ವಿಷಯಕ್ಕೆ ಹೋಗು

ಆಸಕ್ತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಭಿರುಚಿ (ಆ್ಯಪ್ಟಿಟ್ಯೂಡ್) ಇರುವ ವಿಷಯಗಳಲ್ಲಿ ಆಸಕ್ತಿ (ಇಂಟರೆಸ್ಟ್) ಹೆಚ್ಚುವುದೂ ಆಸಕ್ತಿ ಇರುವ ವಿಷಯಗಳಲ್ಲಿ ಕ್ರಮೇಣ ಅಭಿರುಚಿಯೇರ್ಪಡುವುದೂ ಎಲ್ಲರಿಗೂ ತಿಳಿದಿರುವ ವಿಚಾರ. ಇದು ಮನಶ್ಶಾಸ್ತ್ರದ ಪರಿಮಿತಿಗೆ ಒಳಪಟ್ಟಿರುವ ವಿಷಯವೇ ಆದರೂ ಸಾಧಾರಣವಾಗಿ ಇದರ ವಿಶ್ಲೇಷಣೆ ಆ ಕ್ಷೇತ್ರದಲ್ಲಿ ಸಾಕಷ್ಟು ಆಗಿಲ್ಲವೆಂದೇ ಹೇಳಬೇಕು. ಆದರೆ ಉದ್ಯೋಗ ಕ್ಷೇತ್ರಗಳಲ್ಲಿ ಇದರ ಅಗತ್ಯ ಕಂಡಿದ್ದರಿಂದ ಔದ್ಯೋಗಿಕ ಮನಶ್ಶಾಸ್ತ್ರದಲ್ಲಿ ಇದರ ಬಗ್ಗೆ ಸಾಕಷ್ಟು ವಿವೇಚನೆ ನಡೆದಿದೆ. ಡಗ್ಲಾಸ್ ಫ್ರಯರ್ 1931ರಲ್ಲಿ ಆಸಕ್ತಿಯ ಬಗ್ಗೆ ಕ್ರಮವಾದ ಅಧ್ಯಯನ ನಡೆಸಲು ಪ್ರಾರಂಭಿಸಿದ. ಸಾಮಾಜಿಕ ಜೀವನದಲ್ಲಿ, ವೈಯಕ್ತಿಕ ಹೊಂದಾಣಿಕೆಯಲ್ಲಿ, ವಿದ್ಯಾಭ್ಯಾಸದಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ ಅನೇಕ ತೊಡಕುಗಳನ್ನು ಬಗೆಹರಿಸಲು ಆಸಕ್ತಿ ಒಂದು ಮುಖ್ಯ ಸಾಧನವಾಗಿದೆ. ನಾವೆಲ್ಲರೂ ಆಸಕ್ತರಾಗಲು, ಇತರರಲ್ಲಿ ಆಸಕ್ತಿಯನ್ನು ಬೆಳೆಸಲು ಆಶಿಸುತ್ತೇವೆ. ಲೋಕದೊಡನೆ ಹೊಂದಿ ಬಾಳಲು ಆಸಕ್ತಿಯ ಅಗತ್ಯವಿದೆ. ಅಭ್ಯಾಸದಿಂದ ಅದನ್ನು ಬೆಳೆಸಬಹುದು. ಅದು ನಮ್ಮ ಗುಣಗಳನ್ನು, ಒಟ್ಟಾರೆ ಯೋಗ್ಯತೆಯನ್ನು ಅವಲಂಬಿಸಿದೆ ಎಂದು ಆತ ಹೇಳಿದ್ದಾನೆ. ಫ್ರಯರ್ನ ದಾರಿಯನ್ನು ಹಿಡಿದು ಆಸಕ್ತಿಗಳ ಮೇಲೆ ಎರಡು ಮುಖ್ಯ ಗ್ರಂಥಗಳನ್ನು ಬರೆದ ಸ್ಟ್ರಾಂಗ್ ಆಸಕ್ತಿಯನ್ನು ಪ್ರಚೋದಿಸುವ ಮೂರು ಭಾವನೆಗಳನ್ನು ಈ ರೀತಿ ವ್ಯಕ್ತಪಡಿಸುತ್ತಾನೆ:

 1. ನಾಯಿಯನ್ನು ಕಂಡರೆ ನನಗಿಷ್ಟ-ಎಂಬಂಥ ಏಕ ವಿಷಯಕ ಆಸಕ್ತಿ.
 2. ನನಗೆ ವೈಜ್ಞಾನಿಕ ವಿಷಯಗಳ ಮೇಲೆ ಕುತೂಹಲವುಂಟು-ಎಂಬಂಥ ಬಹುಮುಖ್ಯ ಆಸಕ್ತಿ.
 3. ಆಸಕ್ತಿಗಳನ್ನು ಅವುಗಳ ತೀವ್ರತೆಗನುಗುಣವಾಗಿ ಪಟ್ಟಿಮಾಡಿ ತಿಳಿಸುವುದು.

ಆತ ಮುಂದುವರಿದು ಆಸಕ್ತಿಯ ಸ್ವಭಾವವನ್ನು ಮೋಟರ್ ದೋಣಿಯ ಹೋಲಿಕೆಯಿಂದ ವಿವರಿಸುತ್ತಾನೆ. ಒಬ್ಬಾತನ ಸಾಮರ್ಥ್ಯ ಆ ದೋಣಿಯ ಮೋಟರನ್ನೂ ಆತನ ಆಸಕ್ತಿ ಅದರ ಚುಕ್ಕಾಣಿಯನ್ನೂ ಹೋಲುತ್ತದೆ ಎನ್ನುತ್ತಾನೆ. ಮೋಟರು (ಸಾಮರ್ಥ್ಯ) ದೋಣಿಯ ವೇಗವನ್ನು ನಿರ್ಧರಿಸಿದರೆ ಚುಕ್ಕಾಣಿ ಅದು ಚಲಿಸುವ ದಿಕ್ಕನ್ನು ನಿರ್ಧರಿಸುತ್ತದೆ. ಇವೆರಡರ ಕಾರ್ಯದಿಂದ ದೋಣಿ ಸಾಗಿದ ದೂರಕ್ಕೂ ಇವನ ಪರಿಶ್ರಮಕ್ಕೂ ಹೋಲಿಕೆಯನ್ನು ಕಲ್ಪಿಸುತ್ತಾನೆ. ಆಸಕ್ತಿಯನ್ನು ಒಂದು ವಿಷಯದ ಮೇಲಾಗಲೀ ಕಾರ್ಯದ ಮೇಲಾಗಲೀ ಒಬ್ಬನಿಗಿರುವ ಇಷ್ಟಾನಿಷ್ಟಗಳ ಅಭಿವ್ಯಂಜನವೇ ಆಸಕ್ತಿ ಎಂದು ಸೂಪರ್ನ ಮತ. ತನಗಿಷ್ಟವಾದ ವಿಷಯದ ಅಥವಾ ವ್ಯಕ್ತಿಯ ಮತ್ತು ಕಾರ್ಯದ ಸಂಸರ್ಗದಿಂದ ಸಂತೋಷವೂ ತೃಪ್ತಿಯೂ ಉಂಟಾಗುತ್ತವೆ; ಇವುಗಳ ಅಭಿವ್ಯಂಜನೆಯೇ ಆಸಕ್ತಿ. ಈ ಸಂಸರ್ಗವನ್ನು ಮರಳಿ ಮರಳಿ ಪಡೆಯಲು, ಹಾಗೆಯೇ ಆ ಕಾರ್ಯದಲ್ಲಿ ತೊಡಗಿರಲು ಈ ತುಷ್ಟಿ ಆ ವ್ಯಕ್ತಿಯನ್ನು ಪ್ರಚೋದಿಸುತ್ತದೆ. ಒಬ್ಬ ವ್ಯಕ್ತಿಗೆ ಒಂದು ಕೆಲಸವನ್ನು ನಡೆಸಲು ಸಾಮರ್ಥ್ಯನವಿದ್ದರೂ ಆಸಕ್ತಿಯಿಲ್ಲದಿದ್ದರೂ ಅವನು ಆ ಕೆಲಸವನ್ನು ನಿರ್ವಹಿಸಿಯಾನು. ಆದರೆ ಆ ಕೆಲಸದಲ್ಲೇ ಬಹುಕಾಲ ನಿಲ್ಲಲಾರ. ಒಬ್ಬ ವ್ಯಕ್ತಿ ಒಂದು ಕೆಲಸದಲ್ಲಿ ನಿರತನಾಗಿರುವಾಗ ಮೂಡುವ ಸಂತುಷ್ಟಿ ಆತ ಎಳೆತನದಿಂದಲೂ ಬೆಳೆಸಿಕೊಂಡು ಬಂದ ಮತ್ತು ಆತನ ಬೆಳೆವಣಿಗೆಯ ಹಂತಗಳಲ್ಲಿ ಆಯಾ ಪರಿಣತಿಗಳ ಪ್ರಭಾವದಿಂದ ಪ್ರಣೀತವಾದ ಸುಖಗಳೊಡನೆ ಮಾನಸಿಕವಾಗಿ ಹೊಂದಿಕೊಂಡಿದೆ. ಆದ ಪ್ರಯುಕ್ತ ಆಸಕ್ತಿಗಳು ವ್ಯಕ್ತಿಯ ಸ್ವಭಾವರಚನೆ ಹಾಗೂ ಆತನ ಸಾಮಾಜಿಕ, ಸಾಂಸ್ಕೃತಿಕ ವಾತಾವರಣದ ಪರಿಸರಗಳಲ್ಲಿನ ಸಂಘಚಾಲಕ ಪ್ರಭಾವಗಳೊಡನೆ ನಿಕಟಸಂಪರ್ಕವನ್ನು ಪಡೆದಿವೆ. ಆಸಕ್ತಿಗಳ ಪ್ರಮಾಣ: ಆಸಕ್ತಿಯ ಪ್ರಮಾಣವನ್ನು ನಾಲ್ಕು ತೆರದಲ್ಲಿ ಅಳೆಯುತ್ತಾರೆ.

 1. . ಸಂದರ್ಶನ: ವ್ಯಕ್ತಿಗೆ ಯಾವ ಯಾವ ವಿಷಯಗಳಲ್ಲಿ ಆಸಕ್ತಿಯಿದೆಯೆಂಬುದನ್ನು ಪ್ರಶ್ನಿಸಿ ತಿಳಿಯುವುದು;
 2. . ನಿರೀಕ್ಷಣೆ: ಕೆಲಸಗಳಲ್ಲಿ ಪಾಲುಗೊಳ್ಳುವಂತೆ ಮಾಡಿ ಆತನ ಆಸಕ್ತಿಗಳನ್ನು ಪರೀಕ್ಷಿಸುವುದು;
 3. . ಪರೀಕ್ಷೆಗಳು;
 4. .ಪಟ್ಟಿಗಳು.

ಈ ನಾಲ್ಕು ಬಗೆಯ ಬೆಲೆಕಟ್ಟುವ ಕ್ರಮಕ್ಕೆ ಸಮಾನವಾದ ಆಸಕ್ತಿಗಳನ್ನು ಫ್ರಯರ್ ನಾಲ್ಕು ವರ್ಗಗಳಾಗಿ ವಿಂಗಡಿಸಿದ್ದಾನೆ.

 1. ಹೇಳಿಕೊಂಡ ಆಸಕ್ತಿಗಳು;
 2. ಪ್ರಕಾಶಕ್ಕೆ ಬಂದ ಆಸಕ್ತಿಗಳು;
 3. ಪರೀಕ್ಷಿಸಿದ ಆಸಕ್ತಿಗಳು ಮತ್ತು
 4. ಪಟ್ಟಿ ಮಾಡಿದ ಆಸಕ್ತಿಗಳು.

ಇದು ನನಗಿಷ್ಟ, ಇದು ಇಷ್ಟವಿಲ್ಲ ಎಂಬುವ ಒಂದು ವಿಷಯದ ಬಗೆಗೂ ಒಂದು ಕೆಲಸದ ಬಗೆಗೂ ಹೇಳುವ ಆಡುಮಾತುಗಳಿಂದ ಅಭಿವ್ಯಕ್ತವಾದ ಆಸಕ್ತಿಗಳು ಚಿಕ್ಕ ಮಕ್ಕಳಲ್ಲೂ ಎಳೆ ಹರೆಯದವರಲ್ಲೂ ನೆಲೆನಿಂತವಲ್ಲ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿರುವ ವಿಷಯ. ಆದರೆ ಹರೆಯಕ್ಕೇರಿದವರಲ್ಲಿ ಇವು ಅಷ್ಟಾಗಿ ತೂಗಾಡಲು ಈ ಅಸ್ಥಿರತೆ ಕಾರಣ. ಹರೆಯಕ್ಕೇರದವರ ಇಷ್ಟಾನಿಷ್ಟಗಳು ಆ ಕಾರ್ಯದ ಸಹಗಾಮಿಗಳಿಂದ ತಕ್ಕಷ್ಟು ಪ್ರಭಾವಿತವಾಗುತ್ತವೆಯೇ ಹೊರತು ಆ ಕಾರ್ಯದ ಅಂತರ್ಗತ ಮೂಲಾಂಶಗಳಿಂದ ಅಷ್ಟಾಗಿ ಅಲ್ಲ. ಉದಾ: ಒಬ್ಬ ಹುಡುಗ ತನಗೆ ಚರಿತ್ರೆ ಇಷ್ಟವೆಂದು ಹೇಳಬಹುದು. ಆದರೆ ವಸ್ತುತಃ ಚರಿತ್ರೆಯನ್ನು ಹೇಳಿಕೊಡುವ ಉಪಾಧ್ಯಾಯನನ್ನು ಕಂಡರೆ ಆತನಿಗೆ ಇಷ್ಟವೇ ಹೊರತು ಆ ವ್ಯಾಸಂಗದ ವಿಷಯದಲ್ಲಿ ಅವನಿಗೆ ಅಂಥ ಆಸಕ್ತಿಯೇನೂ ಇರದು. ಕೆಲಸಕ್ಕೆ ತೊಡಗಿದಾಗ ಆಸಕ್ತಿಗಳು ಪ್ರಕಟವಾಗುತ್ತವೆ. ಆಗ ಪ್ರತ್ಯೇಕವಾಗಿ ನಿರೀಕ್ಷಿಸಬಹುದು. ಆದರೆ ಹೀಗೆ ಕೆಲಸದಲ್ಲಿ ತೊಡಗಿರುವುದು ನಿಜವಾದ ಆಸಕ್ತಿಗಳಿಂದಲ್ಲದೆ ಬೇರೆ ಕಾರಣಗಳಿಂದಾಗಿರಬಹುದು. ಉದಾ: ಸ್ಕೂಲಿನ ಪ್ರದರ್ಶನಕ್ಕಾಗಿ ಹುಡುಗಿಯೊಬ್ಬಳು ಗೋಡೆ ಚೀಟಿಗಳಿಗೆ ಬಣ್ಣ ಹಾಕುವುದರಲ್ಲಿ ತೊಡಗಿರಬಹುದು; ತಾನು ಯಾವ ಗುಂಪಿಗೆ ಸೇರಿಕೊಳ್ಳಲು ತುಂಬ ಆಸೆ ಪಡುತ್ತಾಳೋ ಆ ಗುಂಪಿನ ಜೊತೆಗಾರ್ತಿಯರು ತನ್ನನ್ನು ತಮ್ಮವರಲ್ಲೊಬ್ಬಳಾಗಿ ಸೇರಿಸಿಕೊಳ್ಳುವಂತೆ ಮಾಡಲು ಅವಳಿಗೆ ಇದೊಂದೇ ದಾರಿಯಾಗಿರು ವುದರಿಂದ ಕೆಲಸದಲ್ಲಿ ಪ್ರವೃತ್ತಳಾಗಿರುವುದಕ್ಕೆ ಇಂಥ ಬಾಹ್ಯ ಅಂಶಗಳೇ ಕಾರಣವಾಗಬಲ್ಲವು. ಪಾಠಕ್ರಮದಲ್ಲಿ ವಿಧವಿಧವಾದ ಕಾರ್ಯಕಲಾಪಗಳನ್ನೊದಗಿಸುವ ಒಬ್ಬ ವಿದ್ಯಾರ್ಥಿ ಶಾಲೆಗಳಲ್ಲಿ ಜರುಗುವ ಕಾರ್ಯಕಲಾಪಗಳಲ್ಲೂ ಅವಿರತವಾಗಿ ಪಾಲುಗೊಳ್ಳುತ್ತಿದ್ದರೆ ಆ ವಿದ್ಯಾರ್ಥಿಗೆ ಇಂಥವುಗಳಲ್ಲಿ ನಿಜವಾದ ಆಸಕ್ತಿಯಿದೆಯೆಂದು ಹೇಳಬಹುದು. ಪರೀಕ್ಷಿತ ಆಸಕ್ತಿಗಳೆಂದರೆ ಒಬ್ಬ ವ್ಯಕ್ತಿ ತಾನೇ ಸ್ವಂತವಾಗಿ ಅಳೆದುಕೊಂಡು ನಿರ್ಧರಿಸಿದ ಆಸಕ್ತಿಗಳು: ಪಟ್ಟಿ ಮಾಡಿರುವ ಕಾರ್ಯ ಕಲಾಪಗಳ ಮತ್ತು ವಿಷಯಗಳ ಸಂಬಂಧವಾದ ವ್ಯಕ್ತಿ ತನ್ನ ಇಷ್ಟಾನಿಷ್ಟಗಳನ್ನು ದ್ಯೋತಿಸುವುದರ ಮೂಲಕ ಅಳತೆ ಮಾಡಿದ ಆಸಕ್ತಿಗಳನ್ನು ಕುರಿತವಾಗಿವೆ. ಹೇಳಿಕೊಂಡ ಆಸಕ್ತಿಗಳಿಗೂ ಪಟ್ಟಿ ಮಾಡಿರುವ ಆಸಕ್ತಿಗಳಿಗೂ ಇರುವ ವ್ಯತ್ಯಾಸವೇನೆಂದರೆ ಪಟ್ಟಿಯಲ್ಲಿ ಪ್ರತಿಯೊಂದು ಅಂಶದ ವಿಷಯದಲ್ಲೂ ವ್ಯಕ್ತಿಯ ಪ್ರತಿಕ್ರಿಯೆ ಏನೆಂಬುದನ್ನು ಪ್ರಾಯೋಗಿಕವಾಗಿ ನಿರ್ಧರಿಸಿ ಅದಕ್ಕೆ ತಕ್ಕ ತೂಕವನ್ನು ಕೊಡುತ್ತಾರೆ ಮತ್ತು ಹೀಗೆ ತೂಕ ಮಾಡಿಕೊಟ್ಟ ಅಂಕಗಳನ್ನು ವಿವಿಧ ಕಾರ್ಯಕಲಾಪಗಳ ವಿಷಯದಲ್ಲಿ ಉದ್ಯೋಗ ಕ್ಷೇತ್ರದ ವಿಷಯದಲ್ಲಿ ಒಟ್ಟುಗೂಡಿಸಿ ನೋಡುತ್ತಾರೆ. ಅಮೆರಿಕದಲ್ಲಿ ನಡೆಸಿದ ಸಂಶೋಧನೆಗಳಿಂದ ಈ ರೀತಿ ಅಳೆದ ಆಸಕ್ತಿಗಳು ಹರೆಯಕ್ಕೇರಿದವರಲ್ಲಲ್ಲದೆ ಎಳೆ ಹರೆಯದವರಲ್ಲೂ ನೆಲೆ ನಿಲುವನ್ನು ಪಡೆಯಬಲ್ಲಂಥವು ಎಂದು ಗೊತ್ತಾಗಿದೆ.

ಭಾರತದಲ್ಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ವಿಷಯದಲ್ಲಿ ಈ ಪಟ್ಟಿ ಮಾಡಿದಾಗ ಆಸಕ್ತಿಗಳ ಉಪಯುಕ್ತತೆಯನ್ನು ಕುರಿತು ಮೊಹಸಿನ್ ಸಂದೇಹಪಟ್ಟಿದ್ದಾನೆ. ಬಿಹಾರಿನ ರೆಸಿಡೆನ್ಷಿಯಲ್ ಶಾಲೆಯೊಂದರಲ್ಲಿ ಅಲ್ಲಿನ 60 ವಿದ್ಯಾರ್ಥಿಗಳನ್ನು ಪಟ್ಟಿಮಾಡಿದ ಆಸಕ್ತಿಗಳ ಪರೀಕ್ಷೆಗೆ ಈಡುಮಾಡಿದ ಬಳಿಕ ಆತ ಪಟ್ಟಿ ಮಾಡಿದ ಆಸಕ್ತಿಗಳಿಗೂ ವ್ಯಕ್ತಾಸಕ್ತಿಗಳಿಗೂ ಯಾವ ಸಂಬಂಧವೂ ಇಲ್ಲವೆಂಬುದನ್ನು ಕಂಡುಕೊಂಡ. ಇದರಿಂದ ಆತ ಹೈಸ್ಕೂಲು ಹುಡುಗರ ವಿಷಯದಲ್ಲಿ ಪಟ್ಟಿಮಾಡಿದ ಆಸಕ್ತಿಗಳು ಸಮಾಜ ಏನನ್ನು ಕೋರುತ್ತದೆ, ತಾನೆಂಥ ಸಮಾಜಕ್ಕೆ ಸೇರಿದವ-ಎಂಬುದನ್ನು ತೋರಿಸಿಕೊಡುವುದಕ್ಕೆ ಉಪಯುಕ್ತವಾಗಿವೆಯೇ ಹೊರತು ಆಸಕ್ತಿ ದ್ಯೋತಕಗಳಲ್ಲವೆಂದು ತೀರ್ಮಾನಿಸ ಬೇಕಾಯಿತು. ಸಾಕ್ಷಾತ್ತಾಗಿ ನಿರೀಕ್ಷಿಸುವ ಕ್ರಮ ಪಟ್ಟಿ ಮಾಡುವ ಕ್ರಮಕ್ಕಿಂತ ಉತ್ತಮವೆಂದು ಆತನೆಣಿಕೆ.

ಆಸಕ್ತಿಗಳ ನಮೂನೆಗಳು[ಬದಲಾಯಿಸಿ]

ಹಿಂದಿನ ಅನೇಕ ವ್ಯಾಸಂಗಗಳನ್ನು ಅವಲಂಬಿಸಿ ಆಸಕ್ತಿಗಳ ಬೇರೆ ಬೇರೆ ನಮೂನೆಗಳ ಪಟ್ಟಿಯೊಂದನ್ನು ಫ್ರಯರ್ ತಯಾರಿಸಿದ್ದಾನೆ. ಅವುಗಳನ್ನು ಈ ಕೆಳಗೆ ಸಂಕ್ಷೇಪವಾಗಿ ವಿವರಿಸಿದೆ :

 1. ವೈಜ್ಞಾನಿಕ: ವಸ್ತುಗಳ ವಿಷಯದಲ್ಲಿ ಏಕೆ ಹೀಗೆ ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಲು ಆಸಕ್ತಿ.
 2. ಸಮಾಜಕಲ್ಯಾಣಕಾರಕ : ಯಾವುದಾದರೊಂದು ಬಗೆಯಲ್ಲಿ ನೆರವು ನೀಡಬೇಕೆಂದು ಜನರೊಂದಿಗೆ ಬೆರೆಯುವುದರಲ್ಲಿ ಆಸಕ್ತಿ.
 3. ಸಾಹಿತ್ಯಕ: ಶಬ್ದಗಳ ಪ್ರಯೋಗದಲ್ಲೂ ಶಾಬ್ದಿಕ ಭಾವನೆಗಳ ಕುಶಲ ಪ್ರಯೋಗದಲ್ಲೂ ಆಸಕ್ತಿ.
 4. ಪಾರಿಭಾಷಿಕ ಅಥವಾ ತಾಂತ್ರಿಕ: ಭೌತಜೀವನಕ್ಕೆ ಸಂಬಂಧಪಟ್ಟ ಮೂರ್ತ ವಸ್ತುಗಳಲ್ಲೂ ಅವುಗಳ ಉತ್ಪಾದನೆ, ರಕ್ಷಣೆ ಮತ್ತು ಬಳಕೆಗಳ ವಿಷಯದಲ್ಲೂ ಆಸಕ್ತಿ.
 5. ಸಕ್ರಮ ವ್ಯವಸ್ಥೆಯ ಅಥವಾ ವ್ಯಾವಹಾರಿಕ ವಿವರಗಳು: ದಸ್ತಾವೇಜುಗಳನ್ನು ಸರಿಯಾಗಿಡುವುದು, ಕ್ರಮವರಿತು ದಾಖಲು ಮಾಡುವುದು-ಇತ್ಯಾದಿ ವಿಷಯಗಳಲ್ಲಿ ಆಸಕ್ತಿ.
 6. ವ್ಯಾವಹಾರಿಕ ಸಂಪರ್ಕ: ಜನಕ್ಕೆ ಹಿತವಾಗಲೆಂಬ ಬುದ್ಧಿಯಿಂದಲ್ಲದೆ ಸ್ವಪ್ರಯೋಜನ ಕ್ಕಾಗಿ ಅಥವಾ ತಾನು ಸೇವೆಗೈಯ್ಯುತ್ತಿರುವ ಸಂಸ್ಥೆಯ ಹಿತಕ್ಕಾಗಿ ಜನರನ್ನು ಕಾಣುವುದು ಮತ್ತು ಅವರೊಡನೆ ವ್ಯವಹರಿಸುವುದರಲ್ಲಿ ಆಸಕ್ತಿ.
 7. ಕಲಾತ್ಮಕ: ಚಿತ್ರ ಬರೆಯುವುದು, ವಿಗ್ರಹಗಳನ್ನು ಕೆತ್ತುವುದು, ಕುಣಿಯುವುದು ಇತ್ಯಾದಿ ಕಲಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ.
 8. ಸಂಗೀತದ ವಿಷಯದಲ್ಲಿ: ಹಾಡುವುದು, ವಾದ್ಯಗಳನ್ನು ಬಾರಿಸುವುದು-ಇತ್ಯಾದಿಗಳಲ್ಲಿ ಆಸಕ್ತಿ.

ಒಬ್ಬ ವ್ಯಕ್ತಿ ಒಂದೇ ಒಂದು ನಮೂನೆಯ ಆಸಕ್ತಿಯಲ್ಲಿ ತೊಡಗಿರುವುದಿಲ್ಲವೆಂಬ ಅಂಶವನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ. ಔದ್ಯೋಗಿಕ ಮನಶ್ಶಾಸ್ತ್ರಜ್ಞರ ಗಮನ ಆಸಕ್ತಿಗಳನ್ನು ಕುರಿತ ಕೆಲವು ಸಮಸ್ಯೆಗಳತ್ತ ಹರಿದಿದೆ. ಆಸಕ್ತಿಗಳು ಅನುವಂಶೀಯತೆಯ ಪರಿಣಾಮವೇ ಅಥವಾ ಪರಿಸರಗಳ ಪರಿಣಾಮವೇ? ಎಲ್ಲ ಆಸಕ್ತಿಗಳೂ ಪುರುಷಧರ್ಮಕಗಳೇ ಅಥವಾ ಸ್ತ್ರೀಧರ್ಮಕಗಳೇ? ವಯಸ್ಸು ಬೆಳೆದಂತೆಲ್ಲ ಆಸಕ್ತಿಗಳು ಯಾವ ರೀತಿ ಪರಿವರ್ತನೆಗೊಳ್ಳುತ್ತವೆ? ಅನುಭವದಿಂದ ಆಸಕ್ತಿಗಳು ಪ್ರಭಾವಿತವಾಗುತ್ತವೆಯೇ? ಆಸಕ್ತಿಗಳಿಗೂ ಸಹಜ ಸಾಮರ್ಥ್ಯ ಗಳಿಗೂ ಇರುವ ಸಂಬಂಧವೇನು? ಆಸಕ್ತಿಗಳಿಗೂ ವ್ಯಕ್ತಿಗಳ ಗುಣಗಳಿಗೂ ಇರುವ ಸಂಬಂಧವೇನು? ಈ ಪ್ರಶ್ನೆಗಳನ್ನು ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಹೀಗೆ ಆಸಕ್ತಿಗಳು ವ್ಯಕ್ತಿತ್ವವ್ಯವಸ್ಥೆಯ ಮುಖ್ಯ ಭಾಗವಾಗಿವೆ. ಆದ ಪ್ರಯುಕ್ತ ಮನುಷ್ಯನ ನಡೆವಳಿಕೆಯನ್ನು ಅವು ಬಹುಮಟ್ಟಿಗೆ ಪ್ರಭಾವಿಸುತ್ತವೆ. ಅಮೆರಿಕದಲ್ಲಿನ ಈ ವಿಷಯದ ಮೇಲಣ ವ್ಯಾಸಂಗಗಳಿಂದ ಆಸಕ್ತಿಗಳಿಗೂ ಸಹಜ ಸಾಮಥರ್್ಯಗಳಿಗೂ ಹೆಚ್ಚಿನ ಸಂಬಂಧವಿಲ್ಲ ವೆಂಬುದೂ ಆದ್ದರಿಂದ ಅವೆರಡನ್ನೂ ಬೇರೆಬೇರೆಯಾಗಿಯೇ ಅಳೆಯಬೇಕೆಂಬುದೂ ಖಚಿತವಾಗಿದೆ. ಅವು 18 ವರ್ಷಗಳ ಮೇಲೆ ಬಹುಮಟ್ಟಿಗೆ ಸ್ಥಿರವಾಗಿರುವುದರಿಂದ ಪ್ರೌಢಶಾಲಾ ಮಟ್ಟದಲ್ಲಿ ಅವನ್ನು ನಿರ್ದೇಶಿಸಬಹುದು. ಪರಿಸರಗಳ ಪ್ರಭಾವಗಳಿಂದ ಅವು ಚಿಕ್ಕ ವಯಸ್ಸಿನಲ್ಲಿ ವ್ಯತ್ಯಾಸವಾಗಬಲ್ಲವಾದರೂ ಬಹುಮಟ್ಟಿಗೆ ಅನುಭವಗಳಿಗೂ ಹೊಸ ಆಸಕ್ತಿಗಳನ್ನು ಹುಟ್ಟಿಸಲೂ ಆಗದು, ಹಳೆಯವನ್ನು ನಾಶಗೊಳಿಸಲೂ ಆಗದು. ಕೆಲವು ಆಸಕ್ತಿಗಳು ಪುರುಷರಿಗೆ ನಿರ್ದಿಷ್ಟವಾಗಿವೆ ಮತ್ತೆ ಕೆಲವು ಸ್ತ್ರೀಯರಿಗೆ-ಎಂದು ಹೇಳಬಹುದಾದರೂ ಈ ವಿಂಗಡಣೆ ಖಡಾಖಂಡಿತವೆಂದು ಹೇಳಲು ಬರುವುದಿಲ್ಲ.