ವಿಷಯಕ್ಕೆ ಹೋಗು

ಆದಿವಾಸಿ ಧರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆದಿವಾಸಿ ಧರ್ಮದ ಮೂಲ

[ಬದಲಾಯಿಸಿ]

ಪೂರ್ವಜರ ಆರಾಧನೆಯಿಂದ ಆದಿವಾಸಿ ಧರ್ಮ ಹುಟ್ಟಿತು ಎಂದು ಹರ್ಬರ್ಟ್ ಸ್ಪೆನ್ಸರನೂ, ಯಕ್ಷಿಣಿ, ಮಂತ್ರ, ಮಾಟಗಳಿಂದ ಹುಟ್ಟಿತೆಂದು ಜೇಮ್ಸ್ ಫ್ರೇಜರನೂ ಹೇಳುತ್ತಾರೆ. ಭಯ, ಭೀತಿ, ಆಶ್ಚರ್ಯಗಳಿಂದ ನಿಸರ್ಗದ ವೈಚಿತ್ರ್ಯದ ಫಲವಾಗಿ ಧರ್ಮ ಹುಟ್ಟಿದೆ, ಅದೇ ಆದಿವಾಸಿಗಳಲ್ಲಿ ಕಂಡುಬರುವ ಧರ್ಮವಾಗಿದೆ ಎಂದು ವಾದಿಸುವವರೂ ಇದ್ದಾರೆ. ಇಂದು ಆದಿವಾಸಿಗಳಲ್ಲಿ ಕಂಡುಬರುವ ಅನೇಕ ಪದ್ಧತಿ ಪರಂಪರೆಗಳಿಗೆ ಅತಿ ಪ್ರಾಚೀನ ಇತಿಹಾಸ ಇದೆ.

ಆದಿವಾಸಿ ಧರ್ಮದ ಆಚಾರಣೆಗಳು

[ಬದಲಾಯಿಸಿ]

ಅದರ ಆಚಾರ ವಿಚಾರಗಳಲ್ಲಿ ಕೆಲವು ವೈಜ್ಞಾನಿಕವೆನ್ನಿಸಿದರೆ ಹಲವು ಅಜ್ಞಾನದ್ಯೋತಕವಾಗಿಯೂ ಇವೆ. ಆದಿವಾಸಿಗಳಿಗೆ ಜೀವ, ಆತ್ಮದ ಬಗ್ಗೆ ನಂಬಿಕೆ ಇತ್ತು. ಬಹುಶಃ ನೀರಿನ ಪ್ರತಿಬಿಂಬ, ನೆರಳು, ಮರಣ, ಕನಸು ಮುಂತಾದವುಗಳ ಅನುಭವದಿಂದ ಆತ್ಮದ ಕಲ್ಪನೆ ಅವರಿಗೆ ಬಂದಿರಬೇಕು. ಸತ್ತವನ ಆತ್ಮ ಹಿಂತಿರುಗಿ ಬರುತ್ತದೆ ಅಥವಾ ಇನ್ನೊಂದು ಲೋಕಕ್ಕೆ ಹೋಗುತ್ತದೆ ಎಂಬ ನಂಬಿಕೆಯಿತ್ತು. ಆದಕಾರಣ ಸತ್ತವನ ಅನುಕೂಲತೆಗಾಗಿ ಅವನಿಗೆ ಪ್ರಿಯವಾಗಿದ್ದ ವಸ್ತುಗಳನ್ನು ಆತನೊಂದಿಗೆ ಗೋರಿಗೊಳಿಸುತ್ತಿದ್ದರು. ಆತ್ಮವೆಂಬ ಚೈತನ್ಯ ಅಥವಾ ಶಕ್ತಿ ಗಿಡ, ಮರ, ಪ್ರಾಣಿ, ಬೆಟ್ಟ, ಗುಡ್ಡ, ಕಲ್ಲು, ನಕ್ಷತ್ರ, ಚಂದ್ರ ಮೊದಲಾದುವುಗಳಲ್ಲಿ ವಾಸಿಸುತ್ತದೆ ಎಂಬ ನಂಬಿಕೆ ಇದ್ದುದರ ಫಲವಾಗಿ ವೃಕ್ಷಪೂಜೆ, ಪ್ರಾಣಿಪೂಜೆ, ನರಬಲಿ, ಕುಲಸಂಕೇತಗಳ ಆರಾಧನೆ, ವಿಧಿ ನಿಷಿದ್ಧಗಳ ಪರಂಪರೆ (ಟ್ಯಾಬೂ), ಪ್ರಕೃತಿಯ ಆರಾಧನೆ, ಭೂತಾರಾಧನೆ, ಪೂರ್ವಜರ ಆರಾಧನೆ ಇತ್ಯಾದಿ ಕಂಡುಬರುತ್ತದೆ. ದೈವಶಕ್ತಿಗಳನ್ನು ಒಲಿಸಿಕೊಳ್ಳಲು ಮಾಡಿದ ಈ ಪ್ರಯತ್ನಗಳ ಫಲವಾಗಿ ಅವರಲ್ಲಿ ಪ್ರಾರ್ಥನೆ, ನೃತ್ಯ, ಗೀತ, ಬಲಿ, ಕಾಣಿಕೆ, ಪೂಜಾಪದ್ಧತಿಗಳೂ ಇದಕ್ಕೆ ತಕ್ಕಂತೆ ಯಕ್ಷಿಣಿಕಾರ, ಮಂತ್ರಮಾಟಕಾರ, ಪುರೋಹಿತ ವರ್ಗದವರು ನೇಮಕಗೊಂಡರು. ಸಿಡಿಲು, ಗುಡುಗು, ಮಳೆ, ಪ್ರವಾಹ, ಜ್ವಾಲಾಮುಖಿ, ಭೂಕಂಪಗಳು ಆದಿವಾಸಿಗಳ ಪ್ರಕೃತಿ ಪೂಜೆ, ದೈವ ಕಲ್ಪನೆಗಳಿಗೆ ಕಾರಣವಾಗಿರಬೇಕು. ಸತ್ತವರ ಆತ್ಮದ ಪ್ರೀತ್ಯರ್ಥ ಹಬ್ಬ, ಉತ್ಸವ, ಭೂತಾರಾಧನೆಗಳು ನಡೆಯುತ್ತಿದ್ದವು. ಆದಿವಾಸಿಗಳಲ್ಲಿ ಪೂರ್ವಜರ ಆರಾಧನೆಗೆ ಮಹತ್ತಿನ ಸ್ಥಾನವಿತ್ತು. ಮಾನವ ಸಮಾಜದ ವಿಕಾಸದ ಇತಿಹಾಸದಲ್ಲಿ ಆದಿವಾಸಿ ಧರ್ಮ ಹಿರಿಯ ಪಾತ್ರವಹಿಸಿದೆ.

ಉಲ್ಲೇಖಗಳು

[ಬದಲಾಯಿಸಿ]


[]

  1. https://kn.wikipedia.org/wiki/%E0%B2%86%E0%B2%A6%E0%B2%BF%E0%B2%B5%E0%B2%BE%E0%B2%B8%E0%B2%BF%E0%B2%97%E0%B2%B3%E0%B3%81