ಇಂಡಿಯನ್ನರು, ಲ್ಯಾಟಿನ್ ಮತ್ತು ಮಧ್ಯ ಅಮೆರಿಕದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲ್ಯಾಟಿನ್ ಮತ್ತು ಮಧ್ಯ ಅಮೆರಿಕದ ಮೂಲವಾಸಿಗಳು. ಯೂರೋಪಿಯನ್ನರು ವಲಸೆ ಬರುವ ಮೊದಲು ಇಲ್ಲಿ ಇವರ ಸಂಖ್ಯೆ 20 ಲಕ್ಷಕ್ಕೂ ಹೆಚ್ಚಾಗಿತ್ತೆಂಬ ಅಭಿಪ್ರಾಯವಿದೆ. ಮೆಕ್ಸಿಕೊ ಮತ್ತು ನೆರೆಹೊರೆಯ ಪ್ರದೇಶಗಳಲ್ಲೂ ಆಂಡೀಸ್ ಪರ್ವತ ಪ್ರದೇಶದಲ್ಲೂ ಇವರು ಹೆಚ್ಚು ಸಂಖ್ಯೆಯಲ್ಲಿದ್ದರು. ಮೆಕ್ಸಿಕೊ, ಗ್ವಾಟೆಮಾಲ, ಎಕ್ವಡಾರ್, ಬೊಲಿವಿಯ ಮತ್ತು ಪೆರು ಪ್ರಾಂತ್ಯಗಳಲ್ಲಿ ಈಗಲೂ ಸುಮಾರು ಅರ್ಧ ಭಾಗದಷ್ಟು ಜನ ಇಂಡಿಯನ್ನರು. ಒಂದು ಕಾಲದಲ್ಲಿ ಕ್ರಮೇಣ ನಶಿಸುತ್ತಿದ್ದ ಈ ಜನಾಂಗ ಇತ್ತೀಚೆಗೆ ಬೆಳೆಯುತ್ತಿರುವುದಲ್ಲದೆ ಆಧುನಿಕ ನಾಗರೀಕತೆಗೆ ಹೊಂದಿಕೊಳ್ಳುತ್ತಿದೆ.[೧]

ಇತಿಹಾಸ[ಬದಲಾಯಿಸಿ]

ಕ್ರಿಸ್ತಪೂರ್ವದಲ್ಲಿ ಸುಮಾರು 35,000 ವರ್ಷಗಳಷ್ಟು ಹಿಂದಿನಿಂದ ಮೂರನೆಯ ಸಹಸ್ರಮಾನದವರೆಗೂ ಬೇರಿಂಗ್ ಜಲಸಂಧಿಯ ಮಾರ್ಗವಾಗಿ ಅಲೆ ಅಲೆಯಾಗಿ ವಲಸೆ ಬರುತ್ತಿದ್ದ ಈ ಜನ ಇಡೀ ಅಮೆರಿಕ ಖಂಡದಲ್ಲಿ ಹಬ್ಬಿ ಬೇಟೆ, ಮೀನುಗಾರಿಕೆಗಳಿಂದ ಜೀವಿಸುತ್ತಿದ್ದರು. ಕ್ರಿ. ಪೂ. 2ನೆಯ ಸಹಸ್ರಮಾನದಲ್ಲಿ ವ್ಯವಸಾಯವನ್ನು ಪ್ರಾರಂಭಿಸಿ ಗ್ರಾಮೀಣ ಮತ್ತು ನಗರ ಸಂಸ್ಕøತಿಗಳನ್ನು ಬೆಳೆಸಿಕೊಂಡರು. ಪ್ರಾದೇಶಿಕ ವೈವಿಧ್ಯಗಳ ಪ್ರಭಾವದಿಂದ ಹಲವಿಧ ಸಂಸ್ಕøತಿಗಳು ಹುಟ್ಟಿಕೊಂಡವು. ಈ ಜನರಲ್ಲಿ ಸುಮಾರು 1,700 ಭಾಷೆಗಳು ಬಳಕೆಯಲ್ಲಿದ್ದುವು. ಪ್ರತಿಯೊಂದು ಗುಂಪಿನವರೂ ತಮ್ಮದೇ ಆದ ಭಾಷೆ ಬಳಸುತ್ತಿದ್ದರು.ಮಧ್ಯ ಅಮೆರಿಕ ಅಥವಾ ಮೆಕ್ಸಿಕೊ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ, ಅಮೆರಿಕ ಸಂಯುಕ್ತ ಸಂಸ್ಥಾನ ಆ ಪ್ರದೇಶಗಳನ್ನು ಗೆಲ್ಲುವ ಮೊದಲು, ಅನೇಕ ಗುಂಪುಗಳ ಇಂಡಿಯನ್ನರು ವಾಸಿಸುತ್ತಿದ್ದರು. ಅವರಲ್ಲಿ ನವಹೋ, ಪ್ಯುಬ್ಲೊ, ಹುಯಿಚೊಲ್ ಮುಂತಾದ ಪಂಗಡಗಳು ಮುಖ್ಯವಾದುವು. ಕ್ರಿ.ಶ. 2ನೆಯ ಶತಮಾನದ ಅನಂತರ ಮೆಕ್ಸಿಕೊದಲ್ಲಿ ಆಜ್ಟೆಕರೂ ಮಧ್ಯ ಅಮೆರಿಕದಲ್ಲಿ ಮಾಯ ಪಂಗಡದವರೂ ಉನ್ನತಮಟ್ಟದ ಸಂಸ್ಕøತಿಗಳನ್ನು ಬೆಳೆಸಿಕೊಂಡರು. ಹೈರೊಗ್ಲಿಫಿಕ್ ಬರವಣಿಗೆಯನ್ನೂ ಉನ್ನತಮಟ್ಟದ ರಾಜಕೀಯ ಮತ್ತು ಮತೀಯ ಪದ್ಧತಿಗಳನ್ನೂ ಕಲೆ ವಿe್ಞÁನಗಳನ್ನೂ ಬೆಳೆಸಿಕೊಂಡಿದ್ದರು.ಆಜ್ಟೆಕ್ ಜನ ಉತ್ತರದಿಂದ ವಲಸೆ ಬಂದ ಯುದ್ಧಪ್ರಿಯರು ಅಲೆಮಾರಿ ವರ್ಗಕ್ಕೆ ಸೇರಿದವರು. ಇವರಲ್ಲಿ ನರಬಲಿ ರೂಢಿಯಲ್ಲಿತ್ತು. ಇವರು ಉತ್ತಮ ಲೋಹದ ವಸ್ತು ಮತ್ತು ಮಣ್ಣಿನ ಪಾತ್ರೆಗಳನ್ನು ತಯಾರಿಸುತ್ತಿದ್ದರು. ವ್ಯವಸಾಯದಲ್ಲಿ ಪ್ರಗತಿ ಪರರಾಗಿದ್ದರು. ಇವರು ಹೆಚ್ಚಾಗಿ ಜೋಳ ಬೆಳೆಯುತ್ತಿದ್ದರು. ಎತ್ತರದ ಕಂಬಗಳಿಂದಲೂ ರೆಕ್ಕೆಯುಳ್ಳ ಸರ್ಪಗಳಿಂದಲೂ ಅಲಂಕೃತವಾದ ವಾಸ್ತುಶಿಲ್ಪಗಳನ್ನು ನಿರ್ಮಿಸಿದ್ದರು. ಈ ಸಂಸ್ಕøತಿಯಲ್ಲಿ ಮತಸಂಬಂಧವಾದ ವಿಷಯಗಳಿಗೆ ಹೆಚ್ಚು ಪ್ರಾಧಾನ್ಯವಿತ್ತು.[೨]


ಮಧ್ಯ ಅಮೆರಿಕದ ಮಾಯ ಜನರ ನಗರಗಳು[ಬದಲಾಯಿಸಿ]

ಮಧ್ಯ ಅಮೆರಿಕದ ಮಾಯ ಜನರ ನಗರಗಳು ಕ್ರಿ. ಶ. 14ನೆಯ ಶತಮಾನದ ಆದಿಭಾಗದಲ್ಲಿ ಪ್ರಾರಂಭವಾಗಿ ಕ್ರಿ. ಶ. 1511ರಲ್ಲಿ ಸ್ಪ್ಯಾನಿಷ್ ಜನರಿಂದ ನಾಶಗೊಂಡುವು. ಇವರು ಕಾಡು ಕಡಿದು ಬೇಸಾಯ ಮಾಡುತ್ತಿದ್ದರು. ಒಂದೆಡೆಯಲ್ಲಿ ಭೂಮಿಯ ಸಾರ ಮುಗಿದಾಗ ಆ ಸ್ಥಳ ಬಿಟ್ಟು ಬೇರೆಡೆಗೆ ಹೋಗುತ್ತಿದ್ದರು. ಅಲ್ಲಿ ಮತ್ತೆ ಇದೇ ರೀತಿ ವ್ಯವಸಾಯ ಮುಂದುವರಿಸುತ್ತಿದ್ದರು. ಅಡಿಗಡಿಗೆ ವ್ಯವಸಾಯ ಕ್ಷೇತ್ರ ಬದಲಾಗುತ್ತಿದ್ದುದರ ಫಲವಾಗಿ ಗ್ರಾಮಗಳು ಸ್ಥಳಾಂತರಗೊಳ್ಳುತ್ತಿದ್ದುದರಿಂದ ಇವರ ನಾಗರಿಕಜೀವನ ಬೆಳೆಯಲು ಅವಕಾಶವಿರಲಿಲ್ಲ. ಆದರೆ ಮತನಾಯಕರ ನಿವಾಸಕ್ಕಾಗಿ ಇವರು ದೇವಾಲಯ ಕೇಂದ್ರಸ್ಥಳಗಳಾದ ದೊಡ್ಡ ನಗರಗಳನ್ನು ನಿರ್ಮಿಸಿದ್ದರು. ಶಾಂತಿಪ್ರಿಯರಾದ ಈ ಜನರಲ್ಲಿ ಮತೀಯ ಜೀವನಕ್ಕೆ ಪ್ರಾಧಾನ್ಯವಿತ್ತು. ವಾಸ್ತುಶಿಲ್ಪವೂ ಶಿಲ್ಪಕಲೆಯೂ ಪಂಚಾಂಗ ಪದ್ಧತಿಯೂ ಉನ್ನತಮಟ್ಟಕ್ಕೇರಿದ್ದುವು. ದೇವಾಲಯಗಳನ್ನು ಇವರು ಕೃತಕ ದಿಬ್ಬದ ಮೇಲೋ ಪಿರಮಿಡ್ಡುಗಳ ಮೇಲೋ ನಿರ್ಮಿಸುತ್ತಿದ್ದರು. ಲೋಹದ ಬಳಕೆ ವಿರಳವಾಗಿತ್ತು. ಮರದಲ್ಲೂ ಅಮೂಲ್ಯವಾದ ಶಿಲೆಯಲ್ಲೂ ಜೇಡಿಯ ಮಣ್ಣಿನಲ್ಲೂ ಬಣ್ಣ ಬಣ್ಣದ ಶಿಲ್ಪಗಳನ್ನು ನಿರ್ಮಿಸುತ್ತಿದ್ದರು.ಅಂಡೀಸ್ ಪರ್ವತಗಳ ದಕ್ಷಿಣದಲ್ಲಿ ಬಹುಸಂಖ್ಯೆಯ ಇಂಡಿಯನ್ನರು ಗ್ರಾಮಗಳಲ್ಲಿ ವಾಸಿಸುತ್ತಿದ್ದರು. ಬೇಟೆಯೂ ಮೀನುಗಾರಿಕೆಯೂ ರೂಢಿಯಲ್ಲಿದ್ದುವು. ಸ್ವಯಂಪೂರ್ಣವಾಗಿದ್ದ ಈ ಗ್ರಾಮಗಳಲ್ಲಿ ಅನುವಂಶಿಕ ನಾಯಕರಿರುತ್ತಿದ್ದರು. ಮತೀಯ ಕಲಾಪಗಳು ವೈದ್ಯ, ಮಂತ್ರ, ತಂತ್ರ-ಎಲ್ಲವೂ ನಾಯಕರ ನಿರ್ದೇಶನದಲ್ಲಿ ನಡೆಯುತ್ತಿದ್ದುವು. ನರಬಲಿಗಾಗಿ ಜನರನ್ನೊದಗಿಸಿಕೊಳ್ಳುವುದಕ್ಕೂ ತಮ್ಮ ವಿಜಯ ಸಂಕೇತಗಳಾಗಿ ಮಾನವರ ತಲೆಗಳನ್ನು ಸಂಗ್ರಹಿಸುವುದಕ್ಕೂ ಈ ಜನ ಆಗಿಂದಾಗ್ಗೆ ಯುದ್ಧಗಳಲ್ಲಿ ತೊಡಗುತ್ತಿದ್ದರು.[೩]

ಕೆರಿಬಿಯನ್ ಸಮುದ್ರ ಮತ್ತು ಆಂಡೀಸ್ ಪರ್ವತಗಳ ನೆರೆಹೊರೆಯ ಪ್ರದೇಶ[ಬದಲಾಯಿಸಿ]

ಕೆರಿಬಿಯನ್ ಸಮುದ್ರ ಮತ್ತು ಆಂಡೀಸ್ ಪರ್ವತಗಳ ನೆರೆಹೊರೆಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಇಂಡಿಯನ್ನರು ಗ್ರಾಮೀಣ ಸಂಸ್ಕøತಿ ವರ್ಗಕ್ಕೆ ಸೇರಿದ್ದರು. ವ್ಯವಸಾಯ ಇವರ ಮುಖ್ಯ ಕಸಬು. ಮಣ್ಣಿನ ಪಾತ್ರೆ, ನೇಯ್ದ ಬುಟ್ಟಿ, ತೂಗುಮಂಚ, ಹುಲ್ಲುಚಾವಣಿಯ ಮನೆ-ಇವು ಇವರ ಜೀವನ ಸಾಧನ. ಇವರು ನಿತ್ಯಬಳಕೆಯ ವಸ್ತುಗಳನ್ನು ಹೆಚ್ಚಾಗಿ ತಯಾರಿಸುತ್ತಿದ್ದರು; ವ್ಯಾಪಾರ ವ್ಯವಹಾರಗಳಲ್ಲೂ ನಿರತರಾಗಿದ್ದರು. ಅನುವಂಶಿಕ ನಾಯಕರು ಸಮಾಜದ ಮೇಲೆ ಬಿಗಿಯಾದ ನಿಯಮಗಳನ್ನು ಹೊರಿಸಿದ್ದರು. ಯೋಧರಿಗೂ ಪುರೋಹಿತವರ್ಗಕ್ಕೂ ಪ್ರಾಧಾನ್ಯವಿತ್ತು. ಇವರ ಗುಂಪುಗಳು ರಾಜಕೀಯವಾಗಿ ಆಗಾಗ ಒಂದಾದರೂ ತಮ್ಮ ಪ್ರತ್ಯೇಕತೆಯನ್ನುಳಿಸಿಕೊಂಡಿರುತ್ತಿದ್ದುವು; ಮಧ್ಯ ಆಂಡೀಸ್ ಪ್ರದೇಶಗಳು ಸಾಂದ್ರ ವ್ಯವಸಾಯ ಪಶುಪಾಲನೆಗಳಿಂದ ಜನನಿಬಿಡವಾಗಿದ್ದು, ದಕ್ಷ ಮತ್ತು ಸುವ್ಯವಸ್ಥಿತ ಆಡಳಿತಕ್ಕೊಳಪಟ್ಟಿದ್ದುದರಿಂದ ಬಹಳ ಮುಂದುವರಿದಿದ್ದು, ನಾಗರಿಕ ಸಂಸ್ಕøತಿ ಹೊಂದಿದ್ದುವು. ದೇವಾಲಯವೇ ಸಮಾಜಜೀವನದ ಕೇಂದ್ರವಾಗಿ ಕ್ರಮೇಣ ಜಾತಿಪದ್ಧತಿಗಳು ಬೆಳೆದುವು. ಉತ್ತಮ ವರ್ಗದವರು ರಾಜಕೀಯ ಮತ್ತು ಮತೀಯ ಚಟುವಟಿಕೆಗಳಲ್ಲೂ ಕೆಳವರ್ಗದವರು ವ್ಯವಸಾಯ ಕೈಗಾರಿಕೆಗಳಲ್ಲೂ ತೊಡಗಿದ್ದರು.ಚಾಕೋ, ಬ್ರೆಜಿóಲ್, ಚಿಲಿ, ಪೆಟಗೋನಿಯ ಮುಂತಾದ ಹೊರವಲಯದ ಕಾಡುಪ್ರದೇಶಗಳ ಜನ ಸರಳಜೀವನ ನಡೆಸುತ್ತಿದ್ದರು. ಇವರ ಸಾಮಾಜಿಕ ಜೀವನ ಹಿಂದುಳಿದಿತ್ತು. ಬೇಟೆ, ಆಹಾರ ಸಂಗ್ರಹಣೆ ಅಥವಾ ಕೀಳ್ಮಟ್ಟದ ವ್ಯವಸಾಯಗಳಲ್ಲಿ ತೊಡಗಿರುತ್ತಿದ್ದು ಇವರು ಅಲೆಮಾರಿ ಜೀವನ ನಡೆಸುತ್ತಿದ್ದರು. ವ್ಯವಸ್ಥಿತ ಆಡಳಿತ ಪದ್ಧತಿ ಇವರಿಗೆ ಗೊತ್ತಿರಲಿಲ್ಲ. ದೇಹದ ಶೃಂಗಾರವೂ ನೃತ್ಯ ಸಂಗೀತಗಳೂ ವಿವಿಧ ರೀತಿಯ ಆಟಗಳೂ ಬಳಕೆಯಲ್ಲಿದ್ದುವು. ಮಂತ್ರ ಮಾಟಗಳು ಇವರ ಮತೀಯ ಚಟುವಟಿಕೆಗಳು. ಇವರು ಯುದ್ಧ ವಿದ್ಯೆಯಲ್ಲಿ ಹಿಂದುಳಿದಿದ್ದರು, ಇವರು ಹೋರಾಡುತ್ತಿದ್ದದ್ದು ಕೇವಲ ಆತ್ಮರಕ್ಷಣೆಗಾಗಿ ಮಾತ್ರ.

ಲ್ಯಾಟಿನ್ ಅಮೆರಿಕ[ಬದಲಾಯಿಸಿ]

ಲ್ಯಾಟಿನ್ ಅಮೆರಿಕದ ಎಲ್ಲಡೆಗಳಲ್ಲೂ ಈ ಜನರ ಚರಿತ್ರೆಯಲ್ಲಿ ಬಹಳ ಸಾಮ್ಯಗಳು ಕಂಡುಬರುತ್ತವೆ. ಇಂತ ನಾಗರಿಕತೆಯ ಅವಶೇಷಗಳು ಎಲ್ಲ ಭಾಗಗಳಲ್ಲಿ ಕಂಡು ಬಂದರೂ ಪ್ರತಿಯೊಂದು ಪ್ರದೇಶದಲ್ಲೂ ಪ್ರತ್ಯೇಕವಾದ ಕಲೆ ಕೈಗಾರಿಕೆಗಳೂ ಬೆಳೆದು ಬಂದುವು. ಎಕ್ವೆಡಾರಿನಲ್ಲಿ ಚಿತ್ರಗಳಿಂದ ಅಲಂಕೃತವಾದ ದೊಡ್ಡ ಪ್ರತಿರೂಪದ ಶವದ ಜಾಡಿಗಳೂ ಬಹಳ ಹಳೆಯವಾದ ಕಲ್ಲಿನ ಕುರ್ಚಿಗಳೂ ಅಲ್ಲಲ್ಲಿ ಕಂಡುಬರುತ್ತವೆ. ಕೊಲಂಬಿಯದಲ್ಲಿ ಚಿನ್ನದ ಕುಶಲ ಕೆಲಸಗಾರಿಕೆ, ದೊಡ್ಡ ಶವದ ಜಾಡಿಗಳು, ಚಿನ್ನ ಮತ್ತು ತಾಮ್ರದ ಚಪ್ಪಟೆಯಾದ ಶಿಲ್ಪಗಳು, ಕಲ್ಲಿನ ಪ್ರತಿಮೆಗಳು ಗಮನಾರ್ಹ. ದಕ್ಷಿಣಕ್ಕೆ ಹೋದ ಹೋದಂತೆ ದುರ್ಗಮವಾದ ಬೆಟ್ಟಕಾಡುಗಳಿರುವುದರಿಂದ ಮುಂದುವರಿದ ನಾಗರಿಕತೆಯ ಕುರುಹುಗಳು ಕಂಡು ಬರುವುದಿಲ್ಲ. ಎಲ್ಲೆಡೆಗಳಲ್ಲೂ ಹಳೆಯ ಕಾಲದ ಮಡಿಕೆಗಳೂ ಆಭರಣಗಳೂ ಲೋಹದ ವಸ್ತುಗಳೂ ಕಾಣಬರುತ್ತವೆ. ವಾಸ್ತುಶಿಲ್ಪದ, ಶವಸಂಸ್ಕಾರ ಪದ್ಧತಿಯೇ ಮುಂತಾದ, ಜನಜೀವನ ರೀತಿಗಳ ಮೇಲೆ ಬೆಳಕು ಬೀರುವಂಥ, ಅನೇಕ ಮಾಹಿತಿಗಳು ದೊರಕಿವೆ.

ಉಲ್ಲೇಖಗಳು[ಬದಲಾಯಿಸಿ]