ಇಂಗ್ಲಿಷ್ ಸಾಹಿತ್ಯ: ಆಂಗ್ಲೋ ಸ್ಯಾಕ್ಸನರ ಯುಗ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಆ್ಯಂಗ್ಲೋಸ್ಯಾಕ್ಸನರು
[ಬದಲಾಯಿಸಿ]ಇಂಗ್ಲಿಷ್ ಭಾಷೆಯಂತೆಯೇ ಇಂಗ್ಲಿಷ್ ಸಾಹಿತ್ಯವೂ ಆ್ಯಂಗ್ಲೋಸ್ಯಾಕ್ಸನರಿಂದ ಆರಂಭವಾಯಿತು. ಆ್ಯಂಗ್ಲೋಸ್ಯಾಕ್ಸನರು ಸ್ಕ್ಯಾಂಡಿನೇವಿಯ ಪ್ರದೇಶದಿಂದ ಬ್ರಿಟನ್ನಿಗೆ ಬಂದಾಗ ತಮ್ಮ ತಂಡಗಳಲ್ಲಿ ಪ್ರಚಾರದಲ್ಲಿದ್ದ ಹಾಡುಗಬ್ಬಗಳನ್ನು ನೆನೆಪಿನಲ್ಲಿಟ್ಟುಕೊಂಡು ತಂದಿದ್ದರು. ಆ ಹಾಡುಗಳು ಮೂರು ನಾಲ್ಕು ಶತಮಾನಗಳ ಕಾಲ ಬಾಯಿಂದ ಬಾಯಿಗೆ ಬಂದು ಕ್ರಮೇಣ ಲಿಖಿತ ರೂಪಕ್ಕಿಳಿದುವು. ಹೀಗೆ ಅವನ್ನು ಬರೆವಣಿಗೆಗಿಳಿಸಿದವರು ಕ್ರೈಸ್ತಮಠಗಳ ಸನ್ಯಾಸಿಗಳು. ಕ್ರೈಸ್ತಮತ ಇಂಗ್ಲೆಂಡಿಗೆ ಎರಡು ದಿಕ್ಕುಗಳಿಂದ ಬಂದಿತು. ದೊಡ್ಡ ಪ್ರಮಾಣದಲ್ಲಿ ಅದು ಬಂದುದು 597ರಲ್ಲಿ, ಆಗ್ನೇಯದಿಂದ, ಸಂತ ಆಗಸ್ಟೀನನ ಮೂಲಕ. ಇದಕ್ಕೆ ಮೊದಲೇ ಉತ್ತರದಲ್ಲಿ ಐರ್ಲೆಂಡಿನಿಂದ ಕೆಲವರು ಪಾದ್ರಿಗಳು ಬಂದು ಅಲ್ಲಲ್ಲಿ ಕ್ರೈಸ್ತ ಮತವನ್ನು ಜನಗಳಿಗೆ ಪರಿಚಯಮಾಡಿ ಕೊಟ್ಟಿದ್ದರು. ಮಠಗಳನ್ನೂ ಸ್ಥಾಪಿಸಿದ್ದರು. ಈ ಮಠಗಳಲ್ಲಿದ್ದ ಸಂತರು; ಆ್ಯಂಗ್ಲೋಸ್ಯಾಕ್ಸನರ ಕಾವ್ಯವನ್ನು 9ನೆಯ ಶತಮಾನದಲ್ಲಿ ಬರೆದಿಟ್ಟರೆಂದು ಪ್ರತೀತಿಯಿದೆ. ಈ ಕೆಲವು ಕವನಗಳಲ್ಲಿದ್ದ ಯುದ್ಧದ ವರ್ಣನೆಗಳ ತೀವ್ರತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲೆಳಸಿರುವುದೇ ಇದಕ್ಕೆ ಸಾಕ್ಷಿ. ಹೀಗೆ ಬಂದಿರುವ ಆ್ಯಂಗ್ಲೋಸ್ಯಾಕ್ಸನರ ಕವನಗಳಲ್ಲಿ ಅತ್ಯಂತ ಮುಖ್ಯವಾದುದು ಬ್ಯೋವುಲ್ಫ್. ಇದು ಇಂಗ್ಲಿಷ್ ಜನರ ಏಕೈಕ ಮಹಾಕಾವ್ಯ. ಬ್ಯೋವುಲ್ಫ್ ಎಂಬ ವೀರ ಹ್ರಾತ್ಗಾರ್ ಎಂಬ ರಾಜನಿಗೂ ಅವನ ಆಸ್ಥಾನಿಕರಿಗೂ ಮಾರಕವಾಗಿದ್ದ ಗ್ರ್ರೆಂಡಲ್ ಎಂಬ ಕಡಲಭೂತವೊಂದನ್ನು ಅದರ ಹುದುಗುದಾಣಕ್ಕೇ ಹೋಗಿ ಕೊಂದುದಲ್ಲದೆ, ಅನಂತರ ತನ್ನವರಿಗೆ ತೊಂದರೆಕೊಡುತ್ತಿದ್ದ ಬೆಂಕಿಯುಗುಳುವ ರಾಕ್ಷಸ ಪ್ರಾಣಿಯೊಂದನ್ನು ಸಂಹರಿಸಹೋಗಿ ಅದನ್ನು ಕೊಂದರೂ ಅದರ ಉಸಿರುತಾಕಿ ತಾನೂ ಪ್ರಾಣಬಿಟ್ಟದ್ದರ ಕಥೆ ಇದು. ಆ್ಯಂಗ್ಲೋಸ್ಯಾಕ್ಸನರಿಗೂ ಕಡಲಿಗೂ ಇದ್ದ ನಿಕಟ ಸಂಬಂಧ ಈ ಕೃತಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಬ್ಸೋವುಲ್ಫ್ ಕಡಲಿನಾಳಕ್ಕೆ ಹೋಗಿ ಗ್ರೆಂಡೆಲ್ನನ್ನು ಕೊಂದುದು ಆ್ಯಂಗ್ಲೋಸ್ಯಾಕ್ಸನರು ಕಡಲಿನ ಮೇಲೆ ಸ್ಥಾಪಿಸಿದ ನೌಕಾಪ್ರಭುತ್ವದ ಸಾಂಕೇತಿಕ ಚಿತ್ರವೆಂದು ಪರಿಗಣಿಸಲಾಗಿದೆ. ಅದಲ್ಲದೆ ಅವರ ಸಾಮಾಜಿಕ ಜೀವನದ ಆಕರ್ಷಕ ಚಿತ್ರಗಳೂ ಈ ಕಾವ್ಯದಲ್ಲಿ ದೊರೆಯುತ್ತವೆ. ಈ ಕವನವಲ್ಲದೆ ಒಂದೆರಡು ಭಾವಗೀತೆಗಳೂ ಆ್ಯಂಗ್ಲೋಸ್ಯಾಕ್ಸನ ರಿಂದ ಬಂದಿವೆ. ವಿಡ್ಸಿತ್, ಡಿಯೋರ್ಸ್ ಕಂಪ್ಲೇಂಟ್ ಎಂಬುವು ಇವುಗಳಲ್ಲಿ ಮುಖ್ಯವಾದುವು. ಇವೆರಡರಲ್ಲೂ ಶೋಕದ ಧ್ವನಿಯಿದೆ. ದೇಶಬಿಟ್ಟು ದೂರ ಹೋಗಿ ಕೊನೆಯಿಲ್ಲದ ಅಲೆದಾಟಕ್ಕೆ ಗುರಿಯಾಗಿರುವ ಹಾಡುಗಾರನೊಬ್ಬನ ಕಷ್ಟಗಳ ವರ್ಣನೆ ವಿಡ್ಸಿತ್. ತನ್ನ ಪ್ರತಿಸ್ಪರ್ಧಿಯೊಬ್ಬನ ಉತ್ಕರ್ಷದಿಂದ ತಾನು ಹೊರದೂಡಲ್ಪಟ್ಟು ಗತಿಗೆಟ್ಟಿರುವ ಆಸ್ಥಾನದ ಹಾಡುಗಾರನೊಬ್ಬನ ಸಂಕಟದ ಅಭಿವ್ಯಕ್ತಿಯನ್ನು ‘ಡಿಯೋರ್ಸ್ ಕಂಪ್ಲೇಂಟ್’ನಲ್ಲಿ ಕಾಣಬಹುದು. ದಿ ಸೀ ಫೇರರ್ ಎಂಬ ಇನ್ನೊಂದು ಕವನವು ಸಮುದ್ರಯಾನದಲ್ಲಿ ಆ್ಯಂಗ್ಲೋಸ್ಯಾಕ್ಸನರಿಗಿದ್ದ ಆಸಕ್ತಿಯನ್ನು ಸೂಚಿಸುತ್ತದೆ. ಇವಲ್ಲದೆ ದಿ ಹಸ್ಬೆಂಡ್ಸ್ ಮೆಸೇಜ್ ಎಂಬ ಪ್ರಣಯ ಕವನವೂ ಒಗಟುಗಳನ್ನೊಳಗೊಂಡ ಕೆಲವು ಸಣ್ಣಕವಿತೆಗಳೂ ಆ ಕಾಲದಿಂದ ಬಂದಿವೆ. ದಿ ರೂಯಿನ್ ಎಂಬ ಕವನದ ವಿಷಯ ಪಾರ್ಥಿವ ವಸ್ತುಗಳ ಅಶಾಶ್ವತತೆ.
ಕೇಡ್ಮನ್ ಮತ್ತು ಕೈನ್ವುಲ್ಫ್
[ಬದಲಾಯಿಸಿ]ಆ್ಯಂಗ್ಲೊ ಸ್ಯಾಕ್ಸನರ ಕಾಲದಲ್ಲಿ ಕ್ರೈಸ್ತ ಮತಕ್ಕೆ ಸಂಬಂಧಪಟ್ಟ ಕಾವ್ಯವೂ ಸೃಷ್ಟಿಯಾಯಿತು. ಉತ್ತರದ ವಿಟ್ಟೆ ಮತ್ತು ಜಾರೋ ಎಂಬ ಸ್ಥಳಗಳಲ್ಲಿನ ಕ್ರೈಸ್ತಮಠಗಳಲ್ಲಿ ಅದು ನಡೆದುದು. ಕೇಡ್ಮನ್ ಮತ್ತು ಕೈನ್ವುಲ್ಫ್ ಆ ಗುಂಪಿಗೆ ಸೇರಿದ ಮುಖ್ಯ ಕವಿಗಳು. ಕೇಡ್ಮನ್ ಬೈಬಲಿನಲ್ಲಿ ಉಕ್ತವಾಗಿರುವ ಜಗತ್ತಿನ ಸೃಷ್ಟಿಯನ್ನೂ ಕೈನ್ವುಲ್್ಫ ಏಸುಕ್ರಿಸ್ತನ ಚರಿತ್ರೆ ಮತ್ತು ಬೋಧನೆಗಳನ್ನೂ ತಮ್ಮ ಕವಿತೆಗಳಲ್ಲಿ ವರ್ಣಿಸಿದ್ದಾರೆ. ಕೇಡ್ಮನ್ನನೇ ಇಂಗ್ಲೆಂಡಿನ ಮೊಟ್ಟಮೊದಲ ಕವಿ ಎನ್ನಬಹುದು. ಕೈನ್ವುಲ್ಫ್ನ ದಿ ಡ್ರೀಮ್ ಆಫ್ ದಿ ರೂಡ್ ತನ್ನ ಕರ್ತನ ತೀವ್ರವಾದ ಧರ್ಮಾಭಿಮಾನವನ್ನು ಹೊರಸೂಸುತ್ತದೆ. ಜಾರೊ ಮಠದಲ್ಲಿದ್ದ ಬೀಡೆ (ಅಥವಾ ಬಿಢಾ-673-735) ಇಂಗ್ಲೆಂಡಿನಲ್ಲಿ ಕ್ರೈಸ್ತಮತದ ಬೆಳವಣಿಗೆಯ ಚರಿತ್ರೆಯನ್ನು ಎಕ್ಲೆಸಿಯಾಸ್ಟಿಕಲ್ ಹಿಸ್ಟರಿ ಆಫ್ ಇಂಗ್ಲೆಂಡ್ನಲ್ಲಿ ಬರೆದಿದ್ದಾನೆ. ಇದನ್ನು ಬರೆದಿರುವುದು ಲ್ಯಾಟಿನ್ ಭಾಷೆಯಲ್ಲಿ.
ದಿ ಗ್ರೇಟ್ ಆಲ್ಫ್ರೆಡ್
[ಬದಲಾಯಿಸಿ]ಇಂಗ್ಲಿಷಿನಲ್ಲೇ ಗದ್ಯವನ್ನು ತಂದವನು ಆಲ್ಫ್ರೆಡ್ ದೊರೆ (871-901). ದಕ್ಷಿಣದ ವೆಸೆಕ್್ಸ ಪ್ರಾಂತ್ಯದಲ್ಲಿ ಆಳಿದ ಆಲ್ಫ್ರೆಡ್ ಇಂಗ್ಲೆಂಡಿಗೆ ಮುತ್ತಿಗೆ ಹಾಕಿ ತಮ್ಮ ಆಧಿಪತ್ಯವನ್ನು ಸ್ಥಾಪಿಸುತ್ತಿದ್ದ ಡೇನರೊಡನೆ ಒಪ್ಪಂದ ಮಾಡಿಕೊಂಡು ತನ್ನ ರಾಜ್ಯದಲ್ಲಿ ಶಾಂತಿಸ್ಥಾಪನೆಗೈದಿದ್ದ. ಆತ ಜನಹಿತಸಾಧನೆಗಾಗಿ ಮಾಡಿದ ಕೆಲಸಗಳಿಗಾಗಿ ಇಂಗ್ಲಿಷ್ ಚರಿತ್ರೆಯಲ್ಲಿ ಅವನಿಗೆ ಮಹಾಶಯ (ದಿ ಗ್ರೇಟ್) ಎಂಬ ಬಿರುದು ಬಂದಿದೆ. ಆತ ಮಾಡಿದ ಕೆಲಸಗಳಲ್ಲಿ ಮುಖ್ಯವಾದುದ್ದು ತನ್ನ ಪ್ರಜೆಗಳಲ್ಲಿ ವಿದ್ಯೆಯನ್ನು ಹರಡಲು ಪ್ರಸಿದ್ಧವಾದ ಕೆಲವು ಲ್ಯಾಟಿನ್ ಕೃತಿಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದು, ಮಾಡಿಸಿದ್ದು. ಪೋಪ್ ಗ್ರಗೊರಿಯ ಪ್ಯಾಸ್ಟೊರಲ್ ಕ್ಯೂರ್, ಒರೋಸಿಯಸ್ಸನ ಚರಿತ್ರೆ, ಬೀಥಿಯಸ್ಸನ ಕಾನ್ಸೊಲೇಷನ್ಸ್ ಆಫ್ ಫಿಲಾಸಫಿ ಮತ್ತು ಬೀಡೆಯ ಎಕ್ಲೆಸಿಯಾಸ್ಟಿಕಲ್ ಹಿಸ್ಟರಿ-ಇವು ಆ ಅನುವಾದಿತ ಗ್ರಂಥಗಳು. ಇವಲ್ಲದೆ ಆಲ್ಫ್ರೆಡ್ ತನ್ನ ರಾಜ್ಯದಲ್ಲಿ ದಿನ ದಿನವೂ ನಡೆಯುತ್ತಿದ್ದ ಘಟನೆಗಳನ್ನು ವಿವರಿಸುವ ದಿ ಸ್ಯಾಕ್ಸನ್ ಕ್ರಾನಿಕಲ್ ಎಂಬ ವರದಿರೂಪದ ದಿನಚರಿ ಗ್ರಂಥವನ್ನು ಆರಂಭಮಾಡಿಸಿದ. ನೂರಾರು ವರ್ಷಗಳು ಬೆಳೆದ ಈ ಗ್ರಂಥ ಆ ಕಾಲದ ಚರಿತ್ರೆಗೆ ಮಾತ್ರವೇ ಅಲ್ಲದೆ ಭಾಷೆಯ ಬೆಳವಣಿಗೆಗೂ ಕನ್ನಡಿಯಾಗಿದೆ. ಏಲ್ಪ್ರಿಕ್ ಎಂಬ ವೈಯಾಕರಣಿ ಮತ್ತು ವುಲ್ಫ್ ಸ್ಟನ್ ಎಂಬ ಧರ್ಮಬೋಧಕ ಅಂದಿನ ಇನ್ನಿಬ್ಬರು ಗದ್ಯಲೇಖಕರು.