ಆಲ್‍ಫ್ರೆಡ್ ಡಬ್ಲೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲ್‍ಫ್ರೆಡ್ ಡಬ್ಲೀನ್ (1878-1957). ಜರ್ಮನ್ ಕಾದಂಬರಿಕಾರ, ಪ್ರಬಂಧಕಾರ, ವೈದ್ಯ. ಜರ್ಮನಿಯಲ್ಲಿ ಈ ಶತಮಾನದ ಆದಿಯಲ್ಲಿ ಪ್ರಾರಂಭವಾದ ಅಭಿವ್ಯಕ್ತಿವಾದ (ಎಕ್ಸ್‍ಪ್ರೆಷನಿಸಂ) ಚಳವಳಿಯ ಆದ್ಯ ಪ್ರವರ್ತಕರಲ್ಲಿ ಒಬ್ಬ.

ಬದುಕು[ಬದಲಾಯಿಸಿ]

ಹುಟ್ಟಿದ್ದು ಸ್ಟಟೀನ್‍ನಲ್ಲಿ. ಬರ್ಲಿನ್‍ನಲ್ಲಿ ವೈದ್ಯಶಿಕ್ಷಣ ಪಡೆದು 1913-33ರ ಅವಧಿಯಲ್ಲಿ ನರರೋಗಗಳ ತಜ್ಞನಾಗಿ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲಿ ವಿಶೇಷವಾಗಿ ಬರ್ಲಿನ್ ಕೊಳಚೆ ಪ್ರದೇಶಗಳ ಜನರ ಸೇವೆ ನಡೆಸಿದ. ಜರ್ಮನಿಯಲ್ಲಿ ನಾಟ್ಸಿಗಳು ಅಧಿಕಾರಕ್ಕೆ ಬಂದಾಗ ದೇಶ ಬಿಟ್ಟುಹೋದ ತಾಮಸ್ ಮನ್, ಬರ್ಟಾಲ್ಟ್ ಬ್ರೆಕ್ಟ್ ಮುಂತಾದ ಹಲವು ಸಾಹಿತಿಗಳ ಪೈಕಿ ಈತನೂ ಒಬ್ಬ ಈತ 1933ರಲ್ಲಿ ಮೊದಲು ಪ್ಯಾಲಸ್ಟೈನ್‍ಗೆ ಹೋಗಿ ಅಲ್ಲಿಂದ ಅಮೆರಿಕಕ್ಕೆ ತೆರಳಿದ. ಅಲ್ಲಿ ಸುಮಾರು 12ವರ್ಷ ಕಾಲವಿದ್ದು, ಎರಡನೆಯ ಮಹಾಯುದ್ಧದ ತರುವಾಯ ಅಂದರೆ 1945ರಲ್ಲಿ ಜರ್ಮನಿಗೆ ಹಿಂತಿರುಗಿ ಕೆಲಕಾಲ ಅಲ್ಲಿದ್ದು ರೋಮನ್ ಕ್ಯಾತೊಲಿಕ್ ಮತವನ್ನು ಅವಲಂಬಿಸಿ ಅನಂತರ ಫ್ರಾನ್ಸ್‍ಗೆ ಹೋಗಿ ಸಾಯುವವರೆಗೂ ಅಲ್ಲಿಯೇ ಇದ್ದ.

ಕಾದಂಬರಿಗಳು[ಬದಲಾಯಿಸಿ]

ಜರ್ಮನ್ ನಾಟಕಕಾರರಂತೆ ಡಬ್ಲೀನ್ ಸಹ ಅಭಿವ್ಯಕ್ತಿವಾದದ ತತ್ತ್ವಗಳನ್ನು ತನ್ನ ಕಾದಂಬರಿಗಳಲ್ಲಿ ಅಳವಡಿಸಿಕೊಂಡು, ವಿನಾಶದತ್ತ ನುಗ್ಗುತ್ತಿರುವ ಯಂತ್ರಯುಗದ ನಾಗರಿಕತೆಯ ನಿರರ್ಥಕಥೆಯನ್ನು ಚಿತ್ರಿಸಿದ. ತನ್ನ ಕಾದಂಬರಿಗಳಿಗೆ ವಸ್ತುವಿಗಾಗಿ ಚೀನ, ದಕ್ಷಿಣ ಅಮೆರಿಕ ಮುಂತಾದ ದೇಶಗಳ ಪುರಾಣೇತಿಹಾಸಗಳನ್ನು ತಿರುವಿ ಹಾಕಿದ. ಆಧುನಿಕ ಮಾನವನ ಬದುಕಿನಲ್ಲಿ ವ್ಯಕ್ತಿಯನ್ನು ಮೀರಿದ ಶಕ್ತಿಗಳು ಹೇಗೆ ಅವನೊಡನೆ ಸಂಘರ್ಷಿಸಿ ಅವನ ಮೇಲೆ ಪ್ರಭಾವ ಬೀರುತ್ತವೆ. ಅಂಥ ಸಂಘರ್ಷಣೆಯಲ್ಲಿ ವ್ಯಕ್ತಿಯ ಪ್ರತಿಕ್ರಿಯೆ ಎಂಥದು-ಇದು ಈತನ ಕಾದಂಬರಿಗಳ ವಸ್ತು.

ಡಬ್ಲೀನನ ಮೊಟ್ಟಮೊದಲ ಒಳ್ಳೆಯ ಕಾದಂಬರಿ ಎನ್ನಲಾದ ಡ್ರೈಸ್ಪೂಂಜಿ ಡೆಸ್ ವಾಂಗ್ ಲುಂಗ್ (ವಾಂಗ್‍ಲುಂಗ್‍ನ ಮೂರು ನೆಗೆತಗಳು-1915). ಇದು ಚೀನಿ ರೈತನ ಮಗನ ಸಾಹಸಮಯ ಕಥೆ. ಮೀನುಗಾರನ ಮನೆಯಲ್ಲಿ ಹುಟ್ಟಿದ. ಕೆಲಸಕ್ಕೆ ಬಾರದ ಲಫಂಗನೊಬ್ಬ ಹೇಗೆ ರಾಷ್ಟ್ರ ಸ್ವಾತಂತ್ರ್ಯ ಚಳವಳಿಯ ವೀರನಾಯಕನಾಗಿ ಮಾರ್ಪಟ್ಟು ದೇಶಸೇವೆಗಾಗಿ ತನ್ನನ್ನು ಅರ್ಪಿಸಿಕೊಳ್ಳುತ್ತಾನೆಂಬುದು ಕಾದಂಬರಿಯ ವಸ್ತು. ಇದರಲ್ಲಿ ಚೀನಿಯರ ಜೀವನವನ್ನು ಕುರಿತ ಸ್ವಾರಸ್ಯವಾದ, ಯಥಾರ್ಥ ಒಳನೋಟಗಳಿವೆ. ಬರ್ಜ್, ಮೀರ್ ಮತ್ತು ಜೈಗಾಂಟಿನ್ ಎಂಬ ಹೆಸರಿನಲ್ಲಿ 1924ರಲ್ಲಿ ಪ್ರಕಟವಾಗಿದ್ದು

ಅನಂತರ ಜೈಜಾಂಟಿನ್ ಎಂದು ಪುನರ್ಮುದ್ರಿತವಾದ ಇನ್ನೊಂದು ಕಾದಂಬರಿಯಲ್ಲಿ ಆಧುನಿಕ ವಿಜ್ಞಾನ ಭವಿಷ್ಯ ಜಗತ್ತನ್ನು ಹೇಗೆ ಪರಿವರ್ತಿಸಬಲ್ಲದೆಂಬ ಅದ್ಭುತ ಕಾಲ್ಪನಿಕ ಚಿತ್ರವಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಕೃತಿ ಸಂಪತ್ತನ್ನು ಮನಸ್ವಿ ಕೊಳ್ಳೆಹೊಡೆಯುತ್ತಿರುವ ಯಂತ್ರಯುಗದ ಮಾನವನ ಮೇಲೆ ಭವಿಷ್ಯದಲ್ಲಿ ಪ್ರಕೃತಿ ಯಾವ ರೀತಿ ಸೇಡು ತೀರಿಸಿಕೊಳ್ಳಬಹುದೆಂಬ ಇಲ್ಲಿನ ವಿಭಾವನಾಯುತ ಚಿತ್ರಣ ಮೈನವಿರೇಳಿಸುವಂತಿದೆ.

ಡಬ್ಲೀನ್‍ನ ಮಹಾಕೃತಿ ಬರ್ಲಿನ್ ಅಲೆಕ್ಸಾಂಡರ್ ಪ್ಲಾಟ್ಸ್ (1929)-ಇದನ್ನು ಅಭಿವ್ಯಕ್ತಿವಾದ ಚಳವಳಿಯ ಶ್ರೇಷ್ಠ ಕಾದಂಬರಿ ಎನ್ನುವುದುಂಟು. ಇದರಲ್ಲಿ ಡಬ್ಲೀನ್ ಪ್ರಜ್ಞಾವಾಹಿ ಕಾದಂಬರಿಯ ತಂತ್ರವನ್ನೂ, ಚಲನಚಿತ್ರ ಸಂಕಲನ ತಂತ್ರವನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾನೆ-ಜೈಲಿನಿಂದ ಬಿಡುಗಡೆ ಹೊಂದಿದ ಸಾರಿಕೆ ನೌಕರನೊಬ್ಬ ಸಾಮಾನ್ಯ ನಾಗರಿಕನಂತೆ ಬಾಳಲೆತ್ನಿಸಿ ವಿಫಲನಾಗುವ ಗಂಭೀರ ಚಿತ್ರ ಇದರಲ್ಲಿದೆ. ನಾಗರಿಕ ಸಮಾಜದ ಯಾವನೇ ಒಬ್ಬ ವ್ಯಕ್ತಿ ತನ್ನಲ್ಲಿ ಹಾಗೂ ತನ್ನ ಸುತ್ತಲಿನ ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಿರ್ಲಕ್ಷಿಸಿದರೆ ಆತ ಖಂಡಿತವಾಗಿ ವಿನಾಶಕ್ಕೆ ಗುರಿಯಾಗುತ್ತಾನೆಂಬುದು ಕಾದಂಬರಿಯ ತತ್ತ್ವ. ಬರ್ಲಿನ್ ನಗರಜೀವನದ ನೂರೆಂಟು ಮುಖಗಳು ಈ ಕಾದಂಬರಿಯಲ್ಲಿ ಅತ್ಯದ್ಭುತವಾಗಿ ಪಡಿಮೂಡಿವೆ.

ಸಂಕೀರ್ಣವಾದ ನವ್ಯತಂತ್ರಗಳನ್ನು ಪ್ರಯೋಗಿಸಿ ಬೇಸತ್ತ ಮೇಲೆ ಡಬ್ಲೀನ್ ಪುನಃ ಸಾಂಪ್ರದಾಯಿಕ ಶೈಲಿಯತ್ತ ವಾಲಿ, ಸರಳ ವಸ್ತುವನ್ನು ಯಥಾರ್ಥ ಶೈಲಿಯನ್ನು ಆರಿಸಿಕೊಂಡು ಡಾಸ್ ಲ್ಯಾಂಡ್ ಓನ್ ಟೌಡ್ (ಸಾವಿಲ್ಲದ ನಾಡು-1937) ಮತ್ತು ಡರ್‍ಅನ್ ಸರ್ ಬ್ಲಿಚ್ ಮೆನ್‍ಷ್ಚ್ (ಸಾವಿಲ್ಲದವ-1946) ಎಂಬ ಕಾದಂಬರಿಗಳನ್ನು ಬರೆದ. ಈತ ಜರ್ಮನಿಯ ಶ್ರೇಷ್ಠ ಆಧುನಿಕ ನಾಟಕಕಾರ ಎನಿಸಿದ ಬರ್ಟಾಲ್ಟ್ ಬ್ರೆಕ್ಟ್‍ನ ಗೆಳೆಯನಾಗಿದ್ದು ಆತನ ಕೆಲವು ಕೃತಿಗಳಿಗೆ ಪ್ರೇರಣೆ ಒದಗಿಸಿದ ಎನ್ನಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: