ಆಲಿವ್ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲಿವ್

ಆಲಿವ್‍ ಮರ

ಇತಿಹಾಸ[ಬದಲಾಯಿಸಿ]

ಆಲಿಯೆಸಿ ಕುಟುಂಬಕ್ಕೆ ಸೇರಿದ ಮರ. ಕ್ರಿ.ಪೂ.17ನೆಯ ಶತಮಾನದಲ್ಲಿ ಇದು ಈಜಿಪ್ಟ್‍ನಲ್ಲಿ ಬೆಳೆಯುತ್ತಿದ್ದಂತೆ ತಿಳಿದುಬಂದಿದೆ. ಆಲಿವ್ ಯೂರೇಷಿಯಾ ಎಂಬ ಮರಗಳು ದಕ್ಷಿಣ ಯೂರೋಪಿನ ಭಾಗಗಳಲ್ಲೂ ಏಷ್ಯ ಉಪಖಂಡಗಳಲ್ಲೂ ವಿಪುಲವಾಗಿ ಬೆಳೆಯುತ್ತವೆ. ಮೆಡಿಟರೇನಿಯನ್ ತೀರದಲ್ಲೂ ಆಸ್ಟ್ರೇಲಿಯ ಮತ್ತು ಇತರ ಭಾಗಗಳಲ್ಲೂ ಇವನ್ನು ಬೆಳೆಸುತ್ತಾರೆ. ಈಚಿನ ವರ್ಷಗಳಲ್ಲಿ ಅಮೆರಿಕ, ದಕ್ಷಿಣ ಆಫ್ರಿಕಾಗಳಲ್ಲೂ ಹೇರಳವಾಗಿ ಬೆಳೆಸುತ್ತಾರೆ. ಕ್ಯಾಲಿಫೋರ್ನಿಯ, ಫ್ಲಾರಿಡ, ಆರಿಜೋನ ಮತ್ತು ನ್ಯೂ ಮೆಕ್ಸಿಕೊಗಳಲ್ಲೂ ಇವನ್ನು ಬೆಳೆಸುತ್ತಿದ್ದಾರೆ. 1880 ಮತ್ತು 1890 ರಲ್ಲಿ ಜಗತ್ತಿನ ಆಲಿವ್ ಬೆಳೆಯಲ್ಲಿ ಕ್ಯಾಲಿಫೋರ್ನಿಯದ ಆಲಿವ್ ಬೆಳೆಯ ಅಂಶ ಅಧಿಕವಾಗಿತ್ತು ಎಂಬುದು ಅಂಕಿಅಂಶಗಳಿಂದ ಸಿದ್ಧಪಟ್ಟಿದೆ.

ವಿವರಣೆ[ಬದಲಾಯಿಸಿ]

ಆಲಿವ್ ಯೂರೋಪಿಯ ಎಂಬುದು ಹೆಚ್ಚು ಹಸುರಾದ ಚಿಕ್ಕ ಮರ. ಇದರ ಎಲೆ ಸ್ವಲ್ಪ ಒರಟು. 25'-40' ಗಳಷ್ಟು ಎತ್ತರ ಬೆಳೆಯುವ ದೀರ್ಘಾವಧಿ ವೃಕ್ಷ. ಇದು ಬಿಳಿ ಹೂ ಬಿಡುವುದು. ಇದರಲ್ಲಿನ ಹಣ್ಣುಗಳ ಬಣ್ಣ ಊದಾ. ಕಲ್ಲುಗಳಂಥ ಬೀಜಗಳಿಂದ ತುಂಬಿದೆ. ನಿಯತ ಋತುಮಾನಗಳಲ್ಲಿ ಹೂ, ಹಣ್ಣು ಬಿಡುವುದು. ಕಾಡು ಆಲಿವ್ ಮರಗಳಲ್ಲಿ ಮುಳ್ಳುಗಳು ತುಂಬ. ಅವುಗಳ ಹಣ್ಣುಗಳಿಂದ ಯಾವ ಪ್ರಯೋಜನವೂ ಇಲ್ಲ. ಕೃಷಿ ವಿಧಾನಗಳಿಂದ ಬೆಳೆಸುವ ಆಲಿವ್ ಮರಗಳಲ್ಲಿ ಮುಳ್ಳುಗಳಿರುವುದಿಲ್ಲ. ಆಲಿವ್ ಮರಗಳ ಬೇಸಾಯದಲ್ಲಿ ಬಹು ಎಚ್ಚರ ವಹಿಸಬೇಕಾಗುವುದು. ಫಲವತ್ತಾದ ಮಣ್ಣಿನಲ್ಲಿ ಮಾತ್ರ ಇವು ಸೊಂಪಾಗಿ ಬೆಳೆಯುವುವು. ಸರಿಯಾಗಿ ಮಳೆ ಬೀಳದ ಶುಷ್ಕ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯಲಾರವು. ಆಗ ನೀರಾವರಿ ಸೌಲಭ್ಯಗಳನ್ನು ಒದಗಿಸಬೇಕಾಗುವುದು. ಅದರ ಬೆಳೆಗೆ ಕನಿಷ್ಟಪಕ್ಷ 140 ಸೆ. ಉಷ್ಣತೆ ಬೇಕು. ಆಲಿವ್ ಕೊಂಬೆಗಳನ್ನು ನೆಟ್ಟು ಮರ ಬೆಳೆಸಬಹುದು. ಕಾಡು ಆಲಿವ್ ಹಾಗೂ ಕೃಷಿ ಆಲಿವ್ ಮರಗಳ ಕೊಂಬೆಗಳನ್ನು ಕಸಿಕಟ್ಟಿ ಹೊಸ ಜಾತಿಯ ಆಲಿವ್ ಮರಗಳನ್ನು ಬೆಳೆಸುವುದುಂಟು. ಬೀಜಗಳನ್ನು ಮೊಳೆಯಿಸಿಯೂ ಇವನ್ನು ಬೆಳೆಸುತ್ತಾರೆ. ಆದರೆ ಅದು ಸ್ವಲ್ಪ ಪ್ರಯಾಸಕರ. ಆದರೂ ಇವುಗಳ ಮೊಳೆಯುವಿಕೆಯನ್ನು ತ್ವರಿತಗೊಳಿಸಲು ಅನೇಕ ವಿಧಾನಗಳನ್ನು ಬಳಸುವುದುಂಟು. ಬೀಜದ ತುದಿಯನ್ನು ಸುಲಿಯುವುದು ಅಂಥ ಒಂದು ಕ್ರಮ. ಕ್ಯಾಲಿಫೋರ್ನಿಯದಲ್ಲಿ ಈ ಮರಗಳಿಗೆ ಆಲಿವ್ ನಾಟ್ ಎಂಬ ರೋಗ ತಗಲುತ್ತದೆ. ಸಣ್ಣ ದೊಡ್ಡ ಎಲೆಗಳಲ್ಲಿ ಕೊಂಬೆ ರೆಂಬೆಗಳಲ್ಲಿ ಅನೇಕ ಗಂಟುಗಳು ಅಥವಾ ಟ್ಯೂಮರ್‍ಗಳು ಬೆಳೆಯುವುದೇ ಈ ರೋಗದ ಲಕ್ಷಣ. ಸ್ಯಾವೆಸ್ಬೊನಾಯ್ ಎಂಬ ಅಣುಜೀವಿ ಈ ರೋಗಕ್ಕೆ ಕಾರಣ. ಕೆಲವೊಮ್ಮೆ ಒಂದು ರೀತಿಯ ಅಣಬೆ ರೋಗವೂ ಈ ಎಲೆಗಳಿಗೆ ಬರುವುದುಂಟು. ಆದರೆ ಇದರಿಂದ ಮರಕ್ಕೆ ಅಪಾಯವಿಲ್ಲ.

ಉಪಯೋಗಗಳು[ಬದಲಾಯಿಸಿ]

ಆಲಿವ್ ಕಾಯಿಗಳನ್ನು ಹಸಿರಾಗಿರುವಾಗ ಕಿತ್ತು ಉಪ್ಪಿನಕಾಯಿ ತಯಾರಿಸುವರು. ಕಾಯಿಗಳು ಕಹಿಯಾಗಿರುವುವು . ದುರ್ಬಲವಾದ ಬಲು ಬಿಸಿಕ್ಷಾರಗಳನ್ನು ಉಪಯೋಗಿಸಿ ಆ ಮೂಲಕ ಇದರ ಕಹಿ ರುಚಿಯನ್ನು ಹೋಗಲಾಡಿಸುತ್ತಾರೆ. ಆ ಬಳಿಕ ಉಪ್ಪುನೀರಿನಲ್ಲಿ ಹಾಕಿ ಉಪ್ಪಿನಕಾಯಿ ತಯಾರಿಸುತ್ತಾರೆ. ಪಾಶ್ಚಾತ್ಯರಿಗೆ ಇದು ಬಲು ಇಷ್ಟ.

ಆಲಿವ್ ಹಣ್ಣುಗಳು ಚೆನ್ನಾಗಿ ಮಾಗಿದಾಗ ಅವನ್ನು ಕೀಳುತ್ತಾರೆ. ಇವುಗಳ ಗುಳ ಮತ್ತು ಸಿಪ್ಪೆಯಲ್ಲಿ ಜುಂಗಿನ ಅಂಶ ಹೆಚ್ಚಾಗಿರುವುದು. ಇವುಗಳ ಬೀಜಗಳಲ್ಲಿ ಸ್ವಲ್ಪ ಎಣ್ಣೆಯಿರುವುದು. ಆದರೆ ಕಾಯಿಗಳಲ್ಲಿ ಎಣ್ಣೆ ಅಂಶ ತೀರ ಕಡಿಮೆ. ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆಗಳಂತೆ ಆಲಿವ್ ಎಣ್ಣೆಯೂ ಆವಿಯಾಗುವುದಿಲ್ಲ. ಶುದ್ಧ ಆಲಿವ್ ಎಣ್ಣೆ ದೀರ್ಘ ಕಾಲದವರೆಗೆ ಕೆಡದೆ ಉಳಿಯಬಲ್ಲದು. ಆದರೆ ಆಲಿವ್ ಎಣ್ಣೆಯಿರುವ ಸೀಸೆಗಳನ್ನು ಮುಚ್ಚದೆ ತೆರೆದಿಟ್ಟರೆ, ವಾತಾವರಣದಲ್ಲಿರುವ ನೀರಿನ ಅಂಶ ಅದರಲ್ಲಿ ಸೇರಿಕೊಂಡು ಬಲುಬೇಗ ಅದರಲ್ಲಿ ಬೂಷ್ಟು ಬೆಳೆದು ಕೆಡುವುದು. ದುರ್ವಾಸನೆ ಬರುವುದು. ಒಳ್ಳೆಯ ಆಲಿವ್ ಎಣ್ಣೆಗೆ ಚಿನ್ನದ ಬಣ್ಣವಿರುತ್ತದೆ. ಇದಕ್ಕೆ ಸಪ್ಪೆ ರುಚಿ, ವಾಸನೆ ಇವೆ. ತಿಳಿಯಾಗಿಯೂ ನಿರ್ಮಲವಾಗಿಯೂ ಇರುವ ಇದಕ್ಕೆ ವರ್ಜಿನ್ ಎಣ್ಣೆ ಅಥವಾ ಉತ್ಕøಷ್ಟ ಎಣ್ಣೆ ಎನ್ನುವರು. ಕೆಳದರ್ಜೆಯ ಆಲಿವ್ ಎಣ್ಣೆ ಮಂದವಾಗಿ ಹಳದಿ ಅಥವಾ ಹಸಿರು ಬಣ್ಣಕ್ಕಿರುವುದು. ಆಲಿವ್ ಮರದ ಕಟ್ಟಿಗೆ ಬಲು ಗಟ್ಟಿಯಾಗಿ ದೀರ್ಘಕಾಲ ಬಾಳಿಕೆ ಬರುವುದು. ನಾಜೂಕಾದ ಕೆತ್ತನೆ ಕೆಲಸ ಮಾಡಬಹುದಾಗಿರುವುದರಿಂದ ಪೀಠೋಪಕರಣಗಳನ್ನು ತಯಾರಿಸುವುದರಲ್ಲಿ ಅದನ್ನು ಉಪಯೋಗಿಸುತ್ತಾರೆ. ಆಲಿವ್ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಉಪಯೋಗಿಸುವರು. ಆಲಿವ್ ಎಲೆ ಮತ್ತು ತೊಗಟೆಗಳಲ್ಲಿ ಗಾಯದಿಂದ ಸೋರುವ ರಕ್ತವನ್ನು ತಡೆಯುವ ಆಲಿಯಾಕಸ್ಟಿಡೇಟಾ ಎಂಬ ಔಷಧೀಯ ಸತ್ತ್ವವಿದೆ. ಆಲಿಯಾಡಯೊಕ ಮರದ ತೊಗಟೆಯಲ್ಲಿ ಏರಿದ ಜ್ವರದ ಕಾವು ತಗ್ಗಿಸುವ ಶಕ್ತಿಯಿದೆ. ಈ ಎಣ್ಣೆಯಲ್ಲಿ ಕೊಬ್ಬಿನಂಶ ಅಧಿಕ. ಸಾರ್ಡಿನು ಮೊದಲಾದ ಮೀನುಗಳನ್ನು ಹದಮಾಡಲು, ರಕ್ಷಿಸಿ ಇಡಲು ಈ ಎಣ್ಣೆಯನ್ನು ಉಪಯೋಗಿಸುವರು. ಆಲಿವ್ ಎಣ್ಣೆಯಲ್ಲಿ ಮುಖ್ಯವಾಗಿ ಒಲೀಯಿಕ್ ಅಲ್ಲದೆ ಇತರ ಆಮ್ಲಗಳ ಸಾಂದ್ರಮಿಶ್ರಣವಿದೆ. ಸ್ವಲ್ಪ ಪ್ರಮಾಣದ ಲಿನೋಲಿಕ್ ಆಮ್ಲವೂ ಇದೆ. ಆಲಿವ್ ಎಣ್ಣೆ ಪುಷ್ಟಿಕರ. ಭೇದಿ ಔಷಧಿಗಾಗಿ ಕೊಡುವುದಿದೆ. ಹೊಟ್ಟೆ ಸಂಬಂಧದ ಉರಿ ಮೊದಲಾದ ಬೇನೆಗಳಲ್ಲಿ ಶಮನಕಾರಿ. ಗುದದ ಮೂಲಕ ಕೊಡುವ ಮದ್ದುಗಳನ್ನು ಆಲಿವ್ ಎಣ್ಣೆ ಮಿಶ್ರಣದಲ್ಲಿ ಕೊಡಬಹುದು. ಈ ಎಣ್ಣೆಯನ್ನು ಉರಿವ ಚರ್ಮಕ್ಕೆ ಶಾಮಕವಾಗಿ ಲೇಪಿಸುವುದಿದೆ. ಇದನ್ನು ಉಜ್ಜು ತೈಲ, ಮುಲಾಮು, ಅಂಟು ಪಟ್ಟಿ, ಉಣ್ಣೆಬಟ್ಟೆ ಮತ್ತು ಸಾಬೂನುಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

[೧] [೨]

  1. http://apps.kew.org/wcsp/namedetail.do?name_id=355112
  2. http://www.np-brijuni.hr/en/natural_heritage/flora/ancient_olive_tree
"https://kn.wikipedia.org/w/index.php?title=ಆಲಿವ್ಮರ&oldid=907886" ಇಂದ ಪಡೆಯಲ್ಪಟ್ಟಿದೆ