ಆದಿಮಾನವ

ವಿಕಿಪೀಡಿಯ ಇಂದ
Jump to navigation Jump to search

ಮಾನವನ ಉಗಮ ಹತ್ತು ಸಾವಿರ ವರ್ಷಗಳ ಹಿಂದೆಯೇ ಆಗಿರಬೇಕೆಂದು ಊಹಿಸಿರುತ್ತಾರೆ. ಆದರೆ ಮಾನವ ಈಗಿನ ರೂಪಿನಲ್ಲೇ ಉದಿಸಲಿಲ್ಲ. ಆತ ಹಲವು ಅವಸ್ಥಾಂತರಗಳನ್ನು ಪಡೆದಿರಬೇಕು. ಅವನ ಪೂರ್ವಜರು ಯಾರು, ಅವನ ಮೂಲಸ್ವರೂಪ ಹೇಗಿತ್ತು ಎಂಬುವು ಜಟಿಲ ಪ್ರಶ್ನೆಗಳಾಗಿವೆ. ಡಾರ್ವಿನ್ನನ ಪರಿಣಾಮವಾದದ ಫಲವಾಗಿ ಕಾಲಕಾಲಕ್ಕೆ ಜೀವಿಗಳು ಬದಲಾವಣೆ ಹೊಂದುತ್ತಾ ಹೋಗುತ್ತವೆ ಎಂಬುದನ್ನು ಒಪ್ಪಿಕೊಂಡಮೇಲೆ ಮಾನವನ ಪೂರ್ವಜರು ಕಪಿಕುಲದವರಾಗಿರಬೇಕೆಂದು ಒಂದು ವಾದವಿತ್ತು. ಕಾರಣ ಕಪಿ ಮಾನವನ ತೀರ ಸಮೀಪ ಬಂಧುವಾಗಿರುವುದೇ. ಆದರೆ ಮಾನವ ನೇರವಾಗಿ ಕಪಿಕುಲದಿಂದ ಅವಸ್ಥಾಂತರ ಹೊಂದಲಿಲ್ಲವೆಂದೂ ಮಾನವನಿಗೂ ಕಪಿಗೂ ಮೂಲ ಈಗ ಅಳಿದು ಹೋಗಿರುವ ಬೇರೆ ಒಂದು ಪ್ರಾಣಿಯಾಗಿರಬೇಕೆಂದೂ ತಜ್ಞರ ಮತವಾಗಿದೆ. ಪ್ರಾಣಿ ಮಾಲೆಯಲ್ಲಿ ಮಾನವನನ್ನು ಸೇರ್ಪಡಿಸಿರುವ ಆ ಕೊಂಡಿಯನ್ನು (ಮಿಸ್ಸಿಂಗ್ ಲಿಂಕ್) ಅರಸುವುದರಲ್ಲಿ ವಿಜ್ಞಾನಿಗಳು ಪೂರ್ಣಪ್ರಯತ್ನ ನಡೆಸಿದ್ದಾರೆ.

ಆದಿಮಾನವನ ಚರಿತ್ರೆ[ಬದಲಾಯಿಸಿ]

ಆದಿಮಾನವ ಮೊದಲು ಕಾಣಿಸಿಕೊಂಡಿದ್ದು ಎಲ್ಲಿ ಎಂಬ ಬಗ್ಗೆ ಅಭಿಪ್ರಾಯ ಭೇದವಿದೆ. ಅವನು ಹುಟ್ಟಿದುದು ಮಧ್ಯ ಏಷ್ಯದಲ್ಲಿ ಎಂದು ಊಹಿಸಲಾಗಿತ್ತು. ಆದರೆ ಕೆಲವು ವಿಜ್ಞಾನಿಗಳು ಈ ಉಗಮ ಆಫ್ರಿಕಾದಲ್ಲಾಗಿರಬೇಕೆಂದೂ (ಮಿಯೊಸೀನ್ ಕಾಲದಲ್ಲಿ ಪೂರ್ವ ಮತ್ತು ಮಧ್ಯ ಆಫ್ರಿಕಾದಲ್ಲಿ ಫ್ರೇಕನ್‍ಸಲ್ ಎಂಬ ಜೀವಿಯೊಂದಿತ್ತು; ಇದು ಎರಡು ಅಡಿ ಎತ್ತರವಿದ್ದು, ಕಾಲುಗಳಿಂದ ಮಾತ್ರ ನಡೆದು ಕೈಗಳನ್ನು ಕೆಲಸಕ್ಕೆ ಮಾತ್ರ ಉಪಯೋಗಿಸಿತ್ತು; ತೋಳುಗಳು ತುಂಡಾಗಿದ್ದವು; ಮಿದುಳು ಕೋತಿಗಳ ಮಿದುಳಿಗಿಂತ ಉತ್ತಮಗೊಂಡಿತ್ತು) ಮತ್ತೆ ಕೆಲವರು ಯೂರೋಪಿನಲ್ಲಾಗಿರಬೇಕೆಂದೂ ವಾದಿಸಿದ್ದಾರೆ. ಆದರೆ ಮಾನವನ ಉಗಮ ಒಂದೇ ಕಡೆಯಲ್ಲಾಯಿತೇ ಅಥವಾ ಬೇರೆ ಕಡೆ ಸ್ವತಂತ್ರವಾಗಿ, ಏಕಕಾಲದಲ್ಲಿ ನಡೆಯಿತೇ ಎಂದು ನಿರ್ಧರಿಸುವುದು ಕಷ್ಟ. ಅದು ಹೇಗಿದ್ದರೂ ಮಾನವ ಜನಿಸಿದುದು ಪೂರ್ವಾರ್ಧಗೋಳದಲ್ಲಿಯೇ ಹೊರತು ಪಶ್ಚಿಮಾರ್ಧಗೋಳದಲ್ಲಲ್ಲ ಎಂಬುದು ನಿರ್ಧಾರವಾಗಿದೆ.ಮಾನವ ನೇರವಾಗಿ ನಿಂತು ತನ್ನ ಎರಡು ಪಾದಗಳಿಂದಲೇ ನಡೆಯಬಲ್ಲ ಮತ್ತು ಓಡಬಲ್ಲ-ಇದೆ ಕಪಿಗೂ ಮಾನವನಿಗೂ ಇರುವ ಮೂಲ ವ್ಯತ್ಯಾಸ. ಕಾಲಿನ ಹೆಬ್ಬೆರಳುಗಳು ಇತರ ಬೆರಳುಗಳನ್ನು ಮುಟ್ಟಲಾರವು. ಪಾದ ಸಂಪೂರ್ಣವಾಗಿ ನೆಲಕ್ಕೂರುತ್ತದೆ. ದವಡೆಗಳು ಹಗುರವಾಗಿ ದುಂಡಗಿವೆ. ಹಲ್ಲುಗಳು ವಿಶಾಲವಾದ ಕಮಾನಿನಲ್ಲಿ ಜೋಡಿಸಿಕೊಂಡಿವೆ. ನೆಟ್ಟಗೆ ಎದೆ ಚಾಚಿ ನಡೆಯುವ ಅವನ ನಿಲುವಿಗೆ ತಕ್ಕಂತೆ ತಲೆಯ ಬುರುಡೆಯ ಕಾಂಡೈಲ್ ಮತ್ತು ಬೆನ್ನುಮೂಳೆ ಮಾರ್ಪಟ್ಟಿವೆ. ಬೆನ್ನುಮೂಳೆ 8 ಆಕಾರಕ್ಕಿರುವುದರಿಂದ ಶರೀರದ ಪೂರ್ಣಭಾರ ನೇರವಾಗಿ ಕಾಲುಗಳಮೇಲೆ ಬೀಳುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ಮಿದುಳಿನ ಬೆಳವಣಿಗೆ, ಒಂದು ಮಿದುಳುಪೆಟ್ಟಿಗೆ ಸುಮಾರು 350-500 ಘನ ಸೆಂ.ಮೀನಷ್ಟು ದೊಡ್ಡದು. ಮಾನವನದಾದರೊ ಸರಾಸರಿ 1,350 ಮತ್ತು 1,500 ಘನ ಸೆಂ.ಮೀನಷ್ಟು ದೊಡ್ಡದು. ಹಣೆ ಮತ್ತು ಗಲ್ಲದ ಬೆಳೆವಣಿಗೆ ಮಾನವನಲ್ಲಾಗಿದೆ. ಮಂಗಗಳಲ್ಲಿ ಹಣೆ ಮತ್ತು ಗಲ್ಲಗಳಿಲ್ಲ. ಕಪಿಯೂ ಕೆಲವು ವೇಳೆ ಹಿಂದಿನ ಕಾಲಿನಮೇಲೆ ನಿಲ್ಲಬಲ್ಲುದಾದರು ಅದು ಮೇಲಿನ ಅರ್ಥದಲ್ಲಿ ನೇರ ನಿಲ್ಲುವಲ್ಲಿ ಮತ್ತು ಓಡುವಾಗ ಕೈಗಳ ಸಹಾಯವನ್ನು ಪಡೆದೇಪಡೆಯುತ್ತವೆ. ಈ ದೃಷ್ಟಿಯಿಂದ ನೋಡಿದಾಗ ಮಾನವನ ಪೂರ್ವಜರಿಗೂ ನೇರ ನಿಲುವು ಇದ್ದಿರಬೇಕು. ಅವರು ಎರಡು ಕಾಲುಗಳಿಂದಲೇ ನಡೆಯುತ್ತಿದ್ದಿರಬೇಕು ಎಂದು ಸ್ಪಷ್ಟವಾಗುತ್ತದೆ. ಇದರೊಂದಿಗೆ ತಲೆ ಬುರುಡೆಯಲ್ಲಿನ ಮಿದುಳುಕೋಶ, ಆತ ಉಪಯೋಗಿಸಿರಬಹುದಾದ ಉಪಕರಣಗಳು ಆದಿಮಾನವನನ್ನು ಕಂಡುಕೊಳ್ಳಲು ಸಹಾಯ ಒದಗಿಸುತ್ತದೆ. ಪ್ರಾಚೀನ ಕಾಲದ ಅವಶೇಷಗಳನ್ನು ಶೋಧಿಸುವಾಗ ಲಕ್ಷಾಂತರ ವರ್ಷಗಳ ಹಿಂದೆಯೇ ಇದ್ದಿರಬಹುದಾದ ಪ್ರಾಣಿಗಳ ಪಳೆಯುಳಿಕೆಗಳು ಅನೇಕ ಕಡೆ ದೊರೆತಿವೆ. ಇವುಗಳ ಕಾಲವನ್ನೂ ಬೇರೆ ಬೇರೆ ಆಧಾರಗಳಿಂದ ನಿರ್ಧರಿಸಲಾಗಿದೆ. ಇಂಥ ಪಳೆಯುಳಿಕೆಗಳಲ್ಲಿ ಮೇಲೆ ತಿಳಿಸಿದ ಲಕ್ಷಣಗಳುಳ್ಳ ತಲೆಬುರುಡೆಗಳೂ ಇತರ ಅಸ್ಥಿಗಳೂ ಅಲ್ಲಲ್ಲಿ ದೊರೆತಿವೆ.[೧]

ಪೂರ್ವ ಆಫ್ರಿಕಾ[ಬದಲಾಯಿಸಿ]

ಇದುವರೆಗೆ ದೊರೆತಿರುವ ಇಂಥ ಅಸ್ಥಿಗಳಲ್ಲಿ ಅತ್ಯಂತ ಪ್ರಾಚೀನವಾದುವು ದಕ್ಷಿಣ ಮತ್ತು ಪೂರ್ವ ಆಫ್ರಿಕಾದ ಕೆಲವು ಗವಿಗಳಿಂದ ಬಂದುವು. ಮಾನವನದೆಂಬಂತೆ ಕಾಣುವ ಇಲ್ಲಿನ ಕಲ್ಲಾದ (ಫಾಸಿಲೈಸ್ಟ್) ಮೂಳೆಗಳು ಈ ಪ್ರಾಣಿ ನೇರವಾಗಿ ನಿಲ್ಲಬಲ್ಲದಾಗಿತ್ತು ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಅವು ನೇರವಾಗಿ ನಡೆಯಬಲ್ಲುವಾಗಿದ್ದುವು ಎಂದೂ ಊಹಿಸಬಹುದು. ಆಕಾರದಲ್ಲಿ ಕಿರಿದಾಗಿದ್ದ ಈ ಪ್ರಾಣಿಗಳು ಹತ್ತು ಲಕ್ಷ ವರ್ಷಗಳಿಗೂ ಹಿಂದೆಯೇ ಇದ್ದುವೆಂದು ನಿರ್ಧರಿಸಿದ್ದಾರೆ. ಇವುಗಳ ಮಿದುಳು ಮಾತ್ರ ಕಪಿಯ ಮಿದುಳಿಗಿಂತ ದೊಡ್ಡದಾಗಿರಲಿಲ್ಲ. ಇವುಗಳನ್ನು ಅಸ್ಟ್ರಲೋಪಿತಕಸ್ (ನೋಡಿ- ಅಸ್ಟ್ರಲೋಪಿತಕಸ್) (ಕಪಿ-ಮಾನವ) ಎಂದು ಕರೆದಿದ್ದಾರೆ. ಪ್ಲೀಸ್ಟೊಸೀನ್ ಕಾಲದ ಆದಿಭಾಗದಲ್ಲಿ ಅಸ್ಟ್ರಲೋಪಿತಕಸ್ ಜೀವಿಗಳ ಉದಯವಾಯಿತು. ಇದರ ತಲೆಯ ಬುರುಡೆಯ ಕಾಂಡೈಲ್ ಮುಂದೆ ಸರಿದಿದೆ. ಸೊಂಟ ಅಗಲವಾಗಿದೆ. ಬೆನ್ನೆಲುಬು S ಬಾಗುಗಳನ್ನು ಹೊಂದಿದೆ. ಇದು ನಾಲ್ಕು ಅಡಿ ಎತ್ತರವಿತ್ತು. ಭೂಮಿಯ ಮೇಲೆ ನೆಟ್ಟಗೆ ನಡೆಯಿತು.

ಅಸ್ಟ್ರಲೋಪಿತಕಸ್ ಮಂಗನ ದವಡೆಗಳು[ಬದಲಾಯಿಸಿ]

ಅಸ್ಟ್ರಲೋಪಿತಕಸ್ ಮಂಗನ ದವಡೆಗಳು ಬಹಳ ಗಾತ್ರವಿದ್ದು ಶಕ್ತಿಯುತವಾಗಿದ್ದವು. ಹಲ್ಲುಗಳು ಮನುಷ್ಯನ ಹಲ್ಲಿನಂತೆಯೇ ಇದ್ದವು. ಕೋರೆ ಹಲ್ಲು ಚಿಕ್ಕದಾಗಿತ್ತು. ಗೋರಿಲ್ಲಾದ ಹಲ್ಲಿನಂತೆ ಉದ್ದವಾಗಿ ಬಾಗಿರಲಿಲ್ಲ. ಹಲ್ಲುಗಳು ವಿಸ್ತಾರವಾದ ಕಮಾನಿನಲ್ಲಿ ಜೋಡಿಸಿಕೊಂಡಿದ್ದವು. ಇಷ್ಟಾದರೂ ಇದರ ಮಿದುಳುಪೆಟ್ಟಿಗೆ ಬಹಳ ಚಿಕ್ಕದು. ಕಣ್ಣಿನ ಮೇಲುಭಾಗದಲ್ಲಿ ಹಾಗು ತಲೆಯ ಬುರುಡೆಯ ಹಿಂಭಾಗದಲ್ಲಿ ಅಡ್ಡವಾದ ಅತಿ ಮಂದವಾದ ಏಣುಗಳಿದ್ದವು. ಇದರಿಂದಾಗಿ ತಲೆಯ ಚಿಪ್ಪು ಮಂದವಾಗಿ ಭಾರವಾಗಿತ್ತು. ಇದರ ಮಿದುಳುಪೆಟ್ಟಿಗೆ 600 ಘನ ಸೆಂ.ಮೀ.ನಷ್ಟಿತ್ತು. ಅಂದರೆ ಗೋರಿಲ್ಲಾ ಮಿದುಳುಪೆಟ್ಟಿಗೆಗಿಂತ ಸ್ವಲ್ಪ ದೊಡ್ಡದಾಗಿತ್ತು. ಓಳ್ಡುವಯ್ ಮುಂತಾದ ಕಡೆ ಈ ಮೂಳೆಗಳ ಜೊತೆಯಲ್ಲಿಯೇ ಕೆಲವು ಅತಿ ಪ್ರಾಚೀನ ಉಪಕರಣಗಳು ದೊರೆತಿದ್ದರೂ ಅಸ್ಟ್ರಲೋಪಿತಕಸ್ ಪ್ರಾಣಿಯೇ ಅವುಗಳನ್ನು ತಯಾರಿಸಿ ಉಪಯೋಗಿಸುತ್ತಿತ್ತೇ ಎನ್ನುವುದು ಸಂದೇಹ. ಆದರೂ ಇವು ಕಪಿಕುಲಕ್ಕಿಂತ ಮಾನವ ವರ್ಗಕ್ಕೆ ಹೆಚ್ಚು ಹತ್ತಿರ ಬರುವುದರಿಂದ ಮಾನವನ ಪೂರ್ವಜರ ಸ್ವರೂಪ ಹೇಗಿದ್ದಿರಬಹುದೆಂಬುದನ್ನು ಇವುಗಳಿಂದ ಊಹಿಸಬಹುದು.ಇದರಂತೆಯೇ ಚೀನದಲ್ಲಿ ದೊರೆತ ಕೆಲವು ದೊಡ್ಡ ಹಲ್ಲುಗಳು ಬೃಹದಾಕಾರದ ಕಪಿಮಾನವನಕುಲಕ್ಕೆ ಸೇರಿದ್ದವುಗಳಾಗಿರಬಹುದೆಂದು ಊಹಿಸಿದ್ದಾರೆ. ಇದೇ ರೀತಿಯ ದೊಡ್ಡ ಹಲ್ಲುಗಳುಳ್ಳ ದವಡೆಗಳು ಜಾವದಲ್ಲೂ ದೊರೆತಿವೆ. ಇವು ರೂಪ, ಗುಣ, ಆಕಾರಗಳಲ್ಲಿ ಮಾನವ ಕುಲದ ಕಡೆಗೆ ವಾಲಿವೆಯೇ ಅಥವಾ ಕಪಿಕುಲದ ಕಡೆಗೇ ಎನ್ನುವುದು ನಿರ್ಧಾರವಾಗಿಲ್ಲ.[೨]

ಜಾವದಲ್ಲಿ ಪ್ರಾಚೀನ ಮಾನವನ[ಬದಲಾಯಿಸಿ]

ಜಾವದಲ್ಲಿ ಪ್ರಾಚೀನ ಮಾನವನ ಬೇರೆ ಬೇರೆ ಜಾತಿಯ ಮೂಳೆಗಳೂ ದೊರೆತಿವೆ. ಇವುಗಳಲ್ಲಿ ತುಂಬ ಪ್ರಾಚೀನವಾದುವು ದೊಡ್ಡ ಗೊರಿಲ್ಲಾ ಗಾತ್ರದ ಮಾನವನಿಗೆ ಸೇರಿದುವು. ಇದರ ಮೂಳೆಗಳು ಹಾಂಕಾಂಗ್‍ನಲ್ಲಿ ಸಿಕ್ಕಿದವು. ಇದನ್ನು ಜೈಗಾಂಡೊಪಿಥಿಕಸ್ ಎಂಬ ಜಾತಿಗೆ ಸೇರಿಸಲಾಗಿದೆ. ವೈಡನ್ ರಿಚ್ ಎಂಬುವನು ಇದನ್ನು ಪಿಥೆಕ್ಯಾಂಥ್ರೊಪಸ್‍ಗಳ ಜನಕನೆಂದು ತೀರ್ಮಾನಿಸುತ್ತಾನೆ. ಇದು ಬಹಳ ಕೆಳದರ್ಜೆಯ ಜೀವಿಯೆಂದು ತೀರ್ಮಾನಿಸಲಾಗಿದೆ. ಏಕೆಂದರೆ ಇದರ ದವಡೆ ಗೊರಿಲ್ಲಾ ದವಡೆಗಿಂತಲೂ ದೊಡ್ಡದು; ಹಲ್ಲುಗಳು ಗೊರಿಲ್ಲಾ ಹಲ್ಲುಗಳನ್ನೇ ಹೆಚ್ಚು ಹೋಲುತ್ತವೆ.ಪಿಥೆಕ್ಯಾಂಥ್ರೊಪಸ್ ಅಥವಾ ಜಾವ ಮಾನವ ಎಂದು ಕರೆಯಲ್ಪಡುವ ಕಪಿ ಮಾನವನ (ಪ್ಲೀಸ್ಟೋಸೀನ್ ಅಂತ್ಯದಲ್ಲಿದ್ದವ) ಮೂಳೆಗಳನ್ನು ಡುಬಾಯಿಸ್ ಡಚ್ ಡಾಕ್ಟರ್ ಜಾವದಲ್ಲಿ ಮೊದಲು ಕಂಡುಹಿಡಿದ. ಇವುಗಳ ಪರೀಕ್ಷೆಯಿಂದ ಈ ವಿಷಯಗಳು ತಿಳಿದುಬಂದಿವೆ. ಜಾವ ಮಾನವ ಸುಮಾರು ಐದೂವರೆ ಅಡಿ ಎತ್ತರವಿದ್ದ. ನೇರವಾಗಿ ನಡೆಯಬಲ್ಲವನಾಗಿದ್ದರೂ ತಲೆ ಅಷ್ಟು ನೇರವಾಗಿ ಎತ್ತಲಾಗುತ್ತಿರಲಿಲ್ಲ. ತಲೆಯ ಚಿಪ್ಪು ತುಂಬ ದಪ್ಪ ಮತ್ತು ಭಾರವಾಗಿತ್ತು. ಕಪಿಯ ಮಿದುಳಿಗೂ ಈಗಿನ ಮಾನವನ ಮಿದುಳಿಗೂ ನಡುವಿನ ಗಾತ್ರದ ಮಿದುಳಿತ್ತು (778-1,100 ಘನ ಸೆಂ.ಮೀ). ದಪ್ಪ ಹಲ್ಲು, ದೊಡ್ಡ ದವಡೆ, ಕಿರುಹಣೆ, ಅತಿಯಾಗಿ ಮುಂಚಾಚಿದ ಹುಬ್ಬುಮೂಳೆ, ಕಿರುಕದಪು-ಇದು ಅವನ ಮುಖದ ಆಕಾರ. ಈ ಜಾವ ಮಾನವ ಉಪಯೋಗಿಸಿರಬಹುದಾದ ಉಪಕರಣಗಳು ಅವನ ಮೂಳೆಗಳೊಂದಿಗೆ ದೊರೆತಿಲ್ಲ.

ಚೀನ ಮಾನವ (ಸಿನಾನ್‍ಥ್ರೋಪಸ್ ಪಿಕಿಸಿನ್‍ನೆಸ್) ಪೀಕಿಂಗ್ ಬಳಿಯ ಚುಕೊಟಿನ್ ಗವಿ[ಬದಲಾಯಿಸಿ]

ಸುಮಾರು ಇವನ ಕಾಲಕ್ಕೇ ಸೇರಿದ್ದು ಇವನನ್ನೇ ಕೆಲಮಟ್ಟಿಗೆ ಹೋಲುವ ಚೀನ ಮಾನವ (ಸಿನಾನ್‍ಥ್ರೋಪಸ್ ಪಿಕಿಸಿನ್‍ನೆಸ್) ಪೀಕಿಂಗ್ ಬಳಿಯ ಚುಕೊಟಿನ್ ಗವಿಗಳಲ್ಲಿ ವಾಸಮಾಡುತ್ತಿದ್ದ. ಇವನು ಜಾವ ಮಾನವನಷ್ಟು ಎತ್ತರವಾಗಿಲ್ಲದಿದ್ದರೂ ಧಡೂತಿಯಾಗಿದ್ದ. ಅವನಿಗಿಂತ ನೇರವಾಗಿ ನಿಲ್ಲುತ್ತಿದ್ದನೆಂದು ತೋರುತ್ತದೆ. ತಲೆಬುರುಡೆ ಜಾವ ಮಾನವನ ತಲೆಬುರುಡೆಯನ್ನೇ ಹೋಲುತ್ತಿದ್ದರೂ ಮಿದುಳುಕೋಶ ಸ್ವಲ್ಪ ದೊಡ್ಡದಾಗಿತ್ತು, (1,300 ಘನ ಸೆಂ.ಮೀ) ಮುಖ ಜಾವ ಮಾನವನಷ್ಟು ರೂಕ್ಷವಾಗಿರಲಿಲ್ಲ. ಮೊದಲಬಾರಿಗೆ ಆದಿಮಾನವ ವಾಸ ಮಾಡುತ್ತಿದ್ದ ನೆಲೆಯಲ್ಲಿಯೇ ಅವನ ಮೂಳೆಗಳು, ಉಪಯೋಗಿಸುತ್ತಿದ್ದ ಉಪಕರಣಗಳು, ಇತರ ಸಲಕರಣೆಗಳು ದೊರೆತಿರುವುದರಿಂದ ಅವನ ಜೀವನ ವಿಧಾನ, ಆಹಾರ ಮುಂತಾದುವು ಬೆಳಕಿಗೆ ಬಂದಿವೆ. ಆತ ಬೆಂಕಿಯ ಉಪಯೋಗವನ್ನು ಕಂಡುಕೊಂಡಿದ್ದ. ಆಹಾರ ಬೇಯಿಸುವುದನ್ನೂ ತಿಳಿದಿದ್ದ. ಕಲ್ಲನ್ನು ಚಕ್ಕೆ ಎಬ್ಬಿಸಿ ಆಯುಧಗಳನ್ನು ಮಾಡಿಕೊಳ್ಳುತ್ತಿದ್ದ. ಗವಿಗಳಲ್ಲಿ ತೋಳ, ಕಾಡುನಾಯಿ, ನರಿ, ಕರಡಿಗಳ ಮೂಳೆಗಳೂ ದೊರೆತಿವೆ. ಅವುಗಳು ಆಗಾಗ ಅವನ ಮೇಲೆ ಮುತ್ತಿಗೆ ಹಾಕುತ್ತಿದ್ದುವೊ ಅಥವಾ ಆಹಾರಕ್ಕಾಗಿ ಅವನ್ನು ಬೇಟೆಯಾಡುತ್ತಿದ್ದನೊ ತಿಳಿಯದು. ಜಿಂಕೆ, ಕುರಿ, ಎಮ್ಮೆ, ಕಾಡುಕೋಣ, ಒಂಟೆ, ರೈನೋ, ಉಷ್ಟ್ರಪಕ್ಷಿ, ಆನೆ ಮುಂತಾದುವುಗಳ ಮೂಳೆಗಳನ್ನು ಸೀಳಿ ಹಾಕಿರುವುದರಿಂದ ಆತ ಅವುಗಳನ್ನು ಆಹಾರವಾಗಿ ಉಪಯೋಗಿಸುತ್ತಿದ್ದುದು ಖಚಿತ. ಮನುಷ್ಯನ ಮೂಳೆಗಳೂ ಸೀಳಿ ಬಿದ್ದಿರುವುದನ್ನು ನೋಡಿದರೆ ಆತ ನರಭಕ್ಷಕನೂ ಅಗಿದ್ದನೇ ಎಂಬ ಸಂದೇಹ ಬರುತ್ತದೆ. ಆತನಂಥವರೇ ಮುಂದೆ ವಿಕಾಸಗೊಂಡು ಆಧುನಿಕ ಮಂಗೋಲ್ ಬುಡಕಟ್ಟಿಗೆ ಸೇರಿದ ಚೀನ ಮಾನವರಾದರೇ? ಹೇಳುವುದಕ್ಕಾಗುವುದಿಲ್ಲ.

ಯೂರೋಪ್ ನ ಆದಿಮಾನವರು== ಇವರೆಲ್ಲ ಸುಮಾರು ನಾಲ್ಕೈದು ಲಕ್ಷ ವರ್ಷಗಳಷ್ಟು ಹಿಂದೆ ಇದ್ದ ಆದಿಮಾನವರು. ಯೂರೋಪಿನಲ್ಲೂ ಸರಿ ಸುಮಾರು ಈ ಕಾಲದಲ್ಲಿದ್ದ ಆದಿಮಾನವರ ಎಲುಬುಗಳು ದೊರೆತಿವೆ. ಜರ್ಮನಿಯ ಹಿಡೆಲ್‍ಬರ್ಗ್‍ನಲ್ಲಿ ದೊರೆತ ಬೃಹದ್ಗಾತ್ರದ ದವಡೆಯೇ ಯೂರೋಪಿನಲ್ಲಿದ್ದ ಮಾನವನ ಅತ್ಯಂತ ಪ್ರಾಚೀನ ಕುರುಹು. ಇದು ಪೀಕಿಂಗ್ ಮಾನವನಿಗಿಂತಲೂ ಸ್ವಲ್ಪ ಪ್ರಾಚೀನವಿದ್ದರೂ ಇರಬಹುದು. ಇದಕ್ಕಿಂತ ಈಚಿನದಾದ ಬಹುಶಃ ಪೀಕಿಂಗ್ ಮಾನವನ ಸಮಕಾಲಕ್ಕೆ ಬರಬಹುದಾದ ಮತ್ತೊಂದು ತಲೆ ಬುರುಡೆ ಹಂಗೇರಿಯ ಎರ್ಟೆಸ್ಸೊಲೋಸ್‍ನಲ್ಲಿ ದೊರೆತಿದೆ. ಇದು ಕಪಿಮಾನವನದೇ ಇಲ್ಲವೆ ಪೂರ್ಣ ಮಾನವನದೇ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ. ಆಫ್ರಿಕದಲ್ಲಿ ಓಳ್ಡುವಯ್‍ನಲ್ಲಿ ಡಾಲೀಕಿಯವರು ಕಂಡುಹಿಡಿದ ಚೆಲ್ಲಿಯನ್ ತಲೆ ಬುರುಡೆಯೂ ಪೀಕಿಂಗ್ ಮಾನವನ ಕಾಲಕ್ಕೇ ಸೇರಿರಬಹುದು. ಆಫ್ರಿಕದ ವಾಯುವ್ಯ ಭಾಗದಲ್ಲಿ ಟರ್ನಿಫೈನ್‍ನಲ್ಲಿ ದೊರೆತ ಟರ್ನಿಫೈನ್ ಮಾನವನ ದವಡೆಯ ಕೆಲಭಾಗಗಳೊಂದಿಗೆ ಚಿಕ್ಕ ಮಗುವೊಂದರ ಬುರುಡೆಯ ಪಳೆಯುಳಿಕೆಗಳು, ಆಷುಲಿಯನ್ ಶಿಲಾಯುಧಗಳೂ ಸಿಕ್ಕಿವೆ. ಇವುಗಳ ಕಾಲ ಪ್ಲೀಸ್ಟೋಸೀನ್ ಮಧ್ಯಭಾಗವಿರಬಹುದೆಂದು ಊಹಿಸಲಾಗಿದೆ.

ಜರ್ಮನಿಯ ಸ್ಪೈನ್ ಹೀಮ್‍[ಬದಲಾಯಿಸಿ]

ಜರ್ಮನಿಯ ಸ್ಪೈನ್ ಹೀಮ್‍ನಲ್ಲಿ ಸಿಕ್ಕಿರುವ ತಲೆಬುರುಡೆಯ ಚೂರು ದಪ್ಪ ಚಿಪ್ಪುಳ್ಳದ್ದು; ಹಿಂಭಾಗ ತೀರ ತಗ್ಗಾಗಿಲ್ಲ. ಹಣೆ ಹುಬ್ಬಿನ ಭಾಗದಲ್ಲಿ ಹೆಚ್ಚು ಮುಂಚಾಚಿದ್ದರೂ ಮುಖದ ರಚನೆ ತೀರ ಪ್ರಾಚೀನವೆನ್ನಲಾಗದು. ಇಂಗ್ಲೆಂಡಿನ ಸ್ವಾನ್ಸ್‍ಕೂಂಬ್‍ನಲ್ಲಿ ದೊರೆತ ತಲೆಬುರುಡೆಯ ಭಾಗವೂ ಹೆಚ್ಚು ಪರಿವರ್ತಿತವಾದುದೆಂದು ಊಹಿಸುತ್ತಾರೆ ಈತನ ಮಿದುಳಿನ ಪ್ರಮಾಣ 1,325 ಘನ ಸೆಂ.ಮೀ. ನಷ್ಟಿತ್ತು. ಈತ ಕಲ್ಲು ಕೊಡಲಿಗಳನ್ನು ಉಪಯೋಗಿಸುತ್ತಿದ್ದ. ಈ ಕೊಡಲಿಗಳು ಗಟ್ಟಿಯಾಗಿ ಚೂಪಾಗಿದ್ದುವು. ಹಾಗೆಯೇ ಫ್ರಾನ್ಸಿನ ಫಾನ್ಟೆಷೆವಾಡೆ ಬಳಿಯ ಗವಿಯಲ್ಲಿ ಎರಡು ತಲೆಬುರುಡೆಗಳು ದೊರೆತಿವೆ. ಇವುಗಳ ಮೇಲ್ಭಾಗ ಬೆಳವಣಿಗೆ ಹೊಂದಿದೆ. ಹುಬ್ಬು ಮೂಳೆ ಅಷ್ಟು ದಪ್ಪನಾಗಿಲ್ಲ. ಪೂರ್ಣ ಮಾನವರೆಂದು ಕರೆಸಿಕೊಳ್ಳಲು ಇವರೆಲ್ಲ ಅರ್ಹರಾಗಿದ್ದರೇ ಎಂಬುದು ಇನ್ನೂ ನಿರ್ಧಾರವಾಗಬೇಕಾಗಿದೆ. ಈ ಮೇಲೆ ತಿಳಿಸಿರುವ ಪಂಗಡಗಳೆಲ್ಲ ಸುಮಾರು ಐದು ಲಕ್ಷ ವರ್ಷಗಳಿಂದ ಒಂದು ಲಕ್ಷ ವರ್ಷಗಳಷ್ಟು ಹಿಂದಿನವೆಂದು ಸ್ಥೂಲವಾಗಿ ಹೇಳಬಹುದು. 1911ರಲ್ಲಿ ಇಂಗ್ಲೆಂಡಿನ ಪಿಲ್ಟ್ ಡೌನ್ ಬಳಿ ಪ್ರಥಮ ಹಿಮಯುಗದ ಶಿಲಾ ಸಂಪುಟಗಳಲ್ಲಿ ಮಾನವನ ಒಂದು ಪ್ರಾಚೀನ ಅವಶೇಷವನ್ನು ಕಂಡು ಹಿಡಿಯಲಾಯಿತು. ಇದನ್ನು ಪಿಲ್ಟ್ ಡೌನ್ ಮಾನವನೆಂದು ವೈಜ್ಞಾನಿಕ ಸಂಶೋಧನೆಗಳಿಂದಾಗಿ ಇದೊಂದು ಮೋಸವೆಂದು ಸ್ಪಷ್ಟವಾಗಿದೆ.

ಪಂಗಡ ನಿಯಾಂಡರ್‍ಥಾಲ್ ಮಾನವ[ಬದಲಾಯಿಸಿ]

ಇನ್ನೂ ಮುಂದೆ ಬಂದರೆ ನಮಗೆ ಕಾಣಸಿಗುವ ಮುಖ್ಯವಾದ ಪಂಗಡ ನಿಯಾಂಡರ್‍ಥಾಲ್ ಮಾನವರದು. ಜರ್ಮನಿಯ ನಿಯಾಂಡರ್ ಕಣಿವೆಯಲ್ಲಿ ಇವರ ಮೂಳೆಗಳು ದೊರೆತುದರಿಂದ ಇವರಿಗೆ ಈ ಹೆಸರು ಬಂದಿದೆ. ಸ್ಪೇನ್, ಫ್ರಾನ್ಸ್, ಬೆಲ್ಚಿಯಂ, ರಷ್ಯ, ಜೆಕೊಸ್ಲೊವಾಕಿಯ, ಯುಗೋಸ್ಲಾವಿಯ, ಇಟಲಿಗಳಲ್ಲೂ ಇವರ ಅವಶೇಷಗಳು ದೊರೆತಿವೆ. ಒರಟು ಮುಖದ ಈ ಪ್ರಾಣಿಗೆ ಇಳಿಜಾರು ಹಣೆ, ಉದ್ದ ಮತ್ತು ಅಗಲವಾಗಿ ಹರಡಿದ ಮೂಗು, ದೊಡ್ಡ ದವಡೆ, ಅತಿ ಕಿರಿದಾದ ಗಲ್ಲ ಇತ್ತು. ಸ್ವಲ್ಪ ಬಗ್ಗಿ ನಡೆಯುತ್ತಿದ್ದ ಈ ಕುಳ್ಳ ವ್ಯಕ್ತಿಗೆ ಭುಜ ವಿಸ್ತಾರ, ಎದೆ ದಪ್ಪ, ಕಾಲುಗಳು ಗಿಡ್ಡ. ಸುಮಾರು ಎಪ್ಪತ್ತೈದು ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ಯೂರೋಪಿನ ಈ ಭಾಗಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಈ ವ್ಯಕ್ತಿ ರೂಕ್ಷನಾಗಿದ್ದುದರಲ್ಲಿ ಆಶ್ಚರ್ಯವಿಲ್ಲ. ಇವನ ಮಿದುಳು ಕೋಶ 1,450 ಘನ ಸೆಂ. ಮೀ. ನಷ್ಟಿದೆ. ಆಧುನಿಕ ಮಾನವನ ಮಿದುಳುಕೋಶದಷ್ಟೇ ಇದೆ. ಹಿಮಯುಗದ ಅತಿಶೀತವನ್ನೆದುರಿಸಲು ಈತ ಗವಿಗಳನ್ನಾಶ್ರಯಿಸಿದ್ದ. ಆದರೆ ಇದೇ ಆಶ್ರಯಕ್ಕಾಗಿಯೇ ಧಾವಿಸುತ್ತಿದ್ದ ಬೃಹತ್ಕರಡಿಗಳನ್ನೂ ಉದ್ದ ಕೋರೆಯ ಹುಲಿಗಳನ್ನೂ ಅವನು ಎದುರಿಸಬೇಕಾಗಿತ್ತು. ಆಹಾರಕ್ಕಾಗಿ ಬೇಟೆಯಾಡಬೇಕಾಗಿತ್ತು. ಆದ್ದರಿಂದ ಉಪಕರಣಗಳನ್ನು ತಯಾರಿಸುವುದರಲ್ಲಿ ಹೆಚ್ಚು ಮುಂದುವರಿದಿದ್ದ. ಕಲ್ಗೊಡಲಿ, ಕಲ್ಲನ್ನು ಚಕ್ಕೆ ಎಬ್ಬಿಸಿ ಮಾಡಿಕೊಂಡ ಹರಿತವಾದ ಚಾಕು. ಕೊರೆಯುವ ಹೆರೆಯುವ ಸಲಕರಣೆ ಮೊದಲಾದುವನ್ನು ತಯಾರಿಸಿದ್ದ. ಬೇಟೆಯಲ್ಲಿ ನಿಷ್ಣಾತನಾಗಿದ್ದು ಆನೆಯಂಥ ಭಾರಿ ಪ್ರಾಣಿಯನ್ನೂ ಕಂದರದಲ್ಲಿ ಕೆಡವಿ ದಪ್ಪ ಬಂಡೆಗಳಿಂದ ಬಡಿದು ಸಾಯಿಸಬಲ್ಲ ಸಾಹಸಿಗನಾಗಿದ್ದ. ಚಳಿಯಿಂದಲೂ ಮೃಗಗಳಿಂದಲೂ ರಕ್ಷಿಸಿಕೊಳ್ಳಲು ಬೆಂಕಿಯನ್ನು ಉಪಯೋಗಿಸುತ್ತಿದ್ದ. ಪ್ರಾಣಿಗಳ ಚರ್ಮವನ್ನು ಸುಲಿದು ಜೋಡಿಸಿ ಉಡುಪು ತಯಾರಿಸಿಕೊಳ್ಳುತ್ತಿದ್ದ. ಬೇಟೆಗಾಗಿ ಆಹಾರಕ್ಕಾಗಿ ಪ್ರಾಣಿಗಳನ್ನು ಹಿಂಬಾಲಿಸಬೇಕಾಗಿದ್ದುದರಿಂದ ಅಲೆಮಾರಿಯಾಗಿದ್ದ.

ಹಿಮಪ್ರಪಾತದ ನೀರ್ಗಲ್ಲುಗಳ ಕೊರೆತ ಕಷ್ಟ[ಬದಲಾಯಿಸಿ]

ಹಿಮಪ್ರಪಾತದ ನೀರ್ಗಲ್ಲುಗಳ ಕೊರೆತ ಕಷ್ಟಗಳ ನಡುವೆ ಸಿಕ್ಕಿಹಾಕಿಕೊಂಡು ಅದರಲ್ಲಿಯೇ ಈಜಿ ಜಯಿಸಿದ. ಈ ಒರಟು ಮಾನವ ಯೂರೋಪಿನ ಭಾಗಗಳಲ್ಲಿದ್ದ ಕಾಲದಲ್ಲಿಯೇ ಬೇರೆಡೆಗಳ ಆದಿಮಾನವ ವ್ಯತ್ಯಾಸವಾಗುತ್ತ ಬೆಳೆದು ಹೆಚ್ಚು ಹೆಚ್ಚು ಆಧುನಿಕನಾಗುತ್ತಿದ್ದ. ಈ ಬೆಳವಣಿಗೆಯನ್ನೇ ಜಾವ, ಆಸ್ಟ್ರೇಲಿಯ ಪ್ರದೇಶಗಳಲ್ಲಿ ಕಂಡುಬಂದಿರುವ ಸೋಲೋ ಮಾನವನಲ್ಲೂ ಆಫ್ರಿಕದ ರೊಡೀಷಿಯ ಮಾನವನಲ್ಲೂ ಗುರುತಿಸಬಹುದು. ಇವರೂ ಸರಿಸುಮಾರು ನಿಯಾಂಡರ್‍ಥಾಲ್ ಮಾನವನ ಕಾಲಕ್ಕೇ ಇದ್ದವರಾದರೂ ಅವರಿಗಿಂತ ವಿಭಿನ್ನರೀತಿಯ ವ್ಯಕ್ತಿಗಳಾಗಿದ್ದರು.ಹಿಮಯುಗದ ಹಿಂಜರಿತದಿಂದ ಯೂರೋಪಿನಲ್ಲಿ ಶಾಖ ಹರಡುತ್ತಿದ್ದಂತೆ ಪ್ರಪಂಚದ ಬೇರೆ ಭಾಗಗಳಿಂದ ನಿಯಾಂಡರ್‍ಥಾಲ್ ಮಾನವನಿಗಿಂತಲೂ ಮುಂದುವರಿದ ಮಾನವಪಂಗಡ ಇಲ್ಲಿಗೆ ವಲಸೆಬಂದು ನಿಯಾಂಡರ್‍ಥಾಲ್ ಮಾನವರನ್ನು ಕೊಂದು ನಾಶ ಮಾಡಿರಬೇಕೆಂದು ಒಂದು ವಾದ. ಆದರೆ ಅದು ಹಾಗಾಗದೆ ಕಾಲಕ್ರಮೇಣ ಇವರು ಹೊಸ ಜನಾಂಗದೊಂದಿಗೆ ಬೆರೆತು ಒಂದಾಗಿ ಹೋಗಿರುವ ಸಂಭವವೇ ಹೆಚ್ಚು. ಪ್ಯಾಲೆಸ್ಟೈನಿನ ಮೌಂಟ್ ಕಾರ್ಮೆಲ್ ಗವಿಗಳಲ್ಲಿ ದೊರೆತ ಮೂಳೆಗಳು ಇದಕ್ಕೆ ಪುಷ್ಟಿ ಕೊಡುತ್ತವೆ.

ಯೂರೋಪಿನಲ್ಲಿ ಹಿಮಯುಗ ಕಳೆ[ಬದಲಾಯಿಸಿ]

ಯೂರೋಪಿನಲ್ಲಿ ಹಿಮಯುಗ ಕಳೆದು ನೀರ್ಗಲ್ಲುಗಳು ಕರಗಿದ ಕಾಲಕ್ಕೆ ಅಲ್ಲಿ ಬೇರೆ ಜನಾಂಗ ವಾಸ ಮಾಡುತ್ತಿದ್ದುದಕ್ಕೆ ಹಲವೆಡೆ ಆಧಾರಗಳು ದೊರೆತಿವೆ. ಫ್ರಾನ್ಸಿನ ಕ್ರೋಮೆಗ್ನಾನ್ ಗವಿಗಳಲ್ಲಿ ಇವರ ಅವಶೇಷಗಳು ಹೆಚ್ಚಾಗಿ ದೊರೆತು ಈ ಮಾನವನಿಗೆ ಕ್ರೋಮೆಗ್ನಾನ್ ಮಾನವನೆಂಬ ಹೆಸರು ಬಂದಿದೆ. ಇವರು ಪೂರ್ಣವಾಗಿ ಬೆಳವಣಿಗೆ ಹೊಂದಿ ಹೋಲಿಕೆಯಲ್ಲಿ ಆಧುನಿಕ ಮಾನವನಿಗೆ ಹತ್ತಿರವಾಗಿದ್ದಾರೆ. ದೀರ್ಘದೇಹಿಗಳಾಗಿದ್ದ ಇವರಿಗೆ ದೊಡ್ಡದಾದ ಉದ್ದುದ್ದ ತಲೆಯಿದ್ದು ಆಧುನಿಕ ಮಾನವನಿಗಿಂತ ದಪ್ಪ ಮಿದುಳಿತ್ತು. ತೆಳುಮೂಗು, ತುಂಬುಗಲ್ಲಗಳಿದ್ದುವು. ಕಲ್ಲಿನ ಹಲವು ರೀತಿಯ ಆಯುಧಗಳನ್ನು ತಯಾರಿಸುವುದರಲ್ಲಿ ಇವರ ನಿಷ್ಣಾತರಾಗಿದ್ದರು. ಮೂಳೆ, ಪ್ರಾಣಿಗಳ ಚರ್ಮಗಳನ್ನು ಉಪಯೋಗಿಸಿ ಬೀಸಿ ಹೊಡೆಯಬಲ್ಲ ಆಯುಧಗಳು ಇವರಿಗೆ ಗೊತ್ತಿದ್ದುವು. ಚಿಕ್ಕ ಕಲ್ಲಿನ ಚಕ್ಕೆಗಳನ್ನೆಬ್ಬಿಸಿ ಬಾಣದ ತುದಿಗೆ ಸೇರಿಸುತ್ತಿದ್ದರು. ಕೊಕ್ಕೆಯಾಕಾರದಲ್ಲಿ ಮೂಳೆಗಳನ್ನು ಕೊರೆದು ಪ್ರಾಣಿಗಳ ಮಾಂಸಖಂಡವನ್ನು ಚುಚ್ಚಿ ಹಿಡಿಯಬಲ್ಲಂತೆ ಮಾಡಿಕೊಂಡಿದ್ದರು. ಪ್ರಾಣಿಗಳನ್ನು ಹಿಡಿಯಲು ಮಂತ್ರ ಮಾಟಗಳನ್ನೂ ನಡೆಸುತ್ತಿದ್ದಂತೆ ತಿಳಿದುಬರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇವರು ಚತುರ ಕಲಾವಿದರಾಗಿದ್ದರು. ಗವಿಗಳ ಗೋಡೆಗಳಮೇಲೆ ಚಿತ್ರಿಸಿರುವ ಆ ಕಾಲದ ಪ್ರಾಣಿಗಳ ಚಿತ್ರಗಳು ಅದ್ಭುತವಾಗಿವೆ. ಯೂರೋಪಿನಲ್ಲಿ ಇವರು ಕಾಣಿಸಿಕೊಂಡ ಕಾಲ ಸುಮಾರು ನಲವತ್ತು ಸಾವಿರ ವರ್ಷಗಳ ಹಿಂದೆ. ಇವರ ಕಾಲದಲ್ಲಿಯೇ ಪ್ರಪಂಚದ ಇತರ ಕಡೆಗಳಲ್ಲೂ ಆಧುನಿಕ ಮಾನವ ಕಾಣಿಸಿಕೊಳ್ಳುತ್ತಾನೆ. ಒಟ್ಟಿನಲ್ಲಿ ಸುಮಾರು ಹತ್ತು ಲಕ್ಷ ವರ್ಷಗಳ ಹಿಂದೆ ಕಾಣಿಸಿಕೊಂಡ ಮಾನವಕಪಿ ವಿಕಾಸ ಹೊಂದುತ್ತ ಐದು ಲಕ್ಷ ವರ್ಷಗಳ ಹಿಂದೆ ಆದಿಮಾನವನಾಗಿ ಬೆಳೆದು ಸುಮಾರು ನಲವತ್ತು ಸಾವಿರ ವರ್ಷಗಳ ಹಿಂದೆ ಆಧುನಿಕ ಮಾನವನಾಗಿ ಪೂರ್ಣವಾಗಿ ಬೆಳೆದನೆಂದು ಹೇಳಬಹುದು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಆದಿಮಾನವ&oldid=809255" ಇಂದ ಪಡೆಯಲ್ಪಟ್ಟಿದೆ