ವಿಷಯಕ್ಕೆ ಹೋಗು

ಆರ್ಥಿಕ ಬೆಳೆವಣಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯಕ್ತಿಯ ಜೀವನ ಮಟ್ಟ ಸುಧಾರಿಸಿ, ದೇಶದ ಸಂಪನ್ಮೂಲಗಳು ಹೆಚ್ಚಿದಲ್ಲಿ ಅದನ್ನು ಆರ್ಥಿಕ ಬೆಳೆವಣಿಗೆ (ಎಕನಾಮಿಕ್ ಗ್ರೋತ್) ಎನ್ನಬಹುದು. ಇದು ಮಾನವನ ಅನೇಕ ಆಕಾಂಕ್ಷೆಗಳ ಸಾಧನೆಗೆ ಕೀಲಿಕೈನಂತಿದೆಯೆಂಬ ದೃಢನಂಬಿಕೆ ಎಲ್ಲೆಡೆ ಬೆಳೆಯುತ್ತಿದೆ. ಇಂಥ ನಂಬಿಕೆ ಕೇವಲ ಆರ್ಥಿಕ ಪ್ರಗತಿಯಲ್ಲಿ ಹಿಂದುಳಿದ ದೇಶಗಳಿಗಷ್ಟೇ ಸೀಮಿತವಾಗಿಲ್ಲ. ಪ್ರಗತಿಹೊಂದಿದ ರಾಷ್ಟ್ರಗಳೂ ಆರ್ಥಿಕ ಬೆಳೆವಣಿಗೆಗೆ ನಿರ್ಯಾತಮೌಲ್ಯವಿದೆ ಯೆಂದು ಕಂಡುಕೊಂಡಿರುವರು. ಆರ್ಥಿಕ ಬೆಳೆವಣಿಗೆಯ ವಿಷಯ ಕೇವಲ ಒಂದು ದೇಶದ ಆರ್ಥಿಕ ಬೆಳೆವಣಿಗೆಯ ಪ್ರಶ್ನೆಯಾಗಿರದೆ ಅಂತಾರಾಷ್ಟ್ರೀಯ ರಾಜಕೀಯದಲ್ಲಿಯೂ ಇಂದು ಮಹತ್ವದ ಪ್ರಶ್ನೆಯಾಗಿದೆ. ೧೯ನೆಯ ಶತಮಾನದಂತೆಯೇ ದೀರ್ಘಕಾಲೀನ ಆರ್ಥಿಕ ಬದಲಾವಣೆಯ ಸಮಸ್ಯೆಯನ್ನು ಅರ್ಥಶಾಸ್ತ್ರಜ್ಞರು ಮುಖ್ಯವಾಗಿ ಚರ್ಚಿಸುವ ಸಮಯ ಬಂದಿದೆ. ಇಲ್ಲಿಯವರೆಗಿನ ಅರ್ಥಶಾಸ್ತ್ರದ ಕೃತಿಗಳಲ್ಲಿ ಆರ್ಥಿಕ ಬೆಳೆವಣಿಗೆಯ ವಿಷಯ ಗೌಣಸ್ಥಾನ ಹೊಂದಿತ್ತು. ಕೆಲವು ಸಂದರ್ಭಗಳಲ್ಲಿ ಅರ್ಥಶಾಸ್ತ್ರಜ್ಞರು ಈ ವಿಷಯ ಉಳಿದೆಲ್ಲ ವಿಷಯಗಳಲ್ಲಿ ಸಮಾವೇಶಗೊಂಡಿರುವುದರಿಂದ ಅದನ್ನು ಪ್ರತ್ಯೇಕವಾಗಿ ವಿವೇಚಿಸುವುದು ಅನಾವಶ್ಯಕ ಎಂದು ತಿಳಿದರು. ಇನ್ನು ಕೆಲವು ಸಂದರ್ಭಗಳಲ್ಲಿ ವಿಷಯಗಳನ್ನು ಚರ್ಚಿಸಿದ ಅನಂತರ ಹಿನ್ನೆಣಿಕೆಯಂತೆ ಅದನ್ನು ಚರ್ಚಿಸಿದರು. ಈ ನಡುವೆ ನಿರುದ್ಯೋಗ ಸಮಸ್ಯೆ, ಬಂಡವಾಳ ವಿನಿಯೋಗ ಸಮಸ್ಯೆ, ಬಡ್ಡಿ ಹಾಗೂ ಲಾಭಗಳ ಸಮಸ್ಯೆ, ಬಂಡವಾಳ ನಿರ್ಮಾಣ ಮತ್ತು ವ್ಯಾಪಾರೀ ಚಕ್ರ ಸಮಸ್ಯೆ ಇತ್ಯಾದಿ ಅನೇಕ ಉದ್ವೇಗಕಾರಕ ಸಮಸ್ಯೆಗಳನ್ನು ಉತ್ಸಾಹದಿಂದ ಚರ್ಚಿಸುತ್ತ ಮುಂದುವರಿಯಲಾಗಿದೆ. ಆದರೆ ಇವೆಲ್ಲವುಗಳ ವಿಶ್ಲೇಷಣೆಗೆ ಆರ್ಥಿಕ ಬೆಳೆವಣಿಗೆಯ ಸಿದ್ಧಾಂತದ ಚರ್ಚೆ ಅಗತ್ಯ ಎಂಬ ಕಲ್ಪನೆ ದೃಢವಾಗುತ್ತಿರುವುದು ಕೇವಲ ಇತ್ತೀಚಿನ ಕಾಲದಲ್ಲಿ. ಆರ್ಥಿಕ ಬೆಳೆವಣಿಗೆಯ ಸಿದ್ಧಾಂತ ಅರ್ಥಶಾಸ್ತ್ರದಲ್ಲಿ ಹೊಸ ವಿಷಯವೇನಲ್ಲ. ಹಿಂದಿನ ಶತಮಾನದಲ್ಲಿ ಅರ್ಥಶಾಸ್ತ್ರಜ್ಞರು ಅದನ್ನು ನಿರ್ಲಕ್ಷಿಸಿರಲಿಲ್ಲ. ಆ್ಯಡಂ ಸ್ಮಿತ್, ಜೆ.ಎಸ್.ಮಿಲ್ ಹಾಗೂ ಮಾರ್ಷಲ್ ಮುಂತಾದ ಅರ್ಥಶಾಸ್ತ್ರಜ್ಞರು ಈ ವಿಷಯದ ಮೇಲೆ ವಿಚಾರಪುರ್ಣವಾದ ಅಧ್ಯಾಯಗಳನ್ನು ಬರೆದಿರುವರು. ಕೆಲವರಂತೂ ಸ್ಥಿರಪರಿಸ್ಥಿತಿಯಲ್ಲಿ ಸಂಪನ್ಮೂಲಗಳ ವಿನಿಯೋಗದ ವಿಷಯವಾಗಿ ಸಂಕೀರ್ಣವಾಗಿ ಸಿದ್ಧಾಂತಗಳನ್ನೇ ರಚಿಸಿರುವರು. ಆದರೆ ಇತ್ತೀಚಿನ ಕೆಲವು ದಶಕಗಳಲ್ಲಿ ಆರ್ಥಿಕ ಬೆಳೆವಣಿಗೆಯ ಬಗೆಗೆ ಹೆಚ್ಚಿನ ಕುತೂಹಲ ಅರ್ಥಶಾಸ್ತ್ರದಲ್ಲಿ ಕೇನ್ಸ್ ಮಹಾಶಯನ ಲೇಖನಗಳಿಂದಾದ ವಿಚಾರಕ್ರಾಂತಿಯ ಅನಂತರವೇ ಹುಟ್ಟಿಕೊಂಡಿತು. ೨೦ನೆಯ ಶತಮಾನದಲ್ಲಿ ಆರ್ಥಿಕ ಬೆಳೆವಣಿಗೆಯ ಸಿದ್ಧಾಂತದ ಚರ್ಚೆಯನ್ನು ಪ್ರಾರಂಭಿಸಿದವರಲ್ಲಿ ಶಂಪೀಟರ್ ಎಂಬ ಜರ್ಮನ್ ಅರ್ಥಶಾಸ್ತ್ರಜ್ಞ ಅಗ್ರಗಣ್ಯ. ಈ ವಿಷಯವಾಗಿ ಅನೇಕ ಅರ್ಥಶಾಸ್ತ್ರಜ್ಞರು ತಮ್ಮ ಮಾದರಿಗಳನ್ನು ಇತ್ತೀಚೆಗೆ ಪ್ರಕಟಪಡಿಸಿರುವರು. ಇದರ ವಿಷಯವಾಗಿ ಕಂಡುಬರುತ್ತಿರುವ ಸದ್ಯದ ಅಭಿರುಚಿ ಕೇವಲ ಆಕಸ್ಮಿಕವೇನಲ್ಲ. ಈ ದಶಕದಲ್ಲಿ ಚರ್ಚಿತ ವಿಷಯವಾದ ಪುರ್ಣೋದ್ಯೋಗ ಗುರಿ ಆರ್ಥಿಕ ಬೆಳೆವಣಿಗೆಯಿಲ್ಲದೆ ಅಸಾಧ್ಯವೆಂದು ಕಂಡುಬಂದಿದೆ. ಅಲ್ಲದೆ ಮೇಲೆ ವಿವರಿಸಿದಂತೆ ಸದ್ಯದ ಜಾಗತಿಕ ಸಂಘರ್ಷಣೆಯ ಪರಿಸ್ಥಿತಿಯಲ್ಲಿ ಅದೊಂದೇ ಬದುಕುವ ದಾರಿ ಎಂಬುದೂ ಎಲ್ಲೆಡೆ ಮನವರಿಕೆಯಾಗಿದೆ. ಆರ್ಥಿಕ ಬೆಳೆವಣಿಗೆ ಸಮಾಜದ ಮೂಲಭೂತ ರಚನೆಯಿಂದ ನಿರ್ಣಯವಾಗುವುದು. ಅದರಿಂದ ಈ ಸಿದ್ಧಾಂತ ನಿಜವಾಗಿ ವ್ಯಾಪಕವಾಗಿರಬೇಕಿದ್ದರೆ ಅದರಲ್ಲಿ ಭೌತಿಕ ಪರಿಸರ, ರಾಜಕೀಯ ಸಂಘಟನೆ, ಪ್ರೇರಣೆ, ಶಿಕ್ಷಣಪದ್ಧತಿ, ಕಾಯಿದೆಯ ಚೌಕಟ್ಟು, ವೈಜ್ಞಾನಿಕ ಮನೋವೃತ್ತಿ, ಹಾಗೂ ಉಳಿತಾಯದ ಬಗೆಗಿನ ಭಾವನೆಯಲ್ಲಿ ಬದಲಾವಣೆ-ಹೀಗೆ ಇನ್ನೂ ಅನೇಕ ವಿಷಯಗಳ ವಿವೇಚನೆಯನ್ನು ಅದು ಒಳಗೊಂಡಿರಬೇಕು. ಈ ಅನೇಕ ಬದಲಾವಣೆಗಳನ್ನು ಹೊಂದುವ ಘಟಕಗಳನ್ನು ಪ್ರತ್ಯೇಕ ವಿಂಗಡಿಸಿ ಅವುಗಳ ಪರಿಣಾಮವನ್ನು ಕೇವಲ ಸಂಕೇತಗಳ ರೂಪದಲ್ಲಿಯಾಗಲಿ, ಅಥವಾ ಕೇವಲ ಶಬ್ದಗಳಲ್ಲಿಯಾಗಲಿ ವಿವೇಚಿಸುವುದು ಅಸಾಧ್ಯ; ಅಲ್ಲದೆ ನಿರುಪಯುಕ್ತ ಆದರೂ ಸದ್ಯದ ವಿಶ್ಲೇಷಣೆಗಳು ಈ ಎರಡು ದಾರಿಗಳನ್ನೂ ಅನುಸರಿಸಿವೆ. ಡೋಮಾರ ಎಂಬ ಲೇಖಕನ ಅಭಿಪ್ರಾಯದಂತೆ ಈ ಎರಡು ಪದ್ಧತಿಗಳು ಒಂದು ಸೇತುವೆಯ ಎರಡು ತುದಿಗಳಂತಿವೆ. ಅವುಗಳನ್ನು ಕೂಡಿಸುವಂಥ ರಚನೆ ಇನ್ನೂ ಆಗಬೇಕಾಗಿದೆ. ಆರ್ಥಿಕ ಬೆಳೆವಣಿಗೆಯ ಸರಿಯಾದ ಅರ್ಥ ಹಾಗೂ ವ್ಯಾಖ್ಯೆಯನ್ನು ಮಂದಗತಿಯಿಂದ ಬದಲಾಗುತ್ತಿರುವ ಉತ್ಪಾದನೆ ಮತ್ತು ಸ್ಥಿರ ಪರಿಸ್ಥಿತಿಯಲ್ಲಿರುವ ರಾಷ್ಟ್ರಗಳ ಅನುಭವದೊಡನೆ ಹೋಲಿಸಿ ನೋಡಬೇಕು. ಆಗ ಆರ್ಥಿಕ ಬೆಳೆವಣಿಗೆಯನ್ನು ಕೇವಲ ಅಸ್ತಿತ್ವ ಮಟ್ಟದಲ್ಲಿರುವ ಹಿಂದುಳಿದ ರಾಷ್ಟ್ರವನ್ನು ಕೆಲವೇ ದಶಕಗಳಲ್ಲಿ-ಶತಮಾನಗಳಲ್ಲಿ-ಸ್ಪಷ್ಟವಾಗಿ ಗುರುತಿಸಬಹುದಾದ ಬೆಳೆವಣಿಗೆಯ ವೇಗ-ಎಂದು ಅರ್ಥ ಮಾಡಬಹುದು. ಆರ್ಥಿಕ ಬೆಳೆವಣಿಗೆಯನ್ನು ಔದ್ಯಮೀಕರಣ ಎಂದೂ ವರ್ಣಿಸಲಾಗಿದೆ. ಐತಿಹಾಸಿಕ ದೃಷ್ಟಿಯಿಂದ ತೀವ್ರ ವೇಗದ ಆರ್ಥಿಕ ಬೆಳೆವಣಿಗೆ ಔದ್ಯಮೀಕರಣದಿಂದಲೇ ಉಂಟಾಯಿತೆಂದು ಕಂಡುಬರುವುದು. ಆದರೆ ಆರ್ಥಿಕ ಬೆಳೆವಣಿಗೆಯನ್ನು ಸಾಮಾನ್ಯವಾಗಿ, ಆರ್ಥಿಕ ವ್ಯವಹಾರಗಳ ವ್ಯಾಪಾರೀಕರಣ ಎನ್ನುವುದು ಹೆಚ್ಚು ಸೂಕ್ತ. ಏಕೆಂದರೆ ಕೇವಲ ಅಸ್ತಿತ್ವ ಮಟ್ಟದಲ್ಲಿರುವ, ಕೃಷಿಯೇ ಮುಖ್ಯ ಉದ್ದಿಮೆಯಾಗಿರುವ ದೇಶವೂ ಉತ್ಪಾದನೆಯ ತಾಂತ್ರಿಕತೆಯಲ್ಲಿ ಬದಲಾವಣೆಗಳನ್ನು ಮಾಡಿ ಪೇಟೆಯ ನಿಯಮಗಳನ್ನು ಸುಧಾರಿಸಿ, ದೇಶದ ಪ್ರದೇಶಗಳಲ್ಲಿಯ ಪರಸ್ಪರ ಅವಲಂಬನೆ ಹಾಗೂ ವ್ಯವಹಾರಗಳನ್ನು ಹೆಚ್ಚಿಸಿ ಔದ್ಯಮೀಕರಣವಿಲ್ಲದಿದ್ದರೂ ಆರ್ಥಿಕ ಬೆಳೆವಣಿಗೆಯನ್ನು ಸಾಧಿಸಬಹುದು. ಇನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಟ್ಟಿಗೆ ಆರ್ಥಿಕ ಬೆಳೆವಣಿಗೆ ಸದ್ಯದ ಬೆಳೆವಣಿಗೆಯ ವೇಗವನ್ನು ಸ್ಥಿರಗೊಳಿಸುವ ಅಥವಾ ತೀವ್ರಗೊಳಿಸುವ ಅರ್ಥವನ್ನು ಸೂಚಿಸುವುದು. ಆರ್ಥಿಕ ಬೆಳೆವಣಿಗೆ ಸಾಮಾನ್ಯವಾಗಿ ಯಾವುದೇ ಒಂದು ಗುರಿ ಎಂದು ಪರಿಗಣಿಸಬಾರದು. ಅದೊಂದು ಬೇರೆ ಉದ್ದೇಶಸಾಧನೆಯ ಮಾರ್ಗವಷ್ಟೆ. ಅದರಿಂದ ಗುರಿಗಳಿಗನುಗುಣವಾಗಿ ವ್ಯಾಖ್ಯೆ ಮಾಡುವುದು ಮಹತ್ತ್ವದ್ದಾಗಿದೆ. ಇದೊಂದು ಬಿಕ್ಕಟ್ಟನ್ನುಂಟುಮಾಡ ಬಹುದು. ಆದರೆ ಇಂಥ ಬಿಕ್ಕಟ್ಟು ಕೇವಲ ಕಾಲ್ಪನಿಕ. ಏಕೆಂದರೆ ಅಂತಿಮ ಗುರಿ ಯಾವುದೇ ಇದ್ದರೂ ಆರ್ಥಿಕ ಬೆಳೆವಣಿಗೆಗೆ ಆವಶ್ಯಕವಾದದ್ದು ದುರ್ಲಭವಾದ ಸರಕುಗಳ ಹಾಗೂ ಸೇವೆಗಳ ಉತ್ಪಾದನೆಯನ್ನು ಹೆಚ್ಚಿಸುವುದು. ಈ ವಿಚಾರವನ್ನು ಎಲ್ಲರೂ ಒಪ್ಪುವರು. ಅದರಿಂದ ಆರ್ಥಿಕ ಅಭಿವೃದ್ಧಿ ಎಂಬ ಪದವನ್ನು ಯಾವುದೇ ದೇಶದ ಜನರು ಅಲ್ಲಿ ದೊರೆಯಬಹುದಾದ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಸರಕುಸೇವೆಗಳ ಉತ್ಪಾದನೆಯನ್ನು ಸತತವಾಗಿ ಹೆಚ್ಚಿಸುವ ಕ್ರಮಕ್ಕೆ ಅನ್ವಯಿಸಬಹುದು. ಕೇವಲ ಪದದ ಅರ್ಥವನ್ನೇ ಗಮನಿಸಿದರೆ ಈ ವ್ಯಾಖ್ಯೆ ಇಡೀ ಸಮಾಜವನ್ನೇ ಆರ್ಥಿಕ ಉತ್ಪಾದನೆಯ ಒಂದು ಘಟಕವನ್ನಾಗಿ ಪರಿವರ್ತಿಸುವ ವಿಚಾರವನ್ನು ಸೂಚಿಸುತ್ತದೆ. ಆದುದರಿಂದ ಆರ್ಥಿಕ ಬೆಳೆವಣಿಗೆ ಸಾಮಾನ್ಯ ಗ್ರಾಹಕರನ್ನು ಸಮಾಧಾನಗೊಳಿಸಬಲ್ಲ ಸರಕುಗಳ ಅಂದರೆ ಆಹಾರ, ಅರಿವೆ, ವಸತಿ ಸೌಕರ್ಯ, ಔದ್ಯೋಗಿಕ ಸಲಕರಣೆ, ರೇಡಿಯೊ ಕಾರ್ಯಕ್ರಮ, ಸರಕಾರದ ಸೇವೆಗಳು ಮುಂತಾದವುಗಳ ಉತ್ಪಾದನೆಯ ಸಾಮರ್ಥ್ಯವನ್ನು ಅಳೆಯುವುದು. ಕೆಲವು ಸಲ ಒಟ್ಟು ಆದಾಯದ ಬದಲು ತಲಾ ಆದಾಯದ ಸಹಾಯದಿಂದ ಆರ್ಥಿಕ ಬೆಳೆವಣಿಗೆಯನ್ನು ಅಳೆಯುವ ಪದ್ಧತಿಗೆ ಆಕ್ಷೇಪಣೆ ಎತ್ತಲಾಗಿದೆ. ಕೆಲವು ದೇಶಗಳು ಸೈನಿಕ ಸಾಮ ವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಜನಸಂಖ್ಯೆಯ ಹೆಚ್ಚಳವನ್ನು ಪ್ರೋತ್ಸಾಹಿಸಿದರೆ ತಲಾ ಆದಾಯದಲ್ಲಿ ಹೆಚ್ಚಳವಾಗದಿರಬಹುದು. ಆದರೆ ಇದು ಆರ್ಥಿಕ ಬೆಳೆವಣಿಗೆಯ ದೃಷ್ಟಿಯಿಂದ, ಬಹಳ ವಿರೋಧವಾದುದೇನಲ್ಲ. ತಲಾ ಆದಾಯವೇ ಇರಲಿ ಒಟ್ಟು ಆದಾಯವೇ ಇರಲಿ ಅವುಗಳಲ್ಲಿ ಸಂಬಂಧವಿದ್ದೇ ಇದೆ. ಅವುಗಳಲ್ಲಿ ಯಾವುದೇ ಒಂದು ಸಾಧನವೂ ಆರ್ಥಿಕ ಬೆಳೆವಣಿಗೆಯ ಅಳತೆಗೋಲಾಗಿರಬಹುದು. ಇತ್ತೀಚೆಗೆ ರಾಷ್ಟ್ರೀಯ ಆದಾಯವನ್ನು ಗಣಿಸುವ ಪದ್ಧತಿಯಲ್ಲಾದ ಸುಧಾರಣೆಯಿಂದ ಅದನ್ನು ಹೆಚ್ಚು ಅಚ್ಚುಕಟ್ಟಾಗಿ ಉಪಯೋಗಿಸಿ ಯಾವುದೇ ಪ್ರದೇಶ ಅಥವಾ ದೇಶದ ನಿಜ ಆದಾಯದ ಪ್ರವಾಹವನ್ನು ಹಾಗೂ ಅವುಗಳ ರಚನೆಯನ್ನು ಹಣದ ಮೌಲ್ಯಕ್ಕೆ ಪರಿವರ್ತಿಸಿ ಅಳೆಯುವುದು ಶಕ್ಯ. ಬೆಲೆಗಳಲ್ಲಾಗಬಹುದಾದ ಬದಲಾವಣೆಗಳನ್ನು ಸರಿಪಡಿಸಿಕೊಂಡು ಒಟ್ಟು ಜನಸಂಖ್ಯೆಯಿಂದ ವಿಭಾಗಿಸಿದರೆ ತಲಾ ಆದಾಯದ ಕಲ್ಪನೆ ಬರುವುದು. ರಾಷ್ಟ್ರೀಯ ಆದಾಯವನ್ನು ಲೆಕ್ಕಿಸುವ ಅನೇಕ ಪದ್ಧತಿಗಳು ಪ್ರಚಲಿತವಾಗಿದ್ದರೂ ಎಲ್ಲ ಪದ್ಧತಿಗಳ ಮೂಲಭೂತ ಉದ್ದೇಶ ಒಂದೇ. ಅಂದರೆ ಯಾವುದೇ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಗೆ ಉಪಯೋಗಿಸಿದ ಸಂಪನ್ಮೂಲಗಳನ್ನು ಹಾಗೂ ಉತ್ಪಾದನೆಯ ಸಾಮರ್ಥ್ಯದಲ್ಲಿಯ ಹೆಚ್ಚಳಗಳನ್ನು ಗಮನಕ್ಕೆ ತೆಗೆದುಕೊಂಡು ಉತ್ಪಾದಿತ ಸರಕು ಸೇವೆಗಳಲ್ಲಿರುವ ನಿರ್ದಿಷ್ಟವಾದ ಹೆಚ್ಚಳವನ್ನು ಅಳೆಯುವುದು. ಆದರೆ ನಾವು ನೆನಪಿನಲ್ಲಿಡಬೇಕಾದ ವಿಷಯ ರಾಷ್ಟ್ರೀಯ ಆದಾಯದ ಲೆಕ್ಕಾಚಾರವನ್ನು ಎಷ್ಟು ದಕ್ಷತೆಯಿಂದ ಮಾಡಿದರೂ ಅದು ಆರ್ಥಿಕ ಬೆಳೆವಣಿಗೆಯ ಎಲ್ಲ ಮುಖಗಳನ್ನು ವ್ಯಾಪಿಸಿರಲಾರದು ಎಂಬುದು. ಏಕೆಂದರೆ ಜನರ ಶ್ರಮದ ವೇಳೆಯಲ್ಲಾದ ಕಡಿತ ಅಥವಾ ಮನೆ ಗೃಹಿಣಿಯರ ಕಾರ್ಯಗಳು ಮುಂತಾದ ವಿಷಯಗಳ ಮೌಲ್ಯವನ್ನು ಊಹಿಸುವುದು ಸಾಧ್ಯವಾಗಲಾರದು. ಅದರಂತೆ ತಲಾ ಆದಾಯದಲ್ಲಿಯ ಸರಾಸರಿ ಹೆಚ್ಚಳ ಉತ್ಪಾದನೆಯ ನಿಜವಾದ ವಿತರಣೆಯ ಸ್ಪಷ್ಟ ಕಲ್ಪನೆಯನ್ನು ಮಾಡಿಕೊಡಲಾರದು. ಅದರಿಂದ ಕೇವಲ ರಾಷ್ಟ್ರೀಯ ಆದಾಯದ ಅಂಕಿಸಂಖ್ಯೆಗಳೂ ಆರ್ಥಿಕ ಬೆಳೆವಣಿಗೆಯ ಪುರ್ಣ ಕಲ್ಪನೆಯನ್ನು ಮಾಡಿಕೊಡಲಾರವೆಂಬುದು ಸ್ಪಷ್ಟವಾಗುತ್ತದೆ. ಕೆಲವು ದೇಶಗಳ ಮಟ್ಟಿಗೆ ರಾಷ್ಟ್ರೀಯ ಆದಾಯವನ್ನು ಅಳೆಯುವ ಅಂಕಿಸಂಖ್ಯೆಗಳು ಸಿಗಲಾರವು. ಅದಕ್ಕೆ ಬೇರೆ ಪ್ರಯೋಗತಂತ್ರವನ್ನು ಉಪಯೋಗಿಸುವುದು ಸಾಧ್ಯವಿದೆ. ಅದೆಂದರೆ ಸರಾಸರಿ ಆಯುಷ್ಯದಲ್ಲಿ ಆಗುವ ಹೆಚ್ಚಳ ಮಾನವ ಶಕ್ತಿಯ ಹೆಚ್ಚಿನ ಪರಿಣಾಮಕಾರಿ ಉಪಯೋಗವನ್ನು ತೋರಿಸುತ್ತದೆ; ಮತ್ತು ಉತ್ಪಾದನೆಯ ಸಾಮರ್ಥ್ಯವನ್ನು ಸ್ಪಷ್ಟವಾಗಿ ಕಾಣುವಂತೆ ಬದಲಾವಣೆ ಹೊಂದುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿನ ಭಾಗದೊಡನೆ, ಅಂದರೆ ಕೆಲಸಗಾರರ ಪ್ರಮಾಣ ಅಥವಾ ಉದ್ದಿಮೆ ಅಥವಾ ಕೃಷಿ ಇವುಗಳೊಡನೆ ಹೊಂದಿಸುವುದು. ಐತಿಹಾಸಿಕ ಉದ್ದೇಶಗಳಿಗೆ ಮತ್ತು ಸರಿಯಾದ ಅಂಕಿಸಂಖ್ಯೆ ಸಿಗದಿರುವಾಗ ಇಂಥ ಪದ್ಧತಿಗಳನ್ನು ಉಪಯೋಗಿಸಬೇಕಾಗುವುದು. ಆ್ಯಡಂ ಸ್ಮಿತ್ನಿಂದ ಮಾರ್ಷಲ್ವರೆಗಿನ ಎಲ್ಲ ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ ಆರ್ಥಿಕ ಬೆಳೆವಣಿಗೆಯ ಸಿದ್ಧಾಂತವನ್ನು ರಚಿಸುವ ಪ್ರಯತ್ನವನ್ನು ಮಾಡಿರುವರು. ಇವರು ಬದುಕಿದ್ದ ಕಾಲ ಯುರೋಪಿನ ಔದ್ಯೋಗಿಕ ಕ್ರಾಂತಿಯ ಕಾಲ. ಆ್ಯಡಂ ಸ್ಮಿತ್ ಮುಂತಾದ ಅರ್ಥಶಾಸ್ತ್ರಜ್ಞರು ಹಾಗೂ ಕಾರ್ಲ್ ಮಾಕ್ರ್ಸ್ ಯುರೋಪಿನ ಆರ್ಥಿಕ ವ್ಯವಸ್ಥೆ ಸ್ವಯಂ ಶಕ್ತಿಯಿಂದ ಪ್ರಗತಿ ಹೊಂದುತ್ತಿದ್ದ ಕಾಲದಲ್ಲೇ ಬದುಕಿದ್ದರು. ಯುರೋಪು ಬೆಳೆವಣಿಗೆಯ ಶಿಖರವನ್ನು ಮುಟ್ಟಿದ್ದನ್ನು ಕಣ್ಣಾರೆ ಕಂಡಿದ್ದರು. ಈ ಕಾರಣಗಳಿಂದ ಅವರು ಬರೆದ ಆರ್ಥಿಕ ಬೆಳೆವಣಿಗೆಯ ಮಾದರಿಯನ್ನು ಹಾಗೂ ಪ್ರಗತಿಯ ವಿಷಯದ ಅಭಿಪ್ರಾಯಗಳು ತುಂಬ ಕುತೂಹಲಕಾರಿಯಾಗಿವೆ. ಇವರ ಅಭಿಪ್ರಾಯಗಳನ್ನೇ ಸಂಗ್ರಹಿಸಿದರೆ ಒಂದು ಬೆಳೆವಣಿಗೆಯ ಮಾದರಿಯನ್ನು ರಚಿಸುವುದು ಸಾಧ್ಯ. ಇಂಥ ಮಾದರಿಗೆ ಕ್ಲಾಸಿಕಲ್ ಮಾದರಿ ಎನ್ನುವರು ಮತ್ತು ಬಂಡವಾಳಗಾರಿಕೆಯಿಂದ ಬೆಳೆವಣಿಗೆಯ ಸಿದ್ಧಾಂತ ಎಂತಲೂ ಅನ್ನುವರು. ಇದರ ಮೂಲತತ್ತ್ವ ಬೆಳೆವಣಿಗೆ ಮತ್ತು ಜಡತೆ. ಈ ಹಿರಿಯ ಅರ್ಥಶಾಸ್ತ್ರಜ್ಞರ ವಿಚಾರದಂತೆ ಬಂಡವಾಳಶಾಹಿ ಪದ್ಧತಿಯ ಅರ್ಥವ್ಯವಸ್ಥೆಯ ಬೆಳೆವಣಿಗೆ ತಾಂತ್ರಿಕ ಕೌಶಲದ ಪ್ರಗತಿ ಹಾಗೂ ಜನಸಂಖ್ಯೆಗಳ ಹೆಚ್ಚಳಗಳಲ್ಲಿನ ಸ್ಪರ್ಧೆಯನ್ನು ಸೂಚಿಸುವುದು. ಈ ಸ್ಪರ್ಧೆಯಲ್ಲಿ ಕೆಲವು ಕಾಲದವರೆಗೆ ತಾಂತ್ರಿಕ ಪ್ರಗತಿ ಮುನ್ನಡೆಯಲ್ಲಿದ್ದು ಅನಂತರ ಅದು ತೀವ್ರವಾದ ಜಡತ್ವದಲ್ಲಿ ಕೊನೆಗೊಳ್ಳುವುದು. ತಾಂತ್ರಿಕ ಪ್ರಗತಿ ಬಂಡವಾಳ ಶೇಖರಣೆಯನ್ನು ಅವಲಂಬಿಸಿದ್ದರೆ ಬಂಡವಾಳದ ಹೆಚ್ಚಳದಿಂದ ಯಾಂತ್ರೀಕರಣ ಹಾಗೂ ಶ್ರಮ ವಿಭಜನೆ ಹೆಚ್ಚಾಗುವುದು. ಬಂಡವಾಳ ಶೇಖರಣೆಯ ಪ್ರಮಾಣ ಲಾಭದಮಟ್ಟ ಹಾಗೂ ಪ್ರವಣತೆಯನ್ನು (ಟ್ರೆಂಡ್) ಅವಲಂಬಿಸಿರುವುದು. ಆರ್ಥಿಕ ಬೆಳೆವಣಿಗೆಯ ಮಾದರಿಯನ್ನು ಗಣಿತಶಾಸ್ತ್ರದ ಪರಿಣಾಮವಾಗಿ ತಯಾರಿಸ ಬಹುದು. ಮೇಲೆ ವಿವರಿಸಿದ ಅಂಶಗಳನ್ನು ಅವುಗಳ ಪರಿಣಾಮವಾಗಿ ಉಂಟಾಗುವ ಬದಲಾವಣೆಗಳನ್ನು ಸಮೀಕರಣ ಪದ್ಧತಿಯಿಂದ ಬರೆಯಬಹುದು. ಇಲ್ಲಿ ಎಷ್ಟು ನಿರ್ದಿಷ್ಟ ಅಂಶಗಳಿರುವುವೋ ಅಷ್ಟೇ ಅನಿರ್ದಿಷ್ಟ ಅಂಶಗಳೂ ಇರಬೇಕು. ಈ ಹಿರಿಯ ಲೇಖಕರನ್ನನುಸರಿಸಿ ಬೆಳೆವಣಿಗೆಯ ಮಾದರಿಗಳನ್ನು ಇನ್ನೂ ಅನೇಕರು ರಚಿಸಿರುವರು ಹಾಗೂ ರಚಿಸುತ್ತಲಿದ್ದಾರೆ. ಅದರಿಂದ ಪ್ರಾರಂಭದ ಮಾದರಿಯ ಸ್ಥೂಲವಾದ ರೂಪರೇಖೆಗಳನ್ನು ತಿಳಿಯುವುದು ಆವಶ್ಯಕ. ಮಾದರಿ ಸಿದ್ಧಾಂತ 1 ಒಟ್ಟು ಉತ್ಪಾದನೆ O . ಕಾರ್ಮಿಕವರ್ಗದ ಗಾತ್ರ I, ಬಂಡವಾಳ ಸಂಗ್ರಹ Q. ಉತ್ಪಾದನೆಗೆ ದೊರೆಯಬಹುದಾದ ಭೂಮಿ A, ತಾಂತ್ರಿಕತೆಯ ಮಟ್ಟ T. ಇವೆಲ್ಲವನ್ನೂ ಉತ್ಪಾದನೆಯ ಕಾರ್ಯ ಅವಲಂಬಿಸಿದೆ. ಈ ಭಾವನೆಯನ್ನು ಗಣಿತದ (ಉತ್ಪನ್ನ ಫಂಕ್ಷನ್) ರೂಪದಲ್ಲಿ ಪಿ ವನ್ನು ಸಂಕೇತ ಬಳಸಿ ಹೀಗೆ ಬರೆಯಬಹುದು.

     O = ƒ (I, K, Q, T)		   ... (1)

ಸಿದ್ಧಾಂತ 2 ಬಂಡವಾಳ ಸಂಗ್ರಹ ತಾಂತ್ರಿಕ ಪ್ರಗತಿಯನ್ನುಂಟುಮಾಡಬಲ್ಲುದು:

     T = T(I) 		    ... (2)

ಈ ಸಮೀಕರಣವನ್ನು ತಾಂತ್ರಿಕ ಪ್ರಗತಿ, ಬಂಡವಾಳದ ವಿನಿಯೋಗವನ್ನು ಅವಲಂಬಿಸಿದೆ ಎಂದು ಮಾಡಬೇಕು. ಇದಕ್ಕಾಗಿಯೇ ಈ ಅರ್ಥಶಾಸ್ತ್ರಜ್ಞರು ತಾಂತ್ರಿಕ ಪ್ರಗತಿ ಪುರ್ಣಸ್ವತಂತ್ರ ಘಟಕವೆಂದು ಬಗೆಯದೆ ಬಂಡವಾಳ ಶೇಖರಣೆಗೂ ಉಳಿತಾಯಕ್ಕೂ ಮಹತ್ವ ಕೊಟ್ಟಿರುವರು. ಸಿದ್ಧಾಂತ 3 ಬಂಡವಾಳ ವಿನಿಯೋಗ ಲಾಭವನ್ನು ಅವಲಂಬಿಸಿರುವುದು

     I = dQ = I(R) 		   ... (3)

ಈ ಶಾಸ್ತ್ರಜ್ಞರು ಬಂಡವಾಳಗಾರರು ಲಾಭದಾಶೆಗಾಗಿ ಬಂಡವಾಳವನ್ನು ತೊಡಗಿಸುವರೆಂದು ನಿಶ್ಚಿತವಾಗಿ ತಿಳಿದಿದ್ದರು. ಅವರು ಭವಿಷ್ಯದಲ್ಲಿ ನಿರೀಕ್ಷಿಸುವ ಲಾಭ ಬಹಳಮಟ್ಟಿಗೆ ಸದ್ಯದಲ್ಲಿಯ ಲಾಭದ ಪ್ರಮಾಣವನ್ನೇ ಅವಲಂಬಿಸಿರುವುದು. ಮೇಲಿನ ಸಮೀಕರಣದಲ್ಲಿ R ನಿರ್ದಿಷ್ಟಪಡಿಸಿದ ಸಾಧನಗಳಿಂದ ಸಿಗುವ ಉತ್ಪಾದನೆ ಅಥವಾ ಲಾಭ (ಅಂದರೆ - ಭೂಮಿ ಹಾಗೂ ಬಂಡವಾಳಗಳಿಂದ) I ಬಂಡವಾಳ ವಿನಿಯೋಗ : dQ ಜಕಿ ಬಂಡವಾಳದಲ್ಲಾಗಬಹುದಾದ ನಿಕ್ಕಿ ಹೆಚ್ಚಳ (ವ್ಯಾಖ್ಯೆಯ ಪ್ರಕಾರ, ನಿಕ್ಕಿ ಬಂಡವಾಳ ವಿನಿಯೋಗ) ಹೆಚ್ಚಾದ ಬಂಡವಾಳಕ್ಕೆ ಜ ಸರಿಯಾಗಿರಬೇಕು. ಸಿದ್ಧಾಂತ 4 ಲಾಭ ಶ್ರಮಿಕರ ಪುರೈಕೆ ಮತ್ತು ತಾಂತ್ರಿಕ ಮಟ್ಟ ಇವುಗಳನ್ನು ಅವಲಂಬಿಸಿರುವುದು.

     R = R (T, L) 			   ... (4)

ಲಾಭದ ಮಟ್ಟ ತಾಂತ್ರಿಕ ಕುಶಲತೆಯ ಮಟ್ಟ ಹಾಗೂ ಶ್ರಮಿಕರ ಸಂಖ್ಯೆ ಇವುಗಳಿಂದ ನಿರ್ಣಯಿಸಲ್ಪಡುವುದು. ಸಿದ್ಧಾಂತ 5 ಶ್ರಮಿಕರ ಸಂಖ್ಯೆ ಅವರ ವೇತನದ ಮೊತ್ತದ ಗಾತ್ರವನ್ನು ಅವಲಂಬಿಸಿದೆ.

     L = L (W) 				 ... (5)

ಇದಕ್ಕೆ ಅಸ್ತಿತ್ವಮಟ್ಟದ ವೇತನ ಎನ್ನುವರು. ಸಿದ್ಧಾಂತ 6 ವೇತನ ಮೊತ್ತದ ಗಾತ್ರ ಬಂಡವಾಳ ವಿನಿಯೋಗದ ಮಟ್ಟವನ್ನು ಅವಲಂಬಿಸಿರುವುದು.

      W = W (I) 			   ... (6)

ಅಂದರೆ ಜನರು ಸಾಮಾನ್ಯವಾಗಿ ತಮ್ಮ ಆದಾಯದಲ್ಲಿ ಮಾಡುವ ಎಲ್ಲ ಉಳಿತಾಯವೂ ಬಂಡವಾಳ ವಿನಿಯೋಗದಲ್ಲಿ ಪರಿವರ್ತನೆ ಹೊಂದುವುದೆಂಬ ಸಿದ್ಧಾಂತವನ್ನು ಹಿರಿಯ ಶಾಸ್ತ್ರಜ್ಞರು ಗ್ರಹಿಸಿದ್ದರು. ಈಗ ಈ ಮಾದರಿಯನ್ನು ಪುರ್ಣಗೊಳಿಸುವುದು ಮಹತ್ವದ್ದಾಗಿದೆ. ಇಲ್ಲಿಗೆ ಕ್ಲಾಸಿಕಲ್ ಮಾದರಿಯ ಎಲ್ಲ ಕಾರ್ಯಕಾರಿ ಸಮೀಕರಣಗಳು ಸಿಕ್ಕಂತಾದುವು. ಅಂದರೆ ಈ ಆರು ಸಮೀಕರಣಗಳು ಆರ್ಥಿಕ ಬೆಳೆವಣಿಗೆಯಲ್ಲಿಯ ಕಾರ್ಯಕಾರಣ ಸಂಬಂಧಗಳನ್ನು ಕಲ್ಪಿಸುವುವು. ಆದರೆ ಈ ಮಾದರಿಯಲ್ಲಿ ೭ ಬದಲಾಗುವ ಅಂಶಗಳ ಪಟ್ಟಿ ಮಾಡಲಾಗಿದೆ. ಮಾದರಿ ರಚನೆ ಪುರ್ಣವಾಗಬೇಕಾದರೆ ನಾವು ಇನ್ನೊಂದು ಸಾರೂಪ ಸಮೀಕರಣವನ್ನು ಸೇರಿಸಬೇಕು.

      O = R + W 			   ... (7)

ಈ ಸಮೀಕರಣವನ್ನು ಎರಡು ಪ್ರಕಾರವಾಗಿ ಅರ್ಥಮಾಡಬಹುದು. ಲಾಭವನ್ನು ಮೇಲೆ ವಿವರಿಸಿದಂತೆ ಸ್ಥಿರ ಉತ್ಪಾದಕ ಸಾಧನ ಹಾಗೂ ಬಂಡವಾಳದ ಮೇಲಿನ ಉತ್ಪನ್ನ ಎಂದು ನಾವು ಭಾವಿಸಿದರೆ ಅದು ವ್ಯಾಖ್ಯೆಯ ಪ್ರಕಾರವೇ ಸಾರೂಪ್ಯ ಸಮೀಕರಣವಾಗಬಲ್ಲದು. ಇನ್ನೊಂದು ಅರ್ಥದಲ್ಲಿ ಒಟ್ಟು ರಾಷ್ಟ್ರೀಯ ಆದಾಯ ಒಟ್ಟು ಉತ್ಪಾದನೆಯ ವೆಚ್ಚ ಅಥವಾ ಎಲ್ಲ ಉತ್ಪಾದಿಕ ವಸ್ತುಗಳ ಹಾಗೂ ಸೇವೆಗಳ ಬೆಲೆ ಮತ್ತು ಈ ಮೊತ್ತ ಕಾರ್ಮಿಕರಲ್ಲಿ ಹಾಗೂ ಉಳಿದವರಲ್ಲಿ ಹಂಚಿಹೋಗುವುದೆಂದು ಅರ್ಥಮಾಡಬೇಕು. ಈಗ ಒಂದು ನಿರ್ಧಾರಿತ ರಚನೆಯಾಯಿತು. ಇದರಲ್ಲಿ ಏಳು ಸಮೀಕರಣಗಳೂ ಏಳು ಗೊತ್ತಿಲ್ಲದ ಬದಲಾಗುವ ಅಂಶಗಳೂ ಇರುವುವು. ಇನ್ನು ದೀರ್ಘಕಾಲೀನ ಬೆಳೆವಣಿಗೆಯನ್ನು ಸೂಚಿಸುವ ಸಲುವಾಗಿ ಕೆಳಗಿನ ಸಮೀಕರಣವನ್ನು ಕೂಡಿಸಿಕೊಳ್ಳಬೇಕು.

      W = WL 				 ... (8)

ಅಂದರೆ W ಕನಿಷ್ಠವೇತನವನ್ನು ತೋರಿಸುವುದು. ಇದೊಂದು ಸ್ಥಿರ ಅಂಶ. ಮೇಲೆ ವಿವರಿಸಿದ ಎಲ್ಲ ಸಮೀಕರಣಗಳನ್ನು ಒಂದುಗೂಡಿಸಿದರೆ ಮಾದರಿಯ ಸಿದ್ಧಾಂತವಾಗುವುದು.

O = ƒ (I, K, Q, T) ... (1)
T = T(I) ... (2)
I = dQ = I(R) ... (3)
R = R (T, L) ... (4)
L = L (W) ... (5)
W = W (I) ... (6)
O = R + W ... (7)

ಹಾಗೂ ದೀರ್ಘಕಾಲದ ಪರಿಸ್ಥಿತಿಯಲ್ಲಿ

W = WL ... (8)

ಈ ಮಾದರಿಯಿಂದ ನಮಗೆ ಆರ್ಥಿಕ ಬೆಳೆವಣಿಗೆಯಲ್ಲಿನ ವರ್ತುಲಾಕಾರದ ಚಲನೆಯ ಸ್ಪಷ್ಟ ಕಲ್ಪನೆಯಾಗುವುದು. ಈ ವರ್ತುಲಾಕಾರದ ರಚನೆಯನ್ನು ಮಧ್ಯದಲ್ಲಿಯೇ ಒಡೆದು ಬೇರೆ ಬೇರೆ ಅಂಶಗಳಲ್ಲಿನ ಸಂಬಂಧವನ್ನು ತಿಳಿದುಕೊಳ್ಳುವುದು ಸಾಧ್ಯ. ಬಂಡವಾಳ ಗಾರಿಕೆಯ ಪದ್ಧತಿಯಲ್ಲಿ, ಲಾಭ ಮುಖ್ಯ ಅಂಶವಾಗಿದ್ದು ಅಲ್ಲಿಂದ ಪ್ರಾರಂಭಿಸಿದರೆ ಹೀಗೆ ಅಡಕವಾಗಿ ಬರೆಯಬಹುದು : dR→dT→dQ→dT→dW→dL→dR ಅಂದರೆ ಲಾಭ ಹೆಚ್ಚಿದಹಾಗೆಲ್ಲ ಬಂಡವಾಳ ವಿನಿಯೋಗ ಹೆಚ್ಚಾಗುವುದು. ಇದರಿಂದ ಬಂಡವಾಳಗಾರರಿಗೆ ಏಕಪ್ರಕಾರವಾಗಿ ಸುಧಾರಿಸುತ್ತಲಿರುವ ತಾಂತ್ರಿಕತೆಯ ಲಾಭ ಪಡೆಯುವುದಕ್ಕೆ ಅವಕಾಶ ಕಲ್ಪಿಸುವುದು. ಇದರಿಂದ ವೇತನ ಮೊತ್ತದಲ್ಲಿ ಹೆಚ್ಚಳವಾಗುವುದು. ವೇತನದಲ್ಲಿಯ ಈ ಹೆಚ್ಚಳ ಜನಸಂಖ್ಯೆಯ ಬೆಳೆವಣಿಗೆಯನ್ನು ಹೆಚ್ಚಿಸುವುದು. ಇದರಿಂದ ಭೂಮಿಯ ಫಲ ಕೊಡುವಶಕ್ತಿ ಕುಗ್ಗುವುದು. ಅಂದರೆ ಭೂಮಿಯಲ್ಲಿ ದುಡಿಯುವ ಕಾರ್ಮಿಕರ ಶ್ರಮಕ್ಕೆ ಪ್ರತಿಫಲದ ಪ್ರಮಾಣ ಕುಗ್ಗುವುದು. ಇದರಿಂದ ಶ್ರಮದ ಬೆಲೆ ಹೆಚ್ಚಾಗಿ ಲಾಭದ ಪ್ರಮಾಣ ಕಡಿಮೆಯಾಗುವುದು. ಹೀಗೆಯೇ ನಾವು ಕಡಿಮೆಯಾದ ಲಾಭದ ಪರಿಣಾಮವನ್ನು ಊಹಿಸಬಹುದು. ಈ ವಿಶ್ಲೇಷಣೆಯಿಂದ ಕ್ಲಾಸಿಕಲ್ ಲೇಖಕರ ದೃಷ್ಟಿಯಲ್ಲಿ ಬಂಡವಾಳವಿನಿಯೋಗ ಲಾಭದಲ್ಲಿ ಆಗುವ ಬದಲಾವಣೆಯ ಪರಿಣಾಮವೇ ಹೊರತು ಅದರ ಮಟ್ಟವನ್ನು ಅವಲಂಬಿಸಿರುವುದಿಲ್ಲ. ಬಂಡವಾಳದ ಶೇಖರಣೆ ಹೆಚ್ಚಲು ಲಾಭ ಹೆಚ್ಚಾಗಬೇಕು. ಬಂಡವಾಳದ ಹ್ರಾಸ, ಲಾಭದ ಇಳಿತದಿಂದ ಉಂಟಾಗುವುದು. ಮಾಕ್ರ್ಸ್ ಹೇಳಿರುವ ಬೆಳೆವಣಿಗೆ ಮಾದರಿ ಕ್ಲಾಸಿಕಲ್ ಮಾದರಿಗಿಂತ ಭಿನ್ನವಾಗಿದೆ. ಆತ ತನ್ನ ರಚನೆಯಲ್ಲಿ ಬಂಡವಾಳಗಾರಿಕೆಯ ಬೆಳೆವಣಿಗೆ ಮುಂದುವರಿದಂತೆ ಯಾವ ರೀತಿಯಿಂದ ತನ್ನ ನಾಶವನ್ನು ತಾನೇ ತಂದುಕೊಳ್ಳಬಹುದೆಂಬುದನ್ನೂ ವಿವರಿಸಿದ್ದಾನೆ. ಅವನ ಮಾದರಿಗೆ ಬೆಳೆವಣಿಗೆ ಹಾಗೂ ಕುಸಿದುಬೀಳುವಿಕೆಯ ತತ್ವ ಎನ್ನುವರು. ತನ್ನ ಶ್ರೇಷ್ಠಕೃತಿಯಾದ ಕ್ಯಾಪಿಟಲ್ ಎಂಬ ಪುಸ್ತಕದಲ್ಲಿ ಆತ ಮೂರು ತತ್ತ್ವಗಳನ್ನೂ ಪ್ರತಿಪಾದಿಸಿದ್ದಾನೆ:

 1. ಬಂಡವಾಳಗಾರರ ಆದಾಯ ಅಥವಾ ಲಾಭ ಶ್ರಮಿಕರ ಅನುಭೋಗಕ್ಕೆ ಸಿಗುವ ಆದಾಯವನ್ನು ಕಡಿಮೆಮಾಡುವುದರಿಂದಲೇ ಹೆಚ್ಚಬಲ್ಲುದು.
 2. ಈ ರೀತಿಯಲ್ಲಿ ಬಂಡವಾಳಗಾರರ ಆದಾಯವೂ ಹೆಚ್ಚಿದಾಗ ಲಾಭದ ಆಶೆಯೂ ಬಂಡವಾಳಗಾರರಲ್ಲಿ ಪೈಪೋಟಿಯನ್ನುಂಟುಮಾಡಿ ಬಂಡವಾಳ ವಿನಿಯೋಗ ಅವಕಾಶಕ್ಕೆ ಇಲ್ಲದಂತೆ ಮಾಡುವುದು.
 3. ಜನಸಂಖ್ಯೆಯ ಗಾತ್ರ ಸಾಮಾಜಿಕ ಪರಿಸ್ಥಿತಿಯನ್ನು ಅವಲಂಬಿಸಿದೆ ಹಾಗೂ ಶ್ರಮಿಕರ ಸಾಮರ್ಥ್ಯ ತಾಂತ್ರಿಕತೆಯ ಮಟ್ಟವನ್ನು ಅವಲಂಬಿಸಿದೆ.

ಇವು ಮಾಕ್ರ್ಸ್‌ನ ಮಾದರಿಯಲ್ಲಿಯ ಮುಖ್ಯ ನಿರ್ಣಯಗಳು. ಈ ತತ್ವ ಅನೇಕ ರೀತಿಯಲ್ಲಿ ವಿವಾದಾತ್ಮಕವಾಗಿ ಪರಿಣಮಿಸಿದ್ದರೂ ಅದರ ಮಹತ್ವವೆಂದರೆ ೨೦ನೆಯ ಶತಮಾನದ ಅನೇಕ ಅರ್ಥಶಾಸ್ತ್ರಜ್ಞರು ತಮ್ಮ ವಿವೇಚನೆಗಳಲ್ಲಿ ಮಾಕ್ರ್್ಸನ ಮಾದರಿಯಿಂದ ಮುಖ್ಯವಾಗಿ ಪ್ರಭಾವಿತರಾಗಿದ್ದಾರೆ. ಸುಮಾರು ೧೮೭೦-೧೯೩೫ರ ವರೆಗೆ ಈ ವಿಷಯದ ಮೇಲೆ ಯಾವುದೇ ಗಮನಾರ್ಹ ಕೃತಿಯೂ ಕಂಡುಬರುವುದಿಲ್ಲ. ಆರ್ಥಿಕ ಬೆಳೆವಣಿಗೆಯ ವಿಷಯವನ್ನು ಈ ಶತಮಾನದಲ್ಲಿ ಪುನಶ್ಚೇತನಗೊಳಿಸಿದ ಶ್ರೇಯಸ್ಸು ಜೋಸೆಫ್ ಷಂಪೀಟರ್ಗೆ ಸಲ್ಲಬೇಕು. ಅವನ ಮಾದರಿಯಲ್ಲಿ ಬೆಳವಣಿಗೆಯ ಅಸ್ಥಿರತೆ-ತತ್ತ್ವ ಎನ್ನಬಹುದು. ಶಂಪೀಟರ್ ಕೂಡ ತನ್ನ ವಿಶ್ಲೇಷಣೆಗೆ ಕ್ಲಾಸಿಕಲ್ ಸಿದ್ಧಾಂತವನ್ನೇ [O = f (L, K, Q, T)] ಆಧಾರ ವಾಗಿರಿಸಿಕೊಂಡಿದ್ದಾನೆ. ಉಳಿತಾಯದ ವ್ಯಾಖ್ಯೆಯನ್ನು ಬದಲಿಸಿದ್ದಲ್ಲದೇ ಅದರ ಮೇಲೆ ಬಡ್ಡಿದರದ ಪ್ರಭಾವವನ್ನೂ ವಿವೇಚಿಸಿದ್ದಾನೆ. ಬಡ್ಡಿ ದರದಲ್ಲಿ ಹೆಚ್ಚಳ, ಲಾಭದ ಹೆಚ್ಚಿಗೆ ಅಂಶವನ್ನು ಉಳಿತಾಯದ ಕಡೆಗೆ ಹೊರಳಿಸಬಲ್ಲದು. ಬಂಡವಾಳ ವಿನಿಯೋಗದಲ್ಲಿ ಪ್ರೇರಿತ ವಿನಿಯೋಗ ಮತ್ತು ಸ್ವಯಂ ನಿರ್ಧಾರಿತ ವಿನಿಯೋಗವೆಂಬುದಾಗಿ ವಿಭಾಗಿಸಿದುದು ಅವನ ಮಹತ್ತ್ವದ ಕೊಡುಗೆ. ಪ್ರೇರಿತ ವಿನಿಯೋಗ ಲಾಭದ ಮಟ್ಟವನ್ನೂ ಸ್ವಯಂ ನಿರ್ಧಾರಿತ ವಿನಿಯೋಗ ಹೊಸ ಸಂಪನ್ಮೂಲಗಳ ಶೋಧ ಹಾಗೂ ಉತ್ಪಾದನೆಗಳನ್ನೂ ಅವಲಂಬಿಸಿವೆ. ಬಂಡವಾಳ ವಿನಿಯೋಗದ ದೊಡ್ಡಭಾಗ ದೀರ್ಘಕಾಲೀನ ಅಂಶಗಳನ್ನೇ ಅವಲಂಬಿಸಿದೆ ಎಂದು ಒತ್ತಿ ಹೇಳಿದ್ದಾನೆ. ಈ ದೀರ್ಘಕಾಲೀನ ಅಂಶಗಳೇ ಅವನ ನವೀನತೆ. ಇದು ಹೊಸ ಸಂಪನ್ಮೂಲಗಳ ಪರಿಶೋಧ ಇಲ್ಲವೆ ತಾಂತ್ರಿಕತೆಯ ಸುಧಾರಣೆ ಅಥವಾ ಇವೆರಡರ ಮಿಶ್ರಣ. ಒಂದೇ ವಾಕ್ಯದಲ್ಲಿ ಉತ್ಪಾದನೆಯ ಪ್ರಮಾಣದಲ್ಲಿ ಗಣನೀಯ ಹೆಚ್ಚಳವನ್ನುಂಟು ಮಾಡುವುದೇ ಮಾರ್ಪಾಟು. ಸ್ವಯಂ ನಿರ್ಧಾರಿತ ಬಂಡವಾಳಕ್ಕೂ ಮಾರ್ಪಾಟಿಗೂ ತೀರ ಸಂಬಂಧವಿದೆ. ಇಂಥ ಮಾರ್ಪಾಟುಗಳನ್ನು ಶೋಧಕ ಪರಿಶೋಧಿಸಿದರೆ ಅವುಗಳನ್ನು ಉದ್ದಿಮೆಗಳಲ್ಲಿ ಅಳವಡಿಸುವ ಸಾಹಸವನ್ನು ತೋರಿಸುವವ ಸಾಹಸಿಯಾದ ವ್ಯವಸ್ಥಾಪಕ (ಆಂಟ್ರಪ್ರನರ್). ಈತನ ಚಾಲಕಶಕ್ತಿ ಲಾಭದ ಪ್ರಮಾಣ ಎಂದು ಅವರ ಸಿದ್ಧಾಂತ. ಷಂಪೀಟರನ ಅನಂತರದ ಇನ್ನೂ ಅನೇಕ ಅರ್ಥಶಾಸ್ತ್ರಜ್ಞರು ಈ ವಿಷಯದ ವಿವೇಚನೆಯ ಕ್ಷಿತಿಜದಲ್ಲಿ ಕಾಣಿಸಿಕೊಂಡಿರುವರು. ಪುರ್ಣ ಪ್ರಗತಿಯನ್ನು ಸಾಧಿಸಿದ ಪರಿಪಕ್ವ ಆರ್ಥಿಕ ವ್ಯವಸ್ಥೆ ಎದುರಿಸುವ ಸಾಮಾನ್ಯ ಜಡತ್ವ ಎಂಬ ಸಮಸ್ಯೆಯ ವಿಶ್ಲೇಷಣೆಯಿಂದ, ಅಭಿವೃದ್ಧಿ ಹೊಂದಿದ ಔದ್ಯಮಿಕ ರಾಷ್ಟ್ರದಲ್ಲಿ ಏಕಪ್ರಮಾಣದ ಬೆಳೆವಣಿಗೆಯನ್ನು ಸ್ಥಿರಗೊಳಿಸುವುದು ಹೇಗೆ ಎಂಬ ವಿವೇಚನೆಯನ್ನು ಹೆರಾಡ್ ಮತ್ತು ಕೆಲವು ಅರ್ಥಶಾಸ್ತ್ರಜ್ಞರು ಮಾಡಿರುವರು. ಒಂದು ದೃಷ್ಟಿಯಿಂದ ಇವು ವಿಶಿಷ್ಟ ತತ್ತ್ವಗಳಾಗಿದ್ದು ಸಾಮಾನ್ಯ ಬೆಳೆವಣಿಗೆಯ ಚರ್ಚೆಯಲ್ಲಿ ಅವನ್ನು ಸೇರಿಸುವುದು ಉಚಿತವಲ್ಲ. ಆದರೆ ಕ್ಲಾಸಿಕಲ್ ಮಾದರಿಯನ್ನು ಅನುಸರಿಸಿ ಅದರಲ್ಲಿನ ಆರ್ಥಿಕ ಬೆಳೆವಣಿಗೆಯ ಜಡತ್ವಕ್ಕೆ ಕಾರಣಗಳನ್ನು ಕಲ್ಪನಾಶಕ್ತಿಯಿಂದ ಇಲ್ಲಿ ವಿಶ್ಲೇಷಿಸಲಾಗಿದೆ. ಈ ವಿಶ್ಲೇಷಣೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಆರ್ಥಿಕ ಬೆಳೆವಣಿಗೆಯಲ್ಲಿ ಸ್ವಯಪೋಷಕ ಹಂತವನ್ನು ತಲಪುವಾಗ ಅವಶ್ಯವಾಗುವ ಮೇಲೇರುವ (ಟೇಕ್ಆಫ್) ಪರಿಸ್ಥಿತಿಯಲ್ಲಿ ಉಂಟಾಗುವ ಸಮಸ್ಯೆಗಳ ಮೇಲೆ ತುಂಬ ಪರಿಣಾಮಕಾರಿಯಾಗಿದೆ. ವಾಲ್ಟರ್ ಸ್ಟೊವ್ ಎಂಬ ಆರ್ಥಿಕ ಇತಿಹಾಸಕಾರರ ‘ಮೇಲಕ್ಕೆ ಏರು’ ಎಂಬ ಪದವನ್ನು ಆರ್ಥಿಕ ಬೆಳೆವಣಿಗೆಯ ವಿಶ್ಲೇಷಣೆಗೆ ದೊರಕಿಸಿಕೊಟ್ಟ. ಈತ ಆರ್ಥಿಕ ವಿಶ್ಲೇಷಣೆಯ ಮೇಲೆ ಇತಿಹಾಸದ ಅಭ್ಯಾಸದ ಪ್ರಭಾವವನ್ನು ಕಂಡಿದ್ದಾನೆ. ಆರ್ಥಿಕ ಬೆಳೆವಣಿಗೆಯನ್ನು ಹಂತಗಳಲ್ಲಿ ವಿಂಗಡಿಸಿ ಪ್ರತಿಯೊಂದು ಹಂತದಲ್ಲಿರುವ ಸಮಸ್ಯೆಗಳನ್ನು ಐತಿಹಾಸಿಕ ಸಂದರ್ಭಗಳ ಸಹಾಯದಿಂದ ವಿಶ್ಲೇಷಿಸಿದ್ದಾನೆ. ಅದರಲ್ಲಿ ಮುಖ್ಯವಾಗಿ ಸ್ವಯಂಚಾಲಿತ ಬೆಳೆವಣಿಗೆಗಾಗಿ ಮೇಲೇರುವಿಕೆ ಎಂಬ ವಿಶ್ಲೇಷಣೆ ಅನೇಕ ಅರ್ಥಶಾಸ್ತ್ರಜ್ಞರ ಮೇಲೆ ಪ್ರಭಾವಬೀರಿದೆ. ಆರ್ಥಿಕ ಬೆಳೆವಣಿಗೆಯಲ್ಲಿ ಹಂತ ಹಂತದ ಅಭಿವೃದ್ಧಿ ಮತ್ತು ಕ್ರಮೇಣ ಬೆಳೆವಣಿಗೆ ಈ ಎರಡೂ ತತ್ತ್ವಗಳು ಮಹತ್ವ ಕಳೆದುಕೊಂಡಿವೆ. ಇಂಥ ಯಾವುದೇ ದಾರಿಯಿಂದ ಆರ್ಥಿಕ ಬೆಳೆವಣಿಗೆ ವಿಫಲವಾಗುವುದು ನಿಶ್ಚಿತ ಎಂಬುದು ಈಗಿನ ಲೇಖಕರ ಅಭಿಪ್ರಾಯ. ಆರ್ಥಿಕ ಬೆಳೆವಣಿಗೆ ಸ್ವಾಭಾವಿಕವಾಗಿಯೇ ಅನೇಕ ಪರಸ್ಪರ ಸಂಬಂಧವಿಲ್ಲದ ನೆಗೆತಗಳನ್ನು ಒಳಗೊಂಡಿದೆ. ಆರ್ಥಿಕ ಬೆಳೆವಣಿಗೆಗೆ ಕಾರಣವಾಗುವ ಅಂಶಗಳಲ್ಲಿ ಪರಸ್ಪರ ಕಾರ್ಯ ಸಂಬಂಧವನ್ನು ಗಮನಿಸಿದಾಗ ನಮಗೆ ಕಂಡುಬರುವುದು ಈ ಸಂಬಂಧಗಳ ನಡುವೆ ಅನೇಕ ಬಿಡಿಸಲಾಗದಂಥ ಗಂಟುಗಳು ಮತ್ತು ಸಂಬಂಧವಿಲ್ಲದ ಅಂಶಗಳು. ಆದುದರಿಂದ ಇಂಥ ಜಡತ್ವದಲ್ಲಿರುವ ಆರ್ಥಿಕ ವ್ಯವಸ್ಥೆಯನ್ನು ಮೇಲಿನ ಉತ್ಪಾದನೆಯ ಮಟ್ಟ ಹಾಗೂ ಹೆಚ್ಚಿನ ಆದಾಯದ ಸ್ತರಕ್ಕೆ ಒಯ್ಯುವಾಗ ಪ್ರಾರಂಭದಲ್ಲಿಯ ಜಾಡ್ಯವನ್ನು ಹೊಡೆದೋಡಿಸಲು ಕನಿಷ್ಠ ಪ್ರಯತ್ನ ಅಥವಾ ಬಲವಾದ ಪ್ರಚೋದನೆ ಅತ್ಯವಶ್ಯವಾಗಿದೆ. ಇಂಥ ಪ್ರಾರಂಭದ ಬಲವಾದ ಪ್ರಚೋದನೆಯನ್ನು ಪ್ರತಿಪಾದಿಸುವ ಎಲ್ಲ ಚರ್ಚೆಗಳೂ ಹಿಂದಿನಿಂದಲೂ ರೂಢಿಯಲ್ಲಿದ್ದ ಬಾಹ್ಯ ಆರ್ಥಿಕಸೌಲಭ್ಯ ವಿಷಯವನ್ನೇ ಪ್ರತಿಪಾದಿಸುತ್ತಿರು ವುವು. ಇಂಥ ಕಾರ್ಯಗಳಲ್ಲಿ ಬಂಡವಾಳ ತೊಡಗಿಸುವುದರಿಂದ ನೇರ ಪ್ರತಿಫಲ ದೊರೆಯಲಾರದು. ಆದರೆ ಈ ಬಂಡವಾಳ ವಿನಿಯೋಗ ಇಡೀ ಸಮಾಜಕ್ಕೆ ಅಲ್ಲದೆ ಅದರೊಳಗಿನ ಕೆಲವು ಮಹತ್ವದ (ಆರ್ಥಿಕ ಬೆಳೆವಣಿಗೆಯ ದೃಷ್ಟಿಯಿಂದ) ಭಾಗಕ್ಕೆ ಪ್ರತಿಫಲ ಕೊಡಬಲ್ಲುದು. ಆದುದರಿಂದ ಕನಿಷ್ಠ ಪ್ರಯತ್ನದ ಕಲ್ಪನೆ ಹಳೆಯದೇ ಆಗಿದೆ. ಆದರೆ ಹೊಸತನ ಆರ್ಥಿಕ ಬೆಳೆವಣಿಗೆಯ ಸಂದರ್ಭದಲ್ಲಿ ಅಷ್ಟೆ. ಈ ವಿಚಾರಕ್ಕೆ ಮಹತ್ವ ಕೊಟ್ಟವರಲ್ಲಿ ರೊಸೆನ್ಸ್ಟೈನ್ ರೊಡಾನ್ ಎಂಬ ಅರ್ಥಶಾಸ್ತ್ರಜ್ಞ ಮೊದಲಿಗ. ಈತ ಆರ್ಥಿಕ ಬೆಳೆವಣಿಗೆಯ ವಿಷಯವಾಗಿ ಬರೆದ ಗ್ರಂಥ 1943ರಲ್ಲಿ ಪ್ರಕಟವಾಯಿತು. ಆರ್ಥಿಕ ಬೆಳೆವಣಿಗೆಗೆ ಆತಂಕವಾಗಿರುವ ಮೂರು ಅಂಶಗಳನ್ನು ಈತ ಎತ್ತಿ ತೋರಿಸಿದ:

 1. ಪೇಟೆಯ ಅಭಾವಃ
 2. ಸಾಮಾಜಿಕ ಸೌಲಭ್ಯಗಳ ಅಭಾವಃ
 3. ಬಂಡವಾಳದ ಅಭಾವಃ

ಈ ಕಾರಣಗಳಿಂದಾಗಿ ಕೇವಲ ಅಲ್ಪಸ್ವಲ್ಪ ಪ್ರಯತ್ನಗಳನ್ನು ಮಾಡುತ್ತ ಸಾಗಿದರೆ ಆರ್ಥಿಕ ಬೆಳೆವಣಿಗೆ ಸಾಧ್ಯವಿಲ್ಲ. ಯಾವುದೇ ಕನಿಷ್ಠ ಪ್ರಮಾಣದ ಬಂಡವಾಳ ವಿನಿಯೋಗ ಪ್ರಾರಂಭದಲ್ಲಿ ಅತ್ಯವಶ್ಯ. ಸ್ವಲ್ಪದರಲ್ಲಿ ಹೇಳುವುದಾದರೆ ಇದೇ ಮೇಲೇರುವ ಸಿದ್ಧಾಂತದ ಮೂಲ ಭಾವನೆ. ಇವರಂತೆಯೇ ಹಾರ್ವೆ ಲೆಬೆನ್ಸ್ಟೈನ್ ಎಂಬ ಲೇಖಕನೂ ಕನಿಷ್ಠ ಪ್ರಯತ್ನದ ವಿಷಯವಾಗಿ ಇನ್ನೂ ಹೆಚ್ಚು ತರ್ಕಬದ್ಧವಾದ ಸಿದ್ಧಾಂತವನ್ನು ಒದಗಿಸಿದ್ದಾನೆ. ಯಾವುದೊಂದು ದೇಶದ ಜನಸಂಖ್ಯೆ ಏರುತ್ತಿರುವಾಗ ಅವಶ್ಯವಾದ ಕನಿಷ್ಠ ಪ್ರಯತ್ನದ ಪ್ರಮಾಣ ಎಷ್ಟಿರಬೇಕು ಎಂಬುದನ್ನು ಕೂಡ ಆತ ಅಂದಾಜು ಮಾಡಿದ್ದಾನೆ. ನಕ್ರ್ಸ್ ಹಾಗೂ ಸಿಂಗರ್ ಎಂಬ ಲೇಖಕರೂ ತಮ್ಮ ಸಿದ್ಧಾಂತಗಳಲ್ಲಿ ಕನಿಷ್ಠ ಪ್ರಯತ್ನ ತತ್ತ್ವವನ್ನು ಎತ್ತಿ ಹಿಡಿದಿರುವರು. ನಕ್ರ್ಸ್ ಆರ್ಥಿಕ ಬೆಳೆವಣಿಗೆಯ ಅನೇಕ ರಂಗಗಳಲ್ಲಿ ಏಕಕಾಲದ ಬಂಡವಾಳ ವಿನಿಯೋಗವನ್ನು ಸಮರ್ಥಿಸಿದ್ದಾನೆ. ಈತನ ಸಿದ್ಧಾಂತಕ್ಕೆ ಸಮತೋಲ ಬೆಳೆವಣಿಗೆಯ ಸಿದ್ಧಾಂತ ಎನ್ನಬಹುದು. ಅನಭಿವೃದ್ಧಿ ದೇಶಗಳಲ್ಲಿಯ ಬಡತನದ ದುಷ್ಟ ವರ್ತುಲ ಹಾಗೂ ಮರೆಮಾಚಿರುವ ನಿರುದ್ಯೋಗಗಳನ್ನು ಕುರಿತು ಇವರ ವಿಶ್ಲೇಷಣೆ ಗಳು ತುಂಬ ನವೀನವಾಗಿವೆ. ಬಲವಾದ ಪ್ರಚೋದನೆಯ ತಂತ್ರ ಜನಸಂಖ್ಯೆಯಲ್ಲಿಯ ಶೇ.೭೦ ರಿಂದ ಶೇ.೯೦ ಕೃಷಿ ಉದ್ಯೋಗದಲ್ಲಿರುವಂಥ ಆರ್ಥಿಕವ್ಯವಸ್ಥೆಗೆ ಹೆಚ್ಚಿಗೆ ಹೊಂದಿಕೆ ಯಾಗುವ ಸಿದ್ಧಾಂತ ಎಂದು ಸಿಂಗರ್ ಹೇಳಿದ್ದಾನೆ. ಶೇ.೮೦ ರಿಂದ ಶೇ.೧೫ ಪ್ರಮಾಣಕ್ಕೆ ಬದಲಾಯಿಸುವ ಕ್ರಮ ಎಂಬ ಆರ್ಥರ್ ಲೇವಿಸ್ನ ವ್ಯಾಖ್ಯೆಯನ್ನು ಸಿಂಗರ್ ಸಮರ್ಥಿಸಿದ್ದಾನೆ. ಹರ್ಷ್ಮನ್ ಎಂಬ ಲೇಖಕ ಸೂಚಿಸುವ ತಂತ್ರ ಬಹುಮಟ್ಟಿಗೆ ನಕ್ರ್ಸ್ ಹಾಗೂ ಸಿಂಗರ್ ಮಹಾಶಯರ ವಿಚಾರಗಳ ಸಮನ್ವಯವೆನ್ನಬಹುದು. ಆದರೆ ಆತ ನಕ್ರ್್ಸನ ಸಮತೋಲ ಬೆಳೆವಣಿಗೆಯ ವಿಚಾರವನ್ನು ಒಪ್ಪುವುದಿಲ್ಲ. ಅದು ಕೇವಲ ಬೆಳೆವಣಿಗೆ ಹೊಂದಿದ ಆದರೆ ತಾತ್ಪೂರ್ತಿಕವಾಗಿ ಉದ್ಯೋಗದಲ್ಲಿ ಮಂದಗತಿಯನ್ನನುಭವಿಸುವ ಆರ್ಥಿಕಪರಿಸ್ಥಿತಿಗೆ ಹೆಚ್ಚು ಹೊಂದಿಕೆಯಾಗಬಲ್ಲುದು ಎಂಬುದು ಆತನ ಅಭಿಪ್ರಾಯ. ಅವನ ವಿಚಾರದಂತೆ ಬಲವಾದ ಪ್ರಚೋದನೆ ತಂತ್ರವನ್ನು ಮುಂದಿನ ಬೆಳೆವಣಿಗೆಯ ದೃಷ್ಟಿಯಿಂದ ಮಹತ್ವವಾದ ಉದ್ದಿಮೆಗಳಲ್ಲಿ ಅಥವಾ ಆರ್ಥಿಕ ರಂಗಗಳಲ್ಲಿ ಉಪಯೋಗಿಸ ಬೇಕು. ಇಂಥ ರಂಗಗಳಲ್ಲಿ ಬಂಡವಾಳ ವಿನಿಯೋಗದಿಂದ ಅವು ತಮ್ಮ ಬೆಳೆವಣಿಗೆಯ ಪ್ರಮಾಣವನ್ನು ಉಳಿದ ರಂಗಗಳಿಗೆ ಮುಟ್ಟಿಸುತ್ತ ಒಟ್ಟು ಬೆಳೆವಣಿಗೆಯ ವೇಗವನ್ನು ಹೆಚ್ಚಿಸಬಲ್ಲುವು. ಆದುದರಿಂದ ಕೆಲವು ಯೋಜನೆಗಳನ್ನು ಕೈಗೊಂಡಾಗ ಸದ್ಯದ ಲಾಭದ ಕಡೆಗಷ್ಟೇ ಗಮನ ಕೊಡುವುದು ಸರಿಯಲ್ಲ. ಬಡದೇಶಗಳು ವಾಸ್ತವವಾಗಿ ಮಿತವ್ಯಯಿಗಳಾಗು ವುದು ಸರಿಯಲ್ಲ. ಅವರು ನೇರ ಉತ್ಪಾದನೆಯಲ್ಲಿ ಆಗಬಹುದಾದ ಹೆಚ್ಚಳ, ಸಾಮಾಜಿಕ ಮಹತ್ವದ ಬಂಡವಾಳ ನಿರ್ಮಾಣ ಇವುಗಳ ತುಲನೆಮಾಡಿ ಸಾಮಾಜಿಕ ಮಹತ್ವದ ಬಂಡವಾಳ ನಿರ್ಮಾಣಕ್ಕೇ ಹೆಚ್ಚು ಪ್ರಾಶಸ್ತ್ಯ ಕೊಡಬೇಕು. ಏಕೆಂದರೆ ನೇರವಾದ ಉತ್ಪಾದನೆಯ ದೃಷ್ಟಿಯಿಂದಲೂ ಇದು ಅವಶ್ಯವಿದೆ ಎಂಬುದನ್ನು ಪ್ರತಿಪಾದಿಸಿದ್ದಾರೆ. ಆದುದರಿಂದ ಹೆಚ್ಚಿನ ಪ್ರಮಾಣದ ಬೆಳೆವಣಿಗೆಯನ್ನು ಹೊಂದಬೇಕಾದರೆ ಹಿಂದುಳಿದ ದೇಶಗಳು ಬುದ್ಧಿಪುರ್ವಕವಾಗಿಯೇ ಸಮತೋಲವನ್ನು ತಪ್ಪಿಸಬೇಕು. ಆರ್ಥಿಕ ವ್ಯವಸ್ಥೆಯ ಯಾವ ರಂಗಗಳಲ್ಲಿ ಈ ಅಸಮತೋಲ ಬೆಳೆವಣಿಗೆಯ ತಂತ್ರವನ್ನು ಉಪಯೋಗಿಸಬೇಕು ಎಂಬ ವಿಚಾರವಾಗಿ ವಿಸ್ತೃತವಾದ ಚರ್ಚೆಯನ್ನು ಮಾಡಿದ್ದಾನೆ. ಈ ಚರ್ಚೆಯಲ್ಲಿ ಅವನು ಸಂಬಂಧ (ಲಿಂಕೇಜ್) ಎಂಬ ಪದದ ಉಪಯೋಗವನ್ನು ಮಾಡಿದ್ದಾನೆ. ಲಿಂಕೇಜ್ ಅಂದರೆ ಉದ್ದಿಮೆಗಳ ಪರಸ್ಪರ ಸಂಬಂಧ ಎಂದು ಅರ್ಥಮಾಡಬಹುದು. ಕೆಲವು ಅನೇಕ ಮೂಲ ಉದ್ದಿಮೆಗಳಿಗೆ ತಳಪಾಯದಂತಿರುವುವು. ಇವುಗಳ ಬೆಳೆವಣಿಗೆ ಅನೇಕ ಉದ್ದಿಮೆಗ ಳನ್ನು ಪ್ರಚೋದಿಸಬಹುದು. ಇಂಥ ಉದ್ದಿಮೆಗಳಿಗೆ ಹೊಸ ಉದ್ದಿಮೆ ಪ್ರಚೋದಕಗಳು ಅಂದರೆ ಯಾವ ಉದ್ದಿಮೆಗಳು ಅದಕ್ಕೆ ಬೇಕಾಗುವ ಕಚ್ಚಾ ಸರಕುಗಳನ್ನು ಉತ್ಪಾದಿಸುವ ಉದ್ದಿಮೆಗಳನ್ನು ಪ್ರಚೋದಿಸುವುವೊ ಅವು. ಹೀಗೆ ಉದ್ದಿಮೆಗಳನ್ನು ವಿಂಗಡಿಸಿದ ಮೇಲೆ ಮುಖ್ಯ ಕಾರ್ಯಕ್ರಮವೆಂದರೆ ಯಾವ ಉದ್ದಿಮೆಗಳಲ್ಲಿ ಅತಿ ಹೆಚ್ಚು ಸಂಬಂಧ ಪರಿಣಾಮ ಇರುವುದೋ ಅಂಥ ಉದ್ದಿಮೆಗಳಲ್ಲಿ ಹೆಚ್ಚು ಬಂಡವಾಳ ವಿನಿಯೋಗ ಮಾಡುವುದು. ಅತಿ ಹೆಚ್ಚು ಸಂಬಂಧ ಪರಿಣಾಮವಿರುವ ಉದ್ದಿಮೆ ದೇಶ ಕಾಲ ಹಾಗೂ ಪರಿಸ್ಥಿತಿಗನುಗುಣವಾಗಿ ಬದಲಾಗಬಹುದು. ಹರ್ಷ್ಮನ್ನ ವಿಚಾರದಂತೆ ಉತ್ಪಾದನೆಯ ಮಧ್ಯವರ್ತಿ ಸ್ಥಾನದಲ್ಲಿರುವ ಉದ್ದಿಮೆಗಳಿಗೆ ಪ್ರಾರಂಭದ ಅಥವಾ ಅಂತ್ಯದ ಉದ್ದಿಮೆಗಳಿಗಿಂತ ಹೆಚ್ಚಿನ ಸಂಬಂಧ ಪರಿಣಾಮ ಕಂಡುಬರುವುದು. ಕಬ್ಬಿಣ ಮತ್ತು ಉಕ್ಕಿನ ಉದ್ದಿಮೆಯಲ್ಲಿ ಅತಿ ಹೆಚ್ಚು ಸಂಬಂಧ ಪರಿಣಾಮವಿದೆಯೆಂದು ಹರ್ಷ್ಮನ್ನ ಅಭಿಪ್ರಾಯ. ಅದರಿಂದ ಹಿಂದುಳಿದ ದೇಶಗಳು ಇಂಥ ಕಾರ್ಖಾನೆಗಳನ್ನು ಬಯಸುವುದು ಕೇವಲ ಪ್ರತಿಷ್ಠೆಯ ಮಬ್ಬು ಅಲ್ಲ ಎಂದು ಅವನು ತಿಳಿದಿದ್ದಾನೆ. ಲಿಂಕೇಜ್ ವಿಶ್ಲೇಷಣೆ ಹಿಂದುಳಿದ ರಾಷ್ಟ್ರಗಳ ವಿಷಯದಲ್ಲಿ ತುಂಬ ಮಹತ್ವದ್ದಾಗಿದೆ. ಕೃಷಿಯನ್ನೇ ಅವಲಂಬಿಸಿರುವ ಈ ದೇಶಗಳು ಲಿಂಕೇಜ್ ದೃಷ್ಟಿಯಿಂದ ತುಂಬ ನಿಶ್ಯಕ್ತವಾಗಿವೆ. ರೈತವಾರಿ ಪದ್ಧತಿಯ ಕೃಷಿಯಲ್ಲಂತೂ ತೀರ ಕಡಿಮೆ ಲಿಂಕೇಜ್ ಇರುವುದು ಸಾಮಾನ್ಯವಾಗಿ ಮೂಲವಸ್ತುಗಳನ್ನು ಉತ್ಪಾದಿಸುವ ಎಲ್ಲ ಉದ್ದಿಮೆಗಳಲ್ಲಿಯೂ-ಅಂದರೆ ಕೃಷಿ, ಖನಿಜ, ಇತರ ಸಣ್ಣ ಉದ್ದಿಮೆಗಳು ಇವುಗಳಲ್ಲಿ-ಲಿಂಕೇಜ್ ಪರಿಣಾಮ ಅಲ್ಪ. ಅದರಿಂದ ಇಂಥ ಸಾಮಾನ್ಯವಾಗಿ ಬೆಳೆಯುವ ಉದ್ದಿಮೆಗಳಲ್ಲಿ ಬಂಡವಾಳ ವಿನಿಯೋಗ ಪರಿಣಾಮಕಾರಿ ಯಾಗಲಾರದು. ಆಮದು ಉದ್ದಿಮೆಗಳಲ್ಲಿನ ಲಿಂಕೇಜ್ ಪರಿಣಾಮವನ್ನು ಉಪಯೋಗಿಸಿ ಆರ್ಥಿಕ ಬೆಳೆವಣಿಗೆಯನ್ನು ಸಾಧಿಸುವ ರೀತಿಯ ವಿಶ್ಲೇಷಣೆಯನ್ನು ಮಾಡಿರುವುದು, ಆರ್ಥಿಕ ಬೆಳೆವಣಿಗೆಯ ಪುಸ್ತಕಗಳಲ್ಲಿ ಹರ್ಷಮನ್ನ ತಂತ್ರ ಎಂದು ಪ್ರಸಿದ್ಧಿ ಪಡೆದಿದೆ. ಪ್ರಾರಂಭದಲ್ಲಿ ಆಮದು ವಸ್ತುಗಳನ್ನು ಉಪಯೋಗಿಸುವ ಉದ್ದಿಮೆ ಪ್ರಚೋದನೆ ಪರಿಣಾಮದ ದೃಷ್ಟಿಯಿಂದ ಉಪಯೋಗಿಸಿಕೊಂಡು ಅನಂತರ ಆಮದು ವಸ್ತುಗಳ ಪೇಟೆ ಸಾಕಷ್ಟು ವೃದ್ಧಿಯಾದೊಡನೆ ಆಮದು ಮಾಡುತ್ತಿದ್ದ ವಸ್ತುಗಳನ್ನು ಉತ್ಪಾದಿಸುವ ಉದ್ದಿಮೆಗಳನ್ನು ನೇರವಾಗಿ ಪ್ರಾರಂಭಿಸ ಬೇಕು. ಇಂಥ ಪ್ರಯತ್ನದಿಂದ ಆರ್ಥಿಕ ಪರಿಸ್ಥಿತಿಯನ್ನು ಪರಿಶ್ರಮದಿಂದ ಮೇಲಕ್ಕೆತ್ತುವ ಕ್ರಮವನ್ನು ಮನಸ್ಸಿನಲ್ಲಿ ರೂಪಿಸಿಕೊಂಡಿರುವವರು ಒಮ್ಮೆ ಬೆಳೆವಣಿಗೆಯ ಹೊಸ್ತಿಲನ್ನು ಮುಟ್ಟಿದೊಡನೆ ಆಮದು ವಸ್ತುಗಳ ಬದಲಾಗಿ ಅವುಗಳನ್ನು ದೇಶದಲ್ಲಿಯೇ ಉತ್ಪಾದಿಸುವ ಉದ್ದಿಮೆಗಳಿಗೆ ರಕ್ಷಣೆಯನ್ನು ಅಥವಾ ಸಹಾಯ ಧನವನ್ನು ಕೊಡುವುದು ಸರಿಯಾದ ನೀತಿಯಾಗುವುದು ಎಂಬುದು ಅವರೆಲ್ಲರ ಅಭಿಪ್ರಾಯ. ದೇಶಗಳು ಆಯಾತ ಮಾಡುತ್ತಿರುವ ವಸ್ತುಗಳನ್ನು ಉತ್ಪಾದಿಸುವುದರಲ್ಲೇ ಹೆಚ್ಚಿನ ಪ್ರಯೋಜನವಿದೆ ಎಂಬ ಸಿದ್ಧಾಂತ ಎಲ್ಲ ಕ್ರಮಗಳನ್ನೂ ಕ್ರಿಯಾತ್ಮಕ ಅಥವಾ ಪ್ರಗತಿಪರ ಸಂದರ್ಭದಲ್ಲಿ ನೋಡಿದಾಗ ಹೊಳೆಯಬಲ್ಲುದೇ ಹೊರತು ಸಾಂಪ್ರದಾಯಿಕ ತತ್ತ್ವದಿಂದ ಹುಡುಕಿ ತೆಗೆಯುವುದು ಅಸಾಧ್ಯ ಎಂಬುದು ಹರ್ಷಮನ್ರ ಅಭಿಪ್ರಾಯ. ಮೇಲೆ ವಿವರಿಸಿದ ಆರ್ಥಿಕ ಬೆಳೆವಣಿಗೆಯನ್ನು ವಿವರಿಸುವ ಈ ಎಲ್ಲ ಸಿದ್ಧಾಂತವನ್ನೂ ಹೋಲುವ ವಿವೇಚನೆಗಳು ಸಾಕಷ್ಟು ಸಮಾಧಾನಕಾರಿಯಾಗಿಲ್ಲ. ಇದಕ್ಕೆ ಮುಖ್ಯಕಾರಣ ಯುರೋಪಿನ ಸ್ಥಿರಪರಿಸ್ಥಿತಿಯಲ್ಲಿ ಬೆಳೆದ ಈ ವಿವೇಚನೆಗಳು ಆರ್ಥಿಕ ಬೆಳೆವಣಿಗೆಯನ್ನು ರೂಪಿಸುವ ಇನ್ನೂ ಅನೇಕ ಸಾಮಾಜಿಕ, ರಾಜಕೀಯ, ನೈಸರ್ಗಿಕ ಮುಂತಾದ ಅಂಶಗಳನ್ನು ಬದಲಾಗದ ಅಂಶಗಳು ಎಂದು ನಂಬಿದೆ. ಇದರಿಂದ ವಿವೇಚನೆಯ ವ್ಯಾಪ್ತಿ ಚಿಕ್ಕದಾಗಿದೆ. ಇಂಥ ಸೂತ್ರಗಳಂತಿರುವ ಮಾದರಿಗಳನ್ನು ಯುರೋಪಿನ ಹೊರಗಿನ ಸಂಸ್ಕೃತಿಯ ರಾಷ್ಟ್ರಗಳ ಆರ್ಥಿಕ ಬೆಳೆವಣಿಗೆಯನ್ನು ಪ್ರಚೋದಿಸುವ ಸಂದರ್ಭದಲ್ಲಿ ಅಭ್ಯಸಿಸಿದಾಗ ವಿಷಯ ಸಂಕೀರ್ಣತೆಯ ಅರಿವಾಗುವುದು. ಹಾಗೂ ಈ ಮಾದರಿಗಳ ನಿಜವಾದ ಅಪುರ್ಣತೆ ಕಂಡುಬರುವುದು. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಬೆಳೆವಣಿಗೆಯ ವಿವೇಚನೆ ಹೆಚ್ಚು ವ್ಯಾಪಕವೂ ವಿಶ್ಲೇಷಣಾತ್ಮಕವೂ ಆಗಿರುವುದು ಅವಶ್ಯ. ಅಂದರೆ ಆರ್ಥಿಕ ಬೆಳೆವಣಿಗೆ ಯನ್ನು ಸಮಾಜದಲ್ಲಿ ಮೂಲ ಬದಲಾವಣೆಯನ್ನುಂಟುಮಾಡುವ ತತ್ತ್ವ ಎಂದು ಪರಿಗಣಿಸಿ ಅದರಿಂದ ಬದಲಾವಣೆ ಹೊಂದುವ ಹಾಗೂ ಬದಲಾವಣೆಗೆ ಕಾರಣವಾಗುವ ರಾಜಕೀಯ ದೃಷ್ಟಿಯಿಂದ ಈ ಎಲ್ಲ ಅಂಶಗಳನ್ನು ಅನೇಕ ರೀತಿಯಲ್ಲಿ ವರ್ಗೀಕರಿಸುವುದು ಸಾಧ್ಯ. ಆರ್ಥಿಕ ಬೆಳೆವಣಿಗೆಗೆ ತೀರ ಸಮೀಪದ ಮೂರು ಕಾರಣಗಳೆಂದರೆ ಅರ್ಥಿಕ ಚಟುವಟಿಕೆ, ಜ್ಞಾನವೃದ್ಧಿ ಹಾಗೂ ಬಂಡವಾಳದ ಹೆಚ್ಚಳ ಎಂದು ಆರ್ಥರ್ ಲೇವಿಸ್ ಹೇಳಿದ್ದಾನೆ. ಆರ್ಥಿಕ ಬೆಳೆವಣಿಗೆಗೆ ಆರ್ಥಿಕ ಚಟುವಟಿಕೆ ಆವಶ್ಯಕ. ಇದರ ಅರ್ಥ ಯಾವುದೇ ಮನುಷ್ಯ ವ್ಯವಹಾರದಲ್ಲಿ ಹೆಚ್ಚು ಪ್ರತಿಫಲ ಪಡೆಯಲು ಪ್ರಯತ್ನಿಸಿದ ಹೊರತು ಅಂಥ ಪ್ರತಿಫಲವನ್ನು ಪಡೆಯಲಾರ ಎಂದು. ಆರ್ಥಿಕ ಬೆಳೆವಣಿಗೆ ಮನುಷ್ಯನ ಪ್ರಯತ್ನದಿಂದಲೇ ಸಾಧಿಸಬೇಕಾದುದು. ನಿಸರ್ಗ ಮನುಷ್ಯನಿಗೆ ಯಾವುದೇ ರೀತಿಯ ಕರುಣೆಯನ್ನೂ ತೋರಿಸುತ್ತಿಲ್ಲ. ಅದನ್ನು ಹಾಗೆಯೇ ಬಿಟ್ಟಿದ್ದಾದರೆ ಅದು ಭೂಮಿಯಲ್ಲಿ ಕಳೆಯನ್ನು ಹೆಚ್ಚಿಸಿಯೋ ಮಹಾಪುರಗಳಿಂದಲೊ ಸಾಂಕ್ರಾಮಿಕ ರೋಗಗಳಿಂದಲೊ ಇಂಥ ಇನ್ನೂ ಅನರ್ಥ ಪರಂಪರೆಗಳಿಂದಲೋ ಮನುಷ್ಯಜೀವನವನ್ನು ಮುತ್ತಿಬಿಡಬಹುದು. ಆದುದರಿಂದ ಮನುಷ್ಯ ತನ್ನ ಬುದ್ಧಿಶಕ್ತಿಯ ಹಾಗೂ ಕಾರ್ಯಶಕ್ತಿಯ ಬಲದಿಂದ ಇಂಥ ಅನಿಷ್ಟ ಪರಿಸ್ಥಿತಿಯನ್ನು ಪರಿಹರಿಸಿಕೊಳ್ಳಬೇಕಾಗುವುದು. ಪ್ರಕೃತಿಯ ಆಹ್ವಾನಗಳನ್ನು ಎದುರಿಸಿಯೇ ಆತ ಪ್ರಕೃತಿಯ ಕೈಯಿಂದ ತನ್ನ ಪ್ರಯತ್ನಕ್ಕೆ ಹೆಚ್ಚಿನ ಪ್ರತಿಫಲ ಪಡೆಯಬಲ್ಲ. ಇಲ್ಲಿ ಅವನ ದಕ್ಷತೆ, ಕಷ್ಟ ಸಹಿಷ್ಣುತೆ, ಸಾಹಸ ಮುಂತಾದ ಗುಣಗಳ ಉಪಯೋಗ ಆವಶ್ಯಕ. ಹೊಸದಾಗಿ ಆರ್ಥಿಕ ಅಭಿವೃದ್ಧಿ ಸಾಗುತ್ತಿರುವ ಎಲ್ಲ ದೇಶಗಳಲ್ಲಿ ಇಂಥ ಮನುಷ್ಯಪ್ರಯತ್ನ ಒಂದೇ ಪ್ರಮಾಣದಲ್ಲಿ ಇರಲಾರದು. ಈ ವಿಷಮತೆಗೆ ಅಲ್ಲಿಯ ಸಮಾಜರಚನೆ ಹಾಗೂ ಸಾಮಾಜಿಕ ಸಂಸ್ಥೆಗಳು ಕಾರಣ. ಅದರಿಂದ ಸಮಾಜ ಸುಧಾರಣೆ ಆರ್ಥಿಕ ಬೆಳೆವಣಿಗೆಗೆ ತಳಪಾಯದಂತಿದೆ. ಮನುಷ್ಯ ಪ್ರಯತ್ನಕ್ಕೂ ದೇಶದ ಸಂಪನ್ಮೂಲಗಳ ಲಭ್ಯತೆಗೂ ಹತ್ತಿರ ಸಂಬಂಧವಿದೆ. ಆದರೆ ಸಂಪನ್ಮೂಲಗಳ ಉಪಯುಕ್ತತೆ ಸಮಾಜದ ಅಭಿರುಚಿ, ತಾಂತ್ರಿಕ ಜ್ಞಾನದ ಮಟ್ಟ ಇವುಗಳನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಸಂಪನ್ಮೂಲಗಳು ಹೇರಳವಾಗಿರುವ ದೇಶ ಹೆಚ್ಚಿನ ಬೆಳೆವಣಿಗೆಯ ಪ್ರಮಾಣವನ್ನು ತೋರಿಸಬಲ್ಲುದು. ಸಂಪನ್ಮೂಲಕ್ಕೂ ಅವುಗಳನ್ನು ಉಪಯೋಗಿಸುವ ಜ್ಞಾನಕ್ಕೂ ಸ್ಪಷ್ಟವಾದ ಸಂಬಂಧವಿದೆ. ಯಾವುದು ಒಬ್ಬನ ಹತ್ತಿರ ಲಭ್ಯವಿರುವುದೋ ಅದನ್ನು ಉಪಯೋಗಿಸುವುದನ್ನು ಆತ ಕಲಿತಿರಲೇಬೇಕು. ಕಲ್ಲಿದ್ದಲು ಇಲ್ಲದ ದೇಶಗಳಲ್ಲಿ ಅದನ್ನು ಉಪಯೋಗಿಸುವ ಜ್ಞಾನ ಬೆಳೆಯಲಾರದು. ಅದರಂತೆ ಯೋಗ್ಯವಾದ ಕಲ್ಲುಗಳು ಸಿಗದ ದೇಶದಲ್ಲಿ ಶಿಲ್ಪಕಲೆ ಅಭಿವೃದ್ಧಿ ಹೊಂದಲಾರದು. ಆರ್ಥಿಕ ಬೆಳೆವಣಿಗೆಯಲ್ಲಿ ಕೆಲವು ಸಾಮಾಜಿಕ ಸುಸ್ಥಿತಿಗಳು ಮಹತ್ವದ ಪಾತ್ರ ವಹಿಸುತ್ತವೆ. ಆಸ್ತಿಯ ಮೇಲಿನ ಹಕ್ಕು ಈ ವಿಷಯದಲ್ಲಿ ಮಹತ್ವದ್ದು. ಆರ್ಥಿಕ ಬೆಳೆವಣಿಗೆಗೆ ಬಂಡವಾಳ ನಿರ್ಮಾಣ ಮಹತ್ವದ್ದು. ಯಾವುದೇ ಮನುಷ್ಯನಿಗೆ ಆಸ್ತಿಯನ್ನು ಗಳಿಸಿದರೆ ಅದನ್ನು ತಾನೂ ತನ್ನ ವಾರಸುದಾರರೂ ಅನುಭೋಗಿಸಬಹುದೆಂಬ ಅಸೆಯಿರದಿದ್ದರೆ ಆತ ನಿಷ್ಕ್ರಿಯನಾಗುತ್ತಾನೆ. ಅದರಿಂದ ಆಸ್ತಿಗೆ ಕಾನೂನಿನ ರಕ್ಷಣೆ ದೊರೆಯಬೇಕು. ಆಸ್ತಿಯ ಹಕ್ಕುದಾರರನ್ನು ಕೊಳ್ಳೆಗಾರರಿಂದ ಅಥವಾ ದಂಗೆಕೋರರಿಂದ ರಕ್ಷಿಸಲು ಸರ್ಕಾರ ವಿಫಲವಾದರೆ ಆರ್ಥಿಕ ಬೆಳೆವಣಿಗೆಗೆ ಧಕ್ಕೆ ತಗಲುವುದು ನಿಶ್ಚಿತ. ನಿಯಮವಿಲ್ಲದ ತೆರಿಗೆಗಳು ಸಂಪತ್ತನ್ನು ಬಚ್ಚಿಡುವ ಇಲ್ಲವೇ ಹೆಚ್ಚು ಉಪಯೋಗಿಸುವ ಪ್ರವೃತ್ತಿಗಳನ್ನು ಬೆಳೆಸುವುದರಿಂದ ಬಂಡವಾಳ ನಿರ್ಮಾಣ ಕುಗ್ಗುವುದು. ಆರ್ಥಿಕ ಬೆಳೆವಣಿಗೆಯಲ್ಲಿ ವ್ಯಾಪಾರ ಹಾಗೂ ವಿಶೇಷ ಪರಿಶ್ರಮಗಳಿಗೆ ಪ್ರಾಮುಖ್ಯವಿದೆ. ವ್ಯಾಪಾರ ಹೊಸ ಸರಕುಗಳನ್ನು ಪುರೈಸುವುದರಿಂದಲೂ ಇದ್ದ ಸರಕುಗಳ ಮೌಲ್ಯವನ್ನು ಹೆಚ್ಚಿಸಿ ಜನರಲ್ಲಿ ಹೊಸ ಜೀವನದ ಹೊಳಪನ್ನುಂಟುಮಾಡಬಲ್ಲುದು. ಪ್ರಾಚೀನ ಪದ್ಧತಿಯು ಸಮಾಜಗಳಲ್ಲಿ ವ್ಯಾಪಾರವೃದ್ಧಿಯ ಕ್ರಾಂತಿಕಾರಿ ಪರಿಣಾಮಗಳನ್ನು ತರಬಲ್ಲುದು. ವ್ಯಾಪಾರ ದಿಂದಲೇ ಶ್ರಮವಿಭಜನೆ ಹಾಗೂ ತಜ್ಞತೆಗಳು ಬೆಳೆಯಬಲ್ಲುವು. ಆ್ಯಡಂ ಸ್ಮಿತ್ ಹೇಳುವಂತೆ ಶ್ರಮವಿಭಜನೆ ಪೇಟೆಯ ವೈಶಾಲ್ಯವನ್ನು ಅವಲಂಬಿಸಿದೆ, ಅನೇಕ ರೀತಿಯಿಂದ ಉತ್ಪಾದನೆ ಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ. ಆರ್ಥಿಕ ಬೆಳೆವಣಿಗೆ ಮುಂದುವರಿದಂತೆ ಶ್ರಮವಿಭಜನೆ ಹಾಗೂ ವಿಶೇಷ ಪರಿಶ್ರಮ ಹೆಚ್ಚುತ್ತದೆ. ಪೇಟೆಯ ವಿಸ್ತರಣೆ ಆರ್ಥಿಕ ಬೆಳೆವಣಿಗೆಗೆ ಆವಶ್ಯಕ. ಅನೇಕ ಪ್ರಕಾರದ ಪೇಟೆಗಳು ಅಂದರೆ ಶ್ರಮದಪೇಟೆ, ಸಾಲಗಳಪೇಟೆ, ಪರದೇಶ ವಿನಿಮಯಗಳಪೇಟೆ, ಷೇರುಗಳಪೇಟೆ ಮುಂತಾದವು ಬೆಳೆಯಬೇಕು. ಪೇಟೆಯ ವಿಸ್ತಾರದಿಂದ ಹಣದ ಚಲಾವಣೆ ಹೆಚ್ಚಾಗಿ ಲಾಭದ ಹಾಗೂ ಸಂಗ್ರಹದ ಆಶೆ ಮನುಷ್ಯನ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಇವಲ್ಲದೆ ಇನ್ನೂ ಅನೇಕ ಸಾಮಾಜಿಕ ಸಂಸ್ಥೆಗಳಾದ ಧರ್ಮ, ಕುಟುಂಬ, ಸಮಾಜ ರಚನೆ, ರೂಢಿ, ರಿವಾಜು, ಹಾಗೂ ನಿಷಿದ್ಧಗಳು ಮನುಷ್ಯನ ಆರ್ಥಿಕ ಚಟುವಟಿಕೆಗಳ ಮೇಲೆ ತಮ್ಮ ಪ್ರಭಾವವನ್ನು ಬೀರಬಲ್ಲುವು. ಆರ್ಥಿಕ ಬೆಳೆವಣಿಗೆಗೆ ವಿರೋಧಿಗಳಾದ ಅವುಗಳ ಗುಣಗಳನ್ನು ಪರಿಹರಿಸುವುದು ಅಗತ್ಯ. ಇನ್ನು ಜ್ಞಾನವೃದ್ಧಿಯ ವಿಷಯವಾಗಿ ವಿವೇಚಿಸುವಾಗ ಕೇವಲ ತಾಂತ್ರಿಕಜ್ಞಾನವನ್ನಷ್ಟೇ ವಿಚಾರಮಾಡುವುದು ಸರಿಯಲ್ಲ. ಸಮಾಜದ ವಿಷಯಜ್ಞಾನವೂ ಮುಖ್ಯಾಂಶ. ಜ್ಞಾನದ ಬೆಳೆವಣಿಗೆಗೆ ಕುತೂಹಲ ಬುದ್ಧಿಯನ್ನು ವಿಕಾಸಗೊಳಿಸುವ ವಾತಾವರಣ ಅಗತ್ಯ. ಧರ್ಮದ ಪ್ರಭಾವ ಬಹಳ ಇರುವಲ್ಲಿ ಜನರ ಕುತೂಹಲ ಬುದ್ಧಿಯ ವಿಕಾಸವಾಗುವುದು ಕಷ್ಟಸಾಧ್ಯ. ಅನೇಕ ಮತ ಪಂಥಗಳಿಂದ ದೇಶದ ಜನರು ಒಂದೇ ಧರ್ಮದ ಪ್ರಭುತ್ವವಿರುವ ದೇಶದ ಜನರಿಗಿಂತ ಹೆಚ್ಚು ಪ್ರಗತಿಪರರಾಗಿರುವರು. ಅದರಂತೆ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ವಾತಂತ್ರ್ಯಗಳು ಹೆಚ್ಚಿಗೆ ಇರುವ ದೇಶದಲ್ಲಿ ಜ್ಞಾನವೃದ್ಧಿಗೆ ತುಂಬ ಅವಕಾಶವಿರುವುದು. ಜ್ಞಾನವೃದ್ಧಿಯಲ್ಲಿ ಯುರೋಪಿನ ಪುನರುಜ್ಜೀವನಕಾಲದ ಕೊಡುಗೆ ಹಿರಿದು. ಇತಿಹಾಸವನ್ನು ನೋಡಿದರೆ ತಾಂತ್ರಿಕಶೋಧಗಳು ಕಾರ್ಯನಿರತನಾದ ಕೆಲಸಗಾರನಿಂದ ಇಲ್ಲವೆ ಸಂಶೋಧನಾವೃತ್ತಿಯಲ್ಲಿ ತೊಡಗಿದ ವ್ಯಕ್ತಿಯಿಂದ ಮಾಡಲ್ಪಟ್ಟಿವೆ ಎಂಬುದು ವಿಶದವಾಗುತ್ತದೆ. ಆದರೆ ೨೦ನೆಯ ಶತಮಾನದಲ್ಲಿ ಶೋಧನಾಕಾರ್ಯ ಒಬ್ಬ ಸ್ವತಂತ್ರ ವ್ಯಕ್ತಿ ತನ್ನ ಪ್ರಯೋಗಶಾಲೆಯಲ್ಲಿ ತಾನೇ ದುಡಿಯುವುದಕ್ಕಿಂತ ತನ್ನಂಥ ತಜ್ಞರ ಸಹಕಾರದಿಂದ ಕೆಲಸ ಮಾಡಿದಾಗ ಹೆಚ್ಚಿನ ಬಲ ಕೊಡಬಲ್ಲದೆಂಬುದು ಕಂಡುಬಂದಿದೆ. ಪರಿಶೋಧಗಳು ಒಬ್ಬ ವ್ಯಕ್ತಿಯ ಅಳತೆ ಮೀರಿ ಬೆಳೆದಿರುವುದು ಇದಕ್ಕೆ ಕಾರಣ. ರಸಾಯನವಿಜ್ಞಾನ, ರೇಡಿಯೊ ಯಂತ್ರಗಳ ಭೌತವಿಜ್ಞಾನ ಹಾಗೂ ಅಣುಶಕ್ತಿವಿಜ್ಞಾನ-ಇವುಗಳಲ್ಲಿ ಇಂಥ ಪರಿಶೋಧನೆ ತುಂಬ ಉತ್ತಮ ಪರಿಣಾಮಕೊಟ್ಟಿದೆ. ಸಾಮುದಾಯಿಕ ಸಂಶೋಧನೆ ಮೇಲಿನ ವೆಚ್ಚವನ್ನು ಹೆಚ್ಚಿಸಿದೆ. ಹೀಗಾಗಿ ಚಿಕ್ಕ ಉದ್ದಿಮೆಗಳು ವೆಚ್ಚವನ್ನು ಸಹಿಸಲಾರದೆ ದೊಡ್ಡ ಉದ್ದಿಮೆಗಳ ಪೈಪೋಟಿಗೆ ತುತ್ತಾಗಿ ಗುತ್ತಿಗೆದಾರಿ ಪದ್ಧತಿಗೆ ಅನುವು ಮಾಡಿಕೊಡುತ್ತವೆ. ಅದರಿಂದ ಇಂಥ ಸಂಶೋಧನೆಯ ಕಾರ್ಯಕ್ಕೆ ಸರ್ಕಾರದ ಪ್ರೇರಣೆ ಹಾಗೂ ನೇತೃತ್ವ ಬೆಳೆವಣಿಗೆ ಹೊಂದುತ್ತಿರುವ ದೇಶಗಳ ದೃಷ್ಟಿಯಿಂದ ಮುಖ್ಯ. ಆರ್ಥಿಕ ಬೆಳೆವಣಿಗೆಯಲ್ಲಿ ಮೂರನೆಯ ಮುಖ್ಯ ಅಂಶ ಬಂಡವಾಳ. ಇದನ್ನು ಚರ್ಚಿಸುವಾಗ ಬಂಡವಾಳದ ಪ್ರಮಾಣ, ಉಳಿತಾಯದ ಮೂಲ ಹಾಗೂ ಬಂಡವಾಳ ವಿನಿಯೋಗದ ಹೆಚ್ಚಳ-ಇವನ್ನು ಮರೆಯುವಂತಿಲ್ಲ. ಔದ್ಯಮಿಕ ರಾಷ್ಟ್ರಗಳಲ್ಲಿ ಬಂಡವಾಳದ ಬೆಲೆಗೆ ಉತ್ಪಾದನೆಯ ಬೆಲೆಯ ಪ್ರಮಾಣ ಸಾಮಾನ್ಯ ಅಂಚಿನಲ್ಲಿ ಸ್ಥಿರವಾಗಿರುವುದು. ಇಂಥ ಅಂಚಿನ ಪ್ರಮಾಣ ೧:೩ ಅಥವಾ ೧:೪ ಇರುವುದು. ಅಂದರೆ ಸರಾಸರಿ ೧೦೦ ರೂ. ಬಂಡವಾಳ ವಿನಿಯೋಗಕ್ಕೆ ರಾಷ್ಟ್ರೀಯ ಆದಾಯದಲ್ಲಿ ೩೩ ಇಲ್ಲವೆ ೨೫ ರೂಪಾಯಿಗಳ ಹೆಚ್ಚಳವಾಗುವುದು. ಅಂದರೆ ರಾಷ್ಟ್ರೀಯ ಆದಾಯ ಶೇ.೩ ಬೆಳೆಯುವುದು. ಇದರಿಂದ ರಾಷ್ಟ್ರೀಯ ಆದಾಯದ ಶೇ.೯ - ೧೨ ಪ್ರಮಾಣ ಬಂಡವಾಳವಾಗಿ ಉಪಯೋಗಿಸಲ್ಪಡುವುದು ಎಂದಾಯಿತು. ಔದ್ಯೋಗಿಕ ರಾಷ್ಟ್ರಗಳು ಸಹಜವಾಗಿ ಶೇ.೧೦-೧೫ ರಾಷ್ಟ್ರೀಯ ಆದಾಯವನ್ನು ಬಂಡವಾಳ ವಿನಿಯೋಗಕ್ಕೆ ಉಪಯೋಗಿಸುವುದು. ವಾರ್ಷಿಕ ನಿಕ್ಕೀ ಬಂಡವಾಳ ಶೇ.೫ - ೧೨ ಪ್ರಮಾಣಕ್ಕೆ ಮುಟ್ಟುವಂತೆ ಮಾಡಿದ ಪ್ರಯತ್ನಕ್ಕೆ ಔದ್ಯೋಗಿಕ ಕ್ರಾಂತಿ ಎಂದು ಕರೆಯಲಾಗಿದೆ. ಆದರೆ ಇಂಥ ಬದಲಾವಣೆ ಎಷ್ಟು ವರ್ಷಗಳವರೆಗೆ ನಡೆಯಿತು ಹಾಗೂ ಬಂಡವಾಳದ ನಿರ್ಮಾಣದ ಶಕ್ತಿಯ ಮೇಲೆ ಯಾವ ರೀತಿ ಪರಿಣಾಮ ಮಾಡಿತು ಎಂಬ ಬಗ್ಗೆ ಅಂಕಿ ಸಂಖ್ಯೆಗಳ ಆಧಾರ ಸಿಗಲಾರದು. ಆದರೂ ಸಾಮಾನ್ಯವಾಗಿ ಉದ್ದಿಮೆಗಳ ತಾಂತ್ರಿಕ ಕೌಶಲ್ಯದ ಹಾಗೂ ಸಾರ್ವಜನಿಕ ಉಪಯೋಗದ ಬಂಡವಾಳಗಳ ಅಭಾವವೇ ಆರ್ಥಿಕ ಹಿಂದುಳಿಯುವಿಕೆಯ ಮುಖ್ಯ ಕಾರಣಗಳೆನ್ನಬಹುದು. ತಾಂತ್ರಿಕ ಕೌಶಲ್ಯವನ್ನು ಪರದೇಶಗಳಿಂದ ಆಯಾತ ಮಾಡುವುದು ಸಾಧ್ಯವಿದೆ. ಆದರೆ ಪ್ರಾರಂಭದಲ್ಲಿ ಸಾರ್ವಜನಿಕ ಬಂಡವಾಳಗಳ ನಿರ್ಮಾಣಕ್ಕೆ ಹೆಚ್ಚು ಪ್ರಮಾಣದ ಬಂಡವಾಳ ವಿನಿಯೋಗ ಅನಿವಾರ್ಯ. ನಾವು ಸದ್ಯದಲ್ಲಿ ಬೆಳೆವಣಿಗೆ ಹೊಂದಿದಂಥ ದೇಶಗಳನ್ನು ಗಮನಿಸಿದರೆ ಪ್ರಾರಂಭದಲ್ಲಿ ಒಟ್ಟು ಬಂಡವಾಳ ವಿನಿಯೋಗದ ಶೇ.೩೫ ಪ್ರಮಾಣ ಸಾಮಾಜಿಕ ಉಪಯೋಗದ ಕಾರ್ಯ ಹಾಗೂ ಸಾರ್ವಜನಿಕ ಉಪಯುಕ್ತತೆಗಳ ಮೇಲೆ ವಿನಿಯೋಗವಾದದ್ದು ಕಂಡುಬರುವುದು. ಆರ್ಥಿಕ ಬೆಳೆವಣಿಗೆ ಮುಂದುವರಿದಂತೆ ಉದ್ದಿಮೆಗಳು ತಯಾರಿಸಿದ ಸರಕುಗಳಿಗೆ ಬೇಡಿಕೆ ಹೆಚ್ಚಾಗುವುದರಿಂದ ಉದ್ದಿಮೆಗಳಲ್ಲಿನ ಬಂಡವಾಳ ವಿನಿಯೋಗದ ಪ್ರಮಾಣ ಹೆಚ್ಚಾಗಲೇ ಬೇಕಾಗುವುದು. ಹೀಗೆ ಆರ್ಥಿಕ ಬೆಳೆವಣಿಗೆಗೆ ಬಂಡವಾಳ ವಿನಿಯೋಗ ಮಹತ್ವದ ವಿಷಯ. ಆದರೆ ಈ ಬಂಡವಾಳ ವಿನಿಯೋಗಕ್ಕೆ ಉಳಿತಾಯ ಅಷ್ಟೇ ಮುಖ್ಯ. ಇವೆರಡೂ ಪರಸ್ಪರ ಹೊಂದುವಂತೆ ಮಾಡಬೇಕು. ಇವುಗಳಲ್ಲಿ ಸಮತೋಲ ತಪ್ಪಿದರೆ ಆರ್ಥಿಕಸ್ಥಿರತೆ ಇರಲಾರದು. ಉಳಿತಾಯ ಕಡಿಮೆಯಾದರೆ ಬೆಲೆ ಏರಿಕೆ ಪರಿಸ್ಥಿತಿ ಉಂಟಾಗುವುದು. ಏಕೆಂದರೆ ಜನ ಗಳಿಸುವ ಆದಾಯ ಉಪಭೋಗ್ಯ ವಸ್ತುಗಳನ್ನೂ ಬಂಡವಾಳ ವಸ್ತುಗಳನ್ನೂ ಉತ್ಪಾದಿಸುವುದ ರಿಂದ ಉಂಟಾಗುತ್ತದೆ. ಆದುದರಿಂದ ಬಂಡವಾಳ ವಸ್ತುಗಳಿಂದ ಉಂಟಾದ ಆದಾಯ ಉಳಿತಾಯವಾಗಬೇಕು. ಏಕೆಂದರೆ ಜನ ತಮ್ಮ ಆದಾಯದಿಂದ ಕೇವಲ ಉಪಭೋಗ್ಯ ವಸ್ತುಗಳನ್ನು ಕೊಂಡಕೊಳ್ಳಬಲ್ಲರು. ಅದರ ಉತ್ಪಾದನೆಯ ಪ್ರಮಾಣಕ್ಕಿಂತ ಹೆಚ್ಚು ಆದಾಯವನ್ನು ಉಪಭೋಗ್ಯ ವಸ್ತುಗಳಿಗಾಗಿ ಉಪಯೋಗಿಸುವುದರಿಂದ ಬೆಲೆ ಏರಿಕೆಯುಂಟಾಗುವುದು. ಇಂಥ ಬೆಲೆಯೇರಿಕೆ ಉತ್ಪಾದನೆಯನ್ನು ಹೆಚ್ಚಿಸುವ ಅವಕಾಶವಿದ್ದರೆ ಅದು ಮಹತ್ವದ್ದಲ್ಲ. ಆದರೆ ಉತ್ಪಾದಕ ವಸ್ತುಗಳ ಕೊರತೆಯಿದ್ದಾಗ ಇಲ್ಲವೇ ಅವುಗಳನ್ನು ಉಪಯೋಗಿಸುವಲ್ಲಿ ಅಡೆತಡೆಗಳು ಇದ್ದಾಗ ಬೆಲೆ ಏರಿಕೆ ಕೆಟ್ಟ ಪರಿಣಾಮವನ್ನುಂಟುಮಾಡ ಬಹುದು. ಅದರಂತೆಯೇ ಉಳಿತಾಯದಲ್ಲಿ ಹೆಚ್ಚಳವಾದಾಗ ಬೆಲೆ ಇಳಿತದ ಸಮಸ್ಯೆ ಉದ್ಭವಿಸುವುದು. ಆದ್ದರಿಂದ ಉಳಿತಾಯ ಹಾಗೂ ಬಂಡವಾಳ ವಿನಿಯೋಗದಲ್ಲಿ ಸಮಾನತೆ ಮುಖ್ಯ ವಿಷಯ. ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಆದಾಯ ಕಡಿಮೆಯಿರುವುದರಿಂದ ಉಳಿತಾಯ ಪ್ರಮಾಣ ೪%-೫% ಇರಬಲ್ಲದು. ಆದರೆ ಆರ್ಥಿಕ ಬೆಳೆವಣಿಗೆಗೆ ಶೇ.೧೨ ರಷ್ಟಾದರೂ ಬಂಡವಾಳ ಅಗತ್ಯ. ಆದ್ದರಿಂದ ಇಂಥ ಸಂದರ್ಭಗಳಲ್ಲಿ ಸರಕಾರವು ಮೂಲ ಹಣವನ್ನು ಬಂಡವಾಳ ಹೂಡುವುದು. ಇಂಥ ಮೂಲ ಹಣದ ಹೂಡಿಕೆಯಿಂದ ಜನರ ಆದಾಯದಲ್ಲಿ ಹೆಚ್ಚಳವಾಗಿ ಉಳಿತಾಯದ ಪ್ರವೃತ್ತಿ ಬೆಳೆಯದೆ ಉಪಭೋಗ ವಸ್ತುಗಳ ಬೇಡಿಕೆ ಹೆಚ್ಚುವುದು. ಆದರೆ ಇಂಥ ಮೂಲ ಹಣದ ಉಪಯೋಗವನ್ನು ಬಹಳ ದಕ್ಷತೆಯಿಂದ ಮಾಡಿದರೆ ಮಾತ್ರ ಅದು ಆರ್ಥಿಕ ಬೆಳೆವಣಿಗೆಗೆ ಸಹಾಯಕವಾಗ ಬಲ್ಲುದು. ಈ ಹಣದ ಉಪಯೋಗವನ್ನು ಬೇಗ ಫಲಕೊಡುವ ಉದ್ದಿಮೆಗಳಲ್ಲಿ, ಇಲ್ಲವೆ ಸಮಯಕ್ಕನುಸಾರವಾಗಿ ಮಾಡಬೇಕು. ಇಲ್ಲದಿದ್ದರೆ ಉತ್ಪಾದಕ ಸಾಮಗ್ರಿಗಳ ತೀವ್ರ ಕೊರತೆಯಿರುವ ಈ ದೇಶಗಳಲ್ಲಿ ಅದು ವಿಪರೀತ ಬೆಲೆ ಏರಿಕೆಗೆ ಕಾರಣವಾಗಿ ಉತ್ಪಾದನೆಯ ವೆಚ್ಚದಲ್ಲಿ ಹೆಚ್ಚಳವನ್ನೂ ಜನರಲ್ಲಿ ಸರಕು ಸಾಧನಗಳ ಸಂಗ್ರಹಪ್ರವೃತ್ತಿಯನ್ನೂ ಹೆಚ್ಚಿಸಬಹುದು. ಅಲ್ಲದೆ ಅಭಿüವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ಇನ್ನೂ ಅನೇಕ ಸಾಮಾಜಿಕ ಹಾಗೂ ರಾಜಕೀಯ ಗೊಂದಲಗಳಿಗೆ ಕಾರಣವಾಗಬಹುದು. ಬಂಡವಾಳ ನಿರ್ಮಾಣ ಕಾರ್ಯದಲ್ಲಿ ದೇಶೀಯ ಉಳಿತಾಯದ ದೊಡ್ಡ ಪಾತ್ರವಹಿಸಬೇಕಾಗುವುದು. ಬಂಡವಾಳ ವಿನಿಯೋಗದ ದೃಷ್ಟಿಯಿಂದ ಭೂಮಿಯ ಉತ್ಪನ್ನ ಪಡೆಯುವವರ ಇಲ್ಲವೇ ಮಧ್ಯಮವರ್ಗದ ನೌಕರರು ಹಾಗೂ ಕೆಲಸಗಾರರು ಮಾಡುವ ಉಳಿತಾಯ ಏನೂ ಹೇಳಿಕೊಳ್ಳುವಂಥದ್ದಲ್ಲ. ಅಭಿವೃದ್ಧಿಹೊಂದಿದ ದೇಶಗಳಲ್ಲೂ ಈ ವರ್ಗ ಶೇ.೪ ಕ್ಕಿಂತ ಹೆಚ್ಚಿಗೆ ಬಂಡವಾಳ ಒದಗಿಸಲಾರದು. ಕೃಷಿಪ್ರಧಾನ ರಾಷ್ಟ್ರಗಳಲ್ಲಿ ಆರ್ಥಿಕ ಬೆಳೆವಣಿಗೆಗೆ ಬೇಕಾಗುವ ಬಂಡವಾಳ ಕೃಷಿಯಿಂದ ಬರುವುದು ಅನಿವಾರ್ಯ. ಕೃಷಿಯ ರಂಗದಲ್ಲಿ ಉಳಿತಾಯ ಹೆಚ್ಚುವಂತೆ ಎಲ್ಲ ಪ್ರಯತ್ನ ಮಾಡಬೇಕು. ಇದಕ್ಕಾಗಿ ಪ್ರಚಾರಕಾರ್ಯ, ಉಳಿತಾಯ ಸಂಸ್ಥೆಗಳನ್ನು ಹಳ್ಳಿಗಳಿಗೆ ವಿಸ್ತರಿಸುವುದು ಬಹು ಮುಖ್ಯ. ಆರ್ಥಿಕ ಬೆಳೆವಣಿಗೆಯಿಂದ ಉಂಟಾಗುತ್ತಿರುವ ಹೆಚ್ಚಿನ ಉತ್ಪನ್ನದ ಕೆಲವು ಭಾಗವನ್ನು ತೆರಿಗೆಯ ಮೂಲಕ ಅಭಿವೃದ್ಧಿಯ ಕಡೆಗೆ ಎಳೆದುಕೊಳ್ಳುವುದು ಅಗತ್ಯ. ಜಪಾನ್ ಹಾಗೂ ರಷ್ಯದೇಶಗಳು ಇಂಥ ನೀತಿಯನ್ನು ಯಶಸ್ವಿಯಾಗಿ ಪ್ರಯೋಗಿಸಿವೆ. ಬಂಡವಾಳ ನಿರ್ಮಾಣದ ಇನ್ನೊಂದು ಮೂಲ ಉದ್ದಿಮೆಗಳಲ್ಲಿಯ ಲಾಭ-ಇವು ಆರ್ಥಿಕ ಬೆಳೆವಣಿಗೆ ಮುಂದುವರಿದಂತೆ ಹೆಚ್ಚಾಗುವುವು. ಆದರೆ ಪ್ರಾರಂಭದಲ್ಲಿ ಬಂಡವಾಳ ಕೃಷಿಯಿಂದಲೇ ಬರಬೇಕು. ಏಕೆಂದರೆ ರಾಷ್ಟ್ರೀಯ ಆದಾಯದಲ್ಲಿ ಶೇ.೫೦-ಶೇ.೬೦ ರಷ್ಟು ಕೃಷಿಯ ಉತ್ಪನ್ನ. ಉದ್ದಿಮೆಗಳ ಲಾಭದ ವಿಚಾರದಲ್ಲಿ ಉದ್ದಿಮೆದಾರ ಅಥವಾ ಬಂಡವಾಳದಾರವರ್ಗದ ಮಹತ್ವವನ್ನು ಅರಿಯಬೇಕು. ಈ ವರ್ಗದ ಜನರಲ್ಲಿ ಮಧ್ಯಮವರ್ಗದ ಜನರಂತೆ ಪ್ರದರ್ಶನಪ್ರಿಯ ಉಪಭೋಗಕ್ಕೆ ಮಹತ್ವವಿರುವುದಿಲ್ಲ. ಅವರ ಸ್ವಂತ ಉದ್ಯೋಗವೇ ಸಾಕಷ್ಟು ಮಹತ್ವವನ್ನು ತಂದುಕೊಟ್ಟಿರು ವುದು. ಅದರಂತೆ ಭೂಮಿಯ ಒಡೆಯರಲ್ಲಿರುವ ರಾಜಕೀಯ ಪ್ರತಿಷ್ಠೆಯ ಭಾವನೆಯೂ ಇರಲಾರದು. ಇಂಥ ಪ್ರತಿಷ್ಠೆ ಬರಬೇಕಾದರೆ ಉದ್ದಿಮೆಗಳ ಲಾಭವನ್ನು ಹೆಚ್ಚಿಸಿಕೊಂಡೇ ತಮ್ಮ ರಾಜಕೀಯ ವರ್ಚಸ್ಸು ಅಥವಾ ಪ್ರತಿಷ್ಠೆ ಬೆಳೆಸುವ ಹಂಬಲವಿರುವುದರಿಂದ ಇಂಥ ಆಕಾಂಕ್ಷೆಗಳನ್ನು ಪುರೈಸಿಕೊಳ್ಳಲು ಆರ್ಥರ್ ಲೆವಿಸ್ ಹೇಳುವಂತೆ, ಆತ ತನ್ನ ಆದಾಯವನ್ನು ಇಟ್ಟಿಗೆ ಹಾಗೂ ಉಕ್ಕಿನ ಸಾಮ್ರಾಜ್ಯವನ್ನು ಕಟ್ಟಲು ಉಪಯೋಗಿಸುವನು. ಉಳಿದೆಲ್ಲ ವರ್ಗದವರೂ ತಮ್ಮ ಆಕಾಂಕ್ಷೆಗಳನ್ನು ಬೇರೆ ಬೇರೆ ರೀತಿಯಿಂದ ಪುರೈಸಿಕೊಳ್ಳುವರು. ಆದ್ದರಿಂದ ಬೆಳೆವಣಿಗೆ ಮುಂದುವರಿದಂತೆ ರಾಷ್ಟ್ರೀಯ ಆದಾಯದಲ್ಲಿ ಲಾಭದ ಪಾಲು ಹೆಚ್ಚಾಗುವುದು ಅನಿವಾರ್ಯ. ಇಂಥ ಲಾಭ ಬಂಡವಾಳಗಾರರ ಕೈಸೇರಿ, ಬಂಡವಾಳ ವಿನಿಯೋಗ ಹೆಚ್ಚಾದಂತೆಲ್ಲ, ಉದ್ಯೋಗಾವಕಾಶಗಳು ಹೆಚ್ಚಾಗಿ ಕೃಷಿ ಮತ್ತು ಕೆಲಸಗಳಲ್ಲಿಯ ಜನಸಂಖ್ಯೆಯ ಒತ್ತಡ ಕಡಿಮೆಯಾಗುವಂತೆ ಅಲ್ಲಿಯ ಹೆಚ್ಚಿನ ಜನಸಂಖ್ಯೆಯನ್ನು ತನ್ನೆಡೆಗೆ ಎಳೆದುಕೊಳ್ಳುವುದರಿಂದ ಆ ಉದ್ದಿಮೆಗಳೂ ಸುಧಾರಿಸಬಲ್ಲವು. ಆದ್ದರಿಂದ ಬಂಡವಾಳಗಾರಿಕೆ ಸಂಸ್ಥೆ ಆರ್ಥಿಕ ಬೆಳೆವಣಿಗೆಗೆ ಆವಶ್ಯಕ. ಕೆಲದೇಶಗಳಲ್ಲಿ ಖಾಸಗೀ ಬಂಡವಾಳಗಾರಿಕೆ ಬೆಳೆದರೆ ಇನ್ನು ಕೆಲವು ದೇಶಗಳಲ್ಲಿ ಸರ್ಕಾರವೇ ಬಂಡವಾಳಗಾರನಾಗಬಹುದು. ಆದರೆ ಉತ್ಪಾದನೆಯ ಪದ್ಧತಿ ಹಾಗೂ ಬಂಡವಾಳ ವಿನಿಯೋಗಗಳ ನೀತಿಯ ವಿಷಯವಾಗಿ ಅವುಗಳ ಅಭಿಪ್ರಾಯಗಳಲ್ಲಿ ಅಂತರವೇನಿಲ್ಲ. ರಾಷ್ಟ್ರೀಯ ಭಾವನೆ, ಸೈನಿಕ ಶಕ್ತಿಯನ್ನು ಹೆಚ್ಚಿಸುವ ಆಶೆ ಅಥವಾ ಜನಸಾಮಾನ್ಯರ ಬಡತನದ ವಿರುದ್ಧ ಹೋರಾಟ-ಈ ಆಕಾಂಕ್ಷೆಗಳು ರಾಷ್ಟ್ರೀಯ ಬಂಡವಾಳಗಾರಿಕೆಯ ಪ್ರವೃತ್ತಿಯನ್ನು ಬಲಗೊಳಿಸುವುವು. ಪರದೇಶ ಬಂಡವಾಳಗಳಿಗೂ ಆರ್ಥಿಕ ಬೆಳೆವಣಿಗೆಯಲ್ಲಿ ಹೆಚ್ಚಿನ ಪಾತ್ರವಿದೆ. ಸದ್ಯದ ಎಲ್ಲ ಯುರೋಪಿನ ಅಭಿವೃದ್ಧಿ ಹೊಂದಿದ ದೇಶಗಳು ಪರದೇಶೀ ಬಂಡವಾಳದ ಸಹಾಯದಿಂದಲೇ ಮುಂದುವರಿದುವು. ಪರದೇಶಿ ಬಂಡವಾಳ ತನ್ನೊಡನೆ ತಾಂತ್ರಿಕ ಜ್ಞಾನವನ್ನು ತರಬಲ್ಲದು. ಅಭಿವೃದ್ಧಿ ಹೊಂದಿದ ದೇಶಗಳು ಪರದೇಶಗಳಲ್ಲಿ ಬಂಡವಾಳ ತೊಡಗಿಸುವುದಕ್ಕೆ ಒಂದು ಮುಖ್ಯ ಕಾರಣ, ತಮ್ಮ ದೇಶದಲ್ಲಿಯ ಬಂಡವಾಳದ ಮೇಲಿನ ಲಾಭದ ಪ್ರಮಾಣ ಬಂಡವಾಳ ಸಂಗ್ರಹ ಹೆಚ್ಚಾದಂತೆ ಲಾಭದ ಪ್ರಮಾಣ ಕಡಿಮೆಯಾಗುವುದು. ಅದರಿಂದ ಹಿಂದುಳಿದ ದೇಶಗಳಲ್ಲಿ ಲಾಭದ ಪ್ರಮಾಣ ಹೆಚ್ಚಿರುವಾಗ ಬಂಡವಾಳ ನಿರ್ಗಮನಕ್ಕೆ ಅವಕಾಶವುಂಟಾಗುವುದು. ಹೆಚ್ಚು ಬಂಡವಾಳ ನಿರ್ಗಮನಕ್ಕೆ ಪ್ರೋತ್ಸಾಹಿಸುವ ಅಂಶಗಳು-ಹಿಂದುಳಿದ ದೇಶಗಳಲ್ಲಿಯ ಸರಕಾರ ನೀತಿ, ಅಲ್ಲಿಯ ನಿಸರ್ಗ ಸಂಪತ್ತುಗಳ ವಿಪುಲತೆ ಮತ್ತು ಅವು ನೀಡಬಹುದಾದ ಲಾಭದ ಪ್ರಮಾಣ ಹಾಗೂ ಬಂಡವಾಳ ವಿನಿಯೋಗಕ್ಕೂ ಪ್ರತಿಫಲಕ್ಕೂ ಮಧ್ಯದ ಕಾಲಾವಕಾಶ. ಎರಡನೆಯ ಮಹಾಯುದ್ಧದವರೆಗೂ ಪರದೇಶೀ ಬಂಡವಾಳ ಖಾಸಗಿ ವ್ಯಕ್ತಿಗಳಿಂದಲೇ ಬರುತ್ತಿತ್ತು. ಆದರೆ ಅದರ ಮುಂದಿನ ಕಾಲದಲ್ಲಿ ವಿದೇಶಿ ಸರಕಾರಗಳ ಸ್ವೇಚ್ಛಾವರ್ತನೆ, ಲಾಭದ ಮತ್ತು ಬಂಡವಾಳದ ವರ್ಗಾವಣೆ ವಿಷಯದ ನೀತಿ ಹಾಗೂ ರಾಷ್ಟ್ರೀಕರಣದ ಹೆದರಿಕೆ, ಇವುಗಳಿಂದ ಖಾಸಗೀ ಬಂಡವಾಳದ ಚಲನವಲನ ಕುಂಠಿತವಾಯಿತು. ಅದರಿಂದ ಎರಡು ಸರ್ಕಾರಗಳ ಮಧ್ಯದ ಸಾಲಕ್ಕೆ ಮಹತ್ವ ಬಂತು. ಮೊಟ್ಟಮೊದಲು ಈ ಪದ್ಧತಿಯನ್ನು ಅಮೆರಿಕ ಆಮದುರಫ್ತು ಬ್ಯಾಂಕ್ ಎಂಬ ಸಂಸ್ಥೆ ಆಚರಣೆಗೆ ತಂದಿತು. ಇದಲ್ಲದೆ ಇನ್ನೂ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಹುಟ್ಟಿಕೊಂಡವು. ಆದರೆ ಅವುಗಳ ಉಪಯುಕ್ತತೆ ಸೀಮಿತವಾಗಿದೆ. ಆರ್ಥಿಕ ಬೆಳೆವಣಿಗೆಯ ಮೇಲೆ ಜನಸಂಖ್ಯೆಯ ಬೆಳೆವಣಿಗೆಯ ಪರಿಣಾಮ ಮೊದಲಿ ನಿಂದಲೂ ಚರ್ಚಿಸಲ್ಪಟ್ಟ ವಿಷಯ. ಆಂಗ್ಲ ಲೇಖಕ ಮಾಲ್ಥಸ್ ೧೯ನೆಯ ಶತಮಾನದಲ್ಲಿ ಮಂಡಿಸಿದ ಸೂತ್ರದಿಂದ ವಾದ ವಿವಾದ ಹುಟ್ಟುಕೊಂಡಿದೆ. ಅವರ ಬೆಂಬಲಿಗರು ಜನಸಂಖ್ಯೆ ಹೆಚ್ಚಲು ಮುಖ್ಯ ಕಾರಣ ಜೀವನಮಟ್ಟ ಬೆಳೆದಂತೆ ಮದುವೆಯ ವಯಸ್ಸು ಕಡಿಮೆಯಾಗುವುದೇ ಕಾರಣ ಎಂದಿದ್ದಾರೆ. ಆದರೆ ಇದು ಸರಿಯಾದ ಕಾರಣವಲ್ಲ. ಈಗ ನಮಗೆ ತಿಳಿದುಬಂದಿರು ವಂತೆ, ಮರಣಪ್ರಮಾಣದ ಇಳಿತವೇ ಇದಕ್ಕೆ ಕಾರಣ ಎಂದು ಹೇಳಬಹುದು. ಮರಣಪ್ರಮಾಣ ಕಡಿಮೆಯಾಗಲು ಜೀವನಮಟ್ಟದಲ್ಲಿ ಸುಧಾರಣೆ, ಸಾಮಾಜಿಕ ಹಾಗೂ ಖಾಸಗೀ ವೈದ್ಯಕೀಯ ಸೌಕರ್ಯ ಸಾರ್ವಜನಿಕ ಆರೋಗ್ಯಕಾರ್ಯಕ್ರಮಗಳಿಂದ ಸಾಧ್ಯವಾಗಿರುವ ಸೋಂಕು ರೋಗಗಳ ನಿರ್ಮೂಲನ ಮುಂತಾದವು ಕಾರಣಗಳು. ಹಿಂದುಳಿದ ಪರಿಸ್ಥಿತಿಯಲ್ಲಿದ್ದಾಗ ಜನನ ಮರಣ ಪ್ರಮಾಣಗಳು ಸುಮಾರು ೧೦೦೦ಕ್ಕೆ ೪೦ ರಷ್ಟಿದ್ದು ಜನನ ಪ್ರಮಾಣ ಕೊಂಚ ಹೆಚ್ಚಿರುತ್ತದೆ. ಅಭಿವೃದ್ಧಿಯಿಂದ ಮರಣ ಪ್ರಮಾಣ ೧೦೦೦ಕ್ಕೆ ೧೦ರಷ್ಟು ಇಳಿಯಬಲ್ಲದು. ಆಗ ಜನನ ಪ್ರಮಾಣ ಮೊದಲಿನಂತೆಯೇ ಉಳಿದುಕೊಂಡರೆ ಜನಸಂಖ್ಯೆಯ ಬೆಳೆವಣಿಗೆ ಹೆಚ್ಚುವುದು. ಮೊದಲಿನ ಪ್ರಮಾಣ ೧೦೦೦ಕ್ಕೆ ೪೦ರಂತೆ ಇದ್ದರೆ ವರ್ಷಕ್ಕೆ ಶೇಕಡ ೪ರಷ್ಟು ಹೆಚ್ಚಾಗುವುದು. ಇದರಿಂದ ೨೫ ವರ್ಷಗಳಲ್ಲಿ ಜನಸಂಖ್ಯೆ ಎರಡು ಪಟ್ಟು ಹೆಚ್ಚಾಗಬಹುದು. ಆದರೆ ಯಾವುದೇ ದೇಶದಲ್ಲಿ ಜನನ ಪ್ರಮಾಣ ಹೆಚ್ಚಿದ್ದು ಮರಣ ಪ್ರಮಾಣ ಕಡಿಮೆಯಾಗುತ್ತ ಹೋದಂತೆ ಆರ್ಥಿಕ ಬೆಳೆವಣಿಗೆಯ ಪರಿಣಾಮ ಉಂಟಾಗಲಾರದು. ಮೊದಲನೆಯದಾಗಿ ಮಕ್ಕಳ ವಿಷಯದಲ್ಲಿ ವೆಚ್ಚ ಹೆಚ್ಚಾಗುವುದು. ಅಭಿವೃದ್ಧಿ ಪಡೆದ ರಾಷ್ಟ್ರಗಳಲ್ಲಿ ಮಕ್ಕಳ ಪ್ರಮಾಣ ಒಟ್ಟು ಜನಸಂಖ್ಯೆಯಲ್ಲಿ ಶೇ.೧೫ ಅಥವಾ ಶೇ.೨೦ ರಷ್ಟು ಇದ್ದರೆ ಅನಭಿವೃದ್ಧಿ ರಾಷ್ಟ್ರಗಳಲ್ಲಿ ಅವರ ಪ್ರಮಾಣ ಶೇ.೪೦ ರಷ್ಟು ಇರುವುದು. ಇಂಥ ಅಸಮಾನ ಬೆಳೆವಣಿಗೆಯ ಪರಿಣಾಮವಾಗಿ ರಾಷ್ಟ್ರೀಯ ಆದಾಯದಲ್ಲಾದ ಹೆಚ್ಚಳ ಬಂಡವಾಳವಿನಿಯೋಗಕ್ಕೆ ಸಿಗದೆ ಮಕ್ಕಳ ಪೋಷಣೆಗೆ ಉಪಯೋಗಿಸಲ್ಪಡುವುದು. ಜನಸಂಖ್ಯೆ ಹೆಚ್ಚದಿದ್ದರೆ ಇದೇ ಬಂಡವಾಳವನ್ನು ತಲಾ ಆದಾಯದಲ್ಲಿ ಹೆಚ್ಚಳ ಸಾಧಿಸಲು ಉಪಯೋಗಿಸಬಹುದು. ಬಂಡವಾಳಕ್ಕೆ ಆದಾಯದ ಪ್ರಮಾಣ ೪.೧ ಇದ್ದು ಆಗ ದೇಶದ ಜನಸಂಖ್ಯೆ ಶೇ.೧ ರಷ್ಟು ಹೆಚ್ಚಾದರೆ ರಾಷ್ಟ್ರೀಯ ಆದಾಯದ ಶೇ.೪ ರಷ್ಟು ಬಂಡವಾಳವನ್ನು ಶೇ.೨ ಹೆಚ್ಚಾದರೆ ಶೇ.೮ ರಷ್ಟನ್ನು ಜನರ ಜೀವನ ಮಟ್ಟ ಕಾಯ್ದುಕೊಳ್ಳಲು ಉಪಯೋಗಿಸ ಬೇಕಾಗುತ್ತದೆ. ಅದರಿಂದ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ಬಂಡವಾಳ ವಿನಿಯೋಗ ಕೇವಲ 5%ಕ್ಕಿಂತ ಕಡಿಮೆಯಿರುವಾಗ ಜನಸಂಖ್ಯೆ ಶೇ.೨ ಅಥವಾ ಶೇ.೩ ಪ್ರಮಾಣದಲ್ಲಿ ಬೆಳೆಯುವುದರಿಂದ ಜೀವನಮಟ್ಟದಲ್ಲಿ ಕಡಿತವನ್ನು ತಡೆಯುವುದು ಸಾಧ್ಯವಿಲ್ಲ. ಆದರೆ ಸದ್ಯ ದೊರೆಯುವ ಎಲ್ಲ ಪ್ರಮಾಣಗಳ ಪ್ರಕಾರ ಮರಣ ಪ್ರಮಾಣದಲ್ಲಿ ಕಡಿತವಾಗುತ್ತಿದ್ದಂತೆ ಜನನ ಪ್ರಮಾಣ ಕಡಿಮೆಯಾಗುತ್ತ ಹೋಗುವುದನ್ನು ಕಾಣಬಹುದು. ಇದನ್ನು ಖಂಡಿತವಾಗಿ ಹೇಳುವುದು ಕಠಿಣವಾದರೂ ಯುರೋಪ್ ದೇಶಗಳ ಅನುಭವದಂತೆ ಜನನ ಪ್ರಮಾಣ ೩೫-೧೫ಕ್ಕೆ ಇಳಿದಿದೆ. ಇದಕ್ಕೆ ಅನೇಕ ಕಾರಣಗಳನ್ನು ಕೊಡಬಹುದು. ಆರ್ಥಿಕ ಬೆಳೆವಣಿಗೆ ಮುಂದುವರಿದಂತೆ ಜನರ ಜೀವನಮಟ್ಟ ಸುಧಾರಿಸಿ ತಮ್ಮ ಜೀವನಮಟ್ಟವನ್ನು ಕಾಯ್ದುಕೊಳ್ಳುವ ಹಾಗೂ ಮಕ್ಕಳ ಭವಿಷ್ಯದ ಚಿಂತೆ, ಸ್ತ್ರೀಯರಲ್ಲಿಯ ಸ್ವಾತಂತ್ರ್ಯಪ್ರಿಯತೆ ಹಾಗೂ ಮಕ್ಕಳನ್ನು ಪಡೆಯುವುದರಲ್ಲಿ ಅನಾಸಕ್ತಿ, ಮುಂತಾದ ಕಾರಣಗಳಿಂದ ಮರಣ ಪ್ರಮಾಣ ಕಡಿಮೆಯಾಗುತ್ತದೆ. ಯಾವ ಸಮಾಜದಲ್ಲಿ ಹುಟ್ಟಿದ ಮಕ್ಕಳು ೧೦೦ಕ್ಕೆ ೬೦ರಷ್ಟು ಬದುಕಲಾರರೋ ಅಂಥ ಸಮಾಜದಲ್ಲಿ ಬೆಳೆಯಬಹುದಾದ ಮಕ್ಕಳನ್ನು ಪಡೆಯಲು ಹೆಣ್ಣಿನ ಸಾಮಥರ್್ಯದ ಸೀಮೆಯಾದ ಎಂಟು ಮಕ್ಕಳನ್ನು ಪಡೆಯುವುದು ಆವಶ್ಯಕವೆನಿಸುವುದು ಮತ್ತು ಸರಾಸರಿ ಜೀವಮಾನ ಪ್ರಮಾಣ ೬೮ ವರ್ಷಕ್ಕೆ ಮುಟ್ಟಿದೊಡನೆ ಜನಸಂಖ್ಯೆಯ ಜನನ ಮರಣ ಪ್ರಮಾಣಗಳು ೧೦೦೦ಕ್ಕೆ ೧೫ರಷ್ಟು ಆಗಿ ಜನಸಂಖ್ಯೆಯಲ್ಲಿ ಸ್ಥಿರತೆಯುಂಟಾಗುವುದು. ಇವೆಲ್ಲ ಕಾರಣಗಳಿಂದ ಆರ್ಥಿಕ ಬೆಳೆವಣಿಗೆಯಲ್ಲಿ ಜನಸಂಖ್ಯೆಯ ಶೇ.೩ ಅಥವಾ ಶೇ.೪ ರಷ್ಟು ಹೆಚ್ಚಳ ತಾತ್ಕಾಲಿಕವಾದದ್ದು ಎಂದು ಕಂಡುಬರುವುದು. ಆದರೆ ಈ ತಾತ್ಕಾಲಿಕತೆ ದೇಶಗಳಿಗನುಸಾರವಾಗಿ ೨ ಅಥವಾ ೩ ಪೀಳಿಗೆಗಳವರೆಗೆ ಇರುವ ಸಂಭವವಿದೆ. ಜನಸಂಖ್ಯೆಯ ಪ್ರಮಾಣಕ್ಕೂ ದೇಶದ ಸಂಪನ್ಮೂಲಕ್ಕೂ ನಿಕಟ ಸಂಬಂಧವಿದೆ. ಯಾವ ಜನಸಂಖ್ಯೆ ಆ ದೇಶದಲ್ಲಿ ಸಾಧ್ಯವಿದ್ದಷ್ಟೆಲ್ಲ ತಲಾ ಉತ್ಪಾದನೆಯನ್ನು ಹೆಚ್ಚು ಮಾಡಬಲ್ಲುದೋ ಅದು ಯೋಗ್ಯ ಜನಸಂಖ್ಯೆ. ದೊಡ್ಡ ಉದ್ದಿಮೆಗಳ ಸ್ಥಾಪನೆಗೂ ತಜ್ಞತೆಯ ಬೆಳೆವಣಿಗೆಗೂ ದೊಡ್ಡ ಜನಸಂಖ್ಯೆ ಆವಶ್ಯಕ. ಕೇವಲ ಆಹಾರ ಸಾಮಗ್ರಿಗಳ ಕೊರತೆಯಿಂದಾಗಿ ಜನಸಂಖ್ಯೆ ಹೆಚ್ಚಾಗಿದೆ ಎಂದು ಬಗೆಯುವುದು ಸರಿಯಲ್ಲ. ಉದ್ದಿಮೆಗಳನ್ನು ಹೆಚ್ಚಿಸಬಹುದಾದ ಖನಿಜ ಮುಂತಾದ ನೈಸರ್ಗಿಕ ಸಂಪನ್ಮೂಲಗಳು ಸಾಕಷ್ಟಿದ್ದ ದೇಶ ರಫ್ತು ಮೌಲ್ಯವನ್ನು ಹೆಚ್ಚಿಸಿ ಸಮೃದ್ಧಿಯನ್ನು ಪಡೆಯಬಹುದು. ಉದ್ಯೋಗಗಳ ದೃಷ್ಟಿಯಿಂದ ನೋಡಿದರೆ ದೇಶ ಆರ್ಥಿಕ ಬೆಳೆವಣಿಗೆ ಹೊಂದುತ್ತಿದ್ದಂತೆ ಕೃಷಿಯಲ್ಲಿ ನಿರತರಾದ ಜನರ ಪ್ರಮಾಣ ಹೆಚ್ಚುತ್ತ ಸಾಗುವುದು. ಅತಿ ಬಡದೇಶಗಳಲ್ಲಿ ಶೇ.೭೦ ರಷ್ಟು ಜನ ಕೃಷಿಯಲ್ಲಿ ನಿರತರಾಗಿದ್ದರೆ ಅತಿ ಶ್ರೀಮಂತ ರಾಷ್ಟ್ರದಲ್ಲಿ ಶೇ.೧೨-೧೫ ಜನರು ಎಲ್ಲರಿಗೆ ಬೇಕಾದ ಆಹಾರವನ್ನು ಒದಗಿಸಬಲ್ಲರು. ಆದ್ದರಿಂದ ಉದ್ದಿಮೆಗಳಲ್ಲಿ ನಿರತರಾದ ಜನರ ಪ್ರಮಾಣ ಹೆಚ್ಚಾಗುವುದು. ಆರ್ಥಿಕ ಬೆಳೆವಣಿಗೆ ಮುಂದುವರಿದಂತೆ ಉದ್ದಿಮೆಗಳಿಗೆ ಬೇಕಾಗುವ ವಿವಿಧ ಸೇವೆಗಳನ್ನು ಒದಗಿಸುವ ಸ್ವತಂತ್ರ ಕೆಲಸಗಾರರ ಪ್ರಮಾಣ ಹೆಚ್ಚಾಗಿ ಸಮಾಜದಲ್ಲಿ ಕೇವಲ ನೌಕರಿಯಿಂದ ವೇತನಗಳಿಸುವವರ ಸಂಖ್ಯೆ ಕಡಿಮೆಯಾಗುವುದು. ಇದು ಕಾರ್ಲ್ ಮಾಕ್ರ್ಸ್ ಊಹಿಸಿದ ತೀರ ವಿರುದ್ಧವಾದ ಪರಿಸ್ಥಿತಿ ಎಂಬುದನ್ನು ಗಮನಿಸಬಹುದು. ಆರ್ಥಿಕ ಬೆಳೆವಣಿಗೆಯನ್ನು ಉಪಕ್ರಮಿಸುವುದರಲ್ಲಿ ಸರ್ಕಾರ ಮಹತ್ವದ ಪಾತ್ರವನ್ನು ವಹಿಸಬಲ್ಲದೆಂಬುದು ನಿಜವಾದರೂ ಈ ವಿಷಯ ಕೆಲವು ರಾಜಕೀಯ ಪಕ್ಷಪಾತ ದೃಷ್ಟಿಯಿಂದ ಸರಿಯಾಗಿ ಗುರುತಿಸಲ್ಪಡದಿರಬಹುದು. ಆದರೆ ಹಿಂದಿನ ಕಾಲದಲ್ಲಿ ಹಾಗೂ ಇತ್ತೀಚೆಗೆ ಸರ್ಕಾರದ ಪಾತ್ರ ತುಂಬ ಪರಿಣಾಮಕಾರಿಯಾಗಿದೆ ಎಂಬುದನ್ನು ಕಂಡುಕೊಳ್ಳಬಹುದು. ಆರ್ಥಿಕ ಬೆಳೆವಣಿಗೆಯ ಕಾರ್ಯ ತೀರ ವ್ಯಾಪಕವಿರುವುದರಿಂದ ಸರ್ಕಾರದ ಪಾತ್ರಕ್ಕೆ ಹೆಚ್ಚು ಮಹತ್ವ ಬಂದಿರುವುದು. ಸಾಮಾಜಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಜನರ ಮನೋವೃತ್ತಿಗಳನ್ನು ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುಂತೆ ಪರಿವರ್ತಿಸುವಲ್ಲಿ ಆದಾಯದ ಹೆಚ್ಚಳವನ್ನು ಸರಿಯಾಗಿ ವಿತರಣೆ ಮಾಡಿ ಸಾಮಾಜಿಕ ನ್ಯಾಯ ನೀಡುವಲ್ಲಿ, ವ್ಯಾಪಾರೀಚಕ್ರದ ಪರಿಣಾಮಗಳನ್ನು ತಡೆಯುವುದರಲ್ಲಿ, ಸರ್ಕಾರ ದೊಡ್ಡ ಪಾತ್ರವಹಿಸಬಲ್ಲದು. ಸರ್ಕಾರ ಕೈಗೊಳ್ಳಬಹುದಾದ ಹಾಗೂ ಕೆಲವು ದೇಶಗಳಲ್ಲಿ ಕೈಗೊಂಡ, ವ್ಯಾಪಕವಾದ ಉತ್ಪಾದನಾ ಕಾರ್ಯಕ್ರಮದ ವಿಚಾರ ಯೋಜನಾಬದ್ಧ ಆರ್ಥಿಕ ವ್ಯವಸ್ಥೆಯ ಚರ್ಚೆಯಾಗಿ ಪರಿಣಮಿಸುವುದು. ಆರ್ಥಿಕ ಬೆಳೆವಣಿಗೆ ಯಾವ ಉದ್ದೇಶ ಸಾಧನೆಗೂ ತಳಪಾಯವಾಗಬಲ್ಲುದು. ಉದ್ದೇಶಗಳು ಎರಡು ಬಗೆಯಾಗಿರುತ್ತವೆ. ಒಂದು ಸಮಾಜ ಕಲ್ಯಾಣ, ಎರಡು ಯುದ್ಧಸಿದ್ಧತೆ. ಎರಡನೆಯದರ ಉದ್ದೇಶವೂ ಎರಡು ಬಗೆ: ಆತ್ಮರಕ್ಷಣೆ ಮತ್ತು ಆಕ್ರಮಣ. ಈಗಿನ ಕಾಲದಲ್ಲಿ ಯಾವುದೇ ದೇಶವೂ ನೆರೆಯ ದೇಶದಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿದೆ ಎಂದು ಪ್ರಕಟವಾಗಿ ಒಪ್ಪಿಕೊಳ್ಳಲಾರದು. ಆದರೆ ಆರ್ಥಿಕ ಬೆಳೆವಣಿಗೆ ಸೈನಿಕ ಶಕ್ತಿಯ ಹೆಚ್ಚಳಕ್ಕೆ ಅವಕಾಶ ಕೊಡಬಲ್ಲದೆಂಬುದು ನಿರ್ವಿವಾದ. ತಲಾ ಉತ್ಪಾದನೆ ಹೆಚ್ಚಾದಂತೆ ದೇಶದ ಸಾಮಾನ್ಯ ಆರ್ಥಿಕ ವ್ಯವಸ್ಥೆಗೆ ತೊಡಕುಂಟಾಗದಂತೆಯೇ ಸೈನಿಕ ಶಕ್ತಿಯ ಬೆಳೆವಣಿಗೆಗೆ ಸಾಕಷ್ಟು ಶಕ್ತಿ ಸಾಮಗ್ರಿಗಳನ್ನು ತೊಡಗಿಸುವ ಸಾಮರ್ಥನಾಗಿಯೇ ಉಂಟಾಗುವುದು. ಈ ಶಕ್ತಿಯನ್ನು ಪಾತಕ ಕೆಲಸಗಳಿಗೆ ಬಳಸುವುದು ಉಚಿತವಾಗಲಾರದು. ಆದರೆ ಪ್ರಪಂಚದ ಎಲ್ಲ ರಾಷ್ಟ್ರಗಳೂ ತಮ್ಮ ಆರ್ಥಿಕ ಬೆಳೆವಣಿಗೆಯ ಉದ್ದೇಶ ಕೇವಲ ಜನಸಾಮಾನ್ಯರ ಹಿತಸಾಧನೆಯೆಂದು ಘಂಟಾಘೋಷವಾಗಿ ಸಾರುತ್ತಿರುವುವು. ಇನ್ನು ಆರ್ಥಿಕ ಬೆಳೆವಣಿಗೆ ಸಾಮಾನ್ಯವಾದ ಉದ್ದೇಶವೆಂದು ಭಾವಿಸಲಾದ ಸಾರ್ವಜನಿಕ ಕಲ್ಯಾಣವನ್ನು ಎಷ್ಟರಮಟ್ಟಿಗೆ ಕೊಡಬಲ್ಲದು ಎಂಬ ವಿಷಯದಲ್ಲೂ ಒಮ್ಮತ ಸಾಧ್ಯವಿಲ್ಲ. ಅದು ಸಮಾಜದಲ್ಲಿಯ ದುರ್ಲಭ ಸರಕು-ಸೇವೆಗಳ ಹೆಚ್ಚಳವನ್ನು ಸಾಧಿಸುವುದೇನೋ ನಿಜ. ಆದರೆ ಅವು ಮನುಷ್ಯರಿಗೆ ನೀಡಬಹುದಾದ ಸಂತೃಪ್ತಿಯನ್ನೂ ಅವುಗಳಲ್ಲಿ ಆಗಬಹುದಾದ ಬದಲಾವಣೆಗಳನ್ನೂ ತುಲನಾತ್ಮಕವಾಗಿ ಅಳೆದು ನೋಡುವುದು ಅಸಾಧ್ಯ. ಆದರೆ ಹೆಚ್ಚಾಗುತ್ತಿರುವ ರಾಷ್ಟ್ರೀಯ ಆದಾಯದ ವಿತರಣೆ ಸರಿಯಾಗಿ ಯಾರೊಬ್ಬರಿಗೂ ಮೊದಲಿಗಿಂತ ಕಡಿಮೆ ಆದಾಯ ಇರದಂತೆ ಆಗುವಂತಿದ್ದರೆ ಆರ್ಥಿಕ ಬೆಳೆವಣಿಗೆ ಸಮಾಜ ಕಲ್ಯಾಣವನ್ನು ಸಾಧಿಸಿದೆ ಎಂಬುದಕ್ಕೆ ಯಾವ ಅಭ್ಯಂತರವೂ ಇಲ್ಲ. ಇದನ್ನು ಅಳೆದು ತೋರಿಸುವುದು ಅಸಾಧ್ಯವಾದ ಮಾತು. ಆರ್ಥಿಕ ಬೆಳೆವಣಿಗೆ ಸಮಾಜ ಕಲ್ಯಾಣ ಎರಡೂ ಒಂದೇ ಎಂದು ಬಗೆಯಲಾರೆವಾದರೂ ರಾಷ್ಟ್ರೀಯ ಆದಾಯದ ಅಂಕಿ ಸಂಖ್ಯೆಗಳು ಆರ್ಥಿಕ ಬೆಳೆವಣಿಗೆಯ ಪ್ರಾರಂಭಕಾಲದಲ್ಲಿ ಉಪಯುಕ್ತವಾದ ಪ್ರಗತಿಯ ಸೂಚಕಗಳಾಗಿವೆ. ಅಲ್ಲದೆ ಯಾವುದೇ ದೇಶದ ಜನಸಂಖ್ಯೆಯ ಹೆಚ್ಚು ಭಾಗ ಜನರು ಉಪವಾಸ ಸಾಯುವ ಅಥವಾ ಕೇವಲ ಅಸ್ತಿತ್ವ ಮಟ್ಟದಲ್ಲಿರುವಾಗ ರಾಷ್ಟ್ರೀಯ ಆದಾಯದ ಹೆಚ್ಚಳದಿಂದ ಇಂಥ ಜನರ ಪರಿಸ್ಥಿತಿ ಸುಧಾರಿಸಹತ್ತಿದರೆ, ತಲಾ ಆದಾಯದಲ್ಲಿಯ ಹೆಚ್ಚಳ ಅವಶ್ಯವಾಗಿಯೂ ಸಮಾಜ ಕಲ್ಯಾಣ ವೃದ್ಧಿಯ ಸೂಚಕವಾಗಬಲ್ಲದು. ಆರ್ಥಿಕ ಬೆಳೆವಣಿಗೆಯಿಂದ ಜನರು ತಮ್ಮ ಭೌತಿಕ ವಾತಾವರಣಕ್ಕೆ ಹೆಚ್ಚು ದಕ್ಷತೆಯಿಂದ ಹೊಂದಿಕೊಳ್ಳುವುದನ್ನು ಕಾಣಬಹುದು. ಆರ್ಥರ್ ಲೇವಿಸ್ ಎಂಬ ಲೇಖಕ ಹೇಳುವಂತೆ ಆರ್ಥಿಕ ಬೆಳೆವಣಿಗೆ ಪರಿಸ್ಥಿತಿಯ ಮೇಲಿನ ಮನುಷ್ಯನ ಪ್ರಭುತ್ವವನ್ನು ಹೆಚ್ಚಿಸುವುದು. ಈ ವಿಷಯದಲ್ಲಿ ಮನುಷ್ಯನಿಗೂ ನಿಸರ್ಗಕ್ಕೂ ಇರುವ ಪುರಾತನ ಸಂಬಂಧವನ್ನು ಗಮನಿಸಬೇಕು. ಪ್ರಾಚೀನಕಾಲದಲ್ಲಿ ಮನುಷ್ಯ ಮೇಲಿಂದ ಮೇಲೆ ಬರಗಾಲ, ಕ್ರಿಮಿಕೀಟ ಹಾಗೂ ಸಾಂಕ್ರಮಿಕ ರೋಗಗಳಿಗೆ ಗುರಿಯಾಗಬೇಕಾಗುತ್ತಿತ್ತು. ಅವನ ಅರ್ಧದಷ್ಟು ಮಕ್ಕಳು ಹತ್ತುವರ್ಷದವರಾಗು ವಷ್ಟರಲ್ಲಿ ಸಾಯುತ್ತಿದ್ದರು. ನಲವತ್ತು ವರ್ಷಗಳಿಗೇ ಅವನ ಪತ್ನಿಯ ಮುಖದ ಮೇಲೆ ಸುಕ್ಕು ಮೂಡಿ ಮುಪ್ಪಿನ ಛಾಯೆ ಮುಸುಕುತ್ತಿತ್ತು. ಆರ್ಥಿಕ ಬೆಳೆವಣಿಗೆ ಇಂಥ ದಾಸ್ಯದಿಂದ ಪಾರಾಗುವ ಸಾಮರ್ಥ್ಯವನ್ನು ಕೊಡಬಲ್ಲುದು. ಸ್ತ್ರೀಯರಿಗಂತೂ ಆರ್ಥಿಕ ಬೆಳೆವಣಿಗೆಯ ಪ್ರಯೋಜನ ಅಷ್ಟಿಷ್ಟಲ್ಲ. ಹಿಂದುಳಿದ ಸಮಾಜಗಳಲ್ಲಿ ಸ್ತ್ರೀಯರು ಕೇವಲ ಮನೆಯಲ್ಲಿ ದುಡಿಯುವ, ತಾಸುಗಟ್ಟಲೆ ಬೀಸುವ, ಮೈಲುಗಟ್ಟಲೆ ಹೋಗಿ ನೀರುತರುವ ಮುಂತಾದ ಕೆಲಸಗಳಲ್ಲಿ ಜೀವನ ಕಳೆಯುವರು. ಆರ್ಥಿಕ ಬೆಳೆವಣಿಗೆ ಅವರನ್ನು ಇಂಥ ಕೆಲಸಗಗಿಂತ ಹೆಚ್ಚು ಆಕರ್ಷಕವಾದ ಮಕ್ಕಳಿಗೆ ಪಾಠ ಹೇಳುವುದು, ರೋಗಿಗಳನ್ನು ಉಪಚರಿಸುವುದು ಅಥವಾ ಮಾರುಕಟ್ಟೆಗಳಲ್ಲಿ ದುಡಿಯುವುದೇ ಮೊದಲಾದ ಕೆಲಸಗಳಿಗೆ ವರ್ಗಾಯಿಸಬಲ್ಲದು. ಇದರಿಂದ ಅವರು ಬೇಸರ ತರುವಂಥ ಶ್ರಮ ಹಾಗೂ ಏಕಾಂಗಿಜೀವನದಿಂದ ಮುಕ್ತರಾಗಿ ಬುದ್ಧಿಯ ಉಪಯೋಗವನ್ನು ಪುರುಷರಂತೆಯೇ ಸಾಧಿಸುವ ಅವಕಾಶವನ್ನು ಪಡೆಯುವರು. ಆದರೆ ಆರ್ಥಿಕ ಬೆಳೆವಣಿಗೆಯಿಂದ ಉಂಟಾಗುವ ಕೆಲವು ಮೂಲಭೂತ ಬದಲಾವಣೆ ಗಳನ್ನು, ಭೌತಿಕ ಸಂಪನ್ಮೂಲಗಳ ಹೆಚ್ಚು ಹೆಚ್ಚು ಉಪಯೋಗವನ್ನು, ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದಲೂ, ಸಾಮಾಜಿಕ ದೃಷ್ಟಿಯಿಂದಲೂ ಕೆಲವು ಲೇಖಕರು ಪ್ರಶ್ನಿಸುತ್ತಾರೆ. ಒಬ್ಬ ಹೇಳುವಂತೆ, ನಮ್ಮ ಅರ್ಥ ವ್ಯವಸ್ಥೆ ಸದ್ಯದಲ್ಲಿ ವಿಸ್ತರಿಸುತ್ತಿರುವ ರೀತಿ ಮುಂದಿನ ಜನಾಂಗಗಳನ್ನು ಅವನತಿಗೆ ಗುರಿಮಾಡಬಲ್ಲುದು. ಅದು ಕೇವಲ ಮಣ್ಣಿನ ಫಲವತ್ತತೆಯನ್ನು, ಗಣಿಗಳನ್ನು ಬರಿದು ಮಾಡುವುದಷ್ಟೇ ಅಲ್ಲ; ಅದಕ್ಕಿಂತ ಮಹತ್ವದ್ದೆಂದರೆ ಈ ದಿನಗಳಲ್ಲಿ ಆರ್ಥಿಕ ವ್ಯವಸ್ಥೆ ಮುಂದುವರಿಯಲು ಅಡಿಗಲ್ಲಿನಂತರುವ ಸಾಮಾಜಿಕ, ನೈತಿಕ ಮಟ್ಟಗಳನ್ನು ಸವೆಸಿಬಿಡುತ್ತದೆ. ಆರ್ಥಿಕ ಬೆಳೆವಣಿಗೆ ಎಷ್ಟರಮಟ್ಟಿಗೆ ಸಾಮಾಜಿಕ ಅವ್ಯವಸ್ಥೆಗೆ ಕಾರಣವಾಗುವುದೆಂಬುದನ್ನು ಅಳೆಯುವಂಥ ಯಾವುದೇ ಪ್ರಮಾಣ ಸಿಗಲಾರದು. ಉತ್ಸಾಹ ಹಾಗೂ ಪ್ರೇರಣ ಶಕ್ತಿಯಿಂದ ಕೂಡಿದ ತರುಣನ ಭಾವನಾಮಯ ಜೀವನ ಪಟ್ಟಣಗಳ ಔದ್ಯೋಗಿಕ ಸಮಾಜದಲ್ಲಿ ಯಾವ ರೀತಿಯಿಂದ ಹೆಚ್ಚು ಹೆಚ್ಚಾಗಿ ನಿರಾಶೆಯನ್ನುಂಟುಮಾಡುವ ಮಾನಸಿಕ ಹಾಗೂ ಸಾಮಾಜಿಕ ವಾತಾವರಣಕ್ಕೆ ಹೆಚ್ಚು ಹೆಚ್ಚಾಗಿ ಹೊಂದಿಕೊಳ್ಳುವಂತೆ ಬದಲಾವಣೆಗಳನ್ನುಂಟುಮಾಡುತ್ತಿದೆ ಎಂಬುದನ್ನು ಒಬ್ಬ ವಿದ್ವಾಂಸ ಎತ್ತಿತೋರಿಸಿದ್ದಾನೆ. ಇಂಥ ತೊಡಕುಗಳನ್ನು ಸರಿಯಾಗಿ ಶೋಧಿಸುವ ಹಾಗೂ ಅಳೆಯುವ ಸಾಧನೆಗಳು ಪರಿಪುರ್ಣವಿಲ್ಲದಾಗ ಆರ್ಥಿಕ ಕಾರ್ಯಸಾಮರ್ಥ್ಯದೊಡನೆ ಇವುಗಳ ಸಂಬಂಧವನ್ನು ತೋರಿಸುವುದು ಅಸಾಧ್ಯ. ಆದರೆ ಇಂಥ ವ್ಯವಸ್ಥೆಗೆ ಪರಿವರ್ತನೆಗೊಳ್ಳುತ್ತಿರುವಂಥ ಸಮಾಜಗಳಲ್ಲಿ ಕಂಡುಬರುತ್ತಿರುವುದರಿಂದ ಆರ್ಥಿಕ ಬೆಳೆವಣಿಗೆಗೆ ಮನುಷ್ಯ ಮಾನಸಿಕವಾಗಿ ಹೆಚ್ಚಿನ ಬೆಲೆ ತೆರಬೇಕಾಗುವುದೆಂಬುದನ್ನು ತೋರಿಸುತ್ತವೆ. ಆರ್ಥಿಕ ಬೆಳೆವಣಿಗೆಯು ನಿಜವಾದ ಪ್ರಗತಿಯನ್ನುಂಟುಮಾಡಬಹುದೇ? ಎಂಬ ವಿಷಯವಾಗಿ ಅನೇಕ ಪ್ರಶ್ನೆಗಳು ಉದ್ಭವಿಸಿವೆ. ಆರ್ಥಿಕ ಬೆಳೆವಣಿಗೆ ನೈತಿಕ ದೃಷ್ಟಿಯಿಂದ ಒಳ್ಳೆಯದೆ? ಅದು ಯುದ್ಧ ಸಾಮಗ್ರಿಗಳನ್ನು ಉತ್ಪಾದಿಸುವ ಸಾಧನವಾದರೆ ಅಥವಾ ಆಟಮ್ಬಾಂಬ್, ಹೈಡ್ರೊಜನ್ ಬಾಂಬುಗಳ ಉತ್ಪಾದನೆಗೆ ಉಪಯೋಗಿಸಲ್ಪಟ್ಟರೆ ಅಂಥ ಆರ್ಥಿಕ ಬೆಳೆವಣಿಗೆಯ ನೈತಿಕ ಬೆಲೆಯೇನು? ಅದು ಕ್ಷುಲ್ಲಕವಾದ ನಾಟಕಗಳನ್ನಾಗಲಿ, ಪತ್ತೇದಾರಿ ಕಾದಂಬರಿಗಳನ್ನಾಗಲಿ ಕೆಳದರ್ಜೆಯ ಸಾಮಾನ್ಯ ಸಂಗೀತವನ್ನಾಗಲಿ ಹೆಚ್ಚಿಸುವಂಥಾದರೆ ಅಂಥ ಆರ್ಥಿಕ ಬೆಳೆವಣಿಗೆ ಎಷ್ಟರಮಟ್ಟಿಗೆ ಸಾರ್ಥಕ? ಸಮಾಜದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನ ಹಾಗೂ ಸೌಂದರ್ಯ ಮೌಲ್ಯಗಳನ್ನು ಕಡೆಗಣಿಸುವಂಥ ಭೌತಿಕ ದೃಷ್ಟಿಕೋನವನ್ನು ಬೆಳೆಸುವುದು ಎಷ್ಟರಮಟ್ಟಿಗೆ ಯೋಗ್ಯವೆನಿಸಿತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಪ್ರತಿಯೊಂದು ವ್ಯಕ್ತಿಯ ಸ್ವಂತ ವಿಚಾರಶಕ್ತಿ ಹಾಗೂ ಅವನ ಹಿನ್ನೆಲೆಗಳನ್ನು ಅವಲಂಬಿಸಿರುವುದು. ಬೋಲ್ಡಿಂಗ್ ಹೇಳುವಂತೆ ಆರ್ಥಿಕ ಬೆಳೆವಣಿಗೆ ನಮಗೆ ಬೇಕಾದುದನ್ನು ದೊರಕಿಸಿಕೊಳ್ಳುವ ಸಾಮಥರ್್ಯವನ್ನು ಕೊಡುವುದು. ನಾವು ಅಪಾಯಕಾರಿ ವಸ್ತುಗಳನ್ನೇ ಬಯಸಿದರೆ ಅವುಗಳನ್ನೇ ದೊರಕಿಸಿಕೊಟ್ಟು ನಮ್ಮ ನಾಶಕ್ಕೆ ನಾವೇ ದಾರಿಮಾಡಿಕೊಳ್ಳುವಂತೆ ಮಾಡಬಲ್ಲುದು. ಆರ್ಥಿಕ ಬೆಳೆವಣಿಗೆಯ ಮೌಲ್ಯ ಆಯಾ ಯುಗಧರ್ಮದಿಂದ ನಿರ್ಣಯಿಸಲ್ಪಡಬಹುದು. ಯುದ್ಧಗಳೇ ಸಾಮಾನ್ಯವಾಗಿರುವಂಥ ಪ್ರಪಂಚದಲ್ಲಿ ರಾಷ್ಟ್ರೀಯ ಪ್ರಭುತ್ವವನ್ನು ರಕ್ಷಿಸುವುದು ಉಳಿದೆಲ್ಲ ವಿಚಾರಕ್ಕಿಂತ ಮಹತ್ವದ್ದೆಂದು ಹಲವರ ಅಭಿಪ್ರಾಯ. ವಸ್ತುಗಳ ಮೌಲ್ಯಗಳನ್ನು ಒಂದೇ ದೃಷ್ಟಿಯಿಂದ ಅಳೆಯುವುದೂ ಸಾಧ್ಯವಿಲ್ಲ. ಆಧ್ಯಾತ್ಮಿಕ ಮೌಲ್ಯಗಳೂ ಸೌಂದರ್ಯ ದೃಷ್ಟಿ ಮೌಲ್ಯಗಳೂ ಭೌತಿಕ ಮೌಲ್ಯಗಳೊಡನೆ ಕೆಲವು ಸಲ ಹೊಂದಿಕೊಳ್ಳಲೂಬಹುದು. ಅದರಿಂದ ಈ ಎಲ್ಲ ಪ್ರಶ್ನೆಗಳನ್ನು ಬೇರೆ ದೃಷ್ಟಿಕೋನದಿಂದಲೂ ನೋಡಬೇಕು. ಇವೆಲ್ಲ ವಾದಗಳಿಗಿಂತ ಹೆಚ್ಚು ಪ್ರಬಲವಾದ ವಾದವೆಂದರೆ, ಸದ್ಯದ ಜಗತ್ತಿನ ಬಹು ದೊಡ್ಡಭಾಗ ಎದುರಿಸುತ್ತಿರುವ ಗಂಡಾಂತರವನ್ನುಂಟುಮಾಡಬಹುದಾದ ಸಮಸ್ಯೆಯೆಂದರೆ ಅಲ್ಲಿಯ ಜನಸಾಮಾನ್ಯರ ಉಪವಾಸ ಮಟ್ಟದಲ್ಲಿರುವ ಜೀವನಕ್ಕೂ ಅವರೇ ತಿಳಿದುಕೊಳ್ಳಹತ್ತಿರುವ ಕನಿಷ್ಠ ಜೀವನಮಟ್ಟಕ್ಕೂ ಇರುವ ಅಂತರವನ್ನು ಕಡಿಮೆ ಮಾಡುವುದೇ ಆಗಿದೆ. ಅಲ್ಲದೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದ ವಿಚಾರ, ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ಮೌಲ್ಯಗಳ ಬಗ್ಗೆ ನಿರ್ಣಯಿಸುವುದು ಅನಿವಾರ್ಯವಾಗುತ್ತದೆ. ಇಂಥ ಮೌಲ್ಯಗಳನ್ನು ಶಾಸ್ತ್ರೀಯ ಪದ್ಧತಿಯಿಂದ ಪ್ರಮಾಣೀಕರಿಸುವುದಾಗಲಿ ಖಂಡಿಸುವುದಾಗಲಿ ಸಾಧ್ಯವಿಲ್ಲ. ಬೋಲ್ಡಿಂಗ್ ಹೇಳುವಂತೆ ಅಂತಿಮಗುರಿಯ ವಿಮರ್ಶೆ, ಅಂದರೆ ಯಾವುದು ಸರಿಯಾದ ಇಚ್ಛೆ ಎಂಬ ವಿಷಯದ ಅಭ್ಯಾಸ ಅರ್ಥಶಾಸ್ತ್ರದ ವಿಶ್ಲೇಷಣೆಯ ನಕ್ಷೆಯೊಳಗಿನ ವಿಚಾರವಲ್ಲ. ಅದು ನಿಜವಾಗಿ ಮನುಷ್ಯನ ಪ್ರಜ್ಞೆಯ ವಿಷಯವೇ ಹೊರತು ತಿಳಿವಳಿಕೆಯಿಂದ ಹುಟ್ಟುವುದಿಲ್ಲ; ಧರ್ಮವಿಷಯವೇ ಹೊರತು ಶಾಸ್ತ್ರ ವಿಷಯವಲ್ಲ.