ಆರ್.ಎನ್.ಕೃಷ್ಣ ಪ್ರಸಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್.ಎನ್. ಕೃಷ್ಣಪ್ರಸಾದ್

ಪೂರ್ಣ ಹೆಸರು ರಟ್ಟೆಹಳ್ಳಿ ನಾಗೇಂದ್ರರಾವ್ ಕೃಷ್ಣಪ್ರಸಾದ್. ಅಭಿಮಾನಿಗಳಿಗೆ ಆರ್.ಎನ್.ಕೃಷ್ಣಪ್ರಸಾದ್ ಛಾಯಾಗ್ರಾಹಕರಾಗಿ, ನಿರ್ದೇಶಕರಾಗಿ ಹೆಸರಾದರು.. ಮೊದಲ ಕನ್ನಡ ವಾಕ್ಚಿತ್ರದ ಸೂತ್ರಧಾರಿಯಾದ ಆರ್. ನಾಗೇಂದ್ರರಾವ್ ಅವರ ಪುತ್ರ. ಖ್ಯಾತ ಚಿತ್ರ ಸಾಹಿತಿ ಆರ್.ಎನ್. ಜಯಗೋಪಾಲ್ ಅವರ ಹಿರಿಯ ಸಹೋದರ. ಬೆಂಗಳೂರಿನಲ್ಲಿ ಜನಿಸಿದ ಇವರು, ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದವರು. ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ನಲ್ಲಿ ಸಿನಿಮಾಟೋಗ್ರಫಿ ಮುಗಿಸಿ, ಸಿನಿಮಾ ರಂಗದತ್ತ ಹೆಜ್ಜೆ ಬೆಳೆಸಿದವರು.ಸಿನಿಮಾಟೋಗ್ರಫಿ ಕಲಿತ ನಂತರ ಕೃಷ್ಣಪ್ರಸಾದ್ ಮದರಾಸಿನ ಎವಿಎಂ ಸ್ಟುಡಿಯೋದಲ್ಲಿ ಮುಖ್ಯ ಕ್ಯಾಮರಾಮನ್ ಆಗಿದ್ದ ಮುತ್ತುಸ್ವಾಮಿ ಎನ್ನುವ ಹೆಸರಾಂತ ಕ್ಯಾಮರಾಮನ್ ಅವರ ಬಳಿ ಸಹಾಯಕರಾಗಿ ತರಬೇತಿ ಪಡೆದರು. "ಪ್ರೇಮದ ಪುತ್ರಿ’ ಚಿತ್ರದ ಮೂಲಕ ಛಾಯಾಗ್ರಾಹಕರಾದ ಕೆಪಿ, ಬೆಳ್ಳಿಮೋಡ, ಮರೆಯದ ಹಾಡು, ಅವಳ ಅಂತರಂಗ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದವರು. ನಗುವ ಹೂ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿಯೂ ಸಂದಿದೆ. ೮೫ ಚಿತ್ರಗಳಿಗೆ ಛಾಯಾಗ್ರಾಹಕರಾಗಿ, ಮೂರು ಧಾರಾವಾಹಿಗಳ ನಿರ್ದೇಶನ, ತಮಿಳು ಧಾರಾವಾಹಿಗಳಲ್ಲಿ ನಟನೆ, ಕನ್ನಡ, ತಮಿಳು, ತೆಲುಗು ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಇವರು ಕೆಲಸ ಮಾಡಿದ್ದಾರೆ.ಇವರು ಚೆನ್ನೈನ ಕನ್ನಡಿಗರ ಕೂಟದ ಭೀಷ್ಮನೆಂದೇ ಚಿರಪರಿಚಿತ.ಕನ್ನಡದ ಬಗೆಗೆ ಅಪಾರ ಪ್ರೀತಿ. ಹೊರ ರಾಜ್ಯದಲ್ಲಿ ಕನ್ನಡ ಸಂಘ ಕಟ್ಟಿ, ಆ ಮೂಲಕ ಕನ್ನಡದ ಕಲಾವಿದರಿಗೆ, ತಂತ್ರಜ್ಞರಿಗೆ ಸಾಕಷ್ಟು ಸಹಾಯ ಮಾಡಿದ ಅಪರೂಪದ ಸಾಧಕ. ೮೧ ರಲ್ಲೂ ೧೮ ರ ಹುಡುಗರನ್ನು ನಾಚಿಸುವಂತೆ ಕೆಲಸ ಮಾಡುತ್ತಿದ್ದ ಇವರು, ಹೆಗಲ ಮೇಲೆ ಕ್ಯಾಮೆರಾ ಹೊತ್ತು ನಡೆದರೆ, ಆ ಚಿತ್ರಕ್ಕೆ ಪ್ರಶಸ್ತಿ ಗ್ಯಾರಂಟಿಯೆಂಬ ಮಾತೊಂದು ಬಳಕೆಯಲ್ಲಿ ಇತ್ತು.ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಮೊದಲಚಿತ್ರ ಬೆಳ್ಳಿಮೋಡದಲ್ಲಿ ಆರ್.ಎನ್. ಕೃಷ್ಣಪ್ರಸಾದ್ ಅವರೊಡಗೂಡಿದ್ದು, ಅತ್ಯುತ್ಸಾಹದಲ್ಲಿದ್ದ ಯುವ ನಿರ್ದೇಶಕನ ಜೊತೆ ಕೆಲಸಮಾಡಿದ್ದು ಒಂದು ರೀತಿಯಲ್ಲಿ ಪ್ರತಿಭಾಸಂಗಮವೇ ಸರಿ.ಬೆಳ್ಳಿಮೋಡ ಚಿತ್ರದ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಆರ್.ಎನ್.ಕೃಷ್ಣಪ್ರಸಾದ್ ರಾಜ್ಯ ಸರ್ಕಾರದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆದರು. ಬೆಳ್ಳಿಮೋಡ ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲಾಯಿತು. ನಗುವ ಹೂವು (೧೯೭೧) ಚಿತ್ರದ ನಿರ್ದೇಶನಕ್ಕಾಗಿ ಉತ್ತಮ ಪ್ರಾಂತೀಯ ಭಾಷಾ ಚಿತ್ರ ಪ್ರಶಸ್ತಿ ಪಡೆದರು. ೧೯೮೦-೮೧ ನೇ ಸಾಲಿನಲ್ಲಿ `ಮರೆಯದ ಹಾಡು` ಚಿತ್ರದ ಛಾಯಾಗ್ರಹಣಕ್ಕಾಗಿ ಎರಡನೇ ಬಾರಿ ರಾಜ್ಯ ಪ್ರಶಸ್ತಿ ಪಡೆದರು. ರಾಜ್ಯೋತ್ಸವ ಪ್ರಶಸ್ತಿ, ಸೌತ್ ಇಂಡಿಯನ್ ಸಿನಿಮಾಟೋಗ್ರಾಫರ್ ಜೀವಮಾನ ಸಾಧನೆ ಪ್ರಶಸ್ತಿ, ಡಾ.ವಿಷ್ಣುವರ್ಧನ್ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪುರಸ್ಕಾರಗಳು ಲಭ್ಯವಾಗಿವೆ. ಮೈಸೂರು ವಿವಿ ಇವರ ಸಿನಿಮಾಟೋಗ್ರಫಿ ಪುಸ್ತಕವನ್ನು ಪಠ್ಯವನ್ನಾಗಿಸಿದೆ.ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಆರ್ವೊ ವರ್ಣ ನೆಗೆಟಿವ್ ಫಿಲಂ ಬಳಸಿ ಛಾಯಾಗ್ರಹಣ ಮಾಡಿದ ಮೊದಲಿಗ ಎಂಬ ಹೆಗ್ಗಳಿಕೆ ಇವರದು.ತಮಿಳು `ಮೈಕೆಲ್ ಮದನ ಕಾಮರಾಜನ್` ಸೇರಿದಂತೆ ಕೆಲವು ತಮಿಳು ಚಿತ್ರಗಳಲ್ಲಿ ಇವರು ಅಭಿನಯಿಸಿದ್ದರು. "ನಮನ" ಫೆಬ್ರವರಿ ೨೦೧೨ ರಲ್ಲಿ ತಮ್ಮ ೮೩ ನೇ ವಯಸ್ಸಿನಲ್ಲಿ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು.