ವಿಷಯಕ್ಕೆ ಹೋಗು

ಇಂದೋರ್‌–ಪಾಟ್ನಾ ರೈಲು ದುರಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂದೋರ್‌–ಪಾಟ್ನಾ ರೈಲು ದುರಂತ, ೨೦೧೬

[ಬದಲಾಯಿಸಿ]
ರೈಲು ಹಳಿತಪ್ಪಿ ಬಿದ್ದಿರುವುದು.(Farragut derailment 2)
 • ಉತ್ತರ ಪ್ರದೇಶದ ಪುಖರಾಯಾಂ ಹತ್ತಿರ, ಇಂದೋರ್‌–ಪಟ್ನಾ ಎಕ್ಸ್‌ಪ್ರೆಸ್‌ನ 14 ಬೋಗಿಗಳು 2೦ Nov, 2016ಭಾನುವಾರ ಬೆಳಗಿನ ಜಾವ ಕಾನ್ಪುರ ಗ್ರಾಮಾಂತರ ಜಿಲ್ಲೆಯ ಪುಖರಾಯಾಂ ಸಮೀಪ ಹಳಿ ತಪ್ಪಿದ್ದರಿಂದ 120ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ (ಕನಿಷ್ಠ 128 ಸಾವುಗಳು ಮತ್ತು ಕನಿಷ್ಠ 260 ಗಾಯ-ಮತ್ತೊಂದು ವರದಿ). ಇದು ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತವಾಗಿದೆ. ಗಾಯಗೊಂಡವರ ಪೈಕಿ ಅರ್ಧದಷ್ಟು ಜನರ ಪರಿಸ್ಥಿತಿ ಗಂಭೀರವಾಗಿದೆ. ಹಳಿಯಲ್ಲಿನ ಬಿರುಕು ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಭಾನುವಾರ ನಸುಕಿನ ಮೂರು ಗಂಟೆ ಸಮಯದಲ್ಲಿ ರೈಲು ಹಳಿತಪ್ಪಿದ್ದು ಬಹುತೇಕ ಪ್ರಯಾಣಿಕರು ನಿದ್ದೆಯಲ್ಲಿದ್ದರು.(ಈಚಿನ ಸುದ್ದಿ:ಭಾನುವಾರ ಅಪಘಾತದಲ್ಲಿ ಸತ್ತವರ ಸಂಖ್ಯೆ 150 ಕ್ಕೆ ಏರಿದೆ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ; ಕಳೆದ 17 ವರ್ಷಗಳಲ್ಲಿ ಇದು ಮಾರಣಾಂತಿಕ ರೈಲು ಅಪಘಾತ .[೧])[೨]
 • ದುರಂತದಲ್ಲಿ ನಾಲ್ಕು ಸ್ಲೀಪರ್‌ ಬೋಗಿಗಳು (ಎಸ್‌1, 2, 3 ಮತ್ತು 4) ಸಂಪೂರ್ಣ ನಜ್ಜುಗುಜ್ಜಾಗಿವೆ. ಎಸ್‌1 ಮತ್ತು ಎಸ್‌2 ಒಂದರ ಒಳಗೊಂದು ನುಗ್ಗಿ ಹೋಗಿವೆ. ಮೃತರಲ್ಲಿ ಹೆಚ್ಚಿನವರು ಈ ಬೋಗಿಗಳಲ್ಲಿ ಇದ್ದವರು ಎನ್ನಲಾಗಿದೆ. ಎ.ಸಿ. 3 ಟೈರ್‌ ಬೋಗಿಯೊಂದಕ್ಕೆ ಕೂಡ ಹಾನಿಯಾಗಿದೆ. ಆದರೆ ಈ ಬೋಗಿಯಲ್ಲಿದ್ದವರಿಗೆ ಹೆಚ್ಚಿನ ಅಪಾಯ ಸಂಭವಿಸಿಲ್ಲ. ನಿದ್ದೆಯಲ್ಲಿದ್ದ ಜನರು ಅಪಘಾತದಿಂದಾಗಿ ಬೆಚ್ಚಿ ಎದ್ದರು. ಹಲವು ಮಂದಿಯನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ. ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಲೇ ಹೋಗಿದೆ. ಒಟ್ಟು 110 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಕಾನ್ಪುರ ವಲಯದ ರೈಲ್ವೆ ಆಯುಕ್ತ ಇಫ್ತಿಕಾರುದ್ದೀನ್‌ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ

[ಬದಲಾಯಿಸಿ]
ರೈಲು ದುರಂತ
 • ಮತಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ನಾಪತ್ತೆಯಾಗಿರುವವರ ಬಗ್ಗೆ ಯಾವ ಮಾಹಿತಿಯನ್ನೂ ನೀಡುತ್ತಿಲ್ಲ. ‘ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕೆಲವು ಜನ ಇನ್ನೂ ಬೋಗಿಗಳೊಳಗೆ ಸಿಲುಕಿದ್ದಾರೆ. ಹಾಗಾಗಿ ಕಾರ್ಯಾಚರಣೆ ಪೂರ್ಣಗೊಂಡ ಬಳಿಕವಷ್ಟೇ ಸರಿಯಾದ ಚಿತ್ರಣ ದೊರೆಯಲಿದೆ’ ಎಂದು ಈ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.೨೨-೧೧-೨೦೧೬.
.
 • 76 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ 150 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
 • ರಕ್ಷಣಾ ಕಾರ್ಯಾಚರಣೆ: ಗಾಯಗೊಂಡ 150ಕ್ಕೂ ಹೆಚ್ಚು ಮಂದಿಯನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಈ ಪ್ರದೇಶದ ಎಲ್ಲ ಆಸ್ಪತ್ರೆಗಳಿಗೂ ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ 30ಕ್ಕೂ ಹೆಚ್ಚು ಆಂಬುಲೆನ್ಸ್‌ಗಳನ್ನು ಬಳಸಲಾಗಿದೆ.ಸೇನೆಯ ವೈದ್ಯರು, ರೈಲ್ವೆ ಅಧಿಕಾರಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
 • ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಉತ್ತರ ಪ್ರದೇಶ ಪೊಲೀಸ್‌ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸೂಚಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಂಚಾರ ದಟ್ಟಣೆಯಿಂದ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ಸ್ಥಳದಲ್ಲಿ ಸಾಕಷ್ಟು ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪರಿಹಾರ್ಯ ಕಾರ್ಯ

[ಬದಲಾಯಿಸಿ]
 • ಕೋಲ್ಡ್‌ ಕಟ್ಟರ್‌ ಬಳಕೆ: ನಜ್ಜುಗುಜ್ಜಾದ ಬೋಗಿಗಳ ಒಳಗೆ ಹಲವು ಮಂದಿ ಸಿಲುಕಿಕೊಂಡಿದ್ದರು. ಕೋಲ್ಡ್‌ ಕಟ್ಟರ್‌ಗಳನ್ನು ಬಳಸಿ ಬೋಗಿಗಳನ್ನು ಕತ್ತರಿಸಿ ಅವರನ್ನು ರಕ್ಷಿಸಲಾಗಿದೆ. ಬೋಗಿಗಳನ್ನು ಕತ್ತರಿಸಲು ಗ್ಯಾಸ್‌ ಕಟ್ಟರ್‌ಗಳನ್ನು ಬಳಸುವುದರಿಂದ ಬೋಗಿ ಬಿಸಿಯಾಗುತ್ತದೆ. ಜತೆಗೆ ಅದರಿಂದ ಬೆಂಕಿಯ ಕಿಡಿಗಳು ಹಾರುತ್ತವೆ. ಆದರೆ ಕೋಲ್ಡ್‌ ಕಟ್ಟರ್‌ಗಳನ್ನು ಬಳಸುವುದರಿಂದ ಇದನ್ನು ತಪ್ಪಿಸಬಹುದು. ಹಾಗಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಚ್ಚಾಗಿ ಕೋಲ್ಡ್‌ ಕಟ್ಟರ್‌ಗಳನ್ನು ಬಳಸಲಾಗುತ್ತಿದೆ.

ಮೃತರ ಕುಟುಂಬಕ್ಕೆ ಪರಿಹಾರ

[ಬದಲಾಯಿಸಿ]
 • ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ ರೂ.2 ಲಕ್ಷ ಪರಿಹಾರ ಘೋಷಿಸಿದ್ದಾರೆ.ಅಖಿಲೇಶ್‌ ಯಾದವ್‌ ಅವರು ತಲಾ ₹5 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ. ರೈಲ್ವೆಯಿಂದ ನೀಡಲಾಗುವ ಪರಿಹಾರ ಮೊತ್ತವನ್ನು ₹2 ಲಕ್ಷದಿಂದ ರೂ.3.5 ಲಕ್ಷಕ್ಕೆ ಏರಿಸಲಾಗಿದೆ.

ಗಂಭೀರವಾಗಿ ಗಾಯಗೊಂಡವರಿಗೆ ತಲಾ ರೂ.50 ಸಾವಿರ ಮತ್ತು ಗಾಯಗೊಂಡ ಇತರರಿಗೆ ತಲಾ ₹25 ಸಾವಿರ ಪರಿಹಾರ ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ಅಪಘಾತಕ್ಕೆ ಕಾರಣ

[ಬದಲಾಯಿಸಿ]

ರೈಲು ಹಳಿಯಲ್ಲಿನ ಬಿರುಕು ದುರಂತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಖಾತೆಯ ರಾಜ್ಯ ಸಚಿವ ಮನೋಜ್‌ ಸಿನ್ಹಾ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ರೈಲ್ವೆಯ ಎಂಜಿನಿಯರಿಂಗ್‌ ವಿಭಾಗದ ಸದಸ್ಯರು ಅಪಘಾತದ ಕಾರಣ ಕಂಡು ಹಿಡಿಯಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.[೩]

ಹಳಿ ದುರಸ್ತಿಗೆ 300 ತಂತ್ರಜ್ಞರು

[ಬದಲಾಯಿಸಿ]
 • ಕಾನ್ಪುರ–ಝಾನ್ಸಿ ಹಳಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲು 36 ತಾಸು ಬೇಕು. 300ಕ್ಕೂ ಹೆಚ್ಚು ಎಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಎಲ್‌ಎಚ್‌ಬಿ ಬೋಗಿಗಳ ವೈಶಿಷ್ಟ್ಯ

[ಬದಲಾಯಿಸಿ]
 • ಜರ್ಮನಿಯ ಎಲ್‌ಎಚ್‌ಬಿ ಕಂಪೆನಿಯಿಂದ ತರಿಸಲಾದ ಆಧುನಿಕ ಬೋಗಿಗಳು ಇಂದೋರ್–ಪಟ್ನಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಇದ್ದಿದ್ದರೆ ಇಷ್ಟು ಸಾವು ನೋವು ಸಂಭವಿಸುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
 • ಗಂಟೆಗೆ ಗರಿಷ್ಠ 200 ಕಿ.ಮೀ. ವೇಗದಲ್ಲಿ ಚಲಿಸುವಂತೆ ಎಲ್‌ಎಚ್‌ಬಿ ಬೋಗಿಗಳನ್ನು ವಿನ್ಯಾಸ ಮಾಡಲಾಗಿದೆ.
 • ಮಾಮೂಲಿ ಬೋಗಿಗಳು ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸಬಲ್ಲವು.
 • ಎಲ್‌ಎಚ್‌ಬಿ ಬೋಗಿಗಳು ಮಾಮೂಲಿ ಬೋಗಿಗಳಿಗಿಂತ ಹೆಚ್ಚು ಸುರಕ್ಷಿತ.
 • ರೈಲು ಹಳಿ ತಪ್ಪಿದ ಸಂದರ್ಭದಲ್ಲಿ ಎಲ್‌ಎಚ್‌ಬಿ ಬೋಗಿಗಳು ಪಲ್ಟಿಯಾಗುವ ಸಾಧ್ಯತೆ ಕಡಿಮೆ.
 • ಈ ಬೋಗಿಗಳನ್ನು ಸ್ಟೈನ್‌ಲೆಸ್‌ ಸ್ಟೀಲ್‌ನಿಂದ ಮಾಡಲಾಗಿರುತ್ತದೆ. ಹಾಗಾಗಿ ಅಪಘಾತದ ಸಂದರ್ಭದಲ್ಲಿ, ಅಪಾಯದ ಪ್ರಮಾಣ ಕಡಿಮೆ.
 • ಎಲ್‌ಎಚ್‌ಬಿ ಬೋಗಿಗಳಲ್ಲಿ ಡಿಸ್ಕ್‌ ಬ್ರೇಕ್‌ ಇರುತ್ತದೆ. ಮಾಮೂಲಿ ಬೋಗಿಗಳಲ್ಲಿ ಇದು ಇಲ್ಲ.
 • ಅಪಘಾತದ ಸಂದರ್ಭದಲ್ಲಿ ಎಲ್‌ಎಚ್‌ಬಿ ಬೋಗಿಗಳು ಒಂದರ ಮೇಲೆ ಇನ್ನೊಂದು ಬೀಳುವ ಸಾಧ್ಯತೆ ಕಡಿಮೆ.
 • ಇವು ವೇಗವಾಗಿ ಚಲಿಸುತ್ತಿದ್ದಾಗಲೂ ತಿರುವುಗಳನ್ನು ಸಲೀಸಾಗಿ ದಾಟಬಲ್ಲವು.[೫]

ಸಹಾಯವಾಣಿ

[ಬದಲಾಯಿಸಿ]
 • ರೈಲ್ವೆ ಇಲಾಖೆ ಕೆಳಗಿನ ಸಹಾಯವಾಣಿಯನ್ನು ತೆರೆದಿದೆ:ರೈಲ್ವೆ ಸಚಿವಾಲಯ ಸಹಾಯವಾಣಿ ಸಂಖ್ಯೆ ಪ್ರಕಟಿಸಿದೆ. ಸಹಾಯವಾಣಿ: 07411072, 07342560906, 074121072, 051621072, 05101072, 05113270239 [೪]

[೫]

ಭಾರತದಲ್ಲಿ ನಡೆದ ಕೆಲವು ಭೀಕರ ರೈಲು ದುರಂತಗಳು

[ಬದಲಾಯಿಸಿ]
 • ಡಿಸೆಂಬರ್14, 2004: ಜಮ್ಮು ತಾವಿ ಎಕ್ಸ್‌ಪ್ರೆಸ್‌–ಅಮೃತಸರ ಪ್ಯಾಸೆಂಜರ್ ನಡುವೆ ಪಂಜಾಬ್‌ನ ಮನ್ಸಾರ್ ಬಳಿ ಸಂಭವಿಸಿದ ಡಿಕ್ಕಿಯಲ್ಲಿ 36 ಮಂದಿ ಸಾವು
 • ಅಕ್ಟೋಬರ್ 25, 2005: ಆಂದ್ರಪ್ರದೇಶದ ವಲಿಗೊಂಡ ಬಳಿ ಡೆಲ್ಟಾ ರೈಲು ಹಳಿ ತಪ್ಪಿ 100 ಮಂದಿ ಸಾವು
 • ನವೆಂಬರ್ 26, 2005: ಮಹಾರಾಷ್ಟ್ರದ ರತ್ನಗಿರಿ ಬಳಿ ರೈಲಿನ ಮೇಲೆ ಬಂಡೆ ಕುಸಿದು ಕನಿಷ್ಠ 100 ಸಾವು
 • ಅಕ್ಟೋಬರ್ 21, 2009: ಉತ್ತರ ಪ್ರದೇಶದ ಮಥುರಾದಲ್ಲಿ ಗೋವಾ ಎಕ್ಸ್‌ಪ್ರೆಸ್‌ ಮತ್ತು ಮೇವಾಡ್‌ ಎಕ್ಸ್‌ಪ್ರೆಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ 21 ಮಂದಿ ಸಾವು
 • ಮೇ 28, 2010: ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಗೂಡ್ಸ್‌ ರೈಲಿಗೆ ಅಪ್ಪಳಿಸಿದ ಪರಿಣಾಮ 170 ಮಂದಿ ಮರಣ ಹೊಂದಿದ್ದರು.
 • ಜುಲೈ 19, 2010: ಪಶ್ಚಿಮ ಬಂಗಾಳದ ಸೈಂತಿಯಾದಲ್ಲಿ ಉತ್ತರ ಬಂಗಾ ಎಕ್ಸ್‌ಪ್ರೆಸ್‌ ರೈಲು ಮತ್ತು ವನಾಚಾಲ್ ಎಕ್ಸ್‌ಪ್ರೆಸ್‌ ನಡುವೆ ನಡೆದ ಡಿಕ್ಕಿಯಲ್ಲಿ 80 ಮಂದಿ ಸಾವು.
 • ಜುಲೈ 7. 2011: ಮಥುರಾ–ಛಾಪ್ರಾ ಎಕ್ಸ್‌ಪ್ರೆಸ್‌ ರೈಲು ಉತ್ತರ ಪ್ರದೇಶದ ಕಾನ್ಶೀರಾಂ ನಗರದಲ್ಲಿ ಹಳಿ ದಾಟುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು 38 ಜನರ ಸಾವು.
 • ಜುಲೈ 10, 2011: ಉತ್ತರ ಪ್ರದೇಶದ ಫತೇಪುರದಲ್ಲಿ ಕಲ್ಕಾ ಮೇಲ್‌ ರೈಲು ಹಳಿತಪ್ಪಿ 70 ಸಾವು.
 • ಮೇ 22, 2012: ಹುಬ್ಬಳ್ಳಿ – ಬೆಂಗಳೂರು – ಹಂಪಿ ಎಕ್ಸ್‌ಪ್ರೆಸ್‌ ರೈಲು ಆಂಧ್ರಪ್ರದೇಶದ ಪೆನುಕೊಂಡದಲ್ಲಿ ಗೂಡ್ಸ್‌ ರೈಲಿಗೆ ಡಿಕ್ಕಿಯಾಗಿ 14 ಸಾವು.
 • ಆಗಸ್ಟ್‌ 19, 2013: ಸಹರ್ಸಾ – ಪಟ್ನಾ ರಾಜ್ಯರಾಣಿ ಎಸ್‌ಎಫ್‌ ಎಕ್ಸ್‌ಪ್ರೆಸ್‌ ರೈಲು ಬಿಹಾರದಲ್ಲಿ ಅಪಘಾತಕ್ಕೆ ಈಡಾಗಿ 35 ಸಾವು.
 • ಮೇ 4, 2014: ದಿವ ಜಂಕ್ಷನ್‌ – ಸಾವಂತವಾಡಿ ಪ್ಯಾಸೆಂಜರ್‌ ರೈಲು ಮಹಾರಾಷ್ಟ್ರದಲ್ಲಿ ಅಪಘಾತಕ್ಕೆ ಈಡಾಗಿ 20 ಜನರ ಮರಣ.
 • ಮೇ 26, 2014: ಗೋರಖಧಾಮ ಎಕ್ಸ್‌ಪ್ರೆಸ್‌ ರೈಲು ಉತ್ತರ ಪ್ರದೇಶದ ಖಲೀಲಾಬಾದ್‌ ರೈಲು ನಿಲ್ದಾಣದಲ್ಲಿ ನಿಂತಿದ್ದ ಇನ್ನೊಂದು ರೈಲಿಗೆ ಡಕ್ಕಿ ಹೊಡೆದು 25 ಜನರ ಸಾವು.[೬]

ಉಲ್ಲೇಖ

[ಬದಲಾಯಿಸಿ]
 1. http://www.prajavani.net/news/article/2016/11/21/453688.html ಇಂದೋರ್‌–ಪಟ್ನಾ ರೈಲು ದುರಂತ: ಮೃತರ ಸಂಖ್ಯೆ 142ಕ್ಕೆ ಏರಿಕೆ;21 Nov, 2016
 2. Kanpur train derailment:
 3. ರೈಲು ದುರಂತ 120 ಸಾವು;21 Nov, 2016
 4. "ಆರ್ಕೈವ್ ನಕಲು". Archived from the original on 2016-11-21. Retrieved 2016-11-20.
 5. ಪಾಟ್ನಾ-ಇಂದೋರ್ ರೈಲು ದುರಂತ:
 6. "ರೈಲು ದುರಂತದ ಮನ ಕಲಕುವ ಚಿತ್ರಗಳು;21 Nov, 2016". Archived from the original on 2016-11-21. Retrieved 2016-11-21.