ಆವ್ಬರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಗ್ಲೆಂಡಿನ ವಿಲ್ಟ್ ಫರ್ ಪ್ರಾಂತ್ಯದಲ್ಲಿರುವ ಹಳ್ಳಿ. ಇಲ್ಲಿ ಸು. 3,500 ವರ್ಷಗಳಷ್ಟು ಹಳೆಯದಾದ ದೊಡ್ಡ ಕಲ್ಲುಗಳನ್ನು ವೃತ್ತಾಕಾರದಲ್ಲಿ ನೆಟ್ಟಿರುವ ವಿಚಿತ್ರ ನಿರ್ಮಾಣವೊಂದು ಕಂಡುಬಂದಿದೆ. ವೃತ್ತಾಕಾರದಲ್ಲಿ ನೆಡಲು ಸುಮಾರು ನೂರು ಕಲ್ಲುಗಳನ್ನು ಉಪಯೋಗಿಸಿದ್ದಾರೆ. ಈ ಕಲ್ಲುಗಳು ನೆಲಮಟ್ಟದ ಮೇಲೆ 1.5-4ಮೀ ಎತ್ತರವಿದ್ದು, 1-3.5ಮೀ ಅಗಲವಿದೆ. ಈ ಕಲ್ಲಿನ ವೃತ್ತ ಸು. 28 ಎಕರೆ ಪ್ರದೇಶವನ್ನು ಆಕ್ರಮಿಸಿದ್ದು ಈಗಿನ ಹಳ್ಳಿಯನ್ನು ಸುತ್ತುವರಿದಿದೆ. ಈಗ ವೃತ್ತದೊಳಗೆ ಮೂರು ಪ್ರವೇಶದ್ವಾರಗಳಿದ್ದರೂ ಹಿಂದೆ ಪೂರ್ವ, ಪಶ್ಚಿಮ, ದಕ್ಷಿಣೋತ್ತರಗಳಲ್ಲಿ ಒಂದೊಂದು ದ್ವಾರಗಳಿದ್ದುವು. ಸುತ್ತಲೂ 12ಮೀ ಅಗಲ, 9ಮೀ ಆಳದ ಕಂದಕವಿದೆ. ಇದರ ಒಳಗೇ ದೊಡ್ಡದರ ತರಹದ ಕಲ್ಲುಗಳನ್ನೇ ನೆಟ್ಟು ನಿರ್ಮಿಸಿದ ಎರಡು ಸಣ್ಣವೃತ್ತಗಳಿವೆ. ಇವುಗಳ ಮಧ್ಯದಲ್ಲಿ, ಒಂದರಲ್ಲಿ ಮೂರು ಮತ್ತು ಇನ್ನೊಂದರಲ್ಲಿ ಒಂದು ಬಲು ಎತ್ತರವಾದ ಕಲ್ಲುಗಳನ್ನು ನೆಡಲಾಗಿದೆ. ಹಿಂದೆ ಈ ದೊಡ್ಡ ಕಲ್ಲಿನ ವೃತ್ತಕ್ಕೆ ಸೇರಿದ ಹಾಗೆ ಸು. 15ಮೀ ಅಗಲದ, ಇಕ್ಕೆಲಗಳಲ್ಲೂ ದೊಡ್ಡಕಲ್ಲುಗಳನ್ನು ಸಾಲಾಗಿ ನೆಟ್ಟ ದೊಡ್ಡ ರಸ್ತೆಯೊಂದಿತ್ತು. ಇದು ಸು. 1.6 ಕಿಮೀ ಉದ್ದವಿದ್ದು, ಅದರ ಅತ್ತಣ ಕೊನೆಯಲ್ಲಿದ್ದ ಎರಡು ಏಕಕೇಂದ್ರ ಶಿಲಾವೃತ್ತಗಳಿಗೆ ಸಂಪರ್ಕವನ್ನು ಕಲ್ಪಿಸಿತ್ತು. ದೊಡ್ಡ ವೃತ್ತದ ನೈರುತ್ಯಕ್ಕೆ ಎರಡು ಪಕ್ಕಗಳಲ್ಲೂ ಸಾಲುಕಲ್ಲುಗಳನ್ನು ನೆಟ್ಟು ಮಾಡಿದ ಇನ್ನೊಂದು ರಸ್ತೆ ಇತ್ತು. ಇವೆಲ್ಲ ಈಚೆಗೆ ಸ್ವಲ್ಪ ಹಾಳಾಗಿವೆ. ಈ ಕಟ್ಟಡದ ಉದ್ದೇಶ ಇನ್ನೂ ಅಸ್ಪಷ್ಟವಾದರೂ ಇದೊಂದು ಬಯಲು ದೇವಾಲಯವಾಗಿರಬಹುದೆಂದು ಹಲವರ ಊಹೆ. ಇದರ ಕಾಲವೂ ಅನಿರ್ದಿಷ್ಟ ; ಬ್ರಿಟನ್ನಿನ ನವಶಿಲಾಯುಗದ ಕೊನೆಯ ಭಾಗದಲ್ಲೂ ಕಂಚಿನಯುಗದ ಮೊದಲಲ್ಲೂ ಇದನ್ನು ನಿರ್ಮಿಸಿರಬಹುದು. ಆವ್ಬರಿಯ ಶಿಲಾವೃತ್ತ ಆ ರೀತಿಯ ಕಟ್ಟಡಗಳಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡದಾಗಿದ್ದು ತನ್ನ ಬೃಹತ್ಪ್ರಮಾಣ ಮತ್ತು ರಚನಾವೈಶಿಷ್ಟ್ಯಗಳಿಂದ ಗಮನಾರ್ಹವಾಗಿದೆ.

"https://kn.wikipedia.org/w/index.php?title=ಆವ್ಬರಿ&oldid=912662" ಇಂದ ಪಡೆಯಲ್ಪಟ್ಟಿದೆ