ಇತ್ತಲೆಗ
ಮೊಣಕೈಕೀಲಿಯನ್ನು ಮುಂಗೈಯಿಂದ ಬಲವಾಗಿ ಮಡಿಸಿದಾಗ ಎದ್ದು ಕಾಣುವ ರಟ್ಟೆಯ ಸ್ನಾಯುಗಳಲ್ಲಿ ಒಂದು (ಬೈಸೆಪ್ಸ್).
ಮೋಟುದಲೆ ಮತ್ತು ನೀಳದಲೆ
[ಬದಲಾಯಿಸಿ]ಇದರ ಮೂಲವಾಗಿ ಎರಡು ತಲೆಗಳಿವೆ:
- ಮೋಟಾಗಿರುವ ಮೋಟುದಲೆ (ಷಾರ್ಟ್‍ಹೆಡ್).
- ನೀಳದಲೆ (ಲಾಂಗ್ ಹೆಡ್).
ಮೊದಲಿನದು ಹೆಗಲ್ಮೂಳೆಯ (ಸ್ಕ್ಯಾಪುಲ) ಕಾಕೊಕ್ಕಿ ಚಾಚುವಿಗೂ (ಕೊರಕಾಯ್ಡ್‍ಪ್ರೋಸೆಸ್) ಎರಡನೆಯದು ಹೆಗಲ ಕೀಲೊಳಗಿನ ಕುಳಿಯಿಂದ ಗುಳಿಯ (ಗ್ಲೀನಾಯ್ಡ್‍ಕ್ಯಾವಿಟಿ) ಅಂಚಿಗೂ ತಗುಲಿಕೊಂಡಿದೆ. ಹೆಗಲಿನ ಕಾಲು ಎಲ್ಲ ದಿಕ್ಕುಗಳಲ್ಲೂ ಆಡುವಾಗ ಭದ್ರಗೊಳಿಸಲು ಈ ಸ್ನಾಯು ನೆರವಾಗುವುದು. ಒಂದುಗೂಡಿದ ನಡುವಣ ಭಾಗ (ಒಡಲು) ಕಂಡರದಲ್ಲಿ (ಟೆಂಡನ್) ಕೊನೆಗೊಳ್ಳುತ್ತದೆ. ಈ ಕಂಡರದ ಕೆಳಕೊನೆ ಮುಂದೋಳಲ್ಲಿರುವ ಆರೆಲುವಿಗೆ (ರೇಡಿಯಸ್) ತಗಲಿಕೊಂಡಿದೆ. ಇತ್ತೆಲೆಗ ಕುಗ್ಗಿದಾಗ ಮುಂದೋಳು ಮೊಣಕೈಯಲ್ಲಿ ಮಡಿಸಿಕೊಂಡು ರಟ್ಟೆಯ ಮೇಲೆ ಬರುವುದು. ಅಲ್ಲದೆ ಅಂಗೈಯನ್ನು ಮಗುಚಿಹಾಕುತ್ತದೆ. ಭಾರ ಎತ್ತುವವರಲ್ಲಿ ಇದು ಬಲವಾಗಿರುತ್ತದೆ.
ಕಾಲಿನಲ್ಲಿರುವ ಇತ್ತಲೆಗ
[ಬದಲಾಯಿಸಿ]ತೊಡೆಯಲ್ಲೂ ಹಿಂದುಗಡೆ ಆಚೆಪಕ್ಕದಲ್ಲಿ ತೋಳಿನದರಷ್ಟು ಎದ್ದಕಾಣದ ಒಂದು ಇತ್ತಲೆಗ ಸ್ನಾಯುವಿದೆ. ಮೂಳೆಗಂಟುವ ಇದರ ಕೆಳಗಣ ಕಂಡರ ಒಂದನ್ನು ಮಾತ್ರ ಮೇಲೆ ಗುರುತಿಸಬಹುದು. ಮೊಣಕಾಲಿನ ಹಿಂದುಗಡೆ ಹೊರಪಕ್ಕದಲ್ಲಿ ಮುಟ್ಟಲು ಸಿಗುವ. ಕಾಲಿನ ತೆಳುಮೂಳೆಯಾದ ಸೂಚಿಲುಕದ (ಫಬುಲ) ಮೇಲ್ಕೋನೆಗೆ ಈ ಕಂಡರ ಅಂಟಿರುತ್ತದೆ. ಹಿಂತೊಡೆಯ ತುಂಬ ಈ ಸ್ನಾಯುವಿನ ಒಡಲು ಇದೆ. ಇದರ ಮೇಲ್ಕೊನೆ ಕುಳಿತುಕೊಂಡಾಗ ನೆಲಕ್ಕೆ ತಾಕುವ ಮೂಳೆಯ ಭಾಗವಾದ ಕುಂಡೆಲುಬಿಗೆ (ಇಸ್ಕಿಯಂ) ಅಂಟಿದೆ. ಈ ಸ್ನಾಯುವಿನ ಇನ್ನೊಂದು ತಲೆ ತೊಡೆಮೂಳೆಗೆ (ಫೀಮರ್) ಉದ್ದಕ್ಕೂ ಅಂಟಿದೆ. ರಟ್ಟೆಯ ಇತ್ತಲೆಗದಂತೆ. ಇದು ಕೂಡ ಕಾಲನ್ನು ತೊಡೆ ಹಿಂದಕ್ಕೆ ಮೊಣಕಾಲಲ್ಲಿ ಬಲವಾಗಿ ಹಿಮ್ಮಡಿಸುವಂತೆ ಮಾಡುತ್ತದೆ. ಮೊಣಕಾಲನ್ನು ಮಡಿಸಿರುವಾಗ, ಪಾದವನ್ನು ಹೊರಗೆ ಮಗುಚುವುದು. ಹಿಂತೊಡೆಯಲ್ಲಿರುವ ಸ್ನಾಯುಗಳಲ್ಲಿ ಇದು ಬಲು ಬಲವಾದುದು. ಮೊಣಕಾಲಿನ ರೋಗಗಳಲ್ಲಿ ಈ ಸ್ನಾಯುವಿನ ಎಳೆತದಿಂದ ಮೊಣಕಾಲು ಮಡಿಸಿಕೊಂಡೇ ಇದ್ದು ಬಿಡುವುದನ್ನು ತಪ್ಪಿಸಲು ತಕ್ಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.