ಆಲ್ಫ್ರೆಡ್ ಅಡ್ಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಫ್ರೆಡ್ ಅಡ್ಲರ್
ಚಿತ್ರ:Alfred Adler (1870-1937) Austrian psychiatrist.jpg
ಆಲ್ಫ್ರೆಡ್ ಅಡ್ಲರ್
ಜನನ
ಆಲ್ಫ್ರೆಡ್ ಅಡ್ಲರ್

೧೮೭೦ ಫೆಬ್ರವರಿ ೭
ಆಸ್ಟ್ರಿಯಾ
ರಾಷ್ಟ್ರೀಯತೆಆಸ್ಟ್ರಿಯಾ

ಆಲ್ಫ್ರೆಡ್ ಅಡ್ಲರ್‌ರವರು ೧೮೭೦ರ ಫೆಬ್ರವರಿ ೭ರಂದು ಜನಿಸಿದರು. ಅವರು ಆಸ್ಟ್ರಿಯಾದ ಮನೋವಿಜ್ಞಾನ ತಜ್ಞರು (psychologist) ಮಾತ್ರವಲ್ಲದೆ ಮನೋರೋಗ ಚಿಕಿತ್ಸಕರೂ (psychiatrist) ಆಗಿದ್ದರು. ಅವರು ತಮ್ಮ ವಿದ್ಯಾಭ್ಯಾಸ ಮುಗಿದ ಮೇಲೆ ‘ಮನೋವಿಶ್ಲೇಷಣಾ ವಿಜ್ಞಾನದ (psychoanalysis) ಜನಕ’ ಎಂಬುದಾಗಿ ಗುರುತಿಸಲ್ಪಟ್ಟಿರುವ ಸಿಗ್ಮಂಡ್ ಫ್ರಾಯ್ಡ್‌ರವರ ವಿದ್ಯಾರ್ಥಿಯಾಗಿ ನಂತರ ಅವರ ಸಹವಿಜ್ಞಾನಿಯಾದರು. ವಿಯನ್ನಾ ವಿಶ್ವವಿದ್ಯಾನಿಲಯದಲ್ಲಿ ವೈದ್ಯಶಾಸ್ತ್ರದ ಪದವೀಧರನಾಗಿ (1395) ನೇತ್ರಚಿಕಿತ್ಸಕನಾಗಿ ಸೇವೆ ಸಲ್ಲಿಸುತ್ತಿದ್ದ. ಅನಂತರ ಮಾನಸಿಕ ರೋಗಶಾಸ್ತ್ರದಲ್ಲಿ ಆಸಕ್ತನಾಗಿ ಅದಕ್ಕಾಗಿ ಚಿಕಿತ್ಸಾಲಯವನ್ನು ಆರಂಭಿಸಿದ. ಅನಂತರ, ಅಂದಿಗಾಗಲೆ ಪ್ರಚಾರಕ್ಕೆ ಬಂದಿದ್ದ ಫ್ರಾಯ್ಡ್‍ರ ಮನೋವಿಶ್ಲೇಷಣಶಾಸ್ತ್ರದ ಪ್ರಧಾನ ಪ್ರತಿಪಾದಕನಾಗಿ ಆ ಪಂಥವನ್ನು ಬಲಪಡಿಸಿದ. 1907ರಲ್ಲಿ ಆಂಗಿಕ ಊನತೆಯ ತತ್ವ (ಥಿಯೊರಿ ಆಫ್ ಆಗ್ರ್ಯಾನಿಕ್ ಇನ್‍ಫೀರಿಯಾರಿಟಿ) ಎಂಬ ನೂತನ ತತ್ತ್ವವನ್ನು ಪ್ರಕಟಿಸಿದ. 1911ರಲ್ಲಿ ಅವನಿಗೂ ಫ್ರಾಯ್ಡ್‍ನ ಪಂಥದವರಿಗೂ ಅಭಿಪ್ರಾಯ ಭಿನ್ನತೆ ತಲೆದೋರಿತು. ಮಾನವನ ಎಲ್ಲ ವರ್ತನೆಗೂ ಲೈಂಗಿಕ ಪ್ರಚೋದನೆಯೇ ಮೂಲ ಪ್ರೇರಕವೆಂಬ ತತ್ತ್ವವನ್ನು ಒಪ್ಪದೆ, ಅದಕ್ಕೆ ವೈಯಕ್ತಿಕವಾದ ಇತರ ಉದ್ದೇಶಗಳೂ ಇವೆಯೆಂಬ ವಾದವನ್ನು ಎತ್ತಿಹಿಡಿದು ಆ ಪಂಥದಿಂದ ಹೊರಬಂದ. ತನ್ನದೇ ಆದ, ವ್ಯಕ್ತಿ ಮನೋವಿಜ್ಞಾನ, ಎಂಬ ಹೊಸ ಪಂಥವನ್ನು ಆರಂಭಿಸಿದ. ಅನುವಂಶೀಯವಾಗಿ ಬರುವ ಊನತೆ ಮನಸ್ಸಿನ ರಚನೆ ಮತ್ತು ವ್ಯಾಪಾರಗಳ ಮೇಲೆ ತೀವ್ರ ಪರಿಣಾಮ ಬೀರುವುದೆಂಬ ತತ್ತ್ವವನ್ನು ಪ್ರತಿಪಾದಿಸಿದ.ಆದರೆ ಅವರಿಗೆ ತಮ್ಮ ಗುರುವಿನ ಮನೋವಿಶ್ಲೇಷಣಾ ಸಿದ್ಧಾಂತಗಳು ಹಿಡಿಸಲಿಲ್ಲ. ಹಾಗಾಗಿ ಅವರು ಮನೋವಿಶ್ಲೇಷಣಾ ವಿಜ್ಞಾನದ ನವೀನ-ಫ್ರಾಯ್ಡ್ (neo-Freudian) ಶಾಲೆಯನ್ನು ಆರಂಭಿಸಿದರು. ನಂತರ ಅವರು ಕುಟುಂಬಸಮೇತರಾಗಿ ಅಮೇರಿಕಕ್ಕೆ ಹೋದರು.[೧] ವ್ಯಕ್ತಿಗತ ಅಭಿವೃದ್ಧಿಯ ವಿಶ್ಲೇಷಣೆಯ ವಿಷಯದಲ್ಲಿ ಅವರು ಸಿದ್ಧಾಂತಗಳನ್ನು ಮಂಡಿಸಿದರು. ಮಾನವನ ಜೀವನದಲ್ಲಿ (ಫ್ರಾಯ್ಡ್ ಪ್ರತಿಪಾದಿಸಿದ್ದ ರೀತಿಯ) ಲೈಂಗಿಕ ಚಾಲನೆಗಿಂತ ಕೀಳರಿಮೆಯ ಭಾವನೆಗಳು ಪ್ರೇರಕಶಕ್ತಿಯ ಪಾತ್ರ ವಹಿಸುತ್ತವೆ ಎಂಬುದಾಗಿ ಅವರು ಪ್ರತಿಪಾದಿಸಿದರು. ಮಾನಸಿಕ ರೋಗಕಾರಕ ವರ್ತನೆಗೆ ಜಾಗೃತ ಮತ್ತು ಉಪಜಾಗೃತ (subconscious) ಅವಸ್ಥೆಯಲ್ಲಿ ಮೂಡುವ ಕೀಳರಿಮೆಯ ಭಾವನೆಗಳ ಜೊತೆ ಸೇರಿಕೊಂಡಿರುವ ರಕ್ಷಾತಂತ್ರಗಳ ಹೊಂದಾಣಿಕೆ ಮೂಲಭೂತ ಕಾರಣವಾಗಿದೆ ಎಂಬುದಾಗಿ ಅವರು ಪ್ರತಿಪಾದಿಸಿದರು. ಮನೋವಿಶ್ಲೇಷಣಾ ವಿಜ್ಞಾನದ ಮೇಲೆ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅಡ್ಲರ್‌ರವರು ೧೯೩೭ರ ಮೇ ೨೮ರಂದು ನಿಧನರಾದರು.

ಆಡ್ಲರ್[ಬದಲಾಯಿಸಿ]

ಆಡ್ಲರ್ 1920ರಲ್ಲಿ ವಿಯನ್ನಾದಲ್ಲಿ ನೂತನವಾಗಿ ಆರಂಭವಾದ ಕೈಸರ್ ಫ್ರಾನ್ಸ್ ಜೋಸೆಫ್ ಆಂಬುಲೇಟೋರಿಯಂ ಎಂಬ ಮನೋರೋಗ ಚಿಕಿತ್ಸಾಲಯದ ಪ್ರಧಾನ ಚಿಕಿತ್ಸಕನಾಗಿ ನೇಮಕವಾದ. ಆ ವೇಳೆಗೆ ಆತನ ಕೀರ್ತಿ ಪಾಶ್ಚಾತ್ಯ ಪ್ರಪಂಚದಲ್ಲೆಲ್ಲ ಹರಡಿತ್ತು. 1896ರಲ್ಲಿ ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದ ವಿಶೇಷ ಪ್ರಾಧ್ಯಾಪಕನಾಗಿ ಕೆಲಸ ಮಾಡಲು ಒಪ್ಪಿದ. ಅನಂತರ ಪ್ರಪಂಚದ ಬೇರೆ ಬೇರೆ ಕಡೆ ಸಂಚರಿಸಿ ತನ್ನ ಪಂಥವನ್ನು ಪ್ರಚಾರ ಮಾಡಿದ. 1932ರಲ್ಲಿ ನ್ಯೂಯಾರ್ಕಿಗೆ ಹೋಗಿ ನೆಲೆಸಿದ. ಅದೇ ವರ್ಷ ಲಾಂಗ್ ಐಲೆಂಡ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಮನೋವಿಜ್ಞಾನದ ಪ್ರಾಧ್ಯಾಪಕನಾದ. ಮಾನವ ಸ್ವಭಾವ, ಜೀವವಿಜ್ಞಾನ, ಮಕ್ಕಳ ಶಿಕ್ಷಣ, ಸಾಮಾಜಿಕ ಆಸಕ್ತಿ ಮುಂತಾದವನ್ನು ಕುರಿತು ಈತ ಗ್ರಂಥರಚನೆ ಮಾಡಿದ್ದಾನೆ. ಅವನು ಆರಂಭಿಸಿದ ವ್ಯಕ್ತಿ ಮನಶ್ಯಾಸ್ತ್ರ ಈಗ ಬಹುವಾಗಿ ಬೆಳೆದು ವೈದ್ಯವೃತ್ತಿಗೆ ನೂತನ ಸೇವಾಕ್ಷೇತ್ರವೊಂದನ್ನು ದೊರಕಿಸಿಕೊಟ್ಟಿದೆ. (ಎನ್.ಎಸ್.ವಿ.)[೨]

ಆಡ್ಲರನ ವ್ಯಕ್ತಿ ಮನಶ್ಯಾಸ್ತ್ರ[ಬದಲಾಯಿಸಿ]

ವ್ಯಕ್ತಿ ಮನಶ್ಯಾಸ್ತ್ರದಲ್ಲಿ, ಆಡ್ಲರ್ ಅನೇಕ ಸಿದ್ಧಾಂತಗಳನ್ನು ರೂಪಿಸಿದ್ದಾನೆ. ಇವುಗಳಲ್ಲಿ ಬಹುಪಾಲು, ಫ್ರಾಯ್ಡನ ಮೂಲ ಸಿದ್ಧಾಂತಗಳಿಂದ ರೂಪಾಂತರ ಹೊಂದಿರುವುವು ಅಥವಾ ಆತನೊಡನಿದ್ದ ಭಿನ್ನಾಭಿಪ್ರಾಯಗಳಿಗೆ ಸಂಬಂಧಪಟ್ಟಿರುವುವು. ಇವುಗಳಲ್ಲಿ, ಬಾಲ್ಯಜೀವನದ ಪ್ರಾಮುಖ್ಯ, ಜೀವನ ವೈಶಿಷ್ಟ್ಯ (ಸ್ಟೈಲ್ ಆಫ್ ಲೈಫ್), ತಾನು ಕೀಳು ಎಂಬ ಮನೋಭಾವ, ಪುರುಷ ಪ್ರತಿಭಟನೆ (ಮ್ಯಾಸ್ಕುಲೈನ್ ಪ್ರೊಟೆಸ್ಟ್) - ಮೊದಲಾದುವು ಪ್ರಮುಖವಾಗಿವೆ. ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಶೈಶವ ಜೀವನದ ಪ್ರಾಮುಖ್ಯದ ವಿಚಾರದಲ್ಲಿ, ಫ್ರಾಯ್ಡ್‍ನ ಅಭಿಪ್ರಾಯವನ್ನು ಆಡ್ಲರ್ ಒಪ್ಪುತ್ತಾನೆ. ಮನುಷ್ಯನ ಮಾನಸಿಕ ಒಲವುಗಳ ಉಗಮವನ್ನು ಶೈಶವ ಜೀವನದಲ್ಲಿ ಕಾಣಬಹುದೆಂದು ಆಡ್ಲರ್ ನಂಬಿದ್ದ. ಅಂತೆಯೆ ಶೈಶವಾವಧಿಯ ವರ್ಷಗಳಲ್ಲಿ, ವ್ಯಕ್ತಿಯ ಭವಿಷ್ಯದ ಅಭಿರುಚಿಗಳುರೂಪುಗೊಳ್ಳುತ್ತವೆ ಎಂಬುದು ಆತನ ಅಭಿಮತ. ಆದರೆ ಫ್ರಾಯ್ಡ್‍ನ ಬೆಳವಣಿಗೆ ಹಂತಗಳ ಮೇಲಿನ ಸಿದ್ಧಾಂತವನ್ನು ಆಡ್ಲರ್ ನಿರಾಕರಿಸಿದನಲ್ಲದೆ, ಈಡಿಪಸ್ ಮನೋಭಾವದ ಸರ್ವ ವ್ಯಾಪಕತೆಯನ್ನು ಅಲ್ಲಗಳೆದ.[೩]

ವ್ಯಕ್ತಿತ್ವ[ಬದಲಾಯಿಸಿ]

ಅನೇಕ ಸಂದರ್ಭಗಳಲ್ಲಿ ಆಡ್ಲರನೇ ಅಭಿಮಾನದಿಂದ ಹೇಳಿಕೊಂಡಿರುವಂತೆ ಆತ ವ್ಯಕ್ತಿಯಲ್ಲಿರುವ ತಾನು ಕೀಳು ಎಂಬ ಮನೋಭಾವದ ಕಲ್ಪನೆಯ ಕರ್ತೃ. ಆತನ ಅಭಿಪ್ರಾಯದಲ್ಲಿ ಅಧಿಕಾರಕ್ಕಾಗಿ ಹೋರಾಟ ಮತ್ತು ಸ್ವಪ್ರತಿಷ್ಠೆಗಳು ಮಾನವನ ವರ್ತನೆಯಲ್ಲಿ ಪ್ರಮುಖವಾಗಿರುತ್ತವೆಯಲ್ಲದೆ, ಹೆಚ್ಚು ಕಡಿಮೆ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೀಳು ಮನೋಭಾವನೆಗಳಿರುತ್ತವೆ. ಬಾಲ್ಯದಲ್ಲಿ ದ್ವೇಷ ಅಥವಾ ಅತಿ ಲಾಲನೆಗೆ ತುತ್ತಾದುದರ, ಅಥವಾ ಅಲ್ಪ ಸಂಖ್ಯಾತರ ಗುಂಪಿಗೆ ಸೇರಿದ್ದರೆ ಅಥವಾ ಅತಿ ಸಂಪತ್ತಿನ ಮಧ್ಯೆ ಬೆಳೆದು ದಾರಿ ತಪ್ಪಿದ್ದರೆ ಅಥವಾ ಅಂಗಾಂಗ ವೈಕಲ್ಯದ ಕಾರಣದಿಂದಾಗಿ, ತಾನು ಕೀಳು ಎಂಬ ಮನೋಭಾವ ಆವಿರ್ಭವಿಸುತ್ತದೆ.ಆಡ್ಲರನ ಪ್ರಕಾರ, ತನಗಿರುವ ಕೀಳು ಮನೋಭಾವನೆಯಿಂದ ವಿಮುಕ್ತಿ ಹೊಂದಲು ವ್ಯಕ್ತಿಗೆ ಪ್ರಬಲೇಚ್ಛೆ ಇರುತ್ತದೆ. ಏಕೆಂದರೆ ಕೀಳು ಮನೋಭಾವಕ್ಕೆ ಶರಣಾಗುವುದು ಸ್ತ್ರೀಗುಣ, ತದ್ವಿರುದ್ಧವಾದುದು ಪುರುಷ ಗುಣ. ಆದುದರಿಂದ ಪುರುಷ ಪ್ರತಿಭಟನೆ ಕ್ಷತಿಪೂರಣ ಪ್ರಕ್ರಿಯೆಯಲ್ಲಿ ಆಗಬಹುದಾದ ಸಾಮಾನ್ಯ ಘಟನೆ ಪುರುಷರನ್ನು ಪ್ರತಿಭಟಿಸುವ ಮನೋಧರ್ಮ ಹೆಂಗಸರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದಕ್ಕೆ ಕಾರಣ, ತಾವು ಗಂಡಸರಿಗಿಂತ ಕೀಳು ಎಂಬ ಅವರ ಮನೋಭಾವ.

ಆಡ್ಲರ್ ನ ವಿಚಾರಗಳು[ಬದಲಾಯಿಸಿ]

ಜೀವನದಲ್ಲಿ ಸುರಕ್ಷಿತತೆ ಮತ್ತು ಸಾರ್ಥಕತೆಗಳನ್ನು ಪಡೆಯಲೋಸುಗ ಪುರುಷ ಪ್ರತಿಭಟನೆ ಒಂದು ಸಾಮಾನ್ಯ ಹೋರಾಟವಾಗಿ ಕ್ರಮೇಣ ಪರಿಣಮಿಸುತ್ತದೆ. ಶಿಶು ಹುಟ್ಟುವಾಗ ದುರ್ಬಲವಾಗಿರುತ್ತದೆ. ಈ ಕ್ಷತಿಪೂರಣೆಗಾಗಿ ಮೊದಲ ನಾಲ್ಕು ಐದು ವರ್ಷಗಳಲ್ಲಿ ಒಂದು ಗುರಿ ನಿರ್ಧಾರವಾಗುತ್ತದೆ. ಆ ಗುರಿಯತ್ತ ಅಂದರೆ ಸುರಕ್ಷಿತತೆ, ಅಧಿಕಾರ ಮತ್ತು ಪೂರ್ಣತ್ವಗಳ ಸಾಧನೆಗಾಗಿ ಹೋರಾಟ ನಡೆಯುತ್ತದೆ. ನಮ್ಮನ್ನು ಶಕ್ತಿಯುತ, ಶ್ರೇಷ್ಠ ಹಾಗೂ ಪೂರ್ಣರನ್ನಾಗಿ ಮಾಡುವ ಗುರಿಯತ್ತ ನಾವು ಸತತ ಹೋರಾಟ ನಡೆಸುತ್ತೇವೆ ಎಂಬುದೇ ಆಡ್ಲರನ ದೃಷ್ಟಿ.ಕೀಳೆಂಬ ಭಾವನೆಯಿಂದ ವಿಮುಕ್ತಿ ಹೊಂದಲು ಯಾವುದಾದರೂ ಹೊರಗಿನ ಶಕ್ತಿಯ ನೆರವು ಅತ್ಯವಶ್ಯವಾಗಿ ಬೇಕೆಂಬುದು ಆಡ್ಲರನ ಅಭಿಮತ. ಅದರಂತೆ, ಮನೋರೋಗಿಗಳ ಚಿಕಿತ್ಸೆಯಲ್ಲಿ ಪುನರ್ಶಿಕ್ಷಣ ಪ್ರಮುಖ ಮನೋವೈಜ್ಞಾನಿಕ ಸಾಧನವಾಗಬೇಕೆಂದು ಆತ ಪ್ರತಿಪಾದಿಸಿದ.

ಆಡ್ಲರ್ ಜೀವನವೈಶಿಷ್ಟ್ಯ[ಬದಲಾಯಿಸಿ]

ತನ್ನ ದುರ್ಬಲತೆಯ ಕ್ಷತಿಪೂರಣೆಗಾಗಿ ಶ್ರೇಷ್ಠತೆಯನ್ನು ಪಡೆಯುವುದರತ್ತ ಸತತ ಹೋರಾಟ ನಡೆಸುವುದನ್ನು ಆಡ್ಲರ್ ಜೀವನವೈಶಿಷ್ಟ್ಯ ಎಂದು ಕರೆದ, ಜೀವನವೈಶಿಷ್ಟ್ಯ ಒಬ್ಬನ ವ್ಯಕ್ತಿತ್ವದ ಅಭಿವ್ಯಕ್ತಿ. ಏಕೆಂದರೆ, ಪ್ರತಿಯೊಬ್ಬನೂ ತನಗನುಗುಣವಾದ ವಿಶಿಷ್ಟ ರೀತಿಯಲ್ಲೇ ಶ್ರೇಷ್ಠತೆಯ ಗುರಿಯನ್ನು ಗ್ರಹಿಸುತ್ತಾನೆ. ಹೀಗೆ ಮಗುವಿನ ಪೂರ್ಣ ವರ್ತನೆಯನ್ನು ಜೀವನವೈಶಿಷ್ಟ್ಯ ನಿಯಂತ್ರಿಸುತ್ತದೆ. ಇದು ಒಬ್ಬ ವ್ಯಕ್ತಿಯ ಎಲ್ಲ ವಿಭಾಗಗಳಲ್ಲೂ ಅಂದರೆ, ಪ್ರಬುದ್ಧ ಮತ್ತು ಸುಪ್ತಚೇತನಗಳಲ್ಲಿ, ಆಲೋಚನೆ ಮತ್ತು ಭಾವನೆಗಳಲ್ಲಿ, ಕಾರ್ಯ ಮತ್ತು ವಿರಾಮಗಳಲ್ಲಿ, ಲೈಂಗಿಕ ಮತ್ತು ಸಾಮಾಜಿಕ ಆಸಕ್ತಿಗಳಲ್ಲಿ ವ್ಯಕ್ತವಾಗಿರುವ ವ್ಯಕ್ತಿತ್ವವೈಶಿಷ್ಟ್ಯವನ್ನು ಪ್ರತಿನಿಧಿಸುತ್ತದೆಯಲ್ಲದೆ, ವ್ಯಕ್ತಿಯ ದೈಹಿಕ ಬೆಳವಣಿಗೆಯ ಮೇಲೂ ಶಾಶ್ವತಪ್ರಭಾವವನ್ನು ಬೀರುತ್ತದೆಯೆಂದು ಆಡ್ಲರ್ ನಂಬಿದ್ದ. ದೇಹ ಮತ್ತು ಮನಸ್ಸುಗಳು ಒಂದೇ ಸಮಗ್ರದ ಭಾಗಗಳಾದುದರಿಂದ ಅವೆರಡರಲ್ಲಿ ಸತತ ಹಾಗೂ ಅನ್ಯೋನ್ಯವಾದ ಸಂಬಂಧವಿರುತ್ತದೆ ಎಂಬುದು ಆತನ ಅಭಿಮತ. ಆಡ್ಲರ್ ಮಾನವರನ್ನು ನಾಲ್ಕು ವಿಧಗಳಾಗಿ ವಿಂಗಡಿಸಿದ್ದಾನೆ. 1 ಇತರರ ಮೇಲೆ ದರ್ಪ ತೋರಿಸಿ, ಸರ್ವಾಧಿಕಾರಿಗಳಂತೆ ವರ್ತಿಸುವವರು. 2 ಪರರನ್ನು ಅವಲಂಬಿಸಿ, ತಮ್ಮ ಜೀವನದ ಹೊಣೆಗಾರಿಕೆಗಳನ್ನು ತಾವೇ ನಿರ್ವಹಿಸಲು ನಿರಾಕರಿಸಿ, ಪರಾವಲಂಬನ ಮಾರ್ಗದಲ್ಲೇ ಜಯವನ್ನು ಅರಸುವವರು. 3 ತಮ್ಮ ಹೊಣೆಗಾರಿಕೆ ಮತ್ತು ಇತರರ ಸಹವಾಸ ಇವೆರಡರಿಂದಲೂ ವಿಮುಖರಾಗುವುದಲ್ಲದೆ, ಅನೇಕ ವೇಳೆ, ಒಂದೇ ಬಾರಿಗೆ ಜೀವನದಿಂದಲೇ ವಿಮುಕ್ತಿ ಹೊಂದುವವರು, ಅಂದರೆ ಆತ್ಮಹತ್ಯೆಯಲ್ಲಿ ತೊಡಗುವವರು. 4 ಇತರರೊಡನೆ ಸಹಕರಿಸಲು ಸಮ್ಮತಿಸಿ ಸಮಾಜಪ್ರಜ್ಞೆಯನನ್ನುಸರಿಸಿ ನಡೆಯುವವರು.

ಆಡ್ಲರ್ ಮಾನವಸ್ವಭಾವ[ಬದಲಾಯಿಸಿ]

ತೀವ್ರ ಸಂವೇಗಾತ್ಮಕ ರೋಗಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಿಂದ ಆಡ್ಲರ್ ವಿಮುಖನಾದನೆಂದೇ ಹೇಳಬಹುದು. ಸಮೀಕರಣ ಅಥವಾ ಹೊಂದಾಣಿಕೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ ನರಳುತ್ತಿದ್ದವರಿಗೆ ಮಾತ್ರ ಆತ ಮಾನಸಿಕ ಚಿಕಿತ್ಸೆ ನಡೆಸುತ್ತಿದ್ದ. ತನ್ನ ಚಿಕಿತ್ಸಾರ್ಥಿಗಳಿಗೆ ಫ್ರಾಯ್ಡ್‍ನಂತೆ ಆತ ಆರಾಮ ಸೋಫವನ್ನು ಉಪಯೋಗಿಸುತ್ತಿರಲಿಲ್ಲ. ತನ್ನ ರೋಗಿಯ ಪಕ್ಕದಲ್ಲೆ ಕುಳಿತುಕೊಂಡು, ಆರಾಮವಾಗಿ ಮಾತನಾಡುತ್ತ, ರೋಗಿಗೆ ಪುನರ್‍ಶಿಕ್ಷಣ ಕೊಡುವುದರ ಮೂಲಕ, ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದ.ಆಡ್ಲರ್ ಮಾನವಸ್ವಭಾವವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಅನೇಕ ಉಜ್ವಲ ವೀಕ್ಷಣೆಗಳನ್ನು ಮಾಡಿದ್ದಾನಲ್ಲದೆ, ಉತ್ತಮ ಸಲಹೆಗಳನ್ನೂ ನೀಡಿದ್ದಾನೆ. ಸಹವಾಸಪ್ರಿಯತೆ, ಸ್ವಪ್ರತಿಷ್ಠೆ, ಸುರಕ್ಷಿತತೆ, ಅಹಂ ಮತ್ತು ಸೃಜನಾತ್ಮಕತೆ ಮೊದಲಾದ ಅಭಿಪ್ರಾಯಗಳು ನವೀನ ಮನೋವಿಶ್ಲೇಷಣಜ್ಞರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿವೆ. ಆಡ್ಲರನ ವಿಚಾರವಾಗಿ ಗಾರ್ಡನರ್ ಮರ್ಫಿ ಹೇಳಿರುವ ಮಾತುಗಳು ಗಮನಾರ್ಹವಾಗಿವೆ; ಆಡ್ಲರ್ ಮತ್ತು ಅವನ ಪಂಥದಿಂದ ದೊರೆತಿರುವ ಅಹಂ ಸಮಸ್ಯೆಗಳಿಗೆ ಸಂಬಂಧಿಸಿದ ತಥ್ಯಾಂಶಗಳ ಮೊತ್ತ ಅತ್ಯಂತ ಸಂಪದ್ಯುಕ್ತವಾಗಿದೆ. ಸಾಮಾನ್ಯವಾಗಿ ಅವನನ್ನು ತುಚ್ಛೀಕರಿಸಿದ ಮನೋವಿಶ್ಲೇಷಣಜ್ಞರೂ ಉದಾಸೀನ ಮಾಡಿದ ವ್ಯವಹಾರೈಕ ಬುದ್ಧಿಯ ವೈದ್ಯರು ಇದ್ದ ಕಾಲದಲ್ಲಿ ಅಹಂಸಮಸ್ಯೆಗಳನ್ನು ಸರಳವಾಗಿ ನಿರೂಪಿಸಿದುದಕ್ಕಾಗಿ ಅವರಿಗೆ ನಾವು ಯಾವಾಗಲೂ ಋಣಿಗಳಾಗಿರಬೇಕಾಗಿದೆ. ಲೈಂಗಿಕ ಅಥವಾ ಬೇರೆ ಯಾವುದೇ ಸಮಸ್ಯೆಯಂತೆಯೇ ಅಹಂಸಮಸ್ಯೆಗಳೂ ಪ್ರಮುಖವಾದವುಗಳೆಂಬುದನ್ನು ಸ್ಪಷ್ಟಪಡಿಸಲು ಆಡ್ಲರ್ ಶ್ರಮಿಸಿದ್ದಾನೆ.ಆಡ್ಲರ್‍ನಲ್ಲಿನ ಪ್ರಬಲಸ್ವತಂತ್ರಮನೋಭಾವ ಮತ್ತು ಜನರಲ್ಲಿ ಆತನಿಗಿದ್ದ ವಾತ್ಸಲ್ಯ, ಅವನಿಗೆ ಅನೇಕ ಶ್ರದ್ಧಾವಂತ ಅನುಯಾಯಿಗಳನ್ನು ಗಳಿಸಿಕೊಟ್ಟುವು. ಅವರಲ್ಲಿ ಪ್ರಸಿದ್ಧ ಆಂಗ್ಲಕಾದಂಬರಿಕಾರಳಾದ ಫೈಲಿಸ ಬಾಟೊಮಿ (ಪ್ರೈವೆಟ್ ವಲ್ಡ್ರ್ಸ್ ಎಂಬ ಜಗತ್‍ಪ್ರಸಿದ್ಧ ಮಾನಸಿಕ ಕಾದಂಬರಿಯ ಕರ್ತೃ) ಒಬ್ಬಳು.ಮಕ್ಕಳಿಗೆ ಮಾರ್ಗದರ್ಶನ ನೀಡಲು ಆಡ್ಲರ್ ಮತ್ತು ಆತನ ಅನುಯಾಯಿಗಳು ಅನೇಕ ಚಿಕಿತ್ಸಾಲಯವನ್ನು ಸ್ಥಾಪಿಸಿದರು. ಈಗಲೂ ವಿಯನ್ನಾದಲ್ಲಿ ಅವುಗಳಲ್ಲಿ ಅನೇಕವು ಕಾರ್ಯನಿರತವಾಗಿವೆ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-04-29. Retrieved 2016-04-23.
  2. http://vijaykarnataka.indiatimes.com/lavalavk/health/article/-/articleshow/20606274.cms
  3. http://vijaykarnataka.indiatimes.com/edit-oped/bodhivruksha/-/articleshow/45114174.cms