ಆದಿಯಪ್ಪ

ವಿಕಿಪೀಡಿಯ ಇಂದ
Jump to navigation Jump to search

ಆದಿಯಪ್ಪ : - (ಸು. ೧೬೫೦). ಒಬ್ಬ ಕನ್ನಡ ಕವಿ ರಚಿಸಿರುವ ಏಕೈಕ ಕಾವ್ಯ ಧನ್ಯಕುಮಾರ ಚರಿತೆ. ಜೈನ ಮತಾನುಯಾಯಿ. ತಂದೆ ಶ್ರುತಿಯತಿ ಶಿಷ್ಯನಾದ ಮುನಿಯಣ್ಣ, ತಾಯಿ ದೇವರಸಿ. ನಾಲ್ಕು ಮಂದಿ ಪುತ್ರರಲ್ಲಿ ಕಿರಿಯವನೇ ಆದಿಯಪ್ಪ. ಸರಸಿಜಸಂಭವ (ಬ್ರಹ್ಮ), ಸರಸಿಜರಿಪು (ಚಂದ್ರ) ಮತ್ತು ವಿಜಯಪ್ಪ ಈ ಮೂವರೂ ಈತನ ಅಣ್ಣಂದಿರು. ತುಳು ದೇಶಕ್ಕೆ ಸೇರಿದ ಗೇರುಸೊಪ್ಪೆಯ ರಾಜಭೈರವಾಯನ ಗುರುವಾದ ವೀರಸೇನ ಮುನಿಶ್ರೇಷ್ಠನ ಆದೇಶದಂತೆ ಕವಿ ಕೃತಿರಚನೆ ಮಾಡಿದ್ದಾನೆ. ಕಾವ್ಯದಲ್ಲಿ ಕಾಲನಿಷ್ಕರ್ಷೆಗೆ ಅನುಕೂಲಿಸುವ ಯಾವ ಪ್ರಮಾಣವೂ ದೊರೆಯುವುದಿಲ್ಲ. [೧] ಕೃತಿ ಸಾಂಗತ್ಯದಲ್ಲಿ ರಚಿತವಾಗಿದೆ, ಸುಮಾರು ೪೧೦ ಪದ್ಯಗಳಿವೆ. ಮಧ್ಯದಲ್ಲಿ ಕೆಲವು ಕಂದ ಪದ್ಯಗಳೂ ವೃತ್ತಗಳೂ ರಗಳೆಗಳೂ ಇವೆ. ಕವಿಯ ವಿಚಾರ ಕಾವ್ಯದ ಕೊನೆಯಲ್ಲಿದೆ. ವರ್ಣನೆಗಿಂತ ಕಥೆಯ ನಿರೂಪಣೆಯಲ್ಲೇ ಕವಿಯ ಒಲವು ಅಧಿಕ.

ಕಥಾಸಾರ[ಬದಲಾಯಿಸಿ]

ಭೋಗಾವತಿ ಎಂಬುದು ಆವಂತಿ ದೇಶದಲ್ಲಿ ಒಂದು ಪಟ್ಟಣ, ದೊರೆ ಪಶುಪಾಲ, ಹೆಂಡತಿ ಪದ್ಮಾಕ್ಷಿ. ಇವರಿಗೆ ಅಕೃತಪುಣ್ಯನೆಂಬ ಮಗ ಹುಟ್ಟುತ್ತಾನೆ. ಈತ ಹುಟ್ಟಿದಂದಿನಿಂದ ಸಂಪತ್ತು ಕ್ಷಯಿಸಲಾರಂಭಿಸಿ ಪಶುಪಾಲ ದರಿದ್ರನಾಗಿ ಸಾಯುತ್ತಾನೆ. ಅನಂತರ ಅಕೃತ ಪುಣ್ಯ ಕಂಬಳ ಮಾಡಿ ಜೀವಿಸುತ್ತಾನೆ. ಬಂಧುಗಳು ಅನಾದರಣೆ ಮಾಡುತ್ತಾರೆ. ಸಹಿಸಲಾರದೆ ಶೋಕಿಸಿ ಬೇರೆ ಪಟ್ಟಣಕ್ಕೆ ತಾಯಿಯೊಡನೆ ಹೋಗಿ ಬಲಭದ್ರನೆಂಬ ವೈಶ್ಯನ ಮನೆಯಲ್ಲಿ ಆಳಾಗುತ್ತಾನೆ. ಊರಿನವರೆಲ್ಲ ಈತನನ್ನು ಕರಕುಚಿನ ಎಂದು ಕರೆಯಲು ಪ್ರಾರಂಭಿಸುತ್ತಾರೆ. ಆ ವೈಶ್ಯನಿಗೆ ಏಳು ಮಂದಿ ಮಕ್ಕಳು. ಈ ಅಕೃತಪುಣ್ಯನನ್ನು ಹಸು ಕಾಯುವ ಕೆಲಸಕ್ಕೆ ನೇಮಿಸುತ್ತಾರೆ. ಒಂದು ದಿನ ಹಸು ಕಾಯುವಾಗ ಆಲಸಿಕೆಯಿಂದ ಮಲಗಿ ನಿದ್ರಿಸಿದ ವೇಳೆಯಲ್ಲಿ ಹಸುಗಳೂ ಕರುಗಳೊಡನೆ ತಾವಾಗಿಯೇ ಮನೆಗೆ ಹಿಂತಿರುಗುತ್ತವೆ. ಕರಕುಚಿನ ನಿದ್ರೆಯಿಂದೆದ್ದು ನೋಡಿ ಹಸುಗಳನ್ನು ಕಾಣದೆ ಯೋಚಿಸುತ್ತಾನೆ. ಹಸುಗಳೊಡನೆ ಹುಡುಗ ಬರದಿದ್ದುದನ್ನು ಗಮನಿಸಿದ ಬಲಭದ್ರ ಅವನನ್ನು ಹುಡುಕಿಕೊಂಡು ಬರಲು ಮಕ್ಕಳನ್ನು ಕಳುಹಿಸುತ್ತಾನೆ. ಅವರು ತನ್ನ ಕಡೆಗೆ ಬರುತ್ತಿದ್ದುದನ್ನು ನೋಡಿ ಹೆದರಿದ ಕರಕುಚಿನ ಓಡಿ ಹೋಗಿ ಸಮೀಪದ ಆಶ್ರಮದಲ್ಲಿದ್ದ ಋಷಿಗಳಿಗೆರಗಿ ನಡೆದ ಸಂಗತಿಯನ್ನು ವಿನಯದಿಂದ ಅರಿಕೆ ಮಾಡುತ್ತಾನೆ. ಆ ಮುನಿ ಯೋಗದೃಷ್ಟಿಯಿಂದ ಅಂದಿನ ಇರುಳಿನಲ್ಲೆ ಈತ ಸಾಯುವನೆಂಬುದನ್ನು ತಿಳಿದು ಪಂಚಾಣುವ್ರತಗಳ ದೀಕ್ಷೆ ಕೊಡುತ್ತಾನೆ. ವ್ರತವನ್ನೇ ಧ್ಯಾನಿಸುತ್ತ ಒಂದೆಡೆಯಲ್ಲಿ ಕುಳಿತಿರಲು ರಾತ್ರಿ ಒಂದು ಹುಲಿ ಈತನನ್ನು ಕೊಲ್ಲುತ್ತದೆ. ಸಾಧುಗಳಲ್ಲಿ ದೀಕ್ಷೆ ಪಡೆದ ಕಾರಣ ಕರಕುಚಿನ ಅಮರಗತಿಯನ್ನು ಪಡೆಯುತ್ತಾನೆ. ಬಲಭದ್ರನ ಮಕ್ಕಳು ಸತ್ತು ದುಷ್ಕರ್ಮ ಫಲವಾಗಿ ಅನೇಕ ಭವಗಳಲ್ಲಿ ಸುತ್ತಿ ನರಕಕ್ಕೆ ಹೋಗುತ್ತಾರೆ. ಕಾಲಕ್ರಮದಲ್ಲಿ ಉಜ್ಜಯಿನಿಯ ಧನಪಾಲನೆಂಬ ವೈಶ್ಯೋತ್ತಮನ ಹೆಂಡತಿ ಪ್ರಭಾವತಿಯ ಉದರದಲ್ಲಿ ಈ ಏಳು ಮಂದಿ ಬಲಭದ್ರನ ಮಕ್ಕಳೂ ಭಾಗ್ಯಹೀನ ದುರ್ಗುಣ ಪುತ್ರರಾಗಿ ಹುಟ್ಟುತ್ತಾರೆ. ಈ ಮಕ್ಕಳ ಹುಟ್ಟಿನಿಂದ ಧನಪಾಲ ದರಿದ್ರನಾಗುತ್ತಾನೆ. ತನ್ನ ದರಿದ್ರಾವಸ್ಥೆ ಎಂದು ಹೋಗುತ್ತದೆಂದು ಆಕೆ ಮುನಿವರನನ್ನು ಪ್ರಶ್ನಿಸುತ್ತಾಳೆ. ಮುಂದೆ ಜನಿಸುವ ಮಗನಿಂದ ದಾರಿದ್ರ್ಯನಿವಾರಣೆಯಗುತ್ತದೆಂದು ಮುನಿಗಳು ಭರವಸೆ ಕೊಡುತ್ತಾರೆ. ಹುಟ್ಟಿದ ಮಗುವಿಗೆ ಧನ್ಯಕುಮಾರ ಎಂದು ನಾಮಕರಣ ಮಾಡುತ್ತಾರೆ. ತಾಯಿ ಧನ್ಯಕುಮಾರನನ್ನು ತಮಗಿಂತ ಅಧಿಕವಾಗಿ ಪ್ರೀತಿಸುವುದನ್ನು ಕಂಡು ಉಳಿದ ಮಕ್ಕಳು ಆಕ್ಷೇಪಿಸುತ್ತಾರೆ. ಅಸೂಯೆಯಿಂದ ಧನ್ಯಕುಮಾರನನ್ನು ಕೊಲ್ಲಲು ಯತ್ನಿಸುತ್ತಾರೆ. ಧನ್ಯಕುಮಾರ ಹೇಗೋ ಪಾರಾಗಿ ದೇಶಾಂತರ ಹೋಗುತ್ತಾನೆ. ಮಗ ಮನೆಗೆ ಬರದಿದ್ದುದನ್ನು ಕಂಡ ತಂದೆತಾಯಿಗಳು ಬಹಳ ದುಃಖಿಸುತ್ತಾರೆ. ಕೊನೆಗೆ ಉಳಿದ ಮಕ್ಕಳು ತೋರಿದ ಕೆಲವು ಕುರುಹುಗಳಿಂದ ಕಿರಿಯ ಮಗ ಸತ್ತನೆಂದು ಭಾವಿಸಿ ಅವನಿಗೆ ಔಧ್ರ್ವದೇಹಿಕ ಕ್ರಿಯೆಯನ್ನು ಮಾಡುತ್ತಾರೆ. ಸ್ವಲ್ಪ ದಿನಗಳಲ್ಲೇ ಧನಪಾಲನ ಐಶ್ವರ್ಯ ನಶಿಸಿ ಆತ ಮತ್ತೆ ದರಿದ್ರನಾಗುತ್ತಾನೆ. ಇತ್ತ ಧನ್ಯಕುಮಾರ ಅನೇಕ ದೇಶಗಳಲ್ಲೂ ಕಾಡುಗಳಲ್ಲೂ ಅಲೆಯುತ್ತಾನೆ. ತನ್ನೊಡನೆ ಸೆಣಸಿದ ಬೇಡನೃಪಕಾಳ ರುದ್ರನನ್ನು ಸೋಲಿಸಿ ಮಗಧ ದೇಶಕ್ಕೆ ಬರುತ್ತಾನೆ. ಈತ ಹೋದೆಡೆಗಳಲ್ಲೆಲ್ಲ ಅಕಾಲದಲ್ಲೂ ಫಲಪುಷ್ಪಭರಿತವಾಗುತ್ತವೆ. ಪವಾಡಗಳಿಂದ ಮಗಧ ರಾಜರ ಪುತ್ರಿಯರನ್ನೂ, ಮಂತ್ರಿಯ ಮಗಳನ್ನೂ, ವನಪಾಲನ ಮಗಳನ್ನೂ, ಹೀಗೆ ಒಟ್ಟು 16 ಮಂದಿ ಕನ್ಯೆಯರನ್ನು ವಿವಾಹವಾಗಿ ಸುಖದಿಂದಿದ್ದು ಗುಣಪಾಲನೆಂಬ ಮಗನನ್ನು ಪಡೆಯುತ್ತಾನೆ. ಧನಪಾಲ ದಾರಿದ್ರ್ಯದಿಂದ ಬೇಸತ್ತು ಸೋದರಳಿಯ ಮಗಧ ದೇಶದ ಶಾಲಿಭದ್ರನ ಸಹಾಯವನ್ನಪೇಕ್ಷಿಸಿ ಆ ದೇಶಕ್ಕೆ ಬರುತ್ತಾನೆ. ದಾರಿದ್ರ್ಯದಿಂದ ಕ್ಷೀಣನಾಗಿದ್ದ ಧನಪಾಲ ದಾರಿಯಲ್ಲಿ ಹೋಗುತ್ತಿದ್ದುದನ್ನು ಕಂಡ ಧನ್ಯಕುಮಾರ ಅವನನ್ನು ಎದುರುಗೊಂಡು ಕರೆತಂದು ಉಪಚರಿಸುತ್ತಾನೆ. ಬಳಿಕ ತಾನೇ ಅವನ ಕಿರಿಯ ಮಗನೆಂದು ತಿಳಿಸುತ್ತಾನೆ. ಇದನ್ನು ಕೇಳಿದ ಧನಪಾಲ ಬಹಳ ಸಂತೋಷಪಡುತ್ತಾನೆ. ಧನ್ಯಕುಮಾರ ತನ್ನ ತಾಯಿ ಮತ್ತು ಅಣ್ಣಂದಿರನ್ನು ಉಜ್ಜಯಿನಿಯಿಂದ ಕರೆಯಿಸುತ್ತಾನೆ. ಎಲ್ಲರೂ ಸುಖವಾಗಿ ಇರುತ್ತಾರೆ. ಕಾಲಕ್ರಮದಲ್ಲಿ ಧನ್ಯಕುಮಾರ ಐಹಿಕ ಸುಖಕ್ಕೆ ಜುಗುಪ್ಸೆಪಟ್ಟು ಮಗನಿಗೆ ಪಟ್ಟಕಟ್ಟಿ ಶ್ರುತಸಾಗರ ಭಟ್ಟಾರಕರಲ್ಲಿಗೆ ಹೋಗಿ ದೀಕ್ಷೆ ಪಡೆಯುತ್ತಾನೆ.

ಇನ್ನೊಬ್ಬ ಆದಿಯಪ್ಪ[ಬದಲಾಯಿಸಿ]

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇನ್ನೊಬ್ಬ ಆದಿಯಪ್ಪನ ಹೆಸರು ಬರುತ್ತದೆ. ಇವನ ಗ್ರಂಥ ಪಟಹಸ್ತನ ಚರಿತ್ರೆ. ಕಥೆ ಪಟ್ಟಿಹಸ್ತನೆಂಬ ಅತಿ ಲೋಭಿಗೆ ಸಂಬಂಧಿಸಿದ್ದು. ಕಾಲ ಸು. 1700. ಕವಿ ಬ್ರಾಹ್ಮಣ. ಸ್ಥಳ ಚಂಗಳನಾಡೊಳಗಣ ಚಪ್ಪಾರದ ಹಳ್ಳಿ.

ಉಲೇಖಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆದಿಯಪ್ಪ&oldid=914421" ಇಂದ ಪಡೆಯಲ್ಪಟ್ಟಿದೆ