ಆಸ್ಪೇಷಿಯ
ಆಸ್ಪೇಷಿಯ (ಕ್ರಿ.ಪೂ.ಸು. 470-410). ಅಥೆನ್ಸ್, ಇದರ ರಾಜಕಾರಣಿ ಪೆರಿಕ್ಲೀಸ್‍ನ ಉಪಪತ್ನಿ, ಏಷ್ಯಮೈನರಿನ ಪಶ್ಚಿಮತೀರದಲ್ಲಿರುವ ಹನ್ನೆರಡು ಅಯೋನಿಯನ್ ಪಟ್ಟಣಗಳಲ್ಲಿ ಅತ್ಯಂತ ಮುಖ್ಯವಾದ ಮೈಲಿಟಸ್ ಈಕೆಯ ಹುಟ್ಟೂರು. ಅಲಂಕಾರಶಾಸ್ತ್ರದ ಶಾಲೆಯೊಂದನ್ನು ಸ್ಥಾಪಿಸುವ ಸಲುವಾಗಿ ಅಥೆನ್ಸಿಗೆ ಬಂದಳೆಂದು ತಿಳಿದುಬರುತ್ತದೆ. ಬುದ್ಧಿವಂತಳೂ ಸುಶಿಕ್ಷಿತಳೂ ಆಗಿದ್ದ ಈಕೆಯ ಬುದ್ಧಿಕೌಶಲ ಸಾಕ್ರಟೀಸನನ್ನು ಪ್ರಭಾವಿಸಿತಲ್ಲದೆ ದೇಹಸೌಂದರ್ಯ ಪೆರಿಕ್ಲೀಸನನ್ನು ಆಕರ್ಷಿಸಿತು. ಎರಡು ಮಕ್ಕಳ ತಂದೆಯಾದರೂ ಪೆರಿಕ್ಲೀಸ್ ತನ್ನ ಧರ್ಮಪತ್ನಿಯನ್ನು ತೊರೆದು ಆಸ್ಪೇಷಿಯಳೊಡನೆ ಸಂಬಂಧ ಬೆಳೆಸಿದ.[೧]
ಪೆರಿಕ್ಲೀಸ್‍ನ ರಾಜಕೀಯ ವಿರೋಧಿಗಳಿಂದ ಈಕೆ ಅನೇಕವೇಳೆ ತೊಂದರೆಗೀಡಾಗಿದ್ದೂ ಉಂಟು. ಗುಲಾಮೀ ಕನ್ಯೆಯರನ್ನು ವೇಶ್ಯಾವೃತ್ತಿಗೆ ಎಳೆದಳೆಂಬುದು ಈಕೆಯ ಮೇಲಿದ್ದ ದೊಡ್ಡ ಆರೋಪ. ಕ್ರಿ.ಪೂ. 451ರಲ್ಲಿ ಪೆರಿಕ್ಲೀಸ್ ತಾನೇ ಜಾರಿಗೆ ತಂದ ಕಾನೂನಿನ ಪ್ರಕಾರ ತಂದೆತಾಯಿಗಳಿಬ್ಬರೂ ಅಥೆನ್ಸಿನವರಾಗಿದ್ದರೆ ಮಾತ್ರ ಅವರ ಮಕ್ಕಳಿಗೆ ಆಥೆನ್ಸಿನ ಪೌರತ್ವ ಸಿಗುತ್ತಿತ್ತು. ಆಸ್ಪೇಷಿಯಳಲ್ಲಿ ತಾನು ಪಡೆದ ಮಗಳಿಗೆ ಪೌರತ್ವ ದೊರಕಿಸಲು ಪೆರಿಕ್ಲೀಸ್ ಆ ಶಾಸನವನ್ನೇ ಬದಲಿಸಬೇಕಾಯಿತು. ಧರ್ಮಶ್ರದ್ಧೆ ಇಲ್ಲದವಳೆಂಬ ಕಾರಣದಿಂದ ಈಕೆಯನ್ನು ವಿಚಾರಣೆಗೆ ಗುರಿಪಡಿಸಿದಾಗ ಪೆರಿಕ್ಲೀಸ್ ಸ್ವತಃ ಈಕೆಯ ಪರ ವಾದಿಸಿ ಈಕೆಯ ಖುಲಾಸೆಗೆ ಸಹಾಯ ಮಾಡಿದನೆಂದು ಹೇಳಲಾಗಿದೆ.
ಉಲ್ಲೆಖನಗಳು:
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]