ಆರ್ಕನಿ ದ್ವೀಪಗಳು

ವಿಕಿಪೀಡಿಯ ಇಂದ
Jump to navigation Jump to search

ಸ್ಕಾಟ್ಲೆಂಡಿನ ಉತ್ತರ ಕರಾವಳಿಗೆ ೧೦೨ ಕಿಮೀ ದೂರದಲ್ಲಿವೆ (೫೯೦ ಉ.ಅ. ಮತ್ತು ೩೦ ಪ.ಶೀ). ಇವು ೯೦ಕ್ಕಿಂತಲೂ ಹೆಚ್ಚು ದ್ವೀಪಗಳಿಂದ ಕೂಡಿದ ದ್ವೀಪಸ್ತೋಮ. ಇವುಗಳಲ್ಲಿ ೨೪ ದ್ವೀಪಗಳಲ್ಲಿ ಮಾತ್ರ ಜನ ವಾಸಿಸುತ್ತಾರೆ. ಕೆಲವು ದ್ವೀಪಗಳಲ್ಲಿ ಏಕಸ್ವಾಮ್ಯಕೃಷಿಯನ್ನು ಕಾಣಬಹುದು. ಭೂಮಿ ತಗ್ಗು, ನೆಲ ಕಲ್ಲು. ಏನೂ ಬೆಳೆಯದಷ್ಟು ಬಂಜರು. ಮೀನುಗಾರಿಕೆಯೂ ಒಂದು ಉದ್ಯೋಗವಾಗಿದೆ. ಇವುಗಳಲ್ಲಿ ಪೊಮೋನ (ಮೇನ್ ಲ್ಯಾಂಡ್) ಅತಿ ದೊಡ್ಡದು. ಕಿರ್ಕ್ವಾಲ್ ಹಾಗೂ ಸ್ಟ್ರಾಂನೆಸ್ ಮುಖ್ಯ ಪಟ್ಟಣಗಳು. ಕಿರ್ಕ್ವಾಲ್ನಲ್ಲಿ ಹಿಂದಿನ ಕಾಲದ (೧೧-೧೨ನೆಯ ಶತಮಾನದ) ಚರ್ಚುಗಳನ್ನೂ ಶ್ರೀಮಂತರ ನಿವಾಸಗಳನ್ನೂ ಕಾಣಬಹುದು. ಅವುಗಳಲ್ಲಿ ಅನೇಕ ಕಟ್ಟಡಗಳು ಅವಶೇಷಗಳಾಗಿ ಉಳಿದಿವೆ. ಚರಿತ್ರಪುರ್ವ ಕಾಲದ ಶಿಲಾ ಮತ್ತು ಕಂಚುಯುಗಗಳ ಅವಶೇಷಗಳೂ ಹೇರಳವಾಗಿವೆ. ಇಲ್ಲಿಯ ವಾಯುಗುಣ ಶೀತವಲಯದ್ದಾದರೂ ಚಳಿಗಾಲದಲ್ಲಿ ಇಲ್ಲಿಗೆ ಸಮೀಪದಲ್ಲಿ ಹರಿಯುವ ಉತ್ತರ ಅಟ್ಲಾಂಟಿಕ್ ಡ್ರಿಫ್ಟ್ ಎಂಬ ಉಷ್ಣೋದಕ ಪ್ರವಾಹ ಮತ್ತು ಪಶ್ಚಿಮ ಮಾರುತಗಳು ಚಳಿಯನ್ನು ಬಹುಮಟ್ಟಿಗೆ ಕಡಿಮೆಮಾಡುತ್ತವೆ. ಬೇಸಗೆಯ ಅವಧಿ ಕೆಲವೇ ವಾರಗಳು ; ಆದರೂ ವಾಯುಗುಣ ಹಿತಕರವಾಗಿರುತ್ತದೆ. ಆರ್ಕನಿ ದ್ವೀಪಗಳಲ್ಲಿ ದೊರಕುವ ಹಸುರು ಮತ್ತು ಕೆಂಪು ಮರಳು ಕಲ್ಲುಗಳು ಕಟ್ಟಡಗಳ ಕೆಲಸಕ್ಕೆ ಅನುಕೂಲವಾಗಿವೆ. ಕೆಲವೇ ಕಡೆಗಳಲ್ಲಿ ಕಾಣಸಿಗುವ ಮರಳುಮಿಶ್ರಿತ ಮೆಕ್ಕಲುಮಣ್ಣು ಫಲವತ್ತಾದ್ದು ; ಓಟ್ಸ್, ಬಾರ್ಲಿ, ಆಲೂಗಡ್ಡೆ ಮುಖ್ಯ ಕೃಷಿ ಉತ್ಪಾದನೆಗಳು. ಪಶುಪಾಲನೆಯಿಂದ ಹಾಲು, ಮಾಂಸ, ಮೊಟ್ಟೆ ಮುಂತಾದ ಆಹಾರ ಪದಾರ್ಥಗಳು ದೊರಕುತ್ತವೆ. ಅಗಾಧಪ್ರಮಾಣದಲ್ಲಿ ಪ್ರಾಣಿಗಳ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಜನಸಂಖ್ಯೆ ೧೯,೨೪೫ (೨೦೦೧). ಕಿರ್ಕ್ವಾಲ್ನಲ್ಲಿ ಸುಮಾರು ೪೪ ಸಾವಿರ ಜನರೂ ಸ್ಟ್ರಾಂನೆಸ್ನಲ್ಲಿ ಸುಮಾರು ೧೪ ಸಾವಿರ ಜನರೂ ಇದ್ದಾರೆ. ಉತ್ತರ ದ್ವೀಪಗಳಿಂದ ಮತ್ತು ಅಬರ್ಡೀನ್ನಂಥ ಮುಖ್ಯಪಟ್ಟಣಗಳಿಂದ ಕಿರ್ಕ್ವಾಲ್ಗೆ ಕೆಲವು ನಿರ್ದಿಷ್ಟ ವೇಳೆಯಲ್ಲಿ ನೌಕಾಯಾನ ಸಂಪರ್ಕವಿದೆ.