ವಿಷಯಕ್ಕೆ ಹೋಗು

ಆಶ್ವಯುಜಮಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾಂದ್ರವರ್ಷ ಪ್ರಾರಂಭದಿಂದ ಏಳನೆಯ ತಿಂಗಳು. ವರ್ಷದ ಎರಡನೆಯ ಅರ್ಧ ಈ ತಿಂಗಳಿನಿಂದ ಪ್ರಾರಂಭವಾಗುತ್ತದೆ, ಕನ್ಯಾರಾಶಿಯಲ್ಲಿ ಸೂರ್ಯನಿರು ವಾಗ ಶುಕ್ಲಪ್ರಥಮೆಯಿಂದ ಮಾಸ ಪ್ರಾರಂಭವಾಗಿ ಸೂರ್ಯ ತುಲಾರಾಶಿಯಲ್ಲಿರುವಾಗ ಅಮಾವಾಸ್ಯೆಯಿಂದ ಕೊನೆಗೊಳ್ಳುತ್ತದೆ. ಈ ತಿಂಗಳನ್ನು ಅಶ್ವಿನ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಈ ತಿಂಗಳಿನ ಹುಣ್ಣಿಮೆ ಅಶ್ವಿನಿ ನಕ್ಷತ್ರದೊಡನೆ ಕೂಡಿರುವುದರಿಂದ ಇದಕ್ಕೆ ಆಶ್ವಯುಜ ಎಂಬ ಹೆಸರು ಬಂದಿದೆ. ರೇವತಿ ಭರಣಿ ನಕ್ಷತ್ರಗಳೂ ಕೆಲವು ವೇಳೆ ಸೇರುವುದುಂಟು. ಕನ್ಯಾರಾಶಿಯಲ್ಲಿ ಸೂರ್ಯನಿರುವಾಗ ಸೂರ್ಯಸಂಕ್ರಮಣವಿಲ್ಲದ ವರ್ಷಾದಿ ಏಳನೆಯ ಚಾಂದ್ರಮಾಸ ಕೆಲವು ವರ್ಷಗಳಿಗೊಮ್ಮೆ ಬರುವುದುಂಟು. ಇದನ್ನು ಅಧಿಕ ಆಶ್ವಯುಜವೆಂದು ಕರೆಯುತ್ತಾರೆ. ಇದರ ಮುಂದಿನ ಚಾಂದ್ರಮಾಸ ನಿಜಾಶ್ವಯುಜ. ಅಧಿಕ ಆಶ್ವಯುಜದಲ್ಲಿ ನಿತ್ಯಕರ್ಮಗಳು ಮಾತ್ರ. ವಿಶೇಷಕರ್ಮಾಚರಣೆ ಇಲ್ಲ. ಆಶ್ವಯುಜ ಶುಕ್ಲಪ್ರಥಮೆಯಿಂದ ಶರದೃತುವೂ ಶರನ್ನವರಾತ್ರಿಯೂ ಪ್ರಾರಂಭವಾಗುತ್ತವೆ. ಈ ತಿಂಗಳಿನಲ್ಲಿ ದೇವಿಯ ಪುಜೆ ವಿಶೇಷ. ಸರಸ್ವತಿ, ದುರ್ಗಿ, ಲಕ್ಷ್ಮೀದೇವಿಯರ ಪುಜೆಗೆ ಈ ತಿಂಗಳು ಮೀಸಲಾಗಿದೆ. ಶುಕ್ಲದಶಮಿಯ ದಿವಸ ಕ್ಷತ್ರಿಯರು ವಿಜಯಯಾತ್ರೆಗೆ ಹೊರಡಲು ಶುಭಕಾಲ. ಇಂದೂ ಇದು ಆಚರಣೆಯಲ್ಲಿದೆ. ಉತ್ತರಾಭಾದ್ರ ನಕ್ಷತ್ರದ ದಿವಸ ಮೈಸೂರು ನಗರದ ಅಧಿದೇವತೆಯಾದ ಶ್ರೀಚಾಮುಂಡೇಶ್ವರಿ ರಥೋತ್ಸವ ನಡೆಯುತ್ತದೆ.