ವಿಷಯಕ್ಕೆ ಹೋಗು

ಇಂಡೊನೇಷ್ಯದ ಚರಿತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರ್ವಶಿಲಾಯುಗದ ಆದಿಭಾಗಕ್ಕೆ ಸೇರಿದ ಕಪಿಮಾನವನ ಪಳೆಯುಳಿಕೆಗಳು ಜಾವಾದ್ವೀಪದಲ್ಲಿ ದೊರಕಿದರೂ ಆ ಕಾಲದ ಶಿಲಾಯುಧಗಳು ದೊರಕಿಲ್ಲ. ಆ ಯುಗದ ಮಧ್ಯಕಾಲದಲ್ಲಿ ಪಜ್ಜಿ ಟೇನಿಯನ್ ಸಂಸ್ಕøತಿಯ ಉಂಡೆಕಲ್ಲಿನ ಆಯುಧಗಳು ಜಾವಾದ್ವೀಪದಲ್ಲಿ ದೊರಕಿವೆ. ಇದು ಮಲಯದ ಕಂಪಾನಿಯನ್, ಬರ್ಮಾದ ಅನ್ಯಾಥಿಯನ್, ಚೀನಾದ ಚೌಕೌಟಿಯನ್ ಮತ್ತು ಭಾರತದ ಸೋಹನ್ ಸಂಸ್ಕøತಿಗಳ ಗುಂಪಿಗೆ ಸೇರುತ್ತದೆ. ಜಾವಾದ ಸೋಲೋ ನದೀ ತೀರದಲ್ಲಿ ಆ ಯುಗದ ಅಂತ್ಯಕಾಲದ ಮೂಳೆಯ ಆಯುಧಗಳೂ ಕೈಯಲ್ಲಿ ಚಕ್ಕೆಗಳೂ ಒರೆಯುವ ಆಯುಧದ ಮೊನೆಗಳೂ ಮಾನವ ಪಳೆಯುಳಿಕೆಗಳೂ ದೊರಕಿ ಪೂರ್ವಶಿಲಾಯುಗ ಸಂಸ್ಕøತಿಯ ಮತ್ತು ಆ ಮಾನವರ ಮುನ್ನಡೆಯನ್ನು ರೂಪಿಸುತ್ತವೆ. ಅನಂತರ ಅನೇಕ ಕಡೆಗಳಲ್ಲಿ ಶಿಲಾಯುಗ ಸಂಸ್ಕøತಿಯ ಕಡೆಗಾಲದ ಆಯುಧಗಳು ದೊರೆತಿವೆ. ಇವು ನಿರ್ಮಾಣ ವಿಧಾನಗಳ ಮತ್ತು ಆಕಾರ ರೀತ್ಯ ಮಧ್ಯಶಿಲಾಯುಗಕ್ಕೆ ಸೇರುವುದಿಲ್ಲವಾದರೂ ನವಶಿಲಾಯುಗಕ್ಕಿಂತಲೂ ಹಳೆಯವಾದುದರಿಂದ ಇವನ್ನು ಮಧ್ಯಶಿಲಾಯುಗೀನ ಸಂಸ್ಕøತಿಗಳೆಂದು ಕರೆಯಲಾಗಿದೆ. ಇವುಗಳಲ್ಲಿ ಕೈಗೊಡಲಿಗಳು, ಚಕ್ಕೆಕಲ್ಲಿನಾಯುಧಗಳು, ಸೂಕ್ಷ್ಮ ಶಿಲಾಯುಧಗಳು ಮತ್ತು ಜಾವಾದ ಗುಹೆಗಳಲ್ಲಿನ ಮೂಳೆ ಮತ್ತು ಚಕ್ಕೆ ಕಲ್ಲಿನಾಯುಧಗಳು ಸೇರಿವೆ.[]

ಇತಿಹಾಸ

[ಬದಲಾಯಿಸಿ]

ನೂತನ ಶಿಲಾಯುಗದಲ್ಲಿ ಸಾಂಸ್ಕøತಿಕ ಲಕ್ಷಣಗಳು ಸ್ಪಷ್ಟವಿಲ್ಲದುದರಿಂದ ದೊರೆತಿರುವ ವಿವಿಧ ಆಯುಧಗಳ ತಳಹದಿಯ ಮೇಲೆ ಆಗಿನ ಅವಶೇಷಗಳನ್ನು ಪರಿಶೀಲಿಸಬೇಕಾಗುತ್ತದೆ. ಫಾರ್ಮೋಸ ಮಾರ್ಗವಾಗಿ ಗುಂಡು-ಕೊಡಲಿ ಸಂಸ್ಕøತಿಯೂ ಇಂಡೊನೇಷ್ಯ ಭಾಷೆ ಮತ್ತು ಅನೇಕ ಸಾಂಸ್ಕøತಿಕ ಸಂಪ್ರದಾಯಗಳನ್ನು ತಂದ ಜನರೊಂದಿಗೆ ಮಲೆಯ ಪರ್ಯಾಯ ದ್ವೀಪದಿಂದ ಚೌಕೋನದ ಕೊಡಲಿ ಸಂಸ್ಕøತಿಯೂ ಈಶಾನ್ಯ ದಿಕ್ಕಿನಿಂದ ಭುಜಾ ಕೃತಿಯ ಬಾಚಿ ಸಂಸ್ಕøತಿಯೂ ಇಂಡೊನೇಷ್ಯಕ್ಕೆ ಬಂದಂತೆ ಕಂಡುಬರುತ್ತದೆ. ಮಲೆಯ ಭೂಭಾಗದಿಂದ ಬಂದು ಕಂಚಿನ ಯುಗದ ಡಾಂಗ್ಸನ್ ಸಂಸ್ಕøತಿಯಲ್ಲಿ ಕಂಚಿನ ಕೆತ್ತನೆಯ ಕೆಲಸದ ಕೊಡಲಿಗಳೂ ತಾಮ್ರದ ಅಲಂಕೃತ ಕಡಾಯಿಗಳೂ ವಿವಿಧ ರೀತಿಯ ಮಣ್ಣಿನ ಪಾತ್ರೆಗಳೂ ದೊರಕಿ ಅನೇಕ ಸಂಸ್ಕøತಿಗಳ ಪ್ರಭಾವಗಳನ್ನು ಪ್ರದರ್ಶಿಸುತ್ತವೆ. ಇಂಡೊನೇಷ್ಯದಲ್ಲಿ ಖಚಿತವಾದ ಕಬ್ಬಿಣಯುಗದ ಸಂಸ್ಕøತಿಯೆಂದು ಹೇಳಲಾಗದಿದ್ದರೂ ಅಲ್ಲಿ ಕಂಡು ಬರುವ ಬೃಹತ್ ಶಿಲಾಸಮಾಧಿ ಸಂಸ್ಕøತಿಯ ಕಾಲದಲ್ಲಿ ಚಾರಿತ್ರಿಕ ಯುಗದ ಪ್ರಾರಂಭವಾಯಿತೆಂದು ಹೇಳಬಹುದು.[] ಇತಿಹಾಸ : ಇಂಡೊನೇಷ್ಯದಲ್ಲಿನ ಮೂಲನಿವಾಸಿಗಳ ನಾಗರಿಕತೆಯ ಅನೇಕ ಹಂತಗಳು ಅಲ್ಲಲ್ಲಿ ಕಾಣಬರುತ್ತದೆ. ಗುಡ್ಡಗಾಡುಗಳಲ್ಲಿ ಅಲೆಯುವ ಪೂರ್ವ ನಿವಾಸಿಗಳೂ ಬೇಟೆಯಿಂದಲೇ ಜೀವಿಸುತ್ತ, ನೆಲೆ ಇಲ್ಲದೆ ಅಲೆಯುವ ಭಿಲ್ಲರೂ ಈಗಲೂ ಇದ್ದಾರೆ. ಅನಂತರ ವಲಸೆ ಬಂದ ಸಿಂಹಳದ ಒಡ್ಡ ಪಂಗಡದವರೂ ಕರಿಯ ನೀಗ್ರೊ ತಂಡದವರೂ ಅಲ್ಲಲ್ಲಿಯೆ ಹರಡಿಕೊಂಡಿದ್ದಾರೆ. ಇವರನ್ನುಳಿದು ಮಿಕ್ಕವರು ಮನೆಮಠ ಮಾಡಿಕೊಂಡು ನಾಗರಿಕರೆನಿಸಿಕೊಂಡಿದ್ದಾರೆ. ಒಂದೊಂದು ದ್ವೀಪದಲ್ಲಿಯೂ ಬೇರೆ ಬೇರೆ ಜನಾಂಗಗಳಿದ್ದರೂ ಅವರವರಲ್ಲಿಯೇ ಕೂಡುವಳಿಯಾಗಿದೆ. ಎಲ್ಲರೂ ಒಟ್ಟಿನಲ್ಲಿ ಒಂದೇ ಭಾಷೆ ಆಡುತ್ತಾರೆ. ಒಳ ಅಂತರಗಳಿದ್ದರೂ ಅವರಲ್ಲಿ ಒಂದೇ ಸಂಸ್ಕøತಿಯ ಮೇಲ್ಮೈ ಕಾಣುತ್ತದೆ.

ಮೂಲನಿವಾಸಿಗಳು

[ಬದಲಾಯಿಸಿ]

ಮೂಲನಿವಾಸಿಗಳ ಪೈಕಿ, ಬೇಟೆಯಾಡಿ ಬದುಕುತ್ತಿರುವ ಅನಾಗರಿಕ ಭಿಲ್ಲರಾದ ಸಿಮಾಂಗ್ ಎಂಬ ಹೆಸರಿನ ಕುಳ್ಳರು ಮುಖ್ಯರಾದವರು. ತೊಲೆಯ ಅಟ್ಟದಮೇಲೆ ಕಟ್ಟಿದ ಬಿದಿರು ಗುಡಿಸಲುಗಳಲ್ಲಿ ವಾಸಿಸುವ ಈ ಜನರಿಗೆ ಭೂತ, ಪಿಶಾಚಿಗಳಲ್ಲಿ ತುಂಬ ನಂಬಿಕೆ. ನೆತ್ತಿಯ ಮೇಲೆ ಪಿಳ್ಳೆಜುಟ್ಟುಗಳನ್ನು ಬಿಟ್ಟುಕೊಂಡು ಸಾಧಾರಣವಾಗಿ ಬೆತ್ತಲೆಯಾಗಿಯೇ ಉಳಿದಿರುವ ಈ ಜನ ಮುಖಕ್ಕೆ ಬಣ್ಣ ಹಚ್ಚಿ, ಕಾಡುಹೂ ಮುಡಿದು, ಪಿಳ್ಳೆಜುಟ್ಟಿಗೆ ಬಿದಿರಿನ ಬಾಚಣಿಗೆಗಳನ್ನು ಸಿಕ್ಕಿಸಿಕೊಳ್ಳುತ್ತಾರೆ. ಇವರಿಗೆ ಹಾಡು, ಕುಣಿತಗಳಲ್ಲಿ ತುಂಬ ಆಸಕ್ತಿ. ಎರಡನೆಯದಾಗಿ ನೌಕೈ ಮತ್ತು ಜಾಕುನ್ ಎಂಬ ಹೆಸರಿನ ಕುರುಚಲು ಕೂದಲಿನ ಒಡ್ಡಜನರು ಕಾಡು ಕಡಿದು ಸುಟ್ಟ ಭೂಮಿಯನ್ನು ಚೂಪಾದ ಈಟಿಯಿಂದ ಕುಕ್ಕಿ ಅದರೊಳಗೆ ಕಾಳು ಚೆಲ್ಲಿ ಬತ್ತ, ಕಬ್ಬು, ಅವರೆ ಬೆಳೆಯುತ್ತಾರೆ. ಮೀನುಗಾರಿಕೆಯಲ್ಲೂ ಬೇಟೆಯಲ್ಲೂ ಚತುರರಾದ ಇವರು ಸುವ್ಯವಸ್ಥಿತ ಹಳ್ಳಿಗಳಲ್ಲಿ ನೆಲೆಸಿ ನಾಯಕನ ನೇತೃತ್ವದಲ್ಲಿ ಜೀವನ ಮಾಡುತ್ತಾರೆ. ಸಂಪತ್ ಸಮೃದ್ಧಿಯ ಬೋರ್ನಿಯೊ ದ್ವೀಪದಲ್ಲಿನ ಡಾಕ್ ಎಂಬ ಮಂದಿ, ಬೇರೆ ಬೇರೆ ಮನೆಗಳಲ್ಲಿ ವಾಸಿಸುವುದಿಲ್ಲ. ನಾನೂರು ಗಜ ಉದ್ದ, ಮೂವತ್ತು ಗಜ ಅಗಲ ಇರುವ ಹಟ್ಟಿಗಳನ್ನು ಹತ್ತು ಅಡಿ ಎತ್ತರದ ಮರದ ತೊಲೆಗಳ ಮೇಲೆ ನಿರ್ಮಿಸಿ ಅವುಗಳಲ್ಲಿ ಸಾಮೂಹಿಕ ಜೀವನ ನಡೆಸುತ್ತಾರೆ. ಇಂಥ ಎರಡು ಮೂರು ಹಟ್ಟಿಗಳು ಕೂಡಿ ಹಳ್ಳಿಯಾಗುತ್ತದೆ. ಈ ಜನ ವ್ಯವಸಾಯ ವ್ಯಾಪಾರಗಳಲ್ಲಿ ಚತುರರಾಗಿ, ಗಿರಿದೇವತೆ, ನದೀದೇವತೆ, ಬಳೆದೇವತೆಗಳನ್ನು ಪೂಜಿಸುತ್ತಾರೆ. ಈ ದ್ವೀಪಸಮೂಹದಲ್ಲಿ ತುಂಬ ಸುಂದರವಾದ ಬಾಲಿ ದ್ವೀಪದ ಜನ ಕಾಲಕ್ರಮವಾಗಿ ಹಿಂದೂ, ಬೌದ್ಧ ಹಾಗೂ ಇಸ್ಲಾಂ ಧರ್ಮಗಳನ್ನು ಅನುಸರಿಸಿದ್ದಾರೆ. ದಕ್ಷಿಣ ಭಾರತದಲ್ಲಿರುವಂತೆ ಹಲವಾರು ಪ್ರಾಕಾರಗಳ ಗುಡಿಗೋಪುರಗಳನ್ನು ಕಟ್ಟಿದ್ದಾರೆ. ಶಿವನೂ ಆತನ ಪತ್ನಿ ಉಮೆಯೂ ಸೂರ್ಯದೇವನೂ ಇವರ ದೇವತೆಗಳು. ಸ್ವರ್ಗಾಧಿಪ ಇಂದ್ರ, ನರಕನಾಯಕ ಯಮ, ವಿದ್ಯಾಮೂರ್ತಿ ಗಣೇಶರಿಗೆ ಪೂಜೆ ಸಲ್ಲುತ್ತದೆ. ಬುದ್ಧದೇವ ಶಿವನ ತಮ್ಮನೆಂದು ಇಲ್ಲಿನ ನಂಬಿಕೆ. ಭಾರತದಂತೆ ವರ್ಣಾಶ್ರಮ ಧರ್ಮಗಳೂ ಆತ್ಮ, ದೇಹಗಳನ್ನು ಕುರಿತ ತತ್ತ್ವ e್ಞÁನವೂ ಆಚರಣೆಯಲ್ಲಿವೆ. ನೃತ್ಯ ಗೀತ ಗಾಯನಗಳಲ್ಲಿ ಪ್ರೌಢಿಮೆ ಗಳಿಸಿರುವ ಈ ಜನದ ಮೇಲೆ ಭಾರತೀಯ ಸಂಸ್ಕøತಿಯ ಅಚ್ಚು ಒತ್ತಿದೆ. ಪೌರಸ್ತ್ಯನಂದನವೆಂದು ಹೆಸರಾಗಿರುವ ಜಾವಾದ್ವೀಪ ಲಲಿತಕಲೆಗಳಿಗಾಗಿ ಹೆಸರು ಪಡೆದಿದೆ. ಈ ಸುಂದರ ದ್ವೀಪದ ಜನ ಮುಖ್ಯವಾಗಿ ಇಸ್ಲಾಂ ಮತಾವಲಂಬಿಗಳು. ಇಲ್ಲಿನ ಟೆಂಗುವನ್ ಎಂಬ ಹೆಸರಿನ ಜನ ವ್ಯವಸಾಯ ನೇಯ್ಗೆ ಚಮಕಿ ಕೆಲಸ, ಚಿನ್ನ ಬೆಳ್ಳಿಯ ಕುಸುರಿ ಕೆಲಸ, ಎರಕದ ಪಾತ್ರೆಯ ಕೆಲಸಗಳಲ್ಲಿ ಪ್ರವೀಣರು. ಪಟ ಹಾರಿಸುವುದರಲ್ಲಿ, ಸೂತ್ರದ ಗೊಂಬೆಯಾಟದಲ್ಲಿ, ಮುಖವಾಡದ ನಾಟಕಾಭಿನಯದಲ್ಲಿ ಇವರಿಗೆ ಎಣೆ ಇಲ್ಲದ ಉತ್ಸಾಹ. ಬೋರೋಬುದರ್ ಎಂಬಲ್ಲಿನ, ಮೆದುಕಲ್ಲಿನಲ್ಲಿ ಕಡೆದು ಮಾಡಿದ, ಕಲಾಮಂಟಪಗಳು ಜಗತ್ಪ್ರಸಿದ್ಧ. ಈ ಗುಹಾಂತರ್ದೇವಾಲಯಗಳ ಸಮೂಹದಲ್ಲಿ ಜನಜೀವನದ ನಾನಾ ಚಿತ್ರಗಳನ್ನೂ ಬುದ್ಧದೇವನ ಜೀವನಚಿತ್ರಗಳನ್ನೂ ಕಡೆದು ನಿಲ್ಲಿಸಿದ ಕಲಾಸೌಂದರ್ಯ ಎಂಟನೆಯ ಶತಮಾನದಿಂದ ಮಾಸದೆ ನಿಂತಿದೆ. ಸುಮಾತ್ರ ದ್ವೀಪದ ಬಾಟಕ್ ಹಾಗೂ ಮೆನಾಂಗ್ ಬೌ ಜನಾಂಗದಲ್ಲಿ ಹೆಣ್ಣಿಗೆ ಪ್ರಾಶಸ್ತ್ಯ ಹೆಚ್ಚು. ಒಟ್ಟು ಪಂಗಡವೆಲ್ಲ ಮಹಾಗರ್ಭ ಎಂಬ ಹೆಸರಿನ ಒಂದೇ ವಿಶಾಲವಾದ ತೊಟ್ಟಿಯಲ್ಲಿ ವಾಸಮಾಡುತ್ತದೆ. ಇಂಥ ನಾಲ್ಕಾರು ಮಹಾಗರ್ಭಗಳು ಕೂಡಿ ಸುಕು ಎಂಬ ಒಂದು ಗ್ರಾಮವಾಗುತ್ತದೆ. ನಾಯಿಯ ಹಲ್ಲಿನಂತೆ ಕಾಣದಿರಲಿ ಎಂದು ಈ ಜನ ಹಲ್ಲಿಗೆ ಸಾಣೆ ಹಿಡಿಸಿಕೊಂಡು ಕಾಚು ಹಚ್ಚಿಕೊಳ್ಳುತ್ತಾರೆ.

ಭಾರತದೊಡನೆ ಸಂಬಂಧ

[ಬದಲಾಯಿಸಿ]

ಭಾರತಕ್ಕೂ ಇಂಡೊನೇಷ್ಯಕ್ಕೂ ಪ್ರಾಚೀನ ಕಾಲದಿಂದಲೂ ಸಾಂಸ್ಕøತಿಕ ಸಂಪರ್ಕಗಳೇರ್ಪಟ್ಟಿದ್ದವು. ನಮ್ಮ ಪುರಾಣಗ್ರಂಥಗಳಲ್ಲೂ ಭೂಗೋಳಶಾಸ್ತ್ರಜ್ಞ ಟಾಲೆಮಿಯ ಗ್ರಂಥದಲ್ಲೂ ಇಂಡೊನೇಷ್ಯದ ಅನೇಕ ಭಾಗಗಳ ಉಲ್ಲೇಖವಿದೆ. ಅಂದರೆ ಕ್ರಿ. ಶ. ಒಂದು ಎರಡನೆಯ ಶತಮಾನಗಳಿಂದಲೇ ಈ ಸಂಬಂಧಗಳು ಬಲವತ್ತರವಾಗಿದ್ದುವು. ಕ್ರಿ. ಶ. ಒಂದನೆಯ ಶತಮಾನದಲ್ಲಿ ಲಂಗ್-ಯು-ಸು ಎಂಬ ರಾಜ್ಯವಿತ್ತೆಂದು ಲಿಯಾಮಗ್ ವಂಶಾನುಚರಿತೆಯಿಂದ ತಿಳಿಯುತ್ತದೆ. ಅದೇ ರೀತಿಯಲ್ಲಿ ಕರ್ಮರಂಗ, ಕಲಶಪುರ, ಕಲಾ, ಕಾನ್ತೊಲಿ ಮುಂತಾದ ಭಾರತೀಯ ರಾಜ್ಯಗಳಿದ್ದುವು. ಇಂಡೊನೇಷ್ಯದ ವಿವಿಧ ಸ್ಥಳಗಳಲ್ಲಿ ನಡೆದಿರುವ ಉತ್ಪನ್ನಗಳಿಂದ ಈ ಅಂಶಗಳು ಸ್ಪಷ್ಟವಾಗುತ್ತವೆ. ಸುಂಗೈ ಎಂಬಲ್ಲಿ ಶಿವ, ದುರ್ಗ, ಗಣೇಶ, ನಂದಿ ಮುಂತಾದ ದೇವತೆಗಳ ವಿಗ್ರಹಗಳ ಒಂದು ದೇವಾಲಯವೂ ಕೆಡ್ಡಾದಲ್ಲಿ ಸಂಸ್ಕøತಶಾಸನಗಳಿರುವ ಬೌದ್ಧ ದೇವಾಲಯವೂ ಸಿಂಗ್‍ನಲ್ಲಿ ವಿಷ್ಣುವಿನ ವಿಗ್ರಹವೂ ದೊರಕಿದೆ.ಭಾರತದೊಂದಿಗೆ ಸಾಂಸ್ಕøತಿಕ ಸಂಪರ್ಕಗಳು ಬಲವಾಗಿ, ಇಂಡೊನೇಷ್ಯದಲ್ಲಿ ಹಿಂದೂ ರಾಜ್ಯಗಳು ಸ್ಥಾಪಿತವಾದುವು. ಅಜಿಶಕ ಎಂಬ ಭಾರತೀಯ ಮೊಟ್ಟಮೊದಲಿಗೆ ಯವ (ಜಾವಾ) ದ್ವೀಪಕ್ಕೆ ಹೋಗಿ ಅಲ್ಲಿನ ರಾಕ್ಷಸ ಜನಗಳಿಗೆ ನಾಗರಿಕತೆ ಕಲಿಸಿದನೆಂದು ದಂತಕಥೆಗಳು ತಿಳಿಸುತ್ತವೆ. ಇನ್ನೊಂದು ಕಥೆಯಿಂದ ಕಳಿಂಗ ದೇಶದಿಂದ ಇಪ್ಪತ್ತು ಸಾವಿರ ಸಂಸಾರಗಳು ಜಾವಾದ್ವೀಪಕ್ಕೆ ಹೋಗಿ, ಅಲ್ಲಿಯೇ ನೆಲೆಸಿ ನಾಗರಿಕತೆ ಬೆಳೆಸಿದವೆಂದು ಗೊತ್ತಾಗುತ್ತದೆ. ಜಾವಾದ್ವೀಪದ ಮೊದಲನೆಯ ರಾಜ ದೇವವರ್ಮ ಕ್ರಿ. ಶ. 132ರಲ್ಲಿ ಚೀನದೇಶಕ್ಕೆ ರಾಯಭಾರಿಯನ್ನು ಕಳುಹಿಸಿದ್ದ. ಷಾಹಿಯಾನ್ ಜಾವಾಕ್ಕೆ ಭೇಟಿ ಕೊಟ್ಟಾಗ, ಅಲ್ಲಿ ಬೌದ್ಧ ಧರ್ಮ ವಿಶೇಷವಾಗಿ ಪ್ರಚಾರದಲ್ಲಿತ್ತು. ಅಲ್ಲಿ ಆಳುತ್ತಿದ್ದ ಪೂರ್ಣವರ್ಮ ರಾಜ ಬಹು ಪ್ರಸಿದ್ಧ. ಮಧ್ಯ ಜಾವಾದಲ್ಲಿ ಹೊಲಿಂಗ್ ಅಥವಾ ಕಳಿಂಗ ಎಂಬ ಇನ್ನೊಂದು ರಾಜ್ಯವಿತ್ತು.

ಭಾರತ ಮತ್ತು ಚೀನಾ

[ಬದಲಾಯಿಸಿ]

ಭಾರತ ಮತ್ತು ಚೀನಾ ದೇಶಗಳ ಮಾರ್ಗ ಮಧ್ಯದಲ್ಲಿ ಸುಮಾತ್ರ ಇರುವುದರಿಂದ ಕ್ರಿಸ್ತಪೂರ್ವದಲ್ಲಿಯೇ ಇಲ್ಲಿಗೆ ಹಿಂದೂಗಳು ಬಂದು ನೆಲೆಸಿರಬೇಕೆಂದು ಊಹೆ. ಅಮರಾವತಿ ಶಿಲ್ಪಕಲೆಗೆ ಸೇರಿದ ಬುದ್ಧನ ವಿಗ್ರಹವೊಂದು ಪಾಲೆಂಬಾಗ್ ಎಂಬಲ್ಲಿ ದೊರಕಿರುವುದು ಗಮನಾರ್ಹ. ಸುಮಾತ್ರದ ಅತಿ ಮುಖ್ಯ ರಾಜ್ಯ ಶ್ರೀವಿಜಯ. ಇದು ಕ್ರಿ. ಶ. ನಾಲ್ಕನೆಯ ಶತಮಾನದಲ್ಲಿ ಸ್ಥಾಪಿತವಾಯಿತು. ಇತ್ಸಿಂಗನ ಬರವಣಿಗೆಯ ಪ್ರಕಾರ ಶ್ರೀವಿಜಯ ಪ್ರಮುಖ ಬೌದ್ಧ ಯಾತ್ರಾಸ್ಥಳವೂ, ಮುಖ್ಯ ವ್ಯಾಪಾರ ಕೇಂದ್ರವೂ ಆಗಿತ್ತು. ಕ್ರಿ. ಶ. 64ಂರಿಂದ ಶ್ರೀವಿಜಯ ರಾಜ್ಯ ಚೀನಾದೇಶದೊಡನೆ ರಾಜತಾಂತ್ರಿಕ ಸಂಬಂಧ ಬೆಳೆಸಿಕೊಂಡಿತು.ಕ್ರಿ. ಶ. ನಾಲ್ಕನೆಯ ಶತಮಾನಕ್ಕೆ ಸೇರಿದ ನಾಲ್ಕು ಸಂಸ್ಕøತ ಶಾಸನಗಳು ಬೋರ್ನಿಯೊದಲ್ಲಿ ದೊರಕಿರುವುದರಿಂದ, ಆ ಕಾಲಕ್ಕಾಗಲೇ ಅಲ್ಲಿ ಭಾರತೀಯ ಸಂಸ್ಕøತಿಯ ಪ್ರಭಾವ ಹರಡಿತ್ತೆಂದು ಗೊತ್ತಾಗುತ್ತದೆ. ಕುಂಡುಂಗ ಅಥವಾ ಕೌಂಡಿನ್ಯ ಎಂಬುವನ ಮೊಮ್ಮಗನೂ ಅಶ್ವವರ್ಮನ ಮಗನೂ ಆದ ಮೂಲವರ್ಮನೆಂಬ ಇಲ್ಲಿಯ ರಾಜ ಬಹುಸುವರ್ಣಕ ಯಜ್ಞ ಮಾಡಿ, ಕುಟೆ ಎಂಬಲ್ಲಿ ಯೂಪಶಾಸನ ಬರೆಯಿಸಿದ. ಕೆಲವು ಕಡೆಗಳಲ್ಲಿ ಶೈವ ಮತ್ತು ಬೋರ್ನಿಯೊಳಗಿದ್ದ ಸಾಂಸ್ಕøತಿಕ ಸಂಬಂಧದ ಪ್ರಾಚೀನತೆ ಸ್ಪಷ್ಟಪಡುತ್ತದೆ.

ಜಾವಾದ್ವೀಪ

[ಬದಲಾಯಿಸಿ]

ಜಾವಾದ್ವೀಪಕ್ಕೆ ಸಮೀಪವಾಗಿರುವ ಬಾಲಿದ್ವೀಪ ಇಂದಿಗೂ ಅದೇ ಭಾರತೀಯ ಹೆಸರನ್ನೂ ಬಹುಮಟ್ಟಿಗೆ ಭಾರತೀಯ ಸಂಸ್ಕøತಿಯ ಪ್ರಭಾವವನ್ನೂ ಉಳಿಸಿಕೊಂಡು ಬಂದಿದೆ. ಆದರೆ ಪ್ರಾಚೀನ ಅವಶೇಷಗಳು ಇಲ್ಲಿ ದೊರಕಿಲ್ಲವಾದ್ದರಿಂದ ಚೀನೀ ವಂಶಾನುಚರಿತೆಗಳೇ ಬಾಲಿದ್ವೀಪದ ಪ್ರಾಚೀನ ಚರಿತ್ರೆಗೆ ಆಧಾರಗಳಾಗಿವೆ. ಕ್ರಿ. ಶ. ಆರನೆಯ ಶತಮಾನದ ಸುಯಿ ರಾಜವಂಶ ಚರಿತ್ರೆಯಿಂದ, ಬಾಲಿದ್ವೀಪದ ರಾಜ ಕೌಂಡಿನ್ಯವಂಶದ ಕ್ಷತ್ರಿಯನಾಗಿದ್ದನೆಂದೂ ಅವನು ಸರ್ವಾಸ್ತಿವಾದ ಪಂಥದ ಬೌದ್ಧ ಧರ್ಮಕ್ಕೆ ವಿಶೇಷ ಪ್ರೋತ್ಸಾಹ ಕೊಟ್ಟಿದ್ದನೆಂದೂ ಗೊತ್ತಾಗುತ್ತದೆ.ಕ್ರಿ. ಶ. ಎಂಟನೆಯ ಶತಮಾನದಲ್ಲಿ ಈ ಎಲ್ಲ ದ್ವೀಪಗಳನ್ನೂ ಒಟ್ಟುಗೂಡಿಸಿ ಶೈಲೇಂದ್ರ ವಂಶದ ಅರಸರು ಶೈಲೇಂದ್ರ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಇದರಿಂದ ಇಂಡೊನೇಷ್ಯದಲ್ಲಿ ಮೊಟ್ಟಮೊದಲ ಬಾರಿಗೆ ರಾಜಕೀಯ ಭದ್ರತೆ ಉಂಟಾಯಿತು. ಈ ಶೈಲೇಂದ್ರರು ತಮಿಳುನಾಡಿನವರೇ, ಬಂಗಾಳದವರೇ, ಕಂಬುಜದವರೇ, ಆಂಧ್ರರೇ ಅಥವಾ ಕನ್ನಡಿಗರೇ ಎಂಬ ವಿಚಾರದಲ್ಲಿ ಒಮ್ಮತವಿಲ್ಲ. ಇವರು ಕಂಬುಜ, ಚಂಪ ಮುಂತಾದ ರಾಜ್ಯಗಳ ಮೇಲೆ ಯುದ್ಧ ಮಾಡಿ, ಬಲಿಷ್ಠರಾದ ರಾಜರೆನಿಸಿಕೊಂಡರು. ಕ್ರಿ. ಶ. ಹನ್ನೊಂದನೆಯ ಶತಮಾನದಲ್ಲಿ ಶೈಲೇಂದ್ರರೂ ಭಾರತದ ಚೋಳರೂ ಸ್ನೇಹದಿಂದಿದ್ದರು. ಶೈಲೇಂದ್ರ ರಾಜ ಚೂಡಾಮಣಿವರ್ಮ ದಕ್ಷಿಣಭಾರತದ ನಾಗಪಟ್ಟಣದಲ್ಲಿ ಕ್ರಿ. ಶ. 1005ರಲ್ಲಿ ಒಂದು ಬೌದ್ಧವಿಹಾರ ನಿರ್ಮಿಸಿದ. ಇದಕ್ಕಾಗಿ ಚೋಳ ರಾಜರಾಜ ಒಂದು ಹಳ್ಳಿಯನ್ನು ದತ್ತಿಯಾಗಿ ಬಿಟ್ಟುಕೊಟ್ಟ. ಆದರೆ ಇವರ ಸ್ನೇಹ ಬಹುಕಾಲ ಉಳಿಯಲಿಲ್ಲ. ರಾಜೇಂದ್ರ ಚೋಳ 1024-25ರಲ್ಲಿ ಶ್ರೀವಿಜಯದ ಶೈಲೇಂದ್ರರ ಮೇಲೆ ಬಲಯುತವಾದ ನೌಕಾ ಸೈನ್ಯ ಕಳುಹಿಸಿದ. ಶೈಲೇಂದ್ರರು ಸೋತರು. ಮೇಲಿಂದ ಮೇಲೆ ಯುದ್ಧ ಮಾಡಿದ ಶೈಲೇಂದ್ರರು ದುರ್ಬಲರಾಗಿ ಕ್ರಿ. ಶ. ಹದಿನಾಲ್ಕನೆಯ ಶತಮಾನದ ಸಮಯಕ್ಕೆ ಅವನತಿ ಹೊಂದಿದರು.

ಮತರಾಂ ರಾಜ್ಯ ಸ್ಥಾಪನೆ

[ಬದಲಾಯಿಸಿ]

ಈ ಮಧ್ಯದಲ್ಲಿ ಮಧ್ಯಜಾವಾದಲ್ಲಿ ಸನ್ನಹ ಎಂಬುವನಿಂದ ಎಂಟನೆಯ ಶತಮಾನದಲ್ಲಿ ಮತರಾಂ ರಾಜ್ಯ ಸ್ಥಾಪನೆಯಾಯಿತು. ಶೈಲೇಂದ್ರರು ಬಲಯುತರಾಗಿದ್ದುದರಿಂದ, ರಾಜಕೀಯದಲ್ಲಿ ಮತರಾಂ ರಾಜ್ಯವು ಹೆಚ್ಚಿಗೆ ಏನನ್ನೂ ಸಾಧಿಸಲಿಲ್ಲ. ಆದರೆ ಈ ಕಾಲ ಜಾವ ಸಾಹಿತ್ಯ ದೃಷ್ಟಿಯಿಂದ ಬಹು ಮುಖ್ಯವಾದದ್ದು. ಸಂಸ್ಕøತ ಗ್ರಂಥಗಳು ಜಾವಾ ಭಾಷೆಗೆ ಭಾಷಾಂತರಿಸಲ್ಪಟ್ಟವು. ಪೂರ್ವಜಾವಾದಲ್ಲಿ ಸಿಂಡಕ್ ಎಂಬ ರಾಜ ಶ್ರೀ ಈಶಾನ ವಿಕ್ರಮ ಧರ್ಮೋಸತುಂಗ ವಿಜಯದೇವ ಎಂಬ ಹೆಸರಿನಿಂದ ಕ್ರಿ. ಶ. 929ದಿಂದ ರಾಜ್ಯವಾಳಿದ. ಇವರ ವಂಶಜನಾದ ಏರ್ಲಂಗ (ನೋಡಿ- ಏರ್ಲಂಗ) ಜಾವಾ ಚರಿತ್ರೆಯಲ್ಲಿ ಅತ್ಯಂತ ಪ್ರತಿಭಾವಂತರಾಜ. ಏರ್ಲಂಗನ ಮರಣಾನಂತರ ಕಡಿರಿ ರಾಜ್ಯಸ್ಥಾಪನೆಯಾಯಿತು. (ನೋಡಿ- ಕಡಿರಿ-ರಾಜ್ಯ) ಈ ರಾಜ್ಯ ಹದಿಮೂರನೆಯ ಶತಮಾನದಲ್ಲಿ ನಾಶವಾದ ಅನಂತರ ಸಿಂಘಸಾರಿ ರಾಜ್ಯ ನಾಶವಾಗಿ ಮಜಾಪಹಿತ್ ರಾಜ್ಯ ತಲೆಯೆತ್ತಿತು. ಕೃತರಾಜಸ್, ಜಯನಗರ, ರಾಜಸನಗರ ಮುಂತಾದ ರಾಜರುಗಳು ಆಳಿದ ಮೇಲೆ 1447ರಲ್ಲಿ ಈ ರಾಜ್ಯ ನಾಶವಾಯಿತು. ಶೈವ ವೈಷ್ಣವ ಧರ್ಮಗಳಿಗೆ ವಿಶೇಷ ಪ್ರೋತ್ಸಾಹ ಕೊಟ್ಟಿತು.ಕ್ರಿ. ಶ. ಹದಿನೈದನೆಯ ಶತಮಾನದ ಅನಂತರ ಭಾರತೀಯ ಸಂಸ್ಕøತಿಯ ಪ್ರಭಾವ ಕಡಿಮೆಯಾಯಿತು. ಬಾಲಿದ್ವೀಪ ಮಹಮ್ಮದೀಯರ ಆಳ್ವಿಕೆಗೆ ಸೇರಿತು. ಮಲಕ್ಕ ರಾಜ್ಯ ಪೋರ್ಚುಗೀಸರ ವಶವಾಯಿತು. ಮಹಮ್ಮದೀಯ ವ್ಯಾಪಾರಗಾರರು ಜಾವಾದ ರಾಜಕೀಯದಲ್ಲಿ ಪ್ರವೇಶಿಸಿ, ಹದಿನಾರನೆಯ ಶತಮಾನದ ಹೊತ್ತಿಗೆ ಅದು ಅವರ ವಶವಾಯಿತು. ಹಿಂದೂ ರಾಜ್ಯಗಳು ನಾಶವಾದುವು.

ಈಚಿನ ಇತಿಹಾಸ

[ಬದಲಾಯಿಸಿ]

ಡಚ್ಚರು ಪಶ್ಚಿಮ ಜಾವಾದಲ್ಲಿ ವ್ಯಾಪಾರ ಪ್ರಾರಂಭಿಸಿದ್ದು 1602ರಲ್ಲಿ. ಇಂಡೊನೇಷ್ಯದ ಖನಿಜಸಂಪತ್ತು ಹಾಗೂ ಎಲ್ಲ ಉತ್ಪನ್ನಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು ವ್ಯಾಪಾರದ ಏಕಸ್ವಾಮ್ಯ ಪಡೆದುಕೊಳ್ಳುವ ಸಲುವಾಗಿ ಅವರು ಪೋರ್ಚುಗೀಸರೊಡನೆ ಹಾಗೂ ಇಂಗ್ಲಿಷರೊಡನೆ ಯುದ್ಧ ಮಾಡಿದರು. ಹದಿನೆಂಟನೆಯ ಶತಮಾನದ ಅಂತ್ಯಭಾಗದೊಳಗಾಗಿ, ವ್ಯಾಪಾರದೊಡನೆ ರಾಜಕೀಯವೂ ಕೂಡಿ, ಡಚ್ಚರು ಇಂಡೊನೇಷ್ಯದ ಮೇಲೆ ಬಿಗಿಯಾದ ಆಡಳಿತವನ್ನೇ ಪ್ರಾರಂಭಿಸಿದರು. ನೆಲದ ಜನ ದಂಗೆ ಎದ್ದರು. ಅವರ ಜೊತೆಗೆ ವಲಸೆ ಬಂದ ಚೀನೀಯರೂ ಕೂಡಿಕೊಂಡರು. ಬಿಳಿಯರು ಎರಡು ಶತಮಾನಗಳ ಕಾಲ ಇಂಡೊನೇಷ್ಯದ ಜನರೊಂದಿಗೆ ವಿವಾಹ ಸಂಬಂಧ ಬೆಳೆಸಿದ್ದರಿಂದ ಹೊಸದಾಗಿ ಹುಟ್ಟಿದ ಒಂದು ಜನಾಂಗದವರು ಮಾತೃಭೂಮಿಯ ಸಮಸ್ಯೆ ಸ್ವಾತಂತ್ರ್ಯಗಳನ್ನು ಕುರಿತು ಚಿಂತಿಸತೊಡಗಿದರು. ದಂಗೆಗಳ ಫಲವಾಗಿ ಜಾವಾ, ಸುಮಾತ್ರ, ಬೋರ್ನಿಯೊ ಹಾಗೂ ಸೆಲಿಬಸ್ ದ್ವೀಪಗಳಷ್ಟೇ ಡಚ್ಚರ ಅಧೀನದಲ್ಲಿ ಉಳಿದು ತುಯ್ದಾಡ ತೊಡಗಿದಾಗ 1798ರಲ್ಲಿ ಡಚ್ ಈಸ್ಟ್ ಇಂಡಿಯ ಕಂಪನಿಯನ್ನು ಮುಚ್ಚಬೇಕಾಯಿತು. 1811ರಲ್ಲಿ, ಡಚ್ ಹಾಗೂ ಫ್ರೆಂಚ್ ಪಡೆಗಳನ್ನು ಸೋಲಿಸಿದ ಇಂಗ್ಲಿಷರು ಜಾವಾ ದ್ವೀಪವನ್ನು ವಶಪಡಿಸಿಕೊಂಡು, ಮುಂದೆ 1816ರಲ್ಲಿ ಹಿಂದಿರುಗಿಸಿ ಅದಕ್ಕೆ ಬದಲಾಗಿ ಸಿಂಹಳದ್ವೀಪದ ಮೇಲಿನ ತಮ್ಮ ಸ್ವಾಮ್ಯ ಸ್ಥಿರಪಡಿಸಿಕೊಂಡರು. ಅದರಿಂದಾಗಿ, ಮತ್ತೆ ಇಂಡೊನೇಷ್ಯದ ಮೇಲೆ ಡಚ್ಚರ ಆಡಳಿತ ಬಿಗಿಯಾಯಿತು. ಹಾಲೆಂಡಿನ ಸಾರ್ವಭೌಮರು ನಿಯೋಜಿಸಿದ ಒಬ್ಬ ಗವರ್ನರ್-ಜನರಲ್ಲನ ಅಧಿಕಾರದಲ್ಲಿ-ಹೆಚ್ಚು ಕಡಿಮೆ ನಿರಂಕುಶವೆನಿಸುವಂಥ ಅಧಿಕಾರದಲ್ಲಿ ಆ ದ್ವೀಪಸಮೂಹ ಉಳಿದು, ಒಳಗೊಳಗೆ ತಳಮಳಿಸಿ ಸ್ವಾತಂತ್ರ್ಯ ಸಾಧನೆಗೆ ನಿಯೋಜಿತ ಕಾರ್ಯಕ್ರಮ ರೂಪಿಸಿಕೊಂಡಿತು. 1920ರವರೆಗೂ ಆಡಳಿತ ಸಲಹಾ ಮಂಡಳಿಯಲ್ಲಿ ಒಬ್ಬ ಇಂಡೊನೇಷ್ಯನ್ನನಿಗೂ ಸ್ಥಾನವಿರಲಿಲ್ಲ. ಜನಮತವನ್ನು ಕಡೆಗಣಿಸಲಾರದೆ ಆ ವರ್ಷ ಐದು ಮಂದಿಯ ಆ ಸಲಹಾಸಮಿತಿಗೆ ಇಬ್ಬರು ಇಂಡೊನೇಷ್ಯರನ್ನು ಸೇರಿಸಿಕೊಳ್ಳಲಾಯಿತು. 1916ರಲ್ಲಿ ನಿಯೋಜಿಸಿದ ಪೋಕ್ಷ್ ರಾಡ್ ಎಂಬ ಹೆಸರಿನ ಈ ಜನತಾ ಸಮಿತಿಗೆ ಜನತೆಯ ಬೆಂಬಲ ಸ್ವಲ್ಪವಾದರೂ ದೊರಕಿದ್ದು 1920ರಲ್ಲಿ. ವರ್ಷದಿಂದ ವರ್ಷಕ್ಕೆ ಮತ್ತೆ ಮತ್ತೆ ಸುಧಾರಣೆಗಳಾಗಿ, 1930ರಲ್ಲಿ ಆ ಸಭೆಯ ಅರವತ್ತುಮಂದಿ ಸದಸ್ಯರಲ್ಲಿ ಅರ್ಧಪಾಲಿನಷ್ಟು ಸಂಖ್ಯೆಯಲ್ಲಿ ನೆಲದ ಜನರೇ ಇರಬೇಕೆಂಬ ನಿರ್ಣಯವನ್ನು ಡಚ್ಚರು ಕೈಗೊಳ್ಳಬೇಕಾಯಿತು. 1938ರಲ್ಲಿ ಆಡಳಿತದ ಹೊಣೆಗಾರಿಕೆಯಲ್ಲಿ ಪಾಲನ್ನು ಇಂಡೊನೇಷ್ಯನ್ನರಿಗೆ ಕೊಡುವ ನಿರ್ಣಯವೂ ಆಯಿತು. ಆದರೆ ಇಂಡೊನೇಷ್ಯದಲ್ಲಿ ಡಚ್ಚರಿಗೂ ನಿವಾಸಿಗಳಿಗೂ ಪ್ರತ್ಯೇಕವಾದ ವಿದ್ಯಾಭ್ಯಾಸ ಪದ್ಧತಿಯೂ ನ್ಯಾಯದಾನ ಪದ್ಧತಿಯೂ ಆಚರಣೆಯಲ್ಲಿದ್ದುವು.

ಇಂಡೊನೇಷ್ಯನ್ ಪಕ್ಷ

[ಬದಲಾಯಿಸಿ]

ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೂಡಿದ ಆಂದೋಳನದ ನಡೆಯನ್ನು ಇಂಡೊನೇಷ್ಯದ ಸ್ವಾತಂತ್ರ್ಯ ಪ್ರೇಮಿಗಳು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಮಾತೃಭೂಮಿಯ ಸ್ವಾತಂತ್ರ್ಯ ಸಾಧನೆಗಾಗಿ 1931ರಲೇ ಇಂಡೊನೇಷ್ಯನ್ ಪಕ್ಷ ಅಲ್ಲಿ ಅಸಹಕಾರದ ಆಂದೋಳನ ಪ್ರಾರಂಭಿಸಿತು. 1936ರಲ್ಲಿ ಹಿಂದೆ ಹೇಳಿದ ಪೋಕ್ಷ್ ರಾಡ್ ಎಂಬ ಹೆಸರಿನ ಆಡಳಿತ ಸಲಹೆಗಾರ ಮಂಡಳಿ ಅಧಿರಾಜ್ಯ ಸ್ಥಾನ ಬೇಕೆಂಬ ಒತ್ತಾಯದ ಬೇಡಿಕೆಯನ್ನು ಹಾಲೆಂಡಿನ ಮುಂದೆ ಇಟ್ಟಿತು. ಯಾವ ಉಪಯೋಗವೂ ಆಗದಿದ್ದುದರಿಂದ ಮತ್ತೆ ಆಂದೋಳನಗಳೂ ದಂಗೆಗಳೂ ಸಂಭವಿಸಿದುವು. ಅಷ್ಟರಲ್ಲಿ ಎರಡನೆಯ ಮಹಾಯುದ್ಧ ಬಂತು. ಇಂಡೊನೇಷ್ಯದಲ್ಲಿನ ಡಚ್ ಆಡಳಿತ ಕುಸಿಯಿತು. ಯುದ್ಧ ಮುಗಿದೊಡನೆಯೇ ಸ್ವಾತಂತ್ರ್ಯ ಕೊಡುವುದಾಗಿ ಘೋಷಿಸಿದ ಡಚ್ಚರು ತಮ್ಮ ವಸಾಹತನ್ನು ಇನ್ನೂ ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದರು. ಫೆಬ್ರವರಿ 1942ರಲ್ಲಿ ಇಲ್ಲಿ ಜಪಾನೀ ಆಕ್ರಮಣವಾಯಿತು. 1943ನೆಯ ಅಕ್ಟೋಬರ್ ತಿಂಗಳಲ್ಲಿ ಜಪಾನೀಯರು ಇಂಡೊನೇಷ್ಯದ ಕೇಂದ್ರಸಮಿತಿಯನ್ನು ನಿರ್ಮಿಸಿದರು. ಆಡಳಿತದಲ್ಲಿ ಅಲ್ಲಿನ ಜನರಿಗೂ ಪಾಲುಕೊಟ್ಟರು. ಮುಂದೆ ಸಂಪೂರ್ಣ ಸ್ವಾತಂತ್ರ್ಯ ಕೊಡುವುದಾಗಿ ಘೋಷಿಸಿದರು. ಪಶ್ಚಿಮ ಹಾಗೂ ಮಧ್ಯಜಾವಾಕ್ಕೆ ಗವರ್ನರುಗಳಾಗಿ ಇಬ್ಬರು ಇಂಡೊನೇಷ್ಯನ್ನರನ್ನೇ ನೇಮಿಸಿದರು. ಇಷ್ಟರಲ್ಲಿ ಡಚ್ಚರಿಂದ ಬಂಧಿತರಾಗಿದ್ದ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದ ಅಧ್ವರ್ಯ ಡಾ. ಸುಕರ್ನೊ ಬಿಡುಗಡೆಗೊಂಡರು. ಐದುಕೋಟಿ ಇಂಡೊನೇಷ್ಯನ್ನರ ಪ್ರತಿನಿಧಿಯೆನಿಸಿ ಅವರು ಜಪಾನಿಗೆ ತೆರಳಿ ಅಲ್ಲಿ ಸಾಮ್ರಾಟರಿಂದ ಪ್ರಶಸ್ತಿ ಪಡೆದು ಹಿಂದಿರುಗಿ ಬಂದರು. ಸ್ವಾತಂತ್ರ್ಯ ಸಾಧಕ ಪಡೆಕಟ್ಟಿ ಶಿಕ್ಷಣ ಕೊಟ್ಟರು. ಭಾರತದ ಬಿಡುಗಡೆಗಾಗಿ ನೇತಾಜಿ ಸುಭಾಷ್‍ಚಂದ್ರ ಬೋಸರು ಕಟ್ಟಿದ ಸ್ವಾತಂತ್ರ್ಯ ಯೋಧರ ಪಡೆಯಂತೆಯೇ ಅದೂ ಸಿದ್ಧವಾಯಿತು. ಹೆಣ್ಣು ಮಕ್ಕಳೂ ಕಣಕ್ಕಿಳಿದರು. 1945ರ ಆಗಸ್ಟ್ ಹದಿನೇಳರಂದು ಜಪಾನೀಯರು ಸೋತು ಮಿತ್ರರಾಷ್ಟ್ರಗಳಿಗೆ ಶರಣಾಗತರಾದರು. ಎರಡೇ ದಿನಗಳ ಅನಂತರ ಡಾ. ಸುಕರ್ನೊ ತಮ್ಮ ಅಧ್ಯಕ್ಷತೆಯಲ್ಲಿ ಇಂಡೊನೇಷ್ಯನ್ ಗಣತಂತ್ರ ರಾಜ್ಯ ಘೋಷಿಸಿದರು. ಡಾ. ಮಹಮದ್ ಹಟ್ಟಾ ಉಪಾಧ್ಯಕ್ಷರಾದರು. ಅಷ್ಟರಲ್ಲಿ ಡಚ್ಚರು ಧಾವಿಸಿ ಬಂದರು. ಸ್ವತಂತ್ರ ಇಂಡೊನೇಷ್ಯವನ್ನು ಪುರಸ್ಕರಿಸಲು ಅವರು ಒಪ್ಪಲಿಲ್ಲ. ಮತ್ತೆ ಸಂಗ್ರಾಮ ಆರಂಭವಾಯಿತು. ಡಾ. ಸುಕರ್ನೊ ವಿಶ್ವಸಂಸ್ಥೆಯ ನೆರವು ಬೇಡಿದರು. ನೆರೆ ರಾಷ್ಟ್ರಗಳ ನೇತಾರರನ್ನು ಆಹ್ವಾನಿಸಿದರು; ಅವರು ಪರಿಸ್ಥಿತಿಯನ್ನು ಪರಿಶೀಲಿಸಿ ಪ್ರಪಂಚಕ್ಕೆ ತಿಳಿಸುವಂತೆ ಕೇಳಿಕೊಂಡರು. ಡಚ್ಚರ ಬಗ್ಗೆ ಇಂಡೊನೇಷ್ಯದ ಜನತೆ ರೊಚ್ಚಿಗೆದ್ದಿತು. ಮತ್ತೆ ಮತ್ತೆ ಏರಿ ಬಂದ ಡಚ್ಚರನ್ನು ಹತ್ತಿಕ್ಕಿತು. 1949ರ ಡಿಸೆಂಬರ್ 27ರಂದು ನ್ಯೂಗಿನಿಯ ಪಶ್ಚಿಮ ಭಾಗವನ್ನು (ಪಶ್ಚಿಮ ಇರಿಯನ್) ಬಿಟ್ಟು ಉಳಿದ ಪ್ರದೇಶದ ಸಂಪೂರ್ಣ ಅಧಿಕಾರ ಇಂಡೊನೇಷ್ಯ ಗಣರಾಜ್ಯಕ್ಕೆ ವರ್ಗವಾಯಿತು. ಮುಂದೆ ವಿಶ್ವಸಂಸ್ಥೆಯ ಮಧ್ಯ ಪ್ರವೇಶದಿಂದ ಪಶ್ಚಿಮ ಇರಿಯನ್ ಪ್ರದೇಶ ಅದಕ್ಕೆ ಸೇರಿತು. ಇಂಡೊನೇಷ್ಯ ವಿಶ್ವಸಂಸ್ಥೆಯ ಸದಸ್ಯತ್ವವನ್ನೂ ಪಡೆದುಕೊಂಡಿತು. ಈ ದೇಶದ ಇತಿಹಾಸದ ಮುಂದಿನ ಮೈಲಿಗಲ್ಲು ಎಂದರೆ 1955ರಲ್ಲಿ ಇಂಡೊನೇಷ್ಯದ ಬಾಂಡುಂಗ್ ನಗರದಲ್ಲಿ ಸಮಾವೇಶವಾದ ಪೌರಸ್ತ್ಯರಾಷ್ಟ್ರಗಳ ಮಹಾ ಸಮ್ಮೇಳನ. (ನೋಡಿ- ಬಾಂಡುಂಗ್-ಸಮ್ಮೇಳನ) ಆಫ್ರಿಕ ಮತ್ತು ಏಷ್ಯ ಖಂಡಗಳ ಇಪ್ಪತ್ತೊಂಬತ್ತು ರಾಷ್ಟ್ರಗಳು ಭಾಗವಹಿಸಿದ್ದ ಈ ಮಹಾ ಸಮ್ಮೇಳನದಲ್ಲಿ ಪಂಚಶೀಲ ತತ್ತ್ವಗಳನ್ನು ಅಂಗೀಕರಿಸಲಾಯಿತು. (ನೋಡಿ- ಪಂಚಶೀಲ-2)

ಉಲ್ಲೇಖಗಳು

[ಬದಲಾಯಿಸಿ]