ಆರ್ಕಿಯೊಮ್ಯಾಗ್ನೆಟಿಸಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುರಾತನ ವಸ್ತುಗಳ ಕಾಲನಿರ್ಧಾರ ಮಾಡಬಹುದಾದ ಇತ್ತೀಚಿನ ವೈಜ್ಞಾನಿಕ ವಿಧಾನ. ಇದಕ್ಕೆ ರೆಮ್ನಂಟ್ ಮ್ಯಾಗ್ನೆಟಿಸಂ ಎಂದು ಹೆಸರು (ಪುರಾ ಕಾಂತೇಯತೆ). ಪ್ರಪಂಚದ ಕಲ್ಲು ಮಣ್ಣುಗಳಲ್ಲೆಲ್ಲ ಕಬ್ಬಿಣದ ಆಕ್ಸೈಡ್ಗಳಿರುವುದರಿಂದ ಅವುಗಳು ಸೂಕ್ಷ್ಮವಾದರೂ ಸಾಕಷ್ಟು ಶಕ್ತಿಯುತವಾದ ಕಾಂತತ್ವವನ್ನು ಪಡೆದಿರುತ್ತವೆ. ಒಮ್ಮೆ ಈ ಪದಾರ್ಥಗಳನ್ನಾಗಲಿ ಅವುಗಳಿಂದ ತಯಾರಿಸಲ್ಪಟ್ಟ ವಸ್ತುಗಳನ್ನಾಗಲಿ ಬೆಂಕಿಯಲ್ಲಿ ಕಾಯಿಸಿದರೆ ಆಕರ್ಷಣ ಶಕ್ತಿ ನಶಿಸಿಹೋಗುತ್ತದೆ. ಈ ಆಕರ್ಷಣಶಕ್ತಿ ಪುರಾತನ ಅವಶೇಷಗಳಲ್ಲಿ ಬಹಳ ಮುಖ್ಯ. ಹೆಚ್ಚಿಗೆ ದೊರೆಯುವ ಮಡಕೆ ಚೂರುಗಳಲ್ಲಿ ೬೭೫೦ಸೆಂ.ಗ್ರೇಡಿಗಿಂತ ಹೆಚ್ಚಿನ ಉಷ್ಣತೆಯಲ್ಲಿ ಈ ಶಕ್ತಿ ಪುರ್ಣವಾಗಿ ನಾಶ ಹೊಂದುತ್ತದೆ. ಇದಕ್ಕೆ ಕ್ಯೂರಿಪಾಯಿಂಟ್ ಎಂದು ಹೆಸರು. ಅನಂತರ ಈ ವಸ್ತುಗಳು ನಿಧಾನವಾಗಿ ಆರುತ್ತಿರುವಾಗ ಅಲ್ಲಿನ ಭೂಮಿಯ ಆಕರ್ಷಣ ಶಕ್ತಿಯ ಸಾಂದ್ರತೆಯನ್ನೂ ದಿಕ್ಕನ್ನೂ ಪುನಃ ಪಡೆಯುತ್ತವೆ. ಆದರೆ ಭೂಮಿಯ ಆಕರ್ಷಣದ ಸಾಂದ್ರತೆ ಮತ್ತು ದಿಕ್ಕು ಕಾಲ ಕಾಲಕ್ಕೆ ಬದಲಾಗುವುದರಿಂದ ಆ ವ್ಯತ್ಯಾಸ ಆ ವಸ್ತುಗಳಲ್ಲೂ ಪ್ರತಿಬಿಂಬಿತವಾಗುತ್ತದೆ. ಭೂಮಿಯ ನಿಜಧ್ರುವಗಳ ದಿಕ್ಕಿನಿಂದ ಹಲವು ವರ್ಷಗಳ ಅಂತರದಲ್ಲಿ ತಕ್ಕಮಟ್ಟಿಗೆ ಬದಲಾಗುತ್ತಿರುವ ಆಕರ್ಷಣದ ದಿಕ್ಕು ಮತ್ತು ವಿವಿಧ ಪ್ರದೇಶಗಳ ಆಕರ್ಷಣದ ಸಾಂದ್ರತೆಯ ಒಂದು ನಕ್ಷೆಯನ್ನು ತಯಾರಿಸಿಕೊಂಡು ಪ್ರಾಕ್ತನ ಅವಶೇಷಗಳ ಕಾಂತತ್ವದ ಸಾಂದ್ರತೆ ಮತ್ತು ದಿಕ್ಕುಗಳನ್ನು ಪ್ರಯೋಗಶಾಲೆಯಲ್ಲಿ ಅಳೆದು ನಿರ್ಧರಿಸಿಕೊಂಡು ನಕ್ಷೆಯೊಡನೆ ಹೋಲಿಸಿದ್ದೇ ಆದರೆ ಆ ಅವಶೇಷಗಳು ಕಡೆಯದಾಗಿ ಯಾವ ಕಾಲದಲ್ಲಿ ಕಾಯಿಸಲ್ಪಟ್ಟ ವೆಂಬುದನ್ನು ಸ್ವಲ್ಪ ಹೆಚ್ಚು ಕಡಿಮೆ ನಿರ್ಧರಿಸಬಹುದು. ಪುರಾತತ್ತ್ವ ಸಂಶೋಧಕರಿಗೆ ಇದರ ಅಗತ್ಯ ಹೆಚ್ಚು. ಈ ಕಾಲನಿರ್ಣಾಯಕ ಪದ್ಧತಿಗೆ ಹಲವು ಬಾಧಕಗಳಿದ್ದರೂ ಪುರಾತತ್ತ್ವ ಶೋಧಕರಿಗೆ ಅದರಿಂದ ಹೆಚ್ಚು ಸಹಾಯವಾಗಿದೆ. ಈ ಪದ್ಧತಿಯನ್ನು ಪ್ಯಾರಿಸ್ ವಿಶ್ವವಿದ್ಯಾಲಯದ ಇಥೆಲ್ಲೀರ್, ಇಂಗ್ಲೆಡಿನ ಕೇಂಬ್ರಿಜ್ ವಿಶ್ವವಿದ್ಯಾಲಯದ ಆರ್. ಇ. ಕುಕ್ ಮತ್ತು ಜೆ. ಸಿ. ಬೆಲ್ ರವರೂ ಬೇರೆ ಬೇರೆಯಾಗಿ ಏಕಕಾಲದಲ್ಲಿ ನಿರೂಪಿಸಿದರು. ಈ ಪದ್ಧತಿಯನ್ನು ಉತ್ತಮಗೊಳಿಸಲು ಹೆಚ್ಚಿನ ಸಂಶೋಧನೆಗಳು ಮುಂದುವರಿದಿವೆ.