ಆರೋರೂಟ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಸಸ್ಯಜನ್ಯ ಪಿಷ್ಠ; ರೂಢನಾಮ ಸಬ್ಬಕ್ಕಿ. ಅನೇಕ ತರಹ ಸಸ್ಯಗಳು ತಮ್ಮ ಗೆಡ್ಡೆಗೆಣಸುಗಳಲ್ಲಿ ಶೇಖರಿಸುವ ಪಿಷ್ಟ ಪದಾರ್ಥ ಇದರ ಮೂಲ. ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಸಬ್ಬಕ್ಕಿ ಮಾರಾಂಟ ಮತ್ತು ಕರ್ಕ್ಯೂಮ ಎಂಬ ಸಸ್ಯಗಳ ಪಿಷ್ಟ ಮೂಲಗಳಿಂದ ದೊರೆತದ್ದು. ಬೇರೆ ಬೇರೆ ಜಾತಿಯ ಇನ್ನಿತರ ಸಸ್ಯಗಳ ಪಿಷ್ಟ ಮೂಲಗಳನ್ನೂ ಸಬ್ಬಕ್ಕಿಯ ತಯಾರಿಕೆಯಲ್ಲಿ ಉಪಯೋಗಿಸುವುದುಂಟು. ಅಂಗಡಿಗಳಲ್ಲಿ ದೊರೆಯುವ ಸಬ್ಬಕ್ಕಿ ರಾಗಿ ಕಾಳಿನ ಪ್ರಮಾಣದಲ್ಲಿದೆ. ಬಣ್ಣ ಬಿಳುಪು. ನೀರಿನಲ್ಲಿ ಕುದಿಸಿದಮೇಲೆ ಬಿಳುಪು ಬಣ್ಣ ಬದಲಾಗಿ ಬಣ್ಣವೇ ಇಲ್ಲದ ಸ್ಪರ್ಶಿಸಿದರೆ ನುಣುಚಿಕೊಳ್ಳುವ ಪದಾರ್ಥವಾಗಿ ಮಾರ್ಪಾಟು ಹೊಂದುತ್ತದೆ. ರೋಗಿಗಳ ಗಂಜಿಗೂ ಇನ್ನಿತರ ಅಡಿಗೆ ಪದಾರ್ಥಗಳ ತಯಾರಿಕೆಯಲ್ಲೂ ಇದನ್ನು ಬಳಸುವರು. ಅಂಗರಾಗಚೂರ್ಣ ಮತ್ತು ಇತರ ಅಲಂಕಾರ ಸಾಮಗ್ರಿಗಳ ತಯಾರಿಕೆಯಲ್ಲೂ ಇದನ್ನು ಉಪಯೋಗಿಸುವರು. ಬಾರ್ಲಿ ಗಂಜಿಯ ಬದಲಾಗಿ ಸಬ್ಬಕ್ಕಿ ಗಂಜಿಯನ್ನು ಸೇವಿಸುವುದುಂಟು. ಪಿಷ್ಟಪದಾರ್ಥ ಅಗತ್ಯವೆನಿಸುವ ವಸ್ತುಗಳ ತಯಾರಿಕೆಯಲ್ಲಿ ಬಹುಮಟ್ಟಿಗೆ ಆರೋರೂಟನ್ನು ಬಳಸುವರು. ಭಾರತದಲ್ಲಿ ಆರೋರೂಟ್ ಅಥವಾ ಅದರ ಸಮಾನವೆನಿಸುವ ಬೆರಕೆ ಪದಾರ್ಥಗಳ ತಯಾರಿಕೆಯಲ್ಲಿ ಕೆಲವು ಸಸ್ಯಗಳ ಉತ್ಪನ್ನಗಳನ್ನು ಬಳಸುವರು. ಉದಾ: ಮಾನಿಹಾಟ್ ಎಂಬುದು ಯುಫೋರ್ಬಿಯೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಹರಳು, ರಬ್ಬರ್, ಜಾಪಾಳ, ಕ್ರೋಟನ್ ಗಿಡಗಳೂ ಈ ಪಂಗಡಕ್ಕೆ ಸೇರಿವೆ. ಆರೋರೂಟನ್ನಾಗಲಿ ಅಥವಾ ಅದನ್ನು ಹೋಲುವ ಇತರ ಪಿಷ್ಟವನ್ನಾಗಲಿ ಕೊಡುವ ಗಿಡಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ

  • ಮಾರಾಂಟ ಅರುಂಡನೇಸಿಯ ... ಮಾರಾಂಟೇಸಿ
  • ಕಕೂ‌‌‌ಯ್ರ್‌ಮ ಅಂಗುಸ್ವಿಫೋಲಿಯ ... ಜಿಂಜಿಬರೇಸಿ
  • ಮ್ಯಾನಿಹಾಟ್ ಯೂಟಿಲಿಸ್ಸಿಮ ... ಯೂಫೋರ್ಬಿಯೇಸಿ
  • ಐಪೋಮಿಯ ಬಟಾಟಸ್ ... ಕನ್ವಾಲ್ವುಲೇಸಿ
  • ಡಯಸ್ಕೋರಿಯ ಪ್ರಭೇದಗಳು ... ಡಯಸ್ಕೋರಿಯೇಸಿ
  • ಕೊಳೊಕೇಸಿಯ ಆಂಟಿಕ್ವೋರಂ ... ಎರಾಯ್ಡಿ
  • ಸೌಮಿಯ ಇಂಟೆಗ್ರಿಫೋಲಿಯ ... ಸೈಕ್ಯಾಡೇಸಿ
  • ಕ್ಯಾನ ಎಡುಲಿಸ್ ... ಕ್ಯಾನೇಸಿ
  • ಟಕ್ಕಾ ಪ್ರಭೇದಗಳು ... ಟಕ್ಕೇಸಿ

ಪಶ್ಚಿಮ ಭಾರತ ಆರೋರೂಟ್[ಬದಲಾಯಿಸಿ]

ಮಾರಾಂಟ ಗಿಡ ಭಾರತದ ಕೆಲವು ಕಡೆಗಳಲ್ಲಿ ತಾನಾಗಿ ಬೆಳೆಯುತ್ತದೆ. ಉತ್ತರ ಪ್ರದೇಶ, ಬಿಹಾರ್, ಒಡಿಶಾ, ಬಂಗಾಳ ಮತ್ತು ಕೇರಳಗಳಲ್ಲಿ ಇದನ್ನು ಬೆಳೆಸುವರು. ಈ ಗಿಡ ಮರಳು ಮಿಶ್ರಿತಭೂಮಿಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಅದನ್ನು ನೆಟ್ಟ ೧೦-೧೧ ತಿಂಗಳಲ್ಲಿ ಗೆಡ್ಡೆ ಬಲಿತು ಸಿದ್ಧವಾಗುತ್ತದೆ. ಎಕರೆಗೆ ಸಾಧಾರಣವಾಗಿ ೪ -೭ ಟನ್ಗಳವರೆಗೂ ಫಸಲು ಕೊಡುತ್ತದೆ. ಗೆಡ್ಡೆಗಳಲ್ಲಿ ನೀಲಿ ಮತ್ತು ಹಳದಿ ಸಿಪ್ಪೆಯ ಹೊದಿಕೆಯುಳ್ಳ ಎರಡು ಬಗೆಗಳಿವೆ. ನೀಲಿ ಛಾಯೆಯ ಗೆಡ್ಡೆ ಹೆಚ್ಚು ಪ್ರಮಾಣದಲ್ಲಿ ಫಸಲು ಕೊಡುತ್ತದೆ.

ಪೂರ್ವ ಭಾರತ ಆರೋರೂಟ್[ಬದಲಾಯಿಸಿ]

ಕಕೂಯ್ರ್ಮ್ ಗಿಡ ಮಧ್ಯಪ್ರದೇಶ, ಬಂಗಾಳ, ಮುಂಬಯಿ, ಮದ್ರಾಸ್ ಮತ್ತು ಹಿಮಾಲಯದ ತಪ್ಪಲು ಪ್ರದೇಶಗಳಲ್ಲಿ ಬೆಳೆಯುತ್ತದೆ. ಗಿಡವನ್ನು ಸಾಧಾರಣವಾಗಿ ಆಗಸ್್ಟ, ಸೆಪ್ಟೆಂಬರ್ ತಿಂಗಳುಗಳಲ್ಲಿ ನೆಟ್ಟು ಜನವರಿ ಹೊತ್ತಿಗೆ ಫಸಲು ತೆಗೆಯುತ್ತಾರೆ. ಸರಾಸರಿ ಎಕರೆಗೆ ೧೫೦೦-೧೮೦೦ ಕೆಜಿಗಳವರೆಗೆ ಗೆಡ್ಡೆ ಉತ್ಪತ್ತಿಯಾಗು ತ್ತದೆ. ಮೇಲೆ ಹೇಳಿದ ಈ ಎರಡೇ ಗಿಡಗಳಿಂದ ಸಾಚಾ ಆರೋರೂಟನ್ನು ತಯಾರಿಸಿದರೂ ಇತರ ಕೆಲವು ಸಸ್ಯಗಳ ಗೆಡ್ಡೆಗೆಣಸುಗಳ ಪಿಷ್ಠಮೂಲಗಳಿಂದಲೂ ಆರೋರೂಟನ್ನು ಹೋಲುವ ಪದಾರ್ಥಗಳನ್ನು ತಯಾರಿಸುವರು. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಲಾಗಿದೆ. ಮರಗೆಣಸು (ಮ್ಯಾನಿಹಾಟ್ ಯೂಟಿಲಿಸ್ಸಿಮ) : ಕೇರಳ ಪ್ರಾಂತ್ಯದ ಜನರಿಗೆ ಅಕ್ಕಿಯ ಬದಲು ಉಪಯೋಗಕ್ಕೆ ಬರುವ ಆಹಾರವೆಂದರೆ ಇದೇ. ಸಮಾನ್ಯವಾಗಿ ಇದನ್ನು ಟ್ಯಾಪಿಯೋಕ ಎಂದೂ ಕರೆಯುತ್ತಾರೆ. ಕೇರಳದಲ್ಲಿ ಸುಮಾರು ೬,೧೮,೦೦೦ ಎಕರೆಗಳಲ್ಲಿ ಇದನ್ನು ಬೆಳೆಯುತ್ತಾರೆ. ಕೆಲವು ಶತಮಾನಗಳ ಹಿಂದೆ ಪೋರ್ಚುಗೀಸರು ಕೇರಳಕ್ಕೆ ಈ ಸಸ್ಯವನ್ನು ತಂದರಂತೆ. ಇದು ಒಂದು ಎಕರೆಗೆ ಸರಾಸರಿ ೩೬೦೦ ಕೆಜಿಗಳಷ್ಟು ಗೆಡ್ಡೆಯ ಫಸಲನ್ನು ಕೊಡುತ್ತದೆ.

ಬೆಲ್ಲಗೆಣಸು (ಐಪೊಮಿಯ ಬಟಾಟಸ್)[ಬದಲಾಯಿಸಿ]

ಬಿಹಾರ್ ರಾಜ್ಯದ ಸರಾಮ್, ಚಂಪಾರಣ್ಯ, ಮಿಜಾಪುರ, ದರ್ಭಾಂಗ ಜಿಲ್ಲೆಗಳಲ್ಲೂ ಉತ್ತರ ಪ್ರದೇಶದ ಸುಲ್ತಾನ್ಪುರ, ಈಟಾ, ಪ್ರತಾಪ್ಘಡ, ಫರೂಕಾಬಾದ್ ಮತ್ತು ಗೊಂಡಾ ಜಿಲ್ಲೆಗಳಲ್ಲೂ ಪಶ್ಚಿಮ ಬಂಗಾಳದ ಮಿಡ್ನಾಪುರ ಮತ್ತು ಹೂಗ್ಲಿ ಜಿಲ್ಲೆಗಳಲ್ಲೂ ತಮಿಳುನಾಡಿನ ತಿರುಚಿರಾಪಳ್ಳಿ ಮತ್ತು ದಕ್ಷಿಣ ಆರ್ಕಾಟ್ ಜಿಲ್ಲೆಗಳಲ್ಲೂ ಆಂಧ್ರ ಪ್ರದೇಶದ ವಿಶಾಖಪಟ್ಟಣ, ಶ್ರೀಕಾಕುಳಂ, ಕಡಪ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲೂ ಮೈಸೂರಿನ ಬೆಳಗಾವಿ, ಕೆನರಾ, ಹಾಸನ ಮತ್ತು ಕೋಲಾರ ಜಿಲ್ಲೆಗಳಲ್ಲೂ ಕೇರಳದ ಮಲಬಾರ್ ಜಿಲ್ಲೆಯಲ್ಲಿಯೂ ಅತ್ಯಧಿಕವಾಗಿ ವ್ಯವಸಾಯದ ಲ್ಲಿದೆ. ಡಯೋಸ್ಕೋರಿಯ ಎಸ್ಕುಲೆಂಟ ಮತ್ತು ಡಯೋಸ್ಕೋರಿಯ ಅಲೇಟ ಎಂಬುವು ಮುಂಬಯಿನ ತೀರ ಪ್ರದೇಶದಲ್ಲೂ ಮಲಬಾರ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ್, ಒರಿಸ್ಸಗಳಲ್ಲೂ ಬೆಳೆಯುವ ಗಿಡಗಳು. ಈ ಗಿಡಗಳ ಗೆಣಸುಗಳನ್ನು ಸಹ ಆರೋರೂಟಿನಂತೆ ಪಿಷ್ಟದ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಕೊಳೊಕೇಸಿಯಾ[ಬದಲಾಯಿಸಿ]

ಇದು ಕೆಸವು ದಂಟಿನ ಜಾತಿಗೆ ಸೇರಿದ ಗಿಡದ ಗೆಡ್ಡೆ. ಇವುಗಳ ಗೆಡ್ಡೆಗಳಿಂದಲೂ ಆರೋರೂಟ್ನಂಥ ವಸ್ತುವನ್ನು ತಯಾರಿಸುತ್ತಾರೆ.

ಆರೋರೂಟನ್ನು ತಯಾರಿಸುವ ಕ್ರಮ[ಬದಲಾಯಿಸಿ]

ಚೆನ್ನಾಗಿ ಬಲಿತ ಮ್ಯಾನಿಹಾಟ್ ಅಥವಾ ಕಕೂರ್ಯ್ಮ್ಗಳ ಗೆಡ್ಡೆಗಳನ್ನು ಮೊದಲು ಶೇಖರಿಸಿ ಆ ಗೆಡ್ಡೆಗಳ ಉಪಯೋಗಕ್ಕೆ ಬಾರದಿರುವ ಭಾಗಗಳನ್ನು ಕತ್ತರಿಸಿ ತೆಗೆದುಹಾಕಬೇಕು. ಅನಂತರ ಗೆಡ್ಡೆಗಳ ಮೇಲಿನ ಸಿಪ್ಪೆಯನ್ನು ಸುಲಿದು ಚೆನ್ನಾಗಿ ಜಜ್ಜಿ ಹಿಟ್ಟಿನ ರೂಪಕ್ಕೆ ತರಬೇಕು. ಯಂತ್ರಗಳು ಇದನ್ನು ನೆರವೇರಿಸುತ್ತವೆ. ಹಿಟ್ಟನ್ನು ನೀರಿನಲ್ಲಿ ಕದಡಿ ಸ್ವಲ್ಪ ಮದುಡಾಗಿರುವ ಬಟ್ಟೆಗಳ ಮುಖಾಂತರ ಶೋಧಿಸಬೇಕು. ಆಗ ಕಸಕಡ್ಡಿಗಳು ಬೇರೆಯಾಗುತ್ತವೆ. ತಳದಲ್ಲಿ ನಿಲ್ಲುವ ಹಾಲಿನಂಥ ಬಗ್ಗಡವನ್ನು ಅತಿ ನುಣುಪಾದ ಕಡಾಯಿಗಳಲ್ಲಿ ಶೇಖರಿಸಬೇಕು. ಕೆಲವು ಗಂಟೆಗಳ ತರುವಾಯ ಮೇಲೆ ಕಟ್ಟುವ ತಿಳಿ ನೀರನ್ನು ವಿಸರ್ಜಿಸಿ ಮತ್ತೆ ಶುಭ್ರವಾದ ನೀರಿನಿಂದ ಅಡಿಯಲ್ಲಿ ಹೆಕ್ಕಳಿಕೆ ಹೆಕ್ಕಳಿಕೆಯಾಗಿ ನಿಂತಿರುವ ಪಿಷ್ಟವನ್ನು ತೊಳೆದು ಶುದ್ಧಿಪಡಿಸಬೇಕು. ಹೀಗೆ ಶುದ್ಧಿಪಡಿಸಿದ ಪಿಷ್ಠದ ಹೆಕ್ಕಳಿಕೆಗಳನ್ನು ಬಿಸಿಲಲ್ಲಾಗಲಿ, ಬೆಂಕಿಯ ಕಾವಿನಲ್ಲಾಗಲಿ ಒಣಗಿಸಬೇಕು. ಈ ಪದಾರ್ಥವನ್ನು ಶೈತ್ಯ ತಡೆಯುವ ಹೊದಿಕೆಯುಳ್ಳ ಡಬ್ಬಗಳಲ್ಲಿ ಶೇಖರಿಸಬೇಕು. ಆರೋರೂಟನ್ನು ರಾಗಿ ಕಾಳಿನಂತೆಯೋ, ಹಿಟ್ಟಿನ ರೂಪದಲ್ಲೊ ಶೇ. ಮಾರಾಟಕ್ಕೆ ಸಿದ್ಧಪಡಿಸಬಹುದು. ಭಾರತೀಯ ಆದರ್ಶ ಪ್ರಮಾಣದಂತೆ ಆರೋರೂಟ್ನಲ್ಲಿ ಜಲಾಂಶ > ಶೇ.೧೩.೦; ಸುಟ್ಟರೆ ಉಳಿಯುವ ಬೂದಿ > ಶೇ.೦.೦೩; ದ್ರಾವಕದಲ್ಲಿ ಕರಗದಿರುವ ಬೂದಿ ಅಂಶ > ಶೇ.೦.೦೫; ಶೇ.೪.೫ ರಿಂದ ಶೇ.೭ ರವರೆಗೆ; ಕಾಳುಗಳ ಗಾತ್ರ > ಶೇ.೨ ಇಂಡಿಯನ್ ಸ್ಟಾಂಡರ್ಡ್‍ನ ಜರಡಿ ೫ನೆಯ ನಂಬರು ಅಥವಾ > ಶೇ.೦.೫ ಇಂಡಿಯನ್ ಸ್ಟಾಂಡರ್ಡನ ಜರಡಿ ೧೫ನೆಯ ನಂಬರು.

"https://kn.wikipedia.org/w/index.php?title=ಆರೋರೂಟ್&oldid=714965" ಇಂದ ಪಡೆಯಲ್ಪಟ್ಟಿದೆ