ವಿಷಯಕ್ಕೆ ಹೋಗು

ಆರ್ತೊಸಿಫೊನ್ ಸ್ಟಾಮಿನಿಯಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್ತೊಸಿಫೊನ್ ಸ್ಟಾಮಿನಿಯಸ್
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
O. stamineus
Binomial name
ಆರ್ತೊಸಿಫೊನ್ ಸ್ಟಾಮಿನಿಯಸ್

ಆರ್ತೊಸಿಫೊನ್ ಸ್ಟಾಮಿನಿಯಸ್ ಸುಂದರವಾದ ನಸುನೀಲಿ ಬಣ್ಣದ ಹೂಗಳನ್ನು ಬಿಡುವ ಬಹುವಾರ್ಷಿಕ ಸಸ್ಯ. ಉದ್ಯಾನವನದ ಮಡಿ ಮತ್ತು ಕುಂಡ ಸಸ್ಯ ಮತ್ತು ಕಲ್ಲೇರಿ ಸಸ್ಯವಾಗಿ ಬೆಳೆಸುತ್ತಾರೆ. ಕುಂಡದಲ್ಲಿ ಬೆಳೆಸಿ ಮನೆಯಮುಂದೆ ಇಟ್ಟರೆ ಮನಮೋಹಕವಾಗಿರುತ್ತದೆ. ಹೂವಿನಲ್ಲಿರುವ ಉದ್ದವಾದ ಬಿಳಿಯ ಕೇಸರಗಳ ಸೊಗಸಿಗಾಗಿ ಈ ಗಿಡಗಳು ಪ್ರಸಿದ್ಧಿ ಪಡೆದಿವೆ. ಆರ್ತೊಸಿಫೊನ್ ಜಾತಿಯಲ್ಲಿ ೧೦೦ಕ್ಕೂ ಹೆಚ್ಚು ಕುಳ್ಳಾದ ಬಹುವಾರ್ಷಿಕ ಪರ್ಣಸಸಿ ಪ್ರಭೇದಗಳುಂಟು. ಆದರೆ ಇವುಗಳ ಪೈಕಿ ಅರ್ತೊಸಿಫೊನ್ ಸ್ಟಾಮಿನಿಯಸ್ ಎಂಬುದು ಬಹು ಅಲಂಕಾರವಾದ ಹೂ ಬಿಡುವುದರಿಂದ ಉದ್ಯಾನಗಾರಿಕೆಯಲ್ಲಿ ಪ್ರಾಮುಖ್ಯ ಪಡೆದಿದೆ. ನಾಲ್ಕುಮುಖದ ಇದರ ಕಾಂಡದ ಮೇಲೆ ನವುರಾದ ರೋಮಗಳುಂಟು. ಎಲೆಯ ತೊಟ್ಟಿದೆ; ಅದು ವೃತ್ತಾಕಾರದ ಜೋಡಣೆಯಲ್ಲಿದೆ. ಕರನೆಯಾಕಾರದ ಹಲ್ಲು ಅಂಚುಳ್ಳ ಅವುಗಳ ತುದಿ ಚೂಪಾಗಿದೆ. ಹೂಗೊಂಚಲು ತುದಿಯಲ್ಲಿದ್ದು ವಿಶೇಷವಿಧದ್ದಾಗಿದೆ. ಹೂತೊಟ್ಟಿಲ್ಲದ ದ್ವಿಲಿಂಗ ಪುಷ್ಪ, ನಸುನೀಲಿ ಬಣ್ಣದ ಹೂ ಪುಷ್ಪಪತ್ರ; ದಳಗಳಿಗೆ ಎರಡು ತುಟಿ ಇವೆ. ಮೇಲು ತುಟಿ ೩-೪ ಭಾಗವಾಗಿಯೂ ಕೆಳತುಟಿ ದೋಣಿಯಾಕಾರವಾಗಿಯೂ ಇದೆ. ೪ ಕೇಸರಗಳು ಬಿಳಿಬಣ್ಣವಾಗಿದ್ದು, ದಾರದಂತೆ ಉದ್ದವಾಗಿರುವುದರಿಂದ ಸುಂದರವಾಗಿ ಕಾಣುತ್ತದೆ. ಅಂಡಾಶಯ ೪ ಕೋಶಗಳುಳ್ಳದ್ದು. ಅರ್ತೊಸಿಫೊನ್ ಸಸ್ಯಗಳನ್ನು ಬೀಜ ಮತ್ತು ಕಾಂಡದ ತುಂಡುಗಳಿಂದ ವೃದ್ಧಿಮಾಡಬಹುದು. ಅರ್ತೊಸಿಫೊನ್ ಬಹುವಾರ್ಷಿಕ ಸಸ್ಯಗಳನ್ನು ಬೀಜಗಳಿಂದ ವೃದ್ಧಿಮಾಡುವಾಗ ಹೂ ಬಿಟ್ಟ ಅನಂತರ ಕಿತ್ತುಹಾಕಿ ಏಕ ಋತುವಿನ ಸಸ್ಯಗಳಂತೆ ಬೆಳೆಸುತ್ತಾರೆ. ಫಲವತ್ತಾದ ಮಣ್ಣಿನಲ್ಲಿ ಇವು ಸಮೃದ್ಧಿಯಾಗಿ ಬೆಳೆಯುತ್ತವೆ. ಸರಾಗವಾಗಿ ಗಾಳಿ ಮತ್ತು ಬೆಳಕು ಬರುವ ನೆರಳು ಅಥವಾ ಪಾರ್ಶ್ವನೆರಳಿನಲ್ಲಿ ಇವುಗಳ ಬೇಸಾಯ ಯಶಸ್ವಿಯಾಗುತ್ತದೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]