ವಿಷಯಕ್ಕೆ ಹೋಗು

ಇಮ್ಮಡಿ ತೆರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೆರಿಗೆ ಒಪ್ಪಂದ

ಇಮ್ಮಡಿ ತೆರಿಗೆ ಒಂದು ಹಣಕಾಸಿನ ಅವಧಿಯಲ್ಲಿ ಒಂದೇ ಮೂಲದ ಮೇಲೆ ಎರಡು ತೆರಿಗೆಗಳ ಲೆಕ್ಕಾಚಾರ, ವಿಧಾಯಕ ಹಾಗು ವಸೂಲಿ (ಡಬಲ್ ಟ್ಯಾಕ್ಸೇಷನ್). ಅಧಿಕಾರ ವ್ಯಾಪ್ತಿಯುಳ್ಳ ಎರಡು ನಿಯೋಜಿತಾಧಿಕಾರಗಳು ಪರಸ್ಪರವಾಗಿ ಸ್ಪರ್ಧಿಸಿ ಒಂದೇ ಮೂಲದ ಮೇಲೆ ತೆರಿಗೆ ವಿಧಿಸಬಹುದು; ಅಥವಾ ಒಂದೇ ನಿಯೋಜಿತಾಧಿಕಾರ ಒಂದೇ ಮೂಲದ ಮೇಲೆ ಎರಡು ಬಾರಿ ತೆರಿಗೆ ವಿಧಿಸಬಹುದು. ಆದಾಯದ ಮೇಲೂ ಆದಾಯ ಸಂಪಾದನೆಗಾಗಿ ಮಾಡಿದ ಖರ್ಚಿನ ಮೇಲೂ ಸರ್ಕಾರ ತೆರಿಗೆ ವಿಧಿಸಿದರೆ ಆಗ ಒಂದೇ ತೆರಿಗೆಯ ಮೂಲ ಒಂದೇ ನಿಯೋಜಿತಾಧಿಕಾರದಿಂದ ಎರಡು ಸಲ ತೆರಿಗೆಗೆ ಒಳಪಟ್ಟು ಅದು ಇಮ್ಮಡಿ ತೆರಿಗೆಯೆನಿಸುತ್ತದೆ. ಒಬ್ಬ ವ್ಯಕ್ತಿಯ ಆದಾಯದ ಮೇಲೆ ಅದನ್ನು ಸಂಪಾದಿಸಿದ ದೇಶದಲ್ಲೂ ಮತ್ತೆ ಆತ ವಾಸಿಸುವ ದೇಶದಲ್ಲೂ ತೆರಿಗೆ ವಿಧಿಸಿದರೆ ಆಗ ಅದು ಎರಡು ನಿಯೋಜಿತಾಧಿಕಾರಗಳು ವಿಧಿಸಿದ ಇಮ್ಮಡಿ ತೆರಿಗೆಯಾಗುತ್ತದೆ. ಒಬ್ಬ ತನ್ನ ಆದಾಯವನ್ನು ಭಾರತದಲ್ಲಿ ಪಡೆಯಬಹುದು. ಆದರೆ ಆತ ಅಮೆರಿಕದಲ್ಲಿ ವಾಸಿಸುತ್ತಿರಬಹುದು. ಆಗ ಭಾರತ ಮತ್ತು ಅಮೆರಿಕ ದೇಶಗಳೆರಡು ಆ ಆದಾಯದ ಮೇಲೆ ತೆರಿಗೆ ಹಾಕಿದರೆ ಅದು ಇಮ್ಮಡಿ ತೆರಿಗೆಗೆ ಉದಾಹರಣೆ. ಇಲ್ಲಿ ಬೇರೆ ಬೇರೆ ತೆರಿಗೆ ವಿಧಿಸುವ ಹಕ್ಕುಳ್ಳವರು ಇರುವುದರಿಂದ ಈ ಪರಿಸ್ಥಿತಿ ಸಂಭವಿಸುತ್ತದೆ. ಒಂದು ದೇಶದಲ್ಲಿ ರಾಜ್ಯ ಸರ್ಕಾರಗಳೂ ಕೇಂದ್ರ ಸರ್ಕಾರಗಳೂ ಒಂದೇ ಆದಾಯ ಅಥವಾ ಪದಾರ್ಥದ ಮೇಲೆ ತೆರಿಗೆ ಹಾಕಿದರೆ ಅದೂ ಇಮ್ಮಡಿ ತೆರಿಗೆಯಾಗುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿ ಒಂದು ದೇಶದಿಂದ ಆದಾಯ ಪಡೆದು ಎರಡನೆಯ ದೇಶದಲ್ಲಿ ವಾಸವಾಗಿದ್ದು ಮೂರನೆಯ ದೇಶದಲ್ಲಿ ಅದನ್ನು ಖರ್ಚು ಮಾಡಬಹುದು. ಆಗ ಅವನು ಎರಡಕ್ಕಿಂತ ಜಾಸ್ತಿ ತೆರಿಗೆ ಕೊಡಬೇಕಾಗುತ್ತದೆ. ಈ ರೀತಿ ಹಾಕುವ ತೆರಿಗೆಯಲ್ಲಿ ನ್ಯಾಯ ದೊರಕಿಸುವ ಉದ್ದೇಶವಿದ್ದರೆ ಅದು ತಪ್ಪಾಗುವುದಿಲ್ಲ. ಆದರೆ ಇಂಥ ತೆರಿಗೆಗಳಿಂದ ತೆರಿಗೆ ಕೊಡುವವರಿಗೆ ಭಾರ ಜಾಸ್ತಿಯಾಗುತ್ತದೆಯೆಂಬುದೂ ನಿಜ. ತೆರಿಗೆ ವಿಧಿಸುವ ಕೇಂದ್ರ. ರಾಜ್ಯ ಸರ್ಕಾರಗಳೆರಡೂ ರಾಜ್ಯಾಂಗ ದೃಷ್ಟಿಯಿಂದ ಪ್ರತ್ಯೇಕವಾಗಿದ್ದ ಪಕ್ಷದಲ್ಲಿ ಈ ಬಗೆಯ ವಿಧಾಯಕವನ್ನು ಕಾಯಿದೆಯ ದೃಷ್ಟಿಯಿಂದ ಇಮ್ಮಡಿ ತೆರಿಗೆಯೆನ್ನಲಾಗುವುದಿಲ್ಲ. ಆದರೆ ಒಬ್ಬ ವ್ಯಕ್ತಿಯು ಒಂದು ರಾಜ್ಯದಲ್ಲಿ ವಾಸಿಸುತ್ತಿದ್ದು ಅವನ ಸ್ವತ್ತು ಇನ್ನೊಂದು ರಾಜ್ಯದಲ್ಲಿದ್ದರೆ ಆಗ ಆತ ತನ್ನ ರಾಜ್ಯದಲ್ಲಿ ವಾಸಿಸುತ್ತಿದ್ದನೆಂದು ಅಲ್ಲಿನ ಸರ್ಕಾರವೂ ತನ್ನ ರಾಜ್ಯದಲ್ಲಿ ಆತನ ಸ್ವತ್ತು ಇದೆಯೆಂದು ಇನ್ನೊಂದು ಸರ್ಕಾರವೂ ತೆರಿಗೆ ವಿಧಿಸುವ ಹಕ್ಕು ಚಲಾಯಿಸಿ, ಅದರಿಂದ ಆತನಿಗೆ ಅನ್ಯಾಯವಾಗಿದ್ದರೆ ಅಂಥ ಅನ್ಯಾಯದ ಸಂದರ್ಭವನ್ನು ಸಾಮಾನ್ಯವಾಗಿ ಇಮ್ಮಡಿ ತೆರಿಗೆಯೆಂದು ಹೆಸರಿಸಲಾಗುತ್ತದೆ.

ತೆರಿಗೆಯ ಉಪಯೋಗ

[ಬದಲಾಯಿಸಿ]

ಒಂದು ದೇಶದ ನಿವಾಸಿಗಳು ಇನ್ನೊಂದು ದೇಶದಲ್ಲಿ ಸಂಪಾದಿಸಿದ ಆದಾಯದ ಮೇಲೆ ಎರಡು ಕಡೆಯೂ ತೆರಿಗೆ ಕೊಡಬೇಕಾಗಿ ಬಂದರೆ ಆಗ ಇಂಥ ಪರಿಸ್ಥಿತಿಯಿಂದ ಒಂದು ದೇಶದ ಬಂಡವಾಳವೂ ಕೆಲಸಗಾರರ ಸೇವೆಯೂ ಇನ್ನೊಂದು ದೇಶಕ್ಕೆ ನಿರಂತರವಾಗಿ ಹರಿಯಲು ಅಡಚಣೆಯಾಗುತ್ತದೆ. ಇಮ್ಮಡಿ ತೆರಿಗೆಯ ಭಾರ ಕಡಿಮೆ ಮಾಡಲು ಈ ಎರಡೂ ದೇಶಗಳು ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಬಹುದು. ಪರಸ್ಪರವಾಗಿ ಅವು ಪೂರ್ತಿಯಾಗಿಯೋ ಭಾಗಶಃವಾಗಿಯೋ ಅಂಥ ನಿವಾಸಿಗಳಿಗೆ ತೆರಿಗೆ ವಿನಾಯಿತಿ ಕೊಡಬಹುದು; ಅಥವಾ ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ವ್ಯಾಪ್ತಿ ಇರುವ ಉದ್ಯಮಗಳನ್ನು ಮಾತ್ರ ಇಮ್ಮಡಿ ತೆರಿಗೆಗೆ ಒಳಪಡಿಸಲು ಒಪ್ಪಂದವಾಗಬಹುದು. ಉದಾಹರಣೆ: ಬ್ಯಾಂಕು ಮತ್ತು ವಿಮಾ ಕಂಪನಿಗಳು, ಅಂತರರಾಷ್ಟ್ರೀಯ ಜಲ ಮತ್ತು ವಾಯುಯಾನಗಳು. ಕೇಂದ್ರ, ರಾಜ್ಯ ಸರ್ಕಾರಗಳಿರುವ ಸಂಯುಕ್ತ ರಾಜ್ಯಗಳಲ್ಲಿ ಇಂಥ ತೆರಿಗೆಯನ್ನು ಒಂದೇ ಸರ್ಕಾರದ ವ್ಯಾಪ್ತಿಗೆ ಒಳಪಡಿಸಿ ಇಮ್ಮಡಿ ತೆರಿಗೆಯ ಸಮಸ್ಯೆಯನ್ನು ಪರಿಹಾರ ಮಾಡಬಹುದು; ಅಥವಾ ರಾಜ್ಯ ಮತ್ತು ಸಂಯುಕ್ತ ಸರ್ಕಾರಗಳ ನಡುವೆ ಒಪ್ಪಂದದಿಂದ ಈ ಸಮಸ್ಯೆಯನ್ನು ಪರಿಹಾರ ಮಾಡಬಹುದು. ಒಟ್ಟಿನಲ್ಲಿ ಪರಸ್ಪರ ಒಪ್ಪಂದದಿಂದ ಇಮ್ಮಡಿ ತೆರಿಗೆಯಿಂದಾಗಬಹುದಾದ ತೊಂದರೆಗಳನ್ನು ನಿವಾರಿಸುವುದು ಸಾಧ್ಯ.

ಉಲ್ಲೇಖಗಳು

[ಬದಲಾಯಿಸಿ]


[] []

  1. www.investopedia.com/terms/d/double_taxation.asp
  2. www.taxguideforstudents.org.uk/types-of.../what-is-a-double-taxation-agreement