಬದಲಾವಣೆ ತಂದು ಸೀರೆಗಳು ಜನಾಕರ್ಷಕವಾಗುವ ರೀತಿಯಲ್ಲಿ ರೂಪಿಸಿದ್ದಾರೆ. ಸೃಜನಶೀಲತೆ ಕೇವಲ ಸಾಹಿತಿ, ಕಲಾವಿದರ ಗುತ್ತಿಗೆಯಲ್ಲ. ಅರ್ಧ ದೇಹವನ್ನು ಮಗ್ಗದ ಕುಣಿಯಲ್ಲಿ ಇಳಿಬಿಟ್ಟ ನೇಕಾರನೂ ಒಂದು ರೀತಿಯಿಂದ ಸೃಜಶೀಲನೇ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.

ಅವಶ್ಯಕತೆ ಸಂಶೋಧನೆಗೆ ದಾರಿ ಎಂದು ಹೇಳುತ್ತಾರೆ. ಆದರೆ ಮಹತ್ವಾಕಾಂಕ್ಷಿತನವು ಹೊಸದನ್ನು ಹುಟ್ಟು ಹಾಕಬಲ್ಲದು ಎಂಬುದಕ್ಕೆ ಅನೇಕ ನೇಕಾರರು ಉದಾಹರಣೆಯಾಗಿದ್ದಾರೆ. ಹುನಗುಂದ ತಾಲೂಕಿನ ಅಮೀನಗಡದ ನೇಕಾರ ಮಲಕಪ್ಪ ಮುಸರಿ ಜೀವಂತ ಸಾಕ್ಷಿಯಾಗಿದ್ದಾನೆ. ಕಣ್ಣಲ್ಲಿ ಕಣ್ಣಿಟ್ಟು ಲಾಳಿ ಓಡಿಸುವುದೇ ಸೂಕ್ಷ್ಮ ಕೆಲಸ. ಅಂತಹದ್ದರಲ್ಲಿ ಸೀರೆಯ ಸೆರಗಿನಲ್ಲಿ ಮಹಾತ್ಮ ಗಾಂಧೀಜಿ ಭುವನೇಶ್ವರಿ, ಭಾರತ, ಕರ್ನಾಟಕ, ಬಾಗಲಕೋಟೆ ಜಿಲ್ಲೆಯ ನಕಾಶೆ ನೇಯ್ದು ಅದರಲ್ಲಿ ಚುಕ್ಕೆಗಳಿಂದ ಹುನಗುಂದ ತಾಲೂಕ ಹಾಗೂ ಅಮೀನಗಡ ಗ್ರಾಮ ಗುರುತಿಸುವುದು ಎಷ್ಟು ಕಷ್ಟಕರ ಎಂಬುದನ್ನು ಊಹಿಸಬಹುದು. ಸ್ವಾತಂತ್ಯ್ರ ಸುವರ್ಣ ಮಹೋತ್ಸವದ ನೆನಪಿಗೆ ಒಬ್ಬ ಬಡನೇಕಾರ ತನ್ನ ಭಾವಸ್ಪಂದನೆಗಳನ್ನು ತನ್ನ ವೃತ್ತಿಯಲ್ಲಿ ಕಲೆಯಾಗಿ ಮೂಡಿಸಿದ್ದಾನೆ. ಚಿತ್ರ, ರಂಗೋಲಿ, ಕಸೂತಿ ಹಾಕಲು ಸಿದ್ಧ ಮಾದರಿ ಇರುತ್ತದೆ. ಆದರೆ ಸೀರೆಯ ನೇಯ್ಗೆಯಲ್ಲಿ ಚಿತ್ರ ಬಿಡಿಸುವುದೆಂದರೆ ಅದರ ಕ್ಲಿಷ್ಟತೆ ಊಹಿಸಬಹುದು. ನೇಕಾರನ ಕಲ್ಪನೆಯೇ ಇಲ್ಲಿ ಸಾಕಾರಗೊಳ್ಳಬೇಕಾಗುತ್ತದೆ.

ಈ ಶತಮಾನದ ಪ್ರಾರಂಭದಲ್ಲಿ ಗಚ್ಚಿ ದಡಿ ಸೀರೆಗಳು ಹೆಚ್ಚು ಚಲಾವಣೆಯಲ್ಲಿದ್ದವು. ಅದರ ಬದಲಾಗಿ ಈಗ ಗೋಮಿ ದಡಿ ಸೀರೆ ಹೆಚ್ಚು ಜನಪ್ರಿಯವಾಗಿದೆ. ಗೋಧಿಕಾಳುಗಳನ್ನು ಸಾಲಾಗಿ ಜೋಡಿಸಿಟ್ಟ ವಿನ್ಯಾಸ ಇಲ್ಲಿ ಕಾಣಬಹುದು. ಗೋಮಿ ದಡಿಯೆ ಇಲಕಲ್ಲ ದಡಿ ಎಂದು ಈಗ ಜನಪ್ರಿಯವಾಗಿದೆ. ಈ ಹೊಸತನ ರೂಪಿಸಿದವರು ಇಲಕಲ್ಲಿನ ರಾಜಪ್ಪ ದೋತ್ರೆ ಎಂದು ಹೇಳುತ್ತಾರೆ. ಈ ದಡಿಯ ಜೊತೆಗೆ ಸೀರೆಯ ವಡ್ಲದಲ್ಲಿ ಕಡ್ಡಿ, ದಪ್ಪಳ, ರಾಗಾವಳಿ, ಚಂದ್ರಕಾಳಿ ಮುಂತಾದ ನಮೂನೆಗಳು ರೂಪುಗೊಂಡವು. ಕ್ರಮೇಣ ಸಾದಾ ಸೆರಗಿನ ಬದಲು ತೋಪುತೆನಿ (ಬುಗಡಿ) ತಿರುವಿದ ಸೆರಗುಗಳು ಹುಟ್ಟಿಕೊಂಡವು. ಈ ಸೆರಗು ಅತ್ಯಂತ ಕಲಾತ್ಮಕ ಹಾಗೂ ಆಕರ್ಷಕವಾಗಿರುತ್ತದೆ. ಇದರಲ್ಲಿ ಬಣ್ಣದ ಹೊಂದಾಣಿಕೆ ಕವಿಯ ಕಲ್ಪನೆಗೂ ಮೀರಿದ್ದು. ಕಸೂತಿ ಕುಸುರಿನ ನೈಪುಣ್ಯತೆ ಇದು ಹೊಂದಿರುತ್ತದೆ. ಮೂರು ಲಾಳಿಗಳನ್ನು ಬಳಸಿ ಇಬ್ಬರು ಒಟ್ಟಿಗೆ ಇದನ್ನು ನೇಯುತ್ತಾರಂತೆ. ತೋಪತೆನಿ ಸೆರಗು ‘ಇಲಕಲ್ಲ ಸೆರಗು’ ಎಂದೇ ಇಂದು ಮಾರುಕಟ್ಟೆಯಲ್ಲಿ ಖ್ಯಾತವಾಗಿದೆ. ಬೇರೆ ಪ್ರದೇಶದ ವ್ಯಾಪಾರಸ್ಥರು ಇಲಕಲ್ಲ ಸೆರಗು ಎಂದು ಹೇಳಿ ನಕಲಿ ಮಾಲು ಮಾರುವುದರ ಬಗ್ಗೆ ಇಲಕಲ್ಲ ವ್ಯಾಪಾರಸ್ಥರಿಗೆ ರೋಷಿ ಇದೆ. ಆದರೆ ಈ ರೋಷ ನೇಕಾರರಿಗೆ ಇಲ್ಲ. ಬಹುಶಃ ವ್ಯಾಪಾರಸ್ಥ ಲಾಭಕ್ಕೆ ಗಮನಹರಿಸುವುದು, ನೇಕಾರ ಹೊಟ್ಟೆಪಾಡಿಗೆ ಪರಿತಪಿಸುವುದು ಇದಕ್ಕೆ ಕಾರಣವಾಗಿರಬಹುದು.

ಸೀರೆಗಳ ವಿನ್ಯಾಸದಲ್ಲಿ ಆವಿಷ್ಕಾರ ಮಾಡಲು ಯತ್ನಿಸಿ ಕೈ ಸುಟ್ಟುಕೊಂಡ ಉದಾಹರಣೆಗಳೂ ಇವೆ. ನಾಗಮುರಿಗೆ ಸೆರಗು, ಸಾಟಿನ ದಡಿ ಪರಿಚಯಿಸಿದಾಗ ಅವುಗಳಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದರಲಿಲ್ಲ. ಇಂತಹ ಬದಲಾವಣೆ ತಂದ ಕೆಲವು ಉದ್ದಿಮೆದಾರರು ದಿವಾಳಿ ತೆಗೆದ ಉದಾಹರಣೆಗಳು ಇವೆ. ಕ್ರಮೇಣ ಇವುಗಳಲ್ಲಿ ಚಿಕ್ಕ ಪರಾಸ, ಪ್ಲೇನ್‌, ಚೆಕ್ಕ್, ಕಡ್ಡಿ (ಎಳ್ಳು ಹೂ, ಪಂಚರಂಗಿ), ರಾಗಾವಳಿ, ಗಟ್ಟಿ ದಡಿ, ಗಾಡಿ ದಡಿ, ರೂಫಿಲ್‌ (ಗಾಯತ್ರಿ), ದೊಡ್ಡ ದಡಿ, ರುದ್ರಾಕ್ಷಿ ದಡಿ, ಗೊಡ್ಡ ಪರಾಸ, ರಾಸ್ತಾ ಕರಿ, ಕೊಂಡಿ ಚಿಕ್ಕಿ, ಪರಾಸ ಪೇಟ, ಬುಗಡಿ ಪರಾಸ ಪೇಟ, ಜರಿ ದಡಿ, ಷರ್ಟಿಂಗ್‌, ಚಂದ್ರಕಾಳಿ, ಮದೂಪ ಕಡ್ಡಿ, ಚೌಕಾನಿ (ಪುತಳಿ), ಪುಟಾಣೆ, ಜಬ್ಬರ, ರಾಸ್ತಾ ಮುಂತಾದ ವಿನ್ಯಾಸದ ಸೀರೆಗಳು ಮಾರುಕಟ್ಟೆಗೆ ಬಂದವು. ದಡಿ, ಸೆರಗು, ವಡ್ಲಗಳನ್ನು ವಿದ್ಯುತ್‌ ಮಗ್ಗಗಳಲ್ಲಿ ಬೇಗನೇ ಬದಲಿಸುವ ಅವಕಾಶ ಇದೆ. ಆದರೆ ಕೈ ಮಗ್ಗಗಳಲ್ಲಿ ಈ ಅವಕಾಶ ಕಡಿಮೆ. ಪ್ಲಾಸ್ಟಿಕ್‌ ಜರಿ ಹಾಗೂ ಚಮಕ ಬಳಕೆಗೆ ಬಂದ ಮೇಲೆ ಮಾರುಕಟ್ಟೆಯಲ್ಲಿ ಸೀರೆಗಳು ಹೆಚ್ಚು ಆಕರ್ಷಣೀಯವಾಗಿವೆ. ಆದರೆ ಇವುಗಳ ತಾಳಿಕೆ ಹಾಗೂ ಗುಣಮಟ್ಟದ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ‘ದಟ್ಟಿ’ ಎಂಬ ಬಾಲಿಕೆಯರು ಉಡುವ ಸೀರೆ ಈಗ ಮಾಯವಾಗಿದೆ. ಬಾಲಿಕೆ ಋತುಮತಿಯಾದಾಗ ದಟ್ಟಿ ಉಡಿಸಿದೆವು ಎಂದರೆ ಕನ್ಯಾ ನಿಶ್ಚಯವಾಯಿತು ಎಂದು ಅರ್ಥ. ಮಹಾರಾಷ್ಟ್ರದ ತಮಾಶಾ ಜಾನಪದರು ತಮ್ಮ ಬಾಳೆ ದಿಂಡಿನಂತಹ ದೇಹ ಸಿರಿಯಲ್ಲಿ ಇಲಕಲ್ಲ ಸೀರೆಯ ಸೆರಗಿನ ಚುಂಗನ್ನು ಎರಡೂ ಕೈಗಳಿಂದ ಎತ್ತಿ ನರ್ತಿಸುವಾಗ ಅರಸಿಕನೂ ಕಲಾರಾಧಕನಾಗಿ ಬಿಡುತ್ತಾನೆ. ಇಳಕಲ್ಲ ಸೀರೆಯ ಸೊಗಸನ್ನು ವಿಕ್ರಮ ವಿಸಾಜಿಯವರ ‘ತಮಾಷಾ’ ಕವನದಲ್ಲಿ ಕಾಣಬಹುದು.

“ದುಂಡನೆಯ ಮೂಗತಿ (ಇಳಕಲ್ಲ) ಸೀರೆಯ ಕಚ್ಚಿ….. ಎದೆಯೊಳಗೆಲ್ಲ ಮಿಡಿನಾಗರಗಳಾಗಿ ಹರಿದಾಡಿ ಯೌವ್ವನದ ಹುಚ್ಚಿಗೆ ಮತ್ತಷ್ಟು ಕಿಚ್ಚಿಡುತ್ತವೆ” (ಇಳಕಲ್ಲ ಶಬ್ದ ಜೋಡಿಸಿದೆ)

ಈಗಾಗಲೇ ಹೇಳಿದಂತೆ ಕೃಷಿಯಿಂದ ಹತ್ತಿ ಉತ್ಪಾದನೆಯಾಗುತ್ತದೆ. ಈಗ ವಿವಿಧ ನಂಬರಿನ ನೂಲು ಗಿರಣಿಯಿಂದಲೇ ಸಿದ್ಧವಾಗುತ್ತದೆ. ಉದ್ದಿಮೆದಾರರು ನೂಲು, ರೇಷ್ಮೆ, ಚಮಕಾಗಳನ್ನು ವಿಶಾಲ ಮಾರುಕಟ್ಟೆಯಲ್ಲಿ ಖರೀದಿಸುತ್ತಾರೆ. ನೂಲಿಗೆ ಬಣ್ಣ ಹಾಕುವುದು ಮೊದಲ ಹಂತದ ಕೆಲಸ. ಬಣ್ಣದ ಮನೆಗೆ ‘ಕೇಲ’ ಮನೆ ಎಂದು ಕರೆಯುತ್ತಾರೆ. ಕ್ರೈಸ್ತರ ಶಿಲುಬೆ ಆಕಾರದ ಕಟ್ಟಿಗೆಯನ್ನು ನೆಲದಲ್ಲಿ ಹೂತಿರುತ್ತಾರೆ. ಮಣ್ಣಿನ ಬಾನಿ (ಗ್ವಾಲ್ಮಿ)ಯಲ್ಲಿ ಬಣ್ಣ ಎದ್ದಿ, ಬಣ್ಣ ಜಾಡಿಸುವ ಸಾಧನದಿಂದ ಲಡಿಯಲ್ಲಿಯ ಬಣ್ಣದ ನೀರಿನ ಅಂಶವನ್ನು ಹಿಂಡುತ್ತಾರೆ. ಮತ್ತೆ ಮುಂಗೈಗೆ ಹಾಕಿಕೊಂಡು ಲಡಿಯನ್ನು ಎಳೆಎಳೆಯಾಗಿ ಬಿಡಿಸ ಒಣಗಿಸುತ್ತಾರೆ. ಒಂದು ಕಿಲೊ ನೂಲಿಗೆ ಬಣ್ಣ ಹಾಕಲು ಸುಮಾರು ರೂ. ೨೦ ಮಜೂರಿ ಇದೆ. ರೇಷ್ಮೆ ಹಾಗೂ ಚಮಕಾಗಳಿಗೆ ಅನುಕ್ರಮವಾಗಿ ರೂ. ೫೦ ಹಾಗೂ ರೂ. ೧೫ ಇದೆ. ಬಣ್ಣ ಪಡೆದುಕೊಂಡು ಎಳೆಗಳನ್ನು ತೋಡುವ, ಹಾಸು ಹೊಯ್ಯುವ, ಕೆಚ್ಚುವ, ಕಾಂಡಕಿ ಲಾಳಿ ಸುತ್ತುವ, ಮಗ್ಗಕ್ಕೆ ಏರಿಸಿ ನೇಯುವ ಕೆಲಸಗಳು ಜರಗುತ್ತವೆ. ನೂಲು ತೋಡುವುದಕ್ಕೆ ಈಗ ವೈಂಡರ ಎಂಬ ಹೊಸ ಸಾಧನ ಬಂದಿದೆ. ಮೊದಲು ರಾಟ್ಯಾಳಕ್ಕೆ ತೊಡೆಯ ಮೇಲಿಟ್ಟು ನೂಲು ತೊಡುತ್ತಿದ್ದರು. ತೊಡೆಯ ಚರ್ಮ ಸುಕ್ಕುಗಟ್ಟಿ ಕಲೆ ಬೀಳುತ್ತಿತ್ತು. ನೂಲು ತೋಡುವ ಕೆಲಸವನ್ನು ಬೇರೆ ಶ್ರಮ ನಿರ್ವಹಿಸಲಾರದ ಮುದುಕರು ಅಥವ ಬಾಲಕರು ಜರುಗಿಸುವ ಸಾಧ್ಯತೆ ಹೆಚ್ಚು. ಚಮಕಾ ಹಾಗೂ ರೇಷ್ಮೆ ತೋಡಲು ಹಾಗೂ ಟಾಣ ಹಾಕಲು ೧೦೦ಗ್ರಾಂಗೆ ರೂ. ೧೦ ಮಜೂರಿ ಇದೆ. ಟಾಣ ಹಾಕುವದು ಹೆಚ್ಚು ನೈಪುಣ್ಯತೆ ಅಪೇಕ್ಷಿಸುವ ಕೆಲಸವಾಗಿರಬಹುದು. ಏಕೆಂದರೆ ಹಿರಿಯ ನೇಕಾರರು ‘ಈಗಿನವರಿಗೆ ಸರಿಯಾಗಿ ಟಾಣ ಹಾಕಲು, ಕೊಯ್ಯಲು ಬರುವುದಿಲ್ಲ’ ಎಂದು ಮಾತಿಗೊಮ್ಮೆ ಹಂಗಿಸುತ್ತಾರೆ. ರೇಷ್ಮೆ ಹಾಗೂ ಚಮಕಾ ಕೆಚ್ಚುವ ಕೆಲಸಕ್ಕೆ ೧೦೦ಗ್ರಾಂಗೆ ಅನುಕ್ರಮವಾಗಿ ರೂ. ೧೫ ಹಾಗೂ ರೂ. ೧೦ ಇದೆ. ಕೆಚ್ಚುವ ಕೆಲಸವನ್ನು ಹೆಚ್ಚಾಗಿ ಮಹಿಳೆಯರೇ ನಿರ್ವಹಿಸುತ್ತಾರೆ. ಹಾಸು ಹಾಕುವಲ್ಲಿ ಎರಡು ವಿಧಗಳಿವೆ. ಉದಾಹರಣೆಯಾಗಿ ಗೋಡಿಹರಿ ಹಾಗು ಕೈಹರಿ, ಇದಕ್ಕೆ ಡೋಲಿ ಮಾಡುವದೆಂದು ಕರೆಯುತ್ತಾರೆ. ಆರುವಾರ ಎಂಟುವಾರ, ಸೀರೆಗಳನ್ನು ನೇಯಲು ಬೇರೆ ಬೇರೆ ಮಜೂರಿಗಳಿವೆ. ಒಂದು ದಿನದಲ್ಲಿ ಚಮಕಾ ಸೀರೆ ನೇಯಬಹುದು. ರೇಷ್ಮೆಗೆ ಎರಡು ಮೂರು ದಿನಗಳು ಬೇಕಾಗುತ್ತವೆ. ಚಮಕಾ ಸೀರೆಯ ಮಜೂರಿ ರೂ. ೩೦ ರಿಂದ ರೂ. ೫೦ ಇದ್ದರೆ, ರೇಷ್ಮೆಗೆ ರೂ. ೫೦ ರಿಂದ ರೂ. ೯೦ ಇದೆ. ಸೀರೆಯ ಉದ್ದ ಹಾಗೂ ವಿನ್ಯಾಸದ ಮೇಲೆ ಮಜೂರಿಯಲ್ಲಿ ವ್ಯತ್ಯಾಸವಾಗಬಹುದು. ಒಟ್ಟಿಗೆ ಒಬ್ಬ ನೇಕಾರ ಈಗ ದಿನಕ್ಕೆ ರೂ. ೫೦ ದುಡಿಯುವ ಸಾಧ್ಯತೆ ಇದೆ.

ಸೀರೆಗಳ ಅಂದವನ್ನು ಹೆಚ್ಚಿಸಲು ಸೆರಗಿಗೆ ಗೊಂಡೆ ಕಟ್ಟುವ ಹಾಗೂ ಕಸೂತಿ ಹಾಕುವ ಕೆಲಸಗಳು ಇವೆ. ಸೆರಗಿನಲ್ಲಿ ಕೊನೆಗೆ ಇರುವ (ಕರಿ) ಎಳೆಗಳನ್ನು ಕ್ರಾಸ್‌ ಮೇಲೆ ಕಟ್ಟುವುದಕ್ಕೆ ಗೊಂಡೆ ಕಟ್ಟುವುದು ಎಂದು ಹೇಳುತ್ತಾರೆ. ಚಮಕಾ ಸೀರೆಗಳಿಗೆ ಎರಡು ಕ್ರಾಸ್‌ ಗಂಟು ಹಾಕಿದರೆ ರೂ ೧; ರೇಷ್ಮೆ ಸೀರೆಗೆ ಒಂದು ಕ್ರಾಸ್‌ ಗಂಟಿಗೆ ರೂ ೧ ಕೂಲಿ ಇದೆ. ಸೆರಗಿನ ಅಗಲದ ಆಧಾರದ ಮೇಲೆ ಗಂಟುಗಳ ಪ್ರಮಾಣ ಇರುತ್ತದೆ. ಹೆಣ್ಣುಮಕ್ಕಳು ಗೊಂಡೆ ಕಟ್ಟುವ ಕೆಲಸದಲ್ಲಿ ದಿನಕ್ಕೆ ರೂ. ೨೦ ರಿಂದ ರೂ. ೨೫ ಸರಳವಾಗಿ ಗಳಿಸುತ್ತಾರೆ. ರೇಷ್ಮೆ ಸೀರೆಗೆ ವಿಶೇಷ ಕಸೂತಿ ಹಾಕಿಸುತ್ತಾರೆ. ಇದರ ಕೂಲಿ ದರ ವಿಚಿತ್ರವಾಗಿದೆ. ಸೂಜಿಯಲ್ಲಿರುವ ದಾರವನ್ನು ಒಮ್ಮೆ ಚುಚ್ಚಿ ಮೇಲೆಳೆದರೆ ಒಂದು ಪೈಸೆ ಮಜೂರಿ. ಕಸೂತಿಯ ವಿನ್ಯಾಸದ ಮೇಲೆ ಇದರ ದರ ಅವಲಂಬನೆ ಆಗುತ್ತದೆ.

ಸಿದ್ಧವಾದ ಸೀರೆಗಳನ್ನು ಮಾರುವ ವ್ಯಾಪಾರಸ್ಥ ವರ್ಷದಲ್ಲಿ ಎರಡು ಕಾಲ ಗುರುತಿಸಿಕೊಂಡಿದ್ದಾನೆ. ಒಂದು ಸೀಸನ್‌ ಇನ್ನೊಂದು ಬಿನ್‌ ಸೀಸನ್‌ ಕಾಲ. ಜೇಷ್ಠ, ಆಷಾಢ ಶ್ರಾವಣ, ಭಾದ್ರಪದ ಮಾಸಗಳು ಬಿನ್‌ ಸೀಸನ್‌ಗಳಾಗಿದ್ದರೆ, ಕಾರ್ತೀಕ ಮಾಸದ ನಂತರ ಸೀಸನ್‌ ಪ್ರಾರಂಭವಾಗುತ್ತದೆ. ಮೊದಮೊದಲು ಇಡೀ ವರ್ಷ ಸೀರೆಗಳನ್ನು ನೇಯಿಸಿ ಸಂಗ್ರಹಿಸಿ ವರ್ಷದಲ್ಲಿ ಮೂರು ತಿಂಗಳು ಮಾತ್ರ ವ್ಯಾಪಾರ ಮಾಡುವ ಕಾಲ ಇತ್ತು. ಈಗ ವರ್ಷದುದ್ದಕ್ಕೂ ಹೆಚ್ಚು ಕಡಿಮೆ ವ್ಯಾಪಾರ ಜರುಗುತ್ತಲೆ ಇರುತ್ತದೆ ಎಂದು ಕೆಲವರು ಹೇಳುತ್ತಾರೆ. ಇಲಕಲ್ಲ ಸೀರೆ ಉದ್ಯಮದಲ್ಲಿ ಬಿಳೆ ಕುದರಿ, ಧೋತ್ರೆ, ಗುಳೇದದಟ್ಟಿ, ಕಾಳಗಿ, ಸಪ್ಪರದ ಮನೆತನಗಳು ಒಂದು ಕಾಲಕ್ಕೆ ಪ್ರಸಿದ್ಧವಾಗಿದ್ದವು ಎಂದು ಹೇಳುತ್ತಾರೆ. ಇತ್ತೀಚೆಗೆ ಮಾರ್ವಾಡಿಗಳು ಈ ಉದ್ಯಮದಲ್ಲಿ ಪ್ರವೇಶ ಪಡೆದಿದ್ದಾರೆ. ಉದ್ಯಮಶೀಲರಾದ ಇವರು ತೇಜಿ ಮಂದಿ ಮಾಡುವುದರಲ್ಲಿ ನಿಪುಣರೆಂದು ಹಾಗೂ ವಲಸೆ ಪ್ರಿಯರೆಂಬ ಖ್ಯಾತಿ ಇದೆ. “ಚಕ್ಕಡಿ ಹೋಗದ ಜಾಗದಲ್ಲಿ ಮಾರ್ವಾಡಿ ಹೋಗಿರುತ್ತಾನೆ” ಎಂಬ ಗಾದೆ ಇದೆ. ಆದರೆ ಮಾರ್ವಾಡಿಗಳು ಸೀರೆಯ ಉತ್ಪಾದನೆಯಲ್ಲಿ ತೊಡಗಿದ್ದು ಕಡಿಮೆ. ಅದರ ವ್ಯಾಪಾರದಲ್ಲಿ ತೊಡಗಿದ್ದಾರೆ. ಇಲಕಲ್ಲ ಸೀರೆ ‘ದೇಶಿ’ ಪರಂಪರೆಯ ಸಂಕೇತವಾಗಿ ಒಂದು ಮನೆತನದ ನೆನಪುಗಳ ಖಜಾನೆಯಾಗಿ ಉಳಿಯುತ್ತದೆ. ಏಕೆಂದರೆ ಹಳೆಯ ಬಣ್ಣ ಮಾಸದ ಸೀರೆ, ಕುಲಾಯಿ, ಕುಂಚಿಗೆ, ಕೌದಿಯಾಗಿ ರೂಪಾಂತರ ಪಡೆಯುತ್ತದೆ.

ಸೀರೆ ಉತ್ಪಾದಿಸುವ ಕ್ರಮದಲ್ಲಿ ನಾಲ್ಕು ಪದ್ಧತಿಗಳಿವೆ. ಮುಂಗಡ, ಸಟ್ಟಾ, ರೋಖಡಾ ಹಾಗೂ ಕೂಲಿ. ಮುಂಗಡ ಎಂದರೆ ನೇಕಾರ ಹತ್ತು ಸೀರೆಗೆ ಬೇಕಾಗುವ ಕಚ್ಚಾ ಮಾಲನ್ನು (ಬಣ್ಣಾ ಹಾಕಿದ ನೂಲು, ರೇಷ್ಮೆ, ಚಮಕಾ ಇತ್ಯಾದಿ) ಹಾಗೂ ಖರ್ಚು ಒಯ್ಯುತ್ತಾನೆ. ನೂಲನ್ನು ಸೀರೆಯಾಗಿ ರೂಪಾಂತರಿಸಿ ಮುಂಗಡ ಕೊಟ್ಟ ಉದ್ದಿಮೆದಾರನಿಗೆ ಮರಳಿಸಿ ತನ್ನ ಮಜೂರಿ ಪಡೆಯುತ್ತಾನೆ. ಹತ್ತು ಸೀರೆಯ ಮುಂಗಡದಲ್ಲಿ ಹನ್ನೊಂದು ಸೀರೆಯಾಗುವ ಕಚ್ಚಾ ನೂಲು ಇರುತ್ತದೆ. ಈ ಹನ್ನೊಂದನೆಯ ಸೀರೆ ನೇಕಾರನಿಗೆ ಬೋನಸ್‌ ಅಥವ ಪ್ರೋತ್ಸಾಹಧನವಾಗುತ್ತದೆ. ಸಟ್ಟಾ ಎಂದರೆ ಮಾರುಕಟ್ಟೆಯ ಪ್ರಚಲಿತ ದರದಲ್ಲಿ ನೇಕಾರ ಉದ್ದಿಮೆದಾರನಿಂದ ಕಚ್ಚಾ ಮಾಲು ಪಡೆಯುತ್ತಾನೆ. ಸೀರೆ ಸಿದ್ಧವಾದ ಮೇಲೆ ಪ್ರಚಲಿತ ದರದಲ್ಲಿ ಉದ್ದಿಮೆದಾರನಿಗೆ ಸೀರೆ ಮಾರುತ್ತಾನೆ. ಇದು ಒಂದು ರೀತಿ ಜೂಜಾಟ ಇದ್ದಂತೆ. ಮಾರುಕಟ್ಟೆಯ ಏರಿಳಿತ ಒಮ್ಮೆಮ್ಮೆ ಬಡನೇಕಾರನ ಬೆನ್ನೆಲುಬನ್ನೇ ಮುರಿಯುತ್ತದೆ. ರೋಖಡಾ ನೇಕಾರ ತನಗೆ ಬೇಕಾಗುವ ಕಚ್ಚಾ ಮಾಲನ್ನು ಎಲ್ಲಿಯಾದರೂ ಕೊಳ್ಳಬಹುದು. ಸಿದ್ಧವಾದ ಸೀರೆಗಳನ್ನು ಎಲ್ಲಿಯಾದರೂ ಮಾರಬಹುದು. ಕೂಲಿ ಪದ್ಧತಿ ಎಂದರೆ ಉದ್ದಿಮೆದಾರ ಹತ್ತೆಂಟು ಮಗ್ಗ ಹೊಂದಿರುತ್ತಾನೆ; ನೇಕಾರ ಅಲ್ಲಿಗೆ ಹೋಗಿ ತನ್ನ ಶ್ರಮ ಪೂರೈಸಿ ಮಜೂರಿ ಪಡೆಯುತ್ತಾನೆ. ಕೂಲಿ ಪದ್ಧತಿಯಲ್ಲಿ ವ್ಯಕ್ತಿ ಸ್ವಾತಂತ್ಯ್ರ ಇದೆ ಎಂದು ಹೇಳಬಹುದು. ಆದರೆ ಬಡತನವನ್ನು ಬೆನ್ನಿಗೆ ಕಟ್ಟಿಕೊಂಡ ನೇಕಾರ ಯಾವಾಗಲೂ ಸಾಲದ ಶೂಲದಲ್ಲಿರುತ್ತಾನೆ. ಕಾಲಾನುಕ್ರಮದಲ್ಲಿ ಕೂಲಿ ಪದ್ಧತಿ ಜೀತದ ರೂಪತಾಳುವ ಸಾಧ್ಯತೆ ಇದೆ. ಸಣ್ಣ ಉದ್ದಿಮೆದಾರನೂ ಇಲ್ಲಿ ‘ಧನಿ’ ಸಂಸ್ಕೃತಿಗೆ ಅಂಕುರ ಹಾಕುತ್ತಾನೆ.

ಇಲಕಲ್ಲ ಸೀರೆಯ ಉತ್ಪಾದನೆ ಗೃಹ ಕೈಗಾರಿಕೆಯಾಗಿರುವುದರಿಂದ ಹೆಚ್ಚು ಮಾನವಶ್ರಮ ಅಪೇಕ್ಷಿಸುತ್ತದೆ. ಅಲ್ಲದೆ ಇದು ಮನೆಮಂದಿಗೆಲ್ಲ ಕೆಲಸ ಒದಗಿಸುತ್ತದೆ. ಈ ವೃತ್ತಿಯಲ್ಲಿ ತೊಡಗಿದ ಕುಟುಂಬದಲ್ಲಿ ನಿತ್ಯವು ಹಣದ ಚಲಾವಣೆ ಇರುತ್ತದೆ. ಹೀಗಾಗಿ ನೇಕಾರ ನಿತ್ಯವೂ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯುವ ಅವಕಾಶ ಪಡೆದಿದ್ದಾನೆ. ಆದ್ದರಿಂದಲೆ ಹೆಚ್ಚು ನೇಕಾರಿಕೆ ಇದ್ದ ಪ್ರದೇಶದಲ್ಲಿ ನಿತ್ಯ ಉಪಭೋಗದ ವಸ್ತುಗಳ ಮಾರುಕಟ್ಟೆ ಹೆಚ್ಚು ಬೆಳೆಯುವ ಸಾಧ್ಯತೆ ಇದೆ.

ಉಲ್ಲೇಖಗಳು

[ಬದಲಾಯಿಸಿ]
  1. K'taka gets highest number of GI tags