ವಿಷಯಕ್ಕೆ ಹೋಗು

ಆಲ್ಮಜೆಸ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಮಜೆಸ್ಟ್ ಗ್ರಂಥದ ಲ್ಯಾಟಿನ್ ಭಾಷೆಯ ಸಂಪುಟ :1515
೧೬ನೆಯ ಶತಮಾನದಲ್ಲಿ ಟಾಲೆಮಿ ಪ್ರತಿಪಾದಿಸಿದ ಭೂಕೇಂದ್ರಿತ ವಿಶ್ವದ ಮಾದರಿ

ಆಲ್ಮಜೆಸ್ಟ್ ಕ್ಲಾಡಿಯಸ್ ಟಾಲೆಮಿ (ಸು. 2ನೆಯ ಶತಮಾನ) ಗ್ರೀಕ್ ಗಣಿತಶಾಸ್ತ್ರಜ್ಞ. ಈತ ಸಂಪಾದಿಸಿದ ಖಗೋಳ ಗ್ರಂಥದ ಹೆಸರು; ಮ್ಯಾತಮ್ಯಾಟಿಕಲ್ ಸಿಂಟೇಕ್ಸಿಸ್ ಎಂದು ಈಚೆಗೆ ಹೆಸರಿಸಲಾಗಿದೆ; ಖಗೋಳಶಾಸ್ತ್ರವನ್ನು ಕುರಿತ ಗ್ರೀಕ್ ಗ್ರಂಥಗಳಲ್ಲಿ ಕೊನೆಯ ಮಹಾಕೃತಿ; ಅಲ್ಲಿಯವರೆಗಿನ ಗ್ರೀಕ್ ಸಂಶೋಧನೆಗಳನ್ನೂ ಭಾವನೆಗಳನ್ನೂ ಒಳಗೊಂಡ ಏಕೈಕ ನಿರೂಪಣೆ. ಆಲ್ಮಜೆಸ್ಟ್ ಎಂಬುದು ಅರಬ್ಬರು ನೀಡಿದ ಹೆಸರು. ಮುಂದಿನ 14 ಶತಮಾನಗಳ ಕಾಲ (ಅಂದರೆ 16ನೆಯ ಶತಮಾನದವರೆಗೂ) ಖಗೋಳಶಾಸ್ತ್ರವನ್ನು ಕುರಿತ ಚಿಂತನೆಗಳಿಗೆ ಇದು ಆಧಾರಗ್ರಂಥವೆಂದು ಪರಿಗಣಿತವಾಗಿತ್ತು. ಟಾಲೆಮಿ ಸ್ವತಃ ಸಂಶೋಧಿಸಿದ್ದು ಕಡಿಮೆ; ಆದರೆ ಕ್ರೋಡೀಕರಿಸಿದ್ದು ಈ ಗ್ರಂಥವನ್ನು. ಭೂಮಿಗೆ ಚಲನೆ ಇರಬಹುದು, ವಿಶ್ವಕೇಂದ್ರ ಭೂಮಿ ಆಗಿರಲಾರದು ಎಂಬ ಸಂದೇಹಗಳನ್ನು ಆ ಮೊದಲು ಹಲವಾರು ಚಿಂತನಕಾರರು ಮುಂದಿಟ್ಟಿದ್ದರು. ಆದರೆ ಟಾಲೆಮಿ ಇವೆಲ್ಲವನ್ನೂ ಅಲ್ಲಗಳೆದು ವಿಶ್ವಕೇಂದ್ರ ಭೂಮಿ, ಇದರ ಸುತ್ತಲೂ ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು ಸುತ್ತುತ್ತಿವೆ ಎಂದು ಸಾರಿದ. ಇವುಗಳ ಕಕ್ಷೆಗಳನ್ನು ವಿವರಿಸಲೋಸುಗ ಅಧಿಚಕ್ರ ಎಂಬ ಹೊಸ ಗಣಿತಭಾವನೆ ಮುಂದಿಟ್ಟ. ಟಾಲೆಮಿ ವ್ಯವಸ್ಥೆ ಎಂದು ಹೆಸರು ಪಡೆದ ಸೌರವ್ಯೂಹದ ಈ ವಿವರಣೆ ಕಂಡ ವಿವರಗಳಿಗೆ ಸರಿಸುಮಾರು ಹೊಂದುತ್ತಿದ್ದುದರಿಂದ ಟಾಲೆಮಿಯ ವಿಶ್ವದ ಕೇಂದ್ರ ಭೂಮಿ ಎಂಬ ಸಿದ್ಧಾಂತ ಶತಮಾನಗಳ ಕಾಲ ಉಳಿಯಿತು. ಅರಬ್ ಮತ್ತು ಕ್ರಿಶ್ಚಿಯನ್ ಪ್ರಪಂಚಗಳಿಗೂ ವ್ಯಾಪಿಸಿ ಅಲ್ಲಿನ ಚಿಂತನೆಗಳ ಮೇಲೂ ಗಾಢಪ್ರಭಾವ ಬೀರಿತು. 16ನೆಯ ಶತಮಾನದಲ್ಲಿ ಆಲ್ಮಜೆಸ್ಟನ್ನು (ಗ್ರೀಕ್ ಭಾಷೆಯಲ್ಲಿ) ಪ್ರಥಮವಾಗಿ ಮುದ್ರಿಸಲಾಯಿತು. ಟಾಲೆಮಿಯ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿದ ಮೊದಲ ವಿಜ್ಞಾನಿ 16ನೆಯ ಶತಮಾನದ ಕೆಪ್ಲರ್. ಇಂದು ಆಲ್ಮಜೆಸ್ಟ್ ಗ್ರಂಥಕ್ಕೆ ಕೇವಲ ಐತಿಹಾಸಿಕ ಮಹತ್ತ್ವ ಮಾತ್ರ ಉಳಿದಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]