ಆನಂದ ಕೆ. ಕುಮಾರಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನಂದ ಕೆಂಟಿಷ್ ಕುಮಾರಸ್ವಾಮಿ
ಕುಮಾರಸ್ವಾಮಿ ಅವರು 1916ರ ವರ್ಷದಲ್ಲಿ ,
ಜನನಆಗಸ್ಟ್ ೨೨ , ೧೮೭೭
ಕೊಲಂಬೋ, ಶ್ರೀಲಂಕಾ
ಮರಣಸೆಪ್ಟೆಂಬರ್ ೮, ೧೯೪೭
ನೀಧಾಮ್, ಮಸ್ಸಚುಸೆಟ್ಸ್ , ಅಮೆರಿಕ ಸಂಯುಕ್ತ ಸಂಸ್ಥಾನ
ರಾಷ್ಟ್ರೀಯತೆಅಮೆರಿಕದಲ್ಲಿ ನೆಲೆಸಿದ ಶ್ರೀಲಂಕಾ ಮೂಲಸ್ಥರು
Known forಮೆಟಾಫಿಸಿಕ್ಸ್ , ಭಾರತೀಯ ತತ್ವಜ್ಞಾನ, ಇತಿಹಾಸ

ಆನಂದ ಕೆ. ಕುಮಾರಸ್ವಾಮಿ [೧] (ಆಗಸ್ಟ್ ೨೨, ೧೮೭೭ - ಸೆಪ್ಟೆಂಬರ್ ೯, ೧೯೪೭) ಭಾರತೀಯ ತತ್ವಶಾಸ್ತ್ರವನ್ನು ವಿಶ್ವದೆಲ್ಲೆಡೆ ಪರಿಚಯಿಸಿದ ಆಗ್ರಗಣ್ಯರಲ್ಲಿ ಒಬ್ಬರೆನಿಸಿದ್ದಾರೆ.

ಜೀವನ[ಬದಲಾಯಿಸಿ]

 • 'ಆನಂದ ಕೆಂಟಿಷ್ ಕುಮಾರಸ್ವಾಮಿ,'೧೮೭೭ರ ಆಗಸ್ಟ್ ೨೨ರಂದು ಅಂದಿನ ಬ್ರಿಟಿಷ್ ಆಡಳಿತದಲ್ಲಿದ್ದ ಕೊಲಂಬೋದಲ್ಲಿ ಜನಿಸಿದರು. ಅವರ ತಂದೆ 'ಸರ್.ಮುತ್ತು ಕುಮಾರಸ್ವಾಮಿ'ವೈಶಿಷ್ಟ್ಯಪೂರ್ಣ ವ್ಯಕ್ತಿ. ತಮಿಳುನಾಡಿನಿಂದ ಸಿಂಹಳಕ್ಕೆ ಬಂದು ನೆಲೆಸಿದವರು.ಅಲ್ಲಿನ ಪ್ರಜೆಯಾಗಿ, ವಿಧಾನ ಸಭೆಯ ಸದಸ್ಯರೂ ಆದರು. ಖ್ಯಾತ ವಕೀಲರಾಗಿದ್ದವರು. ಏಷ್ಯಾದಲ್ಲೇ ಮೊದಲ ಬಾರಿಗೆ ‘ನೈಟ್‌ಹುಡ್’ ಪ್ರಶಸ್ತಿ ಪಡೆದವರು. ಮುತ್ತು ಕುಮಾರಸ್ವಾಮಿಯವರು ಇಂಗ್ಲೆಂಡಿಗೆ ಕಾರ್ಯ ನಿಮಿತ್ತ ಬಂದಾಗ ಎಲಿಜಬೆತ್ ಕ್ಲೇ ಬೇವಿ ಎಂಬ ಆಂಗ್ಲ ತರುಣಿಗೂ ಅವರಿಗೂ ಪರಿಚಯವಾಯಿತು. ಅವರ ವ್ಯಕ್ತಿತ್ವಕ್ಕೆ ಮಾರುಹೋಗಿ ಅವರನ್ನು ವಿವಾಹವಾದಳು. ಜೊತೆಯಲ್ಲೇ ಸಿಂಹಳಕ್ಕೆ ಬಂದು ಸಂಸಾರ ಪ್ರಾರಂಭಿಸಿದರು. ೧೮೭೯ರ ವರ್ಷದಲ್ಲಿ ಮಗು 'ಆನಂದ', ಇನ್ನೂ ಎರಡು ವರ್ಷವಿದ್ದಾಗ ತಂದೆ 'ಮುತ್ತುಕುಮಾರಸ್ವಾಮಿ' ನಿಧನರಾದರು. ತಾಯಿ ಮಗವನ್ನು ಕರೆದುಕೊಂಡು ಇಂಗ್ಲೆಂಡಿಗೆ ವಾಪಸ್ಸು ಬಂದರು. ಎಷ್ಟೇ ಕಷ್ಟಗಳು ಬರಲಿ,ಆನಂದ ಕುಮಾರಸ್ವಾಮಿಯನ್ನು ಚೆನ್ನಾಗಿ ಬೆಳೆಸಬೇಕು, ತಂದೆಯ ಕೀರ್ತಿಯನ್ನು ಉಳಿಸಿ ಬೆಳೆಸುವ ಮಗನಾಗಬೇಕು ಎಂದು ತಾಯಿ ನಿರ್ಧರಿಸಿದರು.
 • ಇಂಗ್ಲೆಂಡಿಗೆ ಹಿಂದಿರುಗಿದ 'ಎಲಿಜಬೆತ್' ಆನಂದ ಕುಮಾರ ಸ್ವಾಮಿಯ ಶಿಕ್ಷಣಕ್ಕೆ ವಿಶೇಷ ಗಮನ ಕೊಡತೊಡಗಿದಳು. ಮಗ ತಾಯಿ ಮಾಡುವ ಪ್ರತಿಯೊಂದು ಕಾರ್ಯವನ್ನೂ ಪ್ರಶ್ನಿಸುವನು. “ಅಮ್ಮಾ, ಅದೇಕೆ ನೀನು ಹಾಗೆ ಎರಡು ಕೈಜೋಡಿಸಿ, ಕಣ್ಣುಮುಚ್ಚಿ ನಿಲ್ಲುವುದು?” “ಅದೇನಮ್ಮಾ ಆ ಪಠಗಳು? ಯಾರದಮ್ಮಾ ಅದು?” ತಾಯಿ ನಗುತ್ತಾ ಎಲ್ಲವನ್ನೂ ವಿವರಿಸುವಳು: “ಒಂದು ಪಠ ನಿಮ್ಮ ತಂದೆಯದು. ಇನ್ನೊಂದು ದೇವರ ಪಠ, ಕುಮಾರಸ್ವಾಮಿ ದೇವರು.”
 • “ಅಪ್ಪನನ್ನು ನಾನು ನೋಡೇ ಇಲ್ಲ. ಈಗ ಎಲ್ಲಿದ್ದಾರಮ್ಮ ಅವರು?” “ನಿಮ್ಮ ಅಪ್ಪನ ಪಠದ ಪಕ್ಕದಲ್ಲಿದೆಯಲ್ಲ ಕುಮಾರಸ್ವಾಮಿ ದೇವರು, ಅವರ ಬಳಿ ಹೋಗಿದ್ದಾರೆ ಮಗು”. “ಅಮ್ಮಾ ಅಪ್ಪನ ಪಠದ ಪಕ್ಕದಲ್ಲಿರುವುದು ದೇವರ ಪಠವೇನಮ್ಮಾ? ಅದಕ್ಕೆ ಆರು ಮುಖ ಇದೆಯಲ್ಲ?”:

“ಹೌದು ಮಗು. ಅದು ನಮ್ಮ ದೇವರು-ಕುಮಾರಸ್ವಾಮಿ. ಅವರಿಗೆ ಆರು ಮುಖ ಇರುವುದರಿಂದ ಷಣ್ಮುಖ ಎಂದೂ ಕರೆಯುತ್ತಾರೆ. ನಿಮ್ಮ ಅಪ್ಪನಿಗೆ ಆ ದೇವರೆಂದರೆ ತುಂಬಾ ಭಕ್ತಿ. ಅದಕ್ಕೇ ನಿನಗೆ ಆ ದೇವರ ಹೆಸರಿಟ್ಟಿರುವುದು. ನಿಮ್ಮ ತಂದೆ ಪ್ರತಿದಿನ ಅದಕ್ಕೆ ಪೂಜೆ ಮಾಡಿ, ನಮಸ್ಕಾರ ಮಾಡುತ್ತಿದ್ದರು. ನೀನು ಕೂಡ, ನೋಡು ಈ ರೀತಿ ಕಣ್ಣುಮುಚ್ಚಿ, ಕೈಜೋಡಿಸಿ, ‘ಷಣ್ಮುಖನೇ, ನನಗೆ ಒಳ್ಳೆ ಬುದ್ಧಿ ಕೊಡಪ್ಪಾ’ ಎಂದು ಪ್ರಾರ್ಥಿಸು.”

 • ದೇವರು, ಭಕ್ತಿ ಏನೆಂದು ಅರಿಯದ ಆನಂದ ಕುಮಾರ ಸ್ವಾಮಿ ತುಂಟ ಕಣ್ಣುಗಳನ್ನು ಮುಚ್ಚಿ ತಾಯಿ ಹೇಳಿದಂತೆ ಕೈಮುಗಿದು ನಿಲ್ಲುವನು. ಹೀಗೆ ದೂರದ ಇಂಗ್ಲೆಂಡಿನಲ್ಲಿ ಕುಮಾರಸ್ವಾಮಿಗೆ ಹಿಂದುಗಳ ದೇವರುಗಳು, ಧರ್ಮ ಇವುಗಳ ಪರಿಚಯವಾಯಿತು. ಎಲಿಜಬೆತ್‌ಳು ಕುಮಾರ ಸ್ವಾಮಿಗೆ ಭಾರತದ ಪುಣ್ಯ ಪುರುಷರ ಕಥೆಗಳನ್ನು ದಿನವೂ ಅವನಿಗೆ ಗೊತ್ತಾಗುವ ಬಾಲ ಭಾಷೆಯಲ್ಲಿ ಹೇಳುತ್ತಿದ್ದಳು. ವರ್ಷಗಳು ಉರುಳಿದವು. ಆನಂದ ಕುಮಾರಸ್ವಾಮಿ ತನ್ನ ತಾಯಿಯ ಆಶ್ರಯದಲ್ಲೇ ಬೆಳೆದು ದೊಡ್ಡವನಾದ. ೧೮೮೯ರಲ್ಲಿ ವಿಕ್ಲಿಫ್ ಕಾಲೇಜನ್ನು ಸೇರಿದ. ಎಂಟು ವರ್ಷ ಅಲ್ಲಿ ವಿದ್ಯಾಭ್ಯಾಸ. ಇಪ್ಪತ್ತು ವರ್ಷದ ಸುಂದರ ತರುಣ ಆನಂದ ಕುಮಾರಸ್ವಾಮಿಯಲ್ಲಿ ತನ್ನ ಪತಿಯ ಪ್ರತಿರೂಪ ಕಾಣುತ್ತಿದ್ದಳು ಎಲಿಜಬೆತ್.

ಭಾರತೀಯ ಆಧ್ಯಾತ್ಮದ ಒಲವು[ಬದಲಾಯಿಸಿ]

 • ಪ್ರಾಯವಾದಂತೆ ಆನಂದ ಕುಮಾರಸ್ವಾಮಿ ಗಂಭೀರ ವ್ಯಕ್ತಿಯಾಗತೊಡಗಿದ. ತಾನಾಯಿತು. ತನ್ನ ಕಾಲೇಜಿನ ವ್ಯಾಸಂಗವಾಯಿತು. ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿ ಷಣ್ಮುಖನ ಪೂಜೆ ಮಾಡಿ, ಭಗವದ್ಗೀತೆಯ ಪಠನ ಮಾಡುತ್ತಿದ್ದ. ಬಿಡುವಿನ ವೇಳೆಯಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಗಳ ಗ್ರಂಥಗಳ ಅಧ್ಯಯನ ನಡೆಯಸುತ್ತಿದ್ದ. ಅವು ಇಂಗ್ಲೆಂಡಿನಲ್ಲಿ ಸಿಕ್ಕದಿದ್ದರೆ ಸಿಂಹಳ ಅಥವಾ ಭಾರತದಿಂದ ತರಿಸುತ್ತಿದ್ದ. ಕತ್ತಿನ ತನಕ ಚಾಚಿರುವ ಗುಂಗುರು ಕೂದಲು, ನೀಳ ಮೂಗು, ಉದ್ದನೆಯ ಕೈಬೆರಳುಗಳು ಇದ್ದ ಕುಮಾರಸ್ವಾಮಿಯ ಸ್ವಭಾವ, ಗಂಭೀರ ನಡಿಗೆ, ಮಾತು ಎಲ್ಲವೂ ನಯ. ಆನಂದ ಕುಮಾರಸ್ವಾಮಿ ೧೯೦೯ರಲ್ಲಿ ಲಂಡನ್ ವಿಶ್ವವಿದ್ಯಾನಿಲಯ ಸೇರಿದ. ಕಾಲೇಜಿನಲ್ಲಿ ವ್ಯಾಸಂಗಕ್ಕಾಗಿ ಆರಿಸಿಕೊಂಡ ವಿಷಯ ಭೂಗರ್ಭ ಶಾಸ್ತ್ರ ಮತ್ತು ಪ್ರಾಕೃತಿಕ ವಿಜ್ಞಾನ.
 • ಆದರೆ ಭಾರತೀಯ ಶಿಲ್ಪಕಲೆ, ಶಿಲ್ಪಶಾಸ್ತ್ರ, ಚಿತ್ರಕಲೆ, ಸಂಗೀತ, ನೃತ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯ ಸಂಸ್ಕೃತಿಯ ಕಡೆ ಆತನಿಗೆ ಒಲವು ಜಾಸ್ತಿ. ತನ್ನ ಉಡುಗೆ ತೊಡುಗೆಗಳಲ್ಲೂ ಭಾರತೀಯನಂತೆ ಕಾಣಬೇಕೆಂಬ ಇಚ್ಛೆ. ವಿದೇಶೀ ಉಡುಗೆ ತೊಟ್ಟರೂ ಹಣೆಯಲ್ಲಿ ಗಂಧದ ಮೇಲೆ ಕುಂಕುಮದ ಬೊಟ್ಟು. ಭಾರತೀಯ ಸಂಸ್ಕೃತಿಯ ಬಗ್ಗೆ ಅವನಿಗೆ ಆದಮ್ಯ ಒಲವು ಬೆಳೆಯಿತು. ಕಾರಣ ಆತನಲ್ಲಿ ಭಾರತೀಯ ತಂದೆಯ ರಕ್ತ ಹರಿಯುತ್ತಿತ್ತು. ಭಾರತೀಯ ವೇದ, ಉಪನಿಷತ್, ಭಗವದ್ಗೀತೆ, ರಾಮಾಯಣ, ಮಹಾಭಾರತಗಳ ಅಧ್ಯಯನಗಳು ಆನಂದ ಕುಮಾರ ಸ್ವಾಮಿಯಲ್ಲಿ ದಿನೇದಿನೇ ಭಾರತೀಯ ಸಂಸ್ಕೃತಿಯನ್ನು ಕುರಿತು ಭಕ್ತಿ, ಗೌರವ ಬೆಳೆಯಲು ಕಾರಣವಾಯಿತು.
 • ಆನಂದ ಕುಮಾರಸ್ವಾಮಿಯ ಮನಸ್ಸು ಪಕ್ವಗೊಂಡಂತೆ, ವಿಚಾರಶಕ್ತಿ ಬೆಳೆದಂತೆ ಆತ ಭಾರತೀಯ ಸಂಸ್ಕೃತಿಯ ಅವಿಚ್ಛಿನ್ನ ಆರಾಧಕನಾದ. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸರಳ ಜೀವನ, ಉತ್ತಮ ಚಿಂತನೆ ಆತನಲ್ಲಿ ಅಚ್ಚೊತ್ತಿತು. ಕಪ್ಪುದೇಹದ, ವಿಚಿತ್ರ ಸ್ವಭಾವದ ಗಂಭೀರ ವ್ಯಕ್ತಿ ಆನಂದ ಕುಮಾರಸ್ವಾಮಿಯನ್ನು ಕಂಡರೆ ಅವನ ಸಹಪಾಠಿಗಳಿಗೆ ಆಶ್ಚರ್ಯ. ಗೌರವ ಕೂಡ. ಏಕೆಂದರೆ ಅವನು ಪ್ರತಿಭಾಶಾಲಿ ವಿದ್ಯಾರ್ಥಿ. ಕಾಲೇಜಿನ ಮಧ್ಯಾಹ್ನದ ಬಿಡುವಿನ ವೇಳೆಯಲ್ಲೂ ಅವನು ಗ್ರಂಥಾಲಯದಲ್ಲಿ ಕುಳಿತು ಭಾರತೀಯ ಸಂಸ್ಕೃತಿಗೆ ಸಂಬಂಧಪಟ್ಟ ಗ್ರಂಥ ಪಠನದಲ್ಲಿ ತೊಡಗಿರುತ್ತಿದ್ದ.

ಮದುವೆ[ಬದಲಾಯಿಸಿ]

ಆನಂದ ಕುಮಾರಸ್ವಾಮಿ ತಮ್ಮ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಒಲವು ಹೊಂದಿದ್ದ ಆಂಗ್ಲ ಚೆಲುವೆ 'ಈಥಲ್ ಮೇರಿ'ಯನ್ನು ವಿವಾಹವಾದರು.

ಸಿಂಹಳದಲ್ಲಿ[ಬದಲಾಯಿಸಿ]

 • ಮದುವೆಯಾದ ಮರುವರ್ಷ ಆನಂದ ಕುಮಾರಸ್ವಾಮಿ ಭೂಗರ್ಭ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. ಅಂದಿನಿಂದ ಡಾಕ್ಟರ್ ಆನಂದ ಕುಮಾರಸ್ವಾಮಿ ಆದರು. ಆ ವರ್ಷವೇ ಕೆಲಸವೂ ಸಿಕ್ಕಿತು. ಸಿಂಹಳದ ಗಣಿ ಸಂಶೋಧನಾ ಅಧಿಕಾರಿಯಾಗಿ ಅವರು ನೇಮಕ ಮಾಡಲ್ಪಟ್ಟರು. ಆನಂದ ಕುಮಾರಸ್ವಾಮಿಗೆ ಬಹಳ ಸಂತೋಷವಾಯಿತು. ತಾನು ಹುಟ್ಟಿದ, ತನ್ನ ತಂದೆ ಬಾಳಿ ಮೆರೆದ ನಾಡು ಸಿಂಹಳವನ್ನು ನೋಡಬೇಕೆಂದು ಬಹಳ ದಿನಗಳಿಂದ ಅವರಿಗೆ ಅಭಿಲಾಷೆ ಇತ್ತು. ತಮ್ಮ ಪತ್ನಿ ಈಥಲ್ ಮೇರಿಯೊಡನೆ ಆನಂದ ಕುಮಾರಸ್ವಾಮಿಯವರು ಸಿಂಹಳಕ್ಕೆ ಹೊರಟರು. *ಸುಮಾರು 32ವರ್ಷಗಳ ಮೊದಲು ಎಳೆಯ ಮಗು ಆನಂದ ಕುಮಾರಸ್ವಾಮಿ ತಾಯಿಯೊಡನೆ ಸಿಂಹಳದಿಂದ ಇಂಗ್ಲೆಂಡಿಗೆ ಪ್ರಯಾಣ ಮಾಡಿದ್ದ. ಆಗ ಅವನಿಗೆ ಏನೇನೂ ತಿಳಿಯದು. ಭವಿಷ್ಯ ಅನಿಶ್ಚಿತವಾಗಿತ್ತು. ಈಗ ವಿದ್ಯಾಭ್ಯಾಸ ಮುಗಿಸಿ, ಹೆಂಡತಿಯೊಡನೆ ಆನಂದ ಕುಮಾರಸ್ವಾಮಿ ಸಿಂಹಳಕ್ಕೆ ಹಿಂದಿರುಗುತ್ತಿದ್ದರು. ಭೂಗರ್ಭ ವಿಜ್ಞಾನದ ಇಲಾಖೆಯಲ್ಲಿ ಅಧಿಕಾರಿ. ಹೊಸ ಬಾಳಿನ ಹೊಸ್ತಿಲ ಮೇಲಿದ್ದರು. ಇಂಗ್ಲೆಂಡಿನಿಂದ ಹೊರಟು ಮೂರು ತಿಂಗಳ ಪ್ರಯಾಣ ಮಾಡಿ ಹಡಗು ಸಿಂಹಳವನ್ನು ತಲುಪಿತು.
 • ಆನಂದ ಕುಮಾರಸ್ವಾಮಿಯವರಿಗೆ ಮೇರೆ ಮೀರಿದ ಸಂತೋಷ. ಬಂದ ಮಾರನೆಯ ದಿನವೇ ಕೆಲಸಕ್ಕೆ ಸೇರಿದ್ದೂ ಆಯಿತು. ನಿರ್ವಹಿಸಬೇಕಾದ ಕೆಲಸ ಭೂಗರ್ಭ ಸಂಶೋಧನೆಯಾದರೂ ಅವರು ನಡೆದ ದಾರಿ ಬೇರೆ. ಬಂದ ಸ್ವಲ್ಪ ದಿನಗಳಲ್ಲೇ ಆನಂದ ಕುಮಾರಸ್ವಾಮಿ ಸಿಂಹಳದ ಹಾಳುಬಿದ್ದ ಗುಹೆಗಳಿಗೆ ಭೇಟಿಕೊಟ್ಟರು. ಈ ಭೇಟಿಯನಂತರ ಅವರ ಬಾಳಿನ ದಾರಿಯೇ ಬೇರೆ ಆಯಿತು. ಹಾಳುಬಿದ್ದಿದ್ದ ಆ ಗುಹೆಗಳ ಕಲಾ ವೈಭವವನ್ನು ಕಂಡು ಅವರು ಬೆರಗಾದರು.
 • ಈ ಕಲೆಯನ್ನು ಅಭ್ಯಾಸ ಮಾಡಬೇಕು, ಇದರ ಸೊಗಸನ್ನೂ ಅರ್ಥವನ್ನೂ ಹೊರಗಿನ ಜಗತ್ತಿಗೆ ವಿವರಿಸಬೇಕು ಎನ್ನಿಸಿತು ಅವರಿಗೆ. ಸಿಂಹಳದ ಕಲೆಯ ಅಭ್ಯಾಸ ಪ್ರಾರಂಭ ಮಾಡಿದರು. ಹೆಂಡತಿ ಈಥಲ್ ಮೇರಿಯ ಸಹಕಾರವೂ ಇತ್ತು. ನಾಲ್ಕೈದು ವರ್ಷಗಳ ಕಾಲ ಸಿಂಹಳದ ಕಲೆಯ ಅಭ್ಯಾಸ ಮಾಡಿದರು. ೧೯೦೯ರಲ್ಲಿ ಅವರ ಅಸಾಧಾರಣ ಗ್ರಂಥ ‘ಮಧ್ಯಯುಗದ ಸಿಂಹಳದ ಕಲೆ’ ಪ್ರಕಟವಾಯಿತು. ಪೂರ್ವ ದೇಶಗಳು ಅನಾಗರಿಕ ಎಂದು ನಂಬಿದ್ದ ಪಾಶ್ಚಾತ್ಯ ದೇಶಗಳವರ ಕಣ್ಣುಗಳನ್ನು ತೆರೆಸಿತು.
 • ಸಿಂಹಳೀ ಕಲೆಯ ಅಧ್ಯಯನ ನಡೆಸಿದಂತೆಲ್ಲಾ ಭಾರತೀಯ ಕಲೆ ಮತ್ತು ಸಂಸ್ಕೃತಿಗಳನ್ನು ಅಭ್ಯಾಸ ಮಾಡಬೇಕು ಎಂದು ತೋರಿತು. ಆ ಕೆಲಸವನ್ನೂ ಕೈಗೊಂಡರು. ಅಧ್ಯಯನ ಸಾಗಿದಂತೆ ಅವರಿಗೆ ಇಲ್ಲಿ ಹೊಸದೊಂದು ಕಲೆಗಳ ಮತ್ತು ಸಂಸ್ಕೃತಿಗಳ ಜಗತ್ತೇ ಕಂಡು ಬಂದಿತು. ಜೊತೆಯಲ್ಲೇ ಫ್ರೆಂಚ್, ಜರ್ಮನಿ, ಲ್ಯಾಟಿನ್, ಗ್ರೀಕ್, ಸಂಸ್ಕೃತ, ಪಾಲಿ ಮತ್ತು ಹಿಂದಿ ಭಾಷೆಗಳನ್ನು ಕಲಿತರು. ಇಟಾಲಿಯನ್, ಸ್ಪ್ಯಾನಿಷ್, ಡಚ್, ಪರ್ಷಿಯನ್ ಮತ್ತು ಸಿಂಹಳೀ ಭಾಷೆಗಳು ಅವರಿಗೆ ಕರತಲಾಮಲಕವಾಗಿದ್ದವು.
 • ತಮ್ಮ ಮಾತೃಭಾಷೆ ಇಂಗ್ಲಿಷ್ ಅಲ್ಲದೆ ಹನ್ನೆರಡು ಭಾಷೆಗಳಲ್ಲಿ ಪಾಂಡಿತ್ಯ ಪಡೆದರು. ಈ ನಡುವೆ ಈಥಲ್ ಮೇರಿಯ ಜೊತೆ ವಿರಸ ಉಂಟಾಯಿತು. ಇದಕ್ಕೆ ಕಾರಣ ಕುಮಾರಸ್ವಾಮಿಯವರ ಓದು ಬರಹ. ಚಿಕ್ಕ ವಯಸ್ಸಿನ ಮೇರಿಗೆ ತಾನೂ ಗಂಡನೂ ನಾಲ್ಕಾರು ಕಡೆ ಓಡಾಡಬೇಕು, ಸಂತೋಷವಾಗಿ ಕಾಲ ಕಳೆಯಬೇಕು ಎಂಬ ಆಸೆಯಿತ್ತು. ಆದರೆ ಆನಂದ ಕುಮಾರ ಸ್ವಾಮಿಯವರದು ಯಾವಾಗಲೂ ಓದುಬರಹ. ಜೀವನದ ದಾರಿ ಕವಲೊಡೆಯಿತು. ಈಥಲ್ ಮೇರಿ ಕೊನೆಗೆ ನಿರಾಶಳಾಗಿ ತಾಯ್ನಾಡಿಗೆ ಹಿಂತಿರುಗಿದಳು.
 • ಕುಮಾರಸ್ವಾಮಿಯವರ ಅಧ್ಯಯನ ನಿರಂತರವಾಗಿ ಸಾಗಿತ್ತು. ಕೆಲವು ತಿಂಗಳುಗಳು ಕಳೆದವು. ಭಾರತೀಯ ಸಂಗೀತದ ಬಗ್ಗೆ ಆಸಕ್ತಿ ಮೊಳೆತು ಅಧ್ಯಯನದಲ್ಲಿ ತೊಡಗಿದ್ದರು. ಆಗ ರತ್ನಾದೇವಿ ಎಂಬ ಸಿಂಹಳದ ಕನ್ಯೆಯ ಪರಿಚಯವಾಯಿತು. ಸ್ವಲ್ಪ ಕಾಲದನಂತರ ಆನಂದ ಕುಮಾರ ಸ್ವಾಮಿ ಆಕೆಯನ್ನು ಮದುವೆಯಾದರು. ಕುಮಾರಸ್ವಾಮಿಯವರಿಗೆ ಹಗಲಿರುಳೂ ಭಾರತೀಯ ಕಲೆ ಮತ್ತು ಸಂಸ್ಕೃತಿಗಳ ಅಧ್ಯಯನದ್ದೇ ಯೋಚನೆ.
 • ಆದರೆ ಇದು ಕೇವಲ ಗ್ರಂಥಗಳ ಪಠನೆಯೊಂದರಿಂದಲೇ ಸಾಧ್ಯವಿಲ್ಲ, ಅದಕ್ಕೆ ಸಂಬಂಧಪಪಟ್ಟ ಸ್ಥಳಗಳ ಪ್ರತ್ಯಕ್ಷ ದರ್ಶನ ಮಾಡಬೇಕು ಎನ್ನಿಸಿತು. ಆದರೆ ಅವರು ಸಿಂಹಳದ ಸರ್ಕಾರದಲ್ಲಿ ಅಧಿಕಾರಿ ಯಾಗಿದ್ದರು. ‘ಡೈರೆಕ್ಟರ್ ಆಫ್ ಮಿನರಲಾಜಿಕಲ್ ಸರ್ವೆ’ (ಖನಿಜ ಪರಿವೀಕ್ಷಣೆಯ ನಿರ್ದೇಶಕರು) ಎಂದು ಅವರು ನೇಮಕವಾಗಿದ್ದರು. ತಮ್ಮ ಅಧಿಕಾರಸ್ಥಾನದ ಹೊಣೆಯನ್ನು ನಿರ್ವಹಿಸಬೇಕಾಗಿತ್ತು. ಆ ಕೆಲಸಕಾರ್ಯಗಳಿಗೆ ಬಹಳ ಕಾಲ ವ್ಯಯವಾಗುತ್ತಿತ್ತು. ಕಲೆಯ ಅಧ್ಯಯನಕ್ಕಾಗಿ ಆನಂದ ಕುಮಾರಸ್ವಾಮಿ ಕೆಲಸವನ್ನೇ ಬಿಟ್ಟುಬಿಟ್ಟರು.
 • ಆನಂದ ಕುಮಾರಸ್ವಾಮಿಯವರು ಅಧ್ಯಯನದಲ್ಲೇ ತೊಡಗಿದ್ದರೂ ಸುತ್ತಲಿನ ಜೀವನವನ್ನು ಮರೆತವರಲ್ಲ. ಸಮಾಜದಲ್ಲಿನ ದೋಷಗಳನ್ನು ಹೋಗಲಾಡಿಸಲು ಶ್ರಮಿಸಿದರು. ’ಸಿಂಹಳದ ಸಮಾಜ ಸುಧಾರಣಾ ಸಂಘ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ’ಸಿಲೋನ್ ನ್ಯಾಷನಲ್ ರಿವ್ಯೂ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.

ದಾರ್ಶನಿಕ ಕೃತಿಗಳು[ಬದಲಾಯಿಸಿ]

 • ಆನಂದ ಕುಮಾರಸ್ವಾಮಿ ಪತ್ನಿ ರತ್ನಾದೇವಿಯೊಡನೆ ಯುರೋಪ್ ಮತ್ತು ಪೂರ್ವ ದೇಶಗಳ ಪರ್ಯಟನೆಗೆ ಹೊರಟರು. ಇಂಗ್ಲೆಂಡಿನಲ್ಲಿ ಬ್ರಾಡ್ ಕ್ಯಾಂಪ್ಡೆನ್ ಎಂಬ ಸ್ಥಳದಲ್ಲಿ ಒಂದು ಅಚ್ಚುಕೂಟವನ್ನು ಸ್ಥಾಪಿಸಿದರು. ‘ಮಧ್ಯಯುಗದ ಸಿಂಹಳದ ಕಲೆ’ ಎಂಬ ಅವರ ಪುಸ್ತಕ ಇಲ್ಲಿಯೇ ಅಚ್ಚಾ ದದ್ದು. ಅಜಂತಾ, ಎಲ್ಲೋರಾಗಳನ್ನು ಸಂದರ್ಶಿಸಿದರು. ಅಲ್ಲಿ ಭಾರತೀಯ ಕಲಾ ವೈಭವವನ್ನು ಕಂಡು ಅವರಿಗೆ ಅಪಾರ ಸಂತೋಷವಾಯಿತು. ಭಾರತೀಯ ಸಂಸ್ಕೃತಿಯ ಪ್ರತ್ಯಕ್ಷ ಪರಿಚಯವಾಯಿತು.
 • ೧೯೧೦ರಲ್ಲಿ ಆನಂದ ಕುಮಾರಸ್ವಾಮಿಯವರಿಗೆ ನೋವನ್ನುಂಟುಮಾಡುವ ಘಟನೆಯೊಂದು ನಡೆಯಿತು. ಸರ್ ಜಾರ್ಜ್ ಬರ್ಡ್‌ವುಡ್ ಎಂಬಾತ ಒಬ್ಬ ಕಲಾ ವಿಮರ್ಶಕ. ಈತ ಪಶ್ಚಿಮ ದೇಶಗಳ ಮತ್ತು ಪೂರ್ವದೇಶಗಳ ಕಲೆಗಳನ್ನು ಕುರಿತು ಒಂದು ಉಪನ್ಯಾಸ ಮಾಡಿದ. ಪೂರ್ವ ದೇಶ ಗಳಲ್ಲಿ ಕಲಾವಿದರು ಕಲಾಕೃತಿಗಳು ಎಂದು ಚಿತ್ರಗಳನ್ನು ಬರೆಯುತ್ತಾರೆ, ವಿಗ್ರಹಗಳನ್ನು ಮಾಡುತ್ತಾರೆ, ಆದರೆ ಸೌಂದರ್ಯ ಎಂದರೇನು ಎಂದೇ ಅವರಿಗೆ ತಿಳಿಯದು ಎಂದ. ಉದಾಹರಣೆ ಎಂದು ಪೂರ್ವ ದೇಶಗಳ ಬುದ್ಧ ವಿಗ್ರಹ ಗಳನ್ನು ಆರಿಸಿಕೊಂಡ.
 • “ಏನು ಸೌಂದರ್ಯ ಇದೆ ಇವುಗಳಲ್ಲಿ? ಮರದ ಹೊಟ್ಟಿನ ಕಡುಬುಗಳು ಇದ್ದ ಹಾಗಿವೆ” ಎಂದು ಹಾಸ್ಯಮಾಡಿದ. ಆನಂದ ಕುಮಾರಸ್ವಾಮಿಯವರಿಗೆ ನೋವಾಯಿತು, ಬೇಸರವಾಯಿತು. ಪೂರ್ವ ದೇಶಗಳಲ್ಲಿ ಕಲೆ ಹೇಗೆ ಹುಟ್ಟಿತು, ಹೇಗೆ ಬೆಳೆಯಿತು ಯಾವುದನ್ನೂ ತಿಳಿದುಕೊಳ್ಳದೆ ತಮ್ಮ ದೇಶದ ದೃಷ್ಟಿಯಿಂದಲೇ ಇಂತಹ ಜನ ಮಾತನಾಡುತ್ತಾರೆ. ಪೂರ್ವ ದೇಶಗಳಲ್ಲಿ ಹಲವರು ವಿದ್ಯಾವಂತರು ಸಹ ಇವರ ಮಾತನ್ನೇ ನಂಬುತ್ತಾರೆ, ಇದೇ ಕಣ್ಣಿನಿಂದಲೇ ತಮ್ಮ ದೇಶವನ್ನು ಕಾಣುತ್ತಾರೆ. ಇದು ಅನ್ಯಾಯ ಎನ್ನಿಸಿತು.
 • ಪೂರ್ವ ದೇಶಗಳ ಕಲೆಗಳನ್ನು ವಿವರಿಸುವ ಅಗತ್ಯ ಇನ್ನೂ ಸ್ಪಷ್ಟವಾಯಿತು. ಸ್ವಲ್ಪ ಕಾಲದನಂತರ ‘ಬುದ್ಧ ವಿಗ್ರಹದ ಮೂಲ’ ಎಂಬ ಪುಸ್ತಕವನ್ನು ಬರೆದರು. ಆನಂದ ಕುಮಾರಸ್ವಾಮಿಯವರವರೂ ಅವರ ಹೆಂಡತಿಯೂ ಸಿಂಹಳಕ್ಕೆ ಮರುಪ್ರಯಾಣ ಬೆಳೆಸಿದರು. ಹಿಂದಿರುಗಿದ ಮೇಲೆ ರತ್ನಾದೇವಿ ಗಂಡುಮಗು ಹೆತ್ತಳು. ಆನಂದ ಕುಮಾರಸ್ವಾಮಿ ಮಗನಿಗೆ ‘ನಾರದ’ ಎಂದು ನಾಮಕರಣ ಮಾಡಿದರು. ನಾರ ಎಂದರೆ ಜ್ಞಾನವನ್ನು, ದ ಎಂದರೆ ಕೊಡುವವನು, ಎಂದರೆ ನಾರದ ಜ್ಞಾನವನ್ನು ಕೊಡುವವನು.
 • ಆನಂದ ಕುಮಾರಸ್ವಾಮಿಯವರು ಬರವಣಿಗೆ ಪ್ರಾರಂಭಿಸಿದರು. ಭಾರತೀಯ ಕಲೆ ತನ್ನ ಪರಂಪರೆಯಲ್ಲಿ ಹೇಗೆ ಸಾಗಿಬಂತು ಎಂಬ ಸಂಗತಿಯನ್ನು ಕುರಿತು ಲೇಖನಗಳು ಪ್ರಕಟವಾದವು. ’ಕಲೆ ಮತ್ತು ಸ್ವದೇಶಿ’ ಎಂಬ ಪುಸ್ತಕ ಹೊರಬಂತು. ಇದು ಆನಂದ ಕುಮಾರಸ್ವಾಮಿಯವರ ಪ್ರಪಂಚ ಪರ್ಯಟನೆಯ ಅನಂತರ ಹೊರಬಂದ ಮೊದಲ ಪುಸ್ತಕ. ಎಲ್ಲೆಡೆಯಿಂದಲೂ ಅದಕ್ಕೆ ಸ್ವಾಗತ ದೊರೆಯಿತು.
 • ಜಗತ್ತಿನ ಶ್ರೇಷ್ಠ ವಿದ್ವಾಂಸರು ಆನಂದ ಕುಮಾರಸ್ವಾಮಿಯವರ ಗ್ರಂಥವನ್ನು ಹೊಗಳಿದರು. ಒಂದರನಂತರ ಒಂದು ಪುಸ್ತಕಗಳ ಪ್ರಕಟಣೆಯಾದವು. ಇವುಗಳಲ್ಲಿ ಒಂದು ‘ಭಾರತೀಯ ಹಾಗೂ ಸಿಂಹಳೀ ಕಲೆ ಮತ್ತು ಶಿಲ್ಪ’ ಎಂಬ ಇನ್ನೂರೈವತ್ತು ಪುಟಗಳ ಸಚಿತ್ರ ಪುಸ್ತಕ. ಇದರಲ್ಲಿ ಭಾರತೀಯ ಶಿಲ್ಪ, ಚಿತ್ರಕಲೆ, ಶಿಲ್ಪಶಾಸ್ತ್ರ ಮತ್ತು ಕರಕುಶಲ ಕಲೆಗಳ ಬಗ್ಗೆ ಬರೆದರು.

ನಿವೇದಿತಾ ಅವರೊಡನೆ ಕಾರ್ಯ[ಬದಲಾಯಿಸಿ]

 • ೧೯೧೭ರ ಒಂದು ದಿನ ಅಮೆರಿಕಾದಿಂದ ಕುಮಾರ ಸ್ವಾಮಿಯವರಿಗೆ ಕರೆ ಬಂತು. ಅವರನ್ನು ಬಾಸ್ಟನ್ನಿನ ಲಲಿತಕಲಾ ಸಂಗ್ರಹಾಲಯದಲ್ಲಿ ಭಾರತೀಯ, ಪರ್ಷಿಯನ್ ಮತ್ತು ಮುಸ್ಲಿಂ ಕಲೆಗಳ ಸಂಶೋಧನಾತಜ್ಞರಾಗಿ ನೇಮಕ ಮಾಡುವುದಾಗಿ ಆಹ್ವಾನಿಸಲಾಗಿತ್ತು. ಕುಮಾರಸ್ವಾಮಿಯವರ ಜೀವನದಲ್ಲಿ ಅದೊಂದು ತಿರುವು. ಅಮೆರಿಕಾದ ಕರೆಯನ್ನು ನಿರಾಕರಿಸಲಾಗಲಿಲ್ಲ. ರತ್ನಾದೇವಿಯ ಒಪ್ಪಿಗೆಯೂ ಸಿಕ್ಕಿತು. ಸಂಸಾರ ಸಮೇತ ಬಾಸ್ಟನ್ನಿಗೆ ಹೊರಟರು. ಬಾಸ್ಟನ್ನಿನ ಜೀವನ ಬಹಳ ಉಲ್ಲಾಸಕರ. ಮಾಡಿದಷ್ಟೂ ಕೆಲಸ; ದುಡಿದಷ್ಟೂ ಫಲ.
 • ಅಲ್ಲೆ ಅವರಿಗೆ ಸೋದರಿ ನಿವೇದಿತಾರ ಪರಿಚಯ ವಾಯಿತು. ಈಕೆ ಐರ್ಲೆಂಡ್ ದೇಶದವರು. ಈಕೆಯ ಮೊದಲ ಹೆಸರು ಮಿಸ್ ಮಾರ್ಗರೆಟ್ ಇ. ನೋಬಲ್. ಸ್ವಾಮಿ ವಿವೇಕಾನಂದರು ಷಿಕಾಗೋ ಸರ್ವಧರ್ಮ ಸಮ್ಮೇಳನಕ್ಕೆ ಹೋಗಿದ್ದಾಗ, ಈ ವೀರ ಸಂನ್ಯಾಸಿಯ ವ್ಯಕ್ತಿತ್ವಕ್ಕೆ ಮಾರುಹೋಗಿ ಈಕೆ ಅವರ ಶಿಷ್ಯರಾದರು. ಹಿಂದುಧರ್ಮ ಸ್ವೀಕರಿಸಿ ಸೋದರಿ ನಿವೇದಿತಾ ಎಂಬ ಹಿಂದು ಹೆಸರನ್ನು ಪಡೆದರು.
 • ಈಕೆಯೊಡನೆ ಕೆಲಸ ಮಾಡಿ ಆನಂದ ಕುಮಾರ ಸ್ವಾಮಿಯವರು, ‘ಹಿಂದುಗಳ ಮತ್ತು ಬೌದ್ಧರ ದಂತ ಕಥೆಗಳು’ ಎಂಬ ಗ್ರಂಥ ಬರೆದರು. ಅಮೆರಿಕದಲ್ಲಿಯೂ ಆನಂದ ಕುಮಾರಸ್ವಾಮಿ ಯವರವರು ಸಂಪೂರ್ಣ ಭಾರತೀಯರಂತೆ ಜೀವನ ನಡೆಸುತ್ತಿದ್ದರು. ಪ್ರತಿದಿನ ಸ್ನಾನವಾದ ಕೂಡಲೇ ಷಣ್ಮುಖನ ಪೂಜೆ ತಪ್ಪುತ್ತಿರಲಿಲ್ಲ. ಹಣೆಯಲ್ಲಿ ತಿಲಕ, ಗಂಧಧಾರಣೆ. ವಿದೇಶೀ ಉಡುಪಿದ್ದರೂ ಸಹ ತಲೆಯ ಮೇಲೆ ಟೋಪಿಯ ಬದಲು ರುಮಾಲು. ಬಾಸ್ಟನ್ನಿನಲ್ಲೆಲ್ಲಾ ಇವರ ಪೇಟ ಪ್ರಸಿದ್ಧಿ. ಬಾಸ್ಟನ್ನಿನ ಕಲಾಶಾಲೆಯಲ್ಲಿ ಅವರ ಅದ್ಭುತ ಕಾರ್ಯಪಟುತ್ವವನ್ನು ಗಮನಿಸಿದ ಸರ್ಕಾರ ಅವರನ್ನು ಅಲ್ಲಿಯ ಮುಖ್ಯಾಧಿಕಾರಿಯಾಗಿ ನೇಮಿಸಿತು.

ನೋವು ತಂದ ಅಗಲಿಕೆಗಳು[ಬದಲಾಯಿಸಿ]

 • ಕುಮಾರಸ್ವಾಮಿಯವರ ಮಗ ನಾರದ ಸಾಹಿತ್ಯಕ ಲೇಖನ ಬರೆಯುವುದರಲ್ಲಿ ಚೆನ್ನಾಗಿ ಪಳಗಿದ. ಒಳ್ಳೆಯ ಲೇಖಕನಾಗುವ ಸೂಚನೆಯೂ ಕಾಣಿಸುತ್ತಿತ್ತು. ಮಗಳು ರೋಹಿಣಿ ಸಂಗೀತ ಕಲಿಯುತ್ತಿದ್ದಳು. ಒಳ್ಳೆಯ ಸಂಗೀತ ವಿದುಷಿಯಾಗುವ ಭರವಸೆ ಕಾಣುತ್ತಿತ್ತು. ಕುಮಾರಸ್ವಾಮಿಯವರ ಸಂಸಾರ ಜೀವನ ಕೆಲವು ಕಾಲ ತುಂಬಾ ಸಂತೋಷದಿಂದ ಸಾಗಿತು. ಆದರೆ ಮೋಡಗಳು ಕವಿಯಲಾರಂಭವಾಯಿತು. ರತ್ನಾ ದೇವಿಯ ಆರೋಗ್ಯ ದಿನೇದಿನೇ ಕೆಡುತ್ತಾ ಬಂತು. ನಾರದನಿಗೆ ಪ್ರಪಂಚಪರ್ಯಟನೆಯ ಹುಚ್ಚು.
 • ಕುಮಾರ ಸ್ವಾಮಿಯವರು ಮಗನನ್ನು ಕುರಿತು ಹಾಸ್ಯ ಮಾಡುತ್ತಿದ್ದರು. “ನಾರದನೆಂಬ ನಿನ್ನ ಹೆಸರು ಅನ್ವರ್ಥವಾಗಿದೆ. ಪುರಾಣದ ನಾರದ ತ್ರಿಲೋಕ ಸಂಚಾರಿ. ನೀನೂ ಹಾಗೇ” ಎಂದು. ತಂದೆಯ ಮಾತಿಗೆ ನಾರದ ನಕ್ಕು ಸುಮ್ಮನಾಗುತ್ತಿದ್ದ. ಬಿಡುವಿನ ವೇಳೆಯಲ್ಲಿ ತಂದೆಯೊಡನೆ ಕುಳಿತು ತನಗೆ ತೊಡಕಾದ ವಿಚಾರಗಳನ್ನು ಚರ್ಚಿಸಿ ಅನುಮಾನ ಪರಿಹರಿಸಿಕೊಳ್ಳುತ್ತಿದ್ದ. ಒಂದು ಸಲ ನಾರದ ವಿಮಾನದಲ್ಲಿ ಪ್ರಯಾಣ ಹೊರಟ. ಹಿಂತಿರುಗಿ ಬರಲಿಲ್ಲ. ಅವನು ಪ್ರಯಾಣ ಮಾಡುತ್ತಿದ್ದ ವಿಮಾನ ಅಪಘಾತಕ್ಕೆ ಈಡಾಗಿ ಅಪಮೃತ್ಯು ಅವನನ್ನು ನುಂಗಿತು.
 • ವಿಷಯ ತಿಳಿದ ರತ್ನಾದೇವಿ ಮಗನ ಮರಣದ ದುಃಖ ತಾಳಲಾರದೆ ಎದೆಯೊಡೆದು ಸತ್ತಳು. ಆನಂದ ಕುಮಾರ ಸ್ವಾಮಿಯವರಿಗೆ ಬರಸಿಡಿಲು ಬಡಿದಂತಾಯಿತು. ಆನಂದ ಕುಮಾರಸ್ವಾಮಿ ಉಪನಿಷತ್ತು, ಗೀತೆಗಳ ಕಡೆಗೆ ತಿರುಗಿದರು. ಅವುಗಳನ್ನು ಓದಿ ಚಿಂತನೆ ಮಾಡಿ ಮನಸ್ಸನ್ನು ಸಮಾಧಾನಕ್ಕೆ ತಂದುಕೊಂಡರು. ಇದಾದ ಕೆಲಸವು ದಿನಗಳನಂತರ ಒಂದು ದಿನ ಮಗಳು ರೋಹಿಣಿ ಬಂದು, “ಅಪ್ಪಾಜಿ, ನನ್ನ ಸ್ವಂತ ವಿಷಯವೊಂದು ಮಾತನಾಡಬೇಕಾಗಿದೆ” ಎಂದಳು.
 • “ಏನು ಮಗು ಹೇಳು” ಎಂದರು ತಂದೆ. “ವಿಷಯ ಕೇಳಿ ನಿಮಗೆ ಅಸಮಾಧಾನವಾಗಬಹುದು.” “ಚಿಂತೆ ಇಲ್ಲ, ಏನು ವಿಷಯ ಹೇಳು ಮಗು.” “ಏನಿಲ್ಲ ಅಪ್ಪಾಜಿ, ನಾನೊಬ್ಬ ಅಮೆರಿಕನ್ ಯುವಕನನ್ನು ಪ್ರೀತಿಸುತ್ತಿದ್ದೇನೆ. ಆತನನ್ನೇ ವಿವಾಹವಾಗ ಬೇಕೆಂದಿದ್ದೇನೆ. ಅದಕ್ಕೆ ನಿಮ್ಮ ಸಮ್ಮತಿ ಬೇಕು.” ವಿಷಯ ಕೇಳಿ ಅನಂದ ಕುಮಾರಸ್ವಾಮಿಯವರಿಗೆ ದಿಗ್ಭ್ರಮೆಯಾಯಿತು. “ರೋಹಿಣಿ, ನಿನ್ನ ಅಣ್ಣ, ನಿನ್ನ ತಾಯಿಯನ್ನು ಕಳೆದುಕೊಂಡಾಯಿತು. ನಿನ್ನಲ್ಲಿ ನನಗೆ ನಂಬಿಕೆ ಇತ್ತು. ನೀನು ಭಾರತೀಯ ಸಂಗೀತವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದೀಯೆ. ನೀನೊಬ್ಬ ಭಾರತೀಯನನ್ನು ಮದುವೆಯಾಗಬೇಕು ಅಂತ ನನ್ನ ಆಸೆ. ಇದರಿಂದ ಭಾರತದಲ್ಲಿ ಒಳ್ಳೆಯ ಕೀರ್ತಿ ಪಡೆಯಬಹುದು.”
 • “ಇಲ್ಲ ಅಪ್ಪಾಜಿ, ನನಗೆ ಅದೊಂದೂ ಬೇಕಿಲ್ಲ. ನಾನಾಗಲೇ ನಿರ್ಧರಿಸಿ ಆಗಿದೆ. ದಯವಿಟ್ಟು ನನಗೆ ಅಪ್ಪಣೆ ಕೊಡಿ.” ಆನಂದ ಕುಮಾರಸ್ವಾಮಿಯವರಿಗೆ ಮನಸ್ಸಿಗೆ ನೋವಾಯಿತು. ಆದರೆ ಮಗಳ ಸುಖ, ಸಂತೋಷ ಮುಖ್ಯ. “ಒಳ್ಳೆಯದು ಮಗು, ನಿನ್ನಿಷ್ಟ ಬಂದಂತೆ ಮಾಡು. ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂದು ಶುಭಕೋರಿ ಕಳುಹಿಸಿಕೊಟ್ಟರು.

ನಿರಂತರ ಗ್ರಂಥ ರಚನೆ[ಬದಲಾಯಿಸಿ]

ಈಗ ಪುನಃ ಕುಮಾರಸ್ವಾಮಿಗಳು ಒಂಟಿ. ಮೇಲಿಂದ ಮೇಲೆ ಆದ ಅಘಾತಗಳಿಂದ ಮನಸ್ಸಿಗೆ ಸಮಾಧಾನ ಕೊಡುತ್ತಿದ್ದ ಸಂಗತಿಯೆಂದರೆ ಗ್ರಂಥ ರಚನೆಯ ಕಾರ್ಯ.[೨] ‘ಶಿವನೃತ್ಯ’, ‘ಪ್ರಕೃತಿಯಲ್ಲಿ ರೂಪ ಬದಲಾವಣೆ’, ‘ಕಲೆಯಲ್ಲಿ ಕ್ರೈಸ್ತ ಮತ್ತು ಪೌರ್ವಾತ್ಯ ತತ್ವಚಿಂತನೆ’, ‘ಭಾರತೀಯ ಮತ್ತು ಇಂಡೋನೇಷ್ಯ ಕಲೆಗಳ ಇತಿಹಾಸ’, ‘ಬುದ್ಧ ಮತ್ತು ಬೌದ್ಧರ ತತ್ವಬೋಧೆ’ ಎಂಬ ಗ್ರಂಥಗಳನ್ನು ರಚಿಸಿದರು.

ಮಗ ರಾಮ[ಬದಲಾಯಿಸಿ]

 • ಸಂನ್ಯಾಸಿಯಂತಹ ಒಂಟಿ ಬದುಕು. ತಮ್ಮ ಕೈ ಅಡಿಗೆಯ ಊಟ. ತಮ್ಮ ಕೆಲಸಗಳನ್ನೆಲ್ಲ ತಾವೇ ಮಾಡಿಕೊಳ್ಳುವರು. ಜೊತೆಗೆ ಪುಸ್ತಕಗಳ ಅಧ್ಯಯನ, ಕಲೆಗಳ ಅಧ್ಯಯನ. ಹೀಗೆ ಸ್ವಲ್ಪ ಕಾಲ ನಡೆಯಿತು. ಆನಂದ ಕುಮಾರಸ್ವಾಮಿಗಳಿಗೆ ಬಾಸ್ಟನ್ನಿನಲ್ಲಿ ನೆಲೆಸಿದ್ದ ಅರ್ಜಂಟೈನಾದ ಡೋನಾ ಲ್ಯೂಸಾ ಎಂಬಾಕೆಯ ಪರಿಚಯ ವಾಯಿತು. ಈಕೆ ವಿಧವೆ. ಇವಳು ತಾನಾಗಿ ಕುಮಾರ ಸ್ವಾಮಿಯವರರನ್ನು ನೋಡಿಕೊಂಡಳು. ಅರ್ಧಾಂಗಿ, ಸಹಧರ್ಮಚಾರಿಣಿ ಎಂದು ಕಾರ್ಯತಃ ತೋರಿಸಿಕೊಟ್ಟಳು.
 • ಆನಂದ ಕುಮಾರಸ್ವಾಮಿಯವರ ಲೇಖನಗಳನ್ನು ಸಂಪಾದಿಸುವುದರಲ್ಲಿ ಅವಳ ಶ್ರಮ ಅಪಾರ. ಅವರು ಆಕೆಯೊಡನೆ ಜೀವನದಲ್ಲಿ ತಮ್ಮ ದುಃಖ ಮರೆತರು. ಆಕೆಗೂ ಒಂದು ಗಂಡುಮಗು ಹುಟ್ಟಿತು. ಇವನಿಗೆ ‘ರಾಮ’ ಎಂದು ನಾಮಕರಣ ಮಾಡಿದರು. ಈತನನ್ನು ಬಹು ಎಚ್ಚರಿಕೆಯಿಂದ ಸಾಕಿದರು. ರಾಮನಿಗೆ ಭಾರತೀಯ ಪದ್ಧತಿಯ ವಿದ್ಯಾಭ್ಯಾಸ ಮಾಡಿಸಬೇಕೆಂದು ಹರಿದ್ವಾರದ ಗುರುಕುಲ ವಿಶ್ವವಿದ್ಯಾಲಯದಲ್ಲಿ ಸೇರಿಸಿದರು. ಅಲ್ಲಿ ಆತ ಪದವಿ ಪಡೆದ. ಮುಂದೆ ಅಮೆರಿಕಾದ ಅಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ಪ್ರಾವೀಣ್ಯ ಪಡೆದ. ಮುಂದೆ ಅಮೆರಿಕದಲ್ಲೇ ವೈದ್ಯರಾಗಿ ಸೇವೆ ಸಲ್ಲಿಸಿ ೨೦೦೬ರ ವರ್ಷದಲ್ಲಿ ನಿಧನರಾದರು.

ವಿದಾಯ[ಬದಲಾಯಿಸಿ]

 • ಆನಂದ ಕುಮಾರಸ್ವಾಮಿಯವರ ಬಾಳೆಲ್ಲ ಪೂರ್ವ ದೇಶಗಳ, ಮುಖ್ಯವಾಗಿ ಭಾರತದ, ಚಿತ್ರಕಲೆ-ನೃತ್ಯಕಲೆ-ನಾಟಕ- ಸಂಗೀತಗಳ ಅಧ್ಯಯನಕ್ಕೇ ಮುಡಿಪಾಗಿತ್ತು. ಅವರ ಕಡೆಯ ವರ್ಷಗಳಂತೂ ಒಂದು ತಪಸ್ಸೇ ಆಯಿತು. ಅವರು ಅಮೆಕರಿಕದ ಬಾಸ್ಟನ್ನಿನಲ್ಲಿದ್ದರೂ ಅವರ ಚೇತನ ಭಾರತದಲ್ಲೇ ಇತ್ತು. ಭಾರತದ ಚಿತ್ರಗಳು, ಭಾರತದ ನೃತ್ಯಗಳು, ಭಾರತದ ನಾಟಕಗಳು, ಭಾರತದ ಸಂಗೀತ, ಭಾರತದ ಧರ್ಮ ಗ್ರಂಥಗಳು, ಭಾರತದ ಸಾಹಿತ್ಯ, ಭಾರತದ ಸಂಸ್ಕೃತಿ - ಇವುಗಳೇ ಅವರ ಹೃದಯದ ತುಂಬಾ, ಮೆದುಳಿನ ತುಂಬಾ.
 • ೧೯೪೭ರ ಸೆಪ್ಟೆಂಬರ್ ೮ರಂದು ಅವರು ಇದ್ದಕ್ಕಿದ್ದಂತೆ ತೀರಿಕೊಂಡರು. ಹದಿನೈದು ದಿನಗಳ ಮೊದಲು ಅವರಿಗೆ ಎಪ್ಪತ್ತು ವರ್ಷ ತುಂಬಿತ್ತು. ಅವರು ಸಾಯುವುದಕ್ಕೆ ಮುಂಚೆ ಕೊಟ್ಟಿದ್ದ ಸೂಚನೆಯಂತೆ ಅವರ ಚಿತಾಭಸ್ಮವನ್ನು ಅವರ ಮಗ ರಾಮ ಗಂಗಾ ನದಿಯಲ್ಲಿ ವಿಸರ್ಜಿಸಿದರು. ವಿದೇಶದಲ್ಲಿದ್ದ ಭಾರತದ ಪವಿತ್ರಾತ್ಮವೊಂದು ಭಾರತದಲ್ಲೇ ಲೀನವಾದಂತಾಯಿತು.

ಭಾರತೀಯ ಸಂಸ್ಕೃತಿಯನ್ನು ಲೋಕಕ್ಕೆ ತಿಳಿಸಿದ ಧೀಮಂತ[ಬದಲಾಯಿಸಿ]

 • ಬಹು ದೊಡ್ಡ ವಿಮರ್ಶಕರು ಎಂದು ಪಾಶ್ಚಾತ್ಯ ದೇಶಗಳಲ್ಲಿ ಪ್ರಸಿದ್ಧರಾದವರು ಭಾರತದ ಕಲೆಗಳನ್ನು ಅರ್ಥ ಮಾಡಿಕೊಳ್ಳದೆ, ಜವಾಬ್ದಾರಿ ಇಲ್ಲದೆ ಮಾತನಾಡುತ್ತಿದ್ದ ಕಾಲದಲ್ಲಿ ಅವರ ಕಣ್ಣು ತೆರೆಸಿದವರು ಆನಂದ ಕುಮಾರಸ್ವಾಮಿ. ವಿನ್ಸೆಂಟ್ ಸ್ಮಿತ್, ಮಾಸ್ಕಲ್, ಬರ್ಡ್‌ವುಡ್ ಮತ್ತು ಅರ್ಚರ್ ಎಂಬ ವಿದೇಶೀ ಕಲಾ ವಿಮರ್ಶಕರಿಗೆ ಭಾರತೀಯ ಕಲೆಯನ್ನು ಕಂಡರೆ ಅವಹೇಳನ, ತಿರಸ್ಕಾರ. ಭಾರತದ ಪುರಾತನ ಕಲೆಯ ಸಂಕೇತಗಳಾದ ದೇವದೇವತೆಗಳ ವಿಗ್ರಹಗಳನ್ನು ಕಂಡರೆ ತಾತ್ಸಾರ ಭಾವನೆ.
 • ಇದನ್ನು ಕಂಡು ರೋಸಿದ ಕುಮಾರಸ್ವಾಮಿಗಳು ಭಾರತೀಯ ಕಲೆ ಮತ್ತು ಸಂಸ್ಕೃತಿಗಳನ್ನು ಕುರಿತು ಲೇಖನಮಾಲೆಗಳನ್ನು ರಚಿಸಿ ಭಾರತೀಯ ಕಲೆ ಮತ್ತು ಸಂಸ್ಕೃತಿಗಳ ಅವಹೇಳನ ಮಾಡುವವರು ತತ್ತರಿಸುವಂತೆ ಉತ್ತರ ಕೊಟ್ಟರು. ಭಾರತೀಯ ಕಲೆಯ ಸಚೇತನ ಮತ್ತು ಅನಂತತ್ವಗಳ ಸತ್ಯದರ್ಶನ ಮಾಡಿಸಿದರು. ಕಲೆ ಮತ್ತು ಸೌಂದರ್ಯ ಪ್ರತೀಕಗಳಾದ ಅಜಂತಾ, ಎಲ್ಲೋರಾಗಳು ಪ್ರೇಕ್ಷಕರ ಮತ್ತು ಕಲಾವಿದರ ಹೃದಯಗಳನ್ನು ಈಗಲೂ ಹೇಗೆ ಸೆರೆ ಹಿಡಿಯುತ್ತವೆ ಎಂಬುದನ್ನು ತೋರಿಸಿಕೊಟ್ಟರು.
 • ಪಶ್ಚಿಮ ದೇಶಗಳ ಕಲೆಗೂ ಪೂರ್ವ ದೇಶಗಳ ಕಲೆಗೂ ಇರುವ ವ್ಯತ್ಯಾಸಗಳನ್ನು ಅನೇಕ ಗ್ರಂಥಗಳಲ್ಲಿ ವಿವರಿಸಿದ ಆನಂದ ಕುಮಾರಸ್ವಾಮಿಯವರು, “ಪೂರ್ವ ದೇಶಗಳ ಕಲೆಯನ್ನು ಪಶ್ಚಿಮದ ಕಣ್ಣು-ಮನಸ್ಸುಗಳಿಂದಲೇ ನೋಡುವುದನ್ನು ಬಿಡಬೇಕು” ಎಂದರು. ಪ್ರಾಚೀನ ಭಾರತದಲ್ಲಿ ಎಷ್ಟೋ ಬಾರಿ ಮಂತ್ರಗಳನ್ನು ರಚಿಸಿದವರು, ವಿಗ್ರಹಗಳನ್ನು ಸೃಷ್ಟಿಸಿದವರು, ಕಾವ್ಯಗಳನ್ನು ಬರೆದವರು ಇವರ ಹೆಸರುಗಳೇ ತಿಳಿಯುವುದಿಲ್ಲ. ತಿಳಿದಾಗಲೂ ಅವರ ವಿಷಯ ಖಚಿತವಾಗಿ ವಿವರಗಳು ಗೊತ್ತಾಗುವುದಿಲ್ಲ.
 • ಈ ದೇಶದಲ್ಲಿ ಕಲಾವಿದ ತನ್ನ ಸ್ವಂತ ಕಲ್ಪನೆಯಷ್ಟನ್ನೆ ಆಧಾರವಾಗಿಟ್ಟುಕೊಂಡು ಸೃಷ್ಟಿಯ ಕೆಲಸ ಮಾಡುತ್ತಿರಲಿಲ್ಲ. ಒಂದು ವಿಗ್ರಹ ಮಾಡುವಾಗ-ಬುದ್ಧನದಾಗಲಿ, ನಟರಾಜನದಾಗಲಿ, ಮಹಿಷಾಸುರಮರ್ಧಿನಿಯದಾಗಲಿ - ‘ಬುದ್ಧ ಹೀಗಿದ್ದಿರಬೇಕು, ನಟರಾಜ ನೃತ್ಯ ಮಾಡುವಾಗ ಹೀಗೆ ಕಂಡಿರಬೇಕು, ಮಹಿಷಾಸುರಮರ್ಧಿನಿ ಹೀಗಿದ್ದಿರಬೇಕು’ ಎಂದು ತಾನೊಬ್ಬನೇ ಕಲ್ಪಿಸಿಕೊಂಡು ವಿಗ್ರಹವನ್ನು ಮಾಡುತ್ತಿರಲಿಲ್ಲ. ತಾನು ಯಾವ ಸಮಾಜದ ಸದಸ್ಯನಾಗಿದ್ದನೋ ಆ ಇಡೀ ಸಮಾಜದ ಕಲ್ಪನೆಯನ್ನು ರಕ್ತಗತ ಮಾಡಿಕೊಂಡು ವಿಗ್ರಹವನ್ನು ಮಾಡುತ್ತಿದ್ದ.
 • ಪಶ್ಚಿಮ ದೇಶಗಳಲ್ಲಿ ಕಲಾವಿದ ಪ್ರತ್ಯೇಕ ವ್ಯಕ್ತಿ; ಅವನ ಭಾವನೆಗಳು, ಊಹೆ, ಕಲ್ಪನೆ ಅವನು ಬರೆಯುವ ಚಿತ್ರಗಳಿಗೆ, ವಿಗ್ರಹಗಳಿಗೆ ಆಧಾರ. ಆದರೆ ಭಾರತದಲ್ಲಿ ಒಂದು ಚಿತ್ರಕ್ಕೆ, ಒಂದು ಹಾಡಿಗೆ, ಒಂದು ವಿಗ್ರಹಕ್ಕೆ ಇಡೀ ಗುಂಪಿನ ನಂಬಿಕೆಗಳ ಮತ್ತು ಕಲ್ಪನೆಯ ಆಧಾರವಿದೆ. ಭಾರತದ ಕಲಾಕೃತಿಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇಡೀ ಹಿಂದುಸಮಾಜದ ಭಾವನೆಗಳನ್ನೂ ನಂಬಿಕೆಗಳನ್ನೂ ಅರ್ಥ ಮಾಡಿಕೊಳ್ಳಬೇಕು. ಈ ಕೃತಿಗಳು ‘ವಾಸ್ತವಿಕ’ ಅಲ್ಲ, ಇವುಗಳು ‘ಸಂಕೇತ’ಗಳು.
 • ಎಂದರೆ, ಬುದ್ಧನ ವಿಗ್ರಹ, ನಟರಾಜನ ವಿಗ್ರಹ, ಗಣಪತಿಯ ವಿಗ್ರಹ ಇಂತಹವನ್ನು ಶಿಲ್ಪಿ ಹೇಗೆ ಮಾಡಿದ್ದಾನೋ ಹಾಗೆಯೇ ಬುದ್ಧ, ನಟರಾಜ, ಗಣಪತಿ ಇದ್ದರು ಎಂದು ಶಿಲ್ಪಿಯಾಗಲಿ, ಅವನ ಕಾಲದ ಜನರಾಗಲಿ ನಂಬಿದ್ದರು ಎಂದೂ ನಾವು ಭಾವಿಸಬಾರದು. ಬುದ್ಧ ಪದ್ಮದ ಮೇಲೆ ಕುಳಿತಂತೆ ತೋರಿಸಿದರೆ ನಿಜವಾಗಿ ಬುದ್ಧ ಪದ್ಮದ ಮೇಲೆಯೇ ಕುಳಿತಿರುತ್ತಿದ್ದ ಎಂದು ಶಿಲ್ಪಿಯಾಗಲಿ ಅವನ ಕಾಲದ ಜನರಾಗಲಿ ನಂಬಿದ್ದರು ಎಂದು ನಾವು ತಿಳಿದುಕೊಳ್ಳಬಾರದು.
 • ಪದ್ಮಕ್ಕೆ, ಎರಡು ಕೈಗಳು, ನಾಲ್ಕು ಕೈಗಳು, ಎಂಟು ಕೈಗಳು ಇಂತಹ ವಿವರಗಳಿಗೆ ಆಳವಾದ ಅರ್ಥ ಉಂಟು. ನಟರಾಜನ ವಿಗ್ರಹ ಶಿವನ ಐದು ಕಾರ್ಯಗಳನ್ನು ಸಂಕೇತಗಳ ಮೂಲಕ ತೋರಿಸುತ್ತದೆ - ಜಗತ್ತಿನ ಸೃಷ್ಟಿ, ಜಗತ್ತಿನ ರಕ್ಷಣೆ, ಜಗತ್ತಿನ ನಾಶ, ಮರೆ ಮಾಡುವುದು, ಮುಕ್ತಿ ನೀಡುವುದು. ಡಮರುಗ ಸೃಷ್ಟಿಯ ಪ್ರಾರಂಭದ ಸಂಕೇತ. ಅಭಯ ಹಸ್ತ ಕಾಪಾಡುವ ಭರವಸೆಯನ್ನು ಕೊಡುತ್ತದೆ. ಒಂದು ಕೈಯಲ್ಲಿರುವ ಬೆಂಕಿ ನಾಶದ ಸಂಕೇತ. ಮೇಲೆತ್ತಿದ ಪಾದ ಮುಕ್ತಿಯ ಸೂಚನೆ.
 • ನಾಲ್ಕನೆಯ ಕೈ, ಆತ್ಮದ ಆಶ್ರಯವಾದ ಈ ಪಾದವನ್ನು ತೋರಿಸುತ್ತದೆ. ಉರಿಯುತ್ತಿರುವ ನೆಲ ಮಾನವನ ಆತ್ಮ ಮತ್ತು ಹೃದಯ; ಇಲ್ಲಿನ ಎಲ್ಲ ಆಸೆಗಳನ್ನೂ ಭ್ರಾಂತಿಗಳನ್ನೂ ಸುಡುತ್ತಿದ್ದಾನೆ ಶಿವ. ಹೀಗೆ ನಟರಾಜನ ವಿಗ್ರಹದ ಒಂದೊಂದು ವಿವರಕ್ಕೂ ಅರ್ಥ ಉಂಟು. ಈ ವಿವರಗಳು ವಿಗ್ರಹವನ್ನು ಮಾಡುವ ಶಿಲ್ಪಿ ತಾನೊಬ್ಬನೇ ತೀರ್ಮಾನಿಸಿದುವಲ್ಲ. ಅವನ ಇಡೀ ಸಮಾಜದ ಭಾವನೆಗಳು, ಕಲ್ಪನೆಗಳು ವಿಗ್ರಹದಲ್ಲಿ ಮೈ ತಾಳಿವೆ.
 • ನಟರಾಜನ ವಿಗ್ರಹವನ್ನು ನೋಡಿದವರಿಗೆ, ’ನಟರಾಜ ಎಂಬ ದೇವರು ಹೀಗೆ ಕಾಣುತ್ತಾನೆ’ ಎಂದು ತೋರಿಸುವುದು ಶಿಲ್ಪಿಯ ಮುಖ್ಯ ಉದ್ದೇಶವಲ್ಲ. ವಿಶ್ವದಲ್ಲಿ ಒಂದು ಶಕ್ತಿ ಇದೆ: ಅದೇ ವಿಶ್ವವನ್ನು ಸೃಷ್ಟಿಸಿತು, ಅದೇ ಅದನ್ನು ಕಾಪಾಡುತ್ತಿದೆ, ಅದೇ ಅದನ್ನು ನಾಶಮಾಡುತ್ತದೆ, ಅದೇ ಮನುಷ್ಯನ ಮನಸ್ಸಿನ ಆಸೆಗಳನ್ನೂ ಭ್ರಾಂತಿಗಳನ್ನೂ ನಾಶಮಾಡುತ್ತದೆ, ಅದೇ ಮನುಷ್ಯನಿಗೆ ಮುಕ್ತಿಯನ್ನು ಕೊಡುತ್ತದೆ ಎಂಬ ಭಾವನೆಗೆ ಕಣ್ಣಿಗೆ ಕಾಣುವ ರೂಪ ಕೊಡುವುದು ಅವನ ಮುಖ್ಯ ಉದ್ದೇಶ.
 • ಅದಕ್ಕಾಗಿ ಅವನು ಕೈಕಾಲುಗಳ ಭಂಗಿ, ಡಮರುಗದಂತಹ ವಿವರ ಎಲ್ಲವನ್ನೂ ಉಪಯೋಗಿಸಿಕೊಳ್ಳುತ್ತಾನೆ. ಭಾರತೀಯ ಕಲೆ, ಸಂಸ್ಕೃತಿಗಳಲ್ಲದೆ ಸಂಗೀತದಲ್ಲಿಯೂ ಆನಂದ ಕುಮಾರಸ್ವಾಮಿ ಆಸಕ್ತಿ ತೋರಿಸಿದ್ದಾರೆ. ಭಾರತೀಯ ಸಂಗೀತವನ್ನು ಕುರಿತು, “ಭಾರತೀಯ ಸಂಗೀತ ವಿಶಾಲ ಮನೋಭೂಮಿಕೆಯ ಅನುಭವ ಕೊಡುತ್ತದೆ. ಅದರಿಂದ ಉಂಟಾಗುವ ದುಃಖದ ಸಂವೇದನೆ ಕಣ್ಣೀರಿಲ್ಲದ್ದು, ಸಂತೋಷ ಆಡಂಬರ ರಹಿತ, ಅದರ ಭಾವೋದ್ದೀಪತೆ ಪ್ರಶಾಂತವಾದದ್ದು” ಎಂದು ಹೇಳಿದ್ದಾರೆ.
 • ಭಾರತೀಯ ಕಲೆಯ ಇತಿಹಾಸವನ್ನು ಕುರಿತು ಬರೆಯುತ್ತಾ, “ಹಿಂದುಗಳ ಧಾರ್ಮಿಕತೆ, ಸೌಂದರ್ಯ ಮತ್ತು ವ್ಶೆಜ್ಞಾನಿಕ ದೃಷ್ಟಿಗಳ ನಡುವೆ ತಿಕ್ಕಾಟ, ವ್ಯತ್ಯಾಸ ಇದೆಯೆಂದು ಅನ್ನಿಸುವುದಿಲ್ಲ. ಅವರ ಎಲ್ಲ ಶ್ರೇಷ್ಠ ಕಾರ್ಯಗಳಲ್ಲೂ ಸಂಗೀತ, ಸಾಹಿತ್ಯ ಅಥವಾ ಇನ್ನಾವುದೇ ಕಲೆಯು ಬೇರ್ಪಡಿಸಲಾಗದಂತಹ ಏಕತೆ ಅಡಗಿದೆ” ಎಂದಿದ್ದಾರೆ. ಆನಂದ ಕುಮಾರಸ್ವಾಮಿಯವರು ಭಾರತದ ಕಲೆಗಳನ್ನು ಕುರಿತು ಪಶ್ಚಿಮ ದೇಶಗಳವರ ಕಣ್ಣನ್ನು ಎಷ್ಟರಮಟ್ಟಿಗೆ ತೆರೆಸಿದರು ಎನ್ನುವುದಕ್ಕೆ ಒಂದು ಸ್ಪಷ್ಟ ಉದಾಹರಣೆ ಇದೆ.
 • ‘ಎನ್ಸೈಕ್ಲೋಪೀಡಿಯ ಬ್ರಿಟಾನಿಕಾ’ ಎನ್ನುವುದು ಜಗತ್ಪ್ರಸಿದ್ಧ ವಿಶ್ವಕೋಶ. ಎಲ್ಲ ವಿಷಯಗಳ ಮೇಲೆ ಇದರಲ್ಲಿ ಲೇಖನಗಳಿರುತ್ತವೆ, ಯಾರು ಯಾವ ವಿಷಯ ತಿಳಿದುಕೊಳ್ಳಬೇಕಾದರೂ ಈ ವಿಶ್ವಕೋಶಕ್ಕೆ ತಿರುಗಿದರೆ ಸಾಕು ಎಂದು ನಂಬಿಕೆ. ಆದರೆ ಅದರ ಹದಿಮೂರನೆಯ ಆವೃತ್ತಿಯವರೆಗೆ ಭಾರತೀಯ ಕಲೆಗಳ ಮೇಲೆ ಇದರಲ್ಲಿ ಲೇಖನವೇ ಇರಲಿಲ್ಲ. ಆನಂದ ಕುಮಾರಸ್ವಾಮಿ ಭಾರತೀಯ ಕಲೆಗಳನ್ನು ಕುರಿತು ಅಷ್ಟೊಂದು ಪುಸ್ತಕಗಳನ್ನು ಬರೆದ ಮೇಲೆ ಎನ್ಸೈಕ್ಲೋಪೀಡಿಯ ಸಿದ್ಧಮಾಡುವವರ ಕಣ್ಣು ತೆರೆಯಿತು.
 • ಭಾರತೀಯ ಕಲೆಗಳನ್ನು ಕುರಿತು ಲೇಖನಗಳನ್ನು ಬರೆಯುವಂತೆ ಆನಂದ ಕುಮಾರ ಸ್ವಾಮಿಯವರನ್ನೇ ಆಹ್ವಾನಿಸಿದರು. ಆನಂದ ಕುಮಾರಸ್ವಾಮಿ ಹದಿನಾಲ್ಕನೆಯ ಆವೃತ್ತಿಗೆ ಎಂಟು ಲೇಖನಗಳನ್ನು ಬರೆದರು. ತಮ್ಮ ದೇಶದ ಹಿರಿಮೆ ಭಾರತೀಯರಿಗೇ ತಿಳಿಯದು ಎಂದು ಆನಂದ ಕುಮಾರಸ್ವಾಮಿ ಬಹು ವಿಷಾದ ಪಡುತ್ತಿದ್ದರು. ಆಂಗ್ಲ ಸರ್ಕಾರ ಇಲ್ಲಿ ಹುಟ್ಟುಹಾಕಿದ ವಿದ್ಯಾಭ್ಯಾಸಕ್ರಮ ಪೂರ್ಣವಾಗಿ ಪಾಶ್ಚಾತ್ಯರೂ ಅಲ್ಲದ, ಪೂರ್ಣವಾಗಿ ಭಾರತೀಯರೂ ಅಲ್ಲದ ವಿಚಿತ್ರ ಯುವಕ ಜನಾಂಗವನ್ನು ಸೃಷ್ಟಿಸುತ್ತಿದೆ ಎನ್ನುತ್ತಿದ್ದರು.
 • ಆನಂದ ಕುಮಾರಸ್ವಾಮಿಯವರು ಒಮ್ಮೆ ಅಮೆರಿಕಕ್ಕೆ ಹೆಚ್ಚಿನ ವ್ಯಾಸಂಗಕ್ಕಾಗಿ ಬಂದಿದ್ದ ಭಾರತೀಯ ಯುವಕರ ಸಭೆಯೊಂದನ್ನು ಕುರಿತು ಮಾತನಾಡುತ್ತಾ, “ನೀವು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ವ್ಯಕ್ತಿತ್ವವನ್ನು ಮರೆಯದೆ ಭಾರತೀಯತೆಯ ರಾಯಭಾರಿಗಳಂತೆ ವರ್ತಿಸ ಬೇಕು. ನೀವು ಎಲ್ಲೇ ಇರಲಿ, ಏನೇ ಆಗಿರಲಿ, ಭಾರತೀಯರಂತೆ ಇರಬೇಕು” ಎಂದು ಹೇಳಿದರು. ಆನಂದ ಕುಮಾರಸ್ವಾಮಿಯವರೇ ಪ್ರಪಂಚಕ್ಕೆಲ್ಲ ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿದ್ದರು. ಆನಂದ ಕುಮಾರಸ್ವಾಮಿ ಬಹು ಸರಳ ಸ್ವಭಾವದ ಮನುಷ್ಯ.
 • ತುಂಬಾ ಸಂಕೋಚಪ್ರವೃತ್ತಿಯ ವ್ಯಕ್ತಿ. ಅವರ ವೈಯಕ್ತಿಕ ಸಂಗತಿ ಸಂಪೂರ್ಣ ತಿಳಿದಿಲ್ಲ. ನಿಗರ್ವಿ, ಅಂತರ್ಮುಖಿ. ಎಲ್ಲರೊಡನೆ ಸುಲಭವಾಗಿ ಬೆರೆಯುತ್ತಿದ್ದರು. ಆದರೆ ತಮ್ಮ ವಿಷಯ ಹೇಳಿಕೊಳ್ಳುವುದು, ಹೊಗಳಿಕೆ ಅವರಿಗೆ ಬೇಕಿರಲಿಲ್ಲ. ನುಡಿವುದೊಂದು ನಡೆವುದೊಂದು ಅವರಿಗೆ ಆಗದು. ನುಡಿದಂತೆ ನಡೆದರು. ಒಮ್ಮೆ ಅವರ ಮಿತ್ರ ದೊರೈ ಸಿಂಗ್ ಎಂಬುವರು ಆನಂದ ಕುಮಾರಸ್ವಾಮಿಯವರ ಜೀವನ ಚರಿತ್ರೆ ಬರೆಯಬೇಕೆಂದು ನಿರ್ಧರಿಸಿ, ಅವರನ್ನು ಕುರಿತ ವಿವರವಾದ ಸಂಗತಿ ತಿಳಿಸಿ ಎಂದು ಕೇಳಿದರು.
 • ಅದಕ್ಕೆ ಆನಂದ ಕುಮಾರಸ್ವಾಮಿ ಒಪ್ಪಲಿಲ್ಲ. ಅವರ ಮಿತ್ರರಿಗೆ ಹೀಗೆ ಕಾಗದ ಬರೆದರು: “ನಾನು ಯಾವಾಗಲೂ ಮರೆಯಲ್ಲಿ ಇರಲು ಬಯಸುತ್ತೇನೆ. ನೀವು ನನ್ನನ್ನು ಕುರಿತು ಬರೆಯುವ ಬದಲು, ನಾನು ಮಾಡಿದ ಕೆಲಸವನ್ನು ಕುರಿತು ಇದ್ದ ಸಂಗತಿ ಬರೆಯಿರಿ. ನಾನು ಬರೆದಿರುವ ಗ್ರಂಥಗಳ ವಿಮರ್ಶೆ ಬರೆಯಿರಿ. ಅಷ್ಟು ಸಾಕು. ನಾನು ಭಾರತೀಯ ಸಂಸ್ಕೃತಿಯ ಆರಾಧಕ. ಅದರಂತೆ ಮಾನವನ ಆತ್ಮಚರಿತ್ರೆ ಬರೆಯುವುದು ’ಅಸ್ವರ್ಗ’ (ಎಂದರೆ ನರಕ ಪ್ರಾಪ್ತಿ) ಎಂದು ನನ್ನ ನಂಬಿಕೆ. ಇದು ಕೇವಲ ನನ್ನ ವಿನಯದ ಪ್ರದರ್ಶನವಲ್ಲ, ನನ್ನ ಜೀವನದ ತತ್ವ.”

ಉಲ್ಲೇಖಗಳು[ಬದಲಾಯಿಸಿ]

 1. "ಮಯೂರ,ಡಿಸೆಂಬರ್,೨೦೧೪,ಪುಟ : ೮೦-೮೭,'ಭಾರತೀಯನಲ್ಲದ ನಿಜ ಭಾರತೀಯ ಆನಂದ ಕುಮಾರಸ್ವಾಮಿ-ಪ್ರೊ.ಬಸವಣ್ಣ". Archived from the original on 2013-11-22. Retrieved 2014-12-21.
 2. 'World wisdom,' Ananda K.Coomaraswamy’s life and work

[೧] [೨] [೩]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 1. http://www.astro.uni.torun.pl/~kb/rishikul/coomaraswamy.html
 2. http://www.kannadaprabha.com/astrology/ananda-coomaraswamys-the-dance-of-shiva-book-that-explains-shivas-cosmic-dance-of-creation/290787.html[ಶಾಶ್ವತವಾಗಿ ಮಡಿದ ಕೊಂಡಿ]
 3. http://www.astro.uni.torun.pl/~kb/rishikul/coomaraswamy.html