ಆಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಲ್ವೇಸಿ ಕುಟುಂಬಕ್ಕೆ ಥೆಸ್ಪಿಸಿಯ ಪಾಪ್ಸುಲಿನ ಎಂಬ ವೈಜ್ಞಾನಿಕ ಹೆಸರಿನ ಈ ಮರವನ್ನು ಹೂವರಸಿ ಎಂದು ಕರೆಯುವುದುಂಟು. ಇದು ಪಶ್ಚಿಮ ಕರಾವಳಿ, ಬಂಗಾಳ, ಅಂಡಮಾನ್, ಮೈಸೂರು, ಮದ್ರಾಸು ಮುಂತಾದ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಮರಳುಮಿಶ್ರಿತ ನೆಲದಲ್ಲಿ ಬಲು ಸೊಂಪಾಗಿ ಬೆಳೆಯುತ್ತದೆ. ರಸ್ತೆಗಳ ಇಕ್ಕೆಲಗಳಲ್ಲೂ ಸಾಲುಮರಗಳಾಗಿ ಬೆಳೆಸುವುದುಂಟು. ೯-೧೦ ಮೀಟರ್ ಎತ್ತರಕ್ಕೆ ಬೆಳೆಯಬಲ್ಲ ಈ ಮರದ ಹೊಳಪುಳ್ಳ ಹೃದಯಾಕಾರದ ಎಲೆಗಳು ಅತ್ಯಂತ ಆಕರ್ಷಕವಾಗಿರುತ್ತವೆ. ಹೂಗಳು ಹಳದಿ, ಕಾಯಿ ಬುಗುರಿಯಾಕಾರದ್ದಾಗಿದ್ದು ಬಹಳ ಕಾಲ ಮರಕ್ಕೆ ಅಂಟಿಕೊಂಡೇ ಇರುತ್ತದೆ. ಬೀಜಗಳಿಂದ ಸುಲಭವಾಗಿ ಸಸಿಗಳನ್ನು ಪಡೆಯಬಹುದು. ಮರ ತುಂಬ ಗಟ್ಟಿ. ಗರ್ಭದಲ್ಲಿ ಸೊಗಸಾದ ಎಲೆಗಳಿಂದ ಕೂಡಿದ ಜಾಲವಿದೆ. ದೋಣಿ, ಬಂದೂಕದ ಹಿಡಿ, ಗಾಡಿಚಕ್ರ, ಪಟ್ಟೆಗಳು, ವ್ಯವಸಾಯ ಕಾರ್ಯಗಳಲ್ಲಿ ಬಳಸುವ ಮೇಣಿ, ಕುಂಟೆ, ಮೇಣಿಹಿಡಿ ಮುಂತಾದವನ್ನೆಲ್ಲ ತಯಾರಿಸಲು ಇದರ ಮರವನ್ನು ಉಪಯೋಗಿಸುತ್ತಾರೆ. ಮರದ ತೊಗಟೆಯಿಂದ ಬರುವ ನಾರನ್ನು ಒರಟಾದ ಹಗ್ಗಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಬೀಜಗಳಿಂದ ತೆಗೆದ ಎಣ್ಣೆಯನ್ನು ದೀಪ ಉರಿಸಲು ಹಿಪ್ಪೆ ಎಣ್ಣೆಯ ಜೊತೆ ಸೇರಿಸಿ ಉಪಯೋಗಿಸುತ್ತಾರೆ. ಹೂವಿನಿಂದ ಹಳದಿ ಬಣ್ಣವನ್ನು ತಯಾರಿಸುತ್ತಾರೆ. ಕಾಯಿ, ಎಲೆ ಮತ್ತು ಬೇರುಗಳಿಂದ ಮಾಡಿದ ಚೂರ್ಣವನ್ನು ಬಿಳಿ ಹುಲಿಸೊಪ್ಪಿನ ಚೂರ್ಣದೊಂದಿಗೆ ಸೇರಿಸಿ, ಕಜ್ಜಿ ಮುಂತಾದ ಚರ್ಮರೋಗಗಳಿಗೆ ಉಪಯೋಗಿಸುತ್ತಾರೆ.

"https://kn.wikipedia.org/w/index.php?title=ಆಶ&oldid=715208" ಇಂದ ಪಡೆಯಲ್ಪಟ್ಟಿದೆ